ಶ್ರೀಕೃಷ್ಣ ಜನ್ಮಾಷ್ಟಮಿ

ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಾಯ ಚ |
ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ||

    ಶ್ರೀಕೃಷ್ಣಜನ್ಮಾಷ್ಟಮಿ ಈ ದಿವಸವು ಶ್ರೀಕೃಷ್ಣನು ವಸುದೇವ ದೇವಕಿಯರ ಕೈಕಾಲ ಬೇಡಿಯನ್ನು ಕಳಚಿ ಅವರಿದ್ದ ಸೆರೆಮನೆಯಲ್ಲಿ ಅವರು ಎಂದೆಂದಿಗೂ ಕಾಣದೆ ಇದ್ದ ಒಂದು ವಿಚಿತ್ರವಾದ ಪುಣ್ಯಜ್ಯೋತಿಯನ್ನು ಬೆಳಗಿಸಿದ ಪರಮಮಂಗಳದಿನವಾಗಿರುತ್ತದೆ. ಈ ದಿನದಿಂದ ಮೊದಲಾಗಿ ಮುಂದೆ ಮುಂದೆ ಹೋಗುತ್ತಾ ಕಂಸನ ಕಡೆಯ ಅಸುರರಿಗೆ ಸೋಲು ಆಗುತ್ತಾ ಬಂದಿತು. ಭೂದೇವಿಯು ಇನ್ನು ಮೇಲೆ ತಾನು ದುಷ್ಟರ ಭಾರವನ್ನು ಹೊರತಕ್ಕ ದುಃಖವು ಇರುವದಿಲ್ಲವೆಂಬ ನಿರೀಕ್ಷೆಯಿಂದ ನಲಿಯಲು ಆರಂಭಿಸಿದಳು. ಶ್ರೀಕೃಷ್ಣನು ಅವತರಿಸಿ ಒಂದು ಯುಗವೇ ಆಗಿಹೋಗಿದ್ದರೂ ಭರತಖಂಡದ ಎಲ್ಲಾ ಪ್ರಾಂತದವರೂ ಈ ದಿನವನ್ನು ತಪ್ಪದೇ ಪ್ರತಿವರ್ಷವೂ ಉತ್ಸವ ದಿನವಾಗಿ ಎಣಿಸುತ್ತಾ ಬರುತ್ತಿದ್ದಾರೆ.

    ಕೃಷ್ಣಜನ್ಮವನ್ನು ಉಪವಾಸದಿನವಾಗಿ ಎಣಿಸುವವರೇ ಬಹುಮಂದಿ; ಎಲ್ಲಿಯೋ ಕೆಲವರು ಇದನ್ನು ಊಟದ ಹಬ್ಬವಾಗಿ ಆಚರಿಸುವವರು ಇದು ಹೇಗಾದರೂ ಈ ಎರಡು ಪಂಗಡದವರೂ ಈ ದಿನ ಕೃಷ್ಣನ ಆರಾಧನೆಯನ್ನು ಮಾಡುವದೂ, ಅವನು ಮಾಡಿದ ಲೋಕೋಪಕಾರವನ್ನೂ ಧರ್ಮೊದ್ಧಾರವನ್ನೂ ನೆನೆಸಿಕೊಂಡು ಸಂತೋಷಪಡುವದೂ, ಪೂಜೆ, ದಾನ, ಧರ್ಮ - ಮುಂತಾದವುಗಳಿಂದ ಸತ್ಕಾಲಕ್ಷೇಪವನ್ನು ಮಾಡುವದೂ ತಮಗೆಲ್ಲರಿಊ ಶ್ರೇಯಸ್ಕರವೆಂದು ನಂಬಿರುತ್ತಾರೆ. ಈ ಶುಭದಿವಸದ ಮುಹೂರ್ತವನ್ನು ಗೊತ್ತುಮಾಡುವರಲ್ಲಿ ಸ್ವಲ್ಪ ಮತಭೇದವುಂಟು ಶ್ರಾವಣಮಾಸದ ಕೃಷ್ಣಪಕ್ಷದಲ್ಲಿ ಅಷ್ಟಮಿಯ ದಿನ ರೋಹಿಣೀ ನಕ್ಷತ್ರದಲ್ಲಿ ಅರ್ಧರಾತ್ರಿಯಲ್ಲಿ ಚಂದ್ರೋದಯವಾಗುತ್ತಲೂ ಕೃಷ್ಣನ ಜನ್ಮವಾಯಿತೆಂಬ ಕಾರಣದಿಂದ ಕೆಲವರು ತಿಥಿಗೆ ಪ್ರಾಧಾನ್ಯವನ್ನು ಕೊಟ್ಟು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಗೊತ್ತುಪಡಿಸುವರು ಮತ್ತೆ ಕೆಲವರು ಮಾಸವು ಶ್ರಾವಣವೇ ಆಗಲಿ ಭಾದ್ರಪದವೇ ಆಗಲಿ, ಅಷ್ಟಮಿಯ ದಿನ ರೋಹಿಣೀ ನಕ್ಷತ್ರವು ಎಂದು ಬರುವದೋ ಆ ದಿನವನ್ನು ಅಥವಾ ಸೌರಮಾನದಿಂದ ಈ ಮಾಸಕ್ಕೆ ಸಮಾನವಾಗುವ ಸಿಂಹಮಾಸದಲ್ಲಿ ರೋಹಿಣೀ ನಕ್ಷತ್ರವು ಎಂದಿರುವದೋ ಆ ದಿನವನ್ನು "ಶ್ರೀಕೃಷ್ಣಜಯಂತಿ" ಎಂಬ ಹೆಸರಿನಿಂದ ಕರೆಯುವರು. ಈ ದಿನ ಆರಾಧನೆ ಮಾಡುವವರು ಬೆಳಗ್ಗೆ ಉಷಃಕಾಲದಲ್ಲಿಯೇ ಎದ್ದು ಮಹಾವಿಷ್ಣುವನ್ನು ಸ್ಮರಣೆಮಾಡುತ್ತಾ ನಿತ್ಯಕರ್ಮಗಳನ್ನು ಮಾಡಿ ಶ್ರೀಕೃಷ್ಣನ ಮಹಿಮೆಗಳನ್ನು ಎಣಿಸಿಕೊಳ್ಳುತ್ತಾ ಕಾಲವನ್ನು ಕಳೆಯುತ್ತಿದ್ದು ರಾತ್ರಿಯಲ್ಲಿ ವ್ರತಕ್ಕೆ ಅಂಗವಾಗಿ ಮತ್ತೆ ಸ್ನಾನಮಾಡಿ ಪರಿವಾರಸಮೇತನಾದ ಶ್ರೀಕೃಷ್ಣನಿಗೆ ಆವಾಹನಾದಿ ಷೋಡಶೋಪಚಾರ ಪೂಜೆಯನ್ನು ಮಾಡುವರು. ದೇವಕಿಯ ಸಮೀಪದಲ್ಲಿರುವ ಶ್ರೀಕೃಷ್ಣನ ಪ್ರತಿಮೆಯನ್ನೂ, ಲಕ್ಷ್ಮಿ, ವಸುದೇವ, ನಂದ, ಯಶೋದ, ಗೋಪಿಯರು, ಗೋಪಾಲಕರು, ಬಲರಾಮ, ಚಂಡಿಕಾ- ಮುಂತಾದವರ ಪ್ರತಿಮೆಗಳನ್ನೂ ಕುಲಾಚಾರದಂತೆ ಮಾಡಿಸಿ ಅವುಗಳನ್ನು ಪೂಜಿಸುವರು. ಅರ್ಧರಾತ್ರೆಯಲ್ಲಿ ಚಂದ್ರನಿಗೂ ಶ್ರೀಕೃಷ್ಣನಿಗೂ ಅರ್ಘ್ಯವನ್ನು ಕೊಟ್ಟು ರಾತ್ರಿಯೆಲ್ಲಾ ಉಪವಾಸವಾಗಿದ್ದು ಶ್ರೀಕೃಷ್ಣಸ್ಮರಣ, ಧ್ಯಾನ, ಕೀರ್ತನ ಮುಂತಾದ ಸತ್ಕರ್ಮಗಳಿಂದ ಜಾಗರಣವನ್ನು ಮಾಡುವರು. ಉಪವಾಸವನ್ನು ಮಾಡುವದಕ್ಕೆ ಸಾಗದವರು ಫಲಹಾರವನ್ನು ಮಾಡುವರು. ಜಯಂತೀಪದ್ಧತಿಯವರಲ್ಲಿ ಕೆಲವರು ಉತ್ಸವವಾದ ಮೇಲೆ ಈ ರಾತ್ರಿಯೇ ಪಾರಣೆಯನ್ನು ಮಾಡುವರು.

    ಶ್ರೀಕೃಷ್ಣಾವತಾರವಾಗಿ ಹೀಗೆ ಎಷ್ಟೋ ಶತಮಾನಗಳಾಗಿದ್ದರೂ ಕಂಸನೇ ಮುಂತಾದ ರಾಕ್ಷಸರ ಭೀತಿಯು ಈಗ ನಮ್ಮಗಳಿಗೆ ಯಾರಿಗೂ ಏನೂ ಇಲ್ಲದೆ ಇದ್ದರೂ, ಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ಮಾತ್ರ ತಪ್ಪದೆ ನಡೆಸಿಕೊಂಡು ಬಂದಿರುವದರಲ್ಲಿ ನಮ್ಮ ಹಿರಿಯರ ಆಶಯವು ಏನಿರಬಹುದು? ಎಂಬುದು ವಿಚಾರಣೆಗೆ ಅರ್ಹವಾಗಿದೆ. ಕೃಷ್ಣಾಷ್ಟಮಿಯ ದಿನ ಬಗೆಬಗೆಯ ತಿಂಡಿಗಳನ್ನು ಏರ್ಪಡಿಸುವದೇ ಮುಖ್ಯವಾಗಿ ನಡೆದಿರುವದರಿಂದ ಈ ಹಬ್ಬವು ಯಾರೋ ತಿಂಡಿಪೋತರು ಏರ್ಪಡಿಸಿದ್ದೆಂದು ಕೆಲವರು ಹಾಸ್ಯಮಾಡುವರು, ಆದರೆ ನಿಜವಾಗಿ ನೋಡಿದರೆ ಕೃಷ್ಣಾಷ್ಟಮಿಯಲ್ಲಿ ಶ್ರದ್ಧೆಯುಳ್ಳವರು ಈ ದಿನ ಪೂರ್ಣ ಉಪವಾಸವನ್ನೇ ಮಾಡುತ್ತಾರೆ. ಮಾರನೆಯ ದಿನ ಪಾರಣೆಯು ಕ್ಲೃಪ್ತವಾಗಿ ಬೆಳಗ್ಗೆಯೇ ನಡೆಯುತ್ತದೆಂಬುದೂ ನಿಯಮವಿಲ್ಲ ತಮ್ಮೆದುರಿಗೇ ಬಗೆಬಗೆಯ ಭಕ್ಷ್ಯಗಳಿರುವಾಗ ಹೀಗೆ ಉಪವಾಸವಿರುವ ಜನರನ್ನು ತಿಂಡಿಪೋತರೆಂದು ಕರೆಯುವದು ಹೋಟೆಲ್ ತಿಂಡಿಯ ವಾಸನೆಯು ಹೆಚ್ಚಾಗಿರುವವರಿಗೆ ಒಪ್ಪೀತೇ ಹೊರತು ಯುಕ್ತಿಯಿಂದ ವಿಷಯಗಳನ್ನು ಪರಿಶೀಲಿಸುವವರಿಗೆ ಎಂದಿಗೂ ಒಗ್ಗದು.

    ಶ್ರೀಕೃಷ್ಣನಿಗೆ ಅರ್ಘ್ಯವನ್ನು ಕೊಡುವ ಮಂತ್ರದ ಅರ್ಥವನ್ನು ನೋಡಿದರೆ ಕೃಷ್ಣಜನ್ಮಾಷ್ಟಮಿಯ ಮಹತ್ವವನ್ನು ನಮ್ಮ ಪೂರ್ವಿಕರು ಎಷ್ಟರಮಟ್ಟಿಗೆ ಮನಸ್ಸಿನಲ್ಲಿ ಇಟ್ಟುಕೊಂಡಿದ್ದರೆಂಬುದು ಎದ್ದುಕಾಣುವದು. "ಕಂಸಾದಿಗಳನ್ನು ಕೊಂದು ಭೂಮಿಯ ದೊರೆಯನ್ನು ಕೆಳಕ್ಕಿಳಿಸದ ಮತ್ತು ಪಾಂಡವಾದಿಗಳನ್ನು ರಕ್ಷಿಸಿ ಧರ್ಮವನ್ನು ಸಂಸ್ಥಾಪಿಸದ ಶ್ರೀಕೃಷ್ಣನೇ, ನಿನಗೆ ಅರ್ಘ್ಯವು ಸರ್ವಪಾಪಗಳನ್ನೂ ಸರ್ವದುಃಖಗಳನ್ನೂ ಸರ್ವರೋಗಗಳನ್ನೂ ಪರಿಹಾರಮಾಡುವ, ಜನ್ಮಜನ್ಮಾಂತರದ ಪುಣ್ಯಗಳನ್ನು ಹೆಚ್ಚಿಸುವ ಶ್ರೀಕೃಷ್ಣನೇ, ನಿನಗೆ ಅರ್ಘ್ಯವು" ಎಂಬ ತಾತ್ಪರ್ಯವು ಈ ಅರ್ಘ್ಯಶ್ಲೋಕಗಳಲ್ಲಿ ಅಡಗಿರುವದು ಕಂಸನೇ ಮುಂತಾದ ವ್ಯಕ್ತಿಗಳು ದ್ವಾಪರದಲ್ಲಿಯೇ ಆಗಿಹೋದರೆಂಬುದು ನಿಜ; ಆದರೆ ಶ್ರೀಕೃಷ್ಣನು ಯಾವ ಅಸುರರ ತತ್ತ್ವವನ್ನು ಧ್ವಂಸಮಾಡುವುದಕ್ಕೆ ಅವತರಿಸಿದ್ದನೋ ಆ ತತ್ತ್ವಗಳು ಈಗಲೂ ಲೋಕದಲ್ಲಿ ಬೇಕಾದ ಹಾಗೆ ಹಬ್ಬಿಕೊಂಡಿದೆ ಈಗಲೂ ಅವುಗಳನ್ನು ನಾವು ಶ್ರೀಕೃಷ್ಣ ಸ್ಮರಣೆಯಿಂದಲೂ ಭಕ್ತಿಯುಕ್ತವಾದ ಪೂಜೆಯಿಂದಲೂ ಆತನು ಉಪದೇಶಿಸಿರುವ ಧರ್ಮಗಳ ಆಚರಣೆಯಿಂದಲೂ ನಾಶಗೊಳಿಸಿಗೊಳ್ಳಬೇಕಾಗಿದೆ.

    ಕಂಸನಿಗೆ "ಆಸ್ತಿ", "ಪ್ರಾಪ್ತಿ" (ಇಷ್ಟು ನನಗೆ ಇದೆ ಎಂಬುದೇ "ಆಸ್ತಿ", ಇನ್ನಿಷ್ಟು ಆಗಬೇಕೆಂಬುದೇ "ಪ್ರಾಪ್ತಿ") ಎಂದು ಇಬ್ಬರು ಹೆಂಡಿರೆಂದು ಭಾಗವತದಲ್ಲಿ ಹೇಳಿದೆ. ಈ ಭಾವನೆಗಳು ಬಲವಾಗಿ ಬೇರೂರಿ ಇರುವವರ ಹೃದಯದಲ್ಲೆಲ್ಲಾ ಕಂಸನ ಆವೇಶವು ಸಂಪೂರ್ಣವಾಗಿರುವದು. ಈ ಕಂಸನಾಶವು ಆಗುವದಕ್ಕೆ ಶ್ರೀಕೃಷ್ಣನ ಅವತಾರವು ಅವರ ಹೃದಯದಲ್ಲಿ ಅವಶ್ಯವಾಗಿ ಆಗಬೇಕು. ಶ್ರೀಕೃಷ್ಣನ ಅವತಾರವು ಮುಂದೆ ಆಗುವದೆಂಬ ಸುದ್ದಿಯನ್ನು ಕೇಳಿದ ಕೂಡಲೆ ಕಂಸನು ತನ್ನಕಡೆಯ ಅಸುರರನ್ನು ಒಂದು ಸಭೆ ಸೇರಿಸಿ ಮುಂದೆ ಏನು ಮಾಡಬೇಕೆಂದು ಮಂತ್ರಾಲೋಚನೆ ಮಾಡಿದನಂತೆ, ಆ ಮಂತ್ರಿಗಳು "ಎಲೈ ರಾಜೇಂದ್ರನೆ, ನಮ್ಮ ಶತ್ರುಗಳಾದ ದೇವತೆಗಳಿಗೆಲ್ಲಾ ವಿಷ್ಣುವೇ ಮೂಲವು. ಆತನು ಮುಖ್ಯವಾಗಿ ಬ್ರಾಹ್ಮಣರಲ್ಲಿಯೂ, ಬ್ರಹ್ಮವಾದಿಗಳಲ್ಲಿಯೂ, ತಪಸ್ವಿಗಳಲ್ಲಿಯೂ, ಯಜ್ಞಯಾಗಾದಿಗಳನ್ನು ಮಾಡುವವರಲ್ಲಿಯೂ, ಗೋವುಗಳಲ್ಲಿಯೂ ನೆಲೆಸಿರುವನು. ಬ್ರಾಹ್ಮಣರು, ಗೋವುಗಳು, ವೇದಗಳು, ತಪಸ್ಸು, ಸತ್ಯ, ದಮ, ಶಮ, ಶ್ರದ್ಧೆ, ದಯೆ, ತಿತಿಕ್ಷೆ, ಯಜ್ಞಗಳು ಇವೇ ಶ್ರೀಹರಿಯ ಶರೀರವು ಆದ್ದರಿಂದ ಇವೆಲ್ಲವೂ ಇರುವ ಋಷಿಗಳನ್ನು ಕೊಲ್ಲುವದೇ ವಿಷ್ಣುವಿನ ವದೋಪಾಯವು ನಾವು ಈ ಕೆಲಸವನ್ನು ಕೂಡಲೆ ಕೈಕೊಳ್ಳೊಣ" ಎಂದು ತಮ್ಮ ಅಭಿಪ್ರಾಯವನ್ನು ಸೂಚಿಸಿದರಂತೆ ಮನುಷ್ಯನ ಹೃದಯದಲ್ಲಿ ಅತ್ಯಂತ ಪ್ರಿಯರಾಗಿ ಯವಾಗಲೂ ನೆಲೆಸಿಕೊಂಡಿರುವ ಈ "ಆಸ್ತಿ ಪ್ರಾಪ್ತಿ"ಗಳನ್ನು ಯಾವನು ಅತಿ ವ್ಯಾಮೋಹದಿಂದ ಹಿಂದೂ ಮುಂದೂ ಕಾಣದಷ್ಟು ಕುರುಡನಾಗಿ ವರ್ತಿಸುತ್ತಿರುವನೋ, ಅಂಥ ಅಸುರಬುದ್ಧಿಯವನಿಗೆ ಈಗಲೂ ಧರ್ಮ, ಸತ್ಯ, ಶಮ, ದಮ ಮುಂತಾದವುಗಳಲ್ಲಿ ಕಂಸನ ಹಾಗೆಯೇ ಪರಮದ್ವೇಷವು ಉಂಟಾಗುವದು ಅಂಥವನಿಗೆ ಈ ಲೋಕದಲ್ಲಿಯಾಗಲಿ, ಪರಲೋಕದಲ್ಲಿಯಾಗಲಿ ಎಂದಿಗೂ ಸದ್ಗತಿಯುಂಟಾಗಲಾರದು. ಮನುಷ್ಯನು ತಾನು ಹುಟ್ಟಿದ್ದು ಸಾರ್ಥಕವಾಗಬೇಕಾದರೆ ಮರೆಯದೆ ಈ "ಆಸ್ತಿಪ್ರಾಪ್ತಿ"ಗಳನ್ನು ಮುಟ್ಟುಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ ಸತ್ಯ, ಧರ್ಮ ಮುಂತಾದ ಆಧ್ಯಾತ್ಮಸಾಧನೆಗಳನ್ನು ಮರೆಯದೆ ಕೈಕೊಳ್ಳಬೇಕು ಯಾವನು ವಸುದೇವ ದೇವಕೀದೇವಿಯರಂತೆ ಅನನ್ಯವಾದ ಭಕ್ತಿಯಿಂದ ಎಡೆಬಿಡದೆ ಪರಮಾತ್ಮನಲ್ಲಿಯೇ ಮೊರೆಯಿಡುವನೋ ಅಂಥವನ ಹೃದಯದಲ್ಲಿ ಶ್ರೀಕೃಷ್ಣನು ಅವಶ್ಯವಾಗಿ ಅವತರಿಸಿ ಅವರಲ್ಲಿರುವ ಅಜ್ಞಾನದ ಕತ್ತಲೆಯನ್ನು ಸಂಪೂರ್ಣವಾಗಿ ಈ ಆಧ್ಯಾತ್ಮಸಾಧನಗಳ ಪ್ರಕಾಶದಿಂದ ಹೋಗಲಾಡಿಸುವನು ಪರಮಾತ್ಮನಿಗೆ ಕಾಲದೇಶಗಳ ಕಟ್ಟಿಲ್ಲ ಯಾವಾಗ ಎಂದರೆ ಆ ಕಾಲದಲ್ಲಿ ಎಲ್ಲಿ ಎಂದರೆ ಆ ಸ್ಥಳದಲ್ಲಿ ಅವನು ಅವತರಿಸಿ ಪ್ರಕಟನಾಗುನು ಧರ್ಮಜ್ಞಾನವೈರಾಗ್ಯದಿಗಳು ಎಲ್ಲಿರುವವೋ ಅಲ್ಲಿ ಅವನಿಗೆ ಪರಮಪ್ರೇಮ ಕೃಷ್ಣಾಷ್ಟಮಿಯ ದಿನ ಅವನು ಅವತರಿಸಿದನೆಂಬುದು ದ್ವಾಪರಯುಗದ ಅಸುರರ ಹಾವಳಿಯನ್ನು ತೊಲಗಿಸಿ ಲೋಕಕ್ಕೆ ಶಾಂತಿಯನ್ನು ಕೊಡವದಕ್ಕೆ ನಿಮಿತ್ತ ಮಾತ್ರವಾಗಿತ್ತು ಆದರೆ ಆ ದಿನವನ್ನು ಪುಣ್ಯದಿನವಾಗಿ ಭಾವಿಸಿ ಆತನ ಸ್ಮರಣೆಗೆ ಸರ್ವಾಂತಃಕರಣವನ್ನು ಧಾರೆಯೆರೆಯುವ ಪುಣ್ಯಾತ್ಮರಿಗೆ ಪ್ರತಿದಿನವೂ ಶ್ರೀಕೃಷ್ಣಜನ್ಮಾಷ್ಟಮಿಯೇ ಮಿಕ್ಕ ಅಜ್ಞರಿಗೆ ಮಧ್ಯಾಹ್ಮದಲ್ಲಿಯೂ ಅಜ್ಞಾನವೆಂಬ ಅರ್ಧರಾತ್ರೆಯು ಕವಿದಿರುವುದು; ಆದ್ದರಿಂದ ಕೃಷ್ಣಜನ್ಮಾಷ್ಟಮಿ ಎಂದರೆ ಅವರಿಗೆ ಬರಿಯ ಕುರುಕಲು ತಿಂಡಿಯ ದಿನವೆಂದೇ ಭಾವನೆಯಾಗುವದು ಆದರೆ ಈ ಮಹಾತ್ಮರಿಗೆ ಮಾತ್ರ ಶುಕ್ಲಪಕ್ಷ ಕೃಷ್ಣಪಕ್ಷಗಳೆಂಬ ಭೇದವೇ ಇಲ್ಲದೆ ಅರ್ಧರಾತ್ರಿಯಲ್ಲಿಯೂ ಆಧ್ಯಾತ್ಮಚಂದ್ರನ ಪೂರ್ಣ ಪ್ರಕಾಶವು ಬೆಳಗುತ್ತಾ ಯಾವಾಗಲೂ ಪೂರ್ಣಶಾಂತಿಯನ್ನು ಕೊಡುತ್ತಿರುವದು.

ಯೋsನ್ತಃ ಪ್ರವಿಶ್ಯ ಮಮ ಮಾಚಮಿಮಾಂ ಪ್ರಸುಪ್ತಾಂ
ಸಂಜೀವಯತ್ಯಖಿಲಶಕ್ತಿಧರಃ ಸ್ವಧಾಮ್ನಾ |
ಅನ್ಯಾಂಶ್ಚ ಹಸ್ತಚರಣಶ್ರವಣತ್ವಗಾದೀನ್
ಪ್ರಾಣಾನ್ನಮೋ ಭಗವತೇ ಪುರುಷಾಯ ತುಭ್ಯಮ್ ||


   

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ