1. ಅಪಿ ಚ ಸಮ್ಯಗ್ಜ್ಞಾನಾನ್ಮೋಕ್ಷಃ ಇತಿ ಸರ್ವೇಷಾಂ ಮೋಕ್ಷವಾದಿನಾಮ್ ಅಭ್ಯುಪಗಮಃ | ತಚ್ಚ ಸಮ್ಯಗ್ಜ್ಞಾನಮ್ ಏಕ ರೂಪಂ ವಸ್ತುತನ್ತ್ರಮ್ | ಏಕರೂಪೇಣ ಹಿ ಅವಸ್ಥಿತೋ ಯೋರ್ಥಃ ಸ ಪರಮಾರ್ಥಃ | ಲೋಕೇ ತದ್ವಿಷಯಂ ಜ್ಞಾನಂ ಸಮ್ಯಗ್ಜ್ಞಾನಮ್ ಇತ್ಯುಚ್ಯತೇ | ಯಥಾ 'ಅಗ್ನಿರುಷ್ಣಃ' ಇತಿ | ತತ್ರ ಏವಂ ಸತಿ ಸಮ್ಯಗ್ಜ್ಞಾನೇ ಪುರುಷಾಣಾಂ ವಿಪ್ರತಿಪತ್ತಿಃ ಅನುಪಪನ್ನಾ || ಭಾವಾರ್ಥ :- ಇದಲ್ಲದೆ ಸಮ್ಯಗ್ಜ್ಞಾನದಿಂದ ಮೋಕ್ಷವಾಗುವದೆಂದು ಎಲ್ಲಾವಾದಿಗಳೂ ಒಪ್ಪಿರುತ್ತಾರೆ. ಆ ಸಮ್ಯಗ್ಜ್ಞಾನವೆಂಬುದು ಒಂದೇ ರೂಪದ್ದಾಗಿರುತ್ತದೆ, ವಸ್ತುತಂತ್ರವಾಗಿರುತ್ತದೆ. ಒಂದೇ ರೂಪದಿಂದ ಇದ್ದು ಕೊಂಡಿರುವ ವಸ್ತುವಲ್ಲವೆ, ಪರಮಾರ್ಥವು? ಲೋಕದಲ್ಲಿ ಅದರ ವಿಷಯವಾದ ಜ್ಞಾನವೇ ಸಮ್ಯಗ್ಜ್ಞಾನವೆನಿಸುತ್ತದೆ. ಉದಾಹರಣೆಗೆ 'ಬೆಂಕಿಯು ಬಿಸಿ' ಎಂಬ ಜ್ಞಾನವು ಅಂಥದ್ದು. ಇದು ಹೀಗಿರುವದರಿಂದ ಸಮ್ಯಗ್ಜ್ಞಾನದ ವಿಷಯದಲ್ಲಿ ಜನರಿಗೆ ವಿರುದ್ಧವಾದ ಅಭಿಪ್ರಾಯಗಳಿರುವದು ಸರಿಯಲ್ಲ. ವಿವರಣೆ :- ತತ್ತ್ವವಿಚಾರಕ್ಕೆಲ್ಲ ತಳಹದಿಯಾಗಿರುವ ಮೂರು ವಿಷಯಗಳನ್ನು ಇಲ್ಲಿ ಹೇಳಿದೆ. ತತ್ತ್ವಕ್ಕೆ 'ಪರಮಾರ್ಥ'ವೆಂಬುದು ಇನ್ನೊಂದು ಹೆಸರು. ಪರಮಾರ್ಥವೆಂದರೆ ಯಾವಾಗಲೂ ಎಲ್ಲೆಲ್ಲಿಯೂ ಒಂದೇ ರೂಪದಲ್ಲಿರುವ ವಸ್ತು. ಅದನ್ನೇ 'ಸತ್ಯ'ವೆಂದು ಜನರು ಬಗೆಯುತ್ತಾರೆ. ಅದನ್ನು ತಿಳಿಸಿ ಕೊಡುವ ಜ್ಞಾನವೇ ಸಮ್ಯಗ್ಜ್ಞಾನ, ಸರಿಯಾದ ತಿಳಿವಳಿಕೆ. ಉದಾಹರಣೆಗೆ ಬೆಂಕಿಯು ಯ...