ಶ್ರಾವಣ ಮಾಸ

ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ. ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವ್ರತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳು 1) ಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ 2) ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ. 3) ಆ ತತ್ವ ಸಿದ್ದಿಗಾಗಿ ಕಲ್ಪ ಅಂದರೆ ವಿಧಿ=ನಿಷೇಧಗಳನ್ನೊಳಗೊಂಡ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆ.
ವ್ರತಗಳು ಉತ್ಸವಗಳು ಎಂಬ ಉಭಯ ಅಂಗಗಳನ್ನೊಳಗೊಂಡ ಹಿಂದೂ ಹಬ್ಬಗಳ ಮತ್ತು ಪವಿತ್ರ ದಿನಗಳ ಆಚರಣೆಯನ್ನು ವಿಧಿಸಿರುವುದು ಮಾನವ ಚೇತನ ಅನಿತ್ಯವಾದ ಲೌಕಿಕ ಸ್ತರದಿಂದ ನಿತ್ಯವಾದ ಪಾರಮಾರ್ಥಿಕ ಸ್ತರಕ್ಕೆ ಏರುವುದಕ್ಕಾಗಿಯೇ.
ನಮ್ಮ ಪ್ರಾಚೀನ ಮಹರ್ಷಿಗಳು ನಮ್ಮ ಪ್ರತಿಯೊಂದು ಹಬ್ಬಕ್ಕೂ ಖಗೋಳಿಕ ನಿತ್ಯ ಸತ್ಯಗಳ ಪ್ರೇರಕಾಂಶಗಳನ್ನು ಸಮ್ಮಿಲಿತಗೊಳಿಸಿದ್ದಾರೆ ಇದರಿಂದ ಚರಾಚರ ಜಗತ್ತಿನ ಸೂತ್ರದ ಕೊಂಡಿಯನ್ನು ಸುಂದರವಾಗಿ ಹೆಣೆದಿದ್ದಾರೆ ಎನ್ನಬಹುದು.
ಕನ್ನಡದ ಕಾವ್ಯಾನಂದರು ತಮ್ಮ ವಚನೋದ್ಯಾನದಲ್ಲಿ ಹೀಗೆ ಹೇಳಿರುವರು.
ತಂತಿಗಳಲ್ಲಿ ಸುನಾದವಿದೆ
ಸೋರೆ ದಂಡಿಗಳಿಗೆ ಬಿಗಿದಾಗ ಮಾತ್ರ
ಚರ್ಮದಲ್ಲಿ ಸುನಾದವಿದೆ
ವಾದ್ಯಗಳ ಮೈಗಳಿಗೆ ಬಿಗಿದಾಗ ಮಾತ್ರ
ಬಿಲ್ಲಿನಲ್ಲಿ ಬಾಣ ಬಿಡುವ ಶಕ್ತಿಯಿದೆ
ನಾರಿನಿಂದ ಬಿಗಿದಾಗ ಮಾತ್ರ
ನನ್ನಲ್ಲಿಯೂ ನಿನ್ನರಿವ ಶಕ್ತಿಯಿದೆ
ನಿನ್ನಡಿಗಳಿಗೆ ನನ್ನ ಬಿಗಿದಾಗ ಮತ್ರ
ಹೀಗೆ ಪರಮಾತ್ಮನ ಪಾದಾರವಿಂದಗಳಲ್ಲಿ ನಮ್ಮನ್ನು ನಾವು ಬಿಗಿದುಕೊಂಡು ಆರಾಧಿಸಲು ಹಬ್ಬ ಹರಿದಿನಗಳೂ ಅತ್ಯಂತ ಸಹಾಯಕವಾಗಿವೆ ಎನ್ನಬಹುದು.ಅದರಲ್ಲೂ ಶ್ರಾವಣ ಮಾಸ ಪ್ರಾರಂಭವಾಯಿತೆಂದರೆ ಸಾಲು ಸಾಲು ಹಬ್ಬ ಹರಿದಿನಗಳನ್ನು ತನ್ನೊಡಲೊಳಗೆ ಅಡಗಿಸಿಕೊಂಡು ಬಿಚ್ಚಿಡುತ್ತಾ ಇಡೀ ಮಾಸ ವಿಶಿಷ್ಟಪೂರ್ಣ ಆಚರಣೆಯೊಂದಿಗೆ ಸಾಗುವುದು.
ಕಾರಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು ಹೋಳಿ ಹುಣ್ಣಿಮೆ ಹೊಯ್ದುಕೊಂಡು ಹೋಯ್ತು ಎಂಬ ಹಿರಿಯರ ನುಡಿ ಎಷ್ಟು ಸತ್ಯ. ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದು ಶ್ರಾವಣ ಮಾಸ, ಇದನ್ನು ವರಕವಿ ಬೇಂದ್ರೆ
ಶ್ರಾವಣ ಬಂತು ಕಾಡಿಗೆ;ಬಂತು ನಾಡಿಗೆ
ಬಂತು ಬೀಡಿಗೆ;ಶ್ರಾವಣಾ ಬಂತು
ಕಡಲಿಗೆ ಬಂತು ಶ್ರಾವಣಾ;ಕುಣಿದಾಂಗ ರಾವಣಾ
ಕುಣಿದಾವ ಗಾಳಿ;ಬೈರವನ ರೂಪ ತಾಳಿ
ಎಂದು ಹೇಳುವ ಮೂಲಕ ಶ್ರಾವಣದ ವೈಭವವನ್ನು ಹಾಡಿ ಹೊಗಳಿದ್ದಾರೆ. ಶ್ರಾವಣ ಮಾಸ ಎಂದರೆ ಏನೋ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ. ಆಸ್ತಿಕರ ಪಾಲಿನ ಆನಂದ ಚೇತನ ಸ್ವರೂಪವಾಗಿದೆ ಈ ಮಾಸ. ಈ ಮಾಸದಲ್ಲಿ ಪ್ರತಿದಿನವೂ ಪುಣ್ಯದಿನ, ವ್ರತ, ಪೂಜೆ, ನಾಡಹಬ್ಬ, ಪುಣ್ಯ ಆರಾಧನೆ ಏನಾದರೂ ನಿತ್ಯ ನಿರಂತರವಾಗಿರುತ್ತವೆ,ಏನೇ ಮಾಡಿದರೂ ಶ್ರಾವಣ ಮಾಸದಲ್ಲಿ ಮಾಡು ಒಳ್ಳೆಯದಾಗುತ್ತದೆ ಎಂಬ ರೂಢಿಯುಂಟು. ಈ ಮಾಸ ಪೂರ್ತಿ ಮನೆಯ ಮುಂಭಾಗಿಲಿನಲ್ಲಿ ತೋರಣ ಹಸಿರಾಗಿರುತ್ತದೆ.ದೇವರ ಮಂಟಪದಲ್ಲಿ ನಂದಾದೀಪ ಬೆಳಗುತ್ತಿರುತ್ತದೆ.ಮುತ್ತೈದೆಯರು ಮಂಗಳ ರೂಪಿಣಿಯರಾಗಿ ಕಂಗೊಳಿಸುತ್ತ ಹಬ್ಬವನ್ನು ಶೃದ್ದೆ,ಭಕ್ತಿ,ಉತ್ಸಾಹದಿಂದ ಆಚರಿಸುತ್ತಾರೆ.
ಸರ್ವ ಹಬ್ಬಗಳ ಸಮನ್ವಯ ಸಂಯೋಗ ಮಾಸ ಶ್ರಾವಣ ಮಾಸ ಆಷಾಢ ಮಾಸದಲ್ಲಿ ಸಂಪ್ರದಾಯದ ಪ್ರಕಾರ ದೂರ ಆಗಿರುವ ದಂಪತಿಗಳು ಒಂದಾಗುತ್ತಾರೆ,ಅತ್ತೆ=ಸೊಸೆ, ಮಾವ=ಅಳಿಯ ಸೇರುವ ಮಾಸವಿದು.ಹಾಗಾದರೆ ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು ಹೇಗಿವೆ ನೋಡಿ
1)ಮಂಗಳಗೌರಿ ವ್ರತ 2)ನಾಗಚತುರ್ಥಿ/ಪಂಚಮಿ 3)ಬಸವ ಪಂಚಮಿ 4)ಶುಕ್ರಗೌರಿ ಪೂಜೆ 5)ಶ್ರಾವಣ ಶನಿವಾರದ ಪೂಜೆ 6)ಅಂಗಾರಕ ಜಯಂತಿ 7)ಶ್ರೀ ವರಮಹಾಲಕ್ಷ್ಮೀ ವ್ರತ 8)ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ 9)ಗಾಯತ್ರಿ ಆರಾಧನೆ 10)ಪ್ರತಿ ಸೋಮವಾರ ವಿಶೇಷ ಶ್ರಾವಣ ಸೋಮವಾರ ಆಚರಣೆ 11)ಉಪಾಕರ್ಮ 12)ಶ್ರೀ ಕೃಷ್ಣ ಜನ್ಮಾಷ್ಟಮಿ 13) ರಕ್ಷಾಬಂಧನ 14)ಸಿರಿಯಾಳ ಷಷ್ಠಿ
ಹೀಗೆ ಎಲ್ಲ ಹಿಂದೂ ಹಬ್ಬಗಳು ಆಚರಿಸಲ್ಪಡುವುದು ಈ ಶ್ರಾವಣ ಮಾಸದಲ್ಲಿಯೇ. ಅಬ್ಬ..ಎಷ್ಟೊಂದು ಹಬ್ಬಗಳು ಬೇರೆ ಯಾವ ಮಾಸದಲ್ಲಿಯೂ ಸಹ ಶ್ರಾವಣದ ಸಂಭ್ರಮ ಮತ್ತು ಇಷ್ಟೊಂದು ಹಬ್ಬಗಳ ಆಚರಣೆ ಇರುವುದಿಲ್ಲ.
ಶ್ರಾವಣಾ ಬಂತು ಘಟ್ಟಕ್ಕೆ;ರಾಜ್ಯ ಪಟ್ಟಕ್ಕೆ
ಬಾನ ಮಟ್ಟಕ್ಕೆ
ಏರ್ಯಾವ ಮುಗಿಲು ರವಿ ಕಾಣೆನು ಹಾಡೆ ಹಗಲು
ಎನ್ನುವ ವರಕವಿ ಬೇಂದ್ರೆ ಗುಡುಗು ಮಿಂಚು,ಮೇಘಾವಳಿ ಭಾರತದ ಭೂಮಿಕೆಯ ಮೇಲೆ ಆಗುವ ಅಗಾಧವನ್ನು ಕುರಿತು ಈ ಕವಿತೆಯಲ್ಲಿ ಚಿತ್ರಿಸಿರುವರು.ಇಲ್ಲಿ ಜೀವರಾಶಿಗಳ ಜೀವನ ಚೈತನ್ಯವಾಗಿದೆ ಭಾರತದ ವಿವಿಧ ಪ್ರದೇಶಗಳ ಜನರು ಇದನ್ನು ಆಯಾ ಭಾಗದಲ್ಲಿ ತಮ್ಮದೇ ರೀತಿಯಲ್ಲಿ ಆಚರಿಸುತ್ತಾರೆ,ಹಿಮಾಚಲ ಪ್ರದೇಶದಲ್ಲಿರುವ “ದಖರೈವ”ಎಂಬ ಹೆಸರಿಂದ ಕಾಳಿಕಾಮಾತೆಯನ್ನು ಪೂಜಿಸುವ ಮೂಲಕ ಆಚರಿಸಿದರೆ ಪಂಜಾಬಿನವರು”ತಿಯಾನ್ ಬಾಗಿ”ಎಂದು, ಉತ್ತರಪ್ರದೇಶದಲ್ಲಿ” ಸಾವನ್. ಕಾಶ್ಮೀರದಲ್ಲಿ “ರುಥಾ” ನೃತ್ಯವನ್ನು ಮಾಡುತ್ತ ಆಚರಿಸುತ್ತಾರೆ.
ಬೆಟಗೇರಿ ಕೃಷ್ಣಶರ್ಮರ ನಲ್ವಾಡುಗಳಲ್ಲಿ “ಶ್ರಾವಣ”ಕುರಿತು ವಿಭಿನ್ನ ಶೈಲಿಯಲ್ಲಿ ವರ್ಣಿಸಲಾಗಿದೆ.ಇದನ್ನು ಗೀತರೂಪಕದಲ್ಲಿ ಬಿಂಬಿಸಲಾಗಿದ್ದು ಆಷಾಢಮಾಸದ ಕೊನೆಯ ದಿನ ರಾತ್ರಿಯ ಕೊನೆಯ ಯಾಮದ ಆರ್ಧ ಭಾಗ ಕಳೆಯುವದರೊಂದಿಗೆ ಮುಂಜಾವಿನ ಕೋಳಿಗಳ ಕೂಗಿನೊಂದಿಗೆ ಆರಂಭವಾಗುವ
ಏಳು ಶ್ರಾವಣ ರಾಜ,ಏಳು ಭೂವನದೋಜ
ಏಳು ಜೀವನತೇಜ,ಕಾಲಸುರಭೂಜ
ಪಡುಹಗಲು ನಿನಗೆಂದೆ ಪಡೆದಿಹುದು ಜಡಿಮೋಡ
ನಡುಬಾನಿಗವನು ಎಳೆತರುವರಾರೋ
ಎನ್ನುವ ಮೂಲಕ ಆರಂಭವಾಗುವ ಶ್ರಾವಣಗೀತೆ ಶ್ರಾವಣದ ಆಗಮನ ಕೃಷಿಕರ ಮನದಲ್ಲಿ,ನದಿದೇವತೆಗಳ ಮನದಲ್ಲಿ,ವಿವಿಧ ಹೂವುಗಳಲ್ಲಿ,ಹೊಸದಾಗಿ ವಿವಾಹವಾದ ಯುವತಿಯು ತನ್ನ ಗೆಳತಿಯೊಡನೆ ತವರು ಮನೆಯ ಹಂಬಲದ ಇಚ್ಛೆ ವ್ಯಕ್ತಪಡಿಸುವ ರೀತಿ,ತನ್ನ ಸಹೋದರಿಯನ್ನು ತವರಿಗೆ ಕರೆತರಲು ಬರುವ ಅಣ್ಣನ ಭಾವನೆಗಳನ್ನು,ನಿರೂಪಕನೊಡನೆ ಶ್ರಾವಣದ ಸಂವಾದರೂಪದಲ್ಲಿ ಮೂಡಿ ಬಂದಿಹುದು ಇದರಲ್ಲಿನ “ಪಂಚಮಿ ಹಬ್ಬಾ ಉಳಿತವ್ವ ನಾಕ ದಿನಾ,ಅಣ್ಣ ಬರಲಿಲ್ಲ ಯಾಕೋ ಕರೀಲಾಕ” ಎಂಬ ಹಾಡು ಇಂದಿಗೂ ಗ್ರಾಮೀನ ಜನರ ನಾಲಿಗೆಯಲ್ಲಿ ನಲಿದಾಡುತ್ತಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ