ನಕ್ಷತ್ರ ಫಲಂ ಜ್ಯೋತಿಷ್ಯ
ಪ್ರಿಯ ಭೂಷಣಸ್ಸು ರೂಪಃ |
ಸುಭಗೋದಕ್ಷೋಶ್ವಿನೀಷು ಮತಿಮಾಂಶ್ಚ ||
ಕೃತ ನಿಶ್ಚಯ ಸತ್ಯಾರು |
ಗ್ದಕ್ಷಸ್ಸುಖಿತಶ್ಚ ಭರಣೀಷು ||
ಅಶ್ವಿನೀ ನಕ್ಷತ್ರದಲ್ಲಿ ಹುಟ್ಟಿದವನು ಅಲಂಕಾರ ಪ್ರಿಯನೂ ಸುಂದರನೂ ಮನೋಹರನೂ ಸಮರ್ಥನೂ ಬುದ್ಧವಂತನೂ ಆಗುತ್ತಾನೆ.
ಭರಣಿ ನಕ್ಷತ್ರದಲ್ಲಿ ಹುಟ್ಟಿದವನು ಧೃಡಸಂಕಲ್ಪವುಳ್ಳವನೂ ಸತ್ಯವಂತನೂ ರೋಗವರ್ಜಿತನೂ ದಕ್ಷನೂ ಚಾತುರ್ಯವುಳ್ಳವನೂ ಸುಖವಂತನೂ ಆಗುತ್ತಾನೆ.
ಬಹುಭುಕ್ಪರದಾರರತ |
ಸ್ತೇಜಸ್ವೀ ಕೃತ್ತಿಕಾಸು ವಿಖ್ಯಾತಃ ||
ರೋಹಿಣ್ಯಾಂ ಸತ್ಯಶುಚಿಃ
ಪ್ರಿಯಂ ವದಸ್ಥಿರಮತಿಸ್ಸು ರೂಪಶ್ಚ ||
ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದವನು, ಹೆಚ್ಚು ಊಟ ಮಾಡುವವನೂ ಪರದಾರರತನೂ ತೇಜಸ್ವಿಯೂ ಪ್ರಸಿದ್ಧನೂ ಆಗುತ್ತಾನೆ.
ರೋಹಿಣಿಯಲ್ಲಿ ಹುಟ್ಟಿದವನು ಸತ್ಯವಂತನೂ ಶುಚಿಯೂ ಪ್ರಿಯವಾದ ಮಾತುಗಳನ್ನಾಡುವವನೂ ದೃಡಮತಿಯೂ ಸುಂದರನೂ ಆಗುತ್ತಾನೆ.
ಚಪಲ ಶ್ಚತುರೋಭೀರುಃ |
ಪಟುರುತ್ಸಾಹೀ ಧನೀಮೃಗೇ ಭೋಗೀ ||
ಶಠಗರ್ವಿತೋ ಕೃತಘ್ನೋ |
ಹಿಂಸ್ರಃ ಪಾಪಶ್ಚ ರೌದ್ರರ್ಕ್ಷೇ ||
ಮೃಗಶಿರ ನಕ್ಷತ್ರದಲ್ಲಿ ಹುಟ್ಟಿದವನು ಚಪಲನೂ ಚತುರನೂ ಭಯಶೀಲನೂ ಚಟುವಟಿಕೆಯುಳ್ಳವನೂ ಉತ್ಸಾಹವುಳ್ಳವನೂ ಧನವಂತನೂ ಭೋಗಿಯು ಆಗುತ್ತಾನೆ.
ಆರ್ದ್ರ ನಕ್ಷತ್ರದಲ್ಲಿ ಹುಟ್ಟಿದವನು ಶರನೂ ಗರ್ವಿತನೂ ಮಾಡಿದ ಉಪಕಾರವನ್ನು ಸ್ಮರಿಸದವನೂ ಹಿಂಸಾಶೀಲನೂ ಪಾಪಿಯೂ ಆಗುತ್ತಾನೆ.
ದಾಂತಃ ಸುಖೀ ಸುಶೀಲೋ |
ದುರ್ಮೇಧಾ ರೋಗಭಾ ಕ್ಪಿಪಾಸುಶ್ಚ ||
ಅಲ್ಪೇನ ಚ ಸಂತುಷ್ಟಃ ಪುನರ್ವಸೌ |
ಜಾಯತೇ ಮನುಜಃ ||
ಪುನರ್ವಸು ನಕ್ಷತ್ರದಲ್ಲಿ ಹುಟ್ಟಿದವನು ದಮನಶೀಲನೂ ಸುಖಿಯೂ ಸುಶೀಲನೂ ಮೇಧಾವಿಯಲ್ಲದವನೂ ರೋಗಭಾಗಿಯೂ ನೀರಡಿಕೆಯುಳ್ಳವನೂ ಸ್ವಲ್ಪದಿಂದಲೇ ಸಂತುಷ್ಟನೂ ಆಗುತ್ತಾನೆ.
ಶಾಂತಾತ್ಮಾ ಸುಭಗಃ ಪಂಡಿತೋ |
ಧನಿಧರ್ಮ ಸಂಶ್ರಿತಃ ಪುಷ್ಯೇ ||
ಶಠಸರ್ವ ಭಕ್ಷ ಪಾಪಾಃ |
ಕೃತಘ್ನ ಧೂರ್ತೌ ಚ ಭೌಜಂಗೇ ||
ಪುಷ್ಯಾ ನಕ್ಷತ್ರದಲ್ಲಿ ಹುಟ್ಟಿದವನು ಶಾಂತವಾದ ಆತ್ಮವುಳ್ಳವನೂ ಸುಭಗನೂ ಪಂಡಿತನೂ ಧನಿಯೂ ಧರ್ಮವನ್ನು ಆಶ್ರಯಿಸಿರುವವನೂ ಆಗುತ್ತಾನೆ.
ಆಶ್ಲೇಷಾ ನಕ್ಷತ್ರದಲ್ಲಿ ಹುಟ್ಟಿದವನು ಶರನೂ ಎಲ್ಲವನ್ನೂ ಭಕ್ಷಿಸುವವನೂ ಪಾಪಿಯೂ ಕೃತಘ್ನನೂ ಆಗುತ್ತಾನೆ.
ಬಹುಭ್ರತ್ಯ ಧನೋಭೋಗೀ |
ಸುರಪಿತೃಭಕ್ತೋ ಮಹೋದ್ಯಮಃ ಪಿತ್ರ್ಯೇ ||
ಪ್ರಿಯವಾಗ್ದಾತಾ ದ್ಯುತಿಮಾ |
ನಟನೋ ನೃಪ ಸೇವಕೋ ಭಾಗ್ಯೇ ||
ಮಘಾ ನಕ್ಷತ್ರದಲ್ಲಿ ಹುಟ್ಟಿದವನು ಹೆಚ್ಚು ಭ್ರತ್ಯರುಳ್ಳವನೂ ಧನವಂತನೂ ಭೋಗಿಯೂ ದೇವರು ಪಿತೃಗಳಲ್ಲಿ ಭಕ್ತಿಯುಳ್ಳವನೂ ಮಹೋತ್ಸಾಹಿಯೂ ಆಗುತ್ತಾನೆ.
ಹುಬ್ಬಾ ನಕ್ಷತ್ರದಲ್ಲಿ ಹುಟ್ಟಿದವನು ಪ್ರಿಯವಾದ ಮಾತುಗಳುಳ್ಳವನೂ ದಾನಶೀಲನೂ ಕಾಂತಿವಂತನೂ ಸಂಚರಣ ಪ್ರಿಯನೂ ರಾಜಸೇವಕನೂ ಆಗುತ್ತಾನೆ.
ಸುಭಗೋ ವಿದ್ಯಾಪ್ತ ಧನೋ |
ಭೋಗೀ ಸುಖಭಾಗ್ವ್ದಿತೀಯ ಫಲ್ಗುನ್ಯಾಂ ||
ಉತ್ಸಾಹೀ ದೃಷ್ಟಃ ಪಾನಪೋ |
ಘೃಣೀತಸ್ಕರೋ ಹಸ್ತೇ ||
ಉತ್ತರಾ ನಕ್ಷತ್ರದಲ್ಲಿ ಹುಟ್ಟಿದವನು ಸುಂದರನೂ ವಿದ್ಯೆಯಿಂದ ಧನಾರ್ಜನೆ ಮಾಡುವವನೂ ಭೋಗಿಯೂ ಸುಖವಂತನೂ ಆಗುತ್ತಾನೆ.
ಹಸ್ತಾ ನಕ್ಷತ್ರದಲ್ಲಿ ಹುಟ್ಟಿದವನು ಉತ್ಸಾಹಿಯೂ ಧೈರ್ಯಶಾಲಿಯೂ ಪೇಯವಸ್ತು ಕುಡಿತದಲ್ಲಿ ನಿರತನೂ (ನಿರ್ದಯಿಯಲ್ಲದವನೂ) ದಯಾಶೀಲನೂ ಕಳ್ಳನೂ ಆಗುತ್ತಾನೆ.
ಚಿತ್ರಾಂಬರ ಮಾಲ್ಯಧರಃ |
ಸುಲೋಚನಾಂ ಗಶ್ಚ ಭವತಿ ಚಿತ್ರಾಯಾಂ ||
ದಾಂತೋವಣಿಕ್ಕೃಪಾಲುಃ ಪ್ರಿಯ |
ವಾಗ್ಧರ್ಮಾಶ್ರಿತಃ ಸ್ವಾತೌ ||
ಚಿತ್ರಾ ನಕ್ಷತ್ರದಲ್ಲಿ ಹುಟ್ಟಿದವನು ಚಿತ್ರವಿಚಿತ್ರವಾದ ವಸ್ತ್ರಮಾಲಾದಿಗಳುಳ್ಳವನೂ ಒಳ್ಳೆಯ ಕಣ್ಣು ಮತ್ತು ಅವಯವಗಳುಳ್ಳವನೂ ಆಗಿರುತ್ತಾನೆ.
ಸ್ವಾತಿ ನಕ್ಷತ್ರದಲ್ಲಿ ಹುಟ್ಟಿದವನು ದಮನಶೀಲನೂ (ಇಂದ್ರಿಯ ನಿಗ್ರಹ ಮಾಡುವವನು) ವ್ಯಾಪಾರಿಯೂ ಕೃಪಾಲುವೂ ಪ್ರಿಯವಚನನೂ ಧರ್ಮಕ್ಕೆ ಆಶ್ರಿತನೂ ಆಗುತ್ತಾನೆ.
ಈರ್ಷ್ಯುರ್ಲುಬ್ಧೋ ದ್ಯುತಿಮಾನ್ |
ವಚನ ಪಟುಃ ಕಲಹಕೃದ್ವಿಶಾಖಾಸು ||
ಆಢ್ಯೋ ವಿದೇಶವಾಸೀ |
ಕ್ಷುಧಾಲು ರಟನೋನು ರಾಧಾಸು ||
ವಿಶಾಖೆ ನಕ್ಷತ್ರದಲ್ಲಿ ಹುಟ್ಟಿದವನು ಹೊಟ್ಟೆಕಿಚ್ಚುಳ್ಳವನೂ, ಲೋಭಿಯೂ, ಕಾಂತಿವಂತನೂ, ಮಾತಿನಲ್ಲಿ ಸಮರ್ಧನೂ, ಜಗಳಗಂಟನೂ ಆಗುತ್ತಾನೆ.
ಅನುರಾಧಾ ನಕ್ಷತ್ರದಲ್ಲಿ ಹುಟ್ಟಿದವನು ಧನವಂತನೂ ಪರದೇಶವಾಸಿಯೂ ಹೆಚ್ಚು ಹಸಿವುಳ್ಳವನೂ ಸಂಚಾರಶೀಲನೂ ಆಗುತ್ತಾನೆ.
ಜ್ಯೇಷ್ಠಾಸು ನ ಬಹುಮಿತ್ರಃ |
ಸಂತುಷ್ಟೋ ಧರ್ಮ ವಿತ್ಪ್ರಚುರ ಕೋಪಃ ||
ಮೂಲೇ ಮಾನೀ ಧನವಾನ್ |
ಸುಖೀ ನ ಹಿಂಸ್ರಃ ಸ್ಥಿರೋಭೋಗೀ ||
ಜ್ಯೇಷ್ಠಾ ನಕ್ಷತ್ರದಲ್ಲಿ ಹುಟ್ಟಿದವನು ಹೆಚ್ಚು ಸ್ನೇಹಿತರಿಲ್ಲದವನೂ, ಸಂತುಷ್ಟನೂ ಧರ್ಮಜ್ಞನೂ, ಹೆಚ್ಚಾದ ಕೋಪ ಉಳ್ಳವನೂ ಆಗುತ್ತಾನೆ.
ಮೂಲಾ ನಕ್ಷತ್ರದಲ್ಲಿ ಹುಟ್ಟಿದವನು ಮಾನಿಯೂ ಧನವಂತನೂ ಸುಖಿಯೂ ಹಿಂಸೆ ಪಡುವವನೂ ಸುಸ್ಥಿರನೂ ಭೋಗಿಯೂ ಆಗುತ್ತಾನೆ.
ಇಷ್ಟಾನಂದ ಕಲತ್ರೋ |
ಮಾನೀದೃಢ ಸೌಹೃದಶ್ಚ ಜಲದೈವೇ ||
ವೈಶ್ವೇ ವಿನೀತ ಧಾರ್ಮಿಕ |
ಬಹುಮಿತ್ರ ಕೃತಜ್ಞ ಸುಭಗಾಶ್ಚ ||
ಪೂರ್ವಾಷಾಢಾ ನಕ್ಷತ್ರದಲ್ಲಿ ಹುಟ್ಟಿದವನು ಇಷ್ಟಳಾಗಿಯೂ ಆನಂದಳಾಗಿಯೂ ಇರುವ ಹೆಂಡತಿಯುಳ್ಳವನೂ ಮಾನಿಯೂ ದೃಡವಾದ ಸ್ನೇಹವುಳ್ಳವನೂ ಆಗುತ್ತಾನೆ.
ಉತ್ತರಾಷಾಢಾ ನಕ್ಷತ್ರದಲ್ಲಿ ಹುಟ್ಟಿದವನು ವಿನಯವುಳ್ಳವನೂ ಧಾರ್ಮಿಕನೂ ಅನೇಕ ಮಿತ್ರರುಳ್ಳವನೂ ಕೃತಜ್ಞನೂ ಸುಂದರನೂ ಆಗುತ್ತಾನೆ.
ಶ್ರೀಮಾನ್ ಶ್ರವಣೇ ಶ್ರುತವಾ |
ನುದಾರದಾರೋ ಧನಾನ್ವಿತಃ ಖ್ಯಾತಃ ||
ದಾತಾಚಾಢ್ಯಃ ಶೂರೋ |
ಗೀತಪ್ರಿಯೋ ಧನಿಷ್ಠಾಸು ಧನ ಲುಬ್ಧಃ ||
ಶ್ರವಣ ನಕ್ಷತ್ರದಲ್ಲಿ ಹುಟ್ಟಿದವನು ಶ್ರೀಮಂತನೂ ವೇದಗಳನ್ನರಿತವನೂ, ಉದಾರ ಗುಣವುಳ್ಳ ಹೆಂಡತಿಯುಳ್ಳವನೂ ಧನವಂತನೂ ಪ್ರಖ್ಯಾತನೂ ಆಗುತ್ತಾನೆ.
ಧನಿಷ್ಠಾ ನಕ್ಷತ್ರದಲ್ಲಿ ಹುಟ್ಟಿದವನು ದಾನಶೀಲನೂ ಧನವಂತನೂ ಶೂರನೂ ಗೀತಪ್ರಿಯನೂ ಲೋಭಿಯೂ ಆಗುತ್ತಾನೆ.
ಸ್ಫುಟವಾಗ್ವ್ಯಸನೀ ರಿಪುಹಾ |
ಸಾಹಸಿಕ ಶ್ಯತಭಿಷಜಿ ದುರ್ಗ್ರಾಹ್ಯಃ ||
ಭಾದ್ರಪದಾ ಸೂದ್ವಿಗ್ನಃ |
ಸ್ತ್ರೀ ವಿಜಿತಧನೀ ಪಟುರದಾತಾ ||
ಶತತಾರಾ ನಕ್ಷತ್ರದಲ್ಲಿ ಹುಟ್ಟಿದವನು ಸ್ಪಷ್ಟವಾಗಿ ಮಾತನಾಡುವವನೂ ವ್ಯಸನಿಯೂ ಶತ್ರುಗಳನ್ನು ಧ್ವಂಸ ಮಾಡುವವನೂ ಸಾಹಸಿಕನೂ ಹಿಡಿತಕ್ಕೆ ಸಿಕ್ಕದವನೂ ಆಗುತ್ತಾನೆ.
ಪೂರ್ವಾಭಾದ್ರಾ ನಕ್ಷತ್ರದಲ್ಲಿ ಹುಟ್ಟಿದವನು ದುಃಖಿತನೂ ಹೆಂಗಸರಿಂದ ಗೆಲ್ಲಲ್ಪಟ್ಟವನೂ ಧನವಂತನೂ ಸಮರ್ಧನೂ ದಾನ ಕೊಡದವನೂ ಆಗುತ್ತಾನೆ.
ವಕ್ತಾ ಸುಖೀ ಪ್ರಜಾವಾನ್ |
ಜಿತಶತ್ರು ಧಾರ್ಮಿಕೋ ದ್ವಿತೀಯಾಸು ||
ಸಂಪೂರ್ಣಾಂಗ ಸ್ಸುಭಗಶ್ಯೂರಃ |
ಶುಚಿರರ್ಥವಾನ್ ಪೌಷ್ಣೇ ||
ಉತ್ತರಾಭಾದ್ರಾ ನಕ್ಷತ್ರದಲ್ಲಿ ಹುಟ್ಟಿದವನು ವಾಚಾಳಿಯೂ ಸುಖಿಯೂ ಮಕ್ಕಳುಳ್ಳವನೂ ಶತ್ರುಗಳನ್ನು ಜಯಿಸಿದವನೂ ಧಾರ್ಮಿಕನೂ ಆಗುತ್ತಾನೆ.
ರೇವತಿ ನಕ್ಷತ್ರದಲ್ಲಿ ಹುಟ್ಟಿದವನು ಸಂಪೂರ್ಣವಾದ ಅವಯವಗಳುಳ್ಳವನೂ ಸುಭಗನೂ ಶೂರನೂ ಶುಚಿಯೂ ಧನವಂತನೂ ಆಗುತ್ತಾನೆ.
#ನಕ್ಷತ್ರ_ಫಲಂ
#ಜ್ಯೋತಿಷ್ಯ_ಜ್ಞಾನ
Comments
Post a Comment