ಪಿತೃಯಜ್ಞ

    ಈಗಿನ ಕಾಲಕ್ಕೆ ಯಾವ ಆಶ್ರಮಧರ್ಮವನ್ನೂ ಕರ್ಮಗಳನ್ನೂ ತೃಪ್ತಿಕರವಾಗಿ ಶಾಸ್ತ್ರೀಯವಾಗಿ ನಡೆಸಲಾಗುವದಿಲ್ಲ, ಏಕೆಂದರೆ ಈಗಿನ ಜನಸಮಾಜದವರ ಮನೋಭಾವವು ಧಾರ್ಮಿಕವಿಷಯಗಳಲ್ಲಿ ತಿರಸ್ಕಾರ ಹಾಗೂ ಅಜ್ಞಾನಭೂಯಿಷ್ಠವಾಗಿರುವದೇ ಕಾರಣ, ಇಡಿಯ ಸಮಾಜವೇ ಸಹಕರಿಸದಿದ್ದರೂ ಮುಕ್ಕಾಲು ಭಾಗದಷ್ಟು ಜನರಾದರೂ ಧಾರ್ಮಿಕರಾಗಿದ್ದು, ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶಗಳು ಸಹಕಾರಿಗಳಾಗದಿದ್ದರೂ ಅವಿರೋಧಿಗಳಾಗಿ ಸಮಾಜದ ಧಾರ್ಮಿ ಆಚರಣೆಗಳ ಬಗ್ಗೆ ಹಸ್ತಕ್ಷೇಪಮಾಡದೆ ಇದ್ದರೆ ಮಾತ್ರ ಪ್ರತಿಯೊಬ್ಬ ಆಶ್ರಮಿಯೂ ತನ್ನ ಧರ್ಮವನ್ನು ಆಚರಿಸುತ್ತಾ ಕಾಪಾಡಿಕೊಳ್ಳಬಹುದಾಗಿದೆ. ಆದರೆ ಈಗಾಗಲಿ, ಮುಂದೆ ಸದ್ಯದ ಭವಿಷ್ಯದಲ್ಲಾಗಲಿ ಅಂಥ ಸ್ಥಿತಿಯು ಒದಗಲಾರದೆಂದೇ ಹೇಳಬೇಕಾಗಿದೆ. ಧರ್ಮಪ್ರಿಯರಿಗೆ ಇನ್ನುಳಿದಿರುವ ದಾರಿಯೆಂದರೆ ಬಹಿರಂಗದ ಆಚಾರ-ನಿಷ್ಠೆಗಳನ್ನು ಲೆಕ್ಕಿಸದೆ ಅಂತರಂಗದಲ್ಲೇ ಧರ್ಮದ ಚಿಲುಮೆಯನ್ನು ಎಬ್ಬಿಸಿಕೊಂಡು ಮಾನಸಿಕವಾಗಿ ಕರ್ಮಗಳನ್ನು ಆಚರಿಸುತ್ತಾ ಮನಸ್ಸಮಾಧಾನವನ್ನು ತಂದುಕೊಳ್ಳುವದೇ ಆಗಿದೆ ಆದರೂ ಹಿಂದಿನ ಕಾಲಕ್ಕೆ ಸದಾಚಾರಗಳ ಮತ್ತು ದೇವಪಿತೃಕರ್ಮಗಳ ಕಟ್ಟುಪಾಡುಗಳು ಹೇಗಿತ್ತು? ಎಂಬಿದನ್ನು ತಿಳಿಯಲು ಧರ್ಮಶಾಸ್ತ್ರಗಳನ್ನು ಜಿಜ್ಞಾಸೆಮಾಡಬಹುದು. ಆದರೆ ಇದು ಆತ್ಮತೃಪ್ತಿಗೇ ಹೊರತು ಪರೋಪದೇಶಕ್ಕಲ್ಲ - ಎಂಬಿದನ್ನು ಮರೆಯಬಾರದು.
    ಪಂಚಮಹಾಯಜ್ಞಗಳಲ್ಲಿ ವೈಶ್ವದೇವವನ್ನು ವಿವರಿಸಿದ ಅನಂತರ ಈಗ ಪಿತೃ ಯಜ್ಞವನ್ನು ತಿಳಿಸಲಾಗುವದು, ಇದು ಕೂಡ ಶ್ರೌತಕರ್ಮವೆನಿಸುವದು ಆದ್ದರಿಂದ ಅಹಿತಾಗ್ನಿಯಾದವನು ಅಮಾವಾಸ್ಯೆಯ ದಿನ "ಪಿಂಡಪಿತೃಯಜ್ಞ"ವೆಂಬ ನೈಮಿತ್ತಿಕ ಕರ್ಮವನ್ನು ಮಾಡಬೇಕು ಇದು ಪ್ರತಿಮಾಸವೂ ಮಾಡಬೇಕಾದ್ದರಿಂದ ನಿತ್ಯವೆಂದೂ ಕರೆಯಬಹುದು, ಇದರಲ್ಲಿ ಪಿಂಡಪ್ರದಾನವೂ ಇರುವದರಿಂದ "ಅನ್ವಾಹಾರ್ಯಕ"ವೆಂದು ಕರೆಯುತ್ತಾರೆ. ಈಗಿನ ಕಾಲಕ್ಕೆ ಇದನ್ನು ಮಾಡುವವರು ಅಪರೂಪವೇ ಸರಿ, ಏಕೆಂದರೆ ಅಗ್ನಿಹೋತ್ರವನ್ನು ಇಟ್ಟಿದ್ದರೆ ಮಾತ್ರ ಈ ಪ್ರಸಂಗವು ಬರುತ್ತದೆ, ಆಸ್ತಿಕರಾದ ಶ್ರದ್ಧಾವಂತರು ಈಗಿನ ಕಾಲಕ್ಕೆ ತಮ್ಮ ಉಳಿದ ಅಹ್ನಿಕ-ಅನುಷ್ಠಾನಗಳ ವಿಚಾರವು ಹೇಗೇ ಇರಲಿ- ವರ್ಷಕ್ಕೆ ಒಮ್ಮೆ ಮೃತತಿಥಿಯಲ್ಲಿ ತಂದೆ ತಾಯಿಗಳ ಶ್ರಾದ್ಧವನ್ನು ಮಾಡುತ್ತಾರೆ. ತೀರ ನವನಾಗರಿಕರಾದವರೂ ಶ್ರದ್ಧಾ ರಹಿತರೂ ಅದನ್ನೂ ಬಿಟ್ಟಿರುವವರೂ ಇದ್ದಾರೆ ಆದರೆ ನಾವು ಮಾಡುವವರನ್ನು ಮಾತ್ರ ಆದರ್ಶವಾಗಿ ತೆಗೆದುಕೊಳ್ಳಬೇಕು. ಇಂಥ ಕರ್ಮದಲ್ಲಿ ಅಗ್ನಿಮುಖದಿಂದಲೂ ಬ್ರಾಹ್ಮಣಮುಖದಿಂದಲೂ ಪಿತೃಗಳಿಗೆ ಹವಿರರ್ಪಣೆಮಾಡುವ ಪದ್ಧತಿಯಿದೆ, ಬ್ರಾಹ್ಮಣಭೋಜನವೇ ಹವಿರರ್ಪಣವು ಇದರ ವಿಷಯವಾಗಿ ಈಗ ತಿಳಿಯೋಣ.
    ಪಿತೃಕರ್ಮದಲ್ಲಿ ಆಹ್ವಾನಿತರಾದ ಬ್ರಾಹ್ಮಣರನ್ನು ನಿಮಂತ್ರಿತರು ಎಂದು ಕರೆಯುವರು ಅವಶ್ಯವಾಗಿ ಶ್ರಾದ್ಧಭೋಜನದಲ್ಲಿ ಭಾಗವಹಿಸಲೇಬೇಕೆಂದು ಒತ್ತಾಯದಿಂದ ಆಹ್ವಾನಿಸುವದನ್ನು ನಿಮಂತ್ರಣ ಎನ್ನುವರು. ಶ್ರಾದ್ಧಕಾಲಕ್ಕೆ ವಿಶ್ವೇದೇವತೆಗಳೆಂಬವರನ್ನೂ ಪಿತೃಗಳೊಡನೆ ಕರೆಯುತ್ತಾರೆ ಆದ್ದರಿಂದ ವಿಶ್ವೇದೇವಸ್ಥಾನಕ್ಕೆ ಇಬ್ಬರನ್ನೂ ಪಿತೃಗಳು ಮೂವರ ಸ್ಥಾನಕ್ಕೆ ಮೂವರನ್ನೂ ಆಹ್ವಾನಿಸಬೇಕು ಅಥವಾ ಅನುಕೂಲವಿಲ್ಲದಾಗ ಒಬ್ಬೊಬ್ಬರಂತೆ ಕೇವಲ ಇಬ್ಬರು ಬ್ರಾಹ್ಮಣರನ್ನಾದರೂ ಆಹ್ವಾನಿಸಿ ಶ್ರಾದ್ಧವನ್ನು ಮಾಡಬೇಕು ಕೆಲವರು ಮಹಾವಿಷ್ಣುಸ್ಥಾನಕ್ಕೂ ಒಬ್ಬರನ್ನು ಆಹ್ವಾನಿಸುತ್ತಾರೆ ಇದು ಐಚ್ಛಿಕವೆಂದು ಕಂಡುಬರುತ್ತದೆ ಹೇಗೆ ಆಗಲಿ ಶ್ರಾದ್ಧದಲ್ಲಿ ಆರಕ್ಕಿಂತ ಹೆಚ್ಚು ಜನರನ್ನು ಕರೆಯಬಾರದು ಎರಡಕ್ಕಿಂತ ಕಡಿಮೆಯೂ ಕೂಡದು ಏಕೆಂದರೆ ಗುಣವಂತರೂ ಆಚಾರಶೀಲರಾದವರೂ ಸಿಗುವದು ಕಷ್ಟವಾಗುವದರಿಂದ ಸಂಖ್ಯೆಯನ್ನು ವಿಸ್ತರಿಸಬಾರದೆಂದೇ ಶಾಸ್ತ್ರಗಳ ಅಭಿಪ್ರಾಯ ನಿಮಂತ್ರಿತ ಬ್ರಾಹ್ಮಣರು ಶ್ರೋತ್ರಿಯರೂ ಜ್ಞಾನನಿಷ್ಠರೂ ಆಗಿರಬೇಕು ಒಂದು ವೇಳೆ ಜ್ಞಾನನಿಷ್ಠರು ಸಿಗದಿದ್ದರೆ ಸ್ವಾಧ್ಯಾಯನಿಷ್ಟರೂ ತಪೋನಿಷ್ಠರೂ ಆದವರನ್ನಾದರೂ ಆರಿಸಬೇಕು ಈಗಿನ ಕಾಲಕ್ಕೆ ಅದೂ ದುರ್ಲಭವಾದ್ದರಿಂದ ಶಿಖಾ ಯಜ್ಞೋಪವೀತಗಳಿದ್ದು ಸಂಧ್ಯಾದಿನಿತ್ಯಕರ್ಮ ಹಾಗೂ ದೇವತಾರ್ಚನೆಗಳನ್ನು ತಪ್ಪದೆ ಮಾಡುವವರನ್ನು ಕರೆದರೂ ಸಾಕು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ತೀರ ಅಪ್ತನಾದವನನ್ನಾಗಲಿ, ಶತ್ರುವನ್ನಾಗಲಿ ಶ್ರಾದ್ಧದಲ್ಲಿ ಕರೆಯಬಾರದು ಆದರೆ ಬ್ರಾಹ್ಮಣರು ಸಿಗದಿದ್ದರೆ ಮಿತ್ರನನ್ನು ಕರೆಯಬಹುದು ದೇವತಾ ಕರ್ಮಗಳಿಗಿಂತ ಪಿತೃಕರ್ಮಕ್ಕೆ ಹೆಚ್ಚಿನ ಯೋಗ್ಯಬ್ರಾಹ್ಮಣರೇ ಬೇಕು, ರೋಗಿಯಾದವನು, ಕಳ್ಳ, ಧೂರ್ತ, ಶೂದ್ರಸ್ತ್ರೀಪತಿಯಾದವನು ಇತ್ಯಾದಿ ದೋಷಗಳುಳ್ಳವನು ನಿಮಂತ್ರಣಾರ್ಹನಲ್ಲ, ವೈದ್ಯವೃತ್ತಿ, ವ್ಯಾಪಾರ, ಗೋಪಾಲನೆ, ಕೃಷಿಗಳಲ್ಲಿ ನಿರತನಾಗಿರುವವನೂ ಅರ್ಹನಲ್ಲ, ಏಕೆಂದರೆ ಅಂಥವರಿಗೆ ಸದಾಚಾರಗಳನ್ನು ಕಾಪಾಡಿಕೊಳ್ಳುವದು ಕಷ್ಟವಾಗಿರುವದು, ಅಧ್ಯಯನವಿಲ್ಲದ ಬ್ರಾಹ್ಮಣನು ಕೂಡ ಯೋಗ್ಯನಲ್ಲ ಆದ್ದರಿಂದ ಇದ್ದುದರಲ್ಲಿ ಉತ್ತಮನೆಂದು ಕಂಡವನನ್ನು ಅರಿಸಿಕೊಳ್ಳಬೇಕು.
    ಕರ್ತೃವಾದವನು ಕೂಡ ಶ್ರೋತ್ರಿಯನಾಗಿದ್ದಲ್ಲಿ ಮೇಲ್ಕಂಡಂಥ ಗುಣವಿಶಿಷ್ಟರಾದ ಬ್ರಾಹ್ಮಣರನ್ನು ಆಹ್ವಾನಿಸಲು ಸಾಧ್ಯವಾಗುವದು ಈಗಿನ ಕಾಲಕ್ಕೆ ಪುರೋಹಿತರೇ ಮಂತ್ರಗಳನ್ನೂ ಹೇಳಿ ಕೈಕರಣಪ್ರಯೋಗಗಳನ್ನೂ ನಡೆಯಿಸಿ ಕರ್ತೃವನ್ನು ಕೃತಾರ್ಥನನ್ನಾಗಿ ಮಾಡುವಂಥ ಕಾಲವು ಬಂದಿದೆ.

    ಶ್ರಾದ್ಧಕ್ಕೆ ನಿಮಂತ್ರಿತನಾದ ಬ್ರಾಹ್ಮಣನು ಮತ್ತು ಕರ್ತೃವೂ ಸಹ ಆ ದಿನ ತನ್ನ ನಿತ್ಯಕರ್ಮಗಳನ್ನು ಹೊರತಾಗಿ ಹೆಚ್ಚಿನ ವೇದಾಧ್ಯಯನ, ಪಾರಾಯಣಾದಿಗಳನ್ನು ಮಾಡಬಾರದು. ಏಕೆಂದರೆ ಆ ನಿಮಂತ್ರಿತಬ್ರಾಹ್ಮಣರನ್ನು ಹಿಂಬಾಲಿಸಿ ಅದೃಶ್ಯರಾಗಿಯೇ ಪಿತೃಗಳೂ ಬರುತ್ತಾರೆ ವಾಯುವಿನಂತೆ ಅವರು ಹೋದೆಡೆಯಲ್ಲೆಲ್ಲ ಅನುಸರಿಸಿ ಹೋಗುತ್ತಾರೆ ಅವರು ಕುಳಿತರೆ ಇವರೂ ಕುಳ್ಳಿರುತ್ತಾರೆ ಪಿತೃಗಳ ಸ್ವಭಾವವು ಹೀಗಿದೆ : ಅವರು ಕೋಪವೇ ಇಲ್ಲದವರು; ಶರೀರದಿಂದಲೂ ಮನಸ್ಸಿನಿಂದಲೂ ಸದಾ ಶುದ್ಧರಾಗಿರುವವರು, ಸ್ತ್ರೀಸಂಗವೇ ಇಲ್ಲದವರು, ಜಗಳ, ವಿವಾದಗಳಿಂದ ದೂರರಾದವರು, ದಯೆ, ಪಶ್ಚಾತ್ತಾಪ ಮುಂತಾದ ಎಂಟು ಗುಣಗಳಿಂದ ಕೂಡಿರುವರು ಇಂಥ ಮಹಾತ್ಮರಾದ ಪಿತೃಗಳು ದಯಮಾಡಿಸಿದ್ದಾಗ ಶ್ರಾದ್ಧಮಾಡುವವರು ನಿಮಂತ್ರಿತಬ್ರಾಹ್ಮಣರೂ ಅದೇ ಗುಣಗಳುಳ್ಳವರಾಗಿರಬೇಕು ಅಂದರೆ ಕೋಪಮಾಡಿಕೊಳ್ಳಲೇಬಾರದು, ಗದ್ದಲಮಾಡಬಾರದು, ವಾಗ್ವಾದ, ಜಗಳಗಳನ್ನು ಹೊಡಬಾರದು ಅನವಶ್ಯಕವಾದ ರಾಜಕೀಯ, ಸಾಮಾಜಿಕಸುದ್ದಿಗಳನ್ನು ಶ್ರಾದ್ಧ ಕಾಲಕ್ಕೆ ಚರ್ಚಿಸಬಾರದು, ಸಾಧ್ಯವಾದಷ್ಟೂ ವಿನಯ, ಔದಾರ್ಯ, ಪ್ರಿಯಹಿತವಾದ ಮಾತುಗಳಿಂದ ಪಿತೃಗಳನ್ನು ಸೇವಿಸಬೇಕು.
    ಈಗ ಪಿತೃಗಳೆಂದರೆ ಯಾರು? ಅವರು ಹುಟ್ಟಿದ್ದು ಹೇಗೆ? ಎಂಬಿದನ್ನು ತಿಳಿಯೋಣ. ಹಿರಣ್ಯಗರ್ಭಬ್ರಹ್ಮನ ಮಗನಾದ ಮನುವೆಂಬ ಋಷಿಯ ಮಕ್ಕಳಾದ ಮರೀಚಿ, ಅತ್ರಿ ಮುಂತಾದವರಿರುವರಲ್ಲವೆ? ಆ ಎಲ್ಲಾ ಋಷಿಗಳ ಮಕ್ಕಳಾಗಿ ಹುಟ್ಟಿರುವವರೇ ಪಿತೃಗಳು ಇವರದೇ ಒಂದು ಗುಂಪು ಇರುವದರಿಂದ ಒಟ್ಟಾಗಿ ಪಿತೃಗಣಗಳೆಂದು ಇವರನ್ನು ಕರೆಯುತ್ತಾರೆ. ದೇವತೆಗಳಲ್ಲಿ ಸಿದ್ಧರು, ಸಾದ್ಯರು, ಗುಹ್ಯಕರು, ಆದಿತ್ಯರು, ವಿಶ್ವೇದೇವತೆಗಳು, ವಸುಗಳು, ರುದ್ರರು - ಎಂದು ನಾನಾ ವಿಭಾಗಗಳಿವೆ. ಇವರೆಲ್ಲರಿಗಿಂತಲೂ ಪಿತೃಗಳು ಹಿರಿಯರು. ಉದಾಹರಣೆಗೆ : ಸೋಮಪರೆಂಬುವರು ಸಾಧ್ಯರೆಂಬ ದೇವತೆಗಳ ಪಿತೃಗಳು ಇನ್ನು ದೈತ್ಯರು, ದಾನವರು, ಕಿನ್ನರರು, ಯಕ್ಷರು ಮುಂತಾದವರಿಗೆಲ್ಲ ಬರ್ಹಿಷದರೆಂಬುವರು ಪಿತೃಗಳು, ಮನುಷ್ಯರಲ್ಲಿ ಬ್ರಾಹ್ಮಣರಿಗೆ ಭೃಗುಪುತ್ರರಾದ ಸೋಮಪರೆಂಬವರು, ಕ್ಷತ್ರಿಯರಿಗೆ ಅಂಗಿರಸ್ಸಿನ ಪುತ್ರರಾದ ಹವಿರ್ಭುಜರೆಂಬವರು, ವೈಶ್ಯರಿಗೆ ಪುಲಸ್ತ್ಯರ ಮಕ್ಕಳಾದ ಅಜ್ಯಪರೆಂಬವರು, ಶೂದ್ರರಿಗೆ ವಸಿಷ್ಠಪುತ್ರರಾದ ಸುಕಾಲಿಗಳೆಂಬವರು ಪಿತೃಗಳಾಗಿರುತ್ತಾರೆ ಇನ್ನು ವಿಶೇಷವಾಗಿ ಬ್ರಾಹ್ಮಣರಿಗೆ ಮಾತ್ರ ಅಗ್ನಿದಗ್ಧರು, ಅನಗ್ನಿದಗ್ಧರು, ಕಾವ್ಯರು ಬರ್ಹಿಷದರು, ಅಗ್ನಿಷ್ವಾತ್ತರು, ಸೌಮ್ಯರು ಮುಂತಾಗಿ ಎಲ್ಲಾ ಪಿತೃಗಳೂ ಪೂಜ್ಯರಾಗಿರುತ್ತಾರೆ. ಇವರ ಮಕ್ಕಳು, ಮೊಮ್ಮಕ್ಕಳು ಇತ್ಯಾದಿ ವರ್ಗದವರು ಲೆಕ್ಕವಿಲ್ಲದಷ್ಟು ಜನರಿರುತ್ತಾರೆ. ಇವರುಗಳನ್ನೆಲ್ಲ ಪಿತೃದೇವತೆಗಳೆಂದೇ ತಿಳಿಯಬೇಕು, ನಾವೆಲ್ಲರೂ ನಮ್ಮ ನಮ್ಮ ಮಾತಾಪಿತೃಗಳನ್ನು ಸ್ಮರಿಸಿ ಶ್ರಾದ್ಧಮಾಡುತ್ತೇವಷ್ಟೆ? ಆ ಪಿತೃಗಳು ಏನಾದರೂ? ಎಂದು ಸಂಶಯಪಡಬಾರದು ಮೃತರಿಗೆ ಅವರು ನಿಧನರಾದ ದಿನದಿಂದ ಹನ್ನೆರಡು ದಿನಗಳವರೆಗೆ ಆಚರಿಸಿದ ಶ್ರಾದ್ಧಗಳಿಂದ ಅವರ ಪ್ರೇತತ್ವ ನಿವೃತ್ತಿಯಾಗಿ ಪಿತೃದೇವತೆಗಳ ಪಂಕ್ತಿಯಲ್ಲಿಯೇ ಅವರೂ ಸೇರಿಹೋಗಿರುತ್ತಾರೆ ಅವರನ್ನೇ ನಾಮಗೋತ್ರಗಳ ಸಂಕೇತದಿಂದ ನಾವು ಕರೆದಾಗ ಅವರುಗಳು ಅಗ್ನಿಷ್ವಾತ್ತಾದಿಪಿತೃಗಳೊಡನೆಯೇ ಬರು್ತಾರೆ, ಆದ್ದರಿಮದ ಎಲ್ಲಾ ಶ್ರಾದ್ಧಕರ್ತೃಗಳೂ ಸರ್ವ ಸಾಮಾನ್ಯಪಿತೃಗಳಾದ ಅಗ್ನಿಷ್ವಾತ್ತಾದಿಗಳನ್ನು ಆರಾಧಿಸಿ ತೃಪ್ತಿಗೊಳಿಸಬೇಕು ಜಗತ್ತಿನ ಆದಿಯಲ್ಲಿ ಮೊದಲು ಋಷಿಗಳು ಹುಟ್ಟಿದರು ಅವರಿಂದ ಪಿತೃಗಳು ಉತ್ಪನ್ನರಾದರು ಪಿತೃಗಳಿಂದಲೇ ದೇವತೆಗಳೂ ಮನುಷ್ಯರೂ ಉಳಿದ ಜಗತ್ತೆಲ್ಲವೂ ಉಂಟಾಯಿತು ಆದ್ದರಿಂದ ಪಿತೃಗಳು ದೇವತೆಗಳಿಗಿಂತ ಹಿರಿಯರೆನಿಸಿದ್ದಾರೆ ಇದೇ ಕಾರಣದಿಂದ ಪಿತೃಕಾರ್ಯವು ಸಂಭವಿಸಿದ ದಿನ ಉಳಿದ ದೇವತಾಕಾರ್ಯಗಳನ್ನೂ ಹಬ್ಬಹರಿದಿನಗಳನ್ನೂ ಆಚರಿಸುವದಿಲ್ಲ ಪಿತೃಗಳಿಗೇ ಆ ದಿನ ಪ್ರಾಶಸ್ತ್ಯವಿರುವದರಿಂದ ಮೊದಲು ಪಿತೃಕಾರ್ಯವನ್ನು ನೆರವೇರಿಸಿ ಅನಂತರ ದೇವಕಾರ್ಯಗಳನ್ನು ಮಾಡಬೇಕು ಆದರೆ ಶ್ರಾದ್ಧಕರ್ಮಕ್ಕೆ ಅಂಗವಾಗಿಯೇ ದೇವಕಾರ್ಯವು ಇದ್ದರೆ ಉದಾಹರಣೆಗೆ ಪಿತೃಗಳೊಡನೆ ವಿಶ್ವೇದೇವತೆಗಳನ್ನು ಕರೆಯಲಾಗುತ್ತದೆಯಷ್ಟೆ, ಆಗ ಮಾತ್ರ ವಿಶ್ವೇದೇವತೆಗಳನ್ನೇ ಮೊದಲು ಪೂಜಿಸಬೇಕು ಅನಂತರ ಪಿತೃಗಳನ್ನು ಪೂಜಿಸಬೇಕು ಪಿತೃಗಳನ್ನು ಬೀಸ್ಕೊಡುವಾಗಲಾದರೊ, ಮೊದಲು ಪಿತೃಗಳನ್ನೇ ಕಳುಹಿಸಿಕೊಡಬೇಕು ಅನಂತರ ದೇವತೆಗಳನ್ನು ಕಳುಹಿಸಬೇಕು ದೇವತೆಗಳು ಪಿತೃಶ್ರಾದ್ಧದಲ್ಲಿ ಏತಕ್ಕಾಗಿ ಕರೆಯಲ್ಪಡಬೇಕೆಂದರೆ ಅವರು ರಾಕ್ಷಸಾದಿಗಳಿಂದ ಶ್ರಾದ್ಧವು ವಿಘ್ನಗೊಂಡು ಹಾಳಾಗದಂತೆ ಕಾಪಾಡಲು ಅವಶ್ಯವಾಗುತ್ತದೆ ಆದ್ದರಿಂದ ವಿಶ್ವೇದೇವತೆಗಳನ್ನು ಆಹ್ವಾನಿಸಬೇಕು ಕೆಲವು ಸಂಪ್ರದಾಯಗಳಲ್ಲಿ ವಿಶ್ವೇದೇವತೆಗಳ ಜೊತೆಗೆ ಶ್ರಾದ್ಧಸಂರಕ್ಷಕನೆಂಬ ಹೆಸರಿನಿಂದ ಶ್ರೀಮಹಾವಿಷ್ಣುವನ್ನೂ ಕರೆಯುತ್ತಾರೆ. ಆಗ ಶ್ರಾದ್ಧಕ್ಕೆ ಮೂರು ಜನ ನಿಮಂತ್ರಿತಬ್ರಾಹ್ಮಣರು ಬೇಕಾಗುತ್ತಾರೆ ಇಷ್ಟಲ್ಲದೆ ಮೂವರ ಜೊತೆಗೆ 'ದೇವರಿಗೆ ಎಲೆ' ಎಂಬುದಾಗಿ ಹಾಕಿ ಅದರ ಬಳಿಯಲ್ಲಿ ಶಾಲಗ್ರಾಮವನ್ನಿಟ್ಟು ಹಸ್ತೋದಕವನ್ನು ಕೊಡುವ ಮುಂಚೆ ಆಯಾ ಯಜಮಾನನ ಕುಲದೇವತೆಯನ್ನು ಸ್ಮರಿಸಿ ನೈವೇದ್ಯಮಾಡುವ ಪದ್ಧತಿಯೂ ಇದೆ ಕರ್ಮಕಾಂಡವಾದ್ದರಿಂದ ವಿಕಲ್ಪಗಳಿದ್ದೇ ಇರುವವು ಅವರವರ ಸಂಪ್ರದಾಯಾನುಸಾರವಾಗಿ ನಡೆದುಕೊಳ್ಳಬೇಕು.....
    ಪಿತೃಕರ್ಮದಲ್ಲಿ ಅಗ್ನೌಕರಣ, ಬ್ರಾಹ್ಮಣಭೋಜನ, ಪಿಂಡಪ್ರದಾನ - ಎಂಬೀ ಮೂರಿ ಕರ್ಮಗಳು ಮುಖ್ಯವಾದವುಗಳು. ಉಳಿದವುಗಳು ಗೌಣವಾಗಿರುತ್ತವೆ. ಮೊದಲು ಎಂದರೆ ಶ್ರಾದ್ಧವನ್ನು ಆರಂಭಿಸಿ ಆವಾಹನ-ಪೂಜಾದಿಗಳನ್ನು ನಡೆಯಿಸಿದ ಅನಂತರ ಬ್ರಾಹ್ಮಣಭೋಜನಕ್ಕೆ ಮುಂಚೆ ಅಗ್ನಿಯಲ್ಲಿ ಪಿತೃಗಳಿಗೆ ಅಹುತಿಯನ್ನು ಕೊಡಬೇಕು. ಇದಕ್ಕೆ ಔಪಾಸನಾಗ್ನಿಯೇ ಆಗಬೇಕು, ಪಿತೃಗಳಿಗಾಗಿ ಅರ್ಪಿಸುವ ದ್ರವ್ಯವನ್ನು "ಕವ್ಯ"ಎಂದು ಕರೆಯುವರು, ಇದನ್ನು ಸ್ವೀಕರಿಸಿ ಪಿತೃದೇವತೆಗಳಿಗೆ ತಲುಪಿಸಬೇಕಾಗಿರುವ ಅಗ್ನಿಯನ್ನು "ಕವ್ಯವಾಹನ"ನೆಂದೇ ಕರೆಯುವರು. ಈತನಿಗೂ ಅಹುತಿಯನ್ನು ಅರ್ಪಿಸಬೇಕಾಗುವದು ಅಗ್ನಿಯಿಲ್ಲದಾಗ ಬ್ರಾಹ್ಮಣನ ಕೈಯಲ್ಲೇ ಹೋಮಮಾಡಬೇಕು ಉಪನಯನವಾಗದೆ ಇರುವವನಿಗೂ ಹೆಂಡತಿಯು ಮೃತಳಾಗಿ ಮಿಧುರನಾಗಿರುವ ಅನಾಶ್ರಮಿಗೂ ಅಗ್ನಿಯಿರುವದಿಲ್ಲ ಆಗ ಬ್ರಾಹ್ಮಣ ಹಸ್ತದಲ್ಲೇ ಅರ್ಪಿಸಬೇಕು ಅನಂತರ ಬ್ರಾಹ್ಮಣಭೋಜನವು ಪ್ರಾಪ್ತವಾಗುವದು.
    ಪಿತೃಗಳಿಗೆ ಕವ್ಯವನ್ನು ಬೆಳ್ಳಿಯ ಪಾತ್ರೆಯಲ್ಲಿ ಅರ್ಪಿಸುವದು ಶ್ರೇಷ್ಠವು, ಅದು ಆಗದಿರುವಾಗ ಉಟದೆಲೆಗಳನ್ನು ಬಳಸಬಹುದು, ಎಲೆಗಳೂ ದೊನ್ನೆಗಳೂ ಒಂದೇ ವರ್ಗಕ್ಕೆ ಸೇರಿರಬೇಕು, ಆದ್ದರಿಂದ ಸಾಮಾನ್ಯವಾಗಿ ಬಾಳೆಯೆಲೆ-ಬಾಳೆ ದೊನ್ನೆಗಳನ್ನೇ ಶ್ರಾದ್ಧಕಾಲಕ್ಕೆ ಬಳಸುತ್ತಾರೆ. ಬಾಳೆಯೆಲೆ ಸಿಗದಿದ್ದಾಗ ಮುತ್ತುಗದ ಎಲೆಯನ್ನು ಬಳಸಬಹುದಾದರೂ ದೊನ್ನೆಗಳೂ ಮುತ್ತುಗದೆಲೆಗಳಿಂದಲೇ ಆಗಿರುವಂತೆ ನೋಡಿಕೊಳ್ಳಬೇಕು ಅಡುಗೆಗಳಲ್ಲಿ ಅನ್ನ, ಭಕ್ಷ್ಯ, ಭೋಜ್ಯ, ಲೇಹ್ಯ, ಪೇಯಾದಿ ವಿವಿಧವಾದ ದ್ರವ್ಯಗಳಿರಬೇಕು, ಮೋದಕ, ಅಪೂಪಾದಿಗಳು ಭಕ್ಷ್ಯಗಳೆನಿಸುವವು, ಪಾಯಸ, ಫಲ, ಕಂದಮೂಲಾದಿಗಳು ಭೋಜ್ಯವೆನಿಸುವವು, ಗೊಜ್ಜು, ಚಟ್ಟಣಿ ಇತ್ಯಾದಿಗಳು ಲೇಹ್ಯಗಳು ಎಳನೀರು, ಮಜ್ಜಿಗೆ, ಪಾನಕಾದಿಗಳು ಪೇಯಗಳು ಪದಾರ್ಥಗಳು ಹೊಸದಾಗಿಯೂ ಶುಚಿಯಾಗಿಯೂ ಚೆನ್ನಾಗಿ ಪಕ್ವವಾಗಿ ಬಿಸಿಬಿಸಿಯಾಗಿ ರುಚಿಯಾಗಿರಬೇಕು ಬಡಿಸುವಾಗ ಸಿಟ್ಟು, ಅಳು, ಸುಳ್ಳುಮಾತಗಳನ್ನು ಪ್ರದರ್ಶಿಸಬಾರದು ಅಳುತ್ತಾ ಬಡಿಸಿದರೆ ಅದು ಪ್ರೇತಗಳ ಪಾಲಾಗುವದು, ಕೋಪದಿಂದ ಬಡಿಸಿದರೆ ಶತ್ರುಗಳಿಗೆ ಸೇರಿಹೋಗುವದು, ಸುಳ್ಳುಗಳನ್ನು ಆಡುತ್ತಿದ್ದರೆ ನಾಯಿಪಾಲಾಗುವದು, ಕಾಲನ್ನು ತಗುಲಿಸಿರುವ ಅನ್ನಾದಿಗಳನ್ನು ಇಕ್ಕಿದರೆ ಅದು ರಾಕ್ಷಸರ ಪಾಲಾಗುವದು ಆದ್ದರಿಂದ ಎಚ್ಚರಿಕೆಯಿಂದಿರಬೇಕು ಬ್ರಾಹ್ಮಣರು ಊಟಮಾಡುವಾಗ ಮಾತನಾಡಬಾರದು ಯಾರೂ ಅವರನ್ನು ಮಾತನಾಡಿಸಬಾರದು ಪದಾರ್ಥಗಳು ಬಿಸಿಯಾಗಿರುವಷ್ಟು ಕಾಲವೂ ಅದು ಪಿತೃಗಳಿಗೆ ತೃಪ್ತಿಯಾಗುವದು ಅನ್ನವೂ ವ್ಯಂಜನಾದಿಗಳೂ ಬಿಸಿಯಿಂದ ಹಬೆಯೇಳುತ್ತಿದ್ದರೆ ಪಿತೃಗಳು ಬಹಳವಾಗಿ ಸಂತುಷ್ಟರಾಗುವರು ಊಟಮಾಡುವಾಗ ತಲೆಗೆ ಪೇಟವನ್ನು ಸುತ್ತಿಕೊಂಡಾಗಲಿ, ದಕ್ಷಿಣದಿಕ್ಕಿಗೆ ತಿರುಗಿಕೊಂಡಾಗಲಿ, ಪಾದರಕ್ಷೆಯನ್ನು ಧರಿಸಿಕೊಂಡಾಗಲಿ ಶ್ರಾದ್ಧಭೋಜನಮಾಡಬಾರದು ಹೀಗೆ ವಿಧಿವತ್ತಾಗಿ ಬ್ರಾಹ್ಮಣಭೋಜನವನ್ನು ಮಾಡಿಸಬೇಕು. ಭೋಜನಾನಂತರ ಬ್ರಾಹ್ಮಣರ ಎಲೆಗಳ ಮುಂದೆ ಚೆಲ್ಲುವ ಅನ್ನವನ್ನು "ವಿಕಿರ" ಎನ್ನುವರು ಇದು ಸಂಸ್ಕಾರಾನರ್ಹರಾದ ಮೃತರಾದ ಬಾಲಕರೂ ಕುಲದಿಂದ ಬಿಡಲ್ಪಟ್ಟ ಸ್ತ್ರೀಯರೂ ಸ್ವೀಕರಿಸುವರು ಇದು ಎಂಜಲಲ್ಲ ಇನ್ನು ಬ್ರಾಹ್ಮಣರೇ ತಾವು ಊಟಮಾಡಿದ ಎಲೆಯಿಂದ ಹೊರಕ್ಕೆ ಚೆಲ್ಲುವ ಅನ್ನಾದಿಗಳು 'ಉಚ್ಛಿಷ್ಟ'ವೆನಿಸುವವು ಇವುಗಳನ್ನು ಯಜಮಾನನ ಕುಲದಲ್ಲಿದ್ದು ಮೃತರಾದ ದಾಸದಾಸಿಯರು ಸ್ವೀಕರಿಸುವರು ಅನಂತರ ಭೋಜನವು ಪೂರೈಸಿ ಮೇಲೆದ್ದು ಕೈತೊಳೆದ ಮೇಲೆ ಉಳಿದ ಅಡುಗೆಗಳನ್ನು ಏನುಮಾಡಲಿ? ಎಂದು ಬ್ರಾಹ್ಮಣರನ್ನು ಕೇಳಬೇಕು ಇಷ್ಟಮಿತ್ರರೊಡನೆ ಊಟಮಾಡಿರಿ ಎಂದು ಹೇಳಿದನಂತರ ಹಾಗೆ ಮಾಡಬೇಕು.
    ಇನ್ನು ಕಡೆಯದಾಗಿ ಪಿಂಡಪ್ರದಾನವು ಇದನ್ನು ಕೆಲವರು ಬ್ರಾಹ್ಮಣ ಭೋಜನಕಾಲದಲ್ಲೇ ಮಾಡಿಬಿಡುವರು, ಕೆಲವರು ಕಡೆಯಲ್ಲಿ ಮಾಡುವರು, ಪಿಂಡ ಎಂದರೆ ಅನ್ನದ ಉಂಡೆ ಎಂದರ್ಥ, ಶ್ರಾದ್ಧದಿನವನ್ನು ಬಿಟ್ಟರೆ ಉಳಿದ ದಿನಗಳಲ್ಲಿ ಅನ್ನವನ್ನು ಉಂಡೆಗಳಾಗಿ ಮಾಡಬಾರದು ಆ ದಿನವೂ ಸಹ ಮೂವರು ಪಿತೃಗಳಿಗಾಗಿ ಮಾತ್ರವೇ ಮೂರು ಪಿಂಡಗಳನ್ನು ಮಾಡಿ ದರ್ಭೆಗಳನ್ನು ಹಾಸಿ ಅದರಮೇಲೆ ನಾಮಗೋತ್ರಗಳನ್ನುಚ್ಚರಿಸಿ ಸಮರ್ಪಿಸಬೇಕು ಅನಂತರ ಸುತ್ತಲೂ ತಿಲೋದಕವನ್ನು ಬಿಡಬೇಕು ಅವುಗಳನ್ನು ಮೂಸಿ ನೋಡಬೇಕು. ಹೀಗೆ ಪಿಂಡಪ್ರದಾನ ಮಾಡುವಾಗ ತಂದೆ-ಅಜ್ಜ-ಮುತ್ತಜ್ಜ ಈ ಮೂವರಿಗೆ ಮಾತ್ರ ಪಿಂಡಪ್ರದಾನ ಮಾಡಬೇಕು ಕೆಲವು ಸಂಪ್ರದಾಯದವರು ತಾಯಿಯ ಶ್ರಾದ್ಧದಲ್ಲಿ ತಂದೆವರ್ಗವನ್ನೂ ಕರೆಯುತ್ತಾರೆ ಆಗ ಆರು ಪಿಂಡಗಳನ್ನು ಪ್ರತ್ಯೇಕವಾಗಿ ಕೊಡಬೆಕು ಇದನ್ನು 'ಷಟ್ಪಂಡವಿಧಾನ' ಎನ್ನುವರು. ಒಂದು ವೇಳೆ ತಂದೆಯ ತಂದೆಯು ಬದುಕಿದ್ದರಾದರೆ ಅವರನ್ನು ಬಿಟ್ಟು ಮುಂದಿನವರಿಗೇ ಪಿಂಡಪ್ರದಾನಮಾಡಬೇಕು ಇದು ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಾದ ವಿಷಯವಾಗಿದೆ. ಪಿಂಡಪ್ರದಾನಕ್ಕೆ ಅಪರಾಹ್ನಕಾಲವು ಮುಖ್ಯ, ಹಾಗೆಯೇ ದರ್ಭೆ, ಎಳ್ಳು ಇವುಗಳು ಅವಶ್ಯವಾಗಿ ಬೇಕಾದ ವಸ್ತುಗಳು ಪಿಂಡಪ್ರದಾನಾನಂತರ ಬ್ರಾಹ್ಮಣರಲ್ಲಿ ಹೀಗೆ ವರವನ್ನು ಬೇಡಿಕೊಳ್ಳಬೇಕು "ನಮ್ಮ ಕುಲದಲ್ಲಿ ದಾನಮಾಡುವವರು ಹೆಚ್ಚಲಿ; ವೇದಾಧ್ಯಯನ, ಕರ್ಮಾನುಷ್ಠಾನಗಳು ಬೆಳೆಯಲಿ; ನಮಗೆ ವೈದಿಕಕರ್ಮಗಳಲ್ಲಿ ಶ್ರದ್ಧೆಯು ಕುಂದದೆ ಇರಲಿ. ದಾನ ಮಾಡುವಂಥ ಸಾಮಾಗ್ರಿಗಳೂ ಹೆಚ್ಚಲಿ" ಹೀಗೆ ಪ್ರಾರ್ಥಿಸಿ ಅವರ ಆಶೀರ್ವಾಗಳನ್ನು ಪಡೆದುಕೊಳ್ಳಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ