ಪರಮಾರ್ಥ, ಸಮ್ಯಗ್ಜ್ಞಾನ

1.  ಅಪಿ ಚ ಸಮ್ಯಗ್ಜ್ಞಾನಾನ್ಮೋಕ್ಷಃ ಇತಿ ಸರ್ವೇಷಾಂ ಮೋಕ್ಷವಾದಿನಾಮ್ ಅಭ್ಯುಪಗಮಃ |
ತಚ್ಚ ಸಮ್ಯಗ್ಜ್ಞಾನಮ್ ಏಕ ರೂಪಂ ವಸ್ತುತನ್ತ್ರಮ್ |
ಏಕರೂಪೇಣ ಹಿ ಅವಸ್ಥಿತೋ ಯೋರ್ಥಃ ಸ ಪರಮಾರ್ಥಃ |
ಲೋಕೇ ತದ್ವಿಷಯಂ ಜ್ಞಾನಂ ಸಮ್ಯಗ್ಜ್ಞಾನಮ್ ಇತ್ಯುಚ್ಯತೇ |
ಯಥಾ 'ಅಗ್ನಿರುಷ್ಣಃ' ಇತಿ |
ತತ್ರ ಏವಂ ಸತಿ ಸಮ್ಯಗ್ಜ್ಞಾನೇ ಪುರುಷಾಣಾಂ ವಿಪ್ರತಿಪತ್ತಿಃ ಅನುಪಪನ್ನಾ || 


 ಭಾವಾರ್ಥ :- ಇದಲ್ಲದೆ ಸಮ್ಯಗ್ಜ್ಞಾನದಿಂದ ಮೋಕ್ಷವಾಗುವದೆಂದು ಎಲ್ಲಾವಾದಿಗಳೂ ಒಪ್ಪಿರುತ್ತಾರೆ. ಆ ಸಮ್ಯಗ್ಜ್ಞಾನವೆಂಬುದು ಒಂದೇ ರೂಪದ್ದಾಗಿರುತ್ತದೆ, ವಸ್ತುತಂತ್ರವಾಗಿರುತ್ತದೆ. ಒಂದೇ ರೂಪದಿಂದ ಇದ್ದು ಕೊಂಡಿರುವ ವಸ್ತುವಲ್ಲವೆ, ಪರಮಾರ್ಥವು? ಲೋಕದಲ್ಲಿ ಅದರ ವಿಷಯವಾದ ಜ್ಞಾನವೇ ಸಮ್ಯಗ್ಜ್ಞಾನವೆನಿಸುತ್ತದೆ. ಉದಾಹರಣೆಗೆ 'ಬೆಂಕಿಯು ಬಿಸಿ' ಎಂಬ ಜ್ಞಾನವು ಅಂಥದ್ದು. ಇದು ಹೀಗಿರುವದರಿಂದ ಸಮ್ಯಗ್ಜ್ಞಾನದ ವಿಷಯದಲ್ಲಿ ಜನರಿಗೆ ವಿರುದ್ಧವಾದ ಅಭಿಪ್ರಾಯಗಳಿರುವದು ಸರಿಯಲ್ಲ.

ವಿವರಣೆ :- ತತ್ತ್ವವಿಚಾರಕ್ಕೆಲ್ಲ ತಳಹದಿಯಾಗಿರುವ ಮೂರು ವಿಷಯಗಳನ್ನು ಇಲ್ಲಿ ಹೇಳಿದೆ. ತತ್ತ್ವಕ್ಕೆ 'ಪರಮಾರ್ಥ'ವೆಂಬುದು ಇನ್ನೊಂದು ಹೆಸರು. ಪರಮಾರ್ಥವೆಂದರೆ ಯಾವಾಗಲೂ ಎಲ್ಲೆಲ್ಲಿಯೂ ಒಂದೇ ರೂಪದಲ್ಲಿರುವ ವಸ್ತು. ಅದನ್ನೇ 'ಸತ್ಯ'ವೆಂದು ಜನರು ಬಗೆಯುತ್ತಾರೆ. ಅದನ್ನು ತಿಳಿಸಿ ಕೊಡುವ ಜ್ಞಾನವೇ ಸಮ್ಯಗ್ಜ್ಞಾನ, ಸರಿಯಾದ ತಿಳಿವಳಿಕೆ. ಉದಾಹರಣೆಗೆ  ಬೆಂಕಿಯು ಯಾವಾಗಲೂ ಎಲ್ಲೆಲ್ಲಿಯೂ ಬಿಸಿಯಾಗಿರುತ್ತದೆ; 'ಬೆಂಕಿ' ಎಂಬುದು ಒಂದೇ ರೂಪದಲ್ಲಿರುವ ಪರಮಾರ್ಥವಾದ್ದರಿಂದ ಅದನ್ನು ಪರಮಾರ್ಥ, ಸತ್ಯ, ಅದು ಬರಿಯ ಹುಸಿತೋರಿಕೆಯಲ್ಲ. 'ಬೆಂಕಿ ಯು ಬಿಸಿ' ಎಂಬ ಜ್ಞಾನವು ಸಮ್ಯಗ್ಜ್ಞಾನ, ಅದು ಭ್ರಾಂತಿಯಲ್ಲ. ಸಮ್ಯಗ್ಜ್ಞಾನವು ವಸ್ತುತಂತ್ರವಾಗಿರುತ್ತದೆ, ವಸ್ತುವು ಹೇಗೆ ಇರುತ್ತದೆಯೋ ಹಾಗೆಯೇ ತಿಳಿಸಿಕೊಡುವ ಜ್ಞಾನವದು. ಆದ್ದರಿಂದ ಬೆಂಕಿಯನ್ನು ಬಿಸಿಯಾಗಿರುವ ಪದಾರ್ಥವೆಂದು ತಿಳಿಸಿಕೊಡುವ ಜ್ಞಾನವು ಸಮ್ಯಗ್ಜ್ಞಾನವು; ದೂರದಿಂದ ನೋಡಿದ ಕೆಂಡವನ್ನು ಮಾಣಿಕ್ಯವೆಂದು ತಿಳಿದುಕೊಂಡರೆ ವಸ್ತುವಿಗೆ ಅನುಗುಣವಾದ ಜ್ಞಾನವಾಗಲಾರದು, ಆದ್ದರಿಂದ ಅದು ಭ್ರಾಂತಿ.

  ಈ ವಿಚಾರದ ಮೂಲತತ್ತ್ವಗಳನ್ನು ಇಟ್ಟುಕೊಂಡು ಮನದಂದವರಿಗೆ ಈ ಜಗತ್ತಿನ ನಿಜವೇನೆಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿರಬಾರದೆಂದಾಗುವದು. 'ಈ ಜಗತ್ತೆಲ್ಲವೂ ಬ್ರಹ್ಮವೇ ಆಗಿರುತ್ತದೆ' ಎಂದು ಶ್ರುತಿಗಳಲ್ಲಿ ಹೇಳಿರುತ್ತದೆ. ಅದೇ ಸತ್ಯವು, ಅದೇ ಈ ಜಗತ್ತಿಗೆಲ್ಲ ಆತ್ಮವು ಸ್ವರೂಪವು; ಅದೇ ನೀನು ಎಂದೂ ಬೋಧಿಸಿರುತ್ತದೆ. ಈ ವಾಕ್ಯಗಳಿಂದಾಗುವ ಜ್ಞಾನದಲ್ಲಿ ಯಾವಯಾವ ಅಭಿಪ್ರಾಯಗಳು ಅಡಕವಾಗಿರುವವೆಂದರೆ :
1) ಈ ಜಗತ್ತು ತಾನು ತೋರುವ ರೂಪದಿಂದ ಸತ್ಯವಲ್ಲ; ಜಗತ್ತು ಯಾವಾಗಲೂ ಇದೇ ರೂಪದಿಂದ ಇದ್ದುಕೊಂಡಿರುವ ಪರಮಾರ್ಥವಲ್ಲ.
2) ಇದರ ಪರಮಾರ್ಥವು, ನಿಜವಾದ ಸ್ವರೂಪವು ಬ್ರಹ್ಮವೇ.
3) ಜೀವನ, ವ್ಯಕ್ತಿಯಾಗಿ ಸಂಸಾರಿಯಾಗಿ ತೋರುತ್ತಿರುವಾತನ, ರೂಪವೂ ಸತ್ಯವಲ್ಲ; ಇವನ ಪರಮಾರ್ಥವೂ ಬ್ರಹ್ಮವೇ, ಅಸಂಸಾರಿಸ್ವರೂಪವೇ.
ತಟ್ಟನೆ ನೋಡಿದರೆ ಈ ಅಭಿಪ್ರಾಯಗಳು ಎಲ್ಲರಿಗೂ ಒಪ್ಪಾಗುವಂತೆ ಕಾಣುವದಿಲ್ಲ. ಜನರ ತಿಳಿವಳಿಕೆಗೆ ಇದು ವಿರುದ್ದವಾಗಿಯೇ ಇರುವಂತೆ ತೋರುತ್ತಿದೆ. ಆದರೂ ಶಂಕರಾಚಾರ್ಯರು ಹೀಗೆನ್ನುತ್ತಿದ್ದಾರೆ :-

2. ಅಬ್ರಹ್ಮಪ್ರತ್ಯಯಃ ಸರ್ವಃ, ಅವಿದ್ಯಾಮಾತ್ರಃ, ರಜ್ಜ್ವಾ ಮಿವ ಸರ್ಪಪ್ರತ್ಯಯಃ |
    ಬ್ರಹ್ಮೈವೈಕಂ ಪರಮಾರ್ಥಸತ್ಯಮ್ ಇತಿ ವೇದಾನುಶಾಸನಮ್ ||

ಭಾವಾರ್ಥ : ಬ್ರಹ್ಮವಲ್ಲದ್ದು ಎಂಬ ತಿಳಿವಳಿಕೆಯೆಲ್ಲವೂ ಹಗ್ಗದಲ್ಲಿ ಹಾವೆಂಬ ತಿಳಿವಳಿಕೆಯಂತೆ ಅವಿದ್ಯಾಮಾತ್ರವಾಗಿದೆ. ಬ್ರಹ್ಮವೊಂದೇ ಪರಮಾರ್ಥಸತ್ಯವು ಎಂಬುದು ವೇದದ ಉಪದೇಶವು.
ವಿವರಣೆ:- ಇದು ಸಮ್ಯಗ್ಜ್ಞಾನವೊ, ಭ್ರಾಂತಿಯೊ?- ಎಂಬುದನ್ನು ವಿಚಾರಮಾಡಿ ನಿಶ್ಚಯಿಸಬೇಕಾಗಿದೆ. ಆದ್ದರಿಂದ ಸಮ್ಯಗ್ಜ್ಞಾನದ ತತ್ತ್ವವನ್ನು ಇನ್ನಷ್ಟು ವಿಚಾರಮಾಡೋಣ.........................

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ