ವಾಮನಜಯಂತೀವ್ರತ

    ವಾಮನಜಯಂತಿಯನ್ನು ಒಂದು ವ್ರತವಾಗಿ ಆಚರಿಸುತ್ತಾರೆ. ಶ್ರೀಮಹಾವಿಷ್ಣವು ಆ ದಿನ ವಾಮನನಾಗಿ ಅವತಾರವನ್ನು ಮಾಡಿ ಬ್ರಹ್ಮಚರ್ಯದಿಂದ ಮಹಾಬಲಿಚಕ್ರವರ್ತಿಯನ್ನು ಬೆರಗುಗೊಳಿಸಿ ಅವನಿಂದ ಮೂರು ಹೆಜ್ಜೆಯ ಭೂಮಿಯನ್ನು ಬೇಡಿದನೆಂದೂ ತ್ರಿವಿಕ್ರಮಾವತಾರದಿಂದ ಸ್ವರ್ಗಮರ್ತ್ಯಪಾತಾಳಗಳನ್ನೆಲ್ಲ ವ್ಯಾಪಿಸಿ ಬಲಿಯನ್ನು ತುಳಿದು ಪಾತಾಳಕ್ಕಟ್ಟಿದನೆಂದೂ ಹೇಳುವ ಪುರಾಣದ ಕಥೆಯನ್ನು ಶ್ರೀಮದ್ಬಾಗವತದಲ್ಲಿ ಬಹಳ ಚೆನ್ನಾಗಿ ವಿವರವಾಗಿ ಪ್ರಸ್ತಾಪಿಸಲ್ಪಟ್ಟಿದೆ. 'ವಾಮನಪುರಾಣ'ವೆಂಬ ಒಂದು ಮಹಾಪುರಾಣವೂ ಹದಿನೆಂಟು ಪುರಾಣಗಳಲ್ಲಿ ಒಂದಾಗಿದ್ದು ಈ ಕಥೆಯನ್ನು ತಿಳಿಸುತ್ತದೆ.
    ಬಲಿರಾಜನು ರಾಕ್ಷಸನಾದರೂ ಗುಣದಲ್ಲಿ ಸಾತ್ತ್ವಿಕನಾಗಿದ್ದನು. ಪ್ರಹ್ಲಾದನ ಮೊಮ್ಮಗನಾದ್ದರಿಂದ ಅಜ್ಜನಲ್ಲಿದ್ದ ಭಗವದ್ಭಕ್ತಿಯು ಸಂಸ್ಕಾರವು ಈತನಿಗೂ ಇತ್ತು ಗುರುಗಳಾದ ಶುಕ್ರಾಚಾರ್ಯರು ಈತನಿಂದ ಮಾಡಿಸಿದ ವಿಶ್ವಜಿತ್ ಯಜ್ಞದ ಫಲವಾಗಿ ಮೂರು ಲೋಕಗಳಿಗೂ ರಾಜನಾಗಿ 'ಇಂದ್ರಪದವಿ'ಯಲ್ಲಿ ಕುಳಿತುಬಿಟ್ಟನು. ಇದರಿಂದ ದೇವೇಂದ್ರನಿಗೆ ಸ್ಥಾನಭ್ರಷ್ಟತೆಯುಂಟಾಗಿ ದೇವತೆಗಳೊಡಗೂಡಿ ಮಹಾವಿಷ್ಣುವನ್ನು ಮೊರೆಹೊಕ್ಕನು. ಆಗ ಭಗವಂತನು 'ಎಲೈ ದೇವತೆಗಳಿರಾ, ಬಲಿರಾಜನು ತನ್ನ ಪುಣ್ಯ ಫಲವನ್ನು ಅನುಭವಿಸಲೇ ಬೇಕು, ಆದರೆ ಆ ಪುಣ್ಯವು ಕ್ಷಯವಾದಾಗ ನಾನು ವಾಮನನಾಗಿ ಅದಿತಿದೇವಿಯನ್ನು ಅವತರಿಸಿ ನಿಮ್ಮ ಇಷ್ಟಾರ್ಥವನ್ನು ನೆರವೇರಿಸುವೆನು. ಶಾಂತನು ದಾಂತನೂ, ಜಿತೇಂದ್ರಿಯನೂ ನನ್ನ ಭಕ್ತನೂ ಆದ ಬಲಿರಾಜನನ್ನು ಈಗ ಹೇಗೆ ತಾನೆ ಸ್ಥಾವಭ್ರಷ್ಟನನ್ನಾಗಿ ಮಾಡಲಿ?' ಎಂದನು. ಈ ಕೆಳಗಿನ ಪದ್ಯಗಳನ್ನ ನೋಡಿರಿ.
ಮದ್ಭಕ್ತಂ ಮದ್ಗತಪ್ರಾಣಂ ಸತ್ಯಸಂಧಂ ಮಹಾಬಲಮ್ |
ಪ್ರಜಾಪತಿಸಮಂ ಸ್ವಾತ್ಮಪ್ರಜಾನಾಂ ಪ್ರಿಯಕಾರಣಮ್ ||1||
ನ ಗುಣಾಸ್ತಸ್ಯ ಶಕ್ಯಂತೇ ವಕ್ತುಂ ಕೇನಾಪಿ ಭೂತಲೇ |
ಅವಶ್ಯ ತಪನಸೋಪೇತೈರ್ಭೋಕ್ತವ್ಯಂ ತಪಸಃ ಫಲಮ್ ||2||
    'ನನ್ನ ಭಕ್ತನೂ ನನ್ನಲ್ಲೇ ಪ್ರಾಣಗಳನ್ನಿಟ್ಟುಕೊಂಡಿರುವವನೂ ಸತ್ಯಸಂಧನೂ ಮಹಾಬಲಿಷ್ಠನೂ ಪ್ರಜಾಪತಿಗೆ ಸಮನೂ ತನ್ನವರಿಗೆ ಪ್ರಿಯವನ್ನುಂಟುಮಾಡುವವನೂ ಆಗಿರುವ ಬಲಿರಾಜನ ಗುಣಗಳನ್ನು ಭೂಮಿಯಲ್ಲಿ ಯಾರೊಬ್ಬನೂ ಹೇಳಿ ಪೂರೈಸಲಾರನು. ತಪಸ್ವಿಗಳು ಅವಶ್ಯವಾಗಿ ತಮ್ಮ ತಪಃಫಲವನ್ನು ಅನುಭವಿಸಲೇ ಬೇಕಲ್ಲವೆ?' ಹೀಗೆಂದು ಭಗವಮತನೇ ಹೊಗಳುತ್ತಿರುವಾಗ ಬಲಿರಾಜನ ಯೋಗ್ಯತೆಯ ವಿಷಯಕ್ಕೆ ಹೇಳುವದೇನಿದೆ? ಪರಮಭಾಗವತೋತ್ತಮವಾದ ಈತನು ಎಂದೆಂದೂ ಭಗವತ್ ಪ್ರಿಯನು.

    ಇಂಥ ಬಲಿರಾಜನು ಮಾಡಿದ ಯಜ್ಞದಲ್ಲಿ ಭಗವಂತನು ವಾಮನನಾಗಿ ಕಾಣಿಸಿಕೊಂಡು ಆತನಿಂದ ಭೂಮಿಯನ್ನು ದಾನವಾಗಿ ಸ್ವೀಕರಿಸಲು ಬಂದನು. ತಾನು ತಪಸ್ಸಿಗೆ ಕುಳಿತುಕೊಳ್ಳುವ ಸಲುವಾಗಿ ತನ್ನ ಹೆಚ್ಚೆಯಲ್ಲಿ ಮೂರು ಹೆಚ್ಚೆಗಳಷ್ಟು ಭೂಮಿಯನ್ನು ದಾನವಾಗಿ ಕೊಡುವಂತೆ ಬಲಿರಾಜನನ್ನು ಕೇಳಿಕೊಂಡನು. ಕೂಡಲೇ ವಾಮನನ ಚಿತ್ತಾಕರ್ಷಕವಾದ ರೂಪವನ್ನು ನೋಡಿ ಬಲಿಯು 'ತಥಾಸ್ತು' ಎಂದನು ತನ್ನ ಗುರುಗಳಾದ ಶುಕ್ರಾಚಾರ್ಯರು ಮುಂದೆ ಬರಲಿರುವ ಅಪಾಯವನ್ನು ಸೂಚಿಸಿ ಮಾಯಾರೂಪದಿಂದ ಶ್ರೀಹರಿಯೇ ಬ್ರಹ್ಮಚಾರಿಯಾಗಿ ಬಂದು ಭೂಮಿಯನ್ನು ಬೇಡುತ್ತಿರುವನೆಂದೂ ಆ ನೆಪದಲ್ಲಿ ಸರ್ವಸ್ವವನ್ನೂ ಅಪಹರಿಸುವನೆಂದೂ ತಿಳಿಸಿದಾಗಲೂ ಸತ್ಯವನ್ನೇ ಎತ್ತಿಹಿಡಿದ ಬಲಿರಾಜನು 'ಕೊಟ್ಟೆನು ಎಂಬ ಮಾತನ್ನು ಹಿಂತೆಗೆದುಕೊಳ್ಳಲರೆನು' -ಎಂದನು ಹೀಗೆ ಬಲಿರಾಜನ ಸಾತ್ತ್ವಿಕ ದಾನವು ಎಂದರೆ ದೇಶಕಾಲಪಾತ್ರಗಳನ್ನರಿತು ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಮಾಡಿದ ದಾನವು ಆತನಿಗೆ ಭಗವತ್ಸಕ್ಷಾರರೂಪವಾದ ಫಲವನ್ನೇ ಕೊಟ್ಟಿತು; ಎಂದರೆ ಭಗವಂತನು ತನ್ನ ವಿಶ್ವರೂಪವನ್ನೇ ಪ್ರಕಟಿಸಿ ತೋರಿಸಿಬಿಟ್ಟನು. ದಾನದ ಮಹಿಮೆಯು ಎಂಥದ್ದೆಂಬುದನ್ನು ಇದರಿಂದ ತಿಳಿಯಬಹುದಾಗಿದೆ ತ್ರಿವಿಕ್ರಮನಾಗಿ ಬೆಳೆದ ಮಹಾವಿಷ್ಣುವು ಕಡೆಯಲ್ಲಿ ಬಲಿರಾಜನಿಎ ತನ್ನ ಪಾದಸ್ಪರ್ಶದಿಂದ ಅಮೃತತ್ವವನ್ನೇ ಅನುಗ್ರಹಿಸಿಬಿಟ್ಟನು. ಸುಶಲಲೋಕದಲ್ಲಿ ಅವನನ್ನಿರಿಸಿ ಅವನ ಮನೆಯ ದ್ವಾರಪಾಲಕನಾಗಿ ನಿಂತುಬಿಟ್ಟನು. ಹೀಗೆ ಭಗವದ್ಭಕ್ತರಿಗೆ ಯಾವಾಗಲೂ ಭಗವಂತನ ರಕ್ಷಣೆಯಿದ್ದೇ ಇರುವದು ಮುಂದೆ ದೇವರಾಜ್ಯವನ್ನು ದೇವತೆಗಳಿಗೇ ಕೊಡಿಸಿ ವಾಮನನು ಉಪೇಂದ್ರನೆನಿಸಿದನು.
    ಐತಿಹಾಸಿಕದೃಷ್ಟಿಯಿಂದ ಕಥೆಯಲ್ಲಿರುವ ಸ್ವಾರಸ್ಯಕ್ಕಿಂತಲೂ ಆಧ್ಯಾತ್ಮಿಕ ದೃಷ್ಟಿಯಿಂದಲೇ ಅದರಲ್ಲಿ ಹೆಚ್ಚು ಸವಿಯಿರುತ್ತದೆಯೆಂದು ಹೇಳಬೇಕಾಗಿದೆ. ಏಕೆಂದರೆ ನಾವೆಲ್ಲರೂ ಈಗ ವಾಮನರಾಗಿದ್ದರೂ ಒಂದಾನೊಂದು ಬಗೆಯಲ್ಲಿ ತ್ರಿವಿಕ್ರಮರೇ ಆಗಬಹುದಾಗಿರುತ್ತದೆ.
    ಶರೀರವೇ ತಾನೆಂದು ತಿಳಿದಿರುವವರೆಗೂ ಮನುಷ್ಯನು ಎಷ್ಟೇ ಉದ್ದವಾಗಿ ಬೆಳೆದುಕೊಂಡಿರಲಿ, ಹೊರಗಿನ ವಿಶ್ವದ ದೃಷ್ಟಿಯಿಂದ ಇನ್ನೂ ವಾಮನನೇ ಆಗಿರುತ್ತಾನೆ. ಸಾಕ್ಷಾದ್ವಿಷ್ಣುವೇ ವಾಮನನಾಗಿ ಹುಟ್ಟಿದ್ದರೂ ಹೊರಗಿನ ದೇಹದ ದೃಷ್ಟಿಯಿಂದ ಅವನನ್ನು ಬಲಿಚಕ್ರವರ್ತಿಯೂ ಅವನ ಪರಿವಾರದವರೂ ಒಬ್ಬ ಸಾಮಾನ್ಯವಟುವೆಂದು ಭಾವಿಸಿದ್ದು ಆಶ್ಚರ್ಯವಲ್ಲ.
    ಆದರೆ ಈ ದೃಷ್ಟಿಯನ್ನು ಮಿರಿದರೆ ನಾವೆಲ್ಲರೂ ತ್ರಿವಿಕ್ರಮರಾಗಬಹುದಾಗಿರುತ್ತದೆ. ಹೇಗೆಂದರೆ ಆಯಾ ಅವಸ್ಥೆಯ ಸಾಕ್ಷಿಯೇ ನಾವೆಂಬ ಅರಿವನ್ನು ತಂದುಕೊಂಡರೆ, ಒಂದೊಂದು ಅವಸ್ಥೆಯೂ ನಮ್ಮ ಒಂದೊಂದು ಪಾದದಲ್ಲಿ ಅಡಕವಾಗಿಬಿಡುತ್ತದೆ. ಎಚ್ಚರದವಸ್ಥೆಯಲ್ಲಿರುವ ಆತ್ಮನು ಸ್ಥೂಲಪ್ರಪಂಚದಲ್ಲಿರುವ ಸರ್ವರಿಗೂ ಆತ್ಮನಾಗಿರುವದರಿಂದಲೂ ಸರ್ವವೂ ಇವನ ಚೈತನ್ಯದ ಅಧೀನವಾಗಿರುವ ಇರವನ್ನುಳ್ಳದಾದ್ದರಿಂದಲೂ ವೈಶ್ವಾನರನೆನಿಸುವನೆಂದೂ ಸ್ವಪ್ನದಲ್ಲಿ ಮನಃಪ್ರಪಂಚವನ್ನೇ ಬೆಳಗುವದರಿಂದ ತೈಜಸನೆನಿಸುವನೆಂದೂ ಸುಷುಪ್ತಿಯಲ್ಲಿ ಪ್ರಜ್ಞಾನದ ಗಟ್ಟಿಯಾಗಿ ತಾನೇತಾನಾಗಿರುವದರಿಂದ ಪ್ರಾಜ್ಞನೆನಿಸುವನೆಂದೂ ಶ್ರುತಿಯು ಹೇಳುತ್ತದೆ. ಈ ಮೂರೂ ಪರಮಾತ್ಮನ ಒಂದೊಂದು 'ಪಾದ'ವೆಂತಲೂ ನಿಜವಾಗಿ ಪರಮಾತ್ಮನು ಈ ಮೂರನ್ನೂ ಮಿರಿದ ತುರೀಯವೆಂಬ ಮತ್ತೊಂದು ಪರಮಾರ್ಥಸ್ವರೂಪದಿಂದ ಅದ್ವಿತೀಯನಾಗಿರುವನೆಂತಲೂ ಅದೇ ಶ್ರುತಿಯು ಸಾರುತ್ತಿದೆ ಈ ಪ್ರತಿಪಾದನೆಯನ್ನು ಪುರಾಣದ ಕಥೆಗೆ ಹೊಂದಿಸಿದರೆ ಪ್ರತಿಯೊಬ್ಬನೂ ಈ ಅವಸ್ಥಾತ್ರಯಾತ್ಮ ರೂಪದಿಂದ ತ್ರಿವಿಕ್ರಮನಾಗಿರುವನೆಂದು ಹೇಳಬಹುದಲ್ಲವೆ?
    ಈ ದೃಷ್ಟಿಯಿಂದ ನೋಡಿದರೆ ತ್ರಿವಿಕ್ರಮನ ಮೂರು ಪಾದದೊಳಗೆ ಸೇರದೆ ಇರುವದು ಯಾವದೊಂದೂ ಇರುವದೇ ಇಲ್ಲ ಎಂಥ ಮಹಾಬಲಿಚಕ್ರವರ್ತಿಯಾಗಲಿ ಈ ತ್ರಿವಿಕ್ರಮನ ಪಾದತಲದಲ್ಲಿಯೇ ಅಡಗಿ ಬದುಕಿಕೊಳ್ಳಬೇಕಾಗಿದೆ. ಈ ತ್ರಿವಿಕ್ರಮನು ಮಾತ್ರ ತನ್ನ ಪರಮಾರ್ಥಸ್ವರೂಪದಿಂದ ಸರ್ವವ್ಯಾಪಕನಾಗಿದ್ದರೂ ಅತ್ಯಂತಶುದ್ಧನಾಗಿರುವ ಮಹಾವಿಷ್ಟುವಾಗಿರುತ್ತಾನೆ!
    ವಾಮನಜಯಂತಿಯ ದಿನ ಈ ದೃಷ್ಟಿಯನ್ನು ಯಾರು ಯಾರು ಮನಸ್ಸಿಗೆ ತಂದುಕೊಳ್ಳುವರೋ ಅವರ ಪಾಲಿಗೆ ವಾಮನನು ಮೂರ್ತಿಯಲ್ಲಿ ಚಿಕ್ಕವನಾದರೂ ಕೀರ್ತಿಯಲ್ಲಿ ದೊಡ್ಡವನಾಗುವನು. ತ್ರಿವಿಕ್ರಮನ ಕಥೆಯು ಪುರಾಣದಲ್ಲಿ ಮಾತ್ರವೇ ಇರುವದಲ್ಲದೆ ಋಗ್ವೇದದ ವಿಷ್ಣುಸೂಕ್ತದಲ್ಲಿ ಕೂಡ ಕಾಣಬರುವದರ ಮಹತ್ತ್ವವು ಅವರಿಗೆ ಮನದಟ್ಟಾಗುವದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ