ಮಾರ್ಜನೆ

    ಮಾರ್ಜನೆಯೆಂದರೆ ತೊಳೆಯುವದೆಂದರ್ಥ - ಈ ಮಂತ್ರಗಳನ್ನು ಉಚ್ಚರಿಸುತ್ತಾ ಮಂತ್ರಾರ್ಥವನ್ನು ಮನಸ್ಸಿನಲ್ಲಿ ತಂದುಕೊಂಡು ಮಂತ್ರಪೂತವಾದ ಜಲವನ್ನು ಪ್ರೋಕ್ಷಣ ಮಾಡಿಕೊಳ್ಳುವದರಿಂದ ಪ್ರತಿದಿನವೂ ದೇಹಶುದ್ಧಿಯಾಗುವದರಿಂದ ಈ ಸಂಸ್ಕಾರವನ್ನುಂಟು ಮಾಡುವ ಇವುಗಳಿಗೆ ಮಾರ್ಜನೆಯ ಮಂತ್ರಗಳೆಂಬ ಹೆಸರು ಬಳಕೆಯಲ್ಲಿದೆ.
    ಇವುಗಳಿಗೆ "ಆಪೋಹಿಷ್ಠಾ" ಎಂಬ ಮಂತ್ರವು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಈ ನಾಲ್ಕರಲ್ಲಿಯೂ ಇರುವದು. ಈ ಮಂತ್ರದ ತಾತ್ಪರ್ಯವೇನೆಂದರೆ "ಎಲೈ ನೀರುಗಳೆ, ನೀವು ಸುಖಕ್ಕೆ ಕಾರಣವಾಗಿರುವಿರಿ, ನಮಗೆ ಅನ್ನವನ್ನು ಕೊಡಿರಿ, ಹೆಚ್ಚಿನ ರಮಣೀಯ ಜ್ಞಾನವನ್ನು ಕೊಡಿರಿ, ನಿಮ್ಮಲ್ಲಿರುವ ಆನಂದಕರವಾದ ರಸವನ್ನು ಪ್ರೇಮವುಳ್ಳ ತಾಯಿಯರು ಮಕ್ಕಳನ್ನು ಸ್ತನ್ಯಪಾನವನ್ನು ಕೊಟ್ಟು ಕಾಪಾಡುವಂತೆ, ನಮಗೆ ದೊರಕಿಸಿರಿ, ಯಾವ ರಸದಲ್ಲಿರುವದರಿಂದ ನೀವು ಪರಮಾನಂದ ಭರಿತರಾಗುವಿರೋ ಆ ರಸಕ್ಕಾಗಿ ನಿಮ್ಮನ್ನು ಆದರ ಪೂರ್ವಕವಾಗಿ ಸಮೀಪಿಸಿರುವೆನು. ಎಲೈ ನೀರುಗಳೇ, ನೀವು ನಮ್ಮನ್ನು ವಂಶವರ್ಧಕರನ್ನಾಗಿ ಮಾಡಿರಿ".
    ಪರಮಾತ್ಮನು ಸರ್ವವ್ಯಾಪಿಯೆಂದು ವೇದದಲ್ಲಿ ಎಷ್ಟೋ ಕಡೆಗಳಲ್ಲಿ ತಿಳಿಸಿರುತ್ತದೆಯೆಷ್ಟೆ: ಅಂಥ ಪರಮಾತ್ಮನ ಅನುಗ್ರಹದಿಂದಲೇ ನಮಗೆ ಸುಖವು ದೊರಕಬೇಕು. ನಾವು ತಿನ್ನುವ ಆಹಾರವು ಪ್ರಾಣ, ಜಲ, ತಪಸ್ಸು, ಶ್ರದ್ಧಾ, ಮೇಧಾ ಮುಂತಾದವುಗಳ ವೃದ್ಧಿಯ ಕ್ರಮದಿಂದ ಉತ್ತಮವಾದ ಜ್ಞಾನಕ್ಕೆ ಕಾರಣವಾಗಬೇಕಾದರೆ ಆತನ ಅನುಗ್ರಹವೇ ಬೇಕು. ಲೋಕದಲ್ಲೆಲ್ಲ ನೀರು ಇರುವದು; ಅದನ್ನು ಉಪಯೋಗಿಸುವದರಿಂದ ಪರಮಾತ್ಮನ ಹೊರಮಯ್ಯೇ ಅದೆಂದು ನಾವು ತಿಳಿದಿದ್ದರೂ ತಿಳಿಯದಿದ್ದರೂ ಅದರಿಂದಾಗುವಷ್ಟು ಪ್ರಯೋಜನವು ಆಗಿಯೇ ಆಗುವದು, ಆದರೆ ದೇಹದಲ್ಲಿಯೂ ಮನಸ್ಸಿನಲ್ಲಿಯೂ ಶುದ್ಧಭಾವನೆಯನ್ನು ತಂದುಕೊಂಡು "ಪರಮಾತ್ಮನೆ, ನೀನು ಈ ಬ್ರಹ್ಮಾಂಡಕ್ಕೆಲ್ಲ ರಸಸ್ವರೂಪನು, ನೀನೇ ಈ ಬ್ರಹ್ಮಾಂಡದಲ್ಲಿರುವ ಸವಿಯು, ನಿನ್ನ ಸ್ವರೂಪದ ಸವಿಯನ್ನು ನಮಗೆ ಹತ್ತಿಸು; ಹೊರಗಿನ ಅಶುಚಿಯಾದ ಯೋಚನೆಗಳ ಸವಿಯನ್ನು ಬಿಡಿಸು; ಮಕ್ಕಳಿಗೆ ಪ್ರೇಮದಿಂದ ಎದೆಯ ಹಾಲನ್ನು ಕೊಟ್ಟು ಪುಷ್ಟಿಗೂ ಮುಂದಿನ ಬೆಳವಣಿಗೆಗೂ ಕಾರಣರಾಗುವ ತಾಯಿಯರಂತೆ ನೀನು ನಮ್ಮನ್ನು ನಿನ್ನ ಆನಂದರಸದ ಸವಿಯನ್ನು ಕೊಟ್ಟು ಕಾಪಾಡಬೇಕು; ನಾವೆಲ್ಲರೂ ಮಕ್ಕಳು, ನೀನು ನಮ್ಮೆಲ್ಲರ ತಾಯಿಯು" ಎಂದು ಭಗವದ್ಭಾವನೆಯಿಂದ ಮಂತ್ರಪೂತವಾದ ನೀರನ್ನು ನಮ್ಮ ಮೇಲೆ ನಾವು ಚಿಮುಕಿಸಿಕೊಳ್ಳುವಾಗ ನಮ್ಮ ಮನಸ್ಥಿತಿಯು ಹೇಗಿರಬೇಕು! ಅದನ್ನು ಅನುಭವದಿಂದಲೇ ತಿಳಿಯಬೇಕಲ್ಲದೆ ಮಾತಿನಿಂದ ವರ್ಣಿಸುವದಕ್ಕೆ ಎಂದಿಗೂ ಬರುವ ಹಾಗಿಲ್ಲ. ಈ ಮನಸ್ಸಿನ ಸ್ಥಿತಿಯನ್ನು ತಂದುಕೊಡುವದೇ "ಆಪೋಹಿಷ್ಠಾ" ಎಂಬ ಮಾರ್ಜನ ಮಂತ್ರದ ಪ್ರಯೋಜನವು.
    ಪ್ರಕೃತದಲ್ಲಿ ನೀರಿಗೆ ಸಂಸ್ಕೃತದಲ್ಲಿ 'ಆಪಃ' ಎಂದು ಹೆಸರಾಗಿರುವದರಿಂದ ಸರ್ವವ್ಯಾಪ್ತಿಯಾದ ಭಗವಂತನನ್ನು 'ಆಪಃ' ಎಂಬ ಹೆಸರಿನಿಂದ ಋಷಿಗಳು ಕರೆಯುತ್ತಾರೆಂದು ತಿಳಿಯಬೇಕು. 'ಆಪ್ನೊವನ್ತಿ ಇತಿ ಆಪಃ' (ವ್ಯಾಪಿಸಿರುವದರಿಮದ 'ಆಪಃ' ಎಂದು ಹೆಸರು ಎಂಬುದು ಈ ಶಬ್ದದ ವ್ಯುತ್ಪತ್ತಿಯು ಇದೇ ಸರಿಯಾದ ಅಭಿಪ್ರಾಯವೆಂಬುದಕ್ಕೆ ಈ ಕೆಳಗಿನ ಮಂತ್ರವೂ ಸಾಕ್ಷಿಯಾಗಿರುವದು.
   
ಆಪೋ ವಾ ಇದಗ್ಂ ಸರ್ವಂ ವಿಶ್ವಾ ಭೂತಾನ್ಯಾಪಃ
ಪ್ರಾಣಾ ವಾ ಆಪಃ ಪಶವ ಆಪೋನ್ನಮಾಪೋಮೃತಮಾಪಃ
ಸಮ್ರಾಡಾಪೋ ವಿರಾಡಾಪಃ ಸ್ವರಾಡಾಪಶ್ಫನ್ದಾಗ್ಗ್ ಸ್ಯಾಪೋ
ಜ್ಯೋತೀಗ್ಗ್ ಷ್ಯಾಪಃ ಸತ್ಯಮಾಪಃ ಸರ್ವಾ ದೇವತಾ ಆಪೋ
ಭೂರ್ಭುವಃಸುವರಾಪ ಓಮ್ || (ತೈ.ಆ )

ಅರ್ಥ : ಇದೆಲ್ಲವೂ ನೀರೆ, ಸಮಸ್ತ ಭೂತಗಳೂ ನೀರೇ, ಪ್ರಾಣಗಳೂ ನೀರೆ; ಪಶುಗಳೂ ನೀರೆ; ಅನ್ನವೂ ನೀರು; ಅಮೃತವೂ ನೀರು; ಸಮ್ರಾಜನೂ (ಸ್ಥೂಲಪ್ರಪಂಚವೆಂಬ ಉಪಾಧಿಯಿಂದ ಪರಮಾತ್ಮನಿಗೆ ವಿರಾಜನೆಂದೂ ಸೂಕ್ಷ್ಮಪ್ರಪಂಚವೆಂಬ ಉಪಾಧಿಯಿಂದ ಸ್ವರಾಜನೆಂದೂ ಆವ್ಯಾಕೃತವಾದ ಕಾರಣಪ್ರಪಂಚವೆಂಬ ಉಪಾಧಿಯಿಂದ ಸಂರಾಜನೆಂದೂ ಹೆಸರಾಗಿರುವವು) ನೀರು; ವಿರಾಜನೂ ನೀರು; ಸ್ವರಾಜನೂ ನೀರು; ವೇದಛಂದಸ್ಸುಗಳೆಲ್ಲ ನೀರು; ನಕ್ಷತ್ರಗಳೆಲ್ಲ ನೀರು; ಯಜುಸ್ಸುಗಳೆಲ್ಲ ನೀರು; ಸತ್ಯವೂ ನೀರು; ದೇವತೆಗಳೆಲ್ಲರೂ ನೀರು; ಭೂಲೋಕವೂ ಭೂರ್ಲೋಕವೂ ಸುವರ್ಲೋಕವೂ ನೀರು; ಈ ನೀರೇ ಓಂಕಾರದಿಂದ ಹೇಳಲ್ಪಡುವ ಪರಮಾತ್ಮನು.
    ಸರ್ವವ್ಯಾಪ್ತಿಯಾದ ಪರಮಾತ್ಮನಿಗೆ 'ಆಪಃ' ಎಂದು ಹೆಸರಿಟ್ಟಿದೆಯೆಂದೂ 'ಆಪಃ' ಎಂದರೆ ನೀರೆಂದು ರೂಢಿಯ ಅರ್ಥವಾದ್ದರಿಂದ ನೀರಿನ ಉಪಾಧಿಯ ಮೂಲಕ ಆ ಪರಮಾತ್ಮನನ್ನೇ 'ಆಪಃ' ಎಂಬ ಹೆಸರಿನಿಂದ ಕರೆದು ಈ ಮಾರ್ಜನಮಂತ್ರದಲ್ಲಿ ಪ್ರಾರ್ಥನೆಮಾಡಿರುತ್ತದೆಯೆಂದೂ ಇದರಿಂದ ಸ್ಪಷ್ಟವಾಗುವದಿಲ್ಲವೇ?

Comments

  1. ಉಪಯುಕ್ತ ಮಾಹಿತಿ. ವಂದನೆಗಳು.

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ