ಯಾವ ಹೆಸರಿನಿಂದ ಕರೆಯಲಿ ?
ಪರಮೇಶ್ವರನಿಗೆ ಯಾವ ಹೆಸರು ಸಲ್ಲುವದು? ಆತನನ್ನು ಯಾವ ಹೆಸರಿನಿಂದ ಕರೆಯುವದು ಸರಿ? ಶಿವನೆಂದು ಶೈವರು, ವಿಷ್ಣುವೆಂದು ವೈಷ್ಣವರು, ಶಕ್ತಿಯೆಂದು ಶಾಕ್ತೇಯರು, ಸೂರ್ಯನೆಂದು ಸೌರರು, ಗಣಪತಿಯೆಂದು ಗಾಣಾಪತ್ಯರು, ಅರ್ಹಂತನೆಂದು ಜೈನರು, ಬುದ್ಧನೆಂದು ಬೌದ್ಧರು, ಅಹುರಮಜ್ದನೆಂದು ಪಾರ್ಸಿಯರು, ಅಲ್ಲಾಹನೆಂದು ಮುಸಲ್ಮಾನರು, ಯಹೋವನೆಂದು ಯಹೋದಿಯರು, ತಂದೆ ಅಥವಾ ಕರ್ತ ಎಂದು ಕ್ರೈಸ್ತರು - ಹೀಗೆ ಬಗೆಬಗೆಯಾಗಿ ಕರೆದಿರುತ್ತಾರೆ ಇವುಗಳಲ್ಲಿ ಯಾವದನ್ನು ಇಟ್ಟುಕೊಳ್ಳುವದು ಸರಿ ?
ಈ ಪ್ರಶ್ನೆಗೆ ಉತ್ತರವನ್ನು ಹೇಳುವದರಲ್ಲಿ ಕೆಲವರು ತಮ್ಮ ತಮ್ಮ ಧರ್ಮವನ್ನು ಎತ್ತಿಹಿಡಿದು ನಾವು ಇಟ್ಟುಕೊಂಡಿರುವ ಹೆಸರೇ ಸರಿ, ಮಿಕ್ಕವರದು ಸರಿಯಲ್ಲ ಅಥವಾ ನಮ್ಮ ಹೆಸರಿನಷ್ಟು ಉತ್ತಮವಲ್ಲ ಎಂಬ ಅಭಿಪ್ರಾಯವನ್ನು ಹೊರಡಿಸಿರುತ್ತಾರೆ. ಆದರೆ ಪ್ರಪಂಚದಲ್ಲಿರುವ ಧಾರ್ಮಿಕವಾಙ್ಮಯದಲ್ಲೆಲ್ಲ ಅತ್ಯಂತ ಪುರಾತನವಾದ ಋಗ್ವೇದದಲ್ಲಿ ಒಂದು ಋಷಿವಾಕ್ಯವು ಕಂಡುಬರುತ್ತದೆ. "ಏಕಂ ಸದ್ವಿಪ್ರಾ ಬಹುಧಾ ವದನ್ತಿ " ಇರುವದು ಒಂದು¯ ಅರಿತವರು ಅದನ್ನು ಹಲವು ಬಗೆಯಾಗಿ ಕರೆಯುತ್ತಿರುವರು. ಇಂದ್ರ, ಮಿತ್ರ, ವರುಣ, ಅಗ್ನಿ, ಸುಪರ್ಣ, ಯಮ, ಮಾತರಿಶ್ವ ಎಲ್ಲಾ ಆತನ ಹೆಸರುಗಳೇ (ಋ.ಮಂ 1-23-164). ಈ ಋಷಿವಾಕ್ಯದ ಅಭಿಪ್ರಾಯವನ್ನು ಸ್ವಲ್ಪ ಒಳಹೊಕ್ಕು ನೋಡುವದಕ್ಕೆ ಪ್ರಯತ್ನಿಸೋಣ.
ಇರವದೆಲ್ಲ ಒಂದೇ, ನಮ್ಮ ಇಡಿಯ ಜಗತ್ತಿಗೆ ಕಾರಣವಾಗಿ, ಇದರ ತಿರುಳಾಗಿ, ಇದಕ್ಕೆ ಆಸರೆಯಾದ ನೆಲೆಯಾಗಿ, ಇದರ ಇರವಿಗೂ ಚಟುವಟಿಕೆಗಳಿಗೂ ಬೆಳೆವಣಿಗೆಗೂ ಆಗುಹೋಗುಗಳಿಗೂ ಮೂಲವಾಗಿ, ಇಅರುವದೆಲ್ಲ ಒಂದೇ ಒಂದು ವಸ್ತು. ನಮ್ಮ ಎದುರಿಗೆ ತೋರುತ್ತಿರುವ ದೃಶ್ಯಗಳಲ್ಲಿ ಯಾವದೊಂದು ನಿತ್ಯವಲ್ಲ. ಇದೆಲ್ಲ ಹರಿಯುತ್ತಿರುವ ನದಿಯಂತೆ, ತೋರಿಹಾರುತ್ತಿರುವ ಚಲನಚಿತ್ರದಂತೆ, ಕನ್ನಡಿಯಲ್ಲಿ ಕಾಣುವ ಪಡಿನೆಳಲಿನಂತೆ, ಇರುವದು ಆದರೂ ಇದು ನಮ್ಮಗಳ ಮೇಲೆ ಬಲವಾದ ಪರಿಣಾಮವನ್ನುಂಟು ಮಾಡುತ್ತಾ ನಿತ್ಯವಾಗಿ ಇದ್ದುಕೊಂಡೆ ಇರುವ, ಸುಖದುಃಖಗಳನ್ನು ಕೊಡಬಲ್ಲ, ವಸ್ತುವೆಂದೇ ಕಾಣುತ್ತಿರುವದು. ಹೀಗಾಗುವದರ ಕಾರಣವು ಯಾವದು? ಇದರ ಇರವಿನ ಮೂಲವು ಯಾವದು ? ಇದರ ಓಡಾಟಕ್ಕೆ ಕಾರಣವಾದ ಕೀಲ ಎಲ್ಲಿದೆ? ಇದರ ಸೌಂದರ್ಯವನ್ನು ಚಿತ್ರಿಸಿರುವ ಕುಂಚವು ಯಾರದು ? ಇಲ್ಲಿ ಕಾಣಿಸುವ ಜ್ಞಾನಕಿರಣಗಳ ಸೂರ್ಯನು ಯಾರು ? ಇದರಲ್ಲಿ ತೋರುವ ಸುಖ ದುಃಖಾದಿಗಳ ಬುಗ್ಗೆಯ ಉದ್ಗಮಸ್ಥಾನವು ಯಾವದು ? ನಮಗೆ ಕಾಣುವ ನೋಟಗಳಿಗೆಲ್ಲ ಮೂಲವು ಒಂದೇ ಒಂದು. ಅದೇ ಪರಮಾರ್ಥಸದ್ರೂಫವಾದ ತತ್ತ್ವವು ಅದನ್ನೇ ನಾವು ಪರಮೇಶ್ವರನು, ದೇವರು - ಎನ್ನುತ್ತಿರುವದು.
ಈ ಪ್ರಪಂಚದ ನಾಟಕಮಂದಿರದಲ್ಲಿರುವಾಗ ನಾವುಗಳೆಲ್ಲರೂ ಸಾಮಾನ್ಯವಾಗಿ ಇಲ್ಲಿ ನಿತ್ಯವಾಗಿರುವೆವೆಂದೇ ಭಾವಿಸಿಕೊಂಡಿರುವೆವು. ನಾಟಕವನ್ನೂ ನೋಡುವಾಗ ನಮಗೆ ಕಾಣುವ ದೇಶಗಳೂ ಕಾಲವೂ ಪಾತ್ರಗಳೂ ಅವರ ನಡೆನುಡಿಗಳೂ ನಿಜವಾಗಿ ಈಗಲೇ ನಮಗೆ ಅನುಭವಗೋಚರವಾಗುತ್ತಿರುವವೆಂದು ನಮ್ಮ ಭಾವನೆ. ನಾಟಕದ ಸೊಬಗನ್ನು ಅನುಭವಿಸುವದಕ್ಕೂ ಅಲ್ಲಿಯ ಗಾನವನ್ನು ಕೇಳಿ ಆನಂದಿಸುವದಕ್ಕೂ ಪಾತ್ರಗಳ ಅಭಿನಯವನ್ನು ಮೆಚ್ಚುವದಕ್ಕೂ ಈ ನಿತ್ಯತ್ವ ಬುದ್ಧಿಯು ಅವಶ್ಯವೇ ಸರಿ, ಆದರೆ ಆಗಾಗ್ಗೆ ಅಂಕ ಪರದೆಯು ಬಿದ್ದು ಸ್ವಲ್ಪವಿರಾಮವಿರುವಾಗ ಇದೆಲ್ಲ ನಾಟಕವು ಈಗಾಗಲೆ ಇಂತಿಷ್ಟು ಅಂಕಗಳು ಆದವು ಇನ್ನೂ ಇಂತಿಷ್ಟು ಘಂಟೆಯ ಆಟವು ಮಾತ್ರ ಉಳಿದಿದೆ ಎಂದುಕೊಳ್ಳುವೆವು ಆಗ ಮಾತ್ರ ಈ ನಾಟಕವನ್ನು ನಾವು ನೋಡುತ್ತಿದ್ದರೂ ಇದೆಲ್ಲವೂ ಮುಗಿದು ಹೋಗಲಿದೆಯೆಂದೂ ನಾವು ಇಷ್ಟರಲ್ಲಿಯೇ ನಮ್ಮ ನಿಜವಾದ ಮನೆಗೆ ಹೋಗಬೇಕಾಗವದೆಂದೂ ನಮ್ಮ ನೆನಪಿಗೆ ಬರುತ್ತದೆ. ಈ ಪ್ರಪಂಚದಲ್ಲಿ ಎಲ್ಲವೂ ಬದಲಾಯಿಸುತ್ತಲೇ ಇರುತ್ತದೆ ನಮ್ಮ ಸುತ್ತವಳೆಯವೆಲ್ಲವೂ ಮಾರ್ಪಡುತ್ತಲೇ ಇರುತ್ತದೆ, ನಾವೂ ಬದಲಾಯಿಸುತ್ತಿರುವೆವು ಆದರೆ ಪರಮಾರ್ಥವೊಂದು ಮಾತ್ರ ಬದಲಾಯಿಸುವದಿಲ್ಲ. ಅದರಲ್ಲಿ ಯಾವ ಮಾರ್ಪಾಡುಗಳೂ ಆಗುತ್ತಿರುವದಿಲ್ಲ ಇದನ್ನು ಮನಸ್ಸಿಗೆ ಚೆನ್ನಾಗಿ ಹತ್ತಿಸಿಕೊಂಡಿರುವವರೇ ಋಷಿಗಳು ಅಂಥವರು ಹೇಳುವ ವಾಕ್ಯವಿದು ಇರುವದೆಲ್ಲ ಒಂದೇ, ಇರುವ ಆ ಒಂದು ಪರಮಾರ್ಥವು ಎಂದಿಗೂ ಬೇರೆಯಾಗುವದಿಲ್ಲ ಈ ಇರವೇ, ಈ ಪರಮಾರ್ಥವೇ, ದೇವರು, ಪರಮೇಶ್ವರನು, ಭಗವಂತನು.
ಇರುವದೆಲ್ಲ ಒಂದೇ, ಆದರೆ ಅದನ್ನು ಅರಿತವರು ಬಗೆಬಗೆಯಾದ ಹೆಸರುಗಳಿಂದ ಕರೆಯುತ್ತಿರುವರು. ದೇವರನ್ನು ಕಂಡ ಋಷಿಗಳು, ಮಹನೀಯರು, ಮಹಾತ್ಮರು - ತಮ್ಮ ಅನುಭವವನ್ನು ಜನರಿಗೆ ತಿಳಿಸುವದಕ್ಕೆಂದು ಆ ದೇವರಿಗೆ ಕೆಲವು ಹೆಸರುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಈ ಹೆಸರುಗಳಿ ಒಂದೇ ಆಗಿರುವದಿಲ್ಲ, ಬಗೆಬಗೆಯಾಗಿರುತ್ತದೆ, ಲೆಕ್ಕವಿಲ್ಲದಷ್ಟು ಇರುತ್ತವೆ. ಯಾವ ಯಾವ ಭಕ್ತ್ರು ಯಾವ ಯಾವ ಹೆಸರಿನಿಂದ ಭಗವಂತನನ್ನು ಮೊದಲು ಕರೆದರೋ ಅವರವರ ಅನುಯಾಯಿಗಳು ಆಯಾ ಹೆಸರನ್ನೇ ಆ ದೇವದೇವನಿಗೆ ಇಟ್ಟುಕೊಂಡಿರುತ್ತಾರೆ. ಹೀಗಿರುವದರಿಂದ ಬೇರೆಬೇರೆಯ ಆಚಾರ್ಯರುಗಳ ಶಿಷ್ಯರು ಬೇರೆಬೇರೆಯ ಹೆಸರುಗಳಿಂದ ಭಗವಂತನನ್ನು ಕರೆದರೆ, ತಮ್ಮ ಮೂಲಗುರುಗಳು ಕರೆದ ಹೆಸರಿನಿಂದಲೇ ಈಶ್ವರನನ್ನು ಕರೆಯುವದು ಅವರವರಿಗೆ ಮೆಚ್ಚಿಗೆಯಾದರೆ, ಆಶ್ಚರ್ಯವಿಲ್ಲ. ಶ್ರೀರಾಮಕೃಷ್ಣ ಪರಮಹಂಸರು ಹೇಳಿರುವಂತೆ ಒಂದು ಭಾಷೆಯಲ್ಲಿ ನೀರಿಗೆ ಪಾನಿ ಎಂದು ಹೆಸ್ರು, ಮತ್ತೊಂದರಲ್ಲಿ ಆಕ್ವಾ ಎಂದು ಹೆಸ್ರು, ಇನ್ನೊಂದರಲ್ಲಿ ವಾರಿ ಎಂದು ಹೆಸರು, ಆದರ ಜನರು ಬೇರೆಬೇರೆಯ ಹೆಸರುಗಳಿಂದ ಕರೆಯುತ್ತಿರುವದು ನೀರೆಂಬ ಒಂದೇ ವಸ್ತುವನ್ನೇ ಹೀಗೆಯೇ ಬೇರೆಬೇರೆಯ ಮತದವರು ಒಬ್ಬನೇ ದೇವರಿಗೆ ಬೇರೆಬೇರೆಯ ಹೆಸರನ್ನಿಟ್ಟುಕೊಂಡಿರುವರು ಇಷ್ಟುಮಾತ್ರದಿಂದ ದೇವರುಗಳು ಅನೇಕರೆಂದಾಗುವದಿಲ್ಲ. ಇರುವದೆಲ್ಲ ಒಂದೇ ಅದನ್ನೇ ಹಲವು ಹೆಸರುಗಳಿಂದ ಕರೆಯುತ್ತಿರುವೆವು.
ಈಗ ಒಂದು ಶಂಕೆಯು ಬರುವದು. ನೀರಿಗೆ ಬೇರೆಬೇರೆಯ ಭಾಷೆಯಲ್ಲಿ ಬೇರೆಬೇರೆಯ ಹೆಸರುಗಳಿದ್ದರೆ ಆಶ್ಚರ್ಯವಲ್ಲ, ಆದರೆ ಒಂದೇ ಭಾಷೆಯಲ್ಲಿ ಒಬ್ಬನೇ ದೇವರಿಗೆ ಅನೇಕ ಹೆಸರುಗಳಿರುವದೇತಕ್ಕೆ? ಒಂದು ಸಂಸ್ಕೃತಭಾಷೆಯಲ್ಲಿಯೇ ನೋಡಿದರೂ ಪರಮೇಶ್ವರನಿಗೆ ಸಾವಿರಾರು ಹೆಸರುಗಳಿರುತ್ತವೆ. ಹೀಗೆಯೇ ಅರಬ್ಬಿ ಮುಂತಾದ ಭಾಷೆಗಳಲ್ಲಿಯೂ ಇರುತ್ತವೆ ಎಂದು ಹೇಳುತ್ತಾರೆ. ಈ ಹೆಸರುಗಳೆಲ್ಲ ಪರ್ಯಾಯಶಬ್ದಗಳೇ? ಈ ಎಲ್ಲಾ ಹೆಸರುಗಳಿಗೂ ಒಂದೇ ಅರ್ಥವಾದರೆ, ಒಂದು ಹೆಸರನ್ನು ಬಿಟ್ಟು ಮಿಕ್ಕವು ವ್ಯರ್ಥವಾಗುವದಿಲ್ಲವೆ? ಈ ಶಂಕೆಗೆ ಪರಿಹಾರವೇನೆಂದರೆ, ದೇವರು ಒಬ್ಬನೇ ಆದರೂ ಆತನ ಗುಣಗಳು ಅನಂತವಾಗಿರುತ್ತವೆ. ಸೂರ್ಯನಿಗೂ ಕಿರಣಗಳಿಗೂ ಅಭೇದವಿರುವಂತೆ ಭಗವಂತನ ಗುಣಗಳಿಗೂ ಭಗವಂತನಿಗೂ ಅಭೇದವೇ ಇದ್ದರೂ ಒಂದೊಂದು ಗುಣಕ್ಕೂ ಆಯಾ ಒಂದೊಂದು ವಿಶೇಷವನ್ನು ತಿಳಿಸುವ ಹೆಸರುಗಳನ್ನು ಕೊಟ್ಟಿರುವದು ವ್ಯರ್ಥವಲ್ಲ ಆದ್ದರಿಂದಲೇ ವಿಷ್ಣು ಸಹಸ್ರ ನಾಮದಲ್ಲಿ ಹೀಗೆಂದು ಹೇಳಿರುತ್ತದೆ :-
ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ |
ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ ||
ಮಹಾತ್ಮನಾದ ಪರಮೇಶ್ವರನಿಗೆ ಗುಣಸಂಬಂಧದಿಂದ ಯಾವ ಯಾವ ಹೆಸರುಗಳು ಪ್ರಸಿದ್ಧವಾಗಿರುವವೋ ಯಾವದನ್ನು ಋಷಿಗಳು ಹಾಡಿ ಹೊಗಳಿರುತ್ತಾರೋ ಅಂಥವುಗಳನ್ನು ಹೇಳುವೆನು ಅವುಗಳನ್ನು ಹೇಳಿಕೊಳ್ಳುವವರಿಗೆ ಅಭ್ಯುದಯವುಂಟಾಗುತ್ತದೆ - ಎಂದು ಶ್ಲೋಕದ ಅರ್ಥ.
ಈಗ ನಾವು ಮೊದಲು ಹಾಕಿಕೊಂಡಿರುವ ಪ್ರಶ್ನೆಗೆ ಉತ್ತರವೇನೆಂಬುದು ವಾಚಕರಿಗೆ ಸ್ಪಷ್ಟವಾಗಿರುತ್ತದೆಯೆಂದು ನಂಬಬಹುದು. ಶಿವ, ವಿಷ್ಣು, ಶಕ್ತಿ, ಆದಿತ್ಯ, ಗಣಪತಿ, ಅರ್ಹಂತ, ಬುದ್ಧ, ಅಹುರಮಜ್ದ, ಅಲ್ಲಾಹ, ಯಹೋದ, ಕರ್ತ - ಮುಂತಾದ ಹೆಸರುಗಳಲ್ಲಿ ಯಾವ ಹೆಸರನ್ನು ದೇವರಿಗೆ ಇಟ್ಟುಕೊಳ್ಳುವದು ಸರಿ? ಎಂಬುದೇ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗಿ ಮತ್ತೊಂದು ಪ್ರಶ್ನೆಯನ್ನು ಹಾಕಬಹುದು ನಮ್ಮ ಸ್ನೇಹಿತನನ್ನು ಅವರ ಮನೆಯವರಲ್ಲಿ ಕೆಲವರು ಅಪ್ಪ ಎನ್ನುತ್ತಾರೆ, ಕೆಲವರು ಮಾವ ಎನ್ನುತ್ತಾರೆ, ಇನ್ನೂ ಕೆಲವರು ಭಾವ ಎನ್ನುತ್ತಾರೆ, ಕೆಲವರು ಅಣ್ಣ ಎನ್ನುತ್ತಾರೆ, ಮತ್ತೆ ಕೆಲವರು ತಮ್ಮ ಎನ್ನುತ್ತಾರೆ, ಇವುಗಳಲ್ಲಿ ಯಾವದು ಸರಿ? ಮಗನಿಗೆ ಅಪ್ಪನಾದವನು ಅಳಿಯನಿಗೆ ಮಾವನಾಗುವದೂ ಮೈದುನನಿಗೆ ಭಾವನಾಗುವದೂ ವಿರುದ್ಧವಾಗುವದೇನು? ಒಬ್ಬ ಮನುಷ್ಯನು ಅಣ್ಣನಿಗೆ ತಮ್ಮನಾದರೆ ತಮ್ಮನಿಗೆ ಅಣ್ಣನಾಗಬಾರದೇನು? ಈ ಪ್ರಶ್ನೆಗೆ ಉತ್ತರವು ಸ್ಪಷ್ಟವಾಗಿರುತ್ತದೆ. ಬಂಧುತ್ವದ ಅಪೇಕ್ಷೆಯಿಂದ ಅಪ್ಪ, ಮಾವ, ಭಾವ - ಮುಂತಾದ ಹೆಸರುಗಳು ಒಬ್ಬನಿಗೆ ಬಂದರೆ ಆಶ್ಚರ್ಯವೇನೂ ಇಲ್ಲ. ಇದರಂತೆಯೇ ದೇವರ ಹೆಸರುಗಳನ್ನೂ ತಿಳಿಯಬೇಕು.
ಶಿವನು ಎಂದರೆ ಮಂಗಲಸ್ವರೂಪನು ಪ್ರಪಂಚದಲ್ಲಿರುವ ಮಂಗಲವೆಲ್ಲ ಪರಮಾತ್ಮನಿಂದಲೇ ಬಂದಿರುತ್ತದೆ. ಆತನ ಸಂಬಂಧವಿಲ್ಲದಿರುವದು ಅಶಿವವು, ಆದ್ದರಿಂದ ದೇವರಿಗೆ ಶಿವನು ಎಂದು ಹೆಸರು. ವಿಷ್ಣು ಎಂದರೆ ವ್ಯಾಪಕನು, ದೇವರು ಇಲ್ಲಿರುವನು, ಅಲ್ಲಿಲ್ಲ ಎಂಬುದಿಲ್ಲ ಮೇಲೆ, ಕೆಳಗೆ, ಎಡಕ್ಕೆ , ಬಲಕ್ಕೆ, ಹಿಂದಕ್ಕೆ, ಮುಂದಕ್ಕೆ, ಆಗ, ಈಗ, ಎಲ್ಲೆಲ್ಲಿಯೂ ಎಂದೆಂದಿಗೂ ಆತನು ಇಲ್ಲದ ಸ್ಥಳವಿಲ್ಲ ಆದ್ದರಿಂದ ದೇವರಿಗೆ ವಿಷ್ಣೂ ಎಂದು ಹೆಸರು ಬಂದಿದೆ. ಶಕ್ತಿ ಎಂದರೆ ಬಲವು, ಜಗತ್ತಿನಲ್ಲಿ ಯಾವ ವಸ್ತುವಿನಲ್ಲಿ, ಯಾವ ಪ್ರಾಣಿಯಲ್ಲಿ, ಯಾವ ಮುನುಷ್ಯನಲ್ಲಿ, ಯಾವ ದೇವತೆಯಲ್ಲಿ ಅಥವಾ ಯಾವ ಸತ್ತ್ವವಿಶೇಷದಲ್ಲಿ ಎಷ್ಟು ಬಲವಿರುವದೋ ಅದೆಲ್ಲ ಭಗವಂತನಿಂದ ಬಂದದ್ದು. ಆತನ ಬಲವೇ ನಮ್ಮೆಲ್ಲ್ರ ಬಲವು ಆದ್ದರಿಂದ ದೇವರಿಗೆ ಶಕ್ತಿ ಎಂಬ ಹೆಸರು ಸಲ್ಲುತ್ತದೆ. ಎಲ್ಲರ ಪ್ರಾಣಶಕ್ತಿಗಳನ್ನೂ ಸ್ವೀಕರಿಸಿ ತನ್ನ ವಶದಲ್ಲಿಟ್ಟುಕೊಂಡಿರುವದರಿಂದ ಸೂರ್ಯನೆಂದು ಆತನಿಗೆ ಹೆಸರು. ಜನರಿಗೆ ತನ್ನ ವಶದಲ್ಲಿಟ್ಟುಕೊಂಡಿರುವದರಿಂದ ಸೂರ್ಯನೆಂದು ಆತನಿಗೆ ಹೆಸರು. ಜನರಿಗೆ ಒಳ್ಳೆಯದನ್ನು ಮಾಡುವ ದೇವಗಣಗಳಿಗೆಲ್ಲ ಒಡೆಯನಾದ್ದರಿಂದ ಆತನು ಗಣಪತಿ ಎನಿಸಿರುವನು. ಎಲ್ಲರ ಪೂಜೆಗೂ ಅರ್ಹನಾದ್ದರಿಂದ ಆತನು ಅರ್ಹಂತನಾಗಿರುವನು. ತತ್ತ್ವವನ್ನು ಎಂದಿಗೂ ಬಲ್ಲವನಾಗಿ ಜ್ಞಾನದ ಎಚ್ಚರದಲ್ಲಿರುವನಾದ್ದರಿಂದ ಆತನು ಬುದ್ಧನು, ಹೀಗೆಯೇ ಅಹುರಮಜ್ದ ಎಂದರೆ ಸರ್ವಜ್ಞನಾದ ಮಹಾಪ್ರಭುವು, ಅಲ್ಲಾಹನೆಂದರೆ ಎಲ್ಲಾ ಸರ್ವೋತ್ತಮ ಗುಣಗಳಿಂದಲೂ ಕೂಡಿರುವ ಸರ್ವ ಸ್ವತಂತ್ರನು, ಯಹೋವನೆಂದರೆ ಸನ್ಮಾತ್ರನು, ಪರಲೋಕದ ತಂದೆ ಎಂದರೆ ಎಲ್ಲರನ್ನೂ ಮಕ್ಕಳಂತೆ ಪ್ರೇಮದಿಂದ ನೋಡುವಾತನು ಇತ್ಯಾದಿ ಇತ್ಯಾದಿ....
ಪರಮೇಶ್ವರನಿಗೆ ಎಷ್ಟು ಹೆಸರುಗಳು? ಎಂಬ ಪ್ರಶ್ನೆಗೆ ಉತ್ತರವು ಈಗ ಸುಲಭವಾಗಿ ಹೊಳೆಯುತ್ತದೆ. ಪರಮೇಶ್ವರನ ಗುಣಗಳು ಎಷ್ಟೋ ಆತನ ಹೆಸರುಗಳೂ ಅಷ್ಟೇ ಆತನ ಗುಣಗಳೂ ಅನಂತವಾಗಿವೆ ಅವುಗಳು ಇಷ್ಟೇ ಎಂದು ಎಣಿಸುವದು ಯಾರಿಂದಲೂ ಆಗಲಾರದು ಪುಷ್ಪದಂತಾಚಾರ್ಯನು ಹೇಳಿರುವಂತೆ
ಅಸಿತಗಿರಿಸಮಂ ಸ್ಯಾತ್ ಕಜ್ಜಲಂ ಸಿನ್ಧುಪಾತ್ರೇ
ಸುರತರುವರಶಾಖಾ ಲೇಖಿನೀ ಪತ್ರಮುರ್ವೀ
ಲಿಖತಿ ಯದಿ ಗೃಹೀತ್ವಾ ಶಾರದಾ ಸರ್ವಕಾಲಂ
ತದಪಿ ತವ ಗುಣಾನಾಮಿಶ ಪಾರಂ ನ ಯಾತಿ ||
ಅಂಜನಪರ್ವತದಷ್ಟು ಕಾಡಿಗೆ, ಸಮುದ್ರದಂಥ ಆಳವಾದ ಮಸಿಯ ದೌತಿ, ಕಲ್ಪತರುವಿನ ರೆಂಬೆಯಂತೆ ಎಂದೆಂದಿಗೂ ಸವೆಯದ ಲೇಖಿನಿ, ನೆಲದಂತೆ ವಿಶಾಲವಾಗಿರುವ ಕಾಗದ ಇಷ್ಟು ಸಾಮಗ್ರಿಗಳನ್ನು ದೊರಕಿಸಿಕೊಂಡು ಸರ್ವಜ್ಞಕಲ್ಪಳೆನಿಸಿಕೊಂಡಿರುವ ಶಾರದೆಯು ಎಂದೆಂದಿಗೂ ಬಿಡದೆ ಬರೆಯುತ್ತಿದ್ದರೂ ಈಶ್ವರನ ಗುಣಗಳು ಮುಗಿಯುವ ಹಾಗಿಲ್ಲ, ಹೀಗಿರುವರಿಂದ ಒಂದೊಂದು ಗುಣವನ್ನು ತಿಳಿಸುವದಕ್ಕೆ ಒಂದೊಂದು ಹೆಸರನ್ನು ಇಡುತ್ತಾ ಹೋದರೂ ದೇವರ ಹೆಸರುಗಳು ಇಂತಿಷ್ಟೆಂಬ ಲೆಕ್ಕವು ಸಿಕ್ಕುವಹಾಗಿಲ್ಲ ಇನ್ನು ಗುಣಗಳ ಒಳಭೇದಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಹೆಸರುಗಳ ಸಂಖ್ಯೆಯು ಎಷ್ಟಾಗಬೇಕಾದೀತು? ಭೂಮಿಯ ಮಣ್ಣಿನಲ್ಲಿರುವ ಧೂಳಿನ ಕಣಗಳನ್ನು ಎಣಿಸಿದರೂ ಎಣಿಸಬಹುದು, ಆದರೆ ಆ ಭಗವಂತನ ಕಲ್ಯಾಣ ಗುಣಗಳನ್ನು ಎಣಿಸುವದಕ್ಕಾಗಲಿ ಆ ಗುಣಗಳ ದೃಷ್ಟಿಯಿಂದ ಆತನಿಗೆ ಕೊಡಬಹುದಾದ ಹೆಸರುಗಳ ಲೆಕ್ಕದ ಕೊನೆಯನ್ನು ಕಾಣುವದಕ್ಕಾಲಿ ಆಗಲಾರದು.
ದೇವರಿಗೆ ಹೀಗೆ ಅನಂತ ನಾಮಗಳಿರುವವಾದ್ದರಿಂದ ನಾವು ನಮಗೆ ಯಾವ ಹೆಸರಿನಲ್ಲಿ ಸವಿ ಹತ್ತುವದೋ ಆ ಹೆಸರಿನಿಂದ ಆತನನ್ನು ಕರೆಯಬಹುದು. ಆದರೆ ಯಾವ ಹೆಸರಿನಿಂದಲೇ ದೇವರನ್ನು ಕರೆಯಿರಿ, ಒಂದು ವಿಷಯವನ್ನು ಮರೆಯಬಾರದು. ಎಲ್ಲಾ ಹೆಸರುಗಳೂ ಪರಮಪವಿತ್ರವಾಗಿರುತ್ತವೆ, ಆ ಸವೇಶ್ವರನ ಅನುಗ್ರಹವನ್ನು ಪಡೆದು ಸಂಸಾರಸಾಗರದ ದುಃಖಪರಂಪರೆಯನ್ನು ದಾಟುವದಕ್ಕೆ ಆತನ ಹೆಸರುಗಳೆಲ್ಲವೂ ಉತ್ತಮವಾದ ಜಹಜುಗಳಾಗಿರುತ್ತವೆ. ಆದ್ದರಿಂದ ಯಾವದೊಂದು ಹೆಸರನ್ನೂ ಅನಾದರದಿಮದ ಕಾಣಬಾರದು. ಒಂದೊಂದು ನಾಮವೂ ಒಂದೊಂದು ಅಮೃತಘುಟಕೆಯೆಂದು ಭಾವಿಸಬೇಕು. ಪರಮಾತ್ಮನ ನಾಮವನ್ನು ಭಕ್ತಿಪೂರ್ವಕವಾಗಿ ಉಚ್ಚರಿಸುವರಿಂದಲೂ ಅದರ ಅರ್ಥವನ್ನು ಮನನಮಾಡುವದರಿಂದಲೂ ಹಿಂದಿನ ಕಾಲದಲ್ಲಿ ಎಷ್ಟೋ ಜನರು ಕೃತಾರ್ಥರಾಗಿರುತ್ತಾರೆ. ಈಗಲೂ ನಾವುಗಳು ಯಾವದಾದರೊಂದು ಭಗವನ್ನಾಮವನ್ನು ಆಶ್ರಯಿಸಿ ಸರ್ವಾನರ್ಥಗಳಿಂದಲೂ ಮುಕ್ತರಾಗಿ ಪರಮಾನಂದವನ್ನು ಹೊಂದಬಹುದು.
Comments
Post a Comment