ಅನಂತಪದ್ಮನಾಭವ್ರತ

    ಅನಂತನೆಂಬ ಹೆಸರು ಉಪನಿಷತ್ಪ್ರಸಿದ್ಧವಾದುದು. 'ಸತ್ಯಂ ಜ್ಞಾನಮನನ್ತಂ ಬ್ರಹ್ಮ' ಎಂಬ ವೇದವಾಕ್ಯವು ಬ್ರಹ್ಮವು ಅನಂತವೆಂದು ತಿಳಿಸುತ್ತದೆ. ದೇಶಕಾಲಗಳಿಂದ ಪರಿಚ್ಛಿನ್ನವಲ್ಲದ ಅಖಂಡವಾದ ವಸ್ತುವೇ ಅನಂತವು. ಬ್ರಹ್ಮದ ಹೊರತು ಬೇರೊಂದು ಇಂಥ ವಸ್ತುವಿರುವದಿಲ್ಲ. ಇದನ್ನು ಕರ್ಮಕಾಂಡದವರು ಸೌಕರ್ಯಕ್ಕಾಗಿ 'ಅನಂತಪದ್ಮನಾಭ'ನೆಂದು ಕಲ್ಪಿಸಿದ್ದಾರೆ. ಅನಂತಶಯನ, ಶೇಷಶಯನ, ಶೇಷಶಾಯೀ - ಎಂಬ ಹೆಸರುಗಳೂ ಬಳಕೆಯಲ್ಲಿವೆ. ಆಗ ಅನಂತನೆಂಬುದು ಒಂದು ನಾಗದೇವತೆಯ ಹೆಸರೆಂದಾಗುವದು. ಈ ನಾಗನು ತನ್ನ ಹೆಡೆಗಳಿಂದ ಭೂಮಿಯನ್ನೇ ಹೊತ್ತಿರುವನೆಂದೂ ಪುರಾಣಗಳು ವರ್ಣಿಸುತ್ತವೆ. ಆತನ ಸಹಸ್ರಾರು ಫಣಗಳೇ ಭೂಮಿಗೆ ಆಧಾರವೆಂದೂ ಆತನೇನಾದರೂ ಆಯಾಸದಿಂದ ಸ್ವಲ್ಪ ಒಂದು ಹೆಡೆಯನ್ನು ಕೊಡವಿದರೆ ಭೂಕಂಪವಾಗುವದೆಂದೂ ಕೆಲವರು ಹೇಳುತ್ತಾರೆ. ವಿಜ್ಞಾನಿಗಳು ಇದನ್ನು ಒಪ್ಪಲಾರರು. ಇರಲಿ, ಈ ಅನಂತನೆಂಬ ಹಾವನ್ನೇ ಹಾಸಿಗೆಯಾಗಿ ಮಾಡಿಕೊಂಡು ಮಹಾವಿಷ್ಣುವು ಕ್ಷೀರಸಮುದ್ರದಲ್ಲಿ ಮಲಗಿರುವನು ಯೋಗಿಗಳು ಈ ತತ್ತ್ವವನ್ನು ಅಧಾರಶಕ್ತಿಯಲ್ಲಿ ನೆಲೆಸಿರುವ ಚತ್ ಎಂಬ ಬ್ರಹ್ಮವೆನ್ನುವರು. ಹೇಗೂ ಶ್ರೀ ಮಹಾವಿಷ್ಣುವು ಶೇಷಶಾಯಿಯಾಗಿ ಭಕ್ತಾನು ಗ್ರಹಮಾಡುತ್ತಿರುವನು. ಭಾರತದ ದಕ್ಷಿಣದ ತುದಿಯಾದ ತಿರುವನಂತಪುರದಲ್ಲಿ ಈ ಪದ್ಮನಾಭನ ದಿವ್ಯ ದೇವಾಲಯವೂ ಇದೆ. ಭಕ್ತರಾದವರು ಈಗಲೂ ಈ ಪದ್ಮನಾಭನ ವ್ರತವನ್ನು ಮಾಡುತ್ತಾರೆ. ಬ್ರಾಹ್ಮಣರು ಮಾತ್ರವಲ್ಲದೆ ಬ್ರಾಹ್ಮಣೇತರರೂ ಈ ವ್ರತಾನುಷ್ಠಾನವನ್ನು ಇಟ್ಟುಕೊಂಡಿರುವದುಂಟು. ಒಟ್ಟಿನಲ್ಲಿ ಆದಿಶೇಷನ ರೂಪದಿಂದಲೇ ವಿಷ್ಣುವನ್ನು ಆರ್ಚಿಸುವದು ಈ ವ್ರತದ ವೈಶಿಷ್ಟ್ಯವು. ಅದಕ್ಕಾಗಿ ಧರ್ಭೆಯಿಂದ ಏಳು ಹೆಡೆಗಳುಳ್ಳ ಆಕೃತಿಯನ್ನು ನಿರ್ಮಿಸಿ ಕಲಶದ ಮಧ್ಯದಲ್ಲಿಟ್ಟು ಪೂಜಿಸಬೇಕೆಂದು ವ್ರತವಿವೇಕದಲ್ಲಿ ಹೇಳಿದೆ. ಈ ವ್ರತವನ್ನು ಮಾಡಬೇಕಾದರೆ ಹಿರಿಯರಿಂದ ಪೂಜಿಸಲ್ಪಟ್ಟಿರುವ ವಾಡಿಕೆಯೂ ಸಂಪ್ರದಾಯವೂ ಬೇಕೆಂದೂ ಅದಕ್ಕೆ ಗುರುತಾಗಿ ಪೂಜಾದಾರವು ಇರಬೇಕೆಂದೂ ನಿಯಮವಿದೆ. ಹೊಸದಾಗಿಯೇ ಪ್ರಾರಂಭಿಸಲಿಚ್ಛಿಸುವವರು ಪೂಜಾದಾರವನ್ನು ಸಾಂಪ್ರದಾಯಿಕರಿಂದ ಸ್ವೀಕರಿಸಿ ದೀಕ್ಷೆಯನ್ನು ಹೊಂದಿಯೇ ಆರಂಭಿಸಬೇಕೆಂದೂ ವಿಧಿಯಿದೆ.
    ಈ ವ್ರತದ ಅಧಿದೇವತೆ ಶ್ರೀ ಮಹಾವಿಷ್ಣುವು ಆತನು ತನ್ನ ಸಕಲ ಪರಿವಾರದೊಡನೆ ಈ ಸಂದರ್ಭದಲ್ಲಿ ಪೂಜಿಸಲ್ಪಡುತ್ತಾನೆ. ಅನಂತನೆಂಬ ಈ ದೇವನು ತನ್ನನ್ನು ಪೂಜಿಸುವ ಭಕ್ತರಿಗೆ ಅನಂತ ಕೀರ್ತಿ-ಸಂಪತ್-ಸುಖ-ಸೌಭಾಗ್ಯಗಳನ್ನು ಕೊಡುತ್ತಾನೆಂದು ಪ್ರಸಿದ್ಧಿಯಿದೆ. ಪೂಜಾದ್ರವ್ಯಗಳೆಲ್ಲವೂ ಹದಿನಾಲ್ಕರ ಸಂಖ್ಯೆಯುಳ್ಳದ್ದಾಗಿರಬೇಕು. ಹದಿನಾಲ್ಕುವರ್ಷಗಳ ಕಾಲ ವ್ರತಾನುಷ್ಠಾನವನ್ನು ಮಾಡಿ ಉದ್ಯಾಪನೆ ಮಾಡಬೇಕೆಂದೂ ಹೇಳಿದೆ. ಈ ವ್ರತಕ್ರಮವು ಸ್ವಲ್ಪ ವಿಸ್ತಾರವಾಗಿದೆ. ವ್ರತಾಂಗವಾಗಿ ಯಮುನಾದೇವಿಯ ಪೂಜೆಯ ವಿಧಿಸಲ್ಪಟ್ಟಿದೆ. ಇದನ್ನು ನದೀ ತೀರದಲ್ಲಿ ಮಾಡುವ ಪದ್ಧತಿಯಿದೆ. ವ್ರತವನ್ನು ಮಾಡಲಾಗದವರು ವ್ರತದರ್ಶನದಿಂದ ಕೃತಾರ್ಥರಾಗಬಹುದು ಅನಂತಪದ್ಮನಾಭನನ್ನು ಕುರಿತು ಧ್ಯಾನಶ್ಲೋಕವು ಹೀಗಿದೆ.
   
ನವಾಮ್ರಪಲ್ಲವಾಭಾಸಂ ಪಿಂಗಭ್ರೂಶ್ಮಶ್ರುಲೋಚನಮ್ |
ಪೀತಾಂಬರಧರಂ ದೇವಂ ಶಂಖಚಕ್ರಗಧಾಧರಮ್ ||
ವಿಶ್ವಾಕಾರಂ ವಿಶ್ವಯೋನಿಂ ವಿಶ್ವಾಧಾರಂ ಪರಂ ಹರಿಮ್ ||
ಸಹಶ್ರಶಿರಸಂ ವಿಷ್ಣುಂ ಶೇಷಸಂಜ್ಞಂ ರಮಾಪತಿಮ್ ||
ಅಲಂಕೃತಸಮುದ್ರಸ್ಥಂ ವಿಶ್ವರೂಪಂ ವಿಚಿಂತಯೇತ್ ||

    "ಹೊಸದಾದ ಮಾವಿನ ಚಿಗುರಿನಂತೆ ಕಾಂತಿಯುಳ್ಳವನೂ ಹಳದಿಯಾದ ಹುಬ್ಬು, ಮಿಸೆ, ಕಂಗಳುಳ್ಳವನೂ ಪೀತಾಂಬರವನ್ನುಟ್ಟು ಶಂಖಚಕ್ರಗಳನ್ನು ಧರಿಸಿರುವನಾದ, ಜಗದಾಕಾರನೂ ಜಗತ್ತಿಗೆ ಕಾರಣನೂ, ಆಧಾರನೂ, ಪಾಪಪರಿಹಾರಕನೂ, ಪರಮನೂ ಆದ ಸಾವಿರ ತಲೆಗಳುಳ್ಳ, ವ್ಯಾಪಕನಾದ, ಲಕ್ಷ್ಮೀಪತಿಯಾದ ಹಾಗೂ ಸಮುದ್ರ ಮಧ್ಯವನ್ನಲಂಕರಿಸಿರುವ ವಿಶ್ವರೂಪನಾದ ವಿಷ್ಣುವನ್ನು ಚಿಂತಿಸಬೇಕು"

    ಈ ಧ್ಯಾನಶ್ಲೋಕದಲ್ಲಿ ಕ್ಷೀರಸಮುದ್ರದಲ್ಲಿ ವಿಷ್ಣುವು ಮಲಗಿದ್ದಾನೆಂಬುದನ್ನು ಗಮನಿಸಬೇಕು ನಮ್ಮ ಚಿತ್ತವೇ ನಾನಾ ಅಲೋಚನೆಗಳೆಂಬ ಅಲೆಗಳುಳ್ಳ ಕ್ಷೀರ ಸಮುದ್ರವು ಅದರಲ್ಲಿಯೇ ಭಗವಂತನು ಪವಡಿಸಿದ್ದರೂ ನಾವೂ ನೋಡುತ್ತಿಲ್ಲ ಹಾಲು ಬಿಳುಪಾಗಿದ್ದು ಸತ್ತ್ವಗುಣಕ್ಕೆ ಪ್ರತಿನಿಧಿಯಾಗಿದೆ. ಯೋಗಿಗಳ ಚಿತ್ತವು ಸ್ವಚ್ಛವಾಗಿರುವದರಿಂದ ಅದನ್ನೇ ಇಲ್ಲಿ ಕ್ಷೀರಸಮುದ್ರವೆಂದಿದೆ. ಪದ್ಮನಾಭನನ್ನು ನಾವು ಧ್ಯಾನಿಸಿ ಕಂಡುಕೊಳ್ಳಬೇಕಾಗಿದೆ. ಇರಲಿ, ಹೀಗೆ ಧ್ಯಾನಿಸುತ್ತಾ ಷೋಡಶೋಪಚಾರಪೂಜೆಯನ್ನು ಕೈಗೊಳ್ಳಬೇಕು. ಆವರಣ ಪೂಜೆಯೆಂಬ ವಿಶೇಷಭಾಗವೊಂದು ಈ ವ್ರತದಲ್ಲಿದೆ ಅವರಣದೇವತೆಗಳಿಗಾಗಿ ಮಾಡುವ ಈ ಪೂಜೆಯು ಅನಂತನ ಪ್ರಸಾದಕ್ಕೆ ಕಾರಣವಾಗಲಿದೆ. ಭಗವಂತನ ಸುತ್ತಲೂ ನೆರೆದಿರುವ ದೇವತೆಗಳೇ ಅವರಣದೇವತೆಗಳು ಹೇಗೆ ಒಬ್ಬ ಮಂತ್ರಿಯನ್ನು ಕಾಣಬೇಕಾದರೆ ವಿಧಾನಸೌಧದದ ಮಹಾದ್ವಾರದಿಂದ ಹಿಡಿದು ಮಂತ್ರಿಗಳ ಚೇಂಬರ್ ವರೆಗೆ ದ್ವಾರಪಾಲಕರೇ ಮುಂತಾಗಿ ಆಪ್ತಕಾರ್ಯದರ್ಶಿಗಳವರೆಗಿನ ಜನರಿರುವರೋ ಹಾಗೆಯೇ ಅಖಿಲಾಂಡಕೋಟಿಬ್ರಹ್ಮಾಂಡನಾಯಕನಾದ ವಿಷ್ಣುವಿಗೆ ಆವರಣದೇವತೆಗಳಿರುವದು ಸೂಕ್ತವೇ ಆಗಿದೆ. ಅವರನ್ನೆಲ್ಲ ವಿಷ್ಣುವೆಂದೇ ಭಾವಿಸಿ ಪೂಜಿಸಬೇಕು. ಈ ಸಂದರ್ಭದಲ್ಲಿ ವ್ರತವಿಧಿಯಲ್ಲಿ ಕೊಟ್ಟಿರುವ ಒಂದು ಶ್ಲೋಕವು ಮನನೀಯವಾಗಿದೆ ಅದನ್ನು ಕೇಳಿರಿ.

ದಯಾಬ್ಧೇ ತ್ರಾಹಿ ಸಂಸಾರಸರ್ಪಾನ್ಮಾಂ ಶರಣಾಗತಮ್ |
ಭಕ್ತ್ಯಾ ಸಮರ್ಪಯೇ ತುಭ್ಯಂ ಪ್ರಥಮಾವರಣಾರ್ಚನಮ್ ||

    "ಎಲ್ಐ ದಯಾಸಮುದ್ರನೆ, ಸಂಸಾರವೆಂಬ (ವಿಷ)ಸರ್ಪದಿಂದ ನನ್ನನ್ನು ಕಾಪಾಡು. ನಾನು ಶರಣಾಗತನು. ನಿನಗೆ ಇದೊ, ಮೊದಲನೆಯ ಅವರಣ ಪೂಜೆಯನ್ನು ಸಲ್ಲಿಸುವೆನು" ಎಂಬಿದು ಶ್ಲೋಕಾರ್ಥವು. ಕೊನೆಯ ಪಾದವನ್ನು ಯಥಾಸಂಭವವಾಗಿ ದ್ವಿತೀಯ, ತೃತೀಯ - ಹೀಗೆ ಬದಲಾಯಿಸಿಕೊಳ್ಳಬೇಕು. ಸಂಸಾರಸರ್ಪವು ಪ್ರತಿಯೊಬ್ಬ ಜೀವಿಯನ್ನೂ ಕಚ್ಚಿರುತ್ತದೆ ಅದರ ವಿಷಕ್ಕೆ ಪರಿಹಾರವೆಂದರೆ ಅನಂತನೆಂಬ ಅಮೃತಮಯನಾದ ಸರ್ಪದೇವನ ಪೂಜೆಯು ಅನಂತನೂ ಸರ್ಪವೇ ಆಗಿರಬಹುದು ಅಮೃತಮಯನಾದ ಸರ್ಪದೇವನ ಪೂಜೆಯು ಅನಂತನೂ ಸರ್ಪನೇ ಆಗಿರಬಹುದು ಆದರೆ ಅವನ ಮೇಲೆ ಅಮೃತನಾದ ಭಗವಂತನು ಪವಡಿಸಿರುವದರಿಂದ ಅವನ ಸಂಪರ್ಕದಿಂದ ಅನಂತನು ತಾನು ಅಮೃತ ಸ್ವರೂಪನಾಗಿಬಿಟ್ಟಿರುವನು ಇನ್ನು ಅನಂತನ ಅಷ್ಟೋತ್ತರಶತನಾಮಗಳು ಆತನ ಅನಂತಕಲ್ಯಾಣಗುಣಗಳನ್ನೂ ಎಲ್ಲಾ ಪದಾರ್ಥಗಳೂ ಆತನಲ್ಲಿ ಅನಂತವಾಗಿ ನಿತ್ಯವಾಗಿರುವವೆಂದೂ ತಿಳಿಸುವವು. ಇಂಥ ಭಗವಂತನ ಪೂಜೆಯನ್ನು ನೆರವೇರಿಸಿ ಹದಿನಾಲ್ಕು ಗಂಟಿನ ದಾರವನ್ನು ಸಂಸಾರವೆಂಬ ಗಹನವಾದ ಕಾಡಿನಲ್ಲಿ ನಿರ್ಭಯವಾಗಿ ವಾಸಿಸುವ ಸಲುವಾಗಿ ಭಕ್ತರು ಧರಿಸುತ್ತಾರೆ. ಸಾಮಾನ್ಯವಾಗಿ ಸ್ತ್ರೀಪುರುಷರಿಬ್ಬರೂ ಒಟ್ಟಿಗೆ ಈ ವ್ರತವನ್ನು ಮಾಡುವದೇ ಪದ್ಧತಿಯು ದಂಪತಿಗಳೇ ಇದಕ್ಕೆ ಅಧಿಕಾರಿಗಳೆಂತ ಕಂಡುಬರುತ್ತದೆ. ವ್ರತಕಥೆಯಲ್ಲಿಯೂ ಸುಶೀಲಾ ಕೌಂಡಿನ್ಯರೆಂಬ ದಂಪತಿಗಳು ಈ ವ್ರತವನ್ನಾಚರಿಸಿದುದಾಗಿ ಉಲ್ಲೇಖವಿದೆ ಹೀಗೆ ಈ ವ್ರತವು ಹೆಚ್ಚು ಪ್ರಚಾರದಲ್ಲಿಲ್ಲವಾದರೂ ಒಂದು ಊರಿನಲ್ಲಿ ನೂರಕ್ಕೆ ಒಂದು ಕುಟುಂಬದವರಾದರೂ ಆಚರಿಸುತ್ತಾರೆ.
    ಈಗ ವ್ರತಕಥೆಯನ್ನು ಅನುಸಂಧಾನಮಾಡೋಣ. ಅರಣ್ಯವಾಸಿಗಳಾದ ಪಾಮಡವರಿಗೆ ಈ ವ್ರತವು ಕೃಷ್ಣಭಗವಂತನಿಂದ ಉಪದೇಶಿಸಲ್ಪಟ್ಟಿತು. ಅಪಕಾರ ಅನಂತನೆಂದರೆ ಕಾಲಚಕ್ರವಶದಿಂದ ಪರಿಗಣಿತವಾಗುವ ದಿನ-ಮಾಸ ಸಂವತ್ಸರಾದಿ ರೂಪಗಳೆಲ್ಲ ಅನಂತನೇ ಕಾಲವು ಅನಂತವೆಂಬುದು ಅನೇಕ ದರ್ಶನಕಾರರ ಅಭಿಪ್ರಾಯವಾಗಿದೆ. ಗೀತೆಯಲ್ಲಿ ಭಗವಂತನು ಕಾಲನೆಂಬುವನು ನಾನೇ ಎಂದು ಹೇಳಿಕೊಂಡೂ ಇರುತ್ತಾನೆ. ಈ ತತ್ತ್ವು ಮನನೀಯವಾಗಿದೆ. ಹೀಗೆ ಕಾಲರೂಪಿಯಾದ ಭಗವಂತನ ಪೂಜೆಯೇ ಅನಂತವ್ರತವು ನಮಗೆ ಬರುವ ಸುಖ ದುಃಖಗಳೆಲ್ಲ ಕಾಲವಶವಾಗಿರುವು ಆದ್ದರಿಂದಲೇ ಕಷ್ಟಬಂದಾಗ ಸಹಿಸಿಕೊಂಡರೆ ಹಾಗೂ ಆಗ ಭಗವಂತನನ್ನೇ ನೆನೆಯುತ್ತಿದ್ದರೆ ಸುಖದ ಕಲವು ಬಂದೇತೀರುವದು ಇಂಥ ಕಲರೂಪೀ ಭಗವಂತನು ತನ್ನ ವಿಶ್ವರೂಪವನ್ನೂ ಧರ್ಮರಾಯನಿಗೆ ಆಗ್ಗೆ ತೋರಿಸಿದನೆಂದು ಕಥೆಯಲ್ಲಿದೆ.
    ಅನಂತರ ಮುಂದೆ ಕೌಂಡಿನ್ಯನೆಂಬ ಬ್ರಾಹ್ಮಣನ ಕಥೆಯಿದೆ. ಆತನ ಹೆಂಡತಿಯು ಮೊದಲು ಪತಿಗೃಹಕ್ಕೆ ತೆರಳುವ ಕಾಲಕ್ಕೆ ಅನಂತಚತುರ್ದಶೀ ದಿನ ನದೀತೀರದಲ್ಲಿ ಭಕ್ತರು ಆಚರಿಸುತ್ತಿದ್ದ ವ್ರತವನ್ನು ನೋಡಿ ಪ್ರಭಾವಿತಳಾಗಿ ತಾನೂ ಮಾಡಿದ್ದರ ಫಲವಾಗಿ ಸಕಲೈಶ್ವರ್ಯವೂ ಬಂದಿತು. ಆದರೆ ಪತಿಯು ಒಮ್ಮೆ ಈಕೆಯ ಕೈಯಲ್ಲಿದ್ದ ದಾರವನ್ನು ನೋಡಿ ದುರ್ಬುದ್ಧಿಯಿಂದ ತೆಗೆದೆಸೆಯಲಾಗಿ ದಾರಿದ್ರ್ಯವು ಬಂದೇಬಿಟ್ಟಿತು ಆದರೆ ಆತನಿಗೆ ತನ್ನ ತಪ್ಪಿನ ಅರಿವಾಯಿತು ಅನಂತನ ದರ್ಶನಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟು ಅಲೆದನು ಮಾವಿನ ಮರವೇ ಮುಂತಾದ ಜೀವಿಗಳನ್ನೆಲ್ಲ ಅನಂತನನ್ನು ಕಂಡಿರುವಿರಾ? ಎಂದು ಕೇಳಿ ಇಲ್ಲವೆಂದಮೇಲೆ ನಿರಾಶನಾಗಿ ಕೆಲಗೆ ಬಿದ್ದಾಗ ವೃದ್ಧ ಬ್ರಾಹ್ಮಣವೇಷದಿಂದ ಭಗವಂತನು ದರ್ಶನಕೊಟ್ಟು ತನ್ನ ಮಹಿಮೆಯನ್ನು ತೋರಿಸಿ ವರಪ್ರದಾನಮಾಡಿದನು. ಆ ಸಂಧರ್ಭದಲ್ಲಿ ವಿದ್ಯಾದಾನಮಾಡದೆ ಇರುವದು ಬಂಜರುಭೂಮಿಯನ್ನು ಬ್ರಾಹ್ಮಣರಿಗೆ ದಾನ ಕೊಡುವದು, ಹಿರಿಯರು ಮಾಡಿರುವ ಧರ್ಮವನ್ನು ಮಾರಿಕೊಳ್ಳುವದು ಪರನಿಂದೆ ಮಾಡುವದೇ ಮುಂತಾದ ಪಾಪಗಳಿಗೆ ಸಂಭವಿಸುವ ದುರ್ಜನ್ಮಗಳ ರಹಸ್ಯವನ್ನೂ ತಿಳಿಸಿದನು ಕೌಂಡಿನ್ಯನು ಕೃತಾರ್ಥನಾಗಿ ಹಿಂದಿರುಗಿ ಪದ್ಮನಾಭನ ದಯೆಯಿಂದ ನಕ್ಷತ್ರಲೋಕವನ್ನು ಪಡೆದನು ಹೀಗೆ ಕಥೆಯು ಸರಳವಾಗಿ ಪಾಪಾಚರಣೆಯಿಂದ ದೂರವಾಗಬೇಕೆಂದೂ ಭಗವದ್ಭಕ್ತಿಯನ್ನು ಸಂಪಾದಿಸಿಕೊಳ್ಳಬೇಕೆಂದೂ ಭೋಧಿಸುತ್ತದೆ ಆಧ್ಯಾತ್ಮಜಿಜ್ಞಾಸುಗಳು ಈ ವ್ರತದಿನವನ್ನು ಅನಂತತ್ತ್ವದ ವಿಚಾರಕ್ಕೂ ಅನುಸಂಧಾನಕ್ಕೂ ಬಳಸಿಕೊಳ್ಳಬಹುದು ಧಾರ್ಮಿಕರು ವ್ರತಮಾಡಬಹುದು ಜನಸಾಮಾನ್ಯರು ವ್ರತವನ್ನು ನೋಡಿ ಕಥೆಯನ್ನು ಕೇಳಿ ಪ್ರಭಾವಿತರಾಗಬಹುದು ಹೀಗೆ ಅನಂತನ ವ್ರತವು ನಮ್ಮ ಸಂಸ್ಕೃತಿಯ ಒಂದು ಸೌಭಾಗ್ಯವಾಗಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ