ಪ್ರದಕ್ಷಿಣೆಯ ರಹಸ್ಯ


    "ಮರವ ಕಂಡಲ್ಲಿ ಸುತ್ತುವರಯ್ಯಾ" ಎಂದು ಬಸವಣ್ಣನವರು ತಮ್ಮದೊಂದು ವಚನದಲ್ಲಿ ಹೇಳಿದ್ದಾರೆ. ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಎಷ್ಟೋ ಜನ ಮಹಿಳೆಯರು, ಮಹನೀಯರು ಯಾವುಯಾವುದೋ ಮಂತ್ರವನ್ನು ಹೇಳಿಕೊಳ್ಳುತ್ತಾ ಮರವನ್ನೋ, ದೇವಾಲಯವನ್ನೋ ಅಥವಾ ಕಲ್ಲನಾಗರಗಳನ್ನೋ ಸುತ್ತುವುದನ್ನು ಸಾಮಾನ್ಯವಾಗಿ ಎಲ್ಲರೂ ಕಂಡಿರುತ್ತಾರೆ. ಈ 'ಸುತ್ತುವುದೇ' ಸಂಸ್ಕೃತದಲ್ಲಿ ಪ್ರದಕ್ಷಿಣೆಯಾಗಿದೆ 'ದಕ್ಷಿಣ' ಎಂದರೆ ಬಲಭಾಗ. ಪೂಜ್ಯ ವಸ್ತುಗಳನ್ನು ಅಂದರೆ ಅಶ್ವತ್ಥವೃಕ್ಷ, ದೇವಸ್ಥಾನ, ದೇವಮುರ್ತಿ ಮುಂತಾದವುಗಳನ್ನು ಬಲಗೊಂಡು ಸುತ್ತುವುದಕ್ಕೆ ಪ್ರದಕ್ಷಿಣೆ ಎಂದು ಹೆಸರು. ನವವಿಧ ಭಕ್ತಿಗಳಲ್ಲಿ ಒಂದಾದ 'ವಂದನಾ' ಭಕ್ತಿಯಲ್ಲಿ ಇದೂ ಒಂದು ಪ್ರಭೇದವೆನ್ನಬಹುದು. ಅವರವರ ಉದ್ದೇಶ, ಆರಾಧ್ಯ ದೇವತೆ ಇವುಗಳಿಗೆ ತಕ್ಕಂತೆ ಭಕ್ತರು ಒಂದು ಸಲ, ಮೂರು ಸಲ ಅಥವಾ ನೂರೆಂಟು ಸಲ ಇತ್ಯಾದಿಯಾಗಿ ಪ್ರದಕ್ಷಿಣೆ ಹಾಕುತ್ತಾರೆ. 'ಕರ್ಮಲೋಚನ'ವೆಂಬ ಗ್ರಂಥದಲ್ಲಿ ದೇವಿಗೆ ಒಂದು ಸಲ, ಸೂರ್ಯನಿಗೆ ಏಳು ಸಾರಿ, ವಿನಾಯಕನಿಗೆ ಮೂರು ಸಾರಿ, ವಿಷ್ಣುವಿಗೆ ನಾಲ್ಕುಸಾಲ, ಶಿವನಿಗೆ ಅರ್ಧಸಾರಿ, ಹೀಗೆ ಪ್ರದಕ್ಷಿಣೆ ಹಾಕಬೇಕೆಂದು ಹೇಳಲಾಗಿದೆ. ಒಬ್ಬೊಬ್ಬ ದೇವರಿಗೆ ಇಂತಿಷ್ಟು ಸಾರಿ ಪ್ರದಕ್ಷಿಣ ಹಾಕಬೇಕೆಂಬ ನಿಯಮ. ಇನ್ನು ಈ ಪ್ರದಕ್ಷಿಣೆಯನ್ನು ಹೇಗೆ ಹಾಕಬೇಕೆಂಬುದರ ಬಗ್ಗೆ 'ಕಾಲಿಕಾಪುರಾಣದಲ್ಲಿ' ವರ್ಣನೆಯಿದೆ.
    ಬಲಗೈಯನ್ನು ಇಳಿಬಿಟ್ಟಕೊಂಡು, ತಲೆಯನ್ನು ವಿನಯದಿಂದ ಬಗ್ಗಿಸಿ ದೇವರು ತನ್ನ ಬಲಭಾಗದಿಂದ ಬಗ್ಗಿಸಿ ದೇವರು ತನ್ನ ಬಲಭಾಗದಲ್ಲಿ ಬರುವಂತೆ, ಚಿತ್ತ ಚಾಂಚಲ್ಯವಿಲ್ಲದೆ ಭಕ್ತಿಯಿಂದ ಸುತ್ತಬೇಕು - ಅದು ನಿಜವಾದ ಪ್ರದಕ್ಷಿಣೆ ಎನ್ನಲಾಗಿದೆ.
    ಈ ಪ್ರದಕ್ಷಿಣೆಯ ರಹಸ್ಯವೇನು? ಅದರ ಹಿಂದಿರುವ ನೆಲೆಗಟ್ಟು ಯಾವುದು? ಯಾವ ಉದ್ದೇಶಕ್ಕೆ ಈ ಪದ್ಧತಿ ಬಳಕೆಗೆ ಬಂದಿತು? ಎಂಬಿತ್ಯಾದಿ ಪ್ರಶ್ನೆಗಳೇಳುವುದು ಸಹಜ, ಇವಕ್ಕೆಲ್ಲ ಸೂಕ್ತ ಉತ್ತರಗಳನ್ನು ದೊರಕಿಸುವುದು ಕಷ್ಟವಾದರೂ ಅಸಾಧ್ಯವೇನಲ್ಲ. ಅನೇಕರು ಅನೇಕರೀತಿಯಿಂದ ಈ ಪ್ರದಕ್ಷಿಣೆಯ ಹಿಂದಿನ ತತ್ತ್ವವನ್ನು ವಿಶ್ಲೇಷಿಸಿದ್ದಾರೆ.
    ಈ ಅನಂತವಿಶ್ವದ ಪ್ರತಿಯೊಂದು ಅಣುವು ತನ್ನ ಸುತ್ತಲು ತಿರುಗುತ್ತಲೇ ಇದೆ. ಭೂಮಿ ಮತ್ತು ಇತರ ಗ್ರಹಗಳು ಸೂರ್ಯನ ಸುತ್ತಲೂ, ಸೂರ್ಯ ಗ್ರಹ, ಉಪಗ್ರಹಗಳೊಂದಿಗೆ ಬೇರೊಂದು ಆಕಾಶಕಾಯವನ್ನು, ಅದು ಮತ್ತೊಂದನ್ನು, ಹೀಗೆ ಸಕಲವೂ ಸುತ್ತುತ್ತಲೇ ಇವೆ. ಈ ಸುತ್ತುವಿಕೆಗೆ ಪ್ರೇರಣೆ. 'ಅನಂತಶಕ್ತಿ'ಯೊಂದು ದೊರೆತಿದ್ದು, ಅದನ್ನೇ ನಮ್ಮ ಪೂರ್ವಜರು 'ದೇವರು' ಎಂಬ ಹೆಸರಿನಿಂದ ಕರೆದರು. ಆ 'ದೇವರ' ಕೃಪೆಯನ್ನು ಪಡೆಯಲು ಆತನೇ ರಚಿಸಿದ ಸೃಷ್ಟಿ ನಿಯಮದಂತೆ ಆತನ 'ಮೂರ್ತಿ'ಯನ್ನು ಸುತ್ತು ಹಾಕುವ ಪದ್ಧತಿಯನ್ನು ಜಾರಿಗೆ ತಂದಿರಬಹುದೆಂದು ಕೆಲವರ ಅಭಿಪ್ರಾಯ.
    ಋಗ್ವೇದ ಮತ್ತು ಉಪನಿಷತ್ತುಗಳಲ್ಲಿ ಒಂದು ಸುಂದರ ರೂಪಕವಿದೆ. ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು ಕುಳಿತಿರುವುವು. ಒಂದು ಆ ವೃಕ್ಷದ ಮೇಲಿನ ಟೊಂಗೆಯ ತುದಿಯಲ್ಲಿ ಅತ್ಯಾನಂದವನ್ನು ಅನುಭವಿಸುತ್ತ, ತನ್ನನ್ನೇ ಮರೆತು ಕುಳಿತುಕೊಂಡಿದೆ. ಇನ್ನೊಂದು ಕೆಳಗಿನ ಟೊಂಗೆಯಲ್ಲಿ ಕುಳಿತಿದ್ದು ತುಂಬ ಚಂಚಲವಾಗಿದೆ. ಆ ವೃಕ್ಷದಲ್ಲಿ ಹಣ್ಣುಗಳು ಹೇರಳವಾಗಿದ್ದುದರಿಂದ ಅದು ಆ ಹಣ್ಣುಗಳನ್ನು ಸವಿಯಬೇಕೆಂಬ ಆಸೆಯಿಂದ ಒಂದು ಹಣ್ಣನ್ನು ಕಚ್ಚುತ್ತದೆ ಅದು ತುಂಬ ರುಚಿಯಾಗಿರುತ್ತದೆ. ಆಗ ಸಂತೋಷಪಟ್ಟು ಮತ್ತೊಂದು ಹಣ್ಣನ್ನು ಕಚ್ಚುವುದು ಆದರೆ ಅದು ಕಹಿಯಾಗಿದೆ! ಆಗ ಅದಕ್ಕೆ ಆ ಹಣ್ಣುಗಳ ಬಗ್ಗೆ ಉದಾಸೀನತೆ ಮೂಡುತ್ತದೆ. ಆಗ ಮರದ ತುದಿಯಲ್ಲಿ ಕುಳಿತ ಪಕ್ಷಿಯನ್ನು ನೋಡಿ ತಾನೂ ಅದರಂತಾಗಲು ಬಯಸಿ ಅದರ ಸಮೀಪಕ್ಕೆ ಹಾರುತ್ತಲಿದ್ದಾಗಲೇ ಮತ್ತೊಂದು ಹಣ್ಣು ಕಂಡು ಮೇಲೆ ಕುಳಿತ ಪಕ್ಷಿಯನ್ನು ಮರೆತು ಹಣ್ಣನ್ನು ಕಚ್ಚುವುದು ಹೀಗೆಯೇ ಸಾಗುವುದು ಅದರ ಪಯಣ ಕೊನೆಗೊಮ್ಮೆ ಈ ಸಿಹಿ-ಕಹಿಗಳಿಂದ ಬೇಸತ್ತು ಮೇಲೆ ಕುಳಿತ ಪಕ್ಷಿಯಂತಾಗಲು ಬಯಸಿ, ಅದರ ಹತ್ತಿರ ಬಂದು ಅದನ್ನು ಸುತ್ತತೊಡಗುವುದು, ಸುತ್ತತ್ತಲೇ ಅದರಲ್ಲಿ ಆ ಪಕ್ಷಿಯೇ ತಾನು ಎಂಬ ಭಾವ ಮೂಡಿ ಅದೇ ಇದಾಗುವುದು. ಈ ರೂಪಕದಲ್ಲಿ ಮೇಲಿನ ಟೊಂಗೆಯ ಪಕ್ಷಿ ಶಿವ ಮತ್ತು ಕೆಳಗಿನ ಟೊಂಗೆಯಲ್ಲಿ ಕುಳಿತ ಪಕ್ಷಿಯೆಂದರೆ ಜೀವ, ಸಂಸಾರದ ಸಿಹಿ ಕಹಿ ಫಲಗಳನ್ನು ತಿಂದು ಬೇಸತ್ತು ಆ ಶಿವನಲ್ಲಿ ಐಕ್ಯತೆ ಹೊಂದಲು ಜೀವ ಚಡಪಡಿಸುತ್ತದೆ. ಅದಕ್ಕಾಗಿ ಆ ಶಿವನನ್ನು ಸುತ್ತವರೆಯುತ್ತದೆ. ಕೊನೆಗೆ ಅದೇ ತಾನೆಂಬ ಅರಿವು ಮೂಡಿ ಶಿವನಲ್ಲಿ ಐಕ್ಯವಾಗುತ್ತದೆ. ಜೀವವನ್ನು ಧರಿಸಿದ ದೇಹದ ಮೂಲಕ ಶಿವನನ್ನು ಕಲ್ಪಿಸಿಕೊಂಡ ಮೂರ್ತಿಯನ್ನು ಸುತ್ತುವುದರಿಂದ ಮುಕ್ತಿ ಅಥವಾ ಶಿವನಲ್ಲಿ ಏಕಾತ್ಮತ ಸಾಧ್ಯ ಎಂಬ ಕಾರಣಕ್ಕಾಗಿ ಪ್ರದಕ್ಷಿಣೆಯ ಪದ್ಧತಿಯು ಪ್ರಾಚೀನಕಾಲದಿಂದಲೂ ಬಳಕೆಯಲ್ಲಿ ಬಂದಿತೆಂದು ಬಲ್ಲವರ ಕೆಲವರ ಅಭಿಪ್ರಾಯವಾಗಿದೆ.
    ಪ್ರದಕ್ಷಿಣೆಯ ಅರ್ಥ ನಿರೂಪಿಸುವ ಪ್ರಸಂಗವೊಂದು ರಾಮಾಯಣದಲ್ಲಿದೆ, ರಾಮನು ರಾವಣನನ್ನು ಕೊಂದನಂತರ ವಿಭೀಷಣನನ್ನು ಲಂಕೆಗೆ ರಾಜನನ್ನಾಗಿ ಮಾಡಿ ತನ್ನ ಪತ್ನಿ ಸೀತೆಯಿಂದ ಒಡಗೂಡಿ ಬಂದಾಗ, ವಾನರ ಸೇನೆಗೆಲ್ಲ ತುಂಬ ಸಂತೋಷವಾಯಿತಂತೆ, ಆಗ ಅವರೆಲ್ಲ ರಾಮನ ಜಯ ಜಯಕಾರ ಮಾಡುತ್ತಾ ಅತನ ಸುತ್ತಲು ಸಂತೋಷದಿಂದ ಕುಣಿಯತೊಡಗಿದಂತೆ! ಆ ಸಂತೋಷದ ಅತಿರೇಕದಲ್ಲಿ ಅವರೆಲ್ಲ ತಮ್ಮ  'ದೇಹಾಭಿಮಾನ'ವನ್ನು ಬಿಟ್ಟು ರಾಮನ 'ಜಯಕಾರ'ದ ಆನಂದದಲ್ಲಿ ತಲ್ಲೀನರಾಗಿ ಸುತ್ತುತ್ತಿದ್ದರಂತೆ, ಅದರಿಂದ ರಾಮನು ಸುಪ್ರಿತನಾದನಂತೆ, ಆದುದರಿಂದ ದೇವರನ್ನು ಸುಪ್ರೀತಗೊಳಿಸಲು ನಮ್ಮ ದೇಹಾಬಿಮಾನ ಮರೆತು ಅವನನ್ನು ಕೊಂಡಾಡುತ್ತಾ ಕುಣಿಯಬೇಕು. ಈ ಕುಣಿತವೇ ಪರಿಷ್ಕೃತಗೊಂಡು ಪ್ರದಕ್ಷಿಣೆಯಾಗಿರಬಹುದಲ್ಲವೇ. ಇಂದಿಗೂ ಪಾಂಡುರಂಗನ ಭಕ್ತರು (ಸಂತರು) ಹಾಡುತ್ತ ಕುಣಿಯುತ್ತ ದೇವರನ್ನು ಸುತ್ತವುದನ್ನು ಕಾಣುತ್ತೇವೆ. ಇಲ್ಲ ದೇಹದ ಮೇಲಿನ ಅತಿಯಾದ ಅಭಿಮಾನ ತೊರೆದು 'ದೇವ' ಒಡೆಯನೆಂಬ ತಾನು ದಾಸನೆಂಬ ಭಾವವನ್ನು ಪ್ರಕಟಿಸುವುದೇ ಪ್ರದಕ್ಷಿಣೆಯೆಂಬ ಅರ್ಥ ಸ್ಪಷ್ಟವಾಗುತ್ತದೆ.
    ಗೀತೆಯ 11ನೇ ಅಧ್ಯಾಯದಲ್ಲಿ "ನಮಃ ಪುರಸ್ತಾತ್ ಅಥ ಪೃಷ್ಠತಾತ್| ನಮೋ ಸ್ತುತೇ ಸರ್ವತ ಏವ ಸರ್ವ" ಎಂದು ಹೇಳಲಾಗಿದೆ, ಅಂದರೆ ಸರ್ವತೋಮುಖಿಯಾದ ದೇವನನ್ನು ಮುಂದಿನಿಂದ, ಹಿಂದಿನಿಂದ ಮತ್ತು ಎಲ್ಲಾ ಕಡೆಯಿಂದಲೂ ನಮಿಸುತ್ತೇನೆ ಎಂದರ್ಥ. ಸರ್ವತೋಮುಖನಾದ ಭಗವಂತನ ಸರ್ವಮುಖಗಳಿಗೆ ನಮಿಸಬೇಕಾದರೆ, ಭಕ್ತನು ಆತನ ಸುತ್ತಲೂ ತಿರುಗಲೇಬೇಕಾಗುತ್ತದೆ. ಆದ್ದರಿಂದಲೆ ದೇವರ ಮೂರ್ತಿಗಳಿಗೆ ಪ್ರದಕ್ಷಿಣೆ ಹಾಕುವುದು ಎಂದು ಭಗವಂತನ ಸರ್ವತೋಮುಖತ್ವವನ್ನು ಪ್ರತಿಪಾದಿಸುವುದು ವಾದಿಸುತ್ತಾರೆ.
    ಇನ್ನೂ ಸೂಕ್ಷ್ಮವಾಗಿ ವಿಚಾರಿಸಿದ ಕೆಲವರು "ಪ್ರದಕ್ಷಿಣೆ ಮೋಕ್ಷಮಾರ್ಗ"ದ ಸಂಕೇತ ಎಂದು ಹೇಳುತ್ತಾರೆ. ಶಾಸ್ತ್ರದಲ್ಲಿ ಜೀವನು ಆವಾಗಮನ ಅವಸ್ಥೆಯುಳ್ಳವನು ಎಂದು ಹೇಳಲಾಗಿದೆ. ಆವಾಗಮನ ಎರಡು ವಿಧವಾಗಿದೆ. ಒಂದು ಶುಕ್ಲ ಮಾರ್ಗದ್ದು ಇನ್ನೊಂದು ಕೃಷ್ಣ ಮಾರ್ಗದ್ದು, ಶುಕ್ಲ ಮಾರ್ಗದಿಮದ ಹೋದ ಜೀವ ಕ್ರಮವಾಗಿ ಮೇಲಕ್ಕೆ ಹೋಗುತ್ತ ಮೋಕ್ಷದ ಕಡೆಗೆ ಸಾಗುವುದು. ಕೃಷ್ಣ ಮಾರ್ಗದಿಂದ ಹೋದ ಜೀವ ಪುನರಾವರ್ತನೆಯುಳ್ಳದ್ದು. ಈ ಮಾರ್ಗಗಳನ್ನೆ ದಕ್ಷಿಣ ವಾಮ ಮಾರ್ಗಗಳೆಂದು ಹೆಸರಿಸಲಾಗಿದೆ. ಉಪಾಸಕನು ತನ್ನ ಉಪಾಸ್ಯ ದೇವತೆಯಲ್ಲಿ ಮೋಕ್ಷದ ಅಪೇಕ್ಷೆಯನ್ನು ವ್ಯಕ್ತ ಗೊಳಿಸುವದಕ್ಕಾಗಿ ದಕ್ಷಿಣಾವರ್ತ (ಶುಕ್ಲಮಾರ್ಗ)ವಾಗಿ ಸುತ್ತುವನು. ಬಹು ದುಸ್ತರವಾದ ಈ ಸಂಸಾರಕ್ಕೆ ಪುನಃ ಬರಬಾರದೆಂಬ ಅಪೇಕ್ಷೆ ಇರುವವರು ದೇವರನ್ನು ಬಲಗೊಂಡು ಸುತ್ತಿ, ಅಂದರೆ ಪ್ರದಕ್ಷಿಣೆಯನ್ನು ಹಾಕಿ, ಮೋಕ್ಷಪಡೆಯುತ್ತಾರೆ.
    ಹಳ್ಳಿಯ 'ಗುರು'ವೊಬ್ಬ ಸುಂದರವಾದ ಉದಾಹರಣೆಯ ಮೂಲಕ ಈ ಪ್ರದಕ್ಷಿಣೆಯ ರಹಸ್ಯವನ್ನು ವಿವರಿಸಿದ ಸಂಸಾರ ಒಂದು ಬೀಸುವಕಲ್ಲು. ಅದರ ನಡುವಿನ ಗೂಟವೇ ವಿಶ್ವನಾಥ ಮೇಲಿನಿಂದ ಕಾಳುಗಳನ್ನು ಹಾಕಿದಂತೆ ಅವು ಗೂಟದ ಸುತ್ತಲೂ ಇರುತ್ತವೆ ಆಗ ಅವು ಗಟ್ಟಿಯಾಗಿಯೇ ಇರುತ್ತವೆ ಆದರೆ ಕ್ರಮೇಣ ಅವು ಗೂಟದಿಂದ ದೂರಸರಿದಂತೆ ಒಡೆದು ನುಚ್ಚಾಗಿ, ಹಿಟ್ಟಾಗಿ ಹೋಗುವವು ಹಾಗೆಯೇ ಮನುಷ್ಯರೂ ಕೂಡ ಜಗಕ್ಕೆಲ್ಲ ಆಧಾರವಾಗಿರುವ ಆ ವಿಶ್ವನಾಥನನ್ನು ಮರೆತು ದೂರಸರಿದರೆ ನುಚ್ಚುನೂರಾಗಿ ನಾಶವಾಗುತ್ತಾರೆ, ಯಾರು ಅವನನ್ನೇ ನಂಬಿ ಆತನ ಸಮೀಪದಲ್ಲಿಯೇ ಇದ್ದು, ಆತನನ್ನೇ ಸುತ್ತುತ್ತ ಸ್ಮರಿಸುತ್ತ ಇರುತ್ತರೆಯೋ ಅವರು ಶಾಶ್ವತವಾದ ಸುಖದಲ್ಲಿ ಇರುತ್ತಾರೆ ಆದರೆ ಮನಸ್ಸು ಬಹು ಚಂದಲ ಅದು ಸತತ ದೇವನಾಮಸ್ಮರಣೆಯಲ್ಲಿರಲು ಶಕ್ಯವಿಲ್ಲ, ಅದಕ್ಕಾಗಿ ಭಕ್ತನು ದೇವರ ಸುತ್ತು ಮೂರ್ತಿಗೆ ಪ್ರದಕ್ಷಿಣೆ ಹಾಕುತ್ತಾನೆ. ಆಗ ಆತನ ಮನಸ್ಸು ದೇವರನ್ನೇ ಸುತ್ತುತ್ತಿರುತ್ತದೆ. ಮನಸ್ಸಿನ ಈ ಸಾಧನೆಗಾಗಿ ಪ್ರದಕ್ಷಿಣೆಯ ಪದ್ಧತಿಯು ಬಳಕೆಯಲ್ಲಿ ಬಂದಿತು ಎಂದು ಆ 'ಗುರು' ವಿವರಿಸಿದ.
    ಹೀಗೆ ಅನೇಕರು ಅನೇಕ ತೆರವಾಗಿ ಪ್ರದಕ್ಷಿಣೆಯ ಹಿಂದೆ ಅಡಗಿರುವ ತತ್ತ್ವನ್ನು ವಿವರಿಸಿದರೂ ಕೂಡ, ಇವೆಲ್ಲ ಎಷ್ಟು ಸಮಂಜಸ ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ ಇವೆಲ್ಲವುಗಳಿಗೂ ವೈಜ್ಞಾನಿಕ ಅಡಿಪಾಯವಿದೇಯೇ? ಎಂದರೆ ಕ್ಷಣಹೊತ್ತು ಮೌನವಹಿಸಬೇಕಾಗುತ್ತದೆ. ಪ್ರದಕ್ಷಿಣೆಯ ರಹಸ್ಯವನ್ನು ಕುರಿತು ಶ್ರೀದತ್ತ ಅವಧೂತರು ಹೀಗೆ ಹೇಳುತ್ತಾರೆ - ಮನುಷ್ಯನ ಮಸ್ತಿಷ್ಕದಲ್ಲಿ ಮೂಡಿದ ಪ್ರತಿಯೊಂದು ವಿಚಾರ ಭಾವನೆಗಳನ್ನು ಅವನು ಅದನ್ನು ಅಭಿವ್ಯಕ್ತಗೊಳಿಸಿದ್ದ ಸ್ಥಾನದಲ್ಲಿ ವಲಯ ರೂಪವಾಗಿ ಇದ್ದೇ ಇರುತ್ತವೆ. ಈ ರೀತಿ ಅನೇಕ ಉನ್ನತ ವಿಚಾರ ಭಾವನೆಗಳನ್ನು ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ಅಭಿವ್ಯಕ್ತಗೊಳಿಸುವುದರಿಂದ ಆ ಸ್ಥಳದಲ್ಲಿ ಅಂಥಪವಿತ್ರ ವಿಚಾರಗಳ ಸಾಂದ್ರತೆ ಉಂಟಾಗುವುದು. ಹಾಗೆಯೇ ಅನೇಕ ಸಾಧು ಸತ್ಪುರುಷರು ತಮ್ಮ ಘನವಾದ ಆಧ್ಯಾತ್ಮಿಕ ಸಾಧನೆಯಿಂದ ಆಧ್ಯಾತ್ಮಿಕವಲಯ ನಿರ್ಮಿಸಿರುತ್ತಾರೆ ಇದೇ ದೇವಸ್ಥಾನಗಳ ತಾತ್ವಿಕಸ್ವರೂಪ. ಮಂದಿರವೆಂದರೆ ಕೇವಲ ಕಲ್ಲು ಮಣ್ಣಿನ ಕಟ್ಟಡವಲ್ಲ ಅಥವಾ ಸುಂದರ ವಿಗ್ರಹಗಳ ಸಂಗ್ರಹಾಲಯವೂ ಅಲ್ಲ ದೀರ್ಘಕಾಲದವರೆಗೆ ಸಂಗ್ರಹಿತವಾದ ಆಧ್ಯಾತ್ಮ ವಲಯಗಳ ಘನೀಭೂತ ವಾತಾವರಣವೇ ಮಂದಿರ. ಇಂಥ ಮಂದಿರಗಳಲ್ಲಿ ಪ್ರದಕ್ಷಿಣೆ ಹಾಕುವುದು ಕೂಡ ಒಂದು ಸಾಧನೆಯೇ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆಧ್ಯಾತ್ಮಿಕ ವಲಯಗಳು ಇದ್ದೇ ಇದ್ದು, ಅವು ಆತನ ಸಂಸ್ಕಾರದಿಂದಾಗಿ ದುರ್ಬಲ ಅಥವಾ ಸಬಲವಾಗಿರುತ್ತವೆ. ಇವು ಕೂಡಿ ಒಂದು ನಿರ್ದಿಷ್ಟ ದಿಸೆಯಲ್ಲಿ ತಿರುಗುತ್ತಿರುತ್ತವೆ. ಇವುಗಳನ್ನು 'ವೃಷ್ಟಿ ಆಧ್ಯಾತ್ಮಿಕ ವಲಯ' ಎಂದು ಕರೆಯಬಹುದು. ಸಾಮಾನ್ಯವಾಗಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಇವು ಬಹುಜನರಲ್ಲಿ ಸುಪ್ತವಾಗಿ ಅಥವಾ ದುರ್ಬಲವಾಗಿರುತ್ತವೆ. ಇಂಥವರು ಘನೀಭೂತ ಆಧ್ಯಾತ್ಮ ವಲಯವಿರುವ (ಇವುಗಳನ್ನು ಸಮಷ್ಟಿ ವಲಯಗಳೆಂದು ಕರೆಯಬಹುದು) ಸ್ಥಳಗಳಲ್ಲಿ ದಕ್ಷಿಣಾವರ್ತದಲ್ಲಿ ತಿರುಗುವುದರಿಂದ ಚುಂಬಕದ ನಿಯಮದಂತೆ, ಇವೆರಡರ (ವೃಷ್ಟಿ ಮತ್ತು ಸಮಷ್ಟಿ) ಮಧ್ಯೆ ಸಂಘರ್ಷಣವೇರ್ಪಟ್ಟು, ವ್ಯಕ್ತಿಯ ದುರ್ಬಲ ಆಧ್ಯಾತ್ಮಿಕ ವಲಯಗಳು ಉದ್ದೀಪನಗೊಳ್ಳುವುವು. ಆಗ ಅವರಲ್ಲಿ ಆಧ್ಯಾತ್ಮಿಕ ವಿಚಾರಗಳಿಗೆ ಅನುಕೂಲಕರವಾದ ಸಂಸ್ಕಾರಗಳ ಉತ್ಥಾಪನೆಯಾಗುವುದು. ಅದಕ್ಕಾಗಿ ಭಕ್ತರು ದೇವಾಲಯದಲ್ಲಿ ಪ್ರದಕ್ಷಿಣೆಯನ್ನು ಹಾಕುವರು. ಆ ಮೂಲಕ ಅವರು ಆಧ್ಯಾತ್ಮಿಕ ಸಾಧನೆಯನ್ನು ಮಾಡುವರು.
    ಆದರೆ ಈಶ್ವರ ದೇವಸ್ಥಾನದಲ್ಲಿ ಅರ್ಧ ಪ್ರದಕ್ಷಿಣೆಯ ನಿಯಮವಿದೆ ಅಲ್ಲಿ ಹೀಗೆ ವೃಷ್ಟಿ - ಸಮಷ್ಟಿಗಳ ಘರ್ಷಣೆಗಳುಂಟಾಗುತ್ತದೆಯೆಂಬ ಸಂಶಯ ಬರುತ್ತದೆ. ಇದಕ್ಕೆ ಶಾಸ್ತ್ರದ್ರಷ್ಟಾರರು ಹೇಳುವುದೇನೆಂದರೆ ಅಲ್ಲಿ ಸಮಷ್ಟಿ ಆಧ್ಯಾತ್ಮಿಕ ವಲಯಗಳು ದಕ್ಷಿಣಾವರ್ತ ಹಾಗೂ ವಾಮಾವರ್ತವಾಗಿ ಸುತ್ತುತ್ತಿರುವುದರಿಂದ ಅರ್ಧ ಪ್ರದಕ್ಷಿಣೆಯನ್ನು ಹಾಕಬೇಕಾಗುತ್ತದೆ. ಅದರಿಂದ ಒಮ್ಮೆ ದಕ್ಷಿಣಾವರ್ತವಾಗಿಯೂ ಹಿಂತಿರುಗುವಾಗ ವಾಮಾವರ್ತವಾಗಿಯೂ ಇರುವ ವಲಯಗಳಿಂದ ಘರ್ಷಣೆ ಉಂಟಾಗುತ್ತದೆ. ಅದರಿಂದಾಗಿ ಸುಪ್ತಾವಸ್ತೆಯಲ್ಲಿರುವ ವ್ಯಷ್ಟಿ ಆಧ್ಯಾತ್ಮಕವಲಯಗಳು ಚೇತರಿಸಿಕೊಳ್ಳುತ್ತವೆ.
    ಇನ್ನು ಕೆಲವು ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕಲು ಸ್ಥಳಾವಕಾಶವೇ ಇರುವುದಿಲ್ಲ, ಅಲ್ಲಿ ಉಪಾಸರಕರು ತಾವೇ ದಕ್ಷಿಣಾವರ್ತವಾಗಿ ಸುತ್ತುವುದುಂಟು. ಇದರರ್ಥ ಯಾವ ಪರಮಾತ್ಮನ ಉಪಾಸನೆಯನ್ನು ನಾವು ಮಾಡುವೆವೋ ಅದೇ ಪರಮಾತ್ಮನು ಚೈತನ್ಯ ರೂಪದಲ್ಲಿ ನಮ್ಮ ಹೃದಯದಲ್ಲೂ ವಾಸ ಮಾಡುತ್ತಿರುವನೆಂಬ ಭಾವನೆಯಿಂದ ನಾವೇ ಸುತ್ತುವ ಅಥವಾ ಆತ್ಮ ಪ್ರದಕ್ಷಿಣೆಯ ಪದ್ಧತಿ ವಾಡಿಕೆಯಲ್ಲಿ ಬಂದಿದೆ. ಈ ರೀತಿಯ ಆತ್ಮ ಪ್ರದಕ್ಷಿಣೆಯ ನಮ್ಮ ಅಂತಸ್ಥ ಪರಮಾತ್ಮನ ಅಸ್ಥಿತ್ವದ ಅನುಭವದ ದೃಢಿಕರಣ ಸಾಧನೆಯೂ ಹೌದು.
    ಒಟ್ಟಿನಲ್ಲಿ ಪ್ರದಕ್ಷಿಣೆ ದೇವಸಾಕ್ಷಾತ್ಕಾರಕ್ಕೊಂದು ಸಾಧನೆಯೆಂಬ ಕಲ್ಪನೆಯನ್ನಿಟ್ಟು ಕೊಂಡಾದರೂ ನಾವು ದೇವರನ್ನು ಸುತ್ತಿದರೆ, ಅದರಿಂದ ಪ್ರಯೋಜನ ದೊರತೀತೆ ವಿನಃ, ಅದರಲ್ಲಿ ನಂಬಿಕೆ  ವಿಶ್ವಾಸಗಳಿಲ್ಲದೆ ಪ್ರದಕ್ಷಿಣೆ ಹಾಕಿದರೆ ಸರ್ವಜ್ಞ ಹೇಳಿದಂತೆ ಎತ್ತು ತಾ ಗಾಣವನ್ನು ಹೊತ್ತು ತಿರುಗಿದಂತೆ ವ್ಯರ್ಥವಾದುದೆಂದು ಹೇಳಬಹುದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ