ಜೀವನ್ಮುಕ್ತಿಯೂ ವಿದೇಹಮುಕ್ತಿಯೂ

    ಮುಕ್ತಿ ಎಂದರೇನು? ಎಂಬ ವಿಷಯದಲ್ಲಿಯೂ ವಾದವಿವಾದಗಳಿಲ್ಲದೆ ಇಲ್ಲ, ಜೀವನು ಸಂಸಾರದಲ್ಲಿ ಧರ್ಮಾಧರ್ಮಾಗಳಿಂದ ಶರೀರವನ್ನು ಒಂದೊಂದಾಗಿ ಧರಿಸುತ್ತಾ ಸುಖದುಃಖಗಳನ್ನು ಅನುಭವಿಸುತ್ತಿರುವನು. ಈ ಸುಖ ದುಃಖಗಳಿಂದಲೂ ಇವಕ್ಕೆ ಕಾರಣವಾಗಿರುವ ರಾಗದ್ವೇಷಾದಿಗಳಿಂದಲೂ ಬಿಡುಗಡೆಯನ್ನು ಹೊಂದುವದೇ ಮುಕ್ತಿ ಎಂದು ಸಾಮಾನ್ಯವಾಗಿ ಎಲ್ಲಾವಾದಿಗಳೂ ಒಪ್ಪುತ್ತಾರೆ. ಈ ಮುಕ್ತಿಯು ನಿತ್ಯವಾಗಿರುತ್ತದೆ ಎಂಬುದೂ ಎಲ್ಲಾ ವಾದಿಗಳಿಗೂ ಸಮ್ಮತವಾಗಿರುತ್ತದೆ ಎಂದಿಟ್ಟುಕೊಳ್ಳಬಹುದು.
    ಶ್ರೀ ಶಂಕರಾಚಾರ್ಯರವರಿಗೆ ಸಮ್ಮತವಾದ ಅದ್ವೈತಸಿದ್ದಾಂತದಲ್ಲಿ ಮಾತ್ರ ಒಂದು ವಿಶೇಷರೀತಿಯ ಅಭ್ಯುಪಗಮವಿದೆ. ಬಂಧವು ಪರಮಾರ್ಥವಾಗಿದ್ದರೆ ಅದು ಎಂದಿಗೂ ಹೋಗಲಾರದು; ಏಕೆಂದರೆ ನಿತ್ಯವಾಗಿರುವ ಬಂಧವು ಜೀವನ ಸ್ವಭಾವವಾಗಿದ್ದರೆ ಸೂರ್ಯನಿಗೆ ಸ್ವಭಾವವಾಗಿರುವ ಬಿಸಿ ಬೆಳಕುಗಳು ಹೇಗೆ ತೊಲಗಲಾರವೋ ಹಾಗೆ ಬಂಧವೊ ತೊಲಗಲಾರದೆಂದೇ ಒಪ್ಪಬೇಕಾಗುತ್ತದೆ. ಇದೂ ಅಲ್ಲದೆ ನಿತ್ಯವಾದ ವೋಕ್ಷವು ಸಾಧನದಿಂದ ಉಂಟಾಗುತ್ತದೆ ಎಂದು ಕಲ್ಪಿಸುವದೂ ದೃಷ್ಟವಿರುದ್ಧವಾಗಿರುತ್ತದೆ. ಯಾವದು ಕೃತಕವೋ, ಯಾವದು ಸಾಧನದಿಂದ ಹೊಸದಾಗಿ ಉಂಟಾಗತಕ್ಕದ್ದೋ, ಅದು ಆದಿಯುಳ್ಳದ್ಧಾದ್ದರಿಂದ ಕೊನೆಯುಳ್ಳದ್ದೂ ಆಗಿರಬೇಕು ಎಂಬುದು ಸ್ಪಷ್ಟ. ಆದ್ದರಿಂದ ವೋಕ್ಷವು ಹೊಸದಾಗಿ ಉಂಟಾಗತಕ್ಕದ್ದಲ್ಲ ಎಂಬುದು ಈ ಸಿದ್ದಾಂತದ ಮುಖ್ಯೋಪದೇಶವಾಗಿರುತ್ತದೆ.
    ಹಾಗಾದರೆ ಬಂಧಮೋಕ್ಷಗಳ ವ್ಯವಹಾರವನ್ನು ಹೇಗೆ ಹೊಂದಿಸಬೇಕು? ಶಾಸ್ತ್ರದ ಬಂಧದ ಪರಿಹಾರಕ್ಕೆ ಉಪಾಯವನ್ನು ಬೋಧಿಸುತ್ತದೆ ಎಮದು ತಿಳಿದಲ್ಲದೆ ವೇದಾಂತೋಪದೇಶಕ್ಕೆ ಪ್ರಯೋಜನವೇ ಇರುವದಿಲ್ಲವಲ್ಲ ! ಎಂಬ ಶಂಕೆ ಎದ್ದುಕೊಳ್ಳುತ್ತದೆಯಷ್ಟೆ. ಇದಕ್ಕೆ ಪರಿಹಾರವಾಗಿ ಶ್ರೀ ಶಂಕರ ಭಗವತ್ಪಾದರವ್ರು ಶ್ರೀಶಾರೀರಕಮಿಮಾಂಸಾಭಾಷ್ಯದಲ್ಲಿ ಒಂದು ಉಪೋದ್ಘಾತವನ್ನು ಬರೆದಿರುತ್ತಾರೆ. ಬಂಧಕ್ಕೆ ಕರ್ತೃತ್ವಭೋಕ್ತೃತ್ವಬುದ್ಧಿಯು ಅತ್ಯಾವಶ್ಯಕವು, ಎಲ್ಲಾ ವ್ಯವಹಾರಕ್ಕೂ ಪ್ರಮಾಣಪ್ರಮೇಯವಿಭಾಗವು ಅತ್ಯಾವಶ್ಯಕವು. ಕರ್ತೃತ್ವಭೋಕ್ತೃತ್ವಗಳು ಆತ್ಮಾನಾತ್ಮರ ಸ್ವರೂಪದ ವಿವೇಚನೆಯಿಲ್ಲದೆ ಒಂದರಲ್ಲೊಂದನ್ನು ಕಲೆಬೆರಕೆಮಾಡಿ ಒಂದರ ಧರ್ಮವನ್ನೊಂದರಲ್ಲಿ ಆಧ್ಯಾಸಮಾಡಿಕೊಂಡಿರುವದೆಂಬ ಮಿಥ್ಯಾಜ್ಞಾನದಿಂದ ಆಗಿರುತ್ತವೆ. ಆದ್ದರಿಂದ ಬಂಧವೆಂಬ ಅನರ್ಥವೆಲ್ಲ ಈ ಆಧ್ಯಾಸರೂಪವಾದ ಅವಿದ್ಯೆಯಿಂದಲೇ ಆಗಿರುತ್ತದೆ, ಅದು ಪರಮಾರ್ಥವಲ್ಲವೇ ಅಲ್ಲ, ಎಂಬುದು ಆ ಭಾಷ್ಯಭಾಗದ ಉಪದೇಶವು.
    ಹೀಗಿರುವದರಿಂದ ಮೋಕ್ಷವೆಂಬುದು ಸಮಗ್ಜ್ಞಾನರೂಪವಾದ ವಿದ್ಯೆಯಿಂದಲೇ ದೊರಕಬೇಕೆಂಬುದು ಸ್ಪಷ್ಟವು. ಶ್ರೀಶಂಕರಭಗವತ್ಪಾದರವರು ತಮ್ಮ ಆಧ್ಯಾಸಭಾಷ್ಯದ ಕೊನೆಯಲ್ಲಿ ಹೇಳಿರುವ ಈ ವಾಕ್ಯವು ನಮಗೆಲ್ಲರಿಗೂ ಮನನೀಯವಾಗಿರುತ್ತದೆ.
    "ಏವಮಯಮನಾದಿನನ್ತೋ ನೈಸರ್ಗಿಕೋಧ್ಯಾಸೋ ಮಿಥ್ಯಾಪ್ರತ್ಯಯ ರೂಪಃ ಕರ್ತೃತ್ವಭೋಕ್ತೃತ್ವಪ್ರವರ್ತಕಃ ಸರ್ವಲೋಕಪ್ರತ್ಯಕ್ಷಃ ಅಸ್ಯ | ಅನರ್ಥ ಹೇತೋಃ ಪ್ರಹಾಣಾಯ ಆತ್ವೈಕತ್ವವಿದ್ಯಾಪ್ರತಿಪತ್ತಯೇ ಸರ್ವೇ ವೇದಾನ್ತಾ ಆರಭ್ಯನ್ತೇ! "
     ಹೀಗೆ ಈ ಸ್ವಾಭಾವಿಕವಾದ ಅಧ್ಯಾಸವು ತಪ್ಪುತಿಳಿವಳಿಕೆಯ ರೂಪದಲ್ಲಿದ್ದುಕೊಂಡು ಕರ್ತೃತ್ವಭೋಕ್ತೃತ್ವಗಳನ್ನುಂಟುಮಾಡುತ್ತಿರುವದೆಂಬುದು ಎಲ್ಲಾ ಜನರಿಗೂ ಅನುಭವದಲ್ಲಿರುತ್ತದೆ. ಈ ಅನರ್ಥಕಾರಣವಾದ ಅಧ್ಯಾಸವನ್ನು ನಾಶಗೊಳಿಸುವದಕ್ಕಾಗಿ ಆತ್ಮೈಕತ್ವವಿದ್ಯೆಯ ಪ್ರಾಪ್ತಿಯಾಗಲೆಂದು ಎಲ್ಲಾ ಉಪನಿಷತ್ತುಗಳನ್ನೂ ಪ್ರಾರಂಭಿಸಿರುತ್ತದೆ ಎಂದು ಮೇಲಿನ ವಾಕ್ಯದಲ್ಲಿ ಯಾರಿಗೂ ಸಂದೇಹವುಂಟಾಗದಂತೆ ಹೇಳಿರುತ್ತದೆ. ಅಧ್ಯಾಸದಿಂದ ಬಂಧವಾಗಿರುತ್ತದೆ, ಸರಿಯಾದ ಆತ್ಮೈಕತ್ವಜ್ಞಾನದಿಂದ ಅದರ ಬಿಡುಗಡೆಯಾಗುತ್ತದೆ ಎಂಬುದೇ ವಾಕ್ಯದ ತಾತ್ಪರ್ಯವೆಂಬುದು ಯಾರಿಗಾದರೂ ತಿಳಿಯುತ್ತದೆ. "ಗಂಗಾಸ್ನಾನವನ್ನು ಮಾಡಲಿ, ಸಮುದ್ರಸ್ನಾನವನ್ನು ಮಾಡಲಿ, ಯಾವದಾದರೂ ವ್ರತವನ್ನು ಮಾಡಲಿ, ಜ್ಞಾನವೊಂದಿಲ್ಲದಿದ್ದರೆ ನೂರಾರು ಜನ್ಮಗಳಲ್ಲಿಯೂ ಮುಕ್ತಿಯು ಲಭಿಸದು" ಎಂಬ ಮೋಹಮುದ್ಗರವಾಕ್ಯವು ವಾಚಕರ ಕಿವಿಗೆ ಬಿದ್ದೇ ಇರುತ್ತದೆಯಷ್ಟೆ ?
    ಹೀಗಿದ್ದರೂ ಕೆಲವು ಜನರು ಅದೇಕೊ, ಆಚಾರ್ಯ್ರ ಸ್ಪಷ್ಟೋಕ್ತಿಗಳನ್ನು ಕಡೆಗಣಿಸಿ ಮೋಕ್ಷವು ಜೀವನ್ಮುಕ್ತರಿಗೆ ಸಮಾಧಿಯಲ್ಲಿ ಕಂಡುಬರುತ್ತದೆಯೆಂದು ಅವರು ಶರೀರವನ್ನು ಬಿಟ್ಟಬಳಿಕ ಅವರಿಗೆ 'ವಿದೇಹಮುಕ್ತಿ' ಎಂಬ ಪರಮಮುಕ್ತಿಯು ದೊರಕುವದೆಂದೂ ವಾದಿಸುತ್ತಿರುವರು ಇದನ್ನು ಅವರು ತಮ್ಮ ನಂಬಿಕೆಯೆಂತ ಹೇಳಿಕೊಂಡಿದ್ದರೆ ನಮಗೇನೂ ಆಕ್ಷೇಪವಿರಲಿಲ್ಲ ಆದರೆ ಇದು ಶ್ರೀಶಂಕರಭಗವತ್ಪಾದರವರ ಅಭಿಪ್ರಾಯವೆಂತ ಹೇಳಿ ಆಚಾರ್ಯರ ವೇದಾಂತ ಸಿದ್ಧಾಂತದ ಮೂಲಕ್ಕೇ ಕೊಡಲಿ ಪೆಟ್ಟನ್ನು ಹಾಕುತ್ತಿರುವದು ವಿಷಾದಕರವಾಗಿರುತ್ತದೆ. ಆ ಮಹನೀಯರಾದ ಆಚಾರ್ಯರು ಈ ವಿಷಯದಲ್ಲಿ ಮಾಡಿರುವ ಸ್ಪಷ್ಟೋಪದೇಶಗಳಲ್ಲಿ ಕೆಲವನ್ನು ಇಲ್ಲಿ ಉದಾಹರಿಸುವೆನು.
1. ಶರೀರವು ಬಿದ್ದುಹೋದ ಬಳಿಕ ಅಶರೀರತ್ವವಾಗಬಹುದು, ಬದುಕಿರುವವರೆಗೆ ಆಗಲಾರದು - ಎಂದರೆ ಹಾಗಲ್ಲ, ಏಕೆಂದರೆ ಸಶರೀರನಾಗಿರುವದೆಂಬುದು ಮಿಥ್ಯಾಜ್ಞಾನನಿಮಿತ್ತದಿಂದಾಗಿರುತ್ತದೆ.... ಆದ್ದರಿಂದ ಮಿಥ್ಯಾಪ್ರತ್ಯಯನಿಮಿತ್ತದಿಂದಲೇ ಸಶರೀರತ್ವವಾಗಿರುವದರಿಂದ ಜ್ಞಾನಿಯು ಬದುಕಿರುವಾಗಲೇ ಅಶರೀರತ್ವವು ಸಿದ್ಧವಾಯಿತು (ಬ್ರ. ಸೂ. ಭಾ 1-1-4)
2. ಶಾರೀರನಾದ ಜೀವನಿಗೆ ತಾನೇ ಸಿದ್ಧವಾಗಿರುವ ಬ್ರಹ್ಮಾತ್ಮತ್ವವನ್ನು ವೇದಾಂತದಲ್ಲಿ ಉಪದೇಶಿಸಿದೆಯೇ ಹೊರತು ಮತ್ತೊಂದು ಪ್ರಯತ್ನದಿಂದ ಸಾಧಿಸತಕ್ಕದ್ದೆಂದು ಉಪದೇಶಿಸಿರುವದಿಲ್ಲ (ಬ್ರ. ಸೂ. ಭಾ 3-1-14)
3. ಬ್ರಹ್ಮಜ್ಞಾನಿಗೆ ಎಲ್ಲಾ ವ್ಯವಹಾರವೂ ಇಲ್ಲವಾಗುವದೆಂಬ ಈ ಫಲವು ಒಂದಾನೊಂದು ಅವಸ್ಥೆಯ ನಿಮಿತ್ತದಿಂದಾಗುವದೆಂದು ಹೇಳುವದು ಯುಕ್ತವಲ್ಲ; ಏಕೆಂದರೆ 'ತತ್ತ್ವಮಸಿ' ಎಮದು ಹೇಳಿರುವ ಬ್ರಹ್ಮಾತ್ಮಭಾವವು ಯಾವದೊಂದು ಅವಸ್ಥೆಯ ನಿಮಿತ್ತದಿಂದಲೂ ಹೇಳಿದದಲ್ಲ. (ಬ್ರ. ಸೂ. ಭಾ 3-1-14)
4. ಜ್ಞಾನಫಲವು ಪ್ರತ್ಯಕ್ಷವಾಗಿರುವದರಿಂದಲೂ ಫಲವಾಗಲಾರದೆಂಬ ಶಂಕೆಯು ಹೊಂದುವದಿಲ್ಲ..... 'ಅದೇ ನೀನಾಗಿರುವೆ' ಎಂಬ ವಾಕ್ಯದ ಅರ್ಥವನ್ನು 'ನೀನು ಸತ್ತಬಳಿಕ ಅದಾಗುವೆ' ಎಂದು ಮಾರ್ಪಡಿಸುವದಕ್ಕೆ ಆಗಲಾರದಷ್ಟೆ (ಬ್ರ. ಸೂ. ಭಾ 3-3-33)
5. ಆದ್ದರಿಂದ ಇಲ್ಲಿಯೇ ಬ್ರಹ್ಮವಾಗಿದ್ದು ಬ್ರಹ್ಮದಲ್ಲಿ ಸೇರಿ ಹೋಗುತ್ತಾನೆಯೇ ಹೊರತು ಶರೀರವು ಬಿದ್ದಬಳಿಕವಲ್ಲ; ಏಕೆಂದರೆ ಜ್ಞಾನಿಯು ಬದುಕಿರುವಾಗ ಒಂದು ರೂಪದಲ್ಲಿದ್ದು ಸತ್ತಬಳಿಕ ಮತ್ತೊಂದು ರೂಪವನ್ನು ತಳೆಯುವದಾಗಿದ್ದರೆ ಆತ್ಮೈಕತ್ವವೆಂಬ ಸರ್ವೋಪನಿಷತ್ತುಗಳ ತಾತ್ಪರ್ಯವೇ ಬಾಧಿತವಾಗುವದು ( ಬೃ, ಭಾ 4-4-6)
    ದ್ವೈತವು ದೇಶಕಾಲವಸ್ತುಗಳ ಪರಿಚ್ಛೇದವಿಲ್ಲದೆ ತೋರುವದಿಲ್ಲ. ಆದ್ದರಿಂದ ದ್ವೈತವೇ ವೈದಿಕಸಿದ್ಧಾಂತವೆಂದು ನಂಬಿರುವವರು ಒಬ್ಬರೊಡನೊಬ್ಬರು ವಾದವಿವಾದಗಳನ್ನು ಮಾಡುತ್ತಿರುವದು ಸಹಜವಾಗಿರುತ್ತದೆ ಆದ್ದರಿಂದ ದ್ವೈತಸಿದ್ಧಾಂತಿಗಳು ಬಂಧಕ್ಕೆ ಕಾರಣವನ್ನೂ ಬಂಧನಾಶಕ್ಕೆ ಸಾಧನವನ್ನೂ ಮುಕ್ತಿಯು ಯಾವಾಗ, ಎಲ್ಲಿ, ಹೇಗೆ ಉಂಟಾಗವದೆಂಬುದನ್ನು ಉಪಾದನೆಮಾಡಿಕೊಡುವದಕ್ಕೆ ಸಿದ್ಧರಾಗಿರಬೇಕಾದದ್ದು ಸಹಜವಾಗಿರುತ್ತದೆ.
    ಆದರೆ ಅದ್ವೈತವೆಂಬುದೊಂದು ದೇಶಕಾಲವಸ್ತುಗಳ ಕಟ್ಟಗೊಳಪಡುವ ತತ್ತ್ವವಲ್ಲ, ಆದ್ದರಿಂದ ಈಗ ದ್ವೈತಾವಸ್ಥೆ, ಆಗ ಅದ್ವೈತಾವಸ್ಥೆ ಎನ್ನುವದು ಅವಿವೇಕವೇ ಆಗುವದು. ಇದನ್ನು ಬಲ್ಲ ಸಂಪ್ರದಾಯಪ್ರನರ್ತಕ್ರಾದ ಶ್ರೀ ಗೌಡಪಾದರಂಥ ಆಚಾರ್ಯರು ಸೃಷ್ಟಿಯಲ್ಲಿ ಪ್ರಲಯವಿಲ್ಲ, ಬದ್ಧನಿಲ್ಲ, ಸಾಧಕನೂ ಇಲ್ಲ, ಮುಮುಕ್ಷುವಿಲ್ಲ, ಮುಕ್ತನೂ ಇಲ್ಲ ಎಂಬುದೇ ಪರಮಾರ್ಥವು ಎಂದು ಸಾರಿರುತ್ತಾರೆ. ಆದ್ದರಿಂದ ಆ ಸಿದ್ಧಾಂತದಲ್ಲಿ ಈ ಪರಮಾರ್ಥಜ್ಞಾನವೇ ನಿಜವಾದ ಮೋಕ್ಷವೆಂದು ನಿರ್ವಿವಾದವಾಗಿ ಏರ್ಪಡುತ್ತದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ