ನಮಸ್ತೇ ರುದ್ರ

     ರುದ್ರಾಧ್ಯಾಯದಲ್ಲಿ ಹನ್ನೊಂದು ಅನುವಾಕಗಳಿವೆ. ಅನುವಾಕಗಳೆಂದರೆ ಒಂದೊಂದು ಪ್ರಘಟ್ಟ (Para)ಗಳೆಂದು ಭಾವಿಸಬಹುದು. ಇಲ್ಲಿ ಮೊದಲನೆಯ ಅನುವಾಕದಲ್ಲಿ ಭಗವಂತನು ಪ್ರಸನ್ನನಾಗುವಂತೆ ಮಾಡಿಕೊಳ್ಳುವಿಕೆ, ಎರಡರಿಂದ ಒಂಬತ್ತರ ಪೂರ ಅನುವಾಕಗಳಲ್ಲಿ ಭಗವಂತನ ಸರ್ವೇಶ್ವರತ್ವ, ಸರ್ವಾತ್ಮಕತ್ವ, ಸರ್ವಾಮತರ್ಯಾಮಿತ್ವ - ಮುಂತಾದವುಗಳನ್ನು ತಿಳಿಸಿ ನಮಸ್ಕರಿಸುವಿಕೆ, ಹತ್ತನೆಯದರಲ್ಲಿ ಭಗವಂತನ ಪ್ರಾರ್ಥನೆ, ಹನ್ನೊಂದನೆಯದರಲ್ಲಿ ಭಗವದಂಶಸಂಭೂತರಾದ ರುದ್ರರುಗಳ ಸ್ತುತಿ - ಹೀಗೆ ಈ ರುದ್ರಾಧ್ಯಾಯವು ಹನ್ನೊಂದು ಅನುವಾಕಗಳಿಂದ ಕೂಡಿರುತ್ತದೆ.
     ವಿದ್ಯೆಗಳಲ್ಲೆಲ್ಲ 'ಶ್ರುತಿ' (ವೇದ)ಯು ಹೆಚ್ಚಿನದು. ಶ್ರುತಿಯಲ್ಲಿ ರುದ್ರೈಕಾದಶಿನೀ ಎಂಬ ಭಾಗ. ಅದರಲ್ಲಿ 'ನಮಃ ಶಿವಾಯ' ಎಂಬ ಪಂಚಾಕ್ಷರೀ ಮಂತ್ರವು. ಅದರಲ್ಲಿಯೂ 'ಶಿವ' ಎಂಬೆರಡು ಅಕ್ಷರಗಳು ಹೆಚ್ಚಿನ ಸಾರವಾದದ್ದು - ಎಂದು ಒಂದು ಸ್ಮೃತಿವಾಕ್ಯವಿದೆ. 'ವಶ ಕಾನ್ತೌ' ಎಂಬ ಧಾತು ವಿನಿಂದಾದ 'ಶಿವ' ಎಂಬ ಶಬ್ದರೂಪವು 'ಲೋಕಾನಾಂ ಶಿವಂ (ಮಂಗಳಂ) ವಷ್ವೀತಿ ಶಿವಃ' - ಎಂಬ ವ್ಯುತ್ಪತ್ತಿಯಂತೆ ವರ್ಣವ್ಯತ್ಯಯವನ್ನು ಹೊಂದಿ 'ಶಿವ' ಎಂಬ ಭಗವಂತನ ದಿವ್ಯನಾಮವಾಗಿ ಹೊರಬಂದಿದೆ. ಶಿವ - ಎಂಬ ಶಬ್ದಕ್ಕೆ ಮಂಗಳವೆಂದೇ ಅರ್ಥವಿದೆ. ಅಮರಕೋಶದಲ್ಲಿ ಶ್ರೇಯಸಮ್, ಶಿವಮ್, ಭದ್ರಮ್, ಕಲ್ಯಾಣಮ್, ಮಂಗಳಮ್, ಶುಭಮ್ - ಎಂದು ಶಿವಶಬ್ದಕ್ಕೆ ಪರ್ಯಾಯವಾಗಿಯೇ ಉಳಿದ ಶಬ್ದಗಳನ್ನು ಕೊಟ್ಟಿದೆ. ಆದ್ದರಿಂದ ಶಿವನೆಂಬುದು ಪರಮಮಂಗಳಸ್ವರೂಪನೂ ಜಗತ್ತಿಗೆಲ್ಲ ಏಕದೇವನೂ ಸರ್ವಾತ್ಮನೂ ಸರ್ವಜ್ಞನೂ ಸರ್ವಶಕ್ತನೂ ಸರ್ವೇಶ್ವರನೂ ಆದ ಭಗವಂತನ ಹೆಸರೇ ಹೊರತು ಯಾವದೊಂದು ವಿಶಿಷ್ಟದೇವತೆಯ ಹೆಸರಲ್ಲ. ಈಗ ಸತ್ಸಂಪ್ರದಾಯಗಳಲ್ಲಿ ಸುಪ್ರಸಿದ್ಧವಾಗಿರುವ ಶೈವ, ವೈಷ್ಣವ - ಎಂಬಿವೆರಡರಲ್ಲಿ ಶೈವಸಂಪ್ರದಾಯದಂತೆ ವೇದೋಕ್ತವಾದ ಪರಮಮಂತ್ರವೆಂದರೆ ಪಂಚಾಕ್ಷರಿಯೊಂದೇ - ಎಂದು ಹೇಳಬಹುದು. ಈ ರುದ್ರಾಧ್ಯಾಯದ 'ನಮಃ ಸೋಮಾಯ' ಎಂಬ ಅನುವಾಕದಲ್ಲಿ ಈ ಪಂಚಾಕ್ಷರೀಮಂತ್ರವು ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿರುತ್ತದೆ. ಈ ಕಾರಣದಿಂದಲೂ ಶೈವರಿಗೆ ಅತ್ಯಂತ ಪವಿತ್ರವಾಗಿರುವ ಹಾಗೂ ಉಳಿದ ಸಂಪ್ರದಾಯಸ್ಥರಿಗೂ ವಿಶಾಲವಾದ ತತ್ತ್ವದೃಷ್ಟಿಯಿಂದ ಮನನೀಯವಾಗಿ ಇರುವ ಈ ವೇದಭಾಗವು ಸರ್ವಥಾ ವಿಚಾರಣೀಯವೂ ಆಗಿದೆ. ಯಜುಸ್ಸಂಹಿತೆಯಲ್ಲೇ ಈ ಭಾಗವಿರುವದರಿಂದ ಪೂರ್ಣವಾದ ಯಜುರ್ವೇದವನ್ನು ಅಧ್ಯಯನಮಾಡುವ ಪ್ರತಿಯೊಬ್ಬನೂ ಇದನ್ನು ಪಠಿಸಲೇಬೇಕಾಗುತ್ತದೆ. ಇಷ್ಟೇ ಅಲ್ಲ. ನಾಲ್ಕು ವೇದದವರಿಗೂ ಇದೇ ರುದ್ರಾಧ್ಯಾಯವೇ ಸರಿಸಮಾನವಾಗಿರುತ್ತದೆ.
     ಈ ರುದ್ರಾಧ್ಯಾಯಕ್ಕೆ 'ನಮಕ'ವೆಂಬ ಮತ್ತೊಂದು ಹೆಸರಿದೆ. ಈ ಮಂತ್ರಭಾಗವು 'ನಮಃ' ಎಂಬ ಶಬ್ದದಿಂದ ಪ್ರಾರಂಭವಾಗುವದರಿಂದ ಈ ಹೆಸರು ಬಂದಿರುತ್ತದೆ. ಇಲ್ಲಿ ನಮಶ್ಯಬ್ದವು ನೂರಾರುಸಲ ಪುನರುಕ್ತವಾಗಿರುತ್ತದೆ. ನಮಃ ಎಂದರೆ ನಮಸ್ಕಾರವೆಂದರ್ಥ. ನಮಸ್ಕಾರವು ಯಾವಾಗ ಪ್ರಾಪ್ತವಾಗುತ್ತದೆ ಎಂದರೆ ತನಗಿಂತ ಮತ್ತೊಂದು ವಸ್ತುವು ದೊಡ್ಡದು - ಎಂಬ ಭಾವನೆಯುಂಟಾದಾಗ - ಎಂಬಿದು ಎಲ್ಲರಿಗೂ ತಿಳಿದಿದೆ. ಇಲ್ಲಿ ಜೀವನು ನಮಸ್ಕಾರಮಾಡುವವನು ; ನಮಸ್ಕಾರ್ಯನು ಪರಮೇಶ್ವರನು. ಜೀವನಿಗಿಂತ ಪರಮೇಶ್ವರನು ಎಲ್ಲಾ ವಿಷಯಗಳಲ್ಲೂ ದೊಡ್ಡವನಾದ್ದರಿಂದ ಅವನು ನಮಸ್ಕಾರಕ್ಕೆ ಅರ್ಹನಾಗಿರುತ್ತಾನೆ - ಎಂದಭಿಪ್ರಾಯ. ನಾನು ನೋಡಿರುವ ಶಿವಪಂಚಾಕ್ಷರೀಭಾಷ್ಯದಲ್ಲಿ ನಮಃಶಬ್ಧಕ್ಕೆ ಮೂರು ಅರ್ಥಗಳನ್ನು ಕೊಟ್ಟಿದೆ. (1) ನಮಃ ಎಂದರೆ ತ್ಯಾಗವೆಂದರ್ಥ. ಪುತ್ರಪುಷ್ಪ ಫಲಾದಿಗಳ ತ್ಯಾಗವೂ ಇದರಲ್ಲಿ ಸೇರಿರುತ್ತದೆ. ಯಾರಿಗಾಗಿ ತ್ಯಾಗಮಾಡುವೆವೋ ಆ ಪ್ರಕೃತಿರೂಪವೇ ಆನಂದಸ್ವರೂಪನಾದ ಪರಮೇಶ್ವರನು. ನಾಲ್ಕೂ ಪುರುಷಾರ್ಥಗಳ ಸಿದ್ಧಿಗಾಗಿ ಮಾಡುವ ತ್ಯಾಗವೆಂಬುದೇ ನಮಃ ಎಂಬಿದರ ಅರ್ಥ.   (2) ಅಥವಾ ದೈನ್ಯಲಬ್ಧಿ ಎಂಬ ಫಲವುಳ್ಳ ಪ್ರಣಾಮವೇ ನಮಃ ಎಂಬುದರ ತತ್ತ್ವವಾಗಿದೆ. ಇಲ್ಲಿ ದೈನ್ಯವೆಂದರೆ 'ಸೇವೆ'ಯೆಂದರ್ಥ. 'ಲಬ್ಧಿ' ಎಂದರೆ ಸಕಲಪುರುಷಾರ್ಥಗಳ ಸಿದ್ಧಿ. ಈಶ್ವರಸೇವೆಯಿಂದ ಸಕಲಸಿದ್ಧಿಗಳೂ ಲಭಿಸುವವೆಂಬುದನ್ನು ಸಮಃಶಬ್ಧವು ತಿಳಿಸುತ್ತದೆ. (3) ಅಥವಾ-ನ- ಎಂದರೆ ಜಗದ್ರೂಪವೆಂಬ ಭಾವವಿಕಾರದ ನಿಷೇಧವು. ಮಸ್ - ಎಂದರೆ ದೇವದೇವನಾದ ಪರಮಶಿವನು. ಆತನಲ್ಲಿ ಈ ನಾಮರೂಪಾತ್ಮಕವಾದ(ಭಾವ) ಜಗತ್ತು ಇಲ್ಲವೇ ಇಲ್ಲ - ಎಂಬುದೇ ನಮಃ ಶಬ್ದದ ಅರ್ಥ. ಹೀಗೆ ನಮಃ ಶಬ್ದಾರ್ಥವನ್ನು ಬಲ್ಲವರು ಅನೇಕರೀತಿಯಿಂದ ತಿಳಿಸಿರುತ್ತಾರೆ. ಅಂತೂ ಸರ್ವದೇವಾತ್ಮಕನಾದ ಭಗವಂತನಿಗೆ ಜೀವನು ತೋರಿಸುವ ಗೌರವಪೂರ್ವಕವಾದ ನಡೆಯೇ ನಮಸ್ಕಾರವೆಂದು ತಿಳಿಯಬಹುದಾಗಿದೆ. ನಮಃಶಬ್ದಕ್ಕೆ ಇದೇ ಅರ್ಥವನ್ನು ಉಳಿದ ಕಡೆಗಳಲ್ಲಿಯೂ ಅನ್ವಯಿಸಿಕೊಳ್ಳಬಹುದಾಗಿದೆ.
     ಇನ್ನು ರುದ್ರ - ಎಂಬ ಶಬ್ದದ ಅರ್ಥವನ್ನು ವಿಚಾರಮಾಡೋಣ. ರುದ್ ಎಂದರೆ ಅಳುವಿಕೆ ಎಂದರ್ಥ. ಮನುಷ್ಯನ ಜೀವನವು ಅಳುವಿನಿಂದಲೇ ಆರಂಭವಾಗುತ್ತದೆ. ಮಾತೃಗರ್ಭದಿಂದ ಶಿಶುವು ಹೊರಕ್ಕೆ ಬಂದೊಡನೆಯೇ ಅಳಬೇಕು. ಇಲ್ಲದಿದ್ದರೆ ಜನರು ಅದನ್ನು ಅಪಶಕುನವೆಂದೂ, ಮಗುವು ಆರೋಗ್ಯವಾಗಿಲ್ಲವೆಂದೂ ಭಾವಿಸುವರು. ಆದ್ದರಿಂದ ಈ ಅಳುವಿಕೆಯು ಸಂಸಾರದುಃಖದ ಸೂಚಕವಾಗಿದೆ. ಇಂಥ ಅಳುವನ್ನು ನಾಶಮಾಡುವವನೇ ರುದ್ರನು. ಪರಮೇಶ್ವರನನ್ನು ನಂಬಿದವನು ಸಂಸಾರದಿಂದ ಉದ್ಧಾರವಾಗುವನೆಂಬುದು ಸುಪ್ರಸಿದ್ಧವಾಗಿದೆ. ಅಥವಾ ದ್ರಾ - ಎಂದರೆ ಕುತ್ಸಿತವಾದಗತಿಯಿಂದ ರು- ರುಣದ್ಧಿ-ತಡೆಯುತ್ತಾನೆ - ಎಂದರೆ ಭಕ್ತರನ್ನು ನರಕಕ್ಕೆ ಬೀಳದಂತೆ ತಡೆಯುತ್ತಾನೆ - ಎಂಬರ್ಥದಲ್ಲಿಯೂ ರುದ್ರನೆಂದಾಗಬಹುದು. ರೂಢಿಯಲ್ಲಿ ರುದ್ರನೆಂದರೆ ಕೋಪವುಳ್ಳವನೆಂದು ಪ್ರಸಿದ್ಧವಾಗಿದೆ. ಪಾಪಿಗಳ ವಿಷಯದಲ್ಲಿ ಪರಮೇಶ್ವರನು ಯಾವಾಗಲೂ ಕುಪಿತನೇ ಆಗಿರುವದರಿಂದ ಈ ಅರ್ಥವೂ ಹೊಂದುತ್ತದೆ. ಅಂತೂ ರುದ್ರನು ಶಿವನಾಗಬೇಕು; ಎಂದರೆ ನಮ್ಮ ವಿಷಯಕ್ಕೆ ಶಾಂತನಾಗಬೇಕೆಂಬುದು ಈಗ ಪ್ರಾರ್ಥಿಸಲಿರುವ ಒಂದನೆಯ ಮಂತ್ರದ ಅಭಿಪ್ರಾಯ. ಈಗ ನೇರಾಗಿ ಮಂತ್ರಾರ್ಥವನ್ನು ಅನುಸಂಧಾನಮಾಡೋಣ.
ಓಂ ||
ನಮಸ್ತೇ ರುದ್ರ ಮನ್ಯವ ಉತೋ ತ ಇಷವೇ ನಮಃ |
ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ ||1||

"ಎಲೈ ರುದ್ರನೆ, ನಿನಗೆ ನಮಸ್ಕಾರವು ಮತ್ತು ನಿನ್ನ ಕೋಪಕ್ಕೆ ನಮಸ್ಕಾರ! ಮತ್ತು ನಿನ್ನ ಬಾಣಗಳಿಗೆ, ಧನಸ್ಸಿಗೆ ಹಾಗೂ ಧನುರ್ಬಾಣಗಳನ್ನು ಹಿಡಿದಿರುವ ಎರಡು ತೋಳುಗಳಿಗೆ ನಮಸ್ಕಾರ!"
     ಭಕ್ತನು ಇಲ್ಲಿ ಮೊದಲು ರುದ್ರನ ಕೋಪಕ್ಕೆ ನಮಸ್ಕಾರವೆಂದಿರುತ್ತಾನೆ. ಸಕಲಕಲ್ಯಾಣಗುಣಪರಿಪೂರ್ಣನಾದ ಭಗವಂತನಲ್ಲಿ ಕೋಪವೇಕೆ ಉಂಟಾಯಿತು ? ಎಂದರೆ ಜೀವರುಗಳು ಮಾಡಿರುವ ಅಪರಾಧದಿಂದ - ಎಂದರ್ಥ. ಲೋಕರಕ್ಷಣೆಗಾಗಿ ಭಗವಂತನು ಶ್ರುತಿಸ್ಮೃತಿರೂಪವಾದ ತನ್ನ ಅಜ್ಞೆಗಳಿಂದ ಧರ್ಮವೆಂಬ ಕಟ್ಟಲೆಯನ್ನು ಎಲ್ಲಾ ಮನುಷ್ಯರುಗಳಿಗೂ ವಿಧಿಸಿರುತ್ತಾನೆ. ಈ ಕಟ್ಟುಪಾಡುಗಳು ಇಲ್ಲದೆಹೋದರೆ ಜಗತ್ತಿನ ಪರಿಪಾಲನೆಯು ಸಾಧ್ಯವಾಗಲಾರದು. ಆದರೆ ಈ ಜೀವನು ಕಾಮವಶನಾಗಿ ಭಗವಂತನನ್ನು ಮರೆತು ತಿರಸ್ಕರಿಸಿ ಸ್ವೇಚ್ಛೆಯಿಂದ ನಡೆಯುತ್ತಾ ಆತನ ಆಜ್ಞೆಗಳನ್ನು ಮೀರಿ ವರ್ತಿಸುತ್ತಿದಾನೆ. ಇಂಥವನ ವಿಷಯದಲ್ಲಿ ಭಗವಂತನ ಕೋಪವು ಸಾಧುವೇ ಆಗಿದೆ. ಎಲ್ಲಾ ಜೀವರುಗಳ ನಡುವೆ ನಾವೂ ಒಬ್ಬರಾದ್ದರಿಂದ ನಮ್ಮಲ್ಲಿಯೂ ಭಗವಂತನ ವಿಷಯಕ್ಕೆ ಅಪರಾಧಶತಗಳೇ ತುಂಬಿಕೊಂಡಿವೆ. ಆದ್ದರಿಂದ ಎಲೈ ರುದ್ರನೆ, ಪ್ರಸನ್ನನಾಗು, ಕೋಪಮಾಡಬೇಡ - ಎಂದು ಭಕ್ತನು ಪ್ರಾರ್ಥಿಸುತ್ತಿದಾನೆ. ಹಾಗೂ ನೀನು ಕೋಪದಿಂದ ನಮ್ಮ ಮೇಲೆ ಎತ್ತಿರುವ ಬಾಣ - ಧನಸ್ಸುಗಳಿಗೂ ನಮಸ್ಕಾರ ! ಅವುಗಳನ್ನು ಶಾಂತಗೊಳಿಸು - ಎಂದು ಬೇಡಲಾಗಿದೆ. ಪಾಪಿಗಳ ಕಡೆಗೆ ಸ್ವಭಾವದಿಂದಲೇ ಆತನ ಧನುರ್ಬಾಣಗಳೂ ಬಾಹುಗಳೂ ವ್ಯಾಪಾರಮಾಡುವವು. ಅದನ್ನು ಪರಿಹರಿಸಿಕೊಳ್ಳಲು ರುದ್ರನಿಗೂ ಆತನ ಧನುರ್ಬಾಣಯುತವಾದ ಹಸ್ತಗಳಿಗೂ ಇಲ್ಲಿ ವಂದನೆಯನ್ನು ಸಮರ್ಪಿಸಿದೆ - ಎಂದು ತಿಳಿಯಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ