ಭ್ರಷ್ಟಾಷ್ಟಕಮ್ - ಶ್ರೀಕೃಷ್ಣಾನಂದಸರಸ್ವತೀಕೃತ

ವಿಶ್ವಂ ಸತ್ಯಂ ಮನತೇ ಕರ್ಮಾಣಿ ಲೋಕಸಂಸಿದ್ಧ್ಯೈ |
ವಾಚಾ ಮಿಥ್ಯಾ ಜಗದಿತಿ ಜಲ್ಪತಿ ನೋ ವೇತ್ತಿ ಯೋ ಮಹಾಭ್ರಷ್ಟಃ ||1||
    ಎಲ್ಲರಿಗಿಂತ ಹೆಚ್ಚಿನ ಭ್ರಷ್ಟನಾಗಿರುವವನು ಜಗತ್ತು ಸತ್ಯವೆಂದೇ ತಿಳಿದಿರುತ್ತಾನೆ; 'ಕರ್ಮಗಳು ವ್ಯವಹಾರಸಿದ್ಧಿಗೆ ಬೇಕು' ಎಂದು ಅರಿತಿರುತ್ತಾನೆ, ಆದರೆ ಮಾತಿನಲ್ಲಿ 'ಜಗತ್ತು ಮಿಥ್ಯೆ' ಎಂದು ಹರಟುತ್ತಿರುತ್ತಾನೆ ಅವನ ಅನುಭವಕ್ಕೆ ಮಾತ್ರ ಅದು ಬಂದಿರುವದಿಲ್ಲ.

ಬ್ರಹ್ಮೈವೇದಂ ಜಲ್ಪತಿ ದೋಷಾದೋಷೋತ್ತಮಾಧಮಾನ್ ಪಶ್ಯನ್ |
ನಗ್ನೋ ಭೂತ್ವಾ ವಿಚರತ್ಯವಧೂತತ್ವಂ ಪ್ರದರ್ಶಯನ್ ಭ್ರಷ್ಟಃ ||2||
    ಭ್ರಷ್ಟನಾದವನು-ದೋಷ, ಗುಣ; ಉತ್ತಮ, ಅಧಮ - ಎಂಬ ತಾರತಮ್ಯಗಳನ್ನು ಕಾಣುತ್ತಲೇಇದ್ದರೂ 'ಇದೆಲ್ಲವೂ ಬ್ರಹ್ಮವೇ' ಎಂದು ಗಳಹುತ್ತಿರುತ್ತಾನೆ. ತಾನು ಅವಧೂತನೆಂದು ಪ್ರಕಟಿಸಿಕೊಳ್ಳುವದಕ್ಕಾಗಿ ಬೆತ್ತಲೆ ತಿರುಗುತ್ತಾನೆ !

ಕೃತ್ಯಾಕೃತ್ಯಮಶೇಷಂ ತ್ಯಕ್ತುಮಶಕ್ತಃ ಶ್ರುತೇರಗೋಚರತಾಮ್ |
ಆತ್ಮನಿ ಜಲ್ಪನ್ ಹಾಸ್ಯಾಸ್ಪದತಾಮೇತ್ಯೇಷ ಮಾನವೋ ಭ್ರಷ್ಟಃ ||3||
    ಮಾಡತಕ್ಕದ್ದು, ಮಾಡಬಾರದ್ದು - ಎಂಬಿವನ್ನು ಪೂರ್ಣವಾಗಿ ಬಿಡುವದಕ್ಕೆ ಕೈಯಲ್ಲಾಗದೆ ಇದ್ದರೂ ತಾನು ಶ್ರುತಿಗೆ ವಿಷಯನಲ್ಲವೆಂದು ಹರಟುತ್ತಾ ಹಾಸ್ಯಾಸ್ಪದನಾಗುತ್ತಿರುವನಲ್ಲ, ಈ ಭ್ರಷ್ಟನಾದ ಮಾನವನು!

ಪಾಶಾಷ್ಟಕಸಂಕಷ್ಟಾಶ್ಲಿಷ್ಟತನುರ್ಮೃಷ್ಟಭೋಜನಪ್ರೀತಃ |
ಶಿಷ್ಟೋಹಂ ಮನ್ವಾನಃ ಕಷ್ಟಮಹೋ ದುಷ್ಟಮಾನವೋ ಭ್ರಷ್ಟಃ ||4||
    ಆಹ! ಎಂಟು ಪಾಶಗಳ ಬಿಗಿತಕ್ಕೂ ಸಿಕ್ಕಿದ ಶರೀರವುಳ್ಳವನಾಗಿ, ಮೃಷ್ಟಾನ್ನ ಭೋಜನದಿಂದಲೇ ತುಷ್ಟಿಯನ್ನು ಪಡೆಯುತ್ತಾ ಇದ್ದರೂ 'ನಾನು ಶಿಷ್ಟನು' ಎಂದುಕೊಳ್ಳುತ್ತಿರುವನು! ಇಂಥ ದುಷ್ಟಮನುಷ್ಯನೇ ಭ್ರಷ್ಟನು.

ಆತ್ಮೈವೇದಂ ಜಲ್ಪಲ್ಲೋಕೋಕ್ತಿರಸಹಮಾನಮೇಧಾವೀ |
ಸ್ತುತಿವಾಕ್ಯಾನಿ ಶ್ರೋತುಂ ಧಾವಂಸ್ತುಷ್ಟೋ ನ ಕಿಂ ಭವೇದ್ ಭ್ರಷ್ಟಃ ||5||
    'ಇದೆಲ್ಲವೂ ಆತ್ಮನೇ' ಎಂದು ಹೇಳುತ್ತಿರುತ್ತಾನೆ, ಜನರು ತನ್ನ ವಿಷಯಕ್ಕೆ ಆಡುವದನ್ನು ಸಹಿಸಿಕೊಳ್ಳುವ ಮನಸ್ಸು ಮಾತ್ರ ಇರುವದಿಲ್ಲ! ಹೊಗಳುವವರ ಮಾತುಗಳನ್ನು ಕೇಳುವದಕ್ಕೆ ಓಡಿಬರುತ್ತಿರುತ್ತಾನೆ. ಇಂಥವನು ಭ್ರಷ್ಟನಲ್ಲವೇನು?

ಯಸ್ಮಿನ್ ಸ್ವಸ್ಯ ಚ ನಿಷ್ಠಾ ತದ್ಧರ್ಮಿಷ್ಠಾನಶಿಷ್ಟಗಣನಾಯಾಮ್ |
ಕುರ್ವನ್ ಕರ್ಮಹತೋಯಂ ಯದ್ಯಪಿ ಶಿಷ್ಟೋ ನ ಕಿಂ ಭವೇದ್ ಭ್ರಷ್ಟಃ ||6||
    ಯಾವದನ್ನು ತಾನೂ ತಾತ್ಪರ್ಯದಿಂದ ಮಾಡುತ್ತಿರುವನೋ, ಆ ಧರ್ಮವನ್ನು ಮಾಡುತ್ತಿರುವವರನ್ನು ಅಶಿಷ್ಟರು ಎಂದಡಣಿಸುತ್ತಾ ಇರುವ ಇಂಥ ಕರ್ಮಹತನು ಶಿಷ್ಟನಾದರೂ ಭ್ರಷ್ಟನಲ್ಲವೇನು?

ಕರ್ತೃತ್ವಂ ಭೋಕ್ತೃತ್ವಂ ಮನ್ವಾನಃ ಸ್ವಾತ್ಮನಿ ವಿಲಪೆನ್ ಪ್ರಭೋ ತಮ್ಬೋ |
ಕೂಜತಿ ಹಾ ಕಿಂ ಕೃತಮಿತಿ ಕಿಂ ವಾ ಭೋಕ್ತವ್ಯಮಿತ್ಯಸೌಭ್ರಷ್ಟಃ ||7||
    ತನ್ನ ಪರಮಾರ್ಥಾತ್ಮನಲ್ಲಿಯೂ ಕರ್ತೃತ್ವವನ್ನೂ ಭೋಕ್ತೃತ್ವವನ್ನೂ ಇರುವದೆಂದೆಣಿಸುತ್ತಾ ಪ್ರಭೋ! ಶಂಭೋ! ನಾನು ಏನುಮಾಡಿಬಿಟ್ಟೆನು! ಅಯ್ಯೋ! ಯಾವ ಫಲವನ್ನು ಭೋಗಿಸುವೆನೊ? ಎಂದು ಅಳುತ್ತಿರುವನಲ್ಲ ಅವನು ಭ್ರಷ್ಟನೇ ಸರಿ!

ಚಿನ್ಮಾತ್ರಂ ಸ್ವಾತ್ಮಾನಂ ದೇಹಂ ಮನ್ವಾನ ಏಜತೇ ಯಮತಃ |
ಸರ್ವಾತ್ಮಾನಮಬುದ್ಧ್ವಾ ಬ್ರಹ್ಮಾಪಿ ಸ್ಯಾದಹೋ ಕಿಲ ಭ್ರಷ್ಟಃ ||8||
    ಚಿನ್ಮಾತ್ರನಾಗಿರುವ ತನ್ನ ಆತ್ಮನನ್ನು ಎಲ್ಲರಿಗೂ ಆತ್ಮನೆಂದು ಅರಿತುಕೊಳ್ಳದೆ ಯಮನಿಗೆ ಅಂಜುತ್ತಿರುವವನು ಚತುರ್ಮುಖಬ್ರಹ್ಮನೇ ಆಗಿದ್ದರೂ ಭ್ರಷ್ಟನೇ ಸರಿ.

ಭ್ರಷ್ಟಾಷ್ಟಕಮೇತದ್ ಯಃ ಪ್ರವಿಚಾರಯತೀಹ ಮಾನವೋ ಧನ್ಯಃ |
ಮಾನ್ಯಃ ಸ್ಯಾಲ್ಲೋಕೇಷು ಭ್ರಷ್ಟತ್ವಂ ವೇತ್ತಿ ನಿಜಚಾರಿತ್ರಾತ್ ||9||
    ಈ ಭ್ರಷ್ಟಾಷ್ಟಕವನ್ನು ಯಾವ ಮಾನವನು ಚೆನ್ನಾಗಿ ವಿಚಾರಮಾಡುತ್ತಾನೋ, ತನ್ನ ನಡತೆಯಿಂದ ಭ್ರಷ್ಟನೆಂಬುದನ್ನು ಅರಿತುಕೊಳ್ಳುತ್ತಾನೋ ಅವನೇ ಧನ್ಯನೂ ಎಲ್ಲರಿಗೂ ಮಾನ್ಯನೂ ಆಗುವನು.

[ಶ್ರೀಕೃಷ್ಟಾನಂದರೆಂಬ ಯತೀಶ್ವರರು ರಚಿಸಿರುವ ಈ ಭ್ರಷ್ಟಾಷ್ಟಕವನ್ನು 'ಬೃಹತ್ ಸ್ತೋತ್ರ ರತ್ನಹಾರ'ದಿಂದ ಆರಿಸಿ ಅರ್ಥಸಮೇತ ಅರ್ಪಿಸಲಾಗಿದೆ. ]

*ಇದರಲ್ಲಿ ಮುಖ್ಯವಾಗಿ - ಬಾಯಲ್ಲಿ ವೇದಾಂತವನ್ನು ಆಡುತ್ತಾ ಕರ್ಮಭ್ರಷ್ಟರಾದವರ ನಿಂದೆಯಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ