ಮಹಾಮಸ್ತಕಾಭಿಷೇಕ


    ಜಗತ್ತಿನಲ್ಲಿ ಪ್ರತಿಮೆಗಳು ಪ್ರತೀಕಗಳು ಹಲವಾರು ನ್ಯೂಯಾರ್ಕಿನ ಸ್ವಾತಂತ್ರ್ಯ ದೇವಿ, ಜಪಾನಿನ ಬುದ್ಧ, ಇವುಗಳ ಮಧ್ಯೆ ಶ್ರವಣ ಬೆಳಗೊಳದ ಬಾಹುಬಲಿ ವಿಗ್ರಹವೂ ಇದೆ ಎಂದರೆ ಇಲ್ಲಿನ ಪ್ರಾಚೀನತೆ ಪಾವಿತ್ರ್ಯಗಳಿಂದಾಗಿ ಇದಕ್ಕೆ ಪ್ರಾಮುಖ್ಯ ಪ್ರಾಧಾನ್ಯ ಹೆಚ್ಚು.
    ಬಾಹುಬಲಿ ವಿಗ್ರಹಗಳೇ ಹಲವಾರು, ಕಾರ್ಕಳ, ವೇಣೂರು, ಮೂಡಬಿದಿರೆ, ಧರ್ಮಸ್ಥಳ - ಮೊದಲಾದವೆಲ್ಲ ಕಂಡುಬರುವ ವಿಗ್ರಹಗಳೂ ಐತಿಹಾಸಿಕವೇ ಆದ್ರೂ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹದ ಹಿನ್ನೆಲೆಯೇ ಬೇರೆ, ಅದರ ಎತ್ತರವೇ ಬೇರೆ.
ಔನ್ನತ್ಯಮುಂ ನುತಸೌಂದರ್ಯಮುಂ,
ಊರ್ಜಿತ ಅತಿಶಯಮುಂ ತನ್ನಲ್ಲಿ
ನಿಂದಿರ್ದುದೇಂ ಕ್ಷಿತಿ ಸಂಪೂಜ್ಯವೋ
ಗೊಮ್ಮಟೇಶ್ವರ ಜಿನ ಶ್ರೀ ರೂಪಂ
- ಬೊಪ್ಪಣ್ಣ ಪಂಡಿತನಿಂದ ಈ ರೀತಿಯಾಗಿ ಕೀರ್ತಿಸಲ್ಪಟ್ಟ ಮೂರ್ತಿಯನ್ನು ಗಂಗ ರಾಚಮಲ್ಲನ ಸೇನಾಧಿಪತಿ ಚಾವುಂಡರಾಯ ಕ್ರಿ.ಶ. 981ನೇ ವರ್ಷದಲ್ಲಿ ಪ್ರತಿಷ್ಠಾಪಿಸಿದ್ದಾಗಿ ಜಗತ್ಪ್ರಸಿದ್ಧವಾಗಿದೆ. ಇಂದ್ರಗಿರಿಯ ಬೆಟ್ಟದ ತುದಿಯಲ್ಲಿ ನಲವತ್ತು ಕಿಲೋಮೀಟರಿಗೂ ಹೆಚ್ಚು ದೂರಕ್ಕೂ ಬರಿಕಣ್ಣಿಗೆ ಕಾಣುವ ವಿಗ್ರಹ, ತನ್ನ ಸೌಂದರ್ಯದಿಂದ, ಸಮತೂಕದ ಅವಯವ ವಿವರದಿಂದ, ತ್ಯಾಗ ವೈರಾಗ್ಯಗಳ ವಿಪುಲ ಪರಿಪುಷ್ಟಿಯಿಂದ ಮನಸ್ಸಿನಲ್ಲೂ ಪಡಿಮೂಡುತ್ತವೆ. (ಬಾಹುಬಲಿ ಮನ್ಮಥನೇ ಎಂಬುದು ಬೇರೆಯೇ ವಿಷಯ)
    ಬಾಹುಬಲಿ ಆದಿ ತೀರ್ಥಂಕರ ವೃಷಭದೇವನ ದ್ವಿತೀಐ ಪುತ್ರ. ಭರತ ಚಕ್ರಿಯ ತಮ್ಮ ಚಕ್ರರತ್ನ ಹುಟ್ಟಿದ ಭಂಡಾರವನ್ನು ಹೊಂದಿದ ಭರತ ದಿಗ್ವಿಜಯಕ್ಕೆ ಹೊರಟಾಗ ಧ್ರಾತಲವೇ ಅವನ ಪಾದಾಕ್ರಾಂತವಾದರೂ ಬಾಹುಬಲಿ ಎದುರು ನಿಂತ. ¯ಅಯ್ಯನಿತ್ತುದುಮನ್ ಆನ್ ನಿನಗೆ ಇತ್ತೆನೆ¯ ನೀನ್ ಒಲಿದ ಧರೆಗಂ ಲತಾಂಗಿಗಂ ಆಟಿಸಿದಂದು ನೆಗಳ್ತೆ, ಮಾಸದೇ, ನೆಲೆಸುಗೆ ನಿನ್ನ ವಕ್ಷದೊಳೆ..... ಭಟ ಖಡ್ಗ ಮಂಡಲೋತ್ಪಲ ವನ ವಿಭಮತ್ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಎನ್ನುತ್ತ ಭರತನಿಗೆ ರಾಜ್ಯವನ್ನೊಪ್ಪಿಸಿ ವಿರಾಗಿಯಾಗಿ ನಿಂದ ಅಲ್ಲೂ ಒಂದು ಚೂರು ಕೊರತೆ, ಅದು ಪುರುದೇವನಿಂದಲೇ ತೀರಿತು. ಬಾಹುಬಲು ಧರಾಪೂಜ್ಯನಾದ.
    ಚಾವುಂಡರಾಯನ ಕೈ ಖಡ್ಗವನ್ನೇ ಅಲ್ಲ ಕಂಟವನ್ನೂ ಹಿಡಿದು ಪಳಗಿದ್ದಿತು. ತ್ರಿಪಷ್ಟಿ ಶಲಾಕಾ ಪುರುಷರ ಕಥೆಯನ್ನು ಚಾವುಂಡರಾಯ ಪುರಾಣವಾಗಿ ಕನ್ನಡಿಗರಿಗೆ ಒದಗಿಸಿಕೊಟ್ಟ ಹಿರಿಯ ಜೀವ ಅದು. ಜಿನಧರ್ಮದಲ್ಲಿ ಅದ್ವಿತೀಯ ಆಸಕ್ತಿ. ರಾಷ್ಟ್ರಕೂಟರ ನಿರ್ಮಾಣ ಉತ್ಸಾಹವೂ ಚಾವುಂಡರಾಯನಿಗೆ ಹೃದಯಗತವಾಗಿತ್ತು. ತಾಯಿ ಕಾಳಲಾ ದೇವಿಯು ಪೌದನ ಪುರದಲ್ಲಿ ಭರತ ನಿರ್ಮಿಸಿದ ಐನೂರು ಬಿಲ್ಲಿನೆತ್ತರದ ಬಾಹುಬಲಿಯ ಮೂರ್ತಿಯನ್ನು ನೋಡಬೇಕೆಂಬಾಸೆ ಹೊಂದಿದಳೂ ಅವನನ್ನು ಕಾಣಲೇಬೇಕು ನಂತರವೇ ಮಿಕ್ಕದ್ದೆಲ್ಲ ಎನ್ನುವ ಭಾವ. ತಾಯ ಆಸೆಯನ್ನು ತನ್ನದೇ ಆಸೆಯನ್ನಾಗಿಸಿಕೊಂಡ ಗೊಮ್ಮಟಸಾರ ಕೃತಿಗೆ ಕನ್ನಡ ಟೀಕುಬರೆದ ಚಾವುಂಡರಾಯ - ಪರಿಣಾಮವಾಗಿ ಮೂಡಿತ್ತೊಂದು ಅದ್ಭುತ ಭವ್ಯ ವಿಗ್ರಹ ಇಂದ್ರಗಿರಿಯ ನೆತ್ತಿಯ ಮೇಲೆ.
    ಅತುಲಿತವಾದ ಪರಾಕ್ರಮಿ 'ಮಹಾವೀರ'ನಿಗೆ ಅವರ ಕುಟುಂಬವು ಸತತವಾಗಿ ಅಭ್ಯುದಯವನ್ನು ತಳೆದದ್ದರಿಂದ ಅವರಿಗೆ 'ವರ್ಧಮಾನ', ಎಂಬ ಹೆಸರು ಬಂದಿತ್ತು¯ ಅವರ ಅಪರಿಮಿತ ಬುದ್ಧಿಶಕ್ತಿಯಿಂದ ಅವರಿಗೆ 'ಸನ್ನತಿ' ಎಂಬ ಮತ್ತೊಂದು ಹೆಸರು ಬಂದಿತ್ತು.
    ಮಹಾವೀರರು ರಾಜಕುಮಾರರಾದರೂ ತಮ್ಮ ಮುವತ್ತನೆಯ ವಯಸ್ಸಿನಲ್ಲಿ ವೈರಾಗ್ಯದಿಂದ ಸಂಪತ್ತನ್ನೆಲ್ಲ ಬಡವರಿಗಿತ್ತು ಧ್ಯಾನಮಗ್ನರಾದರು, ಹನ್ನೆರಡು ವರ್ಷಗಳ ತಪಸ್ಸನ್ನು ಆಚರಿಸಿದ ಬಳಿಕ ಸರ್ವಜ್ಞರಾಗಿ ಊರಿಂದೂರಿಗೂ ಪಟ್ಟಣದಿಂದ ಪಟ್ಟಣಕ್ಕೂ ಸಂಚರಿಸುತ್ತಾ ಜನರಿಗೆ ತತ್ತ್ವೋಪದೇಶವನ್ನು ಮಾಡುತ್ತಾ ಮೂವತ್ತು ವರ್ಷಗಳವರೆಗೆ ಸಂಚರಿಸಿದರೂ ಕೊನೆಗೆ ಬಿಹಾರಿನ ಪಾವಾಪುರಿ ಎಂಬಲ್ಲಿ ಕೈವಲ್ಯವನ್ನು ಹೊಂದಿದರು.
    ಮಹಾವೀರರು ಜಗತ್ತಿಗೆ ಮಾಡಿದ ಪರಪೋಪಕಾರಗಳಲ್ಲಿ ಅಹಿಂಸೆಯ ಉಪದೇಶವು ಬಹುಮುಖ್ಯವಾದದ್ದು. ಪ್ರತಿಯೊಬ್ಬನೂ ತನ್ನ ಕೈಯಲ್ಲಾದ ಮಟ್ಟಿಗೆ ಅಹಿಂಸೆಯನ್ನು ಆಚರಿಸಬೇಕೆಂಬುದೇ ಅವರ ಸಂದೇಶವು ಅಹಿಂಸೆಯೇ ಪರಮಧರ್ಮವು ಎಂಬ ತತ್ತ್ವಕ್ಕೆ ಅವರು ಜೀವಂತ ಉದಾಹರಣೆಯಾಗಿರುತ್ತಿದ್ದರು.
    ಇಂದಿನ ಭೂಮಂಡಲದಲ್ಲಿ ಹಿಂಸೆಯು ತಾಂಡವವಾಡುತ್ತಿದೆ. ಯುದ್ಧದಿಂದ ಲಕ್ಷಗಟ್ಟಲೆಯ ಜನರು ಅನಾವಶ್ಯಕವಾಗಿ ಪ್ರಾಣವನ್ನು ಬಲಿಕೊಡುತ್ತಿದ್ದಾರೆ. ಆಹಾರಕ್ಕಾಗಿ ಲಕ್ಷಗಟ್ಟಲೆಯ ಪ್ರಾಣಿಗಳ ವಧೆಯಾಗುತ್ತಿದೆ. ನಮ್ಮ ಸುತ್ತು ಮುತ್ತಲಿನ ಪ್ರಾಣಿಗಳ ವಿಷಯದಲ್ಲಿ ಕನಿಕರವಿಲ್ಲದೆ, ಅವುಗಳನ್ನು ನಾವು ಹಿಂಸೆ ಮಾಡುತ್ತಿರುವದು ಪ್ರಕೃತಿಮಾತೆಗೆ ಅತ್ಯಂತ ಅಸಹ್ಯವೆನಿಸಿರುತ್ತದೆ. ನಾಗರಿಕರೆಂದು ಜಂಭಕೊಚ್ಚಿಕೊಳ್ಳುವ ನಾವುಗಳೆಲ್ಲ್ರೂ ಶರೀರದಿಂದಲೂ ಮಾತಿನಿಂದಲೂ ಮನಸ್ಸಿನಿಂದಲೂ ಸರ್ವತ್ರ ಹಿಂಚಾಪ್ರಚಾರಕರಾಗಿರುತ್ತೇವೆ. ಅಹಿಂಸೆಯ ಹೆಸರಿನಲ್ಲಿ ಕೂಡ ಹಿಂಸೆಯು ನಡೆಯುತ್ತಿದೆ, ನಮ್ಮಗಳ ನಡುವೆ!
    ಮಾನವನ ಹೃದಯದಲ್ಲಿ ಮಹಾವೀರನ ಪುನರವತಾರವಾಗಲಿ! ಚಿತ್ತಕ್ಕೆ ಕಲ್ಮಶವನ್ನುಂಟುಮಾಡುವ ಪಾಪಗಳಿಗೆಲ್ಲ ಮೂಲವು ಹಿಂಸೆಯೇ ಎಂಬ ಘನ ತತ್ತ್ವವು ನಮ್ಮಗಳಿಗೆ ಮನದಟ್ಟಾಗಲಿ! ಈ ಸುಸಂದರ್ಭದಲ್ಲಿ ಅಹಿಂಸೆಯ ವಿಧಿಮುಖಸ್ವರೂಪವಾದ ಸರ್ವಭೂತಪ್ರೇಮವು ನಮ್ಮ ಹೃದಯದಲ್ಲಿ ಅಂಕುರಿಸಿ ಬೆಳೆಯುವಂತಾಗಲಿ, ಶರೀರದಿಂದಾಗಲಿ, ಮಾತಿನಿಂದಲಾಗಲಿ ಮನಸ್ಸಿನಿಂದಲಾಗಲಿ ಯಾರೊಬ್ಬರಿಗೂ ಹಿಂಸೆಯನ್ನು ಮಾಡುವ ಪ್ರಕೃತಿಯೇ ನಮ್ಮಲ್ಲಿ ಉಂಟಾಗದಂತೆ  ಮಹಾವೀರಸ್ವಾಮಿಗಳಂಥ ಮಹಾಮಹಿಮರ ಅನುಗ್ರಹಿಸಲಿ.
    ಅಂತಹ ಬಾಹುಬಲಿಗೆ ಹನ್ನೆರಡು ವರ್ಷಕ್ಕೆ ಒಮ್ಮೆ ಮಹಾಮಸ್ತಕಾಭಿಷೇಕ ಕ್ಷೀರ, ಗಂಧ, ಪವಿತ್ರ ನದೀ ತೀರ್ಥಗಳಿಂದ ಅಭಿಷೇಕವಾಗುವುದು. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಜೈನ ಹಬ್ಬ. ಈ ವರ್ಷ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜೀ ಮತ್ತು ಸಹಸ್ರಾರು ಜೈನ ಮುನಿಗಳ ನೇತೃತ್ವದಲ್ಲಿ 57 ಅಡಿಯ ಬಾಹುಬಲಿಯ ಪ್ರತಿಮೆಗೆ ಗೌರವ ನಡೆಯುತ್ತದೆ. ಕಾರ್ಯಕ್ರಮದ ಉದ್ಘಾಟನೆ ಫೆಬ್ರವರಿ 7ರಂದು ನಡೆಯಲಿದೆ. ಪಂಚ ಕಲ್ಯಾಣ ಪ್ರತೀಕ್ಷಾ ಮಹೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಫೆಬ್ರವರಿ 8 ರಿಂದ 16ರ ನಡುವೆ ನಡೆಯಲಿದೆ. ಪ್ರತಿಮೆಯ ಅಭಿಷೇಕ 17ರಿಂದ ಪ್ರಾರಂಭವಾಗಿ 25ರಂದು ಕೊನೆಗೊಳ್ಳುವುದು. ಸಮಾರೋಪ ಮರುದಿನ ನಡೆಯಲಿದೆ. ಎಲ್ಲಾ ದಿನಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಮಹಾಮಸ್ತಕಾಭಿಷೇಕದಲ್ಲಿ ಭಗವಾನ್ ಬಾಹುಬಲಿಯನ್ನು ನೋಡುವುದೊಂದು ಆಧ್ಯಾತ್ಮಕ ಅನುಭವ ಅದನ್ನು ಹೊಂದಲು ಯಾತ್ರಿಕ ಭಕ್ತ ಗಣ ಉತ್ಸಾಹ ಭರದಲ್ಲಿ ನಿರೀಕ್ಷಿಸಿದ್ದು ದೇಶ ವಿದೇಶಗಳಿಂದ ಭಕ್ತರು ಶ್ರವಣಬೆಳಗೊಳದ ಕಡೆ ಹರಿದು ಬರುತ್ತಿದ್ದು ಅವರನ್ನು ಸ್ವಾಗತಿಸಲು ಮಹಾಮಸ್ತಕಾಭಿಷೇಕ ಸಮಿತಿ ಸಕಲ ರೀತಿಯಲ್ಲೂ ಸನ್ನದ್ಧವಾಗಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ