ಸಂಧ್ಯಾವಂದನೆ

    ಸಂಧ್ಯೆ ಎಂಬುದು ಕಾಲವಾಚಕಶಬ್ದವು. ಹಗಲುರಾತ್ರಿಗಳಂತೆ ಪ್ರತಿದಿನವೂ ಸಂಧ್ಯೆಯು ಬೆಳಗ್ಗೆ ಹಾಗೂ ಸಾಯಂಕಾಲಗಲ್ಲಿ ಪ್ರಾಪ್ತವಾಗುತ್ತಿರುವದು ಮಾನವನ ಆಯುಷ್ಯದಲ್ಲಿ ಅತ್ಯಂತಬೆಲೆಬಾಳುವ ವಸ್ತುವೆಂದರೆ ಕಾಲವು, ಇದನ್ನು ಒಬ್ಬರಿಗೊಬ್ಬರು ಕೊಟ್ಟು ತೆಗೆದುಕೊಳ್ಳುವದು ಕೂಡ ಸಾಧ್ಯವಾಗುವದಿಲ್ಲ ವ್ಯವಹಾರದ ಸಮಯದಲ್ಲಿ ಹಣದ ಕೊರತೆಯಾದರೆ ಬೇರೊಬ್ಬರಿಂದ ಎರವಲು ಪಡೆಯಬಹುದು ಆದರೆ ಕಾಲವು ಸಾಲದೆ ಹೋದರೆ ಬೇರೊಬ್ಬರಿಂದ ತೆಗೆದುಕೊಳ್ಳಲಾದೀತೆ? ಅವಿವೇಕಿಗಳಿಗೆ ಕಾಲದ ಬೆಲೆಯೇ ತಿಳಿದಿರುವದಿಲ್ಲ ವಿವೇಕಿಗಳೆನಿಸಿಕೊಂಡವರಿಗೂ ಕಾಲವನ್ನು ಈ ಪ್ರಪಂಚದ ಸುಖಕ್ಕಾಗಿ ಮಿಸಲಿಡುವಂತೆಯೇ ಸ್ವಲ್ಪಭಾಗವನ್ನಾದರೂ ನಾವು ದೇಹವನ್ನು ಬಿಟ್ಟ ಅನಂತರ ಹೊಂದಬೇಕಾಗಿರವ ಪ್ರಪಂಚದ ಸುಖಕ್ಕಾಗಿ ಮಿಸಲಿಡಬೇಕೆಂಬುದು ಶಾಸ್ತ್ರ-ಗುರುಗಳ ಮಾರ್ಗದರ್ಶನವಿಲ್ಲದೆ ಹೊಳೆಯುವಂತಿಲ್ಲ ಆದ್ದರಿಂದ ನಾವು ಮೊದಲು ಕಾಲದ ಅಮೂಲ್ಯವಾದ ಬೆಲೆಯನ್ನರಿತು ಪ್ರತಿದಿನವೂ ಸ್ವಲ್ಪಹೊತ್ತನ್ನಾದರೂ ನಮ್ಮ ಆತ್ಮಕಲ್ಯಾಣಕ್ಕಾಗಿ ಬಳಸಿಕೊಳ್ಳಲು ಮಿಸಲಿರಿಸಿಕೊಳ್ಳಬೇಕು.
    ಕರ್ಮಗಳನ್ನೆಲ್ಲ ನಾವು ಕಾಲನಿಯಮಕ್ಕೆ ಒಳಪಟ್ಟೇ ಮಾಡುವೆವು. ಯಾವ ಕರ್ಮಗಳಿಗೆ ಒಂದು ದಿನವೂ ಬಿಡುವಿರುವದಿಲ್ಲವೋ ಅಂಥವನ್ನು ನಿತ್ಯಕರ್ಮಗಳೆನ್ನಬಹುದು, ಆದರೆ ಆಹಾರಸೇವನೆ, ನಿದ್ರೆ, ಜಲಮಲವಿಸರ್ಜನೆ - ಮುಂತಾದವು ಪ್ರತಿದಿನವೂ ಪ್ರತಿಯೊಬ್ಬನಿಗೂ ಅನಿವಾರ್ಯವಾದರೂ ನಿತ್ಯಕರ್ಮಗಳೆನಿಸುವದಿಲ್ಲ, ಏಕೆಂದರೆ ಇವು ಪ್ರಾಣಿಗಳಿಗೂ ಮನುಷ್ಯರಿಗೂ ಸಮಾನವಾಗಿರುತ್ತವೆ ಆದ್ದರಿಂದ "ಸಹಜಕರ್ಮ"ಗಳೆಂದು ಇವನ್ನು ಕರೆಯಬಹುದು. ನಿತ್ಯಕರ್ಮಗಳೆಂದರೆ ಪ್ರತಿ ನಿತ್ಯವೂ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಿರುವ ಕರ್ಮಗಳೆಂದು ತಿಳಿಯಬೇಕು. ಶಾಸ್ತ್ರವಾದರೊ, ಕರ್ಮಗಳ ಸ್ವಭಾವವನ್ನರಿತು ಯಾವಾಗ ಏನು ಮಾಡಬೇಕೆಂದು ಹೇಳತ್ತವೆ ಮತ್ತು ಸಹಜಕರ್ಮಗಳನ್ನು ಕೂಡ ಒಂದು ಗೊತ್ತಾದ ರೀತಿಯಿಂದ ಮಾಡುವಂತೆ ಪ್ರಚೋದಿಸುತ್ತವೆ ಶಾಸ್ತ್ರಗಳು ಮನುಷ್ಯನಿಗೆ ಮಾತ್ರ ಅನ್ವಯಿಸತಕ್ಕದ್ದಾಗಿವೆ ಈ ವಿಷಯದಲ್ಲಿ ನಾವು ಪಶುಗಳ ನಡತೆಯನ್ನು ಅನುಕರಿಸಿ ಶಾಸ್ತ್ರವನ್ನು ತಿರಸ್ಕರಿಸಬಾರದು ನಿತ್ಯಕರ್ಮಗಳನ್ನು ಇಂಥ ಕಾಲದಲ್ಲೇ ಮಾಡಬೇಕೆನ್ನುವ ಶಾಸ್ತ್ರವು ಅಂಥ ಸಮಯದಲ್ಲಿ ಯಾವ ಸಹಜಕರ್ಮಗಳಾಗಲಿ, ಲೌಕಿಕಕರ್ಮಗಳಾಗಲಿ ಬೆರೆಯದಂತೆ ಹಾಗೂ ಅನುಷ್ಠಾನಮಾಡುವವನಿಗೆ ಗೊಂದಲವಾಗದಂತೆ ಎಚ್ಚರವನ್ನೂ ವಹಿಸಿರುತ್ತದೆ.
    ಈಗ ಸಂಧ್ಯಾವಂದನೆಯೆಂಬ ನಿತ್ಯಕರ್ಮವನ್ನು ನೋಡೋಣ. ಇದನ್ನು ಅನುಷ್ಠಾನಮಾಡುವ ಸಮಯವು ಹಗಲು ಕಳೆದು ರಾತ್ರಿ ಪ್ರಾರಂಭವಾಗುವ ಅಥವಾ ರಾತ್ರಿ ಕಳೆದು ಹಗಲು ಆರಂಭವಾಗುವ ಸಂಧಿಕಾಲದಲ್ಲಿರುವದು ಈ ಸಮಯವು ವ್ಯವಹಾರದಲ್ಲಿ ಏತಕ್ಕೂ ಉಪಯೋಗಿಸಲ್ಪಟ್ಟಿಲ್ಲ ಹೇಗೆಂದರೆ ಈ ಸಂಧ್ಯಾಕಾಲವು ಊಟ, ನಿದ್ರೆ, ವಿನೋದ, ವಿಹಾರ ಲೌಕಿಕಕೆಲಸಗಳಿಗೆಲ್ಲ ನಿಷಿದ್ಧವಾಗಿದೆ, ಕಚೇರಿಗಳು ಸಂಧ್ಯಾಕಾಲಕ್ಕೆ ಮುಚ್ಚಿರುತ್ತವೆ. ಕಾರ್ಖಾನೆಯ ಪಾಳಿಗಳು ಪೂರೈಸಿ ಹೊಸ ಪಾಳಿಗಳು ಪ್ರಾರಂಭವಾಗುವದರಲ್ಲಿರುತ್ತವೆ. ಕೃಷಿಕರು ಮನೆಗಳಿಗೆ ಹಿಂದಿರುಗಿರುತ್ತಾರೆ. ವ್ಯಾಪಾರಿಗಳು ಸಹ ದಣಿವಾರಿಸಿಕೊಳ್ಳಲು ಸ್ಥಳ ಬದಲಾವಣೆಮಾಡಿಕೊಳ್ಳುತ್ತಾರೆ. ಬೆಳಗಿನ ಸಂಧ್ಯೆಯಂತೂ ಇನ್ನೂ ವಿರಾಮ ಕಾಲವೇ ಆಗಿರುತ್ತದೆ. ಏಕೆಂದರೆ ಯಾವ ಚಟುವಟಿಕೆಗಳೂ ಆಗ ಪ್ರಾರಂಭವಾಗಿರುವದಿಲ್ಲ ಬಹಳ ಮಟ್ಟಿಗೆ ಎಲ್ಲರೂ ಮನೆಗಳಲ್ಲೂ, ತಂಗಿರುವ ಸ್ಥಳಗಳಲ್ಲಿಯೊ ಇರುತ್ತಾರೆ. ಹೆಚ್ಚು ಕಡಿಮೆ ಸಂಧ್ಯಾಕಾಲಕ್ಕೆ ಮನಸ್ಸುಮಾಡಿದರೆ ಪ್ರತಿಯೊಬ್ಬರೂ ಬಿಡುವುಮಾಡಿಕೊಳ್ಳಬಹುದು ಇಂಥ ಸಮಯವನ್ನೇ ಸಂಧ್ಯಾವಂದನೆಗಾಗಿ ಶಾಸ್ತ್ರದಲ್ಲಿ ಗೊತ್ತುಮಾಡಿದೆ ಆದ್ದರಿಂದ ಈ ದೃಷ್ಟಿಯಲ್ಲಿ ಎಲ್ಲರೂ ಸಂಧ್ಯಾವಂದನೆಗೆ ಅಧಿಕಾರಿಗಳಾಗಿರುತ್ತಾರೆ ಎಂದು ಹೇಳಬಹುದು.
    ಇನ್ನು ಈ ಕರ್ಮದ ಅಭಿಮಾನಿದೇವತೆ ಯಾರೆಂದು ತಿಳಿಯೋಣ, ಎಲ್ಲರಿಗೂ ಪ್ರತ್ಯಕ್ಷವಾಗಿ ಕಣ್ಣಿಗೆ ಕಾಣುವ ಸೂರ್ಯನೇ ಈ ದೇವತೆಯು, ಸೂರ್ಯನ ಬೆಳಕು ಶಾಖಗಳು ಬೇಡವೆನ್ನುವವರು ಜಗತ್ತಿನಲ್ಲಿ ಯಾರೂ ಇಲ್ಲ, ಎಲ್ಲ ಮತದವರೂ ಕಾಲಗಣನೆಯನ್ನು ಸೂರ್ಯನ ಅಥವಾ ಚಂದ್ರನ ಗತಿಯ ಬಲದಿಂದಲೇ ನಿರ್ಣಯಿಸುತ್ತಾರೆ. ಸೂರ್ಯನಿಲ್ಲದೆ ಚಂದ್ರನಿಲ್ಲ ಇರಲಿ ಹೀಗೆ ಸೂರ್ಯನು ಸರ್ವಸಾಧಾರಣದೇವತೆಯಾಗಿದ್ದು ಹಾಗಿದ್ದಾನೆ ಹೀಗಿದ್ದಾನೆ ಎಂದು ಕಲ್ಪಿಸಲಾಗದ ತರ್ಕಾತೀತನೂ ಸಂಶಯಾತೀತನೂ ನಾಸ್ತಿಕರಿಗೂ ಆಸ್ತಿಕರಿಗೂ ಎಲ್ಲರಿಗೂ ಗೋಚರನಾಗುತ್ತಿರುವವನೂ ಆದ ದೇವತೆಯಾಗಿರುವದರಿಂದ ಅವನನ್ನೇ ಸಂಧ್ಯಾಭಿಮಾನಿದೇವತೆ ಎಂದು ಕರೆದಿದೆ. ಅಷ್ಟೇ ಅಲ್ಲ ಸೂರ್ಯನ ದರ್ಶನವು ಮರೆಯಾಗುವದು, ಹಾಗೂ ಪ್ರಾರಂಭವಾಗುವದೇ ಸಂಧ್ಯೆಗೆ ಮೂಲವಾಗಿದೆ. ಜಗತ್ತಿನ ಎಲ್ಲಾ ಪ್ರಾಣಿಗಳ ಹಿತ-ಕಲ್ಯಾಣದೃಷ್ಟಿಯಿಂದ ಸೂರ್ಯನನ್ನು ಕಂಡಾಗ ನಾವು ಬರಮಾಡಿಕೊಳ್ಳುವದು, ಮರೆಯಾದಾಗ ಬೀಳ್ಕೊಡುವದು ಇವೇ ಸಂಧ್ಯಾ ಕಾಲದ ಕರ್ತವ್ಯವಾಗಿವೆ. ಬರಮಾಡಿಕೊಳ್ಳುವಾಗಲೂ ಕಳುಹಿಸಿಕೊಡುವಾಗಲೂ ಹಿರಿಯರಾದ ಯಾರಿಗಾದರೂ ನಾವು ನಮಸ್ಕರಗಳನ್ನು ಹೇಳಿಯೇ ಹೇಳುವೆವು ಹಾಗಿರುವಲ್ಲಿ ಸೂರ್ಯನಿಗೇಕೆ ಹೇಳಬಾರದು? ಹೇಳದೆ ಇರುವದು ಅಪರಾಧವಲ್ಲವೆ? ಯೋಚಿಸಿರಿ ಈ ಕರ್ತವ್ಯವನ್ನು ನೆನಪಿಟ್ಟುಕೊಂಡು ಸಕಾಲದಲ್ಲಿ ತಪ್ಪದೆ ಮಾಡಿದರೆ ಪ್ರತಿಯೊಬ್ಬನೂ ಸಂಧ್ಯಾವಂದನೆಯನ್ನು ಮಾಡಿದಂತೆಯೇ ಆಗುವದು. ಇನ್ನು ನಾವೆಲ್ಲರೂ ಸಂಧ್ಯಾವಂದನೆಗೆ ಸಿದ್ಧರಾಗೋಣ.

Comments

  1. This comment has been removed by the author.

    ReplyDelete
  2. Gurugale sanje 8ganteya nanthara sandyavandane madabahuda... ekendare kelsa mugisi mane talupuvudu aa samayakke hagagi... Dayavittu Uttarisi.

    ReplyDelete
    Replies
    1. ಸಾಧ್ಯ ಆದರೆ ಬೆಳಗ್ಗೆ ಮಾಡಿ ಅದು ಆಗದಿದ್ದರೆ ಸಂಜೆ ಮಾಡಿ, ಮಾಡಬಹುದು.

      Delete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ