"ಮರವ ಕಂಡಲ್ಲಿ ಸುತ್ತುವರಯ್ಯಾ" ಎಂದು ಬಸವಣ್ಣನವರು ತಮ್ಮದೊಂದು ವಚನದಲ್ಲಿ ಹೇಳಿದ್ದಾರೆ. ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಎಷ್ಟೋ ಜನ ಮಹಿಳೆಯರು, ಮಹನೀಯರು ಯಾವುಯಾವುದೋ ಮಂತ್ರವನ್ನು ಹೇಳಿಕೊಳ್ಳುತ್ತಾ ಮರವನ್ನೋ, ದೇವಾಲಯವನ್ನೋ ಅಥವಾ ಕಲ್ಲನಾಗರಗಳನ್ನೋ ಸುತ್ತುವುದನ್ನು ಸಾಮಾನ್ಯವಾಗಿ ಎಲ್ಲರೂ ಕಂಡಿರುತ್ತಾರೆ. ಈ 'ಸುತ್ತುವುದೇ' ಸಂಸ್ಕೃತದಲ್ಲಿ ಪ್ರದಕ್ಷಿಣೆಯಾಗಿದೆ 'ದಕ್ಷಿಣ' ಎಂದರೆ ಬಲಭಾಗ. ಪೂಜ್ಯ ವಸ್ತುಗಳನ್ನು ಅಂದರೆ ಅಶ್ವತ್ಥವೃಕ್ಷ, ದೇವಸ್ಥಾನ, ದೇವಮುರ್ತಿ ಮುಂತಾದವುಗಳನ್ನು ಬಲಗೊಂಡು ಸುತ್ತುವುದಕ್ಕೆ ಪ್ರದಕ್ಷಿಣೆ ಎಂದು ಹೆಸರು. ನವವಿಧ ಭಕ್ತಿಗಳಲ್ಲಿ ಒಂದಾದ 'ವಂದನಾ' ಭಕ್ತಿಯಲ್ಲಿ ಇದೂ ಒಂದು ಪ್ರಭೇದವೆನ್ನಬಹುದು. ಅವರವರ ಉದ್ದೇಶ, ಆರಾಧ್ಯ ದೇವತೆ ಇವುಗಳಿಗೆ ತಕ್ಕಂತೆ ಭಕ್ತರು ಒಂದು ಸಲ, ಮೂರು ಸಲ ಅಥವಾ ನೂರೆಂಟು ಸಲ ಇತ್ಯಾದಿಯಾಗಿ ಪ್ರದಕ್ಷಿಣೆ ಹಾಕುತ್ತಾರೆ. 'ಕರ್ಮಲೋಚನ'ವೆಂಬ ಗ್ರಂಥದಲ್ಲಿ ದೇವಿಗೆ ಒಂದು ಸಲ, ಸೂರ್ಯನಿಗೆ ಏಳು ಸಾರಿ, ವಿನಾಯಕನಿಗೆ ಮೂರು ಸಾರಿ, ವಿಷ್ಣುವಿಗೆ ನಾಲ್ಕುಸಾಲ, ಶಿವನಿಗೆ ಅರ್ಧಸಾರಿ, ಹೀಗೆ ಪ್ರದಕ್ಷಿಣೆ ಹಾಕಬೇಕೆಂದು ಹೇಳಲಾಗಿದೆ. ಒಬ್ಬೊಬ್ಬ ದೇವರಿಗೆ ಇಂತಿಷ್ಟು ಸಾರಿ ಪ್ರದಕ್ಷಿಣ ಹಾಕಬೇಕೆಂಬ ನಿಯಮ. ಇನ್ನು ಈ ಪ್ರದಕ್ಷಿಣೆಯನ್ನು ಹೇಗೆ ಹಾಕಬೇಕೆಂಬುದರ ಬಗ್ಗೆ 'ಕಾಲಿಕಾಪುರಾಣದಲ್ಲಿ' ವರ್ಣನೆಯಿದೆ. ಬಲಗೈಯನ್ನು ಇಳಿ...