ವರಸಿದ್ಧಿವಿನಾಯಕ ವ್ರತ

    ಈ ವ್ರತಾಧಿದೇವತೆಯನ್ನು 'ಸಿದ್ಧಿವಿನಾಯಕ'ನೆಂದು ಹೆಸರಿಸಿದ್ದಾರೆ. ಈತನು ಚತುರ್ಥೀತಿಥಿಗೆ ಒಡೆಯನು. ಮಾತೃಭಕ್ತಿಸಂಪನ್ನನು ಆದ್ದರಿಂದಲೇ ತೃತೀಯಾ ತಿಥಿಯು ಪ್ರಾತಃಕಾಲದಲ್ಲಿ ಸ್ವಲ್ಪಭಾಗವಿದ್ದು ಮಧ್ಯಾಹ್ನಕ್ಕೆ ಚತುರ್ಥೀ ಬಂದರೆ ಅದೇ ದಿನವೇ ಗೌರಿ-ಗಣಪತಿವ್ರತಗಳು ಒಟ್ಟಿಗೆ ನೆರವೇರುತ್ತವೆ. 'ಮಾತೃವಿದ್ಧಾ ಪ್ರಶಸ್ಯತೇ' ಎಂದು ಧರ್ಮಶಾಸ್ತ್ರವಾಕ್ಯವಿದೆ. ಈ ಗಣಪತಿಯು ವಿನಾಯಕನು ತನಗೆ ಯಾರೂ ನಾಯಕರಿಲ್ಲದವನು ಮತ್ತು ಅರ್ಚಿಸಿದವರಿಗೆ 'ಸಿದ್ಧಿ'ಗಳನ್ನು ಅನುಗ್ರಹಿಸುವವನು ಗಣಪತಿಯು ಭೂಮಿತತ್ತ್ವದವನಾದ್ದರಿಂದ ಮಣ್ಣಿನಿಂದ ಮಾಡಿದ ವಿಗ್ರಹವನ್ನು ಪೂಜಿಸುವ ಪದ್ಧತಿ ಬೆಳೆದುಬಂದಿದೆ. ಚತುರ್ಭುಜನಾಗಿರುವದು ನಾಲ್ಕು ಪುರುಷಾರ್ಥಗಳ ದಾತನೆಂದೂ, ಲಂಬೋದರನಾಗಿರುವದು ಬ್ರಹ್ಮಾಂಡವನ್ನೆಲ್ಲ ತನ್ನ ಉದರದಲ್ಲಿ ಧರಿಸಿರುವನೆಂದೂ, ಗಜಮುಖನಾಗಿರುವದು ಓಂಕಾರ ರೂಪನೆಂಬುದನ್ನೂ, ಅಗಲವಾದ ಕಿವಿಯುಳ್ಳವನಾಗಿರುವದು ಸಾರಗ್ರಾಹಿಯೆಂದೂ, ಸಣ್ಣ ಕಣ್ಣುಗಳುಳ್ಳವನಾಗಿರುವದು ಅಂತರ್ಮುಖದೃಷ್ಟಿಯವನೆಂದೂ ಸೂಚಿಸುತ್ತದೆ. ಬ್ರಹ್ಮಚಾರಿಯೆಂದೂ ಸಿದ್ಧಿಬುದ್ಧಿಯರೇ ಈತನ ಪತ್ನಿಯರೆಂದೂ ಎರಡೂ ವಿಧವಾಗಿ ಹೇಳುವದುಂಟು. ಬ್ರಹ್ಮವಿದನಾದ್ದರಿಂದ 'ಬ್ರಹ್ಮಣ್ಯೇವ ಚರತಿ' ಎಂಬರ್ಥದಲ್ಲಿ ಬ್ರಹ್ಮಚಾರಿಯು ತಪಸ್ಸಿನಿಂದ ಸಿದ್ಧಿಬುದ್ಧಿಗಳನ್ನು ವಶಮಾಡಿಕೊಂಡಿರುವದೇ ಸಿದ್ಧಿವಿನಾಯಕತ್ವವು ಈತನು ಮೋದಕಪ್ರಿಯನೆಂದರೆ ಮಧುರವಾದ ಭಕ್ತಿಪ್ರಿಯನೆಂದರ್ಥ. ಇಲಿಯ ವಾಹನವೂ ಕೂಡ ಅಲ್ಪಬುದ್ಧಿಯನ್ನು ತುಳಿದಿಟ್ಟಿರುವ ಮಹಾತ್ಮ ನೀತನು - ಎಂದು ಸೂಚಿಸುವದು. ಹೀಗೆ ಆಧ್ಯಾತ್ಮದೃಷ್ಟಿಯಿಂದ ಸಕಲ ದೈವೀ ಗುಣಸಂಪನ್ನನೂ ಅಂತರ್ಮುಖನೂ ಮಹಾಯೋಗಿಯೂ ಆಗಿರುವ ಈ ದೇವನು ಮುಮುಕ್ಷುಗಳಿಗೂ ಸಂಸಾರಿಗಳಿಗೂ ಎಲ್ಲರಿಗೂ ಪೂಜ್ಯನಾಗಿರುವನು.
    ನಾಮರೂಪರಹಿತವಾದ ಬ್ರಹ್ಮಕ್ಕೆ ಉಪಾಸಕರ ಹಾಗೂ ಕರ್ಮತರ ಸೌಕರ್ಯಾರ್ಥವಾಗಿ ಋಷಿಗಳು ನಾಮರೂಪಗಳನ್ನು ಕಲ್ಪಿಸಿಕೊಟ್ಟಿರುತ್ತಾರೆ. ಗಣಪತಿಯ ನಾಮರೂಪಗಳೂ ಹೀಗೆಯೇ ಕಲ್ಪಿತವಾಗಿವೆ ಆದರೆ ಇದು ಶಾಸ್ತ್ರೀಯಕಲ್ಪನೆಯಾದ್ದರಿಂದ ಬ್ರಹ್ಮಪ್ರಾಪ್ತಿಗೆ ಉಪಾಯವಾಗಿರುತ್ತದೆ. ವೇದದಲ್ಲಿ ಓಂಕಾರವನ್ನು ಪರಬ್ರಹ್ಮಕ್ಕೆ ಪ್ರತೀಕವಾಗಿ ಹೇಳಿದೆ. ಆ ಓಂಕಾರವೇ ಗಣಪತಿಯ ಆನೆಯ ಮುಖವಾಗಿದೆ. "ಪ್ರಣವಸ್ವರೂಪಂ ವಕ್ರತುಂಡಮ್" ಎಂದು ಶ್ರೀ ಮುತ್ತುಸ್ವಾಮಿದೀಕ್ಷಿತರು ಹಾಡಿರುತ್ತಾರಷ್ಟೆ! ಇಂಥ ಗಣಪತಿಗೆ ವಿಶಾಲವಾದ ಎರಡು ಕಿವಿಗಳೂ ಕಿರಿದಾದ ಎರಡು ಕಣ್ಣುಗಳೂ ಇವೆ. ಈ ಕಣ್ಣುಗಳು ಅಂತರ್ಮುಖಿತ್ವವನ್ನು ಸೂಚಿಸುತ್ತವೆ. ಕಿವಿಗಳು ವೊರದಂತೆ ಇದ್ದು ಹೇಗೆ ಲೋಕದಲ್ಲಿ ಜನರು ವೊರದಿಂದ ಧ್ಯಾನವನ್ನು ಕೇರಿ ಸಿಪ್ಪೆ-ಕಾಳುಗಳನ್ನು ಬೇರ್ಪಡಿಸುತ್ತಾರೋ ಹಾಗೆ ಗಣಪತಿಯು ತಾನು ಕಿವಿಯಿಂದ ಕೇಳಿದ್ದೆಲ್ಲವನ್ನೂ ಒಳಕ್ಕೆ ತೆಗೆದುಕೊಳ್ಳದೆ ಸತ್ಯವೂ ಪ್ರಿಯವೂ ಆಗಿರುವ ಬ್ರಹ್ಮವಿಚಾರವನ್ನೇ ಒಳಕ್ಕೆ ಸ್ವೀಕರಿಸುತ್ತಾನೆ ಎಂಬಿದನ್ನು ಸೂಚಿಸುತ್ತದೆ ಇನ್ನು ಆತನ ದೊಡ್ಡ ಹೊಟ್ಟೆಯು ಬ್ರಹ್ಮಾಂಡವೆಲ್ಲ ಅವನಲ್ಲಿ ಅಡಗಿದೆ ಎಂಬುದನ್ನು ಸೂಚಿಸುತ್ತದೆ ಮತ್ತು ಆತನ ಹೃದಯದಲ್ಲಿ ಸಮಸ್ತ ವಿದ್ಯೆಗಳೂ ತುಂಬಿವೆ ಎಂಬಿದನ್ನು ತಿಳಿಸುತ್ತದೆ ಇನ್ನು ಆತನ ನಾಲ್ಕು ಭುಜಗಳು ಧರ್ಮಾರ್ಥಕಾಮಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ಭಕ್ತರಿಗೆ ನೀಡುತ್ತವೆ ಎಂಬಿದನ್ನು ತಿಳಿಸುತ್ತವೆ. ಕೈಯಲ್ಲಿರುವ ಮೋದಕವು ಮಧುರವಾಗಿದ್ದು ಆತನನ್ನಾಶ್ರಯಿಸಿದವರಿಗೆ ಜೀವನದಲ್ಲಿ ಸುಖಶಾಂತಿಗಳು ದೊರಕುವವೆಂದು ಸೂಚಿಸುತ್ತವೆ. ಹೀಗೆ ಗಣತಿಯ ರೂಪವು ಆಧ್ಯಾತ್ಮವಾದ ಅರ್ಥವನ್ನೇ ಒಳಗೊಂಡಿದೆ.
    ಈಗ ವ್ರತವಿಧಾನವನ್ನು ನೋಡೋಣ. 'ಪ್ರಾತಃ ಶುಕ್ಲ ತಿಲೈಃ ಸ್ನಾತ್ವಾ ಮಧ್ಯಾಹ್ನೇ ದೇವಮರ್ಚಯೇತ್' (ಬೆಳಗ್ಗೆ ಬಿಳೀ ಎಳ್ಳಿನ ಎಣ್ಣೆಯಿಂದ ಅಭ್ಯಂಗನ ಸ್ನಾನಮಾಡಿ ಮಧ್ಯಾಹ್ನಕಾಲಕ್ಕೆ ಈ ದೇವನನ್ನು ಪೂಜಿಸಬೇಕು) ಎಂದು ವಿಧಿಯಿದೆ. ವ್ರತಗಳಿಗೆಲ್ಲ ಕಾಲ, ದ್ರವ್ಯ, ದೇಶಗಳು ಗೊತ್ತಾಗಿರುವವನ್ನೇ ನಾವು ಅನುಸರಿಸ ಬೇಕು. ಮಧ್ಯಾಹ್ನಕಾಲವು ಈ ಪೂಜೆಗೆ ಪ್ರಶಸ್ತವೆಂದಾಯಿತು. ಅನಂತರ ಪೂಜಾ ದ್ರವ್ಯಗಳ ವಿಚಾರ. ಇವು ಇಪ್ಪತ್ತೊಂದು ಸಂಖ್ಯೆಗಳು ಇರಬೇಕೆಂದು ತಿಳಿಸಿದ್ದಾರೆ. ಪತ್ರೆ(ಎಲೆ), ಪುಷ್ಪ(ಹೂ), ನಿವೇದನಪದಾರ್ಥಗಳೂ (ವೋದಕ, ಚಕ್ಕುಲಿ ಮುಂತಾದ ತಿಂಡಿಗಳೂ) ಎಲ್ಲವೂ 21 ಸಂಖ್ಯೆಯುಳ್ಳದ್ದಾಗಿರಬೇಕು. ಗಣಪತಿಯನ್ನು ನಿವೇದನಪ್ರಿಯನೆನ್ನುವರು. ಇದರ ಅಭಿಪ್ರಾಯವೇನೆಂದರೆ: ನಮ್ಮ ಕರ್ಮೇಂದ್ರಿಯಗಳು, ಜ್ಞಾನೇಂದ್ರಿಗಳು, ಶಬ್ದಾದಿ ಐದು ವಿಷಯಗಳು, ಮನಾದಿ ನಾಲ್ಕು ತತ್ತ್ವಗಳು, ಸ್ವಭಾವ, ಆತ್ಮರುಗಳೆಂಬ 21ನ್ನು ಪೂರ್ಣವಾಗಿ ಈತನಿಗೆ ಒಪ್ಪಿಸಬೇಕೆಂದಭಿಪ್ರಾಯ. ನಿವೇದನ ಎಂದರೆ ಸಮರ್ಪಿಸುವದು ಇದರ ಗುರುತಾಗಿ ತಿಂಡಿಗಳನ್ನು ಮಾಡಿ ದೇವರಿಗೆ ತೋರಿಸುತ್ತೇವೆ. 21ರಲ್ಲಿಯೂ ಒಂದು ಮೋದಕವನ್ನು ಮಾತ್ರ ಗಣಪತಿಗೆ ಸಮರ್ಪಿಸಿ ಉಳಿದ ಹತ್ತನ್ನು ದಾನಮಾಡಿ ಇನ್ನು ಹತ್ತನ್ನು ತಾನು ಸಕುಟುಂಬನಾಗಿ ಭುಂಬಿಸಬೇಕೆಂದಿದೆ. ಆದ್ದರಿಂದ ಮನಸ್ಸೆಂಬುದೊಂದನ್ನು ವಿನಾಯಕನಿಗೆ ಅರ್ಪಿಸಿದರೆ ಸಾಕು. ಉಳಿದದ್ದು ಪ್ರಾಪಂಚಿಕವಿಷಯಗಳಲ್ಲಿ ತೊಡಗಿದ್ದರೂ ವಿನಾಯಕನು ಕಾಪಾಡುವನು ಎಂದಾಯಿತು ಈಗ ಈತನನ್ನು ಧ್ಯಾನಿಸುವ ಶ್ಲೋಕಗಳನ್ನು ಕೇಳೋಣ.
ಭವಸಂಚಿತಪಾಪೌಘವಿಧ್ವಂಸನವಿಚಕ್ಷಣಮ್ |
ವಿಘ್ನಾಂಧಕಾರಭಾಸ್ವಂತಂ ವಿಘ್ನರಾಜಮಹಂ ಭಜೇ ||
ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಮ್ |
ಪಾಶಾಂಕುಶಧರಂ ದೇವಂ ಧ್ಯಾಯೇತ್ ಸಿದ್ಧಿವಿನಾಯಕಮ್ ||
    "ಸಂಸಾರವೆಂಬ ಪಾಪರಾಶಿಯನ್ನು ನಾಶಗೊಳಿಸುವದರಲ್ಲಿ ಸಮರ್ಥನೂ ವಿಘ್ನಪರಂಪರೆಗಳೆಂಬ ಕತ್ತಲೆಯನ್ನು ಹೊಡೆದೋಡಿಸುವ ಸೂರ್ಯನೂ ಏಕದಂತನೂ ಶೂರ್ಪಕರ್ಣನೂ ಆನೆಯ ಮುಖನೂ ಚತುರ್ಭುಜನೂ ಪಾಶಾಂಕುಶಗಳನ್ನು ಧರಿಸಿರುವವನೂ ಆಗಿರುವ ವಿಘ್ನರಾಜನಾದ ಸಿದ್ಧಿವಿನಾಯಕನನ್ನು ಭಜಿಸುತ್ತೇನೆ" ಎಂಬೀ ಶ್ಲೋಕಗಳಲ್ಲಿ ವ್ರತದ ಸಾರವೆಲ್ಲ ಅಡಗಿದೆ. ಕರ್ಮೋಪಾಸನೆಗಳೆರಡರಲ್ಲಿಯೂ ಅಂತರಂಗದಲ್ಲಿ ಮಾಡಬೇಕಾದ ಚಿಂತನೆಗೇ ಹೆಚ್ಚು ಪ್ರಾಮುಖ್ಯವಿದೆ. ಒಳಗೆ ಭಾವನೆಯಿಲ್ಲದೆ ಹೊರಗೆ ಸುಮ್ಮನೆ ಕೈಕಾಲುಗಳನ್ನಾಡಿಸಿದರೆ ಏನೂ ಫಲವಿಲ್ಲ ಆದ್ದರಿಂದ ವ್ರತಮಾಡುವವರೆಲ್ಲರೂ ಮೊದಲು ಧ್ಯಾನಶ್ಲೋಕದಂತೆ ತಮ್ಮ ಒಳಗೆ ವಿನಾಯಕನನ್ನು ಚಿಂತಿಸಬೇಕು.
    ಆನಂತರ ಹೃದಯದಲ್ಲಿರುವ ದೇವನೇ ಪ್ರತಿಮೆಯಲ್ಲಿ ಪೂಜೆಗಾಗಿ ಸನ್ನಿಹಿತನಾಗಿದ್ದಾನೆಂದು ಭಾವಿಸಬೇಕು. ಇದೇ ಪ್ರಾಣಪ್ರತಿಷ್ಠೆಯು ಆನಂತರ ಅವಾಹನಾದಿ ಉಪಚಾರಗಳನ್ನು ಸಮರ್ಪಿಸಬೇಕು ಎಲ್ಲಾ ಉಪಚಾರಗಳಿಗೂ ಬೇರೆಬೇರೆಯಾಗಿ ಪದ್ಯಗಳಿವೆ ಅವುಗಳಲ್ಲಿ ವಿನಾಯಕನ ಗುಣಚಾರಿತ್ರ್ಯಗಳನ್ನು ಹೊಗಳಿರುತ್ತದೆ ಹೇಳಿಕೊಳ್ಳಲು ಬಾರದವರು ಬರಿಯ 'ವಿನಾಯಕಾಯ ನಮಃ' ಎಂಬ ಹೆಸರಿನಿಂದಲೇ ಪೂಜಿಸಬಹುದು. ಅಷ್ಟೋತ್ತರಶತನಾಮಗಳನ್ನು ಮಾತ್ರ ಪಾಠಮಾಡಿಕೊಂಡು ಕಲಿತುಕೊಂಡು ಹೇಳಿ ಪೂಜಿಸಬೇಕು, ಇದೇನೂ ಹೆಚ್ಚು ಕಷ್ಟವಾಗಲಾರದು ಭಗವಂತನು ನಾಮಪ್ರಿಯನು ಕಲಿಯುಗದಲ್ಲಿ ನಾಮಕೀರ್ತನೆಯೇ ಪಾಪಪರಿಹಾರಕ್ಕೆ ಮುಖ್ಯಸಾಧನ ಆದ್ದರಿಂದ ವಿನಾಯಕನ ನಾಮಗಳ ಪಾರಾಯಣವು ಶ್ರೇಯಸ್ಕರವು. ಹೀಗೆ ಪೂಜಿಸಿದ ಅನಂತರ ಧೂಪದೀಪನೈವೇದ್ಯಗಳನ್ನು ಅರ್ಪಿಸಿ ಮಂಗಲಾರತಿಮಾಡಿ ದೂರ್ವಾಪೂಜೆಯನ್ನು ಮಾಡಬೇಕು ಹಿಂದೆ ದೇವತೆಗಳು ತಮಗೆ ಸಂಕಟಬಂದಾಗ ವಿನಾಯಕನನ್ನು ಪೂಜಿಸಿ ಹತ್ತು ನಾಮಗಳಿಂದ ಎರಡೆರಡು ಗರಿಕೆಗಳಂತೆ ಅರ್ಪಿಸಿ ಒಂದು ಗರಿಕೆಯನ್ನು ಮಾತ್ರ ಒಮ್ಮೆಗೇ ಹತ್ತುನಾಮಗಳನ್ನೂ ಹೇಳಿ ಅರ್ಪಿಸಿದರಂತೆ ಆದರಿಂದ ದೇವನು ಸಂತುಷ್ಟನಾಗಿ ವರಪ್ರದಾನಮಾಡಿದನಂತೆ ಆದ್ದರಿಂದ ನಾವುಗಳು ಕೂಡ ಈಗಲೂ ಗಣಾಧಿಪ, ಉಮಾಪುತ್ರ, ಅಘನಾಶನ, ವಿನಾಯಕ, ಈಶತನಯ, ಸರ್ವಸಿದ್ಧಿಪ್ರದಾಯಕ, ಏಕದಂತ, ಇಭವದನ, ಮೂಷಿಕವಾಹನ, ಕುಮಾರಗುರು - ಎಂಬ ದಶನಾಮಗಳಿಂದ ದೂರ್ವಾಪೂಜೆಯನ್ನು ಮಾಡಬೇಕು. ದೂರ್ವೆಯು ಸುಲಭವಾಗಿ ಸಿಗುವ ವಸ್ತು ಅದು ಪವಿತ್ರವು ದರ್ಭೆಯೆಂತ ಬ್ರಾಹ್ಮಣರು ಉಪಯೋಗಿಸುದೂ ಇದೇ ಹುಲ್ಲಿನ ಜಾತಿಯದೇ ಇದರಲ್ಲಿ ತ್ರೀಮೂರ್ತಿಗಳು ಇರುತ್ತಾರೆಂತ ಪ್ರತೀತಿಯಿದೆ ಕುಲಾಭಿವೃದ್ಧಿಯನ್ನು ಸೂಚಿಸುವ ಈ ದೂರ್ವೆಯು ಮಂಗಳದ್ರವ್ಯಗಳಲ್ಲೊಂದಾಗಿದೆ. ಗೋಮಯವನ್ನು ಉಂಡೆಮಾಡಿ ದೂರ್ವೆ ಸಿಕ್ಕಿಸಿ ವಿನಾಯಕನ ಪೂಜೆಮಾಡುವ ಪದ್ಧತಿಯು ಈಗಲೂ ಪ್ರಸಿದ್ಧವಾಗಿದೆ. ಹೀಗೆ ಪೂಜೆಯನ್ನು ಪೂರೈಸಿ ಕಥಾಶ್ರವಣವನ್ನು ಮಾಡಬೇಕು.
    ವಿನಾಯಕನ ಕಥೆಯ ಮುಖ್ಯ ಸಾರಾಂಶವೆಂದರೆ : ಆತನನ್ನು ತಿರಸ್ಕರಿಸಿದ ಚಂದ್ರನಂಥ ದೇವತೆಗೂ ಬಂದ ಕಷ್ಟ, ಆನಂತರ ಅದು ವಿನಾಯಕನ ಪೂಜೆಯಿಂದಲೇ ಪರಿಹಾರವಾದದ್ದು ಮತ್ತು ಶಾಪಗ್ರಸ್ತನಾದ ಚಂದ್ರನನ್ನು ನೋಡಿದ್ದಕ್ಕಾಗಿ ಕೃಷ್ಣ ಭಗವಂತನಂಥವನಿಗೂ ಒದಗಿದ ಮಿಥ್ಯಾಪವಾದ ಅಂತೂ ವಿನಾಯಕನ ಪೂಜೆಯಿಂದ ನಮ್ಮ ದುಃಖಪರಂಪರೆಗಳೂ ನಾವೂ ಜೀವರೆಂಬ ಮಿಥ್ಯಾಪವಾದವೂ ಪರಿಹಾರವಾಗುತ್ತವೆ ಎಂದಿಟ್ಟುಕೊಳ್ಳಬೇಕು ವೇದಾಂತಿಗಳು ಹೇಳುವಂತೆ ಈಗ ನಾವೆಲ್ಲರೂ ಸಂಸಾರಿಗಳೆಂಬ ಮಿಥ್ಯಾಪವಾದಕ್ಕೆ ಪಕ್ಕಾಗಿರುವೆವು ಸಿದ್ಧಿವಿನಾಯಕನ ವರಪ್ರದಾನದಿಂದಲೇ ಅದು ತೊಲಗಿ ನಾವು ಮುಕ್ತರಾಗಬೇಕಾಗಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ