ಮಾರ್ಜನೆ
ಮಾರ್ಜನೆಯೆಂದರೆ ತೊಳೆಯುವದೆಂದರ್ಥ - ಈ ಮಂತ್ರಗಳನ್ನು ಉಚ್ಚರಿಸುತ್ತಾ ಮಂತ್ರಾರ್ಥವನ್ನು ಮನಸ್ಸಿನಲ್ಲಿ ತಂದುಕೊಂಡು ಮಂತ್ರಪೂತವಾದ ಜಲವನ್ನು ಪ್ರೋಕ್ಷಣ ಮಾಡಿಕೊಳ್ಳುವದರಿಂದ ಪ್ರತಿದಿನವೂ ದೇಹಶುದ್ಧಿಯಾಗುವದರಿಂದ ಈ ಸಂಸ್ಕಾರವನ್ನುಂಟು ಮಾಡುವ ಇವುಗಳಿಗೆ ಮಾರ್ಜನೆಯ ಮಂತ್ರಗಳೆಂಬ ಹೆಸರು ಬಳಕೆಯಲ್ಲಿದೆ. ಇವುಗಳಿಗೆ "ಆಪೋಹಿಷ್ಠಾ" ಎಂಬ ಮಂತ್ರವು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಈ ನಾಲ್ಕರಲ್ಲಿಯೂ ಇರುವದು. ಈ ಮಂತ್ರದ ತಾತ್ಪರ್ಯವೇನೆಂದರೆ "ಎಲೈ ನೀರುಗಳೆ, ನೀವು ಸುಖಕ್ಕೆ ಕಾರಣವಾಗಿರುವಿರಿ, ನಮಗೆ ಅನ್ನವನ್ನು ಕೊಡಿರಿ, ಹೆಚ್ಚಿನ ರಮಣೀಯ ಜ್ಞಾನವನ್ನು ಕೊಡಿರಿ, ನಿಮ್ಮಲ್ಲಿರುವ ಆನಂದಕರವಾದ ರಸವನ್ನು ಪ್ರೇಮವುಳ್ಳ ತಾಯಿಯರು ಮಕ್ಕಳನ್ನು ಸ್ತನ್ಯಪಾನವನ್ನು ಕೊಟ್ಟು ಕಾಪಾಡುವಂತೆ, ನಮಗೆ ದೊರಕಿಸಿರಿ, ಯಾವ ರಸದಲ್ಲಿರುವದರಿಂದ ನೀವು ಪರಮಾನಂದ ಭರಿತರಾಗುವಿರೋ ಆ ರಸಕ್ಕಾಗಿ ನಿಮ್ಮನ್ನು ಆದರ ಪೂರ್ವಕವಾಗಿ ಸಮೀಪಿಸಿರುವೆನು. ಎಲೈ ನೀರುಗಳೇ, ನೀವು ನಮ್ಮನ್ನು ವಂಶವರ್ಧಕರನ್ನಾಗಿ ಮಾಡಿರಿ". ಪರಮಾತ್ಮನು ಸರ್ವವ್ಯಾಪಿಯೆಂದು ವೇದದಲ್ಲಿ ಎಷ್ಟೋ ಕಡೆಗಳಲ್ಲಿ ತಿಳಿಸಿರುತ್ತದೆಯೆಷ್ಟೆ: ಅಂಥ ಪರಮಾತ್ಮನ ಅನುಗ್ರಹದಿಂದಲೇ ನಮಗೆ ಸುಖವು ದೊರಕಬೇಕು. ನಾವು ತಿನ್ನುವ ಆಹಾರವು ಪ್ರಾಣ, ಜಲ, ತಪಸ್ಸು, ಶ್ರದ್ಧಾ, ಮೇಧಾ ಮುಂತಾದವುಗಳ ವೃದ್ಧಿಯ ಕ್ರಮದಿಂದ ಉತ್ತಮವಾದ ಜ್ಞಾನಕ್ಕೆ ಕಾರ...