ನವರಾತ್ರೆಯ ಮಹತ್ತ್ವ

    ನವರಾತ್ರೆಯಲ್ಲಿ ಜಪ, ಪಾರಾಯಣ, ಪೂಜೆ ಮುಂತಾದವುಗಳ ಅನುಷ್ಠಾನವನ್ನು ಮಾಡದೆ ಇರುವವರು ಆಸ್ತಿಕರಾದ ಸನಾತನಧರ್ಮಿಗಳಲ್ಲಿ ಬಹು ವಿರಳ. ಈ ದಿನಗಳಲ್ಲಿ ನಡೆಯಿಸುವ ಕರ್ಮವು ವೀರ್ಯವತ್ತರವಾಗುವದೆಂಬ ನಂಬಿಕೆಯು ನಮ್ಮಲ್ಲಿ ಅನೇಕರಿಗೆ ಇರುತ್ತದೆ. ದಿನಶುದ್ಧಿಯ ವಿಮರ್ಶೆಯನ್ನು ಕೂಡ ಮಾಡದೆ ವಿಜಯದಶಮಿಯ ದಿನ ಕೆಲವು ಕರ್ಮಗಳನ್ನು ಮಾಡಬಹುದೆಂಬ ಶ್ರದ್ಧೆಯು ಹಲವರಲ್ಲಿ ಬೇರೂರಿಕೊಂಡು ಬಿಟ್ಟಿರುತ್ತದೆ. ನವರಾತ್ರೆಯ ರಾಮನಿಗೆ ಪ್ರಿಯ ದರ್ಶನವನ್ನು ತಂದಿತು. ಅರ್ಜುನನಿಗೆ ಪೂರ್ಣವಿಜಯಕ್ಕೆ ಸೂಚಕವಾದ ಮೊಟ್ಟಮೊದಲನೆಯ ಗೆಲುವನ್ನು ಕೊಟ್ಟಿತು - ಎಂಬರ್ಥದ ಶ್ಲೋಕವನ್ನು ಜನರು ಈಗಲೂ ಹೇಳಿಕೊಳ್ಳುವರು. ರಾಮಾಯಣಭಾರತಗಳ ಧರ್ಮಯುದ್ಧದಿಂದ ಆದ ಜಗನ್ಮಂಗಲವನ್ನು ನೆನಪಿಗೆ ತಂದುಕೊಳ್ಳುವದಕ್ಕೆಂದು ಈಗಲೂ ಆಯುಧಪೂಜೆ, ಬನ್ನಿಯನ್ನು ಮುಡಿಯುವದು ಮುಂತಾದ ಆಚಾರಗಳು ನಡೆವಳಿಕೆಯಲ್ಲಿರುತ್ತವೆ. ಶರನ್ನವರಾತ್ರಿಯು ರಾಜರಿಗೆ, ಅದರಲ್ಲಿಯೂ ನಮ್ಮ ಕರ್ನಾಟಕದ ರಾಜರುಗಳಿಗೆ ಒಂದು ಗೆಲುವಿನ ಹಬ್ಬವಾಗಿತ್ತು.

    ಧಾರ್ಮಿಕ ದೃಷ್ಟಿಯಿಂದಲೂ ನವರಾತ್ರೆಗೆ ಹೆಚ್ಚಿನ ಮಹತ್ತ್ವವಿರುತ್ತದೆ. ತಂತ್ರಶಾಸ್ತ್ರದಲ್ಲಿ ನಂಬಿಕೆಯಿರುವವರು ಇದನ್ನು ದೇವೀನವರಾತ್ರೆಯೆಂದು ಕರೆಯುತ್ತಾರೆ. ಪರಮೇಶ್ವರನ ಶಕ್ತಿಯಾದ ದೇವಿಯನ್ನು ಆವಾಹನೆಮಾಡಿ ಪೂಜಿಸುವ ವಿಧಾನವು ಈ ನವರಾತ್ರೆಯಲ್ಲಿ ವಿಶೇಷವಾದ ಆಚರಣೆಯಲ್ಲಿರುತ್ತದೆ. ಪರಮೇಶ್ವರನು ತನ್ನ ಸ್ವರೂಪದಲ್ಲಿರುವದಲ್ಲದೆ ತನ್ನ ಅಚಿಂತ್ಯವಾದ ಶಕ್ತಿಯಿಂದ ಜಗತ್ತಿನ ಕಲ್ಯಾಣಕ್ಕಾಗಿ ಹಲವು ರೂಪಗಳನ್ನು ತೆಗೆದುಕೊಂಡಿರುತ್ತಾನೆಂದು ನಾವು ನಂಬುತ್ತೇವೆ. ಶಕ್ತನಾದ ಪರಮೇಶ್ವರನಿಗೂ ಆತನ ಶಕ್ತಿಗೂ ಯಾವ ಭೇದವೂ ಇರುವದಿಲ್ಲವಾದ್ದರಿಂದ ಶಕ್ತಿಪೂಜೆಯು ಪರಮೇಶ್ವರನ ಪೂಜೆಯೇ ಆಗಿರುತ್ತದೆ. ವರ್ಷದ ಪಂಚಾಂಗವನ್ನು ನೋಡಿದರೆ ಜಯಲಕ್ಷ್ಮೀ, ಉಪಾಂಗಲಲಿತಾ, ಸರಸ್ವತೀ, ದುರ್ಗಾ, ಅಪರಾಜಿತಾ ಮುಂತಾದ ಹೆಸರಿನಿಂದ ದೇವಿಯ ಪೂಜೆಯನ್ನು ಮಾಡುವರೆಂಬುದು ತಮಗೆ ತಿಳಿಯಬರುತ್ತದೆ ದೇವಿಯು ಬೇರೆ ಬೇರೆಯ ದಿನಗಳಲ್ಲಿ ಬೇರೆ ಬೇರೆಯ ನಿಮಿತ್ತದಿಂದ ಬೇರೆ ಬೇರೆಯ ಹೆಸರುಗಳಿಂದ ಅವತರಿಸಿ ದುಷ್ಟದಮನವನ್ನು ಮಾಡಿದಳೆಂದು ಪುರಾಣಪ್ರಸಿದ್ಧಿಯಿದೆ ಅದರ ಸ್ಮರಣೆಯನ್ನು ಮನಸ್ಸಿಗೆ ತಂದು ಕೊಳ್ಳುವದಕ್ಕಾಗಿ ಘಟಸ್ಥಾಪನೆ, ದೇವತಾಪೂಜೆ, ಸಪ್ತಶತೀ ಮುಂತಾದವುಗಳ ಪಾರಾಯಣ, ನಂದಾದೀಪವನ್ನಿಡುವದು, ಕುಮಾರೀಪೂಜನ, ಮಂತ್ರಜಪ ಹೋಮಾದಿಗಳು - ಈ ಬಗೆಯ ಅನುಷ್ಠಾನವನ್ನು ಮಾಡುವರು. ಈ ಬಗೆಯ ಅನುಷ್ಠಾನಗಳಿಗೆಲ್ಲ ಅಸುರೀಸಂಪತ್ತನ್ನು ನಾಶಮಾಡಿಕೊಳ್ಳುವದು, ದೈವೀಸಂಪತ್ತನ್ನು ಹೆಚ್ಚಿಸಿಕೊಳ್ಳುವದು - ಇದೇ ಮುಖ್ಯೋದ್ದೇಶ. ನವರಾತ್ರೆಯೆಂದರೆ ಪರಮೇಶ್ವರನ ಅನುಗ್ರಹವಾದ ದಿನಗಳು ಎಂಬ ನೆನಪು ಉಂಟಾಗಬೇಕು. ಹಾಗಾದರೆ ನಾವು ಮಾಡುವ ಅನುಷ್ಠಾನದಿಂದ ನಮಗೆ ಉತ್ಸಾಹವು ಉಕ್ಕುವದು, ನಮ್ಮ ಕಾರ್ಯಗಳಲ್ಲಿ ನಾವು ಜಯಶೀಲರಾಗುವೆವು.

    ಆಧ್ಯಾತ್ಮಸಾಧನಗಳ ಬಲಕ್ಕೆಲ್ಲ ಮೂಲವು ಪರಮೇಶ್ವರನು, ಪರಮೇಶ್ವರನಿಗೂ ನಮಗೂ ನಿತ್ಯಸಂಬಂಧವಿರುತ್ತದೆ. ಆದರೆ ಹೇಗೋ ನಾವು ಅದನ್ನು ಮರೆತಿದ್ದೇವೆ, ದುಃಖಪಡುತ್ತಿದ್ದೇವೆ. ಬೇರಿಗೂ ಕೊಂಬೆಗೂ ಸಂಬಂಧವು ತಪ್ಪಿ ಒಣಗುತ್ತಿರುವ ಕೊಂಬೆಯಂತೆಯೂ, ನೀರಿನ ಸಂಬಂಧವು ತಪ್ಪಿರುವ ನಲ್ಲಿಯಂತೆಯೂ, ನಾವು ಪರಮೇಶ್ವರನಿಂದ ಬೇರ್ಪಟ್ಟವರಾಗಿರುತ್ತೇವೆ. ಹತ್ತಿರವೇ ಇರುವ ಆತನಿಗೆ ದೂರವಾಗಿ ಬಿಟ್ಟಿರುತ್ತೇವೆ. ಈ ಸಂಬಂಧವನ್ನು ನೆನಪಿಗೆ ತಂದುಕೊಡುವದೇ ಸಾಧನಗಳ ಉದ್ದೇಶವು ಗುರೂಪದೇಶಾದಿಗಳಿಂದ ಸಾದನವನ್ನು ಮಾಡಿ ಪರಮೇಶ್ವರನಿಗೂ ನಮಗೂ ಇರುವ ನಿಕಟಸಂಬಂಧವನ್ನು ಮನಸ್ಸಿಗೆ ಹತ್ತಿಸಿಕೊಂಡ ಒಡನೆಯೇ ಬೇರಿಗೆ ನೀರೆರೆದರೆ ಚಿಗುರುವ ಕೊಂಬೆಯಂತೆ, ಮಳೆಬಿದ್ದ ಕೂಡಲೆ ಚಿಗುರಿ ಕೋಮಲವಾಗಿ ತೋರುವ ಹಸುರು ಗರಿಕೆಯಂತೆ, ವೈದ್ಯನ ಮಾತ್ರೆಯ ಸಹಾಯದಿಂದ ತಲೆಯೆತ್ತಿಕೊಳ್ಳುವ ರೋಗಿಯ ದೈಹಿಕಶಕ್ತಿಯಂತೆ, ನಾವು ಹೊಸ ಹುರುಪಿನಿಂದ ಕೂಡಿಕೊಳ್ಳುವೆವು. ನಮ್ಮ ಮನಸ್ಸಿನಲ್ಲಿ ಉಲ್ಲಾಸವೂ ಮುಖದಲ್ಲಿ ಹೊಳಪಿನ ಕಳೆಯೂ ಬರುತ್ತದೆ. ನಮ್ಮ ಸುತ್ತವಳೆಯವೂ ಸುಖಮಯವಾಗಿ ಮಾರ್ಪಡುವದಕ್ಕೆ ಮೊದಲಾಗುತ್ತದೆ.

    ಆದರೆ ನಮಗೆ ಧರ್ಮದಲ್ಲಿ ಶ್ರದ್ಧೆಯು ಕಡಿಮೆಯಾಗುತ್ತಾ ಬಂದಿದೆ. ಇದು ಅಧರ್ಮಕ್ಕೆ ಕಾಲವೆಂದು ಕೂಡ ನಮ್ಮಲ್ಲಿ ಕೆಲವರು ಹೇಳುತ್ತಿದ್ದಾರೆ. ಆದ್ದರಿಂದ ಸಾಧನಗಳ ಮಹತ್ತ್ವವನ್ನು ಯಾರಾದರೂ ಮಾಡಿ ತೋರಿಸುವದು ಅವಶ್ಯವಾಗಿದೆ. ನಮ್ಮ ದೇಶದಲ್ಲಿ ದೇಶಭಕ್ತಿ ಸ್ವತಂತ್ರಜೀವನದ ಸುಖವಿಶೇಷಗಳು- ಮುಂತಾದವುಗಳನ್ನು ಜನಸಾಮಾನ್ಯಕ್ಕೆ ವಿಶ್ವಾಸವುಂಟಾಗುವಂತೆ ರಾಷ್ಟ್ರದ ಮುಂದಾಳುಗಳು ಹಲವು ಬಗೆಯ ಕಷ್ಟಗಳನ್ನು ಸಹಿಸಿಕೊಂಡಾದರೂ ತೋರಿಸಿಕೊಟ್ಟ ಮೇಲೆಯೇ ನಮ್ಮಂಥವರಿಗೆ ಅದರ ಹಂಬಲು ಹೆಚ್ಚಿರುತ್ತದೆಯಲ್ಲವೆ? ಇದರಂತೆ ಆಧ್ಯಾತ್ಮಸಾಧನಗಳ ಅನುಷ್ಠಾನವನ್ನು ತಾವೂ ಮಾಡಿ ಇದರ ಮೇಲ್ಮೈಯನ್ನು ಮನಗಾಣಿಸುವವರು ಮುಂದಕ್ಕೆ ಬಂದರೆ, ಆಗ ಜನಸಾಮಾನ್ಯವೂ ಈ ವಿಷಯದಲ್ಲಿ ಎಚ್ಚರಗೊಂಡೀತು ಆದರೆ ನಮ್ಮ ದೌರ್ಭಾಗ್ಯದಿಂದ ಅಂಥ ಮಹನೀಯರು ಈಗ ವಿರಳರಾಗಿರುತ್ತಾರೆ. ನಮರಾತ್ರಿಯೆಂದರೆ ಊಟ, ತಿಂಡಿ- ಮುಂತಾದವುಗಳ ಸವಿಯನ್ನು ಕಾಣುವ ಹಬ್ಬಗಳ ಸಾಲೆಂದು ಭಾವನೆ ಅನೇಕರಲ್ಲಿ ಮೂಡಿಕೊಂಡಿದೆ. ನಾವೂ ಸಾಧನಗಳನ್ನು ಮಾಡಿ ಸಿದ್ಧಿಯನ್ನು ಪಡೆದು ಮಿಕ್ಕವರಿಗೂ ಮಾರ್ಗದರ್ಶಿಗಳಾಗುವುದನ್ನು ಬಿಟ್ಟು ಸಾಧನಗಳ ಮರ್ಮವನ್ನರಿಯದ ಯಾರೋ ಒಬ್ಬರನ್ನು ಕರೆಯಿಸಿ ಯಾವದಾದರೊಂದು ಕರ್ಮವನ್ನು ಮಾಡಿಸಿದೆವೆಂದು ಹೆಮ್ಮೆಪಡುವ ಮಟ್ಟಕ್ಕೆ ಇಳಿದುಬಿಟ್ಟಿರುತ್ತೇವೆ. ಅರ್ಚಕನ ತಪೋಬಲದಿಂದ ಅರ್ಚನೆಗೆ ವೀರ್ಯವು ಬರುತ್ತದೆ ಎಂಬ ರಹಸ್ಯವು ನಮ್ಮ ಮನಸ್ಸಿಗೆ ದೂರವಾಗಿ ಬಿಟ್ಟಿರುತ್ತದೆ ಅದನ್ನು ತೋರಿಸುವವರೂ ನಮಗೆ ದೊರೆಯುತ್ತಲಿಲ್ಲ.

    ಆದರೂ ನಾವು ಎದೆಗುಂದಬೇಕಾದದ್ದಿಲ್ಲ ನಾವು ಈಗ ಇರುವ ಸ್ಥಿತಿಯು ಅತ್ಯಂತ ಕೀಳು; ಪರಮೇಶ್ವರನ ಅನುಗ್ರಹದಿಂದ ನಾವು ಮೇಲಕ್ಕೇರಬಹುದು; ಆತನ ಅನುಗ್ರಹದಿಂದ ಸಾಧನವು ಫಲಕಾರಿಯಾಗಿಯೇ ತೀರುತ್ತದೆ; ಆ ಅನುಗ್ರಹವು ನಮ್ಮೆಲ್ಲರಿಗೂ ಸಮಾನವಾಗಿರುತ್ತದೆ- ಎಂಬ ದೃಢನಂಬಿಕೆಯಿಂದ ಕೂಡಿ ನಾವು ನಿಃಸ್ವಾರ್ಥತೆಯಿಂದ ಅನುಷ್ಠಾನುಕ್ಕೆ ಕೈಹಾಕಬೇಕು. ಸ್ವಾರ್ಥವನ್ನು ಬಿಡುವದೆಂದರೆ ಕರ್ಮವನ್ನು ಮಾಡುವಾಗ ಅಲ್ಪ ಫಲಗಳನ್ನು ಮನಸ್ಸಿಗೆ ತಂದುಕೊಳ್ಳದೆ ಇರುವದು ನವರಾತ್ರೆಯ ಕಾಲದಲ್ಲಿ ಹಿಂದೆ ಅನೇಕರಿಗೆ ಪರಮೇಶ್ವರನ ಅನುಗ್ರಹವಾಗಿರುತ್ತದೆ, ಈ ಮಂಗಲಮಯವಾದ ಕಾಲದಲ್ಲಿ ಮಾಡುವ ಅನುಷ್ಠಾನವು ಬಹಳ ಬೆಲೆಯುಳ್ಳದ್ದು ಪರಮೇಶ್ವರನು ಪ್ರೀತನಾದರೆ ಏನೇನು ಸಿದ್ಧಿಸದು? ಎಂದು ಭರವಸೆಯಿಂದ ಕರ್ಮವನ್ನು ಪ್ರಾರಂಭಿಸಬೇಕು ದೊಡ್ಡವರ ಸ್ಮರಣೆಯಿಂದಲೂ ಈ ಭರವಸೆ ಇಮ್ಮಡಿಸುತ್ತದೆ.
    ಮುಖ್ಯವಾಗಿ ಪರಮೇಶ್ವರನ ಸಾನ್ನಿಧ್ಯದ ಭಾವನೆಯು ನಮಗೆ ಬಹಳ ಅವಶ್ಯವಾಗಿರುತ್ತದೆ. ನವರಾತ್ರೆಯು ಬಂದಿತು ಎಂದು ಕೂಡಲೆ ಈ ಭಾವನೆಯು ಮೊಳೆತು ಕೊಳ್ಳಲಿ! ಪರಮೇಶ್ವರನನ್ನು ಯಾವಾಗಲೂ ತಮ್ಮ ಹೃದಯದಲ್ಲಿಟ್ಟವರು ನಮ್ಮ ಮನೆಗೆ ಬಂದು ಅನುಷ್ಠಾನಮಾಡುವದೂ ಶ್ರೇಷ್ಠವೇ ಸರಿ. ಆದರೆ ಅದು ಗೌಣವೆಂಬುದನ್ನು ಮರೆಯಬಾರದು ನಮಗೂ ಪರಮಾತ್ಮನಿಗೂ ಇರುವ ಸಂಬಂಧವನ್ನು ನಾವೇ ಏರ್ಪಡಿಸಿಕೊಳ್ಳುವದು ನ್ಯಾಯವಾದದ್ದು ರಾಮಾಯಣಾದಿಗಳನ್ನು ಓದುವಾಗ ಆಯಾ ಪಾತ್ರಗಳು ನಾವೇ ಆಗಿಬಿಡಬೇಕು; ಆ ಸನ್ನಿವೇಶವು ಈಗಲೇ ಇದ್ದಂತೆ ಉತ್ಕಟಭಾವನೆಯುಂಟಾಗಬೇಕು ಮಾಡುವ ಅನುಷ್ಠಾನದಲ್ಲಿ ತಲ್ಲೀನರಾಗಬೇಕು ನಾವು ಮಾಡುವ ಕರ್ಮಕ್ಕೆ ಸಾಮಗ್ರಿಗಳು ಬೇಕೆಂಬುದು ನಿಜ; ಆದರೆ ಹೊರಗಿನ ಸಾಮಗ್ರಿಗಳು ಯಾವದೊಂದರ ಕೊರತೆಯಿದ್ದರೂ ಚಿಂತೆಯಿಲ್ಲ ಭಕ್ತಿಭಾವಕ್ಕೆ ಸ್ವಲ್ಪವೂ ಕೊರತೆಯಿರಬಾರದು. ಪರಮೇಶ್ವರಲ್ಲಿಗೆ ಅಪ್ಲಿಕೇಶನ್ ಹಾಕಿರಿ; ಸರಕಾರಿಯ ನೌಕರಿಗಳಿಗೆ ಅರ್ಜಿ ಹಾಕಿಕೊಂಡರೂ ಖಾಲಿ ಇಲ್ಲ ಎಂದು ಉತ್ತರ ಬರುವ ಸಂಭವವೇ ಹೆಚ್ಚಾಗಿದೆ. ಆದರೆ ಪರಮೇಶ್ವರನ ರಾಜ್ಯದಲ್ಲಿ ಖಾಲಿ ಎಂಬುದೇ ಇಲ್ಲ ಆತನ ಕಛೇರಿಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು ಭಾವಪೂರ್ವಕವಾಗಿ ಹಾಕಿದ ಅರ್ಜಿಗೆ ಯಾವಾಗಲೂ ಸುಮುಖವಾಗಿಯೇ ಉತ್ತರವು ಬರುತ್ತದೆ.
    ನವರಾತ್ರೆಯೆಂಬುದು ನವಚೈತನ್ಯವುಂಟಾಗುವ ಕಾಲ. ನಮರಾತ್ರೆಯಲ್ಲಿರುವ ನವತ್ವವು ಯಾವದು? ಒಂಬತ್ತು ರಾತ್ರೆಗಳ ಗುಂಪು ಎಂಬ ಅರ್ಥವನ್ನು ಮಾಡಿಕೊಳ್ಳ ಬೇಡಿರಿ ನಾವೆಲ್ಲರೂ ನವಮನುಷ್ಯರಾಗಬಹುದಾದ ಕಾಲವಿದು ಪಾಡ್ಯದಿನದಂದು ನಾವೆಲ್ಲರೂ ಈ ಉತ್ತಮವಾದ ಮಂಗಲಕರವಾದ ಉತ್ಸವದ ಪ್ರಥಮದಿನದಲ್ಲಿ ಕಲೆಯೋಣ. ದೇವಿ ಮಹಾತ್ಮೈಯನ್ನು ಕೇಳೋಣ ಪರಮಾತ್ಮನ ವಿಷಯವಾದ ಉತ್ತಮ ಭಾವನೆಗಳಲ್ಲಿ ನಮ್ಮ ಮನಸ್ಸನ್ನು ಅದ್ದೋಣ ನಮ್ಮ ವ್ಯಕ್ತಿತ್ವವು ಹೋಗಲಿ! ಉಪ್ಪಿನ ಬೊಂಬೆಗಳು ಕಡಲಿನಲ್ಲಿ ಮುಳಗಿದರೆ ಕಡಲಿನ ನೀರೇ ಅಗಿಬಿಡುವಂತೆ ಪರಮಾತ್ಮನ ಭಾವನೆಗಳು ಕಡಲಿನಲ್ಲಿ ಮುಳಿಗಿದರೆ ಕಡಲಿನ ನೀರೇ ಆಗಿಬಿಡುವಂತೆ ಪರಮಾತ್ಮನ ಭಾವನೆಯ ಅಮೃತ ಪುಷ್ಕರಿಣಿಯಲ್ಲಿ ಮುಳುಗಿ ತನ್ನಯರಾಗಿ ಬಿಡೋಣ! ಈ ಆನಂದವನ್ನು ಸಂಪಾದಿಸುವ ಸಂಕಲ್ಪವನ್ನು ನೆರವೇರಿಸಿಕೊಳ್ಳುವಂತೆ ಭಗವಂತನಲ್ಲಿ ಮೊರೆಯಿಡೋಣ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ