ಶ್ರೀ ವಿಷ್ಣು ಸಹಸ್ರನಾಮ ಮಹಿಮೆ

ಓಂ ||
ಸಹಸ್ರಮೂರ್ತೇಃ ಪುರುಷೋತ್ತಮಸ್ಯ
ಸಹಸ್ರನೇತ್ರಾನನಪಾದಬಾಹೋಃ |
ಸಹಸ್ರನಾಮ್ನಾಂ ಸ್ತವನಂ ಪ್ರಶಸ್ತಂ
ನಿರುಚ್ಯತೇ ಜನ್ಮಜರಾದಿಶಾಂತ್ಯೈ ||

    ಶ್ರೀ ವಿಷ್ಣುಸಹಸ್ರನಾಮಗಳಿಗೆ ಭಾಷ್ಯವನ್ನು ರಚಿಸಲು ಆರಂಭಿಸುವಾಗ ಶ್ರೀಶಂಕರ ಭಗವತ್ಪಾದರು ಮೇಲಿನ ಶ್ಲೋಕವನ್ನು ಉದ್ಧರಿಸಿದ್ದಾರೆ. ಇಲ್ಲಿ ಸಹಸ್ರ - ಎಂಬ ಶಬ್ದಕ್ಕೆ ಸಂಖ್ಯಾವಾಚಕತ್ವವಿಲ್ಲ. ಅನಂತ ಎಂದರ್ಥ, ಭಗವಂತನ ಆಕಾರಗಳು, ಅವಯವಗಳು ಇಂದ್ರಿಯಗಳು ಇತ್ಯಾದಿ ಸಗುಣಸಾಕಾರರೂಪಗಳು ಅನಂತವಾಗಿವೆ ಆತನನ್ನು ಎಷ್ಟು ನಾಮಗಳಿಂದ ಕೊಂಡಾಡಿದರೂ ಅಲ್ಪವೇ ಆದ್ದರಿಂದಲೇ ಶ್ರುತಿಯು 'ಮಾತುಗಳಾಗಲಿ, ಮನಸ್ಸಾಗಲಿ ಭಗವಂತನನ್ನು ಮುಟ್ಟದೆ ಹಿಂದಿರುಗುವವು' ಎನ್ನುತ್ತದೆ. ಸ್ಮೃತಿಪುರಾಣಗಳಲ್ಲಿ ಹೀಗೆಂದಿದೆ: 'ಆಕಾಶವನ್ನೆಲ್ಲ ಬಾಣಗಳಿಂದ ತುಂಬಲು ಹೊರಟವನು ತನ್ನ ಬಾಣಗಳೆಲ್ಲ ಪೂರೈಸಿದ್ದರಿಂದ ಹಿಂದಿರುಬಹುದೇ ಹೊರತು ಆಕಾಶದಲ್ಲಿ ಸ್ಥಳವಿಲ್ಲ - ಎಂದೇನೂ ಅಲ್ಲ, ಹಾಗೆಯೇ ಭಗವಂತನನ್ನು ಸ್ತುತಿಸಲು ಹೊರಟವನು ತನ್ನ ಮಾತುಗಳೆಲ್ಲ ಪೂರೈಸಿದ್ದರಿಂದ ಹಿಂದಿರುಗಬೇಕೆ ಹೊರತು ಭಗವಂತನ ಗುಣಗಳನ್ನೆಲ್ಲ ಸ್ತುತಿಮಾಡಿ ಪೂರೈಸಿದ್ದರಿಂದಲ್ಲ". ಹೀಗೆ ಅನಂತಕಲ್ಯಾಣಗುಣಸಂಪನ್ನನಾದ, ಪುರುಷೋತ್ತಮನಾದ, ಸಹಸ್ರಾರು ನೇತ್ರಗಳು, ಮುಖಗಳು, ಪಾದಗಳುಳ್ಳ ಭಗವಂತನ ದಿವ್ಯನಾಮಗಳೂ ಸಹಸ್ರ-ಸಹಸ್ರ ಸಂಖ್ಯಾಕವಾಗಿವೆ. ಇವುಗಳನ್ನು ಯಥಾಶಕ್ತಿಯಾಗಿ ಸ್ತುತಿಮಾಡುವದೆಂಬುದು ಜಗತ್ತಿನ ಸ್ಥಿತಿಕಾರಣವಾದ ಪ್ರವೃತ್ತಿನಿವೃತ್ತಿರೂಪವಾದ ಧರ್ಮಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದದ್ದಾಗಿದೆ ಹಾಗೂ ಈ ನಾಮಕೀರ್ತನೆಯು ಜನ್ಮಜರಾದಿದೋಷಗಳನ್ನು ನಿವಾರಿಸಿ ಆನಂದವನ್ನುಂಟುಮಾಡುತ್ತದೆ, ಆದ್ದರಿಂದ ಸಹಸ್ರನಾಮಕೀರ್ತನೆಯನ್ನು ಮಾನವರೆಲ್ಲರೂ ಮಾಡತಕ್ಕದ್ದು ಎಂಬುದು ಭಾಗವತೋತ್ತಮರಾದ ಭೀಷ್ಮಾಚಾರ್ಯರ ಅಪ್ಪಣೆಯಾಗಿದೆ.
    ಭಗವಂತನು ನಾಮರೂಪರಹಿತನೆಂದು ಉಪನಿಷತ್ತುಗಳಲ್ಲಿ ತಿಳಿಸಿದ್ದರೂ ಲೋಕಾನುಗ್ರಹಕ್ಕಾಗಿ ಆತನು ಆಗಾಗ್ಗೆ ತನ್ನ ಇಚ್ಛಾವಶದಿಂದ ಧರಿಸುವ ಮಾಯಾ ರೂಪಗಳಿಗೆ ಅನುಗುಣವಾಗಿ ಅವನಿಗೆ ಅನೇಕ 'ಗೌಣನಾಮ'ಗಳು ಋಷಿಗಳಿಂದ ಹಾಡಲ್ಪಟ್ಟು ಪ್ರಸಿದ್ಧವಾಗಿವೆ. ಇದನ್ನೇ ಭೀಷ್ಮರು 'ಯಾನಿ ನಾಮಾನಿ ಗೌಣಾನಿ' ಎಂದು ತಿಳಿಸಿದ್ದಾರೆ. ಹೀಗೆ ಗುಣಕೀರ್ತನಸಂಬಂಧದಿಂದ ಹೆಣೆಯಲ್ಪಟ್ಟಿರುವ ಒಂದು ಸಾವಿರ ನಾಮಗಳ ಸಂಗ್ರಹವೇ 'ಶ್ರೀವಿಷ್ಣುಸಹಸ್ರನಾಮ ಸ್ತೋತ್ರ'ವೆನಿಸಿರುತ್ತದೆ. ಈ ದಿವ್ಯ ನಾಮಗಳಲ್ಲಿ ಭಗವಂತನ ವಿಭೂತಿಗಳು, ಅವತಾರಗಳು, ಕಲ್ಯಾಣಗುಣಗಳು, ದಿವ್ಯವಾದ ರೂಪಾಕಾರಸೌಂದರ್ಯಲಾವಣ್ಯಯೌವನಾದಿಗಳು, ಬಲಶಕ್ತಿ ಪರಾಕ್ರಮವೀರ್ಯತೇಜಸ್ಸುಗಳು, ದಯಾ-ಕ್ಷಮಾ-ಅನುಗ್ರಹ-ಔದಾರ್ಯ-ಸ್ವಾತಂತ್ರ್ಯ-ವಿದ್ಯೆ-ಬುದ್ಧ್ಯಾದಿಗಳು- ಹೀಗೆ ಜಗತ್ತಿನಲ್ಲಿ ಕಂಡುಬರುವ ಎಲ್ಲಾ ಗುಣಸಮೂಹಗಳು ಪ್ರಕಟವಾಗಿರುತ್ತವೆ ಇಂಥ ದಿವ್ಯನಾಮಗಳನ್ನು ಸಾಮಾನ್ಯರು ಊಹಿಸುವದೂ ಸಾದ್ಯವಿಲ್ಲ ಆದರೆ ಆಜನ್ಮಬ್ರಹ್ಮಚಾರಿಗಳೂ ಶ್ರೀಕೃಷ್ಣಭಗವಂತನಲ್ಲಿ ಅನನ್ಯಭಕ್ತರೂ ಪರಮಭಾಗವತೋತ್ತಮರೂ ಆದ ಭೀಷ್ಮಾಚಾರ್ಯರು ಶರಪಂಚರದಲ್ಲಿದ್ದಾಗಲೇ ಭಗವಂತನ ದಿವ್ಯಸಾನ್ನಿಧ್ಯದಲ್ಲಿಯೇ ಕೀರ್ತನೆಮಾಡಿ ಧರ್ಮರಾಜನ ನಿಮಿತ್ತದಿಂದ ಈ ನಾಮಗಳನ್ನು ಲೋಕಕ್ಕೆ ಅನುಗ್ರಹಿಸಿದ್ದಾರೆ ಆದ್ದರಿಂದ ಇಂಥ ಶ್ರೀವಿಷ್ಣುಸಹಸ್ರನಾಮ ಪಾರಾಯಣವು 'ಧರ್ಮಗಳಲ್ಲೆಲ್ಲ ಹೆಚ್ಚಿನ ಪರಮಧರ್ಮವಾಗಿರುತ್ತದೆ' ಎಂಬಿದು ನಿತ್ಯಸತ್ಯವಾದ ಉಕ್ತಿಯಾಗಿದೆ.
    ವೇದಪಾರಾಯಣಕ್ಕೂ ವಿಷ್ಣುಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವದಿಲ್ಲ ವೇದಾಕ್ಷರಗಳನ್ನು ಪಠನಮಾಡಿದವರಿಗೂ 'ಹರಿನಾಮ' ಕೀರ್ತನದ ಫಲವೇ ಲಭಿಸುವದೆಂದೇ ಋಷಿಗಳು ತಿಳಿಸಿದ್ದಾರೆ. ವೈದಿಕರು ಅಧ್ಯಯನವನ್ನು ಆರಂಭಮಾಡುವಾಗಲೂ ಮುಕ್ತಾಯಮಾಡುವಾಗಲೂ 'ಹರಿಃ ಓಂ' ಎಂದೇ ಪಠಿಸುತ್ತಾರೆ ಆದ್ದರಿಂದ ವಿಷ್ಣುಸಹಸ್ರನಾಮ ಪಠನವು ವೇದಾದ್ಯಯನದ ನಿರ್ಬಂಧಗಳಿಂದ ಮುಕ್ತನಾಗಿದ್ದು ಸಾರ್ವತ್ರಿಕವಾಗಿ ಅಧಿಕಾರಭೇದವಿಲ್ಲದೆ ಯಾರೇ ಬೇಕಾದರೂ ಪಠಿಸಬಹುದಾಗಿದೆ. ಕಲಿಯುಗದಲ್ಲಿಯಂತೂ ನಾಮಸಂಕೀರ್ತನವೇ ಉಳಿದ ಎಲ್ಲಾ ಸಾಧನಗಳಿಗಿಂತಲೂ ಸುಲಭವೂ ಶ್ರೇಷ್ಠವೂ ಆದದ್ದೆಂದು ಋಷಿಮುನಿಗಳಿಂದಲೇ ತಿಳಿಸಲ್ಪಟ್ಟಿದೆ ಆದ್ದರಿಂದ ನಾಮಪಾರಾಯಣವು ಕಲಿಯುಗದ ಕಾಮಧೇನುವೆನಿಸಿದೆ.
    ಈಗ ಜಗತ್ತಿನ ಸ್ಥಿತಿಕಾಲವು, ಸ್ಥಿತಿಗೆ ವಿಷ್ಣುವೇ ಒಡೆಯನು ಆದ್ದರಿಂದ ಅವನನ್ನೇ ಸ್ತುತಿಸಬೇಕು ಹಾಗಾದರೇ ನಾವು ಸುಖವಾಗಿ ಬಾಳಬಹುದಾಗಿದೆ ಆದ್ದರಿಂದ ಸರ್ವಶ್ರೇಷ್ಠವಾದ ಶ್ರೀವಿಷ್ಣುಸಹಸ್ರನಾಮವನ್ನೇ ನಾವುಗಳು ಭಕ್ತಿಶ್ರದ್ಧೆಯಿಂದ ಪಾರಾಯಣಮಾಡಿ ಕೃತಾರ್ಥರಾಗೋಣ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ