ದೇವಿ ಸ್ಮರಣೆ

    ಪುರಾಣಗಳ ಅಭಿವ್ಯಕ್ತಿ ಮೊದಲು ವೇದಗಳಲ್ಲಿಯೇ ಆಗಿದೆ ಛಾಂದೋಗ್ಯೋಪನಿಷತ್ತಿನಲ್ಲಿ ಸನತ್ಕುಮಾರನಾರದ ಸಂವಾದದಲ್ಲಿ "ಋಗ್ವೇದಂ ಭಗವೋಧ್ಯೇಮಿ. ಇತಿಹಾಸಂ ಪುರಾಣಂ ಪಂಚಮಂ ವೇದಾನಾಂ ವೇದಮ್" ||
(ಛಾಂ 7-1-2)ರಲ್ಲಿ ಅಕಾಲದಲ್ಲಿ ಪ್ರಚಲಿತವಿದ್ದು ಶಾಸ್ತ್ರಗಳು ನಿರ್ದಿಷ್ಟವಾಗಿವೆ. "ಋಚಃ ಸಾಮಾನಿ ಛಂದಾಂಸಿ ಪುರಾಣಂ ಯಜುಷಾಸಹ|" (ಉಚ್ಛಿಷ್ಟನೆಂಬ ಋಷಿಯಿಂದ ನಾಲ್ಕು ವೇದಗಳ ನಂತರ ಪುರಾಣಗಳು ಉತ್ಪನ್ನವಾದವೆಂದು ಉಕ್ತವಾಗಿದೆ. ಆದರೆ ಮೂಲಪುರಾಣಗಳು ಈಗ ಉಪಲಬ್ದವಿಲ್ಲ. ಇವು ಯಾವದೋ ಒಂದು ಶತಮಾನಗಳ ನಿರ್ದಿಷ್ಟ ರಚನೆಗಳೂ ಅಲ್ಲ. ಯಾವಾಗ ವೇದಗಳ ಭಾಷೆಯು ಸಾಧಾರಣ ಜನತೆಗೆ ಅರ್ಥವಾಗದಾಯಿತೋ, ಆಗ ಅದರ ತತ್ತ್ವಗಳನ್ನು ಜನತೆಗೆ ತಿಳಿಸಲು ಪುರಾಣಗಳ ರಚನೆಯಾಯಿತು. ನಮಗೆ ಅರ್ಥವಾಗುವ ಭಾಷೆಯಲ್ಲಿ ರಚಿತವಾಗಿರುವದರಿಂದ ಅವು ಬೇಗ ನಮ್ಮ ಹೃದಯಕ್ಕೆ ಮುಟ್ಟುತ್ತವೆ. ಧಾರ್ಮಿಕದೃಷ್ಟಿಯಿಂದ ಪುರಾಣಗಳು ಅತ್ಯಂತ ಮಹತ್ತ್ವವಾದವುಗಳು ಆದ್ದರಿಂದಲೇ ಮಹಾಭಾರತದಲ್ಲಿ.
ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ |
ಭಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರಿಷ್ಯತಿ ||
ಎಂದಿರುವದು. ಆದ್ದರಿಂದ ಈ ಗ್ರಂಥಗಳ ಅಧ್ಯಯನ ಅತ್ಯಂತ ಅವಶ್ಯಕವಾಗಿದೆ.
    ಪುರಾಣಗಳು ಮಹರ್ಷಿಗಳಿಂದ ಪರಂಪರೆಯಾಗಿ ನಮಗೆ ಬಂದು ಸೇರಿದ ಆಸ್ತಿ ಅವುಗಳಲ್ಲಿ ಭಾಗವತವು ತುಂಬ ಆದರಕ್ಕೆ ಪಾತ್ರವಾದ ಗ್ರಂಥ ಭಾಗವತದ ವಿಭಿನ್ನಸ್ವರೂಪದ ಎರಡು ಗ್ರಂಥಗಳು ದೊರೆಯುತ್ತವೆ. ಅಷ್ಟಾದಶಪುರಾಣಗಳಲ್ಲಿ ಅಂತರ್ಗತವಾಗಿರುವದು ದೇವೀಭಾಗವತ, ಶ್ರೀಮದ್ಬಾಗವತ. ಒಂದು ವಿಷ್ಟುವನ್ನು ಅಧಿ ದೇವತೆಯನ್ನಾಗಿಟ್ಟುಕೊಂಡು ತತ್ತ್ವವನ್ನು ಪ್ರತಿಪಾದಿಸುತ್ತದೆ. ಇನ್ನೊಂದು ದೇವಿಯನ್ನಧಿಕರಿಸಿ, ಪ್ರತಿಪಾಧ್ಯವಾದ ಆತ್ಮತತ್ತ್ವ ಎರಡಲ್ಲಿಯೂ ಸಮಾನವಾಗಿದೆ.
    ದೇವೀಭಾಗವತವೆಂಬುದರ ಶಬ್ದಾರ್ಥ ಹೇಗೆಂದರೆ - ಭಗವತೀಂ ಅಧಿಕೃತ್ಯ ಕೃತೋ ಗ್ರಂಥಃ (ಪುರಾಣ) ಭಾಗವತಮ್ (ಭಗವತಿಯನ್ನು ಕುರಿತು ರಚಿಸಿದ ಪುರಾಣ ಗ್ರಂಥ) ದೇವ್ಯಾಃ ಭಾಗವತಮ್ ದೇವೀ ಭಾಗವತಮ್ ಎಂದು ಷಷ್ಠೀಸಮಾಸ. ಇದು ಗಮಕಸಮಾಸ. ಭಾಗವತ ಶಬ್ದಾರ್ಥದ ಏಕದೇಶವಾದ ಭಾಗವತಿಯಲ್ಲಿ ದೇವಿಗೇ ಅನ್ವಯ ದೇವಿಯಾದ ಭಗವತಿಯನ್ನು ಕುರಿತು ಪ್ರಣೀತವಾದ ಗ್ರಂಥವೆಂದರ್ಥ.
    ವಿಭಿನ್ನಸ್ವರೂಪದ ಎರಡು ಬಾಗವತಪುರಾಣಗಳಲ್ಲಿಯೂ ಹನ್ನೆರಡು ಸ್ಕಂಧಗಳಿದ್ದು ಹದಿನೆಂಟು ಸಾವಿರ ಶ್ಲೋಕಗಳಿವೆ. ಪುರಾಣಾಂತರಗಳಲ್ಲಿ ಹೇಳಿದ ಭಾಗವತ ಲಕ್ಷಣಗಳು ಎರಡರಲ್ಲಿಯೂ ಇವೆ. ದೇವೀಭಾಗವತದ ಶೈಲಿಯು ಇತರ ಪುರಾಣಗಳ ಶೈಲಿಗೆ ಸಂವಾದೀಯಾದದ್ದು ನದಿಗಳಲ್ಲಿ ಗಂಗಾನದಿಯಂತೆ, ದೇವತೆಗಳಲ್ಲಿ ಶಿವನಂತೆ, ಕಾವ್ಯದಲ್ಲಿ ರಾಮಾಯಣದಂತೆ, ಜ್ಯೋತಿಗಳಲ್ಲಿ ಸೂರ್ಯನಂತೆ ಅಷ್ಟಾದಶಪುರಾಣಗಳಲ್ಲಿ ದೇವೀಭಾಗವತವು ಶ್ರೇಷ್ಠವಾದದ್ದು ಎಂದು ಸ್ಕಂದಪುರಾಣದಲ್ಲಿ ಈ ಪುರಾಣವನ್ನು ಹೆಸರಿಸಿದೆ. (ಅಷ್ಟಾದಶಪುರಾಣಾನಾಂ ದೇವಿ ಭಾಗವತಂ ತಥಾ) ಇಲ್ಲಿಯೇ - ಅತಃ ಸದೈವ ಸುಸೆವ್ಯಂ ದೇವಿಭಾಗವತಂ ದ್ವಿಜಾಃ (ಆದ್ದರಿಂದ ಯಾವಾಗಲೂ ದೇವೀಭಾಗವತವನ್ನು ಅಧ್ಯಯನಮಾಡಬೇಕು) ಎಂಬ ನುಡಿ ಇದೆ. ಮಣಿದ್ವೀವಾಧಿದೇವತೇಯಾದ ಜಗದಂತೆಯ ಅನುಗ್ರಹದಿಂದಲೇ ತ್ರಿಮೂರ್ತಿಗಳು ತಮ್ಮ ತಮ್ಮ ಕೆಲಸಗಳನ್ನು ಮಾಡಲು ಸಮರ್ಥರಾಗುತ್ತಾರೆ. ಅವರು ದೇವಿಯ ಅಂಶಗಳು ಅವರಿಗೂ ಆ ದೇವಿಯ ಮಹಿಮೆಯನ್ನು ಇಷ್ಟೆಂದು ಅಳೆಯಲು ತಿಳಿಯಲು ಸಾಧ್ಯವಿಲ್ಲ ಎಂದು ಸ್ತುತಿಸಲಾಗಿದೆ. ತ್ರಿಮೂರ್ತಿಗಳಲ್ಲಿ ಭೇದವನ್ನೆಣಿಸುವವರು ಈ ಕಥಾಶ್ರವಣಕ್ಕೆ ಅರ್ಹರಲ್ಲ. ಈ ಗ್ರಂಥಕ್ಕೆ ಸಂಮತವಾದದ್ದು ಏಕೇಶ್ವರವಾದ (ಅದ್ವೈತ)- ಅವ್ಯಕ್ತವಾದ ಪರಬ್ರಹ್ಮದ ವ್ಯಕ್ತರೂಪವೇ ದೇವಿ. ದೇವಿಯೆಂದರೆ ಕಾಲದೇಶ ಅವಸ್ಥಾತೀತವಾಗಿ ಸರ್ವರ ಆತ್ಮನಾಗಿರುವ ಪರಬ್ರಹ್ಮವೆಂದೇ ಅರ್ಥ ಈ ದೇವಿಯು ಒಂದು ದೃಷ್ಟಿಯಿಂದ ತ್ರಿಮುರ್ತಿಗಳ ಜನನಿ ಇನ್ನೊಂದು ದೃಷ್ಟಿಯಿಂದ ತ್ರಿಮೂರ್ತಿಗಳ ಪತ್ನಿ! ಅವಳು ಪರಬ್ರಹ್ಮಸ್ವರೂಪಿಣಿಯೂ ಹೌದು ಪರಬ್ರಹ್ಮದ ಶಕ್ತಿಯೂ ಹೌದು ಪರಮಾರ್ಥ-ವ್ಯವಹಾರಗಳ ಸಮ್ಮಿಶ್ರಣವನ್ನು ಇದರಲ್ಲಿ ಕಾಣಬಹುದು ವೇದಾಂತ ತತ್ತ್ವವನ್ನರಿಯುವವರು ಕೈಮುಗಿದು ಸುಮ್ಮನಾಗಬಹುದು. ಒಬ್ಬ ನೂತನ ದೇವತೆಯೆಂದು ತೋರಬಹದು ಇತರ ಪುರಾಣಗಳಲ್ಲಿಲ್ಲದ ವಿಚಿತ್ರ ಕಥೆ ಇಲ್ಲಿ ಬಂದಿದೆ ಇದು ಭಕ್ತಿಜ್ಞಾನಗಳೆರಡರ ಸಂಗಮವಾದದ್ದು ಮುಂದೆ ದೇವೀಭಾಗವತವನ್ನು ವಾಚಕರ ಮುಂದಿಡಲು ಪ್ರಯತ್ನಿಸುತ್ತೇನೆ ಎಲ್ಲರ ಮೇಲೂ ದೇವಿಯ ಕರುಣಾ ಕಟಾಕ್ಷವಿರಲೆಂದು ಪ್ರಾರ್ಥಿಸುತ್ತೇನೆ.
    ಭಾರತೀಯ ಸಂಸ್ಕೃತಿಯಲ್ಲಿ ಪುರಾಣಗಳ ಸ್ಥಾನ ಅನನ್ಯ ಇವುಗಳ ಗುರಿ ಮಾನವನ ಅಭ್ಯುದಯ ನಿಶ್ರೇಯಸನವನ್ನು ದೊರಕಿಸಿಕೊಡುವುದು ಆದರೆ ಪಾಶ್ಚಾತ್ಯ ಶಿಕ್ಷಣದಿಂದ ಪ್ರೇರಿತವಾದ ಮನಸ್ಸುಳ್ಳವರಿಗೆ ಪುರಾಣಗಳ ಸ್ವರೂಪ ಸರಿಯಾಗಿ ತಿಳಿಯದೇ ಇರುವುದು ಆಶ್ಚರ್ಯವಲ್ಲ. ಪುರಾಣದಲ್ಲಿ ಬರುವ ಕಥೆಗಳ ಘಟನೆಗಳ ಮತ್ತು ಕಾಲನಿರ್ದೇಶಾದಿಗಳ ಪರಿಚಯವಿಲ್ಲದ ವಿಮರ್ಶಕರ ದೃಷ್ಟಿಯಲ್ಲಿ ಒಂದು ನಿಷ್ಪ್ರಯೋಜಕ ಗ್ರಂಥ ಪುರಾಣಗಳನ್ನು ಅಧ್ಯಯನ ಮಾಡಲು ಪಂಚಲಕ್ಷಣಗಳ ಪರಿಚಯವಿರಬೇಕು. ಸರ್ಗ, ಪ್ರತಿಸರ್ಗ, ವಂಶ, ಮನ್ವಂತರ, ವಂಶಚರಿತ್ರೆಗಳು ತಿಳಿದಿರಬೇಕು ಹಾಗೂ ಸಂಭಾವನಾ ಮತ್ತು ಐತಿಹ್ಯವೆಂಬ ಎರಡು ಪ್ರಮಾಣಗಳನ್ನು ಉಪಯೋಗಿಸಿ ಅರ್ಥೈಸಲು ಬರಬೇಕು ಪುರಾಣಗಳು ಯಾವುದೋ ದೇಶದ, ವಂಶದ, ವ್ಯಕ್ತಿಯ ವರ್ಣನೆಗಳನ್ನು ಮಾಡುವುದರಲ್ಲಿಯೇ ಮುಗಿಯಲಿಲ್ಲ ಅದು ಸೃಷ್ಟಿಯಿಂದ ಪ್ರಳಯದವರೆಗೆ ಬ್ರಹ್ಮಾಂಡದ ಮಹತ್ತರ ಘಟನೆಗಳನ್ನು ವರ್ಣಿಸುವುದರಲ್ಲಿ ಉದ್ಯುಕ್ತವಾಗಿದೆ ಇಲ್ಲಿ ಆದರ್ಶರಾಜರ, ಋಷಿಗಳ, ಆದರ್ಶ ವ್ಯಕ್ತಿಗಳ ವರ್ಣನೆಯು ಇದೆ ಸುಮ್ಮನೆ ಹುಟ್ಟಿ ಸಾಯುವವರ ಗುಂಪಿಗೆ ಸೇರಿದವರ ನೀಚರ ವಿಚಾರವನ್ನು ಮಾಡಿ ತಮ್ಮ ವೈಚಾರಿಕ ಶಕ್ತಿಯನ್ನು ದುರುಪಯೋಗಪಡಿಸಲಿಲ್ಲ ಜ್ಞಾನ-ವೈರಾಗ್ಯಗಳ ವರ್ಣನೆಯೇ ಗ್ರಂಥದ ಪ್ರಧಾನವಾದ ಉದ್ದೇಶ. ಅದನ್ನೇ ಶ್ರೀಕೃಷ್ಣಭಾಗವತದಲ್ಲಿ
ಕಥಾ ಇಮಾಸ್ತೇ ಕಥಿತಾ ಮಹಿಯಸಾಂ ವಿತಾಯ ಲೋಕೇಷು ಯಶಃ ಪರೇಷಾಮ್ |
ವಿಜ್ಞಾನ ವೈರಾಗ್ಯ ವಿವಕ್ಷಯಾ ವಿಭೋ ವಚೋ ವಿಭೂತಿರ್ನತು ಪಾರಮಾರ್ಥ್ಯಂ ||
    (ಜಗತ್ತಿನಲ್ಲಿ ದೊಡ್ಡ ದೊಡ್ಡ ಪ್ರತಾಪಿಗಳಾದ ಮಹಾಪುರುಷರು ಆಗಿದ್ದಾರೆ. ಅವರು ಲೋಕಗಳಲ್ಲಿ ತಮ್ಮ ಕೀರ್ತಿಯನ್ನು ವಿಸ್ತರಿಸಿ ಇಲ್ಲಿಂದ ಹೊರಟುಹೋದರು. ನಾನು ನಿನಗೆ ಜ್ಞಾನ ಮತ್ತು ವೈರಾಗ್ಯದ ಉಪದೇಶವನ್ನು ಕೊಡಲೆಂದೇ ಅವರ ಕಥೆಗಳನ್ನು ಹೇಳಿರುವೆನು. ಇದೆಲ್ಲವೂ ವಾಣಿಯ ವಿಲಾಸವಾಗಿದೆ. ಇದರಲ್ಲಿ ಪಾರಮಾರ್ಥಿಕ ಸತ್ಯವು ಸ್ವಲ್ಪವೂ ಇಲ್ಲಎಂದಿದೆ)
    ಆದರೆ ಪಾಶ್ಚಾತ್ಯ ವಿದ್ವಾಂಸರಿಗೆ ತಮ್ಮ ದಾಸ್ಯದಲ್ಲಿದ್ದ ಭಾರತೀಯರು ಸುಸಂಸ್ಕೃತರಾಗಿದ್ದರು ಎನ್ನುವುದಾಗಲೀ, ಆ ಸಂಸ್ಕೃತಿಯು ಅತೀ ಪ್ರಾಚೀನವಾಗಿತ್ತು ಎಂಬುದಾಗಲೀ ಸತ್ಯವಾಗಿರಲಿಲ್ಲ ಆದ್ದರಿಂದ ಹಿಂದೂಗ್ರಂಥಗಲ್ಲಿರುವದೆಲ್ಲಾ ಶುದ್ಧಾಂಗ ಅಸತ್ಯ, ಇವು ಕವಿಸಮಯವಷ್ಟೆ, ಈ ದೀರ ಪುರುಷರ ಕಥೆಗಳೆಲ್ಲ ಸುಳ್ಳು ಎಂದು ಆಪಾದಿಸಿದರು, ಅದನ್ನೇ ನಮ್ಮ ದೇಶಬಾಂಧವರೆಲ್ಲ ಅವಿಚಾರಿಕರಾಗಿ ಅವರ ಅಭಿಪ್ರಾಯವನ್ನೇ ಒಪ್ಪುತ್ತಾರೆ ಎನ್ನುವುದು ತುಂಬಾ ವಿಷಾದಕರ.
    ಯಾವ ಗ್ರಂಥದಲ್ಲಿ ಗಾಯತ್ರೀ ಮಹಿಮೆ, ವೃತ್ರಾಸುರ ವಧೆ, ಸಾರಸ್ವತಕಲ್ಪವೃತ್ತಾಂತ, ಶ್ರೀದೇವೀಚರಿತ್ರೆ, ಹಯಗ್ರೀವಬ್ರಹ್ಮವಿದ್ಯೆ ಇವು ವಿಸ್ತಾರವಾಗಿ ವರ್ಣಿಸಲ್ಪಟ್ಟಿವೆಯೋ ಅದೇ ಭಾಗವತವು ಎಂದಿದೆ.
ಯತ್ರಾಧಿಕೃತ್ಯ ಗಾಯತ್ರೀ ಧರ್ಮವಿಸ್ತಾರಃ
ವೃತ್ರಾಸುರ ವಧೋಪೇತಂ ತಧ್ಬಾಗವತಮಿಷ್ಯತೆ |
ಸಾರಸ್ವತಸ್ಯ ಕಲ್ಪಸ್ಯ ಮದ್ಯೆ ಯೇ ಸ್ಯು ನರಾಮರಾಃ
ತದ್ವೃತ್ತಾಂಕೋದ್ವಯಂ ಲೋಕೇ ತದ್ಬಾಗವತಮಿಷ್ಯತೇ || (ಮತ್ಸ್ಯ)
    ಇದರಂತಯೇ ದೇವೀಭಾಗವತದಲ್ಲಿ ಮಂಗಳಶ್ಲೋಕವು ಗಾಯತ್ರೀಯಿಂದಲೇ ಆರಂಭವಾಗಿ ಏಕಾದಶ, ದ್ವಾದಶ ಸ್ಕಂದಗಳಲ್ಲಿ ಹರಗ್ರೀವ ವೃತ್ತಾಂತವೂ, ಇತರ ಲಕ್ಷಣಗಳು ವಿಸ್ತಾರವಾಗಿ ಹೇಳಲ್ಪಟ್ಟಿವೆ. ವೃತ್ತಾಸುರ ಕಥೆಯಂತೂ ವೇದಮಂತ್ರಗಳಲ್ಲಿ ಇರುವಂತೇ ಕಂಡುಬರುವುದು ಆದರೆ ಭಾರತಾದಿಗಳನ್ನು ರಚಿಸಿ ಮನಃಶಾತಿಯನ್ನು ಪಡೆಯದೆ ವ್ಯಾಸಮುನಿಯು ಭಾಗವತವನ್ನು ರಚಿಸಿದನೆಂದು ಎರಡೂ ಕಡೆಯು ಹೇಳಿರುವುದರಿಂದ ಪೌರ್ವಾಪರ್ಯದ ಬಗ್ಗೆ ಸಂದೇಹವು ಹೆಚ್ಚುವುದು ವಿಚಾರಿಸುತ್ತಾ ಹೋದಂತೆಲ್ಲಾ ಮಹಾತರಂಗಗಳುಳ್ಳ ಗಂಧರ್ವನಗರ ಚಿತ್ರಗಳೇ ಕಾಣಿಸುವುವು ಇವು ತತ್ತ್ವಶೋಧಕರಿಗೆ ಸಹಕಾರಿಗಳಾಗಬಹುದೇ ಹೊರತು ಮುಮುಕ್ಷುಗಳಿಗೆ ಸಂಸ್ಕಾರಗಳನ್ನು ಕೊಡಲಾರವು.
    ಪುರಾಣಗಳ ಕಥಾಶ್ರವಣ ಪ್ರವಚನಗಳು ವಿರಳವಾಗಿರುವ ಈ ಸಂದರ್ಭದಲ್ಲಿ ಈ ದೇವೀ ಭಾಗವತ ಮಹಾಪುರಾಣದ ಗುಣಸಂಪತ್ತನ್ನೂ ವಿಶೇಷತೆಯನ್ನೂ ಸಂಕ್ಷೇಪವಾಗಿ ವಿಚಾರಮಾಡೋಣ.
    ಮನುಷ್ಯನ ಗುರಿ ಸಂತೋಷವನ್ನು ಪಡೆಯುವದು ಅವನು ಪಂಚೇದ್ರಿಯಗಳಿಂದ ಬರುವುದೇ ಸುಖ ಎಂದು ತಿಳಿದಿದ್ದಾನೆ ಅದಕ್ಕಾಗಿ ಅನೇಕ ಸಲಕರಣೆಗಳನ್ನು ಕೂಡಿಹಾಕಿಕೊಂಡು ಇದರಿಂದ ಸುಖ ಎಂದು ವಿಷಯದಲ್ಲಿಯೇ ಮಗ್ನನಾಗಿ ಅದರ ಹಿಂದೆ ಓಡುತ್ತಿದ್ದಾನೆ ಆದರೆ ಅದು ಸುಖದ ಆಭಾಸಮಾತ್ರೆ ಎಂಬ ಅರುವು ಒಂದೇ ಇಲ್ಲ ಮತ್ತೆ ಸುಖದ ಅನ್ವೇಷಣೆ, ಮತ್ತೆ ದುಃಖ ಆದರೆ ಶಾಸ್ತ್ರ ಸಚ್ಚಿಂತನೆಯಿಂದ ಕಾಲವನ್ನು ಕಳೆಯಬೇಕು ಎನ್ನುತ್ತದೆ ಮೂರ್ಖರಾದವರು ಇಂದ್ರಿಯಗಳಿಗೆ ಜೋತುಬಿದ್ದು ವಿಷಯಸುಖವನ್ನು ಅನುಭವಿಸುವದರಲ್ಲಿಯೇ ಕಾಲಯಾಪನೆ ಮಾಡುತ್ತಾರೆ ವಿವೇಕಿಗಳು ಶಾಸ್ತ್ರ ಚಿಂತನೆಯಿಂದ ತತ್ವಾರ್ಥಗಳನ್ನು ತಿಳಿದುಕೊಳ್ಳುವದರ ಮೂಲಕ ಕಾಲವನ್ನು ಉಪಯೋಗಿಸುತ್ತಾರೆ ಆದ್ದರಿಂದ ಎಲೈ ಸೂತನೆ ನಾವು ಅನೇಕ ಯಜ್ಞಗಳನ್ನು ಮಾಡಿದರೂ ಘಟೀಯಂತ್ರದಂತೆ ಸ್ವರ್ಗ-ಮರ್ತ್ಯಗಳಿಗೆ ಸುತ್ತುತ್ತಿರುವೆವು. ಏಕೆಂದರೆ
ನ ಶೃಣ್ವಂತಿ ಪುರಾಣಾದಿ ವಂಚಿತಾ ವಿನಾ ಹಿ ತೇ |
(ಯಾವು ಪುರಾಣ ಶ್ರವಣದಲ್ಲಿ ಮನಸ್ಸನ್ನು ಇಡುವುದಿಲ್ಲವೋ ಅವರು ನಿರ್ಭಾಗ್ಯರೇ ಸರಿ) ಮತ್ತು
ವಿನಾ ಜ್ಞಾನೇನ ಸರ್ವಜ್ಞ ನೈವ ಮುಕ್ತಿಃ ಕದಾಚನ |
ಭಮತಾಂ ಕಾಲಚಕ್ರೇತ್ರ ನರಾಣಾಂ ತ್ರಿಗುಣಾತ್ಮಕೇ ||
ಅತಃ ಸರ್ವರಸೋಪೇತಂ ಪುಣ್ಯಂ ಬಾಗವತಂವದ |
ಪವನಂ ಮುಕ್ತಿದಂ ಸತ್ಯಂ ಮುಮುಕ್ಷೂಣಾಂ ಸದಾಪ್ರಿಯಂ ||
    (ಸತ್ವ, ರಜಸ್ಸು, ಸಮಸ್ಸುಗಳಿಂದ ಕೂಡಿದ ಕಾಲಚಕ್ರದಲ್ಲಿ ಸುತ್ತುತ್ತಿರುವ ನಮಗೆ ತತ್ತ್ವಜ್ಞಾನದ ಹೊರತಾಗಿ ಬೇರಾವುದರಿಂದಲೂ ಮೋಕ್ಷವು ದೊರಕುವುದಿಲ್ಲ ಆದ್ದರಿಂದ ನಾನಾವಿಧವಾದ ವಿಚಾರಗಳಿಂದ ಕೂಡಿದ್ದೂ ಆದ ಪುಣ್ಯತರವಾದುದ್ದು ನಮಗೆ ಮುಕ್ತಿದಾಯಕವಾದದ್ದೂ ಆದ ಭಾಗವತ ಪುರಾಣವನ್ನು ನಮಗೆ ಹೇಳು) ಎಂದು ಶೌನಕಾದಿಗಳು ಕೇಳಿದರು.
    ವೇದಗಳ ಮುಖ್ಯಾರ್ಥಕ್ಕೆ ಅನುಸಾರವಾಗಿರುವ ಸಕಲ ಶಾಸ್ತ್ರಗಳ ರಹಸ್ಯಾರ್ಥವನ್ನು ಒಳಗೊಂಡಿರುವ ಪುರಾಣಗಳಲ್ಲಿ ಶ್ರೇಷ್ಠವಾದ ಆ ದೇವೀಭಾಗವತ ಮಹಾಪುರಾಣವನ್ನು ದೇವಿಗೆ ನಮಿಸುತ್ತಾ ಅಜ್ಞಾನಿಗಳಿಗೆ ಸದ್ರೂಪವೂ, ಜ್ಞಾನಿಗಳಿಗೆ ಅಸದ್ರೂಪವು ಆಗಿರುವ ಈ ಪ್ರಪಂಚವೆಲ್ಲವನ್ನು ಯಾವ ದೇವಿಯು ಸತ್ವರಜಸತಾಮೋಗುಣಗಳಿಂದ ಕೂಡಿದವಳಾಗಿ ಸೃಷ್ಠಿ? ಕಾಪಾಡುತ್ತಿರುವಳೋ, ಪ್ರಳಯಕಾಲದಲ್ಲಿ ಎಲ್ಲವನ್ನು ತನ್ನಲ್ಲಿಯೇ ಅಡಗಿಸಿಕೊಂಡು ನಲಿಯುತ್ತಿದ್ದಾಳೋ ಅಂಥ ಸರ್ವ ಪ್ರಪಂಚಕ್ಕೂ ತಾಯಿಯಾದ ಆ ದೇವಿಯನ್ನು ಧ್ಯಾನಿಸುತ್ತೇನೆ ಬ್ರಹ್ಮನು ವಿಷ್ಣುವಿನ ಕಮಲನಾಭಿಯಲ್ಲಿ ಜನಿಸಿದವನು, ವಿಷ್ಣುವಾದರೋ ಆದಿಶೇಷನ ಹಾಸಿಗೆಯಲ್ಲಿ ಮಲಗಿರುವವನು, ಯೋಗ ಮಾಯೆಯಿಂದ ಅವರಿಸಿಕೊಂಡಿರುವವನು, ಇನ್ನು ರುದ್ರನಾದರೋ ಶಕ್ತಿಯಿಂದ ಕೂಡಿದವನಾದರೆ ಮಾತ್ರ ಶಿವನಾಗಿರುತ್ತಾನೆ, ಇಲ್ಲವಾದರೆ ಶವದಂತಾಗುತ್ತಾನೆ. ಆದ್ದರಿಂದ ಸೃಷ್ಟಿ-ಸ್ಥಿತಿ-ಲಯಗಳಿಗೆ ಬ್ರಹ್ಮಾದಿಗಳು ಸ್ವತಂತ್ರಕಾರಣರಲ್ಲ ಪರತಂತ್ರರೇ ಏಕೆಂದರೆ ನೀರನ್ನು ಶೇಖರಿಸಿಡಬೇಕಾದರೆ ಆಧಾರವು ಬೇಕು, ಆಧಾರವಿಲ್ಲದೇ ನೀರು ನಿಲ್ಲಲಾರದು ಹಾಗೆಯೇ ಪೃಥ್ವಿ, ಜಲ, ತೇಜಸ್ಸು, ವಾಯು, ಆಕಾಶಗಳೆಂಬ ಮಹಾಭೂತಗಳಿಗೆ ದೇವಿಯೇ ತಾಯಿಯೂ ಆಧಾರವೂ ಜಗತ್ಕಾರಣ ರೂಪಳೂ ಯಾರ ಸಹಾಯವೂ ಇಲ್ಲದೆ ಸ್ಪುರಿಸುವ ಸ್ವಭಾವವುಳ್ಳವಳೂ ಆಗಿದ್ದಾಳೆ ಅಂಥವಳನ್ನು ಧ್ಯಾನಿಸುತ್ತೇವೆ ಎಂದು ಉಪಕ್ರಮಿಸಿದನು.
    ಮನುಷ್ಯ ಯಾವಾಗಲೂ ರಾಗದ್ವೇಷಾದಿಗಳಿಗೊಳಾಗಾಗಿಯೇ ವ್ಯವಹಾರ ಮಾಡುತ್ತಾನೆ. ಅದು ಸ್ವಾಭಾವಾದಿಂದಲೇ ಆಗುತ್ತಿರುವುದು ಯಾರೂ ಹೇಳಿಕೊಟ್ಟು ಬಂದಿರುವದಲ್ಲ. ಆದರೆ ಶಾಸ್ತ್ರಗಳನ್ನು ಅವಲಂಬಿಸಿದರೆ ವಿವೇಕವು ಒಲಿಯುವದು ಯಾವಾಗ ಶಾಸ್ತ್ರದೃಷ್ಟಿಯನ್ನು ಅವಲಂಬಿಸುತ್ತಾನೋ ಆಗ ರಾಗದ್ವೇಷಗಳನ್ನು ಹಿಡಿತದಲ್ಲಿಟ್ಟು ಕೊಳ್ಳುತ್ತಾನೆ ರಾಗವನ್ನು ವೈರಾಗ್ಯದಿಂದಲೂ, ದ್ವೇಷವನ್ನೂ ಪ್ರೇಮದಿಂದಲೂ ಗೆದ್ದುಕೊಳ್ಳುತ್ತಾನೆ. ಆಗ ಅವನಿಗೆ ಮಾಡಬಾರದ್ದನ್ನು ಮಾಡುವ ಒಲವು ಇಲ್ಲವಾಗುತ್ತದೆ. ಈ ರಾಗದ್ವೇಷಗಳು ಯಾವ ಯಾವ ವೇಷದಲ್ಲಿ ಬರುವದೋ ಗೊತ್ತಾಗುವಂತಿಲ್ಲ ಇವೆರಡೂ ಕಾಮದ ವೇಷಗಳಾಗಿವೆ.
    ಇಂದ್ರಿಯಗಳು ಯಾವಾಗಲೂ ತಮಗೆ ಬೇಕಾದ ವಿಷಯಗಳಲ್ಲಿಯೇ ಪ್ರವೃತ್ತವಾಗಿರುತ್ತವೆ ಅಂದರೆ ಕಣ್ಣು ರೂಪದಲ್ಲಿ, ಕಿವಿ ಶಬ್ದದಲ್ಲಿ ಹೀಗೆ, ಒಂದೊಂದು ಇಂದ್ರಿಯವೂ ಒಂದೊಂದು ವಿಷಯಗಳಲ್ಲಿ ಬಿದ್ದಿರುತ್ತವೆ. ಆ ವಿಷಯಗಳನ್ನು ಬೇಕು-ಬೇಡ ಇಷ್ಟ-ಅನಿಷ್ಟಗಳೆಂಬ ವಿಭಾಗವನ್ನು ಮಾಡಿ ಅನುಭವಿಸುತ್ತಿರುತ್ತವೆ ಒಂದೊಂದು ಸಲ ಸರಿಯಾದ ವಿಷಯಗಳು ಸಿಗದಿರುವಾಗ ಆ ಬಯಕೆಯೇ (ಕಾಮ) ಕ್ರೋಧವಾಗಿ ಮಾರ್ಪಾಡಾಗುತ್ತದೆ. ಹೇಗೆ ಒಬ್ಬ ಸಂಗೀತಗಾರನ ಜೋತೆಯಲ್ಲಿ ಇರುವ ತಂಬೂರಿ (ಶೃತಿ ಪೆಟ್ಟಿಗೆಯು) ಅವನು ಹಾಲಿ ಏನೇ ಮಾಡಲಿ ಅದು ತನ್ನ ದ್ವನಿಯನ್ನು ಹೊರ ಹಾಕುತ್ತಲೇ ಇರುತ್ತದೆ ಹಾಗೆಯೇ ಬೇಕು ಬೇಕು ಎಂಬ ಬಯಕೆಯು ಯಾವಾಗಲೂ ತನ್ನ ಕಾರ್ಯವನ್ನು ನಡೆಸುತ್ತಲೇ ಇರುತ್ತದೆ ಅದರಿಂದ ಬೇಕಾದ ವಸ್ತುವಿನಲ್ಲಿ ರಾಗ(ಮೋಹ), ಬೇಡದ ವಸ್ತುವಿನ ಮೇಲೆ ದ್ವೇಷ ಅದನ್ನು ತಡೆಯಲು ಹಳ್ಳಿಗಳಲ್ಲಿ ಸುರಂಗದಲ್ಲಿರುವ ಹೆಗ್ಗಣಗಳನ್ನು ಹಿಡಿಯಲು ದ್ವಾರದ ಎರಡೂ ಕಡೆಗಳಿಗೂ ಹೊಗೆ ಹಾಕಿ ಅದಕ್ಕೆ ಉಸಿರು ಕಟ್ಟುವಂತೆ ಮಾಡುತ್ತಾರೆ. ಕೂಡಲೇ ವ್ಯಥೆಯಿಂದ ಹೊರಗೆ ಬಂದುಬಿಡುತ್ತದೆ, ಆಗ ಅದನ್ನು ಹಿಡಿದು ಕೊಲ್ಲುತ್ತಾರೆ. ಹೀಗೆಯೇ ಇಂದ್ರಿಯಗಳಲ್ಲಿರುವ ರಾಗದ್ವೇಷಗಳೆಂಬ ಎರಡೂ ಬಾಯಿಯನ್ನು ಪ್ರತಿಪಕ್ಷ ಭಾವನೆಯಿಂದ, ವೈರಾಗ್ಯ-ಪ್ರೇಮಗಳಿಂದ ಬಿಗಿ ಹಿಡಿದರೆ ದುರ್ವೃತ್ತಿಗೆ ಅವಕಾಶವಿಲ್ಲದಂತಾಗಿ ಕಾಮವನ್ನು ಮೋಹವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುವದು.
    ಮಂಗಳಕರವಾದ ಈ ದೇವಿಭಾಗವತವನ್ನು ವ್ಯಾಸಮಹರ್ಷಿಗಳು ರಚಿಸಿದರು ಇದನ್ನು ಅರಣಿಯಲ್ಲಿ ಹುಟ್ಟಿದವನೂ ಅಯೋನಿಜನೂ, ವೈರಾಗ್ಯನಿಧಿಯೂ ಆದ ಪುತ್ರ ಶುಕನಿಗೆ ಉಪದೇಶಿಸಿದನು ಮಗನಿಗೆ ಉಪದೇಶಿಸಿದ್ದಾದ್ದರಿಂದ ಅತಿ ಗಹನವಾದ ವಿಚಾರಗಳನ್ನೆಲ್ಲ ಹೇಳಿದ್ದಾರೆ ಮಹರ್ಷಿ ಇದನ್ನು -
ಶ್ರೀಮದ್ಬಾಗವತಾಮರಾಂಘ್ರಿಪಫಲಾಸ್ವಾದಾದರಃ ಸತ್ತಮಾಃ
ಸಂಸಾರಾರ್ಣ ವಧುರ್ವಿಗಾಹ್ಯಸಲಿಲಂ ಸಂತರ್ತುಕಾಮಃ ಶುಕಃ |
ನಾನಾಖ್ಯಾನರಸಾಲಯಂ ಶ್ರುತಿಪುಟೈಃ ಪ್ರೇಮ್ಣಾಶೃಣೋದದ್ಬುತಂ
ತಚ್ಛ್ರತ್ವಾನ ವಿಮುಚ್ಯತೇ ಕಲಿಭಯಾದೇವಂವಿಧಃ ಕಃ ಕ್ಷಿ ತೌ ||
    ಸಂಸಾರಸಾಗರವನ್ನು ದಾಟಲಪೇಕ್ಷಿಸುತ್ತಿರುವ ಶುಕಮಹರ್ಷಿಯು ನಾನಾ ವಿಧದ ಕಥೆಯೆಂಬ ಹಣ್ಣಿನರಸವನ್ನು ಸವಿಯುವದರಲ್ಲಿ ಪ್ರೀತಿಯುಳ್ಳವನಾಗಿ ಶ್ರೀದೇವೀ ಭಾಗವತವೆಂಬ ಕಲ್ಪವೃಕ್ಷದ ಹಣ್ಣಿನ ರಸವನ್ನು ಸವಿದನೋ(ಮುಕ್ತನಾದನೋ), ಅಂಥ ಈ ಭಾಗವತವನ್ನು ಕೇಳಿ ಕಲಿಪ್ರಭಾವದಿಂದಾಗುವ ತೊಂದರೆಗಳಿಂದ ಯಾರು ತಾನೆ ಬಿಡುಗಡೆಹೊಂದಲಾರರು? ಎಂಥ ಪಾಪಿಪ್ಯನೇ ಅಧರ್ಮಿಯೇ ಆಗಿರಲಿ ಅವನು ದೇವೀನಾಮಾಂಕಿತವಾದ ಈ ಪುರಾಣವನ್ನು ಕೇಳಿದರೆ ಇಹದಲ್ಲಿ ಭೋಗವನ್ನನುಭವಿಸಿ ಪರದಲ್ಲಿ ನಿತ್ಯಸದ್ಗತಿಯನ್ನು ಪಡೆಯುತ್ತಾನೆ.
    ಹಾಗಾದರೆ ವ್ಯಾಸಮುನಿಯು ಶುಕನನ್ನು ಹೇಗೆ ಪಡೆದನು? ಅವನು ಎಂಥವನು? ಮನುಷ್ಯನು ಹುಟ್ಟಬೇಕಾದರೆ ಶರೀರಕ್ಕ ಕಾರಣವಾದ ಬೀಜವು ಇಲ್ಲದೆ ಅಗುವದಿಲ್ಲ ಅವನು ಅರಣಿಯಲ್ಲಿ ಜನಿಸಿದ್ದು ಹೇಗೆ? ಪುರಾಣವನ್ನು ಅಧ್ಯಯನಮಾಡಿದ್ದು ಏಕೆ? ಇದೆಲ್ಲವನ್ನೂ ವಿಸ್ತಾರವಾಗಿ ಹೇಳು ಎಂದು ಋಷಿಗಳು ಪ್ರಶ್ನಿಸಲು ಸೂತನು ಹೇಳುತ್ತಾನೆ.
    ಒಮ್ಮೆ ಸತ್ಯವತೀಸುತನಾದ ವ್ಯಾಸಮಹರ್ಷಿಯ ಸರಸ್ವತೀ ನದಿಯತೀರದ ಆಶ್ರಮದಲ್ಲಿ ವಾಸಿಸುತ್ತಿದ್ದನು ಅಲ್ಲಿಯೇ ಸಮೀಪದಲ್ಲಿ ಗುಬ್ಬಚ್ಚಿಗಳು ವಾಸಿಸುತ್ತಿದ್ದವು ಅವು ತಮ್ಮ ಮುದ್ದಾದ ಮಕ್ಕಳು ಮರಿಗಳೊಡನೆ ಸುಂದವಾಗಿ ಸಂಸಾರವನ್ನು ನಡೆಸುತ್ತಾ ನಲಿಯುತ್ತಿದ್ದವು ಅದನ್ನು ಕಂಡ ವ್ಯಾಸನು ಮನದಲ್ಲಿಯೇ ಹೀಗೆ ಚಿಂತಿಸಿದರು.
'ತಿರ್ಯಕ್ಟ್ರಾಣಿಗಳಲ್ಲಿಯೇ ಇಷ್ಟು ಅನ್ಯೋನ್ಯ ಸಂಸಾರ ಪ್ರೀತಿ ಕಾಣುತ್ತಿದೆ. ಬುದ್ಧಿವಂತರಾದ ಮಕ್ಕಳು ಹುಟ್ಟಿತಮ್ಮ ಸೇವೆಮಾಡುತ್ತಾರೆಂದು ಬಯಸುವ ಮನುಷ್ಯರಿಗೆ ಹೆಚ್ಚಿನ ಪ್ರೀತಿಯಿದೆ ಎಂಬುದರಲ್ಲೇನಾಶ್ಚರ್ಯ? ಪುತ್ರನಿಲ್ಲದವನಿಗೆ ಇಹ-ಪರಗಳಿಲ್ಲ 'ಅಪುತ್ಯತ್ರ ಗತಿರ್ನಾಸ್ತಿ', 'ಪುತ್ರವಾನ್ ಸ್ವರ್ಗಮಾಪ್ನೋತಿ' ಎಂದೆಲ್ಲ ಧರ್ಮಶಾಸ್ತ್ರಗಳು ಸಾರುತ್ತಿವೆ. ಇದಕ್ಕೆ ಪ್ರತ್ಯಕ್ಷವೇ ಪ್ರಮಾಣವು. ಕೊನೆಗಾಲದಲ್ಲಿ ಸೇವೆ ಮಾಡುವವರಾರು? ನನ್ನ ಆಸ್ತಿಗಳಿಗೆಲ್ಲ ವಾರಸುದಾರರರಾರು? ಅಂತ್ಯಕ್ರಿಯೆ ಮಾಡುವವರಾರು? ಎಂದೆಲ್ಲ ಮನುಷ್ಯರು ಯೋಚಿಸುತ್ತಾರೆ. ಹೀಗಿರುವುದರಿದ
ಅತೋಸ್ಯ ದುರ್ಗತಿರ್ನೂನಂ ಭ್ರಾಂತಚಿತ್ತಸ್ಯ ಸರ್ವದಾ |
(ಭ್ರಾಂತಿಯನ್ನು ಹೊಂದಿದವನಿಗೆ ದುರ್ಗತಿಯೇ ಬೇರೇನೂ ಇಲ್ಲ) ಎಂದೆಲ್ಲ ಬಹುವಾಗಿ ಯೋಚಿಸುತ್ತಾ ಪರಾಶರ್ಯನು ತಪಸ್ಸಿಗಾಗಿ ಮೇರುಪರ್ವತಕ್ಕೆ ಹೊರಟನು ಅಲ್ಲಿ ಕಂ ದೇವಮುಪಾಸ್ಮಹೇ? ಎಂದು ಯೋಚಿಸುತ್ತಿರುವಾಗ ಆಕಸ್ಮಾತ್ತಾಗಿ ನಾರದಮಹರ್ಷಿಗಳ ಆಗಮನವಾಯಿತು ನಾರದನನ್ನು ಸತ್ಕರಿಸಿ ಕುಶಲವನ್ನು ವಿಚಾರಿಸಿದನು ವ್ಯಾಕುಲಚಿತ್ತನಾದ ವ್ಯಾಸನನ್ನು ನಾರದನು ನಿನ್ನ ಚಿಂತೆಗೆ ಕಾರಣವೇನು? ಎನ್ನಲು ವ್ಯಾಸನು -
ಅಪುತ್ರಸ್ಯ ಗತಿರ್ನಾಸ್ತಿ ನ ಸುಖಂ ಮಾನಸೇ ತತಃ |
(ಮಗನಿಲ್ಲದವನಿಗೆ ಗತಿಯಿಲ್ಲ ಮನಸ್ಸಿಗೆ ನೆಮ್ಮದಿಯಿಲ್ಲ) ಎಂದು ಯೋಚಿಸುತ್ತಿದ್ದೇನೆ.
    ಹಾಗೆಯೇ ವೇದಗಳೂ 'ಜಾಯಮಾನೋ ವೈ ಬ್ರಾಹ್ಮಣಸ್ತ್ರಿಭಿರ್ ಋಣವಾಜಾಯತೇ ಬ್ರಹ್ಮಚರ್ಯೇಣ ಋಷಿಭ್ಯೋ, ಯಜ್ಞೇನ ದೇವೇಭ್ಯಃ, ಪ್ರಜಯಾ ಪಿತೃಭ್ಯಃ' (ತೈ.ಸಂ6-1)(ಪ್ರಪಂಚದಲ್ಲಿ ಜನಿಸುವವನಿಗೆ ಋಷಿಋಣ, ದೇವಋಣ, ಪಿತೃಋಣ ಎಂದು ಮೂರು ಋಣಗಳಿರುತ್ತವೆ; ಬ್ರಹ್ಮಚರ್ಯದಿಂದ ಅಂಗ ಸಹಿತ ವೇದಾಧ್ಯಯನ ಮಾಡುವದರಿಂದ ಋಷಿಋಣ, ಯಜ್ಞಯಾಗಾದಿಗಳನ್ನು ಮಾಡುವದರಿಂದ ದೇವಋಣ, ಸದ್ಯೋನಿಯಲ್ಲಿ ರೇತಸ್ಸೇಚನಮಾಡಿ ಸತ್ಪ್ರಜೆಯನ್ನು ಪಡೆದು ತರ್ಪಣಾದಿಗಳು ನಿಲ್ಲದಂತೆ ಮಾಡುವದರಿಂದ ಪಿತೃಋಣಗಳನ್ನು ತೀರಿಸಬಹುದು), 'ಪ್ರಜಾಮನು ಪ್ರಜಾಯತೇ | ತದು ತೇ ಮರ್ತ್ಯಾಮೃತಮ್||' (ತೈ.ಬ್ರಾ. 1-5-8-25)(ಮಗನಾಗಿ ಮತ್ತೆ ಹುಟ್ಟುತ್ತೀಯೆ, ಅದೇ ಅಮೃತತ್ವವು), 'ಪ್ರಜಾ ಚ. ಪ್ರಜನಶ್ಚ ಪ್ರಜಾತಿಶ್ಚ. ಸ್ವಾಧ್ಯಾಯ ಪ್ರವಚನೇ ಚ' (ತೈ.ಉ.1-9)(ಪ್ರಜೆಯನ್ನು ಪಡೆಯಬೇಕು, ಪಡೆಯಲು ಯತ್ನಿಸಬೇಕು, ಮೊಮ್ಮಕ್ಕಳಿಗಾಗಿ ಮಗನ ಮದುವೆ ಮಾಡಬೇಕು), ವೇದಾಧ್ಯಯನ ಮಾಡಿದ ಶಿಷ್ಯನಿಗೆ ಗುರುವಿನ ಉಪದೇಶವೂ ಅದೇ ಆಗಿದೆ' -'ಆಚಾರ್ಯಾಯ ಪ್ರಿಯಂ ಧನಮಾಹೃತ್ಯ ಪ್ರಜಾತನ್ತುಂ ಮಾ ವ್ಯವಚ್ಛೇತ್ಸೀಃ' *ತೈ.ಉ.1-11)(ಗುರುದಕ್ಷಿಣೆಯನ್ನು ನೀಡಿದವನಾಗಿ ಪ್ರಜೋತ್ಪಾದನೆಯನ್ನು ನಿಲ್ಲಿಸಬೇಡ) [ಶಂಕರರು ಭಾಷ್ಯದಲ್ಲಿ 'ಆಚಾರ್ಯೇಣ ಚ ಅನುಜ್ಞಾತಃ ಅನುರೂಪಾನ್ ದಾರಾನ್ ಆಹೃತ್ಯ ಪ್ರಜಾತನ್ತುಂ ಪ್ರಜಾಸನ್ತಾನಂ ವ್ಯವಚ್ಛೇತ್ಸೀಃ ಪ್ರಜಾಸನ್ತತೇರ್ವಿಚ್ಛಿತ್ತಿರ್ನ ಕರ್ತವ್ಯಾ! ಅನುತ್ಪದ್ಯಮಾನೇಪಿ ಪುತ್ರೇ ಪುತ್ರಕಾಮ್ಯಾದಿಕರ್ಮಣಾ ತದುತ್ಪತ್ತೌ ಯತ್ನಃ ಕರ್ತವ್ಯಃ ಇತ್ಯಭಿಪ್ರಾಯಃ |' (ಆಚಾರ್ಯನಿಂದ ಅನುಶಾಸನವನ್ನು ಹೊಂದಿದವನಾಗಿ ಅನುರೂಪಳಾದ ಹೆಂಡತಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆಯಬೇಕು ಹುಟ್ಟದೇ ಇದ್ದರೂ ಹುಟ್ಟುವದಕ್ಕಾಗಿ ಪುತ್ರಕಾಮ್ಯವೇ ಮೊದಲಾದ ಕರ್ಮಗಳಿಂದ ಅವನು ಹುಟ್ಟುವ ಪ್ರಯತ್ನ ಮಾಡಬೇಕು ಎಂದಿದ್ದಾರೆ)] ಎಂದು ಹೇಳುತ್ತಿವೆ. ಹಾಗಾಗಿ ಚಿಂತಿಸುತ್ತಿದ್ದೇನೆ ಎಂದನು.
    ಇಲ್ಲಿ ಒಂದು ಸಂಶಯ ವ್ಯಾಸನ ಈ ಚಿಂತೆಗೆ ಕಾರಣವೇನು? ಈ ಪ್ರವೃತ್ತಿಗೆ ಹೇತುವಾಗಿರುವದಲ್ಲ ಅದು ಯಾವದು? ಎಂದರೆ ಅದೇ ಏಷಣೆ ಕಾಮ. 'ಪರಾಚಃ ಕಾಮಾನನಯನ್ತಿ ಬಾಲಾಃ' (ಕಾ. 2-1-2), 'ಕಾಮ ಏಷ ಕ್ರೋಧ ಏಷಃ' (ಗೀ. 3-37) ಎನ್ನುತ್ತವೆ ಶ್ರುತಿಸ್ಮೃತಿಗಳು ಮನುಷ್ಯನ ಕರ್ಮವೆಲ್ಲವೂ ಕಾಮಪೂರ್ವಕವಾಗಿಯೇ ಇದೆ. ಶರೀರೇಂನ್ದ್ರಿಯಗಳ ಅಭಿಮಾನಿಯಾದ ಬ್ರಹ್ಮಚಾರಿಯೊಬ್ಬನೇ ಮೊದಲು ಇದ್ದನು ಅವನಿಗಿಂತ ಬೇರೆಯಾಗಿ ಕಾಮಿಸಬಹುದಾದ ಭೇದರೂಪವಿರಲಿಲ್ಲ ಏಷಣೆಗೆ ಬೀಜವಾಗಿರುವ ಅವಿದ್ಯೆಯುಳ್ಳವನಾಗಿ ಅವನೊಬ್ಬನೇ ಇದ್ದನು. ಸ್ವಾಭಾವಿಕವಾದ ತನ್ನ ಸ್ವರೂಪದಲ್ಲಿ ಕರ್ತ್ರಾದಿಕಾರಗಳ, ಕ್ರಿಯೆಗಳ ಫಲಗಳ ಸ್ವರೂಪವನ್ನು ಅಧ್ಯಾರೋಪಣೆ ಮಾಡಿಕೊಳ್ಳುವದೆಂಬ ಅನಾದಿಯಾದ ಅವಿದ್ಯೆಯ ವಾಸನೆಯು ಇರುವದರಿಂದಲೇ ಹೀಗೆ ಬಯಸುತ್ತಾನೆ, ಕಾಮಿಸುತ್ತಾನೆ.
    ಕಾಮನೆಗಳು ಎಷ್ಟೆಂದರೆ ಅಪಾರವಾಗಿ-ಅಗಾಧ ಸಮುದ್ರದಷ್ಟು-ಇವೆ. ಅಂತವೇ ಇಲ್ಲ ಅವನ್ನು ಸಂಗ್ರಹವಾಗಿ ಹೇಳಬೇಕೆಂದರೆ ಸಾಧ್ಯಸಾಧನರೂಪವಾಗಿ ಪುತ್ರ್ಯೆಷಣ,, ವಿತ್ತೈಷಣ, ಲೋಕೈಷಣ (ಹೆಂಡತಿ, ಕರ್ಮ, ಲೋಕ) ಎಂದು ಮೂರು ಬಗೆಯಾಗಿವೆ. ಹೆಂಡತಿ, ಮಗ, ವಿತ್ತ, ಕರ್ಮ ಎಂಬ ಸಾಧನೈಷಣೆ ಮನುಷ್ಯಲೋಕ, ಪಿತೃಲೋಕ, ದೇವಲೋಕ ಎಂಬ ಮೂರು ಬಗೆಯಾದ ಲೋಕಗಳಾಗಿ ಈ ಸಾಧನೈಷಣೆಗೆ ಫಲವಾಗಿರುವ ಸಾಧ್ಯೈಷಣೆ ಇಷ್ಟೇ ಕಾಮಿಸಬಹುದಾದ ವಿಷಯವು ಪುತ್ರವಿತ್ತೈಷಣಗಳು ಸಾಧನ, ಲೋಕ ಸಾಧ್ಯವಾದರೂ ಲೋಕೈಷಣೆಯೇ ನಿಜವಾದ ಏಷಣೆಯು ಸಾಧನವನ್ನು ಬಯಸುವದರಿಂದ ಎರಡು ಬಗೆ ಇದರಿಂದ ಪ್ರೇರಿತನಾಗಿ ಪರವಶನಾಗಿಯೇ ಅವಿದ್ಯಾವಂತನು ರೇಷ್ಮೆಹುಳುವಿನಂತೆ ಸುತ್ತಲೂ ಸುತ್ತಿಕೊಳ್ಳುತ್ತಾನೆ. ಕರ್ಮಮಾರ್ಗದಲ್ಲಿಯೇ ಮನಸ್ಸನ್ನಿಟ್ಟು ಬಹಿರ್ಮುಖಿಯಾಗಿ ತನ್ನ ಲೋಕವನ್ನು ಅರಿತುಕೊಳ್ಳದೇ ಇರುತ್ತಾನೆ ಲೋಕದಲ್ಲಿ ಫಲಸಾಧನರೂಪವಾಗಿರುವದಕ್ಕಿಂತ ಬೇರೆಯಾಗಿ ದೊರಕಿಸಿಕೊಳ್ಳಬೇಕಾದದ್ದು ದೃಷ್ಟವಾಗಲೀ ಅದೃಷ್ಟವಾಗಲೀ ಇರುವದಿಲ್ಲವಲ್ಲವೆ? ಇಷ್ಟೇ ಕಾಮವು ಇವು ಅವಿದ್ಯಾವಂತನಾಗಿರುವ ಪುರುಷನ ಅಧಿಕಾರಕ್ಕೆ ವಿಷಯವಾಗಿರುವ ಏಷಣೆಗಳು.
    ಇದೇ ಲೋಕದ ಸ್ಥಿತಿಯು, ಸೃಷ್ಟಿಯೂ ಹೀಗೆಯೇ ಆಯಿತು ಪ್ರಜಾಪತಿಯು ಅವಿದ್ಯೆಯಿಂದ ಭಯಪಟ್ಟು ಕಾಮದಿಂದ ಪ್ರೇರಿತನಾಗಿ ಒಬ್ಬನೇ ಇದ್ದದ್ದರಿಂದ ಬೇಸರಗೊಂಡವನಾಗಿ, ಆ ಬೇಸರವನ್ನು ಕಳೆದುಕೊಳ್ಳಲು ಸ್ತ್ರೀಯನ್ನು ಬಯಸಿದನು. ಆಕೆಯೊಡನೆ ಬೆರೆತಾಗ ಸರ್ಗವಾಯಿತು ಆದ್ದರಿಂದ ಈಗಲೂ ಒಬ್ಬನೇ ಆಗಿದ್ದ ಬ್ರಹ್ಮಚಾರಿಯು 'ನನಗೆ ಹೆಂಡತಿಯಾಗಬೇಕು, ಆಗ ಹುಟ್ಟುವೆನು, ನನಗೆ ವಿತ್ತವಾಗಬೇಕು, ಆಗ ಕರ್ಮಮಾಡುವೆನು ಎಂದೂ ಪುತ್ರನಿಂದಲೇ ಈ ಲೋಕವನ್ನು ಗೆಲ್ಲಬೇಕು, ಬೇರೆ ಕರ್ಮದಿಂದಲ್ಲ' ಎಂದು ಮುಂತಾಗಿ ಕಾಮಿಸುತ್ತಾನೆ ಇವನ್ನು ಒಂದನ್ನೊಂದನ್ನು ಪಡೆದುಕೊಳ್ಳದೇ ಇರುವನೋ, ಆಗ ನಾನು ಆಕೃತ್ಸ್ನನು, ಅಸಂಪೂರ್ಣನು ಎಂದೇ ತಿಳಿದಿರುತ್ತಾನೆ. ಯಾವಾಗ ಇವೆಲ್ಲವನ್ನೂ ಸಂಪಾದಿಸಿಕೊಳ್ಳುತ್ತಾನೋ ಆಗ ಅವನಿಗೆ ಕೃತ್ಸ್ನತ್ವವುಂಟಾಗುತ್ತದೆ. ಹೀಗಿರುವದರಿಂದ ವ್ಯಾಸರಿಗೂ ಚಿಂತೆಯುಂಟಾಯಿತು.
    ಎಲೈ ಮಹರ್ಷಿಯೇ ಬೇಗ ಹೇಳು 'ಕಂ ದೇವಂ ಶರಣಂ ಯಾಮಿ ಯೋ ಮೇ ಪುತ್ರಂ ಪ್ರದಾಸ್ಯತಿ?' (ಯಾವ ದೇವನನ್ನು ಮೊರೆಹೋಗಲಿ, ಯಾರು ನನಗೆ ಮಗನನ್ನು ದಯಪಾಲಿಸುತ್ತಾರೆ?) ಅದಕ್ಕೆ ನಾರದನು ಹೇಳುತ್ತಾನೆ-ಹಿಂದೆ ನನ್ನ ತಂದೆಯಾದ ಬ್ರಹ್ಮನು ವಿಷ್ಣುವನ್ನು ಇದೇ ರೀತಿಯಾಗಿ ಪ್ರಶ್ನಿಸಿದ್ದನು. 'ಎಲ್ಲಕ್ಕೂ ಒಡೆಯನಾದ ವಿಷ್ಣುವೇ ನೀನು ಏತಕ್ಕಾಗಿ ತಪಸ್ಸನ್ನು ಆಚರಿಸುತ್ತಿರವೆ? ಏನನ್ನು ಧ್ಯಾನಿಸುತ್ತೀಯೇ? ನಿನಗಿಂತಲೂ ಹೆಚ್ಚಾದ ದೇವನಾರು? 'ಮಹತಾಂ ನೈವ ಗೋಪ್ಯಂ ಹಿ ಪ್ರಾಯಃ ಕಿಂಚಿದತಿಸ್ಮೃತಃ' (ಮಹಾತ್ಮರಲ್ಲಿ ಗೌಪ್ಯವು ಇರುವದಿಲ್ಲವೆನ್ನುತ್ತಾರೆ ಎಲ್ಲವನ್ನೂ ವಿಸ್ತಾರವಾಗಿ ತಿಳಿಸು' ಎಂದನು.
    ಆಗ ವಿಷ್ಣುವು ಸಮಾನ್ಯರು ಬ್ರಹ್ಮ-ವಿಷ್ಣು-ಮಹೇಶ್ವರರು ಸೃಷ್ಟಿ-ಸ್ಥಿತಿ-ಲಯಕರ್ತರೆಂದು ತಿಳಿದಿದ್ದರೂ ವೇದಪಾರಗರು ಆ ಆದಿಪರಾಶಕ್ತಿಯ ಕಾರ್ಯವೆಂದು ತಿಳಿದಿದ್ದಾರೆ. (ಕೃತಾಃ ಶಕ್ತ್ಯೇತಿ ಸಂತರ್ಕಃ ಕ್ರಿಯತೇ ವೇದಪಾರಗೈಃ) ಜಗತ್ತನ್ನು ಸೃಷ್ಟಿಸುವ ರಾಜಸೀ ಶಕ್ತಿಯು ಬ್ರಹ್ಮನಲ್ಲಿಯೂ, ಪಾಲಿಸುವ ಸಾತ್ವಿಕ ಶಕ್ತಿಯು ವಿಷ್ಣುವಿನಲ್ಲಿಯೂ, ಲಯಗೊಳಿಸುವ ತಾಮಸೀ ಶಕ್ತಿಯು ರುದ್ರನಲ್ಲಿಯೂ ಇಟ್ಟು ಜಗತ್ಕಾರ್ಯವನ್ನು ಮಾಡುತ್ತಿರುವವಳು ಅವಳೇ. ಅವಳಿಲ್ಲದೇ ನಾವೇನೂ ಮಾಡಲಾರೆವು ನಾವೆಲ್ಲವೂ ಅವಳ ಅಧೀನರು, ಪರತಂತ್ರರು ಆದ್ದರಿಂದ ನಾನು ಆ ಶಕ್ತ್ಯಧೀನನಾಗಿ ತಪಸ್ಸನ್ನು ಮಾಡುತ್ತಿದ್ದೇನೆ. ಹಿಂದೆ ನನ್ನ ಕಿವಿಯ ಕೊಳೆಯಿಂದ ಹುಟ್ಟಿದ ಮಧು-ಕೈಟಭರೊಡನೆ ಐದು ಸಾವಿರ ವರ್ಷಗಳ ಕಾಲ ಬಾಹುಯುದ್ಧವನ್ನು ಮಾಡಿದ್ದೂ ಅವರನ್ನು ಸಂಹರಿಸಿದ್ದೂ ಅವಳ ಮಹಿಮೆಯಿಂದ ನೀನೂ ನೋಡಿದ್ದೀಯೆ. ಆದಿಶಕ್ತಿಗೆ ಇಚ್ಚೆಯುಂಟಾದರೆ ಮತ್ಸ್ಯಾದಿ ಅವತಾರಮಾಡುತ್ತೇನೆ ಹಯಗ್ರೀವನಾದದ್ದೂ ಪರಾಧೀನತೆಯಿಂದಲೇ. ಶಕ್ತಿಗಿಂತ ಹೆಚ್ಚಿನ ದೇವತೆ ಮತ್ತಾವದೂ ಇಲ್ಲ ಅವಳನ್ನೇ ಧ್ಯಾನಿಸುತ್ತಿದ್ದೇನೆ ಎಂದನು.
ಎಲೈ ವ್ಯಾಸನೇ ನೀನೂ ಪುರಷಾರ್ಥಗಳನ್ನು ಹೊಂದಬೇಕೆಂದರೆ
ಅಸಂಶಯಂ ಹೃದಂಬೋಜೇ ಭಜ ದೇವೀಪದಾಂಬುಜಮ್
ಸರ್ವಂ ದಾಸ್ಯತಿ ಸಾ ದೇವೀ ಯದ್ಯದಿಷ್ಟಂ ಭವೇತ್ತವ ||
(ಸಂಶಯವಿಲ್ಲದೇ ನಿನ್ನ ಹೃದಯಕಮಲದಲ್ಲಿ ದೇವಿಯ ಕಮಲದಂತಿರುವ ಪಾದವನ್ನು ಧ್ಯಾನಿಸು ಎಲ್ಲವನ್ನೂ ಕೊಡುತ್ತಾಳೆ, ನಿನ್ನ ಕಾಮನೆಗಳೆಲ್ಲ ಆಗ ಪೂರ್ಣವಾಗುತ್ತವೆ) ಎನ್ನಲು, ಹಾಗೆ ಮಾಡುತ್ತೇನೆ, ಅವಳನ್ನೇ ಧ್ಯಾನಿಸುತ್ತೇನೆ, ಪುರಷಾರ್ಥಗಳನ್ನು ಪಡೆಯುತ್ತೇನೆ ಎನ್ನುತ್ತಾ ದೇವಿಯ ಪಾದಾರವಿಂದದಲ್ಲಿಯೇ ಮನಸ್ಸುಳ್ಳವನಾಗಿ ವ್ಯಾಸನು ತಪಸ್ಸಿಗಾಗಿ ಹೊರಟುಹೋದನು.

ಹಯಗ್ರೀವ
    ವಿಷ್ಣುವಿಗೆ ಹಯಶಿರಬಂದಿತು ಎಂದಿರಿ, ಇದು ಜಗತ್ತಿಗೇ ಆಶ್ಚರ್ಯವಾಗಿದೆ. ಎಲ್ಲಕ್ಕೂ ಮೊದಲನೆಯವನೂ, ಒಡೆಯನೂ, ಆದ ವಿಷ್ಣುವಿನ ತಲೆಯೂ ಹೇಗೆ ಕತ್ತರಿಸಿ ಹೋಯಿತು? ಎಲ್ಲವನ್ನೂ ವಿಸ್ತರಿಸಿ ಹೇಳಬೇಕು ಎಂದು ಕೇಳಿದರು ಆಗ ಸೂತನು ಪರಮ ತೇಜಸ್ವಿಯಾದ ದೇವತೆಗಳಿಗೂ ದೇವನಾದ ಮಹಾವಿಷ್ಣುವು ದಾನವರೊಡನೆ ಹತ್ತು ಸಾವಿರ ವರ್ಷಗಳ ಕಾಲ ಯುದ್ಧಮಾಡಿ ಬಳಲಿದನು. ಆಗ ಪರಿಶುದ್ಧವಾದ ಸಮತಟ್ಟಾದ ಪ್ರದೇಶದಲ್ಲಿ ಧನುಸ್ಸನ್ನು ಹೆದೆಯೇರಿಸಿ ಅದನ್ನು ತಲೆಗೆ ಆಧಾರವಾಗಿಟ್ಟು ಪದ್ಮಾಸನ ಹಾಕಿ ಕುಳಿತನು ತನ್ನ ದೇಹಭಾರವನ್ನೆಲ್ಲ ಧನುಸ್ಸಿನ ಮೇಲೆ ಹಾಕಿ ಗಾಢವಾದ ನಿದ್ರೆಗೆ ಹೋದನು. ಆ ಸಮಯದಲ್ಲಿ ದೇವತೆಗಳು ವಿಶೇಷ ಯಾಗಮಾಡಲು ಉಪಕ್ರಮಿಸಿದರು. ದೇವತೆಗಳೆಲ್ಲ ವಿಷ್ಣುವಿನ ಬಳಿ ಹೋಗಲು ನಿದ್ರೆಮಾಡುತ್ತಿರುವದನ್ನು ನೋಡಿ "ನಿದ್ರಾಭಂಗವನ್ನು ಮಾಡುವದು ಹೇಗೆ, ಯಜ್ಞಕ್ಕೆ ಅವನ ಅವಶ್ಯಕತೆ ಇದೆ", ಎಚ್ಚರಗೊಳಿಸುವದು ಹೇಗೆ ಎಂದು ಯೋಚಿಸಿದರು.
    ಆಗ ಶಂಭುವು ಶ್ರೇಷ್ಠರಾದವರ ನಿದ್ರಾಭಂಗ ದೋಷಕರ ಎನ್ನಲು ಬ್ರಹ್ಮನು ಧನುಸ್ಸಿನ ತುದಿಯನ್ನು ತಿನ್ನಲು ಗೆಜ್ಜಲಹುಳುವನ್ನು ಸೃಷ್ಟಿಸಿದನು. ಹುಳುವು ತುದಿಯನ್ನು ತಿಂದ ಮೇಲೆ ಧನುಸ್ಸಿನ ಕೆಳಭಾಗ ಬಗ್ಗುತ್ತದೆ, ಎಂದು ಯೋಚಿಸಿ ತಿನ್ನಲು ಅಪ್ಪಣೆಕೊಟ್ಟನು. ಆಗ ಹುಳುವು ನಾನು ಹೇಗೆ ತಿನ್ನಲಿ?
ನಿದ್ರಾಭಂಗಃ ಕಥಾಚ್ಛೇದೋ ದಂಪತ್ಯೋಃ ಪ್ರೀತಿಭೇದನಮ್ |
ಶಿಶುಮಾತೃವಿಭೇದಶ್ಚಬ್ರಹ್ಮಹತ್ಯಾಸಮಂ ಸ್ಮೃತಮ್ ||
(ನಿದ್ರೆಗೆ ತೊಂದರೆಯನ್ನುಂಟುಮಾಡುವದು, ಕಥೆಯನ್ನು ಕೇಳಲು ತೊಂದರೆಯನ್ನುಂಟು ಮಾಡುವದು, ಅನ್ಯೋನ್ಯವಾಗಿರುವ ದಂಪತಿಗಳ ಪ್ರೀತಿಯನ್ನು ನಾಶಪಡಿಸುವದು, ತಾಯಿ ಮಕ್ಕಳನ್ನು ದೂರಮಾಡುವದು ಬ್ರಹ್ಮಹತ್ಯಾಸಮ) ಎಂದು ಧರ್ಮಶಾಸ್ತ್ರಗಳು ಹೇಳುತ್ತವೆ ಈ ಪಾಪಕೃತ್ಯದಿಂದ ನನಗೇನು ಲಾಭ ಎನ್ನಲು ಬ್ರಹ್ಮನು ಹೋಮಮಾಡುವಾಗ ಕುಂಡದ ಪಕ್ಕದಲ್ಲಿ ಬೀಳುವ ಹವಿಸ್ಸು ನಿನ್ನಭಾಗವೆಂದು ತಿಳಿ ಜಾಗ್ರತೆಯಿಂದ ಕೆಲಸವನ್ನು ಮಾಡು ಹೀಗೆ ಹೇಳಿದ ಮೇಲೆ ಧನುಸ್ಸಿನ ತುದಿಯನ್ನು ತಿಂದುಬಿಟ್ಟಿತು ಕೂಡಲೇ ಭಯಂಕರವಾದ ಶಬ್ದವಾಯಿತು ಎಲ್ಲೆಡೆ ಅಂಧಕಾರವು ಪಸರಿಸಿತು ದೇವತೆಗಳೆಲ್ಲ ಭಯಭೀತರಾದರು ಅಘಾತದಿಂದ ವಿಷ್ಣುವಿನ ತಲೆ ಕತ್ತರಿಸಲ್ಪಟ್ಟಿತು. ದೂರದ ಸಮುದ್ರದಲ್ಲಿ ಬಿದ್ದಿತು ಮುಂಡವು ಮಾತ್ರ ಅಲ್ಲಿ ಬಿದ್ದಿತ್ತು ದೇವತೆಗಳೆಲ್ಲ ಚಿಂತಾಕ್ರಾಂತರಾದರು ಆಗ ಬ್ರಹ್ಮನು ದೇವತೆಗಳನ್ನುದ್ದೇಶಿಸಿ
ಅವಶ್ಯಮೇವ ಭೋಕ್ತವ್ಯಂ ಕಾಲೇನಾಪಾದಿತಂ ಚ ಯತ್ |
ಶುಭಂ ವಾಪೃರುಭಂ ವಾಪಿ ದೈವಂ ಕೋತಿಕ್ರಮೇತ್ ಪುನಃ ||
ದೇಹವಾನ್ ಸುಖದುಃಖಾನಾಂ ಭೋಕ್ತಾ ನೈವಾತ್ರ ಸಂಶಯಃ |
(ದೇಹವನ್ನು ಪಡೆದವರೆಲ್ಲರೂ ಒಳ್ಳೆಯದು ಕೆಟ್ಟದ್ದು ಎಂದು ಯೋಚಿಸದೇ ಕಾಲಾಧೀನವಾಗಿ ಬಂದ ಸುಖದುಃಖಗಳನ್ನು ಅನುಭವಿಸಲೇಬೇಕು. ಅದೃಷ್ಟವನ್ನು ಮೀರುವದು ಸಾಧ್ಯವಿಲ್ಲ.) ಹಿಂದೆ ಶಂಕರನು ನನ್ನ ಮಸ್ತಕವನ್ನು ಕತ್ತರಿಸಿದನು ಋಷಿಗಳ ಶಾಪದಿಮದ ಶಂಭುವಿನ ಲಿಂಗ ಕತ್ತರಿಸಿಹೋಯಿತು ಇಂದ್ರನಿಗೆ ಸಹಸ್ರಯೋನಿತ್ವ ಮಾನಸಸರೋವರದ ಕಮಲದನಾಳದಲ್ಲಿ ವಾಸಮಾಡವಿಕೆ, ಈಗ ವಿಷ್ಣುವಿನ ತಲೆಯೂ ಕತ್ತರಿಸಿ ಸಮುದ್ರದಲ್ಲಿ ಬಿದ್ದಿದೆ. (ಏತೇ ದುಃಖಸ್ಯ ಭೋಕ್ತಾರಃ ಕೇನ ದುಃಖಂ ನ ಭುಜ್ಯತೇ) ಈ ಸಂಸಾರದಲ್ಲಿ ಯಾರು ತಾನೇ ದುಃಖವನ್ನು ಅನುಭವಿಸದವರಿದ್ದಾರೆ? ನೀವೆಲ್ಲರೂ ದುಃಖವನ್ನು ಬಿಟ್ಟು "ಚಿಂತಾಮಂತು ಮಹಾಮಾಯಾಂ ವಿದ್ಯಾಂ ದೇವೀಂ ಸನಾತನೀಮ್ | ಸಾ ವಿಧಾಸ್ಯತಿ ನಃ ಕಾರ್ಯಂ ನಿರ್ಗುಣಾ ಪ್ರಕೃತಿಃ ಪರಾ" || ಎಂದನು, ಆ ಆದಿಶಕ್ತಿ ಜಗದಂಬೆ ಎಲ್ಲೆಡೆ ವಿರಾಜಮಾನಳಾಗಿರುವಳು ಜಗದುತ್ಪತ್ತಿಸ್ಥಿತಿಲಯಗಳೂ ಅವಳಿಂದಲೆ! ಬ್ರಹ್ಮವಿದ್ಯಾರೂಪಿಣೀಯಾದ ಮಹಾಮಾಯೆಯೇ ಆರಾಧಿಸಿಬೇಕಾದವಳು. ನೀವೆಲ್ಲರೂ ಶ್ರೀದೇವಿಯನ್ನು ಸ್ತುತಿಸಿರಿ ಎಂದು ದೇವತೆಗಳಿಗೆ ಅಪ್ಪಣೆಕೊಟ್ಟನು. ಹಾಗೆಯೇ ದೇವತೆಗಳ ಕಾರ್ಯಸಿದ್ಧಿಗಾಗಿ ಸ್ತೋತ್ರಮಾಡುವಂತೆ ವೇದಗಳನ್ನು ಪ್ರೇರೇಪಿಸಿದನು.
    ಬ್ರಹ್ಮನು ಹೇಳಿದೊಡನೆ ವೇದಗಳು ಭಗವತಿಯನ್ನು ಸ್ತುತಿಸಪ್ರಾರಂಭಿಸಿದವು ದೇವೀ ನೀನು ಮಹಾಮಾಯೆಯು, ಅಖಿಲಜಗತ್ತು ನಿನ್ನ ಶಾಸನವನ್ನು ಪಾಲಿಸುತ್ತವೆ. ಸರ್ವಪ್ರಾಣಿಗಳಿಗೆ ಆಶ್ರಯದಾಯಿಯಾದ ನೀನು ಪ್ರಕೃತಿಸ್ವರೂಪಳಾಗಿರುವೆ. ನಮ್ಮಗಳ ಪ್ರಾಣವೂ ನೀನೆ, ಧೀ, ಶ್ರೀ ಕಾಂತಿ, ಕ್ಷಮಾ, ಶಾಂತಿ, ಶ್ರದ್ಧಾ, ಮೇಧಾ, ಧೃತಿ, ಸ್ಮೃತಿ ಇವೆಲ್ಲವೂ ನಿನ್ನ ನಾಮಗಳು ನೀನು ಓಂಕಾರ, ಗಾಯತ್ರೀ, ವ್ಯಾಹೃತಿ, ಜಯಾ, ವಿಜಯಾ, ಧಾತ್ರಿ, ಲಜ್ಜಾ, ಕಿರ್ತಿ, ಸ್ಪೃಹಾ, ದಯಾ ಎಲ್ಲವೂ ನೀನೆ ನಿನಗೆ ನಮಸ್ಕಾರ ಅಧಿಕಾರಿಕ ಪುರುಷರೆಲ್ಲ ನಿನ್ನ ಅಧೀನರು.
ನ ತೇ ರೂಪಂ ವೇತ್ತುಂ ಸಕಲಭವನೇ ಕೋಪಿ ನಿಪುಣೋ
ನ ನಾಮ್ನಾಂ ಸಂಖ್ಯಾಂ ತೇ ಕಥಿತುಮಿಹ ಯೋಗ್ಯೋಸ್ತಿ ಪುರುಷಃ |
ಯದಲ್ಪಂ ಕೀಲಾಲಂ ಕಲಯಿತುಮಶಕ್ತಃ ಸ ತು ನರಃ
ಕಥಂ ಪಾರಾವಾರಾಕಲನಚತುರಃ ಸ್ಯಾದೃತಮತಿಃ ||
ಓ ತಾಯಿ ನಾವೇನೋ ನಿನ್ನ ಸ್ತೋತ್ರವನ್ನು ಮಾಡುತ್ತೇವೆಂದು ಪ್ರತಿಜ್ಞೆಮಾಡಿದೆವು. ಆದರೆ ಈಗ ಸ್ತೋತ್ರಮಾಡುವದಕ್ಕೂ ಶಕ್ಯರಲ್ಲ ನೀನು ಗುಣಿಯೋ ನಿರ್ಗುಣಿಯೋ ತಿಳಿದಿಲ್ಲ. "ಕೋ ಅದ್ಧಾವೇದ ಕ ಇಹ ಪ್ರವೋಚತ್ | ಕುತ ಅಜಾತಾ ಕುತ ಇಯಂ ವಿಸೃಷ್ಟಿಃ | ಅರ್ವಾಗ್ದೇವಾ ಅಸ್ಯ ವಿಸರ್ಜನಾಯ | ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್ | ಸೋ ಅಂಗವೇದ ಯಾದಿ ವಾ ನ ವೇದ' || ನಿನ್ನ ರೂಪವನ್ನು ಸರಿಯಾಗಿ ತಿಳಿದವರಾರು ಈ ಸೃಷ್ಟಿ ಹೇಗಾಯಿತು? ಏಕೆಂದರೆ ವೇದಗಳೂ ನಿನ್ನಿಂದಲೇ ಹುಟ್ಟಿದವು ಇದನ್ನು ದೇವತೆಗಳಲ್ಲಿಯೂ ತಿಳಿದವರಿಲ್ಲ. ಪ್ರಪಂಚದ ಸೃಷ್ಟಿವಿಚಾರದಲ್ಲಿ ನೀನೇ ಪ್ರಮಾಣಳು ಎಂದು ವೇದಗಳೇ ಹೇಳುತ್ತಿವೆ. ಶಬ್ದಗಳಿಂದ ತಿಳಿಸಲಾಗದೇ ಮಾತು, ಮನಸ್ಸು ಹಿಂದಿರುಗುತ್ತಿವೆ. ನೀನು ಇವೆಲ್ಲಕ್ಕೂ ಅತೀತಳು ನಿನ್ನ ನಾಮವನ್ನಾದರೂ ಹೇಳೋಣವೆಂದರೆ ಇಷ್ಟೆಂದು ಪರಿಮಿತಿಯಿಲ್ಲ ಹೇಗೆ ಚಿಕ್ಕತೊರೆಯನ್ನೇ ದಾಟಲಾರದವನು ದೊಡ್ಡಸಮುದ್ರವನ್ನು ದಾಟಲು ಹೇಗೆ ಸಮರ್ಥನಾದಾನು? ಹಾಗೆ ನಿನ್ನ ನಾಮರೂಪಗಳನ್ನು ನಿಷ್ಕರ್ಷೆಯಾಗಿ ತಿಳಿದು ಸ್ತೋತ್ರಮಾಡುವದು ನಮಗೆ ಸಾಧ್ಯವಿಲ್ಲ ನೀನು ನಮ್ಮನ್ನು ಪರೀಕ್ಷಿಸಬೇಡ ವಿಷ್ಣುವು ನಿನ್ನನುಗ್ರಹದಿಂದಲೇ ಮಧು-ಕೈಟಬರನ್ನು ಕೊಂದಿದ್ದು ನೀನು ಯಾರ ಮೇಲೆ ಕೋಪಗೊಂಡಿರುವೆ ಶ್ರೀಹರಿಯನ್ನು ಮತ್ತೆ ಕಾಯೋನ್ಮುಖನನ್ನಾಗಿ ಮಾಡು ಎಂದು ಪರಿಪರಿಯಾಗಿ ಸ್ತುತಿಸಿದರು.
    ಸ್ತುತಿಯಿಂದ ಪ್ರಸನ್ನಳಾದ ದೇವಿಯು ನೀವು ಚಿಂತಿಸಬೇಡಿ. ನಿಮ್ಮ ಸ್ಥಾನಗಳಿಗೆ ತೆರಳಿರಿ ವೇದಗಳು ಮಾಡಿದ ಸ್ತೋತ್ರಗಳಿಂದ ನಾನು ಪ್ರಸನ್ನಳಾಗಿರುವೆನು. ಶ್ರದ್ಧಾಳುವಾದವರು ಈ ಸ್ತೋತ್ರವನ್ನು ಪಠಿಸಿದರೆ ದುಃಖನಿವೃತ್ತಿಯಾಗುವದು. ವಿಷ್ಣು ಶಿರೋಹೀನನಾದದ್ದು- ಒಂದು ದಿನ ಆದಿಶೇಷನ ಮೇಲೆ ಪವಡಿಸಿರುವಾಗ ಶ್ರೀಹರಿಯು ಲಕ್ಷ್ಮಿಯ ಮುಖವನ್ನು ನೋಡಿ ಗಹಗಹಿಸಿ ನಕ್ಕನು ತನ್ನ ಮುಖದಲ್ಲಿ ಕುರೂಪತೆ ಇರುವದರಿಂದ ನಗುತ್ತಿದ್ದಾನೆಂದು ಭ್ರಮಿಸಿ ಕೋಪಗೊಂಡಳು. ಕೂಡಲೇ ತಮೋಗುಣ ಪ್ರವಿಷ್ಟವಾಯಿತು. ತಕ್ಷಣ "ನಿನ್ನ ಶಿರವು ಕತ್ತರಿಸಲ್ಪಡಲಿ" ಎಂದು ಶಾಪಕೊಟ್ಟಳು ಆದರೆ ಇದರಿಂದ ನಿಮಗೆ ಕಲ್ಯಾಣವಾಗುವದು ಹಯಗ್ರೀವನೆಂಬ ರಕ್ಕಸನಿರುವನು ಅವನೊಮ್ಮೆ ಸರಸ್ವತೀ ನದಿ ತೀರದಲ್ಲಿ ನನ್ನ ಏಕಾಕ್ಷರೀಮನ್ತ್ರವನ್ನು ಅನುಷ್ಠಾನಮಾಡಿದನು ನಾನು ಪ್ರತ್ಯಕ್ಷಳಾದೆನು ಆಗ ಅವನು ತನ್ನ ಹೆಸರಿನವನಿಂದಲೇ ಮರಣವಾಗಬೇಕು ಎಂದು ಪ್ರಾರ್ಥಿಸಿದನು ತಥಾಸ್ತು ಎಂದೆನು. ದೇವತೆಗಳೇ! ನೀವು ಒಂದು ಕುದುರೆಯ ತಲೆಯನ್ನು ಕಡಿದುತನ್ನಿರಿ ತ್ವಷ್ಟ್ರವು ಸೇರಿಸುತ್ತಾನೆ. ವಿಷ್ಣುವು ಹಯಗ್ರೀವನನ್ನು ಸಂಹರಿಸುತ್ತಾನೆ. ನಿಮ್ಮ ಯಜ್ಞವೂ ನಿಷ್ಕಂಟಕವಾಗುವದು ಎಂದಳು.
    ಭಗವತಿಯ ಮಾತನ್ನು ಕೇಳಿ ದೇವತೆಗಳು ಹರ್ಷಿತರಾದರೂ ಜಗದಂತೆಯ ಅನುಗ್ರಹದಿಂದ ವಿಷ್ಣು ಹಯಗ್ರೀವನಾದನು. ಹಯಗ್ರೀವದಾನವನ ಸಂಹಾರವಾಯಿತು ಜಗತ್ತು ಆನಂದಸಾಗರದಲ್ಲಿ ಮುಳುಗಿತು ದೇವತೆಗಳ ಯಜ್ಞ ನೆರವೇರಿತು ಈ ಹಯಗ್ರೀವನ ಕಥೆ ವೇದದಲ್ಲಿ "ಹಯಗ್ರೀವೋಪನಿಷತ್" ಎಂಬ ಒಂದು ಉಪನಿಷತ್ತಿನಲ್ಲೂ ಸೂಚಿಸಿದೆ. ಹೀಗೆ ದೇವತೆಗಳನ್ನೆಲ್ಲ ಕಾಪಾಡಿದ ಈ ಜಗದಂಬೆ ನಮ್ಮನ್ನೂ ಸ್ವರೂಪಜ್ಞಾನವನ್ನನುಗ್ರಹಿಸಿ ಕಾಪಾಡಲಿ.

ಮಧುಕೈಟಭರು
    ಋಷಿಗಳು ಸೂತಪುರಾಣಿಕರನ್ನು ಕುರಿತು ಮಹಾತ್ಮರೇ ವಿಷ್ಣುವು ಮಧುಕೈಟಭರೊಡನೆ ಐದು ಸಾವಿರ ವರ್ಷಗಳ ಕಾಲ ಯುದ್ಧಮಾಡಿದನೆಂದಿರಲ್ಲ, ಅದನ್ನು ವಿಸ್ತಾರವಾಗಿ ತಿಳಿಸಿರಿ ಅವರ ಉತ್ಪತ್ತಿ ಹೇಗಾಯಿತು? ಅವರೇನನ್ನು ಮಾಡಿದರು? ತ್ರಿಮೂರ್ತಿಗಳು ಪ್ರಪಂಚದ ಯೋಗಕ್ಷೇಮನಿರ್ವಾಹದಲ್ಲಿ ಕಾರಣರಾಗಿರುತ್ತಾರೆ ಇವರಿಗಿಂತ ಹೆಚ್ಚಿನದಾವುದೂ ಇಲ್ಲ ಒಬ್ಬನೇ ಪರಮಾತ್ಮನು ಸತ್ವ-ರಜ- ತಮೋಗುಣಗಳ ಕಾರ್ಯಗಳನ್ನವಲಂಬಿಸಿ ಮೂರಾಗಿ ತೋರುತ್ತಾನೆ. ಅದರಲ್ಲಿ ಪುರುಷೋತ್ತಮನಾದ ವಿಷ್ಣುವೇ ಶ್ರೇಷ್ಠನು. ಹೀಗಿರುವಾಗ ಎಲ್ಲಕ್ಕೂ ಸ್ವಾಮಿಯಾದ ವಿಷ್ಣುವು ಹೇಗೆ ಮಾಯೆಯಿಂದ ಅವರಿಸಲ್ಪಟ್ಟನು? ನಿರ್ವ್ಯಾಪಾರನಾಗಿ ನಿದ್ರಿಸುವಂತಾದನು? ಯಾವ ಶಕ್ತಿಯು ವಿಷ್ಣುವನ್ನು ಜಯಿಸಿತು? ಆ ಶಕ್ತಿ ಎಲ್ಲಿ ಹುಟ್ಟಿತು? ಎಚ್ಚರಗೊಂಡ ಮಹಾವಿಷ್ಣುವು ಅವರನ್ನು ಹೇಗೆ ನಿಗ್ರಹಿಸಿದನು? ಎಲ್ಲವನ್ನೂ ವಿಸ್ತಾರವಾಗಿ ಹೇಳಿ. ದೈವಯೋಗದಿಂದ ನಾವು ಇಲ್ಲಿ ಸೇರಿದ್ದೇವೆ.
ಮೂರ್ಖೇಣ ಸಹ ಸಂಯೋಗಃ ವಿಷಾದಪಿ ಸದುರ್ಜರಃ |
ವಿಜ್ಞೇನ ಸಹ ಸಂಯೋಗಃ ಸುಧಾರಸ ಸಮಃ ಸ್ಮೃತಃ ||
ಮೂರ್ಖನ ಸಹವಾಸವು ವಿಷಕ್ಕಿಂತಲೂ ಭಯಂಕರ, ಸುಜ್ಞರೊಡನೆ ಸೇರುವದು ಅಮೃತಕ್ಕೆ ಸಮಾನ.
ಜೀವಂತಿ ಪಶವಃ ಸರ್ವೇ ಖಾದಂತಿ ಮೇಹಯಮತಿ ಚ |
ಜಾನಂತಿ ವಿಷಯಾಕಾರಂ ವ್ಯವಾಯ ಸುಖಮದ್ಬುತಮ್ ||
ತಿನ್ನುತ್ತಾ ಸಂತಾನಾಭಿವೃದ್ಧಿ ಮಾಡುತ್ತಾ ಪಶುಗಳೂ ಜೀವಿಸುತ್ತವೆ ಆದರೆ ಅವುಗಳಿಗೆ ಸದಸದ್ ಜ್ಞಾನವು ಇರುವದಿಲ್ಲ ವಿವೇಕವಿಲ್ಲ ಪಶುಗಳಂತೆ ಕೇವಲ ಪಂಚೇಂದ್ರಿಯಸುಖಕ್ಕೆ ಚೋಗಲಿ ಬೀಳುವದು ತರವಲ್ಲ ಆದ್ದರಿಂದ ಪುಣ್ಯಪ್ರಾಪಕ-ಪಾಪನಾಶಕವಾದ ಈ ಪುರಾಣ ಸಂಹಿತೆಯನ್ನು ಶ್ರವಣಮಾಡಿಸಿರಿ ಎಂದು ಕೇಳಿಕೊಂಡರು ಆಗ ಸೂತನು ಮಾನವರು ಹೀಗೆ ಸಚ್ಚಿಂತನೆಯಿಂದಲೇ ಧನ್ಯತೆಯನ್ನು ಹೊಂದಬೇಕು ಸಾವಧಾನದಿಂದ ಆಲಿಸಿರಿ ಎಂದನು.
    ಹಿಂದೆ ಅವಾಂತರ ಪ್ರಳಯದಲ್ಲಿ ಲೊಕಗಳೆಲ್ಲ ಜಲಮಯವಾಗಿದ್ದಾಗ ವಿಷ್ಣುವು ಶೇಷಶಯನನಾಗಿ ಯೋಗನಿದ್ರಾಧೀನನಾಗಿ ಮಲಗಿದ್ದನು ಆಗ ಅವನ ಕರ್ಣಮಲದಿಂದ ಮಧುಕೈಟಭರು ಉತ್ಪನ್ನರಾದರು. ಆದರೆ ಅವರಿಗೆ ತಾವು ಜನಿಸಿದ ರೀತಿ ತಂದೆ-ತಾಯಿಗಳಾರೆಂಬ ಪರಿಜ್ಞಾನ ಯಾವದೂ ಇರಲಿಲ್ಲ ಕೇವಲ ಜಲಕ್ರೀಡಾಮಗ್ನರಾಗಿದ್ದರು ಆ ಮಹಾಪರಾಕ್ರಮಿಗಳು ಒಂದು ದಿನ ಯೋಚಿಸಿದರು ಎಲ್ಲೆಡೆಯೂ ತುಂಬಿರುವ ಈ ಜಲರಾಶಿಗೆ ಆಧಾರವೇನು? ಕಾರಣವಿಲ್ಲದೇ ಕಾರ್ಯವಿಲ್ಲ ಆಧಾರವಿಲ್ಲದೇ ಅಧೇಯವಿಲ್ಲ, ಅದಾವುದೂ ನಮಗೆ ಗೋಚರವಾಗುತ್ತಿಲ್ಲ ಎಂದು ಎಷ್ಟು ಯೋಚಿಸಿದರೂ ಅರ್ಥವಾಗಲಿಲ್ಲ ಆಗ ಕೈಟಭನು ಮಧುವಿನೊಡನೆ ನಾವು ಈ ಜಲದಲ್ಲಿ ಇರಲು ಶಕ್ತಿವಂತರಾಗಿದ್ದೇವೆಂದರೆ ಅದಕ್ಕೆ ಆದಿಶಕ್ತಿಯೇ ಕಾರಣಳು ಅವಳೇ ಆಧಾರವೆಂದು ತಿಳಿದು ಅವಳ ಧ್ಯಾನದಲ್ಲಿಯೇ ಮಗ್ನರಾದರು ಅಷ್ಟರಲ್ಲಿ ಅವರಿಗೆ ವಾಗ್ಬೀಜವು ಸ್ಫುರಿಸಿತು ಅವರು ಅದರಲ್ಲಿ ಭಕ್ತಿಯುಳ್ಳವರಾಗಿ ಧ್ಯಾನಿಸತೊಡಗಿದರು ಅವರ ಧ್ಯಾನಕ್ಕೆ ಮೆಚ್ಚಿ ಆದಿಮಾಯೆ "ನಿಮ್ಮ ತಪಸ್ಸಿಗೆ ಮೆಚ್ಚಿದ್ದೇನೆ; ಇಚ್ಛೆಗನುಸಾರ ವರವನ್ನು ಕೇಳಿರಿ" ಎಂದಳು ಆಗ ಅವರು ಸ್ವೇಚ್ಛಾಮರಣವನ್ನು ದಯಪಾಲಿಸು ಎಂದರೆ ಹಾಗೆಯೇ ಆಗಲಿ ಎಂದಳು ವರಮದದಿಂದ ದೈತ್ಯರು ಉನ್ಮತ್ತರಾಗಿ ವಿಹರಿಸುತ್ತಿದ್ದರು.
    ಹಾಗಿರುವಾಗ ಒಂದು ದಿನ ಕಮಲದಲ್ಲಿ ಆಸೀನನಾದ ಬ್ರಹ್ಮನನ್ನು ನೋಡಿದರು. ಸ್ವಭಾವತಃ ದುಷ್ಟರಾದ ಅವರು 'ನಮ್ಮೊಡನೆ ಯುದ್ಧಮಾಡು ಇಲ್ಲವೇ ನಿನ್ನ ಸ್ಥಾನವನ್ನು ತ್ಯಜಿಸು ಏಕೆಂದರೆ "ವೀರಭೋಗ್ಯಮಿದಂ ಸ್ಥಾನಂ" ದುರ್ಬಲರು ಅದರ ಮೇಲೆ ಕೂರಬಾರದು' ಎಂದರು ದೈತ್ಯರ ಮಾತನ್ನು ಕೇಳಿ ಬ್ರಹ್ಮನು ಚಿಂತಾಕ್ರಾಂತನಾದನು ಇವರಿಂದ ಪಾರಾಗುವದು ಹೇಗೆ? ಇದನ್ನು ನಿವಾರಿಸಲು ಚತುರ್ಭುಜನಾದ ಮಹಾವಿಷ್ಣುವೇ ಸಮರ್ಥನು ಹೀಗೆ ಯೋಚಿಸಿ ಕಮಲ ನಾಳವನ್ನು ಪ್ರವೇಶಿಸಿ ನಿದ್ರಾವಿಷ್ಟನಾದ ಕಮಲನಾಭನನ್ನು ಸ್ಮರಿಸಿದನು.
ದೀನನಾಥ ಹರೇ ವಿಷ್ಣೋ ವಾಮನೋತ್ತಿಷ್ಠಮಾಧವ |
ಭಕ್ತಾರ್ತಿಹೃದ್ಧೃಷೀಕೇಶ ಸರ್ವಾವಾಸ ಜಗತ್ಪತೇ ||
ಅಂತರ್ಯಾಮಿನ್ ಅಮೇಯಾತ್ಮನ್ ವಾಸುದೇವ ಜಗತ್ಪತೇ |
ದುಷ್ಟಾರಿ ನಾಶನೈಕಾಗ್ರಚಿತ್ತ ಚಕ್ರಗದಾಧರ ||
ಸರ್ವಜ್ಞ ಸರ್ವಲೋಕೇಶ ಸರ್ವಶಕ್ತಿಸಮನ್ವಿತ |
ಉತ್ತಿಷ್ಠೋತ್ತಿಷ್ಠದೇವೇಶ ದುಃಖನಾಶನ ಪಾಹಿಮಾಮ್ ||
ದೀನನಾಥ, ಹರೇ, ವಿಷ್ಣು, ವಾಮನ, ಮಾಧವ, ಹೃಷಿಕೇಶ, ದುಷ್ಟವೈರಿನಾಶಕ, ಚಕ್ರಗದಾಧರ, ದೇವದೇವೇಶ ಅಂತರ್ಯಾಮಿ ಈ ದುಃಖದಿಂದ ಕಾಪಾಡು.
ವಿಶ್ವಂಭರ ವಿಶಾಲಾಕ್ಷ ಪುನ್ಯಶ್ರವಣಕೀರ್ತನ |
ಜಗದ್ಯೋನೇ ನಿರಾಕಾರ ಸರ್ಗಸ್ಥಿತ್ಯಂತಕಾರಕ ||
ಬ್ರಂಹ್ಮಾಂಡವನ್ನು ಧರಿಸಿರುವವನೇ ಕಾಪಾಡು ಎಂದು ಪರಿಪರಿಯಾಗಿ
ಬಡಿದರೂ ಕಣ್ತೆರೆಯದೇ ಇರುವದನ್ನು ನೋಡಿ 'ಯೋ ಯಸ್ಯ ವಶಮಾಪನ್ನಃ ಸ ತಸ್ಯ ಕಿಮಕರಃ ಕಿಲ' (ಯಾರು ಯಾರ ಅಧೀನದಲ್ಲಿರುತ್ತಾರೋ ಅವರ ಅಧೀನರು) ರಮಾರಮಣನು ಶಕ್ತಿಯ ಅಧೀನನಾಗಿದ್ದಾನೆ ಎಲ್ಲರೂ ಶಕ್ತಿಯ ಅಧೀನರೇ. ಆದ್ದರಿಂದ ಅವನ್ನು ಎಚ್ಚರಗೊಳಿಸಲು ಯಜಮಾಯೆಯನ್ನು ಸ್ತುತಿಸುತ್ತೇನೆ ಎಂದು ಯೋಚಿಸಿ-
ದೇವಿ ತ್ವಮಸ್ಯ ಜಗತಃ ಕಿಲ ಕಾರಣಂ ಹಿ ಜ್ಞಾತಂ ಮಯಾ ಸಕಲ ವೇದವಚೋಭಿರಂಬ
ಯದ್ವಿಷ್ಣುರಪ್ಯಖಿಲಲೋಕವಿರ್ವೇಕರ್ತಾ ನಿದ್ರಾವಶಂಚ ಗಮಿತಃ ಪುರುಷೋತ್ತಮೋದ್ಯ ||
ಹೇ ದೇವಿ, ನೀನೆ ಜಗತ್ತಿಗೆ ಕಾರಣಳೆಂದು ವೇದಗಳು ಸಾರುತ್ತಿವೆ. ನಿನ್ನ ಲೀಲೆಯನ್ನು ನಾನು ಹೇಗೆ ಅರ್ಥಮಾಡಿಕೊಳ್ಳಲಿ ಯಾವ ಪಂಡಿತನು ತಿಳಿಯಲಾರ ಕೆಲವರು ಪ್ರಕೃತಿ ಜಡವೆನ್ನುತ್ತಾರೆ ಇದು ಅವರ ಅಜ್ಞತೆ ಋಷಿಮುನಿಗಳು ನಿನ್ನನ್ನು ಸಂಧ್ಯೆ ಎಂದು ತ್ರಿಕಾಲದಲ್ಲಿಯು ಧ್ಯಾನಿಸುತ್ತಾರೆ. ಗುಣತ್ರಯರೂಪಳಾಗಿ ಜಗತ್ತಿನಲ್ಲಿ ಅನೇಕ ವಿಧವಾದ ನಾಟ್ಯವನ್ನಾಡುವೆ. ನೀನು ಸರ್ವರಲ್ಲಿಯೂ ಬುದ್ಧಿ, ಶ್ರೀ, ಕೀರ್ತಿ, ಮತಿ, ಧೃತಿ, ಕಾಂತಿ, ಶ್ರದ್ಧಾ, ರತಿರೂಪದಿಂದದಿರುವೆ. ಮಹಾವಿಷ್ಣುವಿನಾದಿಯಾಗಿ ಎಲ್ಲರೂ ನಿನ್ನ ವಶರಾಗಿದ್ದೇವೆ. 'ಪ್ರತ್ಯಕ್ಷಮೇವ ಪ್ರಬಲಂ' ಎನ್ನುವಂತ ನೀನೆ ಜಗದ್ಧಾತ್ರಿಯೆಂದು ತಿಳಿದಿದ್ದೇನೆ. ವೇದಗಳೇ ತಿಳಿಸಲಾರದೇ ಹಿಂದಿರುಗಿರುವಾಗ ನಾನು ತಿಳಿದಿದ್ದೇನೆಂಬುದು ಹಾಸ್ಯಾಸ್ಪದ ಭಕ್ತ್ಯತಿಶಯದಿಂದ ಹೇಳಿದ ಮಾತೇ ಹೊರತು ವಸ್ತುತತ್ತ್ವವನ್ನು ತಿಳಿದಿಲ್ಲ.
ಉತ್ತಿಷ್ಠದೇವಿ ಕುರು ರೂಪಮಹಾದ್ಬುತಂ ತ್ವಂ ಮಾಂ
ವಾತ್ವಿಮೌ ಜಯ ಯಥೇಚ್ಛಸಿ ಬಾಲಲೀಲೇ |
ನೋ ಚೇತ್ ಪ್ರಭೋಧಯಂ ಹರಿಂ ನಿಹನೇದಿಮೌ ಯಃ
ತತ್ಸಾಧ್ಯಮೇತದಖಿಲಂ ಕಿಲ  ಕಾರ್ಯಜಾತಮ್ ||
ಉತ್ತಿಷ್ಠ ದೇವಿ, ಭಯಂಕರರೂಪಧರಿಣಿಯಾಗು. ನನ್ನಾದರೂ ಅಸುರರನ್ನಾದರೂ ನಾಶಗೊಳಿಸು. ಅಥವಾ ನೀನೇ ಇವರನ್ನು ಸಂಹರಿಸು. ನಿನ್ನ ತಾಮಸೀಶಕ್ತಿಯಿಂದ ಕಟಲ್ಪಟ್ಟ ವಿಷ್ಣುವನ್ನಾದರೂ ನಿನ್ನ ಪ್ರಭಾಲದಿಂದ ಬಿಡುಗಡೆಗೊಳಿಸು, ಎಂದ ಬ್ರಹ್ಮನು ಸ್ತುತಿಸಲು ಮಹಾವಿಷ್ಣುವಿನ ದೇಹದಿಂದ ಹೊರಬಂದಳು ಶ್ರೀಹರಿಯು ಎಚ್ಚರಗೊಂಡದ್ದನ್ನು ನೋಡಿ ಬ್ರಹ್ಮನು ಸಂತೋಷಭರಿತನಾದನು.
    ಸರ್ವೋತ್ತಮವಾದ ವಿಷ್ಣುವು ಹೇಗೆ ನಿದ್ರೆಗೆ ಅಧೀನನಾದನು? ಎಂದು ಋಷಿಗಳು ಕೇಳಲು ಸೂತನು ಈ ದುರ್ಘಟವಾದ ಪ್ರಶ್ನೆಗೆ ಉತ್ತರವನ್ನು ಹೇಗೆ ಹೇಳಲಿ? ಏಕೆಂದರೆ ಆ ಪರತತ್ತ್ವವು ಪ್ರಮಾಣಗಳಿಗೆ ಗೋಚರವಲ್ಲ. ಅದನ್ನು ಶಾಸ್ತ್ರಗಳಿಂದಲೂ ಸಂಶಯ ವಿಪತ್ಯಯಗಳಿಲ್ಲದ ಸ್ವಬುದ್ಧಿಯಿಂದಲೂ, ಯುಕ್ತಿಯಿಂದಲೂ ವಿವೇಚಿಸಬೇಕು ವೇದವನ್ನು ಪ್ರಮಾಣವೆಂದು ಒಪ್ಪಿ ಅದರಂತೆ ಆಚರಿಸುವ ಶಿಷ್ಟರ ಮಾರ್ಗವನ್ನು ಅನುಸರಿಸುವವನು ತಾನು ಕಂಡದ್ದನ್ನು ಪುನಃ ಪುನಃ ವಿವೇಚಿಸಿ ನಿಶ್ಚಯಮಾಡಿಕೊಳ್ಳಬೇಕು. ವಿದ್ವಾಂಸರು ವಸ್ತುಗಳೆಲ್ಲ ಶಕ್ತಿಯಿಂದ ಕೂಡಿದೆ ಎನ್ನುತ್ತಾರೆ ಜಗತ್ತಿಗೆ ಕಾರಣಳಾದ ಆದಿಶಕ್ತಿಯೇ ಎಲ್ಲ ಪದಾರ್ಥಗಳಲ್ಲಿಯೂ ಶಕ್ತಿಯಾಗಿ ಪರಿಣಮಿಸಿದ್ದಾಳೆ ಯಾವ ವಸ್ತುವಿನಲ್ಲಾದರೂ ಅದಕ್ಕೆ ಯೋಗವಾದ ಶಕ್ತಿಯಿಲ್ಲದಿದ್ದರೆ ದೂಷಣೆಗೆ ಒಳಗಾಗುತ್ತದೆ.
ಏವಂ ಸರ್ವಗತಾ ಶಕ್ತಿಃ ಸಾ ಬ್ರಹ್ಮೇತಿ ವಿವಿಚ್ಯತೇ |
ಸೋಪಾಸ್ಯಾ ವಿವಿಧೈಃ ಸಮ್ಯಗ್ವಿಚಾರ್ಯ ಸುಧಿಯಾ ಸದಾ ||
ಹೀಗೆ ಎಲ್ಲಾ ವಸ್ತುಗಳಲ್ಲಿಯೂ ಇರುವ ಶಕ್ತಿಯೇ ಬ್ರಹ್ಮವೆಂದು ವಿಂಗಡಿಸಿ ಹೇಳಲ್ಪಟ್ಟಿದೆ. ಬುದ್ದಿವಂತನಾದವನು ಶಕ್ತಿಯನ್ನೇ ಉಪಾಯದಿಂದ ಉಪಾಸನೆ ಮಾಡಬೇಕು. ಧೀಮಂತರು ಶಕ್ತಿಯನ್ನು ಸಗುಣ ನಿರ್ಗುಣವೆಂದು ಎರಡಾಗಿ ವಿಭಾಗಿಸುತ್ತಾರೆ. ಬ್ರಹ್ಮಾದಿಗಳೇಲ್ಲರೂ ಶಕ್ತಿಯನ್ನೇ ಉಪಾಸಿಸುತ್ತಾರೆ. 'ತಸ್ಮಾಚ್ಛಕ್ತಿಃ ಸದಾ ಸೇವ್ಯಾ ವಿದ್ವದ್ಭಿಃ ಕೃತನಿಶ್ಚಯೈಃ' ಆದ್ದರಿಂದ ತಿಳಿದವರೆಲ್ಲರೂ ಸರ್ವಶಾಸ್ತ್ರಗಳ ಸಾರಜ್ಞರಾಗಿ ಶಾಸ್ತ್ರಂತರಗಳ ಪ್ರಲೋಭನೆಗೆ ಒಳಗಾಗದೇ ಶಕ್ತಿಯನ್ನೇ ಉಪಾಸಿಬೇಕು.
    ಹೀಗೆ ತಾಮಸೀ ಶಕ್ತಿಯಿಂದ ಬಿಡುಗಡೆ ಹೊಂದಿದವನಾಗಿ ವಿಷ್ಣುವು ಎಚ್ಚರಗೊಂಡು ಎದುರಿನಲ್ಲಿ ಭಯಗ್ರಸ್ತನಾಗಿ ನಿಂತಿರುವ ಬ್ರಹ್ಮನನ್ನು ಕಂಡನು ನಿನ್ನ ಭಯಕ್ಕೆ ಕಾರಣವೇನು? ಎಂದನು ಆಗ ಬ್ರಹ್ಮನು ಮಧಕೈಟಭರಿಂದ ಬಹಳ ದುಃಖವೊದಗಿದೆ. ರಕ್ಷಕರನ್ನು ಕಾಣದೇ ನಿನ್ನಲ್ಲಿ ಬಂದಿದ್ದೇನೆ. 'ತ್ರಾಹಿ ಮಾಂ ವಾಸುದೇವ' ಎಂದನು ಆಗ ಮಹಾವಿಷ್ಣುವು ರಾಕ್ಷಸರಲ್ಲಿ 'ಎಲೈ ಮದಾಂಧರೇ ನೀವು ನನ್ನೊಡನೆ ಯುದ್ಧವನ್ನು ಮಾಡಿರಿ ನಿಮ್ಮನ್ನು ನಾಶಪಡಿಸುತ್ತೇನೆ' ಎಂದನು. ಯುದ್ಧವು ಆರಂಭವಾಯಿತು ಒಂದೇ ಸಮನೆ ಇಬ್ಬರೊಡನೆಯೂ ಯುದ್ಧಮಾಡುತ್ತಿದ್ದ ವಿಷ್ಣುವು ಬಳಲಿದನು ಹರಿಯು ಚಿಂತಿಸಲಾರಂಭಿಸಿದನು- 'ಕ್ವ ಗತಂ ಮೇ ಶೌರ್ಯಂ? ಕಸ್ಮಾಚ್ಚೇಮಾವನಾಮಯೌ? ಕಿಮತ್ರಕಾರಣಂ? ಎಂದು. ರಾಕ್ಷಸರು ನೀನು ಯುದ್ಧಮಾಡಲಾರೆಯಾ? ಶಕ್ತಿಯಿಲ್ಲದವನೇ ದಾಸೋಸ್ಮಿ ಎಂದು ಬಿಡು ಕ್ಷಮಿಸುತ್ತೇನೆ. ಎಂದಾಗ ವೀರರಾದವರು ಬಳಲಿದ, ಭೀತನಾದ, ಶಸ್ತ್ರತ್ಯಾಗಿಯಾದ, ಪತಿತನಾದ, ಬಾಲಕನಾದವನೊಡನೆ ಯುದ್ಧಮಾಡುವದಿಲ್ಲ ನನಗೆ ವಿಶ್ರಾಂತಿಯೇ ಇಲ್ಲ ನಾನು ಸ್ವಲ್ಪವಿಶ್ರಮಿಸಿ ಪುನಃ ಯುದ್ಧಮಾಡುತ್ತೇನೆ. ಎನ್ನಲು ದಾನವರು ಸುಮ್ಮನಾದರು ವಿಷ್ಣುವು ಇವರನ್ನು ಜಯಿಸುವುದು ಹೇಗೆ ಎಂದು ಯೋಚಿಸುತ್ತಿರುವಾಗ ಇವರು ದೇವಿಯ ವರದಿಂದ ಅಜೇಯರಾಗಿದ್ದಾರೆ ವೃದ್ಧನಾಗಲೀ ರೋಗಗ್ರಸ್ತನಾಗಲೀ, ದೀನನಾಗಲೀ ಯಾರೂ ಮರಣವನ್ನು ಬಯಸುವದಿಲ್ಲ ಮಹಾದೇವಿಯನ್ನೇ ಶರಣಹೋಗುವೆನು ಎಂದು ಸ್ತುತಿಸಿದನು-
ನಮೋ ದೇವಿ ಮಹಾಮಾಯೇ ಸೃಷ್ಟಿಸಂಹಾರಕಾರಿಣೀ |
ಅನಾದಿನಿಧನೇ ಚಂಡಿ ಭುಕ್ತಿಮುಕ್ತಿಪ್ರದೇ ಶಿವೇ ||
ನೀನೇ ಸಕಲಕ್ಕೂ ಕಾರಣಕ್ಕೂ ಇವರನ್ನು ನಿಗ್ರಹಿಸಲು ನೀನೇ ಅನುಗ್ರಹಿಸಬೇಕು ಎಂದಾಗ ಆ ತಾಯಿಯು ನಾನು ದೈತ್ಯರನ್ನು ಮೋಹಿಸುತ್ತೇನೆ. ನೀನು ಯುದ್ದವನ್ನು ಮಾಡು ಎಂದಳು. ಅವಳ ದೃಷ್ಟಿಪಾತದಿಂದ ದೈತ್ಯರು ಮೋಹಿತರಾದರು ಆಗ ಹರಿಯು 'ದಾನವರೇ ವರವನ್ನು ಕೇಳಿರಿ' ಎನ್ನಲು 'ನಾವು ಯಾಚಕರಲ್ಲ ದಾನಿಗಳು, ನಮಗೆ ನೀನೇನು ಕೊಡಬಲ್ಲೆ, ನೀನೆ ಪ್ರಾರ್ಥಿಸಿಕೋ ನಾವೇ ವರವನ್ನು ಕೊಡುತ್ತೇವೆ' ಎಂದಾಗ ವಿಷ್ಣುವು 'ಭವೇತಾಮದ್ಯ ಮೇ ತುಷ್ಟೌಮಮ ವಧ್ಯಾವುಭಾವಪಿ' ಎಂದನು ವಿಷ್ಣುವು ನಮ್ಮನ್ನು ಮೋಸಗೊಳಿಸಿದನೆಂದು ದುಃಖದಿಂದ ನಮ್ಮನ್ನು ನಿರ್ಜಲಭೂಪ್ರದೇಶದಲ್ಲಿ ವಧಿಸಬೇಕೆಂದು ಕೇಳಿಕೊಂಡರು ವಿಷ್ಣುವು ಹಾಗೆಯೇ ಆಗಲೆಂದನು ದಾನವರು ದೇಹವನ್ನು ಹಿಗ್ಗಿಸಿದರು ವಿಷ್ಣುವೂ ತನ್ನ ತೊಡೆಯನ್ನು ಎರಡರಷ್ಟು ಬೆಳೆಸಿದನು ಅವರು ತಮ್ಮ ತಲೆಯನ್ನು ಒಟ್ಟಿಗೆ ಅಲ್ಲಿ ಇಟ್ಟರು ಚಕ್ರದಿಮದ ವಿಷ್ಣುವು ಕತ್ತರಿಸಿದನು ಅವರು ಮೇದಸ್ಸಿನಿಂದ ಸಮುದ್ರವೆಲ್ಲ ತುಂಬಿಹೋಯಿತು. 'ಮೇದಿನೀತಿ ತತೋ ಜಾತಂ ನಾಮ ಪೃದ್ವ್ಯಾಃ ಸಮಂತತಃ | ಅಭಕ್ಟ್ಯಾ ಮೃತ್ತಿಕಾ ತೇನ ಕಾರಣೇನ ಮುನೀಶ್ವರಾಃ || ಅಂದಿನಿಂದ ಭೂಮಿಯು ಮೇದಿನಿಯಾಯಿತು. ಮೃತ್ಯು ಅಭಕ್ಷ್ಯವಾಯಿತು ಹೀಗೆ ಎಲ್ಲವೂ ಶಕ್ತಿಯ ಕಾರ್ಯವಾಗಿದೆ. ಆದ್ದರಿಂದ
ಮಾಹಾವಿದ್ಯಾ ಮಹಾಮಾಯಾ ಸೇವನೀಯಾ ಸದಾ ಬುಧೈಃ |
ಆರಾಧ್ಯಾ ಪರಮಾ ಶಕ್ತಿಃ ಸರ್ವೈರಪಿ ಸುರಾಸುರೈಃ
    ಆ ಪರಾಶಕ್ತಿಯನ್ನು ಸಗುನವಾಗಿಯೋ ನಿರ್ಗುಣವಾಗಿಯೋ ಆರಾಧಿಸಿ ಕೃತಾರ್ಥರಾಗೋಣ.
ಶುಕೋತ್ಪತ್ತಿ
    ದೇವರ್ಷಿ ನಾರದರ ಉಪದೇಶದಂತೆ ವ್ಯಾಸಮಹರ್ಷಿಗಳು ಪುತ್ರಾಪೇಕ್ಷೆಯಿಂದ ಸುಮೇರುಗಿರಿಶೃಂಗದಲ್ಲಿ ತಪಾಚರಣೆಯನ್ನು ಆರಂಭಿಸಿದರು ಶ್ರೀದೇವಿಯ ವಾಗ್ಬವಬೀಜವನ್ನು ಜಪಿಸುತ್ತಾ ಮಹಾಮಾಯಾಸ್ವರೂಪಿಣಿಯಾದ ದೇವಿಯನ್ನು ಧ್ಯಾನ ಮಾಡುತ್ತಿದ್ದರು ಆಗ ಅವರ ಭಾವನೆ ಹೀಗಿದ್ದಿತು- ನನಗೆ ಜನಿಸುವ ಮಗನ ಪಂಚಭೂತಗಳ ತೇಜಸ್ಸಿನಿಂದ ಕುಡಿದವನಾಗಿರಲಿ ಎಂಬ ಬಯಕೆಯಿಂದ ನೂರು ಸಂವತ್ಸರಗಳ ಕಾಲ ಶಿವನನ್ನು ಆರಾಧಿಸಿದರು ಅವರು ಮನಸ್ಸಿನಲ್ಲಿ
ಶಕ್ತಿಃ ಸರ್ವತ್ರ ಪೂಜ್ಯೇತಿ ವಿಚಾರ್ಯ ಪುನಃ ಪುನಃ |
ಅಶಕ್ತೋ ನಿನ್ದ್ಯತೇ ಲೋಕೇ ಶಕ್ತಸ್ತು ಪರಿಪೂಜ್ಯತೇ ||
ಲೋಕದಲ್ಲಿ ಶಕ್ತಿವಂತನು ಗೌರವಿಸಲ್ಪಡುತ್ತಾನೆ ಶಕ್ತಿರಹಿತನು ತಿರಸ್ಕರಿಸಲ್ಪಡುತ್ತಾನೆ ಆದ್ದರಿಂದ ಶಕ್ತಿಯೇ ಪೂಜ್ಯಳು ಎಂದು ವಿಚಾರವನ್ನು ಮಾಡುತ್ತಿದ್ದರು ಆ ಪರ್ವತದಲ್ಲಿ ಕರ್ಣಿಕಾರವೃಕ್ಷಗಳು ಶೋಭಿಸುತ್ತಿದ್ದವು ವಿಹಾರಕ್ಕಾಗಿ ಅಲ್ಲಿಗೆ ದೇವತೆಗಳು ಬರುತ್ತಿದ್ದರು ಅನೇಕ ಋಷಿಮುನಿಗಳು ತಪಸ್ಸಿನಲ್ಲಿ ನಿರತರಾಗಿದ್ದರು ಸದಾ ಸಂಗೀತಮಾಧುರ್ಯವು ಹೊರಹೊಮ್ಮುತ್ತಿತ್ತು ಇಂಥ ಸಮನೋಹರವಾದದ್ದಾಗಿತು ಅವರು ತಪಸ್ಸಾಚರಿಸುತ್ತಿರುವ ಸ್ಥಳ.
    ಇವರ ತಪೋಜ್ವಾಲೆ ತ್ರಿಲೋಕವನ್ನೂ ವ್ಯಾಪಿಸಿತು ದೇವೇಂದ್ರ ಭಯಭೀತನಾದನು ಅದನ್ನು ತಿಳಿದ ಶಂಕರನು.
ಅಮರ್ಷೋ ನೈವ ಕರ್ತವ್ಯಸ್ತಾಪಸೇಷು ಕದಾಚನ |
ತಪಶ್ಚರಂತಿ ಮನಯೋ ಜ್ಞಾತ್ವಾಮಾಂ ಶಕ್ತಿಸಂಯುತಮ್ ||
ದೇವೇಂದ್ರ ಎಂದಿಗೂ ತಪಸ್ವಿಗಳಲ್ಲಿ ಈರ್ಷ್ಯಾ ದ್ವೇಷಭಾವನೆಯನ್ನು ಮಾಡಬಾರದು. ನಾನು ಶಕ್ತಿಯುತನೆಂದು ತಿಳಿದು ಋಷಿಮುನಿಗಳು ತಪಸ್ಸನ್ನಾಚರಿಸುತ್ತಾರೆ ಇವರುಗಳು ಯಾರಿಗೂ ಅಹಿತವನ್ನು ಮಾಡಲಾರರು ಪಾರಾಶರ್ಯನು ಪುತ್ರಾರ್ಥಿಯಾಗಿ ತಪಸ್ಸನ್ನಾಚರಿಸುತ್ತಿದ್ದಾನೆ ಅವನ ಕಾಮನೆಯನ್ನು ಪೂರ್ಣಗೊಳಿಸುತ್ತೇನೆ ಎಂದು ವ್ಯಾಸರ ಸಮೀಪಕ್ಕೆ ಆಗಮಿಸಿ ಸತ್ಯವತೀನಂದನ ಉತ್ತಿಷ್ಠ
ಸರ್ವತೇಜೋಮಯೋ ಜ್ಞಾನೀ ಕೀರ್ತಿಕರ್ತಾ ತವಾನಘ |
ಅಖಿಲಸ್ಯ ಜನಸ್ಯಾತ್ರ ವಲ್ಲಭಸ್ತೇ ಸುತಸ್ಸದಾ ||
ನಿನಗೆ ಸರ್ವಮಂಗಲಕರನಾದ ಸುಯೋಗ್ಯಪುತ್ರನು ಜನಿಸುವನು. ಅವನು ಸರ್ವತೇಜೋಮಯನೂ, ಜ್ಞಾನಿಯೂ, ನಿನ್ನ ಕೀರ್ತಿವಿಸ್ತಾರಕನೂ, ಸಕಲ ಲೋಕ ವಲ್ಲಭನೂ, ಸಾತ್ವಿಕಾದಿಸರ್ವಗುಣಸಂಪೂರ್ಣನೂ, ಸತ್ಯವಿಕ್ರಮನೂ, ಆದ ಮಗನು ಜನಿಸುವನು ಎಂದು ಹರಸಿದನು. ವರದಿಂದ ಸುಪ್ರಸನ್ನನಾದ ವ್ಯಾಸರು ಪರಮೇಶ್ವರನ್ನು ವಂದಿಸಿದರು ತನ್ನ ಆಶ್ರಮಕ್ಕೆ ತೆರಳಿದರು.
    ಅವರು ದೀರ್ಘಕಾಲದ ತಪಸ್ಸಿನಿಂದ ಬಹಳ ಬಳಲಿದ್ದರು ಆದರೂ ಅಗ್ನಿಯನ್ನು ಆರಾಧಿಸಬೇಕೆಂದು ಅರಣಿಯನ್ನು ಕಡೆಯಲುಪಕ್ರಮಿಸಿದರು ಆಗ ಮನಸ್ಸು ಚಿಂತಿಸಲಾರಂಭಿಸಿತು- ಹೇಗೆ ಉತ್ತರಾರಣಿ ಆಧರಾರಣಿಯ ಸೇರುವಿಕೆಯಿಂದ ಪಾವಕೋತ್ಪತ್ತಿಯಾಗುವದೋ, ಹಾಗೆಯೇ ಪುತ್ರಜನನಕ್ಕೆ ಸ್ತ್ರೀ ಬೇಕು, ಅವಳು ನನ್ನ ಸಮೀಪದಲ್ಲಿಲ್ಲ ನನಗೆ ಹೆಂಡತಿಯಾಗುವವಳು ಸತ್ಕುಲಪ್ರಸೂತಳೂ, ರೂಪಸಂಪನ್ನೆಯೂ, ಸದಾ ಪಾತಿವ್ರತ್ಯಧಾರಣಿಯೂ, ಕಾಮಿನಿಯೂ, ಇಚ್ಚಾಸುಖಪ್ರಾಪ್ತಿಯನ್ನಿಡುವವಳೂ ಆಗಿರಬೇಕು ಅವಳು ಸುಖಿಯನ್ನಾಗಿ ಮಾಡುತ್ತಾಳೆ ಆದರೂ ಅವಳು (ಪಾದಶೃಂಖಲಾಸಮಾ) ಆನೆಯ ಸುಖಿಯನ್ನಾಗಿ ಮಾಡುತ್ತಾಳೆ ಆದರೂ ಅವಳು (ಪಾದಶೃಂಖಲಾಸಮಾ) ಆನೆಯ ಕಾಲಿಗೆ ಕಟ್ಟುವ ಸರಪಳಿಯಂತೆ ಬಂಧನರೂಪಿಣಿಯು, ಶಿವನೂ ಕೂಡಾ ಸ್ತ್ರೀಪಾಶದಿಂದ ಬದ್ಧನಾಗಿ ಕೈಲಾಸಪರ್ವತದಲ್ಲಿ ವಾಸಿಸುತ್ತಿದ್ದಾನೆ ಅವಳು (ಸದಾ ಬಂಧನರೂಪಾ) ಯಾವಾಗಲೂ ಬಂಧನರೂಪಳು ಹೀಗಿರುವಾಗ ನಮ್ಮಂಥವರ ಪಾಡೇನು? ಕಥಂ ಕರೋಮ್ಯಹಂ ಚಾತ್ರ ದುರ್ಘಟಂ ಚ ಗೃಹಾಶ್ರಮಮ್ | ಎಂದು ಯೋಚಿಸುತ್ತಿರಲಾಗಿ ಚಪಲಚಚಿತ್ತಳಾದ ಘೃತಾಚಿಯು ಸಮೀಪದಲ್ಲಿ ತೋರಿಕೊಂಡಳು ಅದರಿಂದ ಮೋಹಗೊಂಡ ವ್ಯಾಸರು ನಾನು ಈಗೇನು ಮಾಡಲಿ? ಇವಳನ್ನು ಆದರಿಸಲೇ? ಸತ್ಕರಿಸಲೇ? ನನ್ನನ್ನು ಮೋಹಗೊಳಿಸಲು ಬಂದವಳಾದರೆ? ಹಾಗಿಲ್ಲವಷ್ಟೇ ! ನಾನು ಅಂಗೀಕರಿಸಿದರೆ ಋಷಿಮುನಿಗಳು ಹಾಸ್ಯಮಾಡುತ್ತಾರೆ ನೂರು ವರ್ಷಗಳ ಕಾಲ ತಪಸ್ಸನ್ನಾಚರಿಸಿ ಇವಳಿಗೆ ವಶನಾಗುವದೇ? ಯೋಗ್ಯವಲ್ಲ ಆದರೆ
ಗೃಹಸ್ಥಾಶ್ರಮಸಂಭೂತಂ ಸುಖದಂ ಪುತ್ರಕಾಮದಮ್ |
ಸ್ವರ್ಗದಂ ಚ ತಥಾ ಪ್ರೋಕ್ತಂ ಜ್ಞಾನಿನಾಂ ಮೋಕ್ಷದಂ ತಥಾ ||
ಗೃಹಸ್ಥಾಶ್ರಮವು ಪುತ್ರಪ್ರಾಪ್ತಿಕರವು ಅತುಲ ಸುಖದಾಯಕವು, ಸ್ವರ್ಗಮೋಕ್ಷದಾಯಕವು ಎಂದು ಜ್ಞಾನಿಗಳಿಂದ ಹೇಳಲ್ಪಟ್ಟಿದೆ ಆದರೆ ಈ ಅಪ್ಸರೆಯನ್ನು ನಂಬುವದು ಹೇಗೆ? ಊರ್ವಶಿಯನ್ನು ಸ್ವೀಕರಿಸಿದ ಪುರೂರವನಂತೆ ನನ್ನಸ್ಥಿತಿಯು ಆದರೆ? ಆದ್ದರಿಂದ ನನಗೆ ಅಪ್ಸರೆ ಯೋಗ್ಯಳಲ್ಲ ಏನು ಮಾಡಲಿ? ಎಂದು ಯೋಚಿಸುತ್ತಿರುವಾಗ ಘೃತಾಚಿಯು ನನ್ನನ್ನು ಮಹರ್ಷಿಗಳು ಶಪಿಸಿಯಾರೆಂದು ಹೆದರಿ ಶುಕರೂಪಿಣಿಯಾಗಿ ಹಾರಿಹೋದಳು ಅವಳ ದರ್ಶನದಿಂದಲೇ ಆದ ವೀರ್ಯಪತನದಿಂದ ಮನೋರೂಪಿಯಾದ ಶುಕನು ಆವಿರ್ಭವಿಸಿದನು.
    ಮಹತ್ಮರಾದ ವ್ಯಾಸರು ಆಯಾಕಾಲದಲ್ಲಿ ಮಾಡಬೇಕಾದ ಸಕಲಸಂಸ್ಕಾರಗಳನ್ನೂ ಮಾಡಿದರು. ಅವನನ್ನು ವೇದ-ವೇದಾಂಗಗಳೆಲ್ಲ ರಹಸ್ಯದಿಂದೊಗೂಡಿ ವರಿಸಿದವು. ವ್ಯಾಸಮುನಿಯು ಅವನಿಗೆ ಗೃಹಿಯಾಗು ಎಂದನು ಶುಕನು ಒಪ್ಪಲಿಲ್ಲ ನಾನು ಅಯೋನಿಜನಾಗಿದ್ದು ಸಂಸಾರಿಯಾಗುವದು ಹೇಗೆ? "ನಾನು ಆತ್ಮಸುಖವನ್ನು ಬಯಸುವವನು ಗ್ರಾಮ್ಯಸುಖವನ್ನಲ್ಲ. ಆತ್ಮಾರಾಮನಾಗಿಯೇ ಯಾವಾಗಲೂ ಇರುವೆನು. ಪ್ರಾಜ್ಞನಾದ ನೀನು ನನ್ನನ್ನು ಸಂಸಾರಬಂಧನದಲ್ಲಿ ಸಿಲುಕಿಸಬೇಡ" ಎಂದು ಬಿನ್ನವಿಸಿದನು. ಆಗ ವ್ಯಾಸನು ನಿನ್ನ ಇಚ್ಛಾನುಸಾರ ನಡೆದುಕೊಳ್ಳಬಹುದು 'ಸರ್ವಂ ಖಲ್ವಿದಮೇವಾಹಂ ನಾನ್ಯದಸ್ತಿಸನಾತನಂ' ಎಂಬ ಗಹನವಾದ ಉಪದೇಶದಿಂದ ಕುಡಿದ ದೇವೀಭಾಗವತವನ್ನು ಉಪದೇಶಿಸಿ,
ಸಾ ವಿದ್ಯಾ ಪರಮಾ ಮುಕ್ತೇರ್ಹೇತುಭೂತಾ ಸನಾತನೀ |
ಸಂಸಾರಬಂಧಹೇತುಶ್ಚಸೈವ ಸರ್ವೇಶ್ವರೇಶ್ವರೀ ||
ಆ ಸರ್ವೇಶ್ವರಿಯೇ ನಿಖಿಲವಿಶ್ವೋತ್ಪತ್ತಿಗೆ ಕಾರಣಳು, ಅವಳೇ ಬಂಧ-ಮೋಕ್ಷರೂಪಿಣಿಯು ಎಂದನು ಆದರೂ ಶುಕನ ಮನಸ್ಸು ಶಾಂತವಾಗಲಿಲ್ಲ ವ್ಯಾಸಮುನಿಯು ಮಗನನ್ನುದ್ದೇಶಿಸಿ ಮಗನೇ ಜೀವನ್ಮುಕ್ತನೂ ಸತ್ಯವಾದಿಯೂ ಆದ ರಾಜರ್ಷಿಯಾದ ಜನಕನಲ್ಲಿಗೆ ಹೋಗು, ತತ್ತ್ವಜ್ಞಾನವನ್ನು ವಿಚಾರಮಾಡು, ಸಮಾಧಾನ ದೊರಕುವದು ಜ್ಞಾನಿಯಾಗಿ ಮರಳಿ ಬಾ, ನೀನು ಚಿರಾಯುವಾಗು ಎಂದು ಹರಸಿ ಕಳುಹಿಸಿದನು.
    ಮಿಥಿಲಾನಗರವನ್ನು ಸೇರಿದ ಶುಕನು ಅಲ್ಲಿಯ ಜನಕನ ವೈಭೋಗವನ್ನೆಲ್ಲ ಕಂಡು ವಿದೇಹನನ್ನು ಕಾಣಬೇಕೆಂದು ಅರಮನೆಯನ್ನು ಪ್ರವೇಶಿಸಿದನು ಅಲ್ಲಿ ಜನಕನನ್ನು ಕಂಡು ಮಹಾರಾಜಾ - ಧನ್ಯೋ ಗೃಹಸ್ಥಾಶ್ರಮಃ ಎಂದು ತಂದೆಯ ಉಪದೇಶ ಅದು ಬಂಧನಕಾರಕವೆಂದು ನನ್ನ ಮತ ಆದ್ದರಿಂದ ನಾನು ಸ್ವೀಕರಿಸಲಿಲ್ಲ ಆದ್ದರಿಂದ ಮೋಕ್ಷಕಾಮಿಯು ಗೃಹಸ್ಥನಾಗಿರಬೇಕೋ? ಸಂನ್ಯಾಸಿಯಾಗಿರಬೇಕೋ? ಎಂದು ನನ್ನ ಸಂಶಯ ನನಗೆ ಸರಿಯಾದ ಮಾರ್ಗದರ್ಶನ ಮಾಡಬೇಕುಎಂದನು ಆಗ ಜನಕನು ಒಂದು ಉರಿಯುತ್ತಿರುವ ದೀಪವನ್ನು ಶುಕನ ಕೈಯಲ್ಲಿಟ್ಟು ಹೇಳಿದನು- "ಮುನಿಕುಮಾರ, ನನ್ನ ಸೇವಕನು ನಿನಗೆ ಅರಮನೆಯ ಪರಿಚಯವನ್‌ನು ಮಾಡಿಸುತ್ತಾನೆ ನೀನು ಸರಿಯಾಗಿ ನೋಡಿಕೊಮಡು ಬಾ ಆದರೆ ದೀಪವು ಆಗಬಾರದು ಇದರ ಪ್ರಕಾಶದಲ್ಲಿ ಎಲ್ಲವನ್ನೂ ತಿಳಿದುಕೊಮಡು ಬಾ", ಹಾಗೆಯೇ ಆಗಲೆಂದು ಸೇವಕನ ಜೊತೆ ಹೊರಟನು. ಸೇವಕನು ಅರಮನೆಯ ಪ್ರತಿಯೊಂದು ಭಾಗವನ್ನೂ ಪರಿಚಯಿಸುತ್ತಿದ್ದನು, ಶುಕನು ಹೂಂ ಹೂಂ ಎನ್ನುತ್ತಿದ್ದನು ಗಮನವೆಲ್ಲ ದೀಪದ ಕಡೆಗೇ ಇದ್ದಿತು ಜನಕನು ಕೇಳಿದನು ಎಲ್ಲವನ್ನೂ ನೋಡಿದೆಯಾ? ಆಗ ಶುಕನು ನೀನು ದೀಪವು ಆರಬಾರದೆಂದಿದ್ದೆ, ನನ್ನ ಗಮನವೆಲ್ಲ ದೀಪದ ಕಡೆಗೇ ಇದ್ದಿತ್ತು ನಾನು ಸೇವಕನ ಜೊತೆ ಹೋಗುತ್ತಿದ್ದೆನು ಅಷ್ಠೇ! ಎಂದಾಗ ಜನಕನು ನನ್ನ ವಿದೇಹದ ಕಥೆಯೂ ಅದೇ ! ನಾನು ಆತ್ಮಾರಾಮನು, ಇಂದ್ರಿಯಗಳು ತಮ್ಮ ತಮ್ಮ ವ್ಯಾಪಾರಕ್ಷೇತ್ರದಲ್ಲಿ ವ್ಯಾಪೃತವಾಗಿರುತ್ತವೆ, ನನಗೆ ಅವುಗಳಿಂದ ಅನುಕೂಲ ಪ್ರತಿಕೂಲಗಳಿಲ್ಲ ಮೋಕ್ಷಪ್ರಾಪ್ತಿಗೆ ಇದು ಅಪಾಯರಹಿತ ಮಾರ್ಗ ನೇರಾಗಿ ಸಂನ್ಯಾಸಮಾಡುವವನಿಗೆ ಪತನಭಯವಿದೆ ಪರಂಪರಾಸಾಧನ ಉತ್ತಮವಾದದ್ದು.
ಮನಸ್ತು ಸುಖದುಃಖಾನಾಂ ಮಹತಾಂ ಕಾರಣಂ ದ್ವಿಜ |
ಜಾತೇತು ನಿರ್ಮಲೇಹ್ಯಸ್ಮಿನ್ ಸರ್ವಂ ಭವತಿ ನಿರ್ಮಲಮ್ |
ಬಂಧಮೋಕ್ಷೌಮನಃ ಸಂಸ್ಥೌ ತಸ್ಮಿನ್ ಶಾಂತೇ ಪ್ರಶಮ್ಯತಿ ||
ಮನುಷ್ಯನ ಬಂಧಮೋಕ್ಷಕ್ಕೆ ಮನಸ್ಸೇ ಕಾರಣ ಮನಸ್ಸೇ ಕಾರಣ ಮನಸ್ಸು ನಿರ್ಮಲವಾದರೆ ಎಲ್ಲವೂ ನಿರ್ಮಲವಾಗುತ್ತದೆ ಆದ್ದರಿಂದ ಶ್ರವಣ-ಮನನ-ನಿದಿಧ್ಯಾಸನಗಳಿಂದ ಮನಃಪ್ರತ್ಯಯವನ್ನು ಆತ್ಮನಲ್ಲಿ ಒಂದಾಗಿಸಿ ಹುರಿದಬೀಜದಂತೆ ಮಾಡಿದಾಗ ಅವಿದ್ಯಾಕಾಮಕರ್ಮಗಳು ನಾಶವಾಗಿ- ಸಿಪ್ಪೆಯನ್ನು ಬಿಟ್ಟ ತೆಂಗಿನಕಾಯಿಯಂತೆ- ಸರ್ವಸಂಶಯಗಳೂ ನಾಶವಾಗವವು ಆಗ ಭಿದ್ಯತೇ ಹೃದಯಗ್ರನ್ಥಿಃ ಆಗ ಪರಮಾತ್ಮಸ್ವರೂಪಿಯಾಗಿ ಇಂದ್ರಿಯಗಳ ವ್ಯಾಪರವನ್ನು ಗುಣಾಗುಣೇಷು ವರ್ತನ್ತೇ ಎಂದು ತಿಳಿದು ಆತ್ಮರಾಮನಾಗಿರುತ್ತಾನೆ.
    ಆಗ ಶುಕನು ಈ ತ್ರೈಗುಣ್ಯವಾದ ಪ್ರಪಂಚದಲ್ಲಿ ನಿಸ್ಪೃಹನಾಗುವದು ಹೇಗೆ? ಕೆಲವು ಶಾಸ್ತ್ರಜನ್ಯಜ್ಞಾನದಿಂದ ಮೋಹನಾಶವಾಗುವದಿಲ್ಲ ದೀಪವಾರ್ತೆಯಿಂದ ಹೇಗೆ ಕತ್ತಲೆ ಹೋಗುವದಿಲ್ಲವೋ ಹಾಗೆ ಸಂಸಾರವನ್ನು ತ್ಯಜಿಸಿ ಯೋಗಾನುಷ್ಠಾನನಿರತನಾಗಬೇಕು ಸಾಧ್ಯವನ್ನು ಸಾದಿಸಿಕೊಳ್ಳಬೇಕು ಎಂದಾಗ ರಾಜನು ಅಹಂ ದೇಹೀ ಎಂದು ತಿಳಿಯುವದು ಬಂಧ, ನಾಹಂ ದೇಹಃ ಎಂದು ತಿಳಿಯುವದೇ ಮುಕ್ತಿ ಮೊದಲು ನಾನು ಬದ್ಧನೆಂಬ ಭ್ರಮೆಯನ್ನು ದೂರೀಕರಿಸಿದರೆ ಸುಖಿಯಾಗುವೆ ಪುತ್ರವಿತ್ತದಾರಾದಿಗಳೊಂದೂ ನನ್ನದಲ್ಲ ಎಂದು ತಿಳಿದು ಸ್ವಸ್ಥನಾಗಿರಬೆಕು ಎಂದು ಉಪದೇಶಿಸಿದನು ಕಾಲಾಂತರದಲ್ಲಿ ಶುಕನು ಆಶ್ರಮತ್ಯಾಗವನ್ನು ಮಾಡಿ ಬದರಿಕಾಶ್ರಮದಲ್ಲಿ ತಪಸ್ಸನ್ನು ಆಚರಿಸಿದನು ಕಾರ್ಯಕಾರಣಾಭಾವವನ್ನು ಚಿಂತಿಸಿ ವ್ಯಷ್ಟದೇಹವನ್ನು ಸಮಷ್ಟಿಯಲ್ಲಿ ಲೀನಗೊಳಿಸಿ ಸರ್ವವ್ಯಾಪಿಯಾದನು ಇದನ್ನು ತಿಳಿದ ವ್ಯಾಸರು ಶೋಕಾವಿಷ್ಟರಾಗಲು ಅಶರೀರವಾಣಿಯು ತ್ವಂ ಶೋಕಂ ಮಾಕುರು, ಪುತ್ರಸ್ತೇ ಯೋಗವಿತ್ತಮಃ, ಅಕೃತಾತ್ಮಭಿಃ ದುರ್ಲಭಾಂ ಪರಮಾಂ ಗತಿಮಾಪನ್ನಃ ಎಂದಾಗ ವ್ಯಾಸರು ದುಃಖವನ್ನು ತ್ಯಜಿಸಿ ಸ್ವಸ್ಥರಾದರು.
    ಈ ಪುರಾಣದಲ್ಲಿ ವ್ಯಾಸರ ವ್ಯಾಕುಲತೆಯನ್ನು ವರ್ಣಿಸಿರುವದು ವ್ಯಾಸರ ಸರ್ವಜ್ಞ ಕಲ್ಪತೆಯನ್ನು ಹೀಗಳೆಯಲಲ್ಲ ಲೋಕದೃಷ್ಟಿಯನ್ನು ಆರೋಪಿಸಿ ಮಹತ್ತನ್ನು ಪಡೆಯಲು ನಡತೆ ಹೇಗಿರಬೇಕು? ಯಾರನ್ನು ಅರ್ಚಿಸಬೇಕು? ಆ ಮಹಾಮಾಯೆಯನ್ನು ಮರೆತರೆ ನಷ್ಟವೇನು? ಪೂಜಿಸಿದರೆ ವಿಶಿಷ್ಟ ಫಲವೇನು? ಯಾರ್ಯಾರು ಕೃತಾರ್ಥರಾದರು ? ಸಂಸಾರಮೋಹದ ಸ್ವರೂಪವೇನು ? ಮೋಹದಿಂದಾಗುವ ಅನರ್ಥಪರಂಪರೆ, ಅದರಿಂದ ಬಿಡುಗಡೆಯಾಗುವ ಉಪಾಯಾದಿಗಳನ್ನು ತಿಳಿಯಲು ಅನತಿಪ್ರಜ್ಞರಾದ ನಮ್ಮಂಥವರನ್ನು ಕುರಿತು ನಡೆಸಿದ ನಡೆವಳಿಕೆ ಮಹರ್ಷಿಗಳಲ್ಲಿ ಸಂಶಯಪಡುವದಲ್ಲ ಇಷ್ಟದೇವತೆಯನ್ನು ತೈಲಧಾರೆಯಂತೆ ಎಡೆಬಿಡದೆ ಉಪಾಸಿಸುತ್ತಾ ಅವಿದ್ಯಾಕಾಮಕರ್ಮದಿಂದ ಬಿಡುಗಡೆಹೊಂದಿ ಆತ್ಮಾರಾಮನಾಗಬೇಕು ಎಂಬುದೇ ತಾತ್ಪರ್ಯ ಆ ಭೋಗಮೋಕ್ಷಪ್ರದಳಾತ ಮಹಾವಿದ್ಯಾರೂಪಿಣಿಯು ಬ್ರಹ್ಮವಿದ್ಯೆಯನ್ನು ಕರುಣಿಸಲಿ ಆ ಬ್ರಹ್ಮವಿದ್ಯೆಯನ್ನು ಪಡೆಯಲು ಅವಳ ಚರಣಕಮಲಕ್ಕೆ ಶರಣು ಹೋಗೋಣ.

ಮಹಿಷಾಸುರ ಸೈನ್ಯವಧೆ

    ಅಕ್ಷರಮಾಲೆ (ಜಪಸರ), ಕೊಡಲಿ, ಗದೆ, ಬಾಣ, ವಜ್ರಾಯುಧ, ಪದ್ಮ, ಬಿಲ್ಲು, ಕಮಂಡಲು, ಕೋಲು, ಶಕ್ತ್ಯಾಯುಧ, ಕತ್ತಿ, ಗುರಾಣಿ, ಶಂಭ, ಘಂಟೆ, ಸುರಾಪಾತ್ರೆ, ತ್ರಿಶೂಲ, ಹಗ್ಗ, ಸುದರ್ಶನಚಕ್ರ - ಇವುಗಳನ್ನು ಕೈಗಳಿಂದ ಹಿಡಿದಿರುವ, ಪ್ರಸನ್ನಮುಖಿಯಾದ, ಕಮಲನಿವಾಸಿನಿಯೂ ಸೈರಭ (ನೆಂಬ ರಾಕ್ಷಸನನ್ನು) ಸಂಹಾರಮಾಡುತ್ತಿರುವವಳೂ ಆದ ಶ್ರೀ ಮಹಾಲಕ್ಷ್ಮಿಯನ್ನು ಭಜಿಸುವೆನು.
    ಋಷಿಯಿಂತೆಂದನು : ಹಿಂದೆ ಒಂದು ನೂರು ವರ್ಷಗಳ ಕಾಲ ದೇವತೆಗಳಿಗೂ ರಾಕ್ಷಸರಿಗೂ ಯುದ್ಧವಾಯಿತು. ಆಗ ಮಹಿಷನು ರಾಕ್ಷಸರಿಗೊಡೆಯನೂ ಇಂದ್ರನು ದೇವತೆಗಳಿಗೊಡೆಯನೂ ಆಗಿದ್ದರು ಆಗ್ಗೆ ಮಹಾಬಲಶಾಲಿಗಳಾದ ರಾಕ್ಷಸರಿಂದ ದೇವತೆಗಳ ಸೈನ್ಯವು ಸೋಲಿಸಲ್ಪಟ್ಟಿತು ಮಹಿಷಾಸುರನು ಸಕಲದೇವತೆಗಳನ್ನೂ ಗೆದ್ದು (ತಾನೇ) ಇಂದ್ರನಾದನು. ಅನಂತರ ಸೋತುಹೋದ ದೇವತೆಗಳು ಪದ್ಮದಿಂದ ಉತ್ಪನ್ನನಾದ ಬ್ರಹ್ಮನನ್ನು ಮುಂದಿರಿಸಿಕೊಂಡು ಶ್ರೀಮಹಾದೇವನೂ ಮಹಾವಿಷ್ಣುವೂ ಇದ್ದಂಥ ಸ್ಥಳಕ್ಕೆ ಹೋದರು ಅವರಿಬ್ಬರೆದುರಿಗೆ ದೇವತೆಗಳು ನಡೆದಂತೆ ಮಹಿಷಾಸುರನ ದುಷ್ಕೃತ್ಯಗಳನ್ನೂ ದೇವತೆಗಳಿಗಾದ ಸೋಲನ್ನೂ ವಿವರವಾಗಿ ಹೇಳಿದರು.
    'ಸೂರ್ಯ, ಇಂದ್ರ, ಅಗ್ನಿ, ವಾಯು, ಚಂದ್ರ, ಯಮ, ವರುಣ - ಇನ್ನೂ ಉಳಿದ ದೇವತೆಗಳೆಲ್ಲರ ಅಧಿಕಾರವನ್ನೂ ಅವನು ತಾನೇ (ಕಸಿದು) ನಡೆಯಿಸುತ್ತಿದ್ದಾನೆ ದುರಾತ್ಮನಾದ ಆ ಮಹಿಷನು ದೇವತೆಗಳನ್ನೆಲ್ಲ ಸ್ವರ್ಗದಿಂದ ಓಡಿಸಿಬಿಟ್ಟಿದ್ದಾನೆ (ಸ್ಥಾನಭ್ರಷ್ಟರಾದ) ಅವರು ಸಾಮಾನ್ಯ ಮನುಷ್ಯರಂತೆ ಸಂಚರಿಸುತ್ತಿದ್ದಾರೆ ದೇವ ಶತ್ರುವಾದ ಆತನ ಕಾರ್ಯಗಳೆಲ್ಲವನ್ನೂ ಪೂರ್ತಿಯಾಗಿ ನಿಮ್ಮಗಳ ಮುಂದೆ ಹೇಳಿದ್ದೇವೆ ನಾವೆಲ್ಲರೂ ನಿಮಗೆ ಶರಣಾಗತರಾಗಿರುತ್ತೇವೆ ಅವನ ವಧೋಪಾಯವನ್ನು ದಯವಿಟ್ಟು ಆಲೋಚಿಸಬೇಕು - (ಎಂದರು). ಮಹಾವಿಷ್ಣುವು ದೇವತೆಗಳ ಮಾತನ್ನು ಹೀಗೆ ಕೇಳಿದವನಾಗಿ ಕೋಪಗೊಂಡನು. ಈಶ್ವರನೂ ಸಿಟ್ಟಾದನು. ಹುಬ್ಬುಗಳನ್ನು ಗಂಟಿಕ್ಕಿದವರಾದರು ಅನಂತರ ಬಹಳವಾಗಿ ಕೋಪಗೊಂಡ ವಿಷ್ಣುವಿನ ಮುಖದಿಂದಲೂ ಬ್ರಹ್ಮ, ಈಶ್ವರ ಮುಖಗಳಿಂದಲೂ ಮತ್ತು ಉಳಿದ ಇಂದ್ರನೇ ಮುಂತಾದ ದೇವತೆಗಳ ಶರೀರಗಳಿಂದಲೂ ಮಹತ್ತಾದ ತೇಜಸ್ಸು ಹೊರಬಿದ್ದಿತು ಹಾಗೂ ಅದೆಲ್ಲವೂ ಒಂದಾಯಿತು.
ಉರಿಯುತ್ತಿರುವ ಪರ್ವತದಂತಿರುವ ಹೆಚ್ಚಿನ ಆ ತೇಜೋ ರಾಶಿಯು ತನ್ನ ಜ್ಞಾಲೆಗಳಿಂದ ದಿಕ್ಕಿನ ಕೊನೆಗಳನ್ನು ವ್ಯಾಪಿಸಿಕೊಂಡದ್ದನ್ನು ಅಲ್ಲಿ ದೇವತೆಗಳು ಕಂಡರು. ಎಲ್ಲಾ ದೇವತೆಗಳ ಶರೀರದಿಂದ ಹೊರಬಿದ್ದ ಅಪರಿಮಿತವಾದ ಆ ಬೆಳಕು ಒಂದಾಗಿ ಆಗ ಒಬ್ಬ ಸ್ತ್ರೀಯಾಯಿತು ಆಕೆಯು ತನ್ನ ಕಾಂತಿಯಿಂದ ಮೂರು ಲೋಕಗಳನ್ನೂ ವ್ಯಾಪಿಸಿಕೊಂಡಳು ಈಶ್ವರನ ತೇಜಸ್ಸೇನಿತ್ತೋ ಅದರಿಂದ ಆಕೆ ಮುಖವು ಸೃಷ್ಟಿಯಾಯಿತು. ಹಾಗೆಯೇ ಯಮನ (ಶಕ್ತಿ) ತೇಜಸ್ಸುಗಳಿಂದ ಆಕೆಯ ಕೂದಲುಗಳೂ, ವಿಷ್ಣುವಿನ ತೇಜಸ್ಸಿನಿಂದ ತೋಳುಗಳೂ, ಚಂದ್ರನ ತೇಜಸ್ಸಿನಿಂದ ಎರಡು ಸ್ತನಗಳೂ, ಇಂದ್ರನ ತೇಜಸ್ಸಿನಿಂದ ಮಧ್ಯಭಾಗವೂ, ವರುಣನ ತೇಜಸ್ಸಿನಿಂದ ತೊಡೆ-ಮಂಡಿಗಳೂ, ಭೂದೇವಿಯ ತೇಜಸ್ಸಿನಿಂದ ಆಸನಭಾಗವೂ, ಬ್ರಹ್ಮತೇಜಸ್ಸಿನಿಂದ ಪಾದಗಳೂ, ಸೂರ್ಯತೇಜಸ್ಸಿನಿಂದ ಕಾಲುಬೆರಳುಗಳೂ, ವಸುದೇವತೆಗಳ ತೇಜಸ್ಸಿನಿಂದ ಕೈಬೆರಳುಗಳೂ, ಕುಬೇರನ ತೇಜಸ್ಸಿನಿಂದ ಮೂಗೂ, ಪ್ರಜಾಪತಿಯ ತೇಜಸ್ಸಿನಿಂದ ಆಕೆಯ ಹಲ್ಲುಗಳೂ, ಅಗ್ನಿಯ ತೇಜಸ್ಸಿನಿಮದ ಮೂರು ಕಣ್ಣುಗಳು, ಸಂಧ್ಯಾದೇವತೆಗಳ ತೇಜಸ್ಸಿನಿಂದ ಎರಡು ಹುಬ್ಬುಗಳೂ, ವಾಯುದೇವತೆಯ ತೇಜಸ್ಸಿನಿಂದ ಕಿವಿಗಳೂ-ಉಂಟಾದವು. ಹೀಗೆಯೇ ಬೇರೆಬೇರೆಯ ದೇವತೆಗಳ ತೇಜಸ್ಸುಗಳ (ಸಮಷ್ಟಿಯ) ಸೃಷ್ಟಿಯೇ ದೇವಿಯಾಗಿದ್ದಳು. ಅನಂತರ ಎಲ್ಲಾ ದೇವತೆಗಳ ತೇಜಸ್ಸಮೂಹದಿಂದ ಹುಟ್ಟಿ ಬಂದ ಆಕೆಯನ್ನು ಕಂಡು ಮಹಿಷಾಸುರನಿಂದ ಪೀಡಿಸಲ್ಪಟ್ಟಿದ್ದ ದೇವತೆಗಳು ಆನಂದಗೊಂಡರು ಪಿನಾಕಪಾಣಿಯಾದ ಶಿವನು ತನ್ನ ತ್ರಿಸೂಲದಿಂದ ಮತ್ತೊಂದು ತ್ರಿಶೂಲವನ್ನು ನಿರ್ಮಿಸಿ ಆಕೆಗೆ ಕೊಟ್ಟನು ವಿಷ್ಣುವೂ ಹಾಗೆಯೇ ತನ್ನ ಚಕ್ರದಿಂದ ಬೇರೊಂದು ಚಕ್ರವನ್ನು ಸಿದ್ಧಗೊಳಿಸಿಕೊಟ್ಟನು ವರುಣನು ಶಂಭವನ್ನೂ ಅಗ್ನಿದೇವನು ಶಕ್ತ್ಯಾಯುಧವನ್ನೂ ಮಾರುತನು (ವಾಯುವು) ಬಿಲ್ಲನ್ನೂ ಮತ್ತು ಬಾಣಗಳಿಂದ ತುಂಬಿದ ಎರಡು ಬತ್ತಳಿಕೆಗಳನ್ನೂ ನೀಡಿದರು. ಇಂದ್ರನು ತನ್ನ ವಜ್ರಾಯುಧದಿಂದ ಮತ್ತೊಂದು ವಜ್ರಾಯುಧವನ್ನು ತಯಾರಿಸಿಕೊಟ್ಟನು ಮತ್ತು ದೇವೇಂದ್ರನು ತನ್ನ ಐರಾವತವೆಂಬ ಆನೆಯಿಂದ ಘಂಟೆಯನ್ನು ತೆಗೆದುಕೊಟ್ಟನು ಯಮನು ತನ್ನ ಕಾಲದಂಡದಿಂದ (ಮತ್ತೊಂದು) ದಂಡವನ್ನೂ ವರುಣನು ಪಾಶವನ್ನೂ (ಸೃಷ್ಟಿಸಿ) ಕೊಟ್ಟರು ಪ್ರಜಾಪತಿಯು ಜಪಸರವನ್ನೂ ಬ್ರಹ್ಮದೇವನು ಕಮಂಡಲವನ್ನೂ ಕೊಟ್ಟರು. ಸೂರ್ಯನು ಆ ದೇವಿಯ ಎಲ್ಲಾ ಮೈಗೂದಲುಗಳಲ್ಲಿಯೂ ತನ್ನ ಕಾಂತಿಯನ್ನು ಇಟ್ಟನು. ಕಾಲ (ಮೃತ್ಯುವು) ಕತ್ತಿಯನ್ನೂ ನಿರ್ಮಲವಾದ ಚರ್ಮ (ವೆಂಬ ಸಾಮಗ್ರಿಯನ್ನೂ) ನೀಡಿದನು. ಕ್ಷೀರಸಮುದ್ರರಾಜನು ಶುದ್ದವಾದ (ರತ್ನಗಳ) ಹಾರವನ್ನೂ ನಾಶವಿಲ್ಲದ ಎರಡು ವಸ್ತ್ರಗಳನ್ನೂ (ಹರಳಿನಲ್ಲಿಧರಿಸುವ) ಚೂಡಾಮಣಿಯೆಂಬ ಒಡವೆಯನ್ನೂ ಎರಡು ಬೆಂಡೋಲೆಗಳನ್ನೂ ಕೈಬಳೆಗಳನ್ನೂ ನೀಡಿದನು. (ಅದೇ ಸಮುದ್ರರಾಜನು) ಅರ್ಧಚಂದ್ರಾಕಾರದ ಶುಭ್ರವಾದ (ಹಣೆಬೊಟ್ಟನ್ನೂ) ಎಲ್ಲಾ ತೋಳುಗಳಿಗೂ ತೋಳುಬಳೆಗಳನ್ನೂ (ಭುಜಕೀರ್ತಿಗಳನ್ನೂ) ವಿಮಲವಾದ ಎರಡು ಕಾಲುಗೆಜ್ಜೆಗಳನ್ನೂ ಹಾಗೆಯೇ ಅಮೂಲ್ಯವಾದ ಕಂಠಾಭರಣವನ್ನೂ ಎಲ್ಲಾ ಬೆರಳುಗಳಿಗೂ ರತ್ನದ ಉಂಗುರಗಳನ್ನೂ ಕೊಟ್ಟನು. ವಿಶ್ವಕರ್ಮನೆಂಬ (ದೇವಶಿಲ್ಪಿಯು) ಆಕೆಗೆ ಅತಿನಿರ್ಮಲವಾದ ಕೊಡಲಿಯನ್ನೂ ಹಾಗೂ ಅನೇಕರೀತಿಯಾದ ಅಸ್ತ್ರಾಯುಧಗಳನ್ನೂ ಭೇದಿಸಲು ಬಾರದ ಕವಚವನ್ನೂ ಕೊಟ್ಟನು. ಸಮುದ್ರರಾಜನು ಆಕೆಗೆ ಬಾಡದೆ ಇರುವ ಕಮಲದ ಹೂವುಗಳುಳ್ಳ ಎರಡು ಮಾಲೆಗಳನ್ನು ತುರುಬಿನಲ್ಲಿ ಮುಡಿಯಲು ಹಾಗೂ ವಕ್ಷಸ್ಥಲದಲ್ಲಿ ಧರಿಸಲು ತಕ್ಕಂಥವುಗಳನ್ನು ಕೊಟ್ಟನು ಮತ್ತು ಅತಿಮುದ್ದಾದ ಒಂದು ತಾವರೆಯನ್ನೂ ನೀಡಿದನು (ಗಿರಿರಾಜನಾದ) ಹಿಮವಂತನು ವಾಹನವಾಗಿ ಆಕೆಗೆ ಒಂದು ಸಿಂಹವನ್ನೂ (ಅಲಂಕಾರಕ್ಕಾಗಿ) ವಿವಿಧ ರತ್ನಗಳನ್ನೂ ನೀಡಿದನು ಕುಬೇರನು ಸುರೆ(ಮದ್ಯ)ಯು ಎಂದಿಗೂ ಖಾಲಿಯಾಗದ ಒಂದು ಕುಡಿಯುವ ಪಾತ್ರೆಯನ್ನು ಕೊಟ್ಟನು. ಎಲ್ಲಾ ನಾಗಗಳಿಗೂ ಒಡೆಯನಾದ ಹಾಗೂ ಈ ಭೂಮಿಯನ್ನು (ತನ್ನ ಹೆಡೆಗಳಿಂದ) ಧರಿಸಿರುವ ಆದಿಶೇಷನು ಮಹಾಮಣಿಗಳಿಂದ ಅಲಂಕೃತವಾದ ನಾಗರತ್ನಗಳ ಹಾರವೊಂದನ್ನು ಆಕೆಗೆ ಕೊಟ್ಟನು. ಹೀಗೆ ದೇವಿಯು ಬೇರೆಬೇರೆಯ ದೇವತೆಗಳಿಂದಲೂ (ನಾನಾವಿಧವಾದ) ಒಡವೆಗಳು, ಆಯುಧಗಳಿಂದ ಗೌರವಿಸಲ್ಪಟ್ಟವಳಾಗಿ ಮತ್ತೆಮತ್ತೆ ಅಟ್ಟಹಾಸದಿಂದ ಗಟ್ಟಿಯಾಗಿ ನಾದಮಾಡಿದಳು. ಆಕೆಯ ಭಯಂಕರವಾದ ಆ ನಾದದಿಂದ ಇಡಿಯ ಆಕಾಶವೆಲ್ಲವೂ ತುಂಬಿಹೋಯಿತು. ಅತಿ ಹೆಚ್ಚಿನ ರೀತಿಯಿಂದ ಶಬ್ದವಾಯಿತು ಅದರಿಂದ ಪ್ರತಿಧ್ವನಿಯೂ ದೊಡ್ಡದಾಗಿ ಉಂಟಾಯಿತು ಇದರಿಂದ ಎಲ್ಲಾ ಲೋಕಗಳೂ ಗಾಬರಿಗೊಂಡವು. ಸಮುದ್ರಗಳು ಅಳ್ಳಾಡಿಹೋದವು ಭೂಮಿಯು ನಡುಗಿಬಿಟ್ಟಳು ಪರ್ವತಗಳೆಲ್ಲವೂ ಚಲಿಸಿಬಿಟ್ಟವು ಆಗ ದೇವತೆಗಳು ಸಿಂಹವಾಹಿನಿಯಾದ ಆಕೆಯನ್ನು ಕುರಿತು ಸಂತೋಷದಿಂದ ಜಯಕಾರಮಾಡಿದರು ಭಕ್ತಿಯಿಂದ ಬಗ್ಗಿದ ಶರೀರವುಳ್ಳ ಮುನಿಗಳು ಸ್ತೋತ್ರಮಾಡಿದರು.
    ಮೂರು ಲೋಕಗಳೆಲ್ಲವೂ ಬಹಳವಾಗಿ ಗಲಿಬಿಲಿಯಾದದ್ದನ್ನು ಕಂಡು ದೇವಶತ್ರುಗಳಾದ (ರಾಕ್ಷಸರು) ಎಲ್ಲಾ ಸೈನ್ಯವನ್ನೂ ಸಜ್ಜುಗೊಳಿಸಿಕೊಂಡು ಆಯುಧಗಳನ್ನು ಎತ್ತಿ (ಹಿಡಿದವರಾಗಿ) ಮೇಲೆದ್ದರು ಮಹಿಷಾಸುರನಾದರೋ, ಆಹಾ! ಇದೇನು? ಎಂದು ಕೋಪದಿಂದ ಘರ್ಜಿಸಿದವನಾಗಿ ಎಲ್ಲಾ ರಾಕ್ಷಸರೊಡಗೂಡಿ ಆ ಶಬ್ದವು ಬಂದಲ್ಲಿಗೆ ಎದುರಾಗಿ ಓಡಿಬಂದನು.ಅನಂತರ ಮೂರು ಲೋಕಗಳನ್ನೂ ತನ್ನ ಕಾಂತಿಯಿಂದ ವ್ಯಾಪಿಸಿಕೊಂಡಿದ್ದ ಹಾಗೂ ಹೆಜ್ಜೆಯನ್ನಿಟ್ಟಾಗ ಬಗ್ಗಿ ನಮಸ್ಕರಿಸುವ ಭೂದೇವೀಸಹಿತಳೂ ಆಕಾಶವನ್ನೆಲ್ಲ ಕಿರೀಟದಲ್ಲಿ (ಅಡಗಿಸಿಕೊಂಡು) ಎದ್ದು ಹೊಳೆಯುತ್ತಿರುವವಳೂ ಆದ ದೇವಿಯನ್ನು ಕಂಡನು ಆಕೆಯು ತನ್ನ ಧನುಸ್ಸಿನ ಟಂಕಾರಧ್ವನಿಯಿಂದ ಇಡಿಯ ಪಾತಾಳಲೋಕವನ್ನೆಲ್ಲ ಕ್ಷೋಭಗೊಳ್ಳುವಂತೆ ಮಾಡಿದವಳಾಗಿಯೂ ಸಾವಿರ ಭುಜಗಳಿಂದ ಎಲ್ಲೆಲ್ಲೂ ವ್ಯಾಪಿಸಿಕೊಂಡು ನೆಲೆಸಿದವಳಾಗಿಯೂ ಕಂಡುಬಂದಳು.
    ದೇವಿಯೊಡನೆ ರಾಕ್ಷಸರಿಗೆ ಯುದ್ಧವು ಸಂಘಟಿಸಿತು ಬಹಳವಾದ ಶಸ್ತ್ರಾಸ್ತ್ರಗಳ ಉಪಯೋಗದಿಂದ ದಿಕ್ಕುಗಳೆಲ್ಲವೂ ಹೊಳೆಯುವಂತೆ ಅದು ನಡೆಯಿತು. ಮಹಿಷಾಸುರನ ಸೇನಾಪತಿಯಾದ ಚಿಕ್ಷುರ ಎಂಬ ಮಹಾರಾಕ್ಷಸನೂ ಮತ್ತೊಬ್ಬ (ಸೇನಾಧಿಪತಿಯಾದ) ಚಾಮರನೆಂಬುವನೂ ಚತುರಂಗಸೈನ್ಯದಿಂದಲೂ ಅರವತ್ತುಸಾವಿರ ಸಂಖ್ಯೆಯ ರಥಗಳಿಂದಲೂ ಕೂಡಿದವರಾಗಿಯೂ ಹಾಗೆಯೇ ಭಯಂಕರವಾದ ಕೋರೆದಾಡೆಗಳುಳ್ಳ ಉದಗ್ರನೆಂಬವನು ಕೋಟಿ(ರಥ)ಗಳಿಂದಲೂ ಕುಡಿದವನಾಗಿಯೂ ಯುದ್ಧಮಾಡಿದರು. ಐವತ್ತುಲಕ್ಷ ರಥಗಳಿಂದ ಕೂಡಿದ ಮಹಾಸುರನಾದ ಅಸಿಲೋಮನೆಂಬುವನೂ ಅರವತ್ತು ಲಕ್ಷಸೈನ್ಯದೊಡನೆ ಬಾಷ್ಕಲನೆಂಬುವನೂ ಆ ಯುದ್ಧದಲ್ಲಿ ಕಾದಾಡಿದರು ಅದೇ ಬಾಷ್ಕಲನು ಸಾವಿರಾರು ಆನೆ ಕುದುರೆಗಳ ಪರಿವಾರದಿಂದಲೂ ಕೋಟಿ ಸಂಖ್ಯೆಯ ರಥಗಳಿಂದಲೂ ಕೂಡಿಕೊಂಡು ಯುದ್ಧ ಮಾಡಿದನು. ಬಿಡಾಲನೆಂಬುವನು ಐದು ಲಕ್ಷ ರಥಗಳಿಂದ ಸುತ್ತುವರೆಯಲ್ಪಟ್ಟವನಾಗಿ ಯುದ್ಧದಲ್ಲಿ ಕಾದಾಡಿದನು ಇನ್ನೂ ಕೆಲವರು ಮಹಾರಾಕ್ಷಸರು ಹತ್ತುಸಾವಿರಗಟ್ಟಲೆ ರಥಗಳು, ಆನೆಗಳು, ಕುದುರೆಗಳಿಂದ ಪರಿವಾರಿತರಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದರು, ತೊಮರ, ಭಿಂದಿಪಾಲ, ಶಕ್ತಿ, ಮುಸಲಗಳೆಂಬ ಹಾಗೂ ಕತ್ತಿ, ಕೊಡಲಿ, ಪಟ್ಟಿಶಗಳೆಂಬ ವಿವಿಧವಾದ (ಆಯುಧಗಳಿಂದ ರಾಕ್ಷಸರುಗಳು) ದೇವಿಯೊಡನೆ ಯುದ್ಧಮಾಡಿದರು. ಕೆಲವರು ಶಕ್ತ್ಯಾಯುಧಗಳನ್ನೂ ಕೆಲವರು ಪಾಶಗಳನ್ನೂ ಮತ್ತೆ ಕೆಲವರು ಕತ್ತಿಯ ಹೊಡೆತಗಳನ್ನೂ ದೇವಿಯ ಮೇಲೆ ಪ್ರಯೋಗಿಸಿದರು ಅವರೆಲ್ಲರೂ ದೇವಿಯನ್ನು ಕೊಲ್ಲಲು ಮುನ್ನುಗ್ಗಿದರು ಅನಂತರ ಆ ಚಂಡಿಕಾ ದೇವಿಯಾದರೊ ಆ ಶಸ್ತ್ರಾಸ್ತ್ರಗಳೆಲ್ಲವನ್ನೂ ಲೀಲಾಮಾತ್ರದಿಂದ ಕತ್ತರಿಸಿ ಹಾಕಿದಳು ದೇವರ್ಷಿಗಳಿಂದ ಸ್ತೋತ್ರಮಾಡಲ್ಪಡುತ್ತಿರುವ ಈಶ್ವರಿಯಾದ ದೇವಿಯು ಆಯಾಸವಿಲ್ಲದ ಮುಖದಿಂದ ಕುಡಿಯೇ ರಾಕ್ಷಸರ ಶರೀರಗಳ ಮೇಲೆ ಶಸ್ತ್ರಾಸ್ತ್ರಗಳನ್ನು ಮಳೆಗರೆದಳು. ದೇವಿಯ ವಾಹನಶ್ರೇಷ್ಠವಾದ ಸಿಂಹವು ಕೂಡ ಕೋಪಗೊಂಡು ತನ್ನ ಕೇಸರವನ್ನು ಕೊಡವಿಕೊಂಡು ಕಾಡಿನಲ್ಲಿ ಬೆಂಕಿಯಂತೆ ರಾಕ್ಷಸರ ಸೈನ್ಯದಲ್ಲೆಲ್ಲ ಸಂಚರಿಸುತ್ತಿತ್ತು ದೇವಿಯು ಯುದ್ಧಮಾಡುತ್ತಾ ರಣಾಂಗಣದಲ್ಲಿ ಬಿಡುತ್ತಿದ್ದ ನಿಟ್ಟುಸಿರುಗಳು ಕೂಡಲೆ ಸಹಸ್ರಾರು ಗಣದೇವತೆಗಳಾಗಿ ಹೊರತೋರಿಕೊಂಡರು ಆ ದೇವಿಯರು ಪರಶು ಭಿಂದಿಪಾಲ ಕತ್ತಿ, ಪಟ್ಟಿಶ ಮುಂತಾದ ಆಯುಧಗಳಿಂದ ರಾಕ್ಷಸರೊಡನೆ ಯುದ್ಧಮಾಡುತ್ತಿದ್ದರು ಹಾಗೂ ದೇವಿಯ ಶಕ್ತಿಯಿಂದ ಮೈಗೂಡಿದವರಾಗಿ ಅಸುರರನ್ನು ನಾಶಗೊಳಿಸುತ್ತಾ ಪಟಹ, ಶಂಖ, ಮೃದಂಗ ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಆ ಯುದ್ಧ ಸಮಾರಂಭದಲ್ಲಿ ಭಾಗವಹಿಸಿದ್ದರು.
    ದೇವಿಯು ತ್ರಿಶೂಲ, ಗದೆ, ಶಕ್ತಿ ಮುಂತಾದ ಹಾಗೂ ಕತ್ತಿಯೇ ಮೊದಲಾದ ಆಯುಧಗಳ (ಹೊಡೆತಗಳ) ಮಳೆಯಿಂದ ಮಹಾರಾಕ್ಷಸರುಗಳನ್ನು ಕೊಲ್ಲುತ್ತಿದ್ದಳು ಘಂಟಾನಾದದಿಂದ ಮೂರ್ಛಿತರಾದ ಕೆಲವರನ್ನು ಕೆಡವಿದಳು ಮತ್ತೆ ಕೆಲವರನ್ನು ಹಗ್ಗದಿಂದ ಕಟ್ಟಿನೆಲದಮೇಲೆ ಎಳೆದಾಡಿದಳು. ಕೆಲವರು ಹರಿತವಾದ ಆಯುಧಗಳಿಂದ ಎರಡಾಗಿ ಸೀಳಲ್ಪಟ್ಟರು ಮತ್ತೆ ಕೆಲವರು ಕತ್ತಿಯ ಏಟುಗಳಿಂದ ಬಿದ್ದುಹೋದರು. ಗದೆಯಿಂದ ಚಚ್ಚಲ್ಪಟ್ಟ ಕೆಲವರು ನೆಲದಮೇಲೆ ಮಲಗಿದರು ಮುಸಲ (ಒನಕೆ)ಯಿಂದ ಬಹಳವಾಗಿ ಹೊಡೆಯಲ್ಪಟ್ಟ ಕೆಲವರು ರಕ್ತವನ್ನು ಕಾರಿದರು ಮತ್ತೆ ಕೆಲವರು ಎದೆಯಲ್ಲಿ ಶೂಲದಿಂದ ತಿವಿಯಲ್ಪಟ್ಟವರಾಗಿ ನೆಲದಮೇಲೆ ಬಿದ್ದರು ಕೆಲವರು ಯುದ್ಧದಲ್ಲಿ ಬಾಣಗಳ ಸುರಿಮಳೆಯಿಂದ (ಉಸಿರಾಡಲೂ ಜಾಗವಿಲ್ಲದಂತೆ) ಮಾಡಲ್ಪಟ್ಟರು ಹೀಗೆ ದೇವಶತ್ರುಗಳಾದ ರಾಕ್ಷಸರು ಗಿಡಗಗಳು ಹಾರುವಂತೆ ತಮ್ಮ ಪ್ರಾಣಪಕ್ಷಿಗಳನ್ನು ಶರೀರದಿಂದ ಮೇಲುಗಡೆಗೆ ಹಾರಿಸಿಕೊಂಡು (ಮೃತರಾದರು) ಕೆಲವರ ತೋಳುಗಳೂ (ಆ ಯುದ್ಧದಲ್ಲಿ) ಕತ್ತರಿಸಲ್ಪಟ್ಟವು ಕೆಲವರಿಗೆ ಕುತ್ತಿಗೆಯು ತುಂಡಾಯಿತು ಮತ್ತೆ ಕೆಲವರ ತಲೆಗಳೇ ಬಿದ್ದುಹೋದವು ಇನ್ನು ಕೆಲವರು ನಡುಭಾಗದಲ್ಲಿ ಸೀಳಲ್ಪಟ್ಟರು ಕೆಲವು ಭಾರಿಯ ರಾಕ್ಷಸರು ತೊಡೆಗಳನ್ನು ಮುರಿದುಕೊಂಡು ಭೂಮಿಯಲ್ಲಿ ಬಿದ್ದರು ಕೆಲವರು ಒಂಟಿತೋಳು, ಕಣ್ಣು, ಕಾಲುಗಳುಳ್ಳವರಾಗಿ ಮಾಡಲ್ಪಟ್ಟರು ಕೆಲವರು ದೇವಿಯಿಂದ ಎರಡು ಹೋಳಾಗಿ ಮಾಡಲ್ಪಟ್ಟರು. ಬೇರೆಯ ಕೆಲವರು ತಲೆಯು ತುಂಡಾಗಿ ಹೋಗಿದ್ದರೂ ಬಿದ್ದವರು ಮೇಲೆದ್ದರು (ಅವರ) ಮುಂಡಗಳು ಒಳ್ಳೆಯ ಆಯುಧಗಳನ್ನು ಹಿಡಿದು ದೇವಿಯೊಡನೆ ಯುದ್ಧಮಾಡಿದವು ಮತ್ತೆ ಕೆಲವು ಆ ಯುದ್ಧದಲ್ಲಿ ವಾದ್ಯಗಳ ಧ್ವನಿಗೆ ಅನುಗುಣವಾಗಿ ಲಯಕ್ಕೆ ತಕ್ಕಂತೆ ಕುಣಿದಾಡಿದವು ಮತ್ತೆ ಕೆಲವು ಕಬಂಧಗಳು ರುಂಡವನ್ನು ಕಳೆದುಕೊಂಡವುಗಳಾಗಿದ್ದರೂ ಖಡ್ಗ-ಶಕ್ತಿ-ಮುಂತಾದ ಆಯುಧಗಳನ್ನು ಹಿಡಿದವುಗಳಾಗಿ ದೇವಿಯನ್ನು ನಿಲ್ಲು ನಿಲ್ಲು ಎಂದು ಕೂಗುತ್ತಿದ್ದವು. ಎಲ್ಲಿ ಆ ಮಹಾಯುದ್ಧವು ನಡೆಯಿತೋ ಅಲ್ಲಿ ಭೂಮಿಯು ರಥ, ಆನೆ, ಕುದುರೆಗಳ (ಶವಗಳಿಂದ ತುಂಬಿಹೋಗಿ) ಹೋಗುವದಕ್ಕೆ ಅಸಾಧ್ಯವಾಗಿತ್ತು ರಕ್ತಪ್ರವಾಹ ತುಂಬಿದ ಮಹಾನದಿಗಳು ಆ ಆನೆಕುದುರೆರಾಕ್ಷಸರ ಸೈನ್ಯದ ನಡುವೆ ತತ್ಕಾಲಕ್ಕೆ ಅಲ್ಲಿ ಹರಿದವು.
    ಅಂಬಿಕೆಯು ಕ್ಷಣಮಾತ್ರದಲ್ಲಿ ಆ ಅಸುರರ ಮಹಾಸೈನ್ಯವನ್ನು-ಬೆಂಕಿಯು ಹುಲ್ಲುಕಟ್ಟಿಗೆಗಳ ದೊಡ್ಡರಾಶಿಯನ್ನು ಹೇಗೋ ಹಾಗೆ, ನಾಶಮಾಡಿ ಬಿಟ್ಟಳು. ಆ ಸಿಂಹವು ಕೂಡ ತನ್ನ ಮೀಸೆಗಳನ್ನು ಕೊಡವುತ್ತಾ ರಾಕ್ಷಸರ ಶರೀರಗಳ್ಲಲ್ಲಿ ಪ್ರಾಣಗಳಿವೆಯೆ, ಎಂಬುದನ್ನು ಹುಡುಕುತ್ತಿದೆಯೊ? ಎಂಬಂತೆ ಸುತ್ತಾಡುತ್ತಾ ಮಹಾಘರ್ಜನೆಯನ್ನು ಮಾಡಿತು. ದೇವಿಯೊಡನೆ ಹೀಗೆ ಆ ಮಹಾರಾಕ್ಷಸರ ಗಣಗಳು ಅಲ್ಲಿ ಕಾದಾಡಿದರು (ಇದನ್ನು ಕಂಡ) ದೇವತೆಗಳು ಆಕಾಶದಿಂದ ಹೂಮಳೆಗರೆದವರಾದರು; ಮತ್ತು ಸಂತುಷ್ಟರಾದರು.

ಮಹಿಷಾಸುರ ವಧೆ
ಉದ್ಯದ್ಬಾನುಸಹಸ್ರಕಾಂತಿಮರುಣಕ್ಷೌಮಾಂ ಶಿರೋಮಾಲಿಕಾಂ
ರಕ್ತಾಲಿಪ್ತ ಪಯೋಧರಾಂ ಜಪವಟೀಂ ವಿದ್ಯಾಮಭೀತಿಂ ವರಮ್ |
ಹಸ್ತಾಬ್ಜೈರ್ದಧತೀಂ ತ್ರಿನೇತ್ರ ವಿಲಸದ್ವಕ್ತ್ರಾರವಿಂದಶ್ರಿಯಂ
ದೇವೀಂ ಬದ್ಧಹಿಮಾಂಶುರತ್ನಮಕುಟಾಂ ವಂದೇರವಿಂದಸ್ಥಿತಾಮ್ ||
     ಉದಯಿಸುತ್ತಿರುವ ಸಾವರಿ ಸೂರ್ಯರ ಕಾಂತಿಗೆ ಸಮಾನವಾದ ಕೆಂಪುರೇಷ್ಮೆಯ ವಸ್ತ್ರವನ್ನುಟ್ಟಿರುವ, (ರಾಕ್ಷಸರ) ಶಿರಸ್ಸುಗಳನ್ನೇ ಮಾಲೆಯಾಗಿ ಧರಿಸಿದ್ದರಿಂದ ಕೆಂಪಾದ ಸ್ತನಗಳುಳ್ಳವಳಾದ, ಜಪಮಾಲೆ, ವಿದ್ಯಾಮುದ್ರೆ, ಅಭಯಮುದ್ರೆ, ವರದಾನಮುದ್ರೆಗಳನ್ನು ಕಮಲದಂತಿರುವ ಕೈಗಳಿಂದ ಧರಿಸಿರುವ, ಮೂರುಕಣ್ಣುಗಳಿಂದ ಅಲಂಕೃತವಾದ ಮುಖಾರವಿಂದದ ಕಾಂತಿಯುಳ್ಳ, ಚಂದ್ರನೊಡಗೂಡಿದ ರತ್ನಕಿರೀಟಧಾರಣೆಯಾದ ಕಮಲದಲ್ಲಿ ಕುಳಿತಿರುವಳಾದ ದೇವಿಯನ್ನು ನಮಸ್ಕರಿಸುತ್ತೇನೆ.
        ಋಷಿಯಿಂತೆಂದನು : ಮಹಾಸುರನೂ ಸೇನಾಪತಿಯೂ ಆದ ಚಿಕ್ಷುರನು ಕೊಲ್ಲಲ್ಪಡುತ್ತಿರುವ ಆ ಸೈನ್ಯವನ್ನು ನೋಡಿ ಕೋಪದಿಂದ ದೇವಿಯೊಡನೆ ಯುದ್ಧಮಾಡಲು ಹೊರಟನು ಆ ಯುದ್ಧದಲ್ಲಿ ಬಾಣಗಳ ಮಳೆಯಿಂದ ಅವನು ಹೇಗೆ ದೊಡ್ಡ ಮೇಘವು ಧಾರಾಕಾರವಾದ ಮಳೆಯಿಂದ ಮೇರುಗಿರಿಯನ್ನು ತೋಯಿಸುವುದೋ ಹಾಗೆ-ಮಳೆಗರೆದನು, ಅದಕ್ಕೆ ಉತ್ತರವಾಗಿ ದೇವಿಯು ಲೀಲಾಮಾತ್ರದಿಂದ ಆತನ ಬಾಣಗಳನ್ನು ತುಂಡುಮಾಡಿ ತನ್ನ ಬಾಣಗಳಿಂದ ಅವನ (ರಥದ) ಕುದುರೆಗಳನ್ನೂ ಅವುಗಳನ್ನು ನಡೆಯಿಸುತ್ತಿದ್ದ ಸಾರಥಿಯನ್ನೂ ಹೊಡೆದಳು. ಅತಿ ಎತ್ತರದಲ್ಲಿದ್ದ ಧ್ವಜವನ್ನೂ ಅವನ ಕೈಯಲ್ಲಿದ್ದ ಬಿಲ್ಲನ್ನೂ ಕತ್ತರಿಸಿದಳು ಹೀಗೆ ಕತ್ತರಿಸಲ್ಪಟ್ಟಬಿಲ್ಲುಳ್ಳ ಆತನನ್ನು ವೇಗವಾದ ಬಾಣಗಳಿಂದ (ದೇಹದಲ್ಲೆಲ್ಲ ನಾಟಿಕೊಳ್ಳುವಂತೆ) ಹೊಡೆದಳು. ಕುದುರೆ, ಸಾರಥಿ, ಬಿಲ್ಲು - ಎಲ್ಲವನ್ನೂ ಕಳೆದುಕೊಂಡ ಆತನು ಕತ್ತಿ-ಗುರಾಣಿಗಳನ್ನು ಹಿಡಿದು ದೇವಿಯಮೇಲೆ ಮುನ್ನುಗ್ಗಿ ಬಂದನು ಮತ್ತು ಹರಿತವಾದ ಅಲುಗಿನ ಕತ್ತಿಯಿಂದ ಸಿಂಹದ ತಲೆಯಮೇಲೆ ಹೊಡೆದು ಅತಿ ವೇಗಶಾಲಿಯಾದ ಆತನು ದೇವಿಯ ಎಡಭುಜಕ್ಕೂ ಹೊಡೆದನು.ಕೋಪದಿಂದ ಕೆಂಪಾದ ಕಣ್ಣುಳ್ಳ ಆತನು ಶೂಲವನ್ನು ಹಿಡಿದನು ಅನಂತರ ಆ ಮಹಾಸುರನು ಆಕಾಶದಲ್ಲಿನ ತೇಜೋಮಯವಾದ ಸೂರ್ಯಬಿಂಬದಂತೆ ಬೆಳಗುತ್ತಿರುವ ಅದನ್ನು ಭದ್ರಕಾಳಿಯ ಮೇಲೆ ಎಸೆದನು ಮೇಲೆ ಬೀಳುತ್ತಿರುವ ಆ ಶೂಲವನ್ನು ದೇವಿಯು ಕಂಡವಳಾಗಿ ತನ್ನ ಶೂಲವನ್ನು ಪ್ರಯೋಗಿಸಿದಳು ಅದು ರಾಕ್ಷಸನ ಶೂಲವನ್ನು ನೂರಾಗಿ ತುಂಡು ಮಾಡಿದ್ದರ ಜೊತೆಗೆ ಅವನನ್ನೂ ನೂರು ಪಾಲಾಗಿ ಸೀಳಿಬಿಟ್ಟಿತು.
    ಮಹಾಬಲಶಾಲಿಯಾದ ಮಹಿಷಾಸುರನ ಸೈನ್ಯಾಧಿಪತಿಯಾದ ಆತನು ನಾಶವಾಗಲಾಗಿ, ದೇವತೆಗಳನ್ನು ಹಿಂಸಿಸುವ ಚಾಮರನೆಂಬ (ರಾಕ್ಷಸನು) ಆನೆಯನ್ನೇರಿದವನಾಗಿ ಬಂದನು. ಅವನು ಕೂಡ ದೇವಿಯ ಕಡೆಗೆ ಶಕ್ತ್ಯಾ ಯುಧವನ್ನು ಬಿಟ್ಟನು ಅಂಬಿಕೆಯು ಬೇಗನೆ ಹುಂಕಾರದಿಂದ ಅದನ್ನು ಕಾಂತಿಹೀನವಾಗಿ ಮಾಡಿದವಳಾಗಿ ನೆಲದಲ್ಲಿ ಕೆಡವಿಬಿಟ್ಟಳು ಮುರಿದು ಬಿದ್ದುಹೋದ ಶಕ್ತಿಯನ್ನು ಕಂಡು ಕೋಪಗೊಂಡ ಚಾಮರನು ಶೂಲವನ್ನು ಎಸೆದಳು ಆಕೆಯು ಅದನ್ನು ಬಾಣಗಳಿಂದ ತುಂಡರಿಸಿದಳು, ನಂತರ ಸಿಂಹವು ನೆಗೆದು (ಆ ರಾಕ್ಷಸನು ಏರಿದ್ದ) ಆನೆಯ ಕುಂಭಸ್ಥಲವನ್ನು ಏರಿಬಿಟ್ಟತು ದೇವಿಯು ಆ ಅಮರಾರಿಯಾದ ಅವನೊಡನೆ ಬಾಹುಗಳಿಂದ ಯುದ್ಧವನ್ನಾರಂಭಿಸಿದಳು ಹೀಗೆ ಯುದ್ಧವನ್ನು ಮಾಡುತ್ತಾ ಅವರಿಬ್ಬರೂ ಅನಂತರ ನೆಲದಮೇಲೆಕ್ಕೆ ಬಂದರು ಅತಿಬಲದರ್ಪಿತರಾಗಿ ಇಬ್ಬರೂ ಹೆಚ್ಚು ಭಯಂಕರವಾದ ಹೊಡೆತಗಳಿಂದ ಕಾದಾಡಿದರು ಅನಂತರ (ದೇವಿಯು) ಬೇಗನೆ ಸಿಂಹದೊಡನೆ ಆಕಾಶಕ್ಕೆ ನೆಗೆದವಳಾಗಿ ಕೈ (ಗುದ್ದಿನ) ಏಟಿನಿಂದ ಚಾಮರನ ತಲೆಯನ್ನು (ಶರೀರದಿಂದ) ಬೇರೆಯಾಗಿ ಮಾಡಿಬಿಟ್ಟಳು.
    ಉದಗ್ರನೆಂಬವನು ಯುದ್ಧದಲ್ಲಿ ದೇವಿಯಿಂದ ಕಲ್ಲು-ಮರ-ಮುಂತಾದವುಗಳ ಪ್ರಹಾರದಿಂದ ನಾಶಹೊಂದಿದನು ಕರಾಲನು ಗುದ್ಧುಗಳಿಂದಲೂ ಹಲ್ಲುಗಳಿಂದ ಕಚ್ಚುವದರಿಂದಲೂ ಸತ್ತನು ಉದ್ಧತನೆಂಬವನನ್ನು ದೇವಿಯು ಸಿಟ್ಟಿನಿಂದ ಗದೆಯ ಹೊಡೆತದಿಂದ ಪುಡಿಮಾಡಿಬಿಟ್ಟಳು ಹಾಗೆಯೇ ಬಾಷ್ಕಲನೆಂಬವನ್ನು ಭಿಂದಿಪಾಲನೆಂಬ ಆಯುಧದಿಂದಲೂ ತಾಮ್ರ, ಅಂಧಕನೆಂಬವನ್ನು ಬಾಣಗಳಿಂದಲೂ ಉಗ್ರಾಸ್ಯ, ಉಗ್ರವೀರ್ಯ, ಮಹಾಹನು ಎಂಬ ರಾಕ್ಷಸರನ್ನು ಮುಕ್ಕಣ್ಣೆಯಾದ ಪರಮೇಶ್ವರಿಯು ತ್ರಿಶೂಲದಿಂದಲೂ ಕೊಂದುಹಾಕಿದಳು ಬಿಡಾಲನೆಂಬವನ ತಲೆಯನ್ನು ಕತ್ತಿಯಿಂದ ಕತ್ತರಿಸಿ ಶರೀರದಿಂದ ಕೆಡವಿಬಿಟ್ಟಳು ದುರ್ಧರ-ದುರ್ಮುಖರಿಬ್ಬರನ್ನೂ ಬಾಣಗಳಿಂದ ಯಮಪುರಿಗೆ ಕಳುಹಿಸಿಬಿಟ್ಟಳು.
    ಈ ರೀತಿಯಾಗಿ ತನ್ನ ಸೈನ್ಯವು ಕ್ಷೀಣವಾಗುತ್ತಿರಲಾಗಿ ಮಹಿಷಾಸುರನು ಕೋಣನ ರೂಪದಿಂದ ಬಂದು ಆ (ದೇವತಾ)ಗಣಗಳನ್ನೆಲ್ಲ ಹೆದರಿಸಲಾರಂಭಿಸಿದನು ಕೆಲವರನ್ನು (ತನ್ನ)ಕೋರೆಹಲ್ಲುಗಳ ಏಟಿನಿಂದಲೂ ಕೆಲವರನ್ನು ಕಾಲು ಗೊರಸುಗಳ ಹೊಡೆತಗಳಿಂದಲೂ ಇನ್ನೂ ಉಳಿದವರನ್ನು ಬಾಲದ ಹೊಡೆತ, ಕೋಡುಗಳ ತಿವಿಯುವಿಕೆಗಳಿಂದಲೂ ಘಾಸಿಮಾಡಿದನು ತನ್ನ (ಸಂಚಾರ) ವೇಗದಿಂದ ಕೆಲವರನ್ನೂ ಧ್ವನಿಯಿಂದಲೂ, ಸುತ್ತಾಡುವದರಿಂದಲೂ ನಿಟ್ಟುಸಿರಿನ ಗಾಳಿಯಿಂದಲೂ ಇನ್ನೂ ಉಳಿದವರನ್ನೂ ನೆಲದಮೇಲೆ ಕೆಡವುತ್ತಾ ಮಹಾದೇವಿಯ ವಾಹನವಾದ ಸಿಂಹವನ್ನು ಕೊಲ್ಲುವದಕ್ಕಾಗಿ ಮುನ್ನುಗ್ಗಿದನು ಅನಂತರ ದೇವಿಯೂ ಕೋಪಾವಿಷ್ಟಳಾದಳು ಸಿಟ್ಟಿಗೆದ್ದು ಮಹಾಬಲಶಾಲಿಯಾದ ಆ ಮಹಿಷನೂ ತನ್ನ ಕಾಲಿನ ಗೊರಸುಗಳಿಂದ ಭೂಮಿಯನ್ನು ಕೆರೆದು ಹಳ್ಳಮಾಡುತ್ತಾ ಎರಡು ಕೋಡುಗಳಿಂದ ಎತ್ತರವಾದ ಪರ್ವತಗಳನ್ನೆತ್ತಿ ಬಿಸಾಡುತ್ತಾ ಕೂಗಿಕೊಂಡನು ಅವನ ರಭಸದ ನಡುಗೆಯಿಂದ ಅಳ್ಳಾಡಿದ ಭೂಮಿಯು ಸೀಳಿಹೋಯಿತು ಬಾಲದ ಹೊಡೆತದಿಂದ ಉಕ್ಕಿದ ಸಮುದ್ರವು ಎಲ್ಲೆಲ್ಲೂ ನುಗ್ಗಿ ತೇಲಿಸಿಬಿಟ್ಟಿತು, ಅಳ್ಳಾಡಿಸಲ್ಪಟ್ಟ ಅವನ ಕೋಡುಗಳಿಂದ ಸೀಳಿಹೋದ ಮೇಘಗಳು ತುಂಡುತುಂಡಾಗಿಬಿಟ್ಟವು (ಅವನ) ಉಸಿರಿನ ಗಾಳಿಯಿಂದ ಅವು ನೂರಾರು ಚೂರುಗಳಾಗಿ ಆಕಾಶದಿಂದ ಬೆಟ್ಟ(ದಂತೆ) ಉದುರಿದವು. ಹೀಗೆ ಕೋಪದಿಂದ ಉರಿದೆದ್ದು ಮುನ್ನುಗ್ಗಿಬರುತ್ತಿರುವ ಆ ಮಹಾಸುರನನ್ನು ಕಂಡು ಚಂಡಿಕೆಯು ಕೋಪದಿಂದ ಅವನನ್ನು ಕೊಲ್ಲಲು ತೀರ್ಮಾನಿಸಿದಳು.
    ಆಕೆಯು ಅವನ ಮೇಲೆ ಪಾಶವನ್ನೆಸೆದು ಆ ರಾಕ್ಷಸನನ್ನು ಕಟ್ಟಿ ಹಾಕಿದಳು ಯುದ್ಧದಲ್ಲಿ ಹಾಗೆ ಕಟ್ಟಲ್ಪಟ್ಟ ಅವನು ಕೂಡಲೆ ಕೋಣನ ರೂಪವನ್ನು ಬಿಟ್ಟುಸಿಂಹವಾಗಿ ಕಾಣಿಸಿಕೊಂಡನು ಅಂಬಿಕೆಯು ಆ ಸಿಂಹದ ತಲೆಯನ್ನು ಕಡಿಯುವಷ್ಟರಲ್ಲಿಯೇ ಕತ್ತಿಯನ್ನು ಹಿಡಿದ ಒಬ್ಬ ಮನುಷ್ಯನಾಗಿ ತೋರಿಕೊಂಡನು ಆ ಕೂಡಲೆ ದೇವಿಯು ಕತ್ತಿಗುರಾಣಿಗಳಿಂದ ಕೂಡಿದ್ದ ಆ ಪುರುಷನನ್ನು ಬಾಣಗಳಿಂದ ಕತ್ತರಿಸಿದಳು ಅನಂತರ ಅವನು ಒಂದು ದೊಡ್ಡ ಆನೆಯಾಗಿ ಬಂದನು ತನ್ನ ಸೊಂಡಿಲಿನಿಂದ (ದೇವಿಯ ವಾಹನವಾದ) ಮಹಾಸಿಂಹವನ್ನು ಎಳೆದನು, ಹಾಗೂ ಘರ್ಜಿಸಿದನು ಹಾಗೆ ಎಳೆಯುತ್ತಿರುವಾಗಲೇ ದೇವಿಯು ಆ ಸೊಂಡಿಲನ್ನು ಕತ್ತಿಯಿಂದ ತುಂಡರಿಸಿದಳು ಅನಂತರ ಆ ಮಹಾಸುರನು ಮತ್ತೆ ಕೋಣನ ಶರೀರವನ್ನು ಧರಿಸಿ ಚರಾಚರಗಳಿಂದ ತುಂಬಿದ ಮೂರುಲೋಕಗಳನ್ನೂ ಆತಂಕಗೊಳಿಸಿದನು ಅನಂತರ ಕುಪಿತಳಾದ ಚಂಡಿಕಾ ದೇವಿಯು ಶ್ರೇಷ್ಠವಾದ ಪಾನವನ್ನು (ಯುದ್ಧದಲ್ಲಿ ಉತ್ಸಾಹವುಂಟಾಗುವದಕ್ಕಾಗಿ) ಮತ್ತೆಮತ್ತೆ ಸ್ವೀಕರಿಸಿದಳು ಅನಂತರ ಕೆಂಪಾದ ಕಣ್ಣುಗಳುಳ್ಳವಳಾಗಿ ಗಟ್ಟಿಯಾಗಿ ನಕ್ಕಳು. ಆ ರಾಕ್ಷಸನೂ ಬಲವೀರ್ಯಮದಗಳಿಂದ ಕೊಬ್ಬಿದವನಾಗಿ ಘರ್ಜನೆಮಾಡುತ್ತಿದ್ದನು ಹಾಗೂ ಚಂಡಿಕೆಯ ಕಡೆಗೆ ತನ್ನ ಎರಡುಕೋಡುಗಳಿಂದ ಬೆಟ್ಟಗಳನ್ನು ಕಿತ್ತು ಎಸೆಯುತ್ತಿದ್ದನು ಅವನಿಂದೆಸೆಯಲ್ಪಟ್ಟ ಅವುಗಳನ್ನು ಆಕೆಯೂ ಬಾಣಗಳ ಸಮೂಹದಿಂದ ಪುಡಿಮಾಡುತ್ತಾ ಮದದಿಂದ ಹೊರಬೀಳುತ್ತಿರುವ ಮುಖದ ಕೆಂಪಿನಿಂದ ತೊದಲುತ್ತಾ (ಕಿರಿಚುತ್ತಿದ್ದ) ಅವನನ್ನು ಕುರಿತು ದೇವಿಯಿಂತೆಂದಳು: 'ಮೂಢನೆ, ಕ್ಷಣಕಾಲ ನಾನು ಮಧುಪಾನವನ್ನು ಪೂರೈಸುವವರೆಗೂ ಗರ್ಜಿಸುತ್ತಿರು ಇಲ್ಲಿಯೇ ನೀನು ನನ್ನಿಂದ ಕೊಲ್ಲಲ್ಪಟ್ಟಮೇಲೆ ಬೇಗನೇ ದೇವತೆಗಳು (ಸಂತೋಷದಿಂದ) ಗಟ್ಟಿಯಾಗಿ ಕೂಗಾಡಲಿದ್ದಾರೆ!
    ಋಷಿಯಿಂತೆಂದನು: ಹೇಗೆಂದು ಹೇಳಿ ಆಕೆಯು ಆ ಮಹಾರಾಕ್ಷಸನನ್ನು ಕಾಲಿನಿಂದ ತುಳಿದುಕೊಂಡು ಶೂಲದಿಂದ ಅವನ ಕುತ್ತಿಗೆಯನ್ನು ಚುಚ್ಚಿದಳು ಆಕೆಯ ಕಾಲಿನ ತುಳಿತಕ್ಕೆ ಸಿಕ್ಕಿಬಿದ್ದ ಅವನು ದೇವಿಯ ಪರಾಕ್ರಮಕ್ಕೆ ತುತ್ತಾಗಿ ತನ್ನ (ಕೋಣನ ರೂಪದ) ಬಾಯಿಯಿಂದ ಅರ್ಧದಷ್ಟು ಹೊರಬಂದವನಾಗಿಯೇ ಆ ಮಹಾರಾಕ್ಷಸನು ಯುದ್ಧಮಾಡುತ್ತಾ ಆ ದೇವಿಯ ಮಹತ್ತಾದ ಖಡ್ಗದ ಏಟಿನಿಂದ ತಲೆಯನ್ನು ಕತ್ತರಿಸಲ್ಪಟ್ಟವನಾಗಿ ಕೆಡವಲ್ಪಟ್ಟನು, ಅನಂತರ ರಾಕ್ಷಸಸೈನ್ಯವೆಲ್ಲವೂ ಹಾಹಾಕಾರಮಾಡಿತು ಅದು (ದೇವಿಯ ಪರಾಕ್ರಮಕ್ಕೆ ಸಿಕ್ಕಿ) ನಾಶವಾಗಿಹೋಯಿತು ಎಲ್ಲಾ ದೇವತಾ ವೃಂದದವರೂ ಹೆಚ್ಚಿನ ಹರ್ಷವನ್ನು ಹೊಂದಿದರು ದಿವ್ಯರಾದ ಮಹರ್ಷಿಗಳೊಡಗೂಡಿ ಆ ದೇವಿಯನ್ನು ದೇವತೆಗಳೆಲ್ಲರೂ ಸ್ತೋತ್ರಮಾಡಿದರು ಗಂಧರ್ವ ಶ್ರೇಷ್ಠರುಗಳು ಗಾನಮಾಡಿದರು ಅಪ್ಸರಸ್ತ್ರೀಯರುಗಳು ನಾಟ್ಯಮಾಡಿದರು.

ಧೂಮ್ರಲೋಚನ ವಧೆ
ನಾಗಾಧೀಶ್ವರವಿಷ್ಟರಾಂ ಫಣಿಫಣೋತ್ತಂಸೋರುರತ್ನಾವಳೀ-
ಭಾಸ್ವದ್ದೇಹಲತಾಂ ದಿವಾಕರನಿಭಾಂ ನೇತ್ರತ್ರಯೋದ್ಬಾಸಿತಾಮ್ |
ಮಾಲಾಕುಂಭಕಪಾಲನೀರಜಕರಾಂ ಚಂದ್ರಾರ್ಧಚೂಡಾಂ ಪರಾಂ
ಸರ್ವಜ್ಞೇಶ್ವರಭೈರವಾಂಕನಿಲಯಾಂ ಪದ್ಮಾವತೀಂ ಚಿಂತಯೇ ||
    ಆದಿಶೆಷನನ್ನೇ ಆಸನವಾಗಿ ಮಾಡಿಕೊಂಡು ಆ ನಾಗರಾಜನ ಹೆಡೆಗಳಲ್ಲಿರುವ ರತ್ನಗಳ ಸಾಲುಗಳಂತೆ ಹೊಳೆಯುವ ಬಳುಕುದೇಹವುಳ್ಳ, ಸೂರ್ಯನಂತೆ ಪ್ರಕಾಶಮಾನಳಾದ ಮತ್ತು ಮೂರು ಕಣ್ಣುಗಳಿಂದ ವಿರಾಜಮಾನಳಾದ, ಹಾಗೂ ಹೂಮಾಲೆ, ಕುಂಭ, ಕಪಾಲ, ತಾವರೆಗಳನ್ನು ಕೈಯಲ್ಲಿ ಹಿಡಿದವಳಾದ ಅರ್ಧಚಂದ್ರನನ್ನು ಜಡೆಯಲ್ಲಿ ಮುಡಿದವಳಾದ, ಪರಮಳಾದ ಸರ್ವಜ್ಞನೂ ಎಲ್ಲಕ್ಕೂ ಒಡೆಯನೂ ಆದ ಭೈರವನ ತೊಡೆಯಲ್ಲಿ ಕುಳಿತಿರುವ ಪದ್ಮಾವತಿಯನ್ನು ಚಿಂತಿಸುವೆನು.
    ಋಷಿಯಿಂತೆಂದರು : ದೇವಿಯ ಈ ಮಾತುಗಳನ್ನು ಕೇಳಿ ಕೋಪಗೊಂಡವನಾದ ಆ ದೂತನು ಹಿಂದಿರುಗಿ ಬಂದು ದೈತ್ಯರಾಜನಿಗೆ ವಿಸ್ತಾರವಾಗಿ ಎಲ್ಲವನ್ನೂ ಹೇಳಿಬಿಟ್ಟನು, ನಂತರ ಶುಂಭನು ಆ ದೂತನ ಮಾತನ್ನು ಕೇಳಿ ಕ್ರೋಧವಶನಾಗಿ ಧೂಮ್ರಲೋಚನನೆಂಬ ದೈತ್ಯರ ಒಡೆಯನಿಗೆ ಹೇಳಿದನು 'ಎಲೈ ಧೂಮ್ರಲೋಚನನೆ, ನಿನ್ನ ಸೈನ್ಯದೊಡನೆ ಕೂಡಿ ಜಾಗ್ರತೆಯಿಂದ ಹೊರಟು ಬಲಾತ್ಕಾರವಾಗ ಆ ದುಷ್ಟಳಾದ ಹಾಗೂ ಜಡೆಯನ್ನೆಳೆಸಿಕೊಳ್ಳಲು ತವಕಪಡುತ್ತಿರುವ ದೇವಿಯನ್ನು ಕರೆದು ತರುವನಾಗು, ಒಂದು ವೇಳೆ ಯಾರಾದರೂ ಆಕೆಯನ್ನು ಕಾಪಾಡಲು ಮೇಲೆ ಬಿದ್ದರೆ ಅವನು ದೇವತೆ ಯಾಗಿರಲಿ, ಯಕ್ಷ-ಗಂಧರ್ವನಾಗಿರಲಿ ಅಂಥವನನ್ನು ಕೊಂಡು ಬಿಡು.
    ಧೂಮ್ರಲೋಚನನನೆಂಬ ದೈತ್ಯನು ಅರವತ್ತುಸಾವಿರ ರಾಕ್ಷಸರೊಡಗೂಡಿದವನಾಗಿ ವೇಗದಿಂದ ಹೊರಟು ಹಿಮಗಿರಿಯಲ್ಲಿ ನೆಲೆಸಿದ್ದ ದೇವಿಯನ್ನು ಕಂಡು 'ಶುಂಭನಿಶುಂಭರ ಬಳಿಗೆ ಬಾ' ಎಂದು ಗಟ್ಟಿಯಾಗಿ ಗರ್ಜಿಸಿದನು, ಈಗ ನನ್ನೊಡನೆ ನೀನು ಬರದಿದ್ದರೆ ನಾನು ನಿನ್ನ ಜಡೆಗಳನ್ನೆಳೆಸಿಕೊಳ್ಳಲು ಆಶಿಸುವ ನಿನ್ನನ್ನು ಬಲಾತ್ಕಾರದಿಂದ ಕರೆದೊಯ್ಯುವೆ.
    ನೀನು ಬಲಾತ್ಕಾರದಿಂದ ನನ್ನನ್ನೇ ಕರೆದೊಯ್ಯುವೆಯಾದರೆ ಇನ್ನು ನಿನಗೆ ನಾನೇನು ಮಾಡಿಯೇನು ಎಂದೆನ್ನಲು ದೇವಿಯು ಧೂಮ್ರಲೋಚನನು ದೇವಿಯನ್ನು ಅಬಲೆಯೆಂದು ಭಾವಿಸಿ ಮೇಲಿ ನುಗ್ಗಿದನು ನಂತರ ಅಂಬಿಕೆಯು ಹುಂಕಾರಮಾತ್ರದಿಂದಲೇ ಅವನನ್ನು ಸುಟ್ಟುಬೂದಿಮಾಡಿದಳು ನಂತರ ಕೋಪಗೊಂಡು ರಾಕ್ಷಸರ ಮಹಾಸೈನ್ಯವನ್ನೆಲ್ಲ ಚೂಪಾದ ಬಾಣಗಳು, ಶಕ್ತಿ ಪರಶ್ವಧಗಳೆಂಬ ಆಯುಧಗಳಿಂದಲೂ ಮಳೆಗರೆದಳು ಹಾಗೇ ತನ್ನ ಕೇಸರಗಳನ್ನು ಕೊಡವುತ್ತಾ ಭಯಂಕರವಾಗಿ ಗರ್ಜಿಸುತ್ತಾ ಕೋಪದಿಂದ ದೇವಿಯ ವಾಹನವಾದ ಸಿಂಹವು ಸೈನ್ಯದ ಮೇಲೆ ಬಿದ್ದಿತು, ಕೆಲವರನ್ನು ತನ್ನ ಮುಂಗಾಲುಗಳ ಹೊಡೆತದಿಂದಲೂ ಮತ್ತೆ ಕೆಲವರನ್ನು ಮುಖದಿಂದ ಕಚ್ಚುವದರಿಂದಲೂ ಉಳಿದವರನ್ನು ಹಿಂಭಾಗದ ಕಾಲುಗಳಿಂದಲೂ, ಕೆಲವರ ಹೊಟ್ಟೆಗಳನ್ನು ಉಗುರುಗಳಿಂದ ಸೀಳಿತು, ಹಾಗೆಯೇ ಪಂಜಗಳಿಂದ ತಲೆಗಳನ್ನು ತುಂಡುಮಾಡಿತು, ಇನ್ನು ಕೆಲವರು ತಲೆತೋಳುಗಳನ್ನು ಕತ್ತರಿಸಿಕೊಂಡು ಆಕ್ರಮಣಮಾಡಿ ಕ್ಷಣಮಾತ್ರದಲ್ಲಿ ಮಹಾಬಲಶಾಲಿಯಾದ ಆ ಸಿಂಹದಿಂದ ಎಲ್ಲ ಸೈನ್ಯವೂ ನಾಶವನ್ನು ಹೊಂದಿತು, ಹೀಗೆ ಅತಿಕೋಪದಿಂದ ಕುಡಿದ ಆ ದೇವಿಯ ವಾಹನವಾದ ಸಿಂಹವು ಧೂಮ್ರಲೋಚನನೆಂಬ ಆ ರಾಕ್ಷಸನನ್ನು ದೇವಿಯು ಸಂಹಾರ ಮಾಡಿದ್ದನ್ನೂ ಅನಂತರ ದೇವಿಯ ಸಿಂಹವು ಎಲ್ಲಾ ರಾಕ್ಷಸಬಲವನ್ನೂ ನಾಶಮಾಡಿದ್ದನ್ನೂ ಕೇಳಿ ದೈತ್ಯಾಧಿಪನಾದ ಶುಂಭನು ಕೋಪಾವಿಷ್ಠನಾಗಿ ತುಟಿಗಳನ್ನು ಅಳ್ಳಾಡಿಸುತ್ತಾ ಆ ಮಹಾರಾಕ್ಷಸರಾದ ಚಂಡಮುಮಡರುಗಳಿಗೆ ಅಪ್ಪಣೆಮಾಡಿದನು.
    ಎಲೈ ಚಂಡನೆ, ಮುಂಡನೆ, ನೀವುಗಳು ಹೆಚ್ಚಿನ ಸೈನ್ಯಬಲದಿಂದ ಕೊಡಿದವರಾಗಿ ಅಲ್ಲಿಗೆ ಹೋಗಿರಿ ಹೋದನಂತರ ಹಗುರವಾಗಿ ಆಕೆಯನ್ನು ಹಿಡಿದು ತನ್ನಿರಿ, ಒಂದು ವೇಳೆ ನಿಮಗೆ ಯುದ್ಧದಲ್ಲಿ ಜಯವು ಸಂಶಯವಾದರೆ ಆಕೆಯನ್ನು ಕೂದಲುಹಿಡಿದೆಳೆದುಕೊಂಡಾಗಲಿ, ಕಟ್ಟಿಹಾಕಿಯಾಗಲಿ ತನ್ನಿರಿ ಮತ್ತು ಅಂಥ ಸಮಯದಲ್ಲಿ ಎಲ್ಲಾ ರಾಕ್ಷಸರೂ ಸೇರಿ ಎಲ್ಲಾ ಆಯುಧಗಳಿಂದಲೂ ಆಕೆಯು ಹಿಮ್ಮೆಟ್ಟುವಂತೆ ಹೊಡೆಯಿರಿ ಮತ್ತು ಅವಳ ಸಿಂಹವನ್ನು ಕೆಡವಿದ ಮೇಲೆ ಆ ಅಂಬಿಕೆಯನ್ನು ಕಟ್ಟಿಹಿಡಿದುಹಾಕಿ ಬೇಗನೆ ಕರೆತನ್ನಿರಿ.
   
ಚಂಡ ಮುಂಡರ ವಧೆ
ಧ್ಯಾಯೇಯಂ ರತ್ನಪೀಠೇ ಶುಕಕಲಪಠಿತಂ ಶೃಣ್ವಂತೀ ಶ್ಯಾಮಲಾಂಗೀಂ
ನಸ್ತೈಕಾಂಘ್ರಿಂಸರೋಜೇ ಶಶಿಕಲಧರಾಂ ವಲ್ಲಕೀಂ ವಾದಯಂತೀಮ್ |
ಕಲ್ಹಾರಾ ಬದ್ಧಮಾಲಾಂ ನಿಯಮಿತವಿಲಸಚ್ಚೋಲಿಕಾಂ ರಕ್ತವಸ್ತ್ರಾಂ
ಮಾತಂಗೀಂ ಶಂಖಪಾತ್ರಾಂ ಮಧುರಮಧುಮದಾಂ ಚಿತ್ರಕೋದ್ಬಾಸಿಭಾಲಾಮ್ ||
    ರತ್ನಪೀಠದಲ್ಲಿ ಕುಳಿತಿರುವ, ಗಿಳಿಯ ಮಾತುಗಳನ್ನು ಕೇಳುತ್ತಾ ಆನಂದಿಸುತ್ತಿರುವ ನೀಲಶರೀರವುಳ್ಳ ಹಾಗೂ ಕಮಲದ ಮೇಲೆ ಒಂದು ಕಾಲನ್ನು ಇಳಿಬಿಟ್ಟು ಕುಳಿತಿರುವ ಚಂದ್ರನ ಕಲೆಯನ್ನು ಮುಡಿಯಲ್ಲಿ ಧರಿಸಿದವಳಾಗಿ ವೀಣೆಯನ್ನು ನುಡಿಸುತ್ತಾ ಇರುವವಳಾದ ಕಲ್ಹಾರಪುಷ್ಪಗಳಿಂದ ಕಟ್ಟಲ್ಪಟ್ಟ ಮಾಲೆಯನ್ನು ಧರಿಸಿದವಳಾದ ಅಚ್ಚುಕಟ್ಟಾಗಿ ತೊಡಲ್ಪಟ್ಟ ರವಿಕೆಯಿಂದ ವಿರಾಜಮಾನಳಾದ ಕೆಂಪಾದ ಸೀರೆಯನ್ನುಟ್ಟಿರುವ ಶಂಖಪಾತ್ರೆಯನ್ನು ಧರಿಸಿ ರುಚಿಕರವಾದ ಹಾಗೂ ಮದವೇರಿಸುವ ಮದುವನ್ನು ಪಾನಮಾಡುತ್ತಿರುವ ಹಣೆಯಲ್ಲಿ ಕುಂಕುಮವನ್ನು ದರಿಸಿರುವವಳಾದ ಮಾತಂಗಿಯನ್ನು ಧ್ಯಾನಿಸುವೆನು.
    ದೈತ್ಯರುಗಳು ಚತುರಂಗಬಲಸಮೇತರಾಗಿ ಆಯುಧಗಳನ್ನೆತ್ತಿಕೊಂಡು ಹೊರಟರು, ಅವರುಗಳು ದೊಡ್ಡ ಬೆಟ್ಟದ ಚಿನ್ನದ ಶಿಖರದ ಮೇಲೆ ಸಿಂಹವನ್ನೇರಿ ಕುಳಿತು ಸ್ವಲ್ಪ ಮುಗುಳುನಗೆಯಿಂದ ಕೂಡಿದ ಮುಖವುಳ್ಳ ದೇವಿಯನ್ನು ಕಂಡರು. ಆಕೆಯನ್ನು ನೋಡಿದ ತಕ್ಷಣ ಎತ್ತಿಕೊಂಡು ಹೋಗಲು ಪ್ರಯತ್ನವನ್ನಾರಂಭಿಸಿದರು, ಹಾಗೆಯೇ ಅವರ ಜೊತೆಯಲ್ಲಿದ್ದ ಕೆಲವರು ಬಾಣ, ಕತ್ತಿಗಳನ್ನು ಸೆಳೆದವರಾಗಿ ನಿಂತರು ಅನಂತರ ಅಂಬಿಕೆಯು ಆ ಶತ್ರುಗಳ ಮೇಲೆ ಕೋಪಗೊಂಡವಳಾದಳು ಆಗ ಆಕೆಯ ಮುಖವು ಕೋಪದಿಂದ ಕಪ್ಪಿಟ್ಟಿತು, ಆಕೆಯ ಹುಬ್ಬುಗಂಟುಗಳುಳ್ಳ ಹಣೆಯ ಭಾಗದಿಂದ ಬೇಗನೆ ಭಯಂಕರಮುಖವುಳ್ಳ ಕೈಗಳಲ್ಲಿ ಕತ್ತಿಯನ್ನೂ ಪಾಶವನ್ನೂ ಹಿಡಿದವಳೂ ವಿಚಿತ್ರವಾದ ಖಟ್ವಾಂಗವೆಂಬ ಆಯುಧ, ರುಂಡಮಾಲೆಗಳ ಅಲಂಕಾರ, ಆನೆಯ ಚಮ್ದ ಉಡುವ ಬಟ್ಟೆಯುಳ್ಳವಳೂ, ಒಣಗಿದ ಮಾಂಸವಿಲ್ಲದ ದೇಹಧಾರಿಣಿಯಾದ ಬಹಳ ಭಯಂಕರಳೂ ಬಹಳ ಅಗಲವಾಗಿ ತೆರದ ಬಾಯುಳ್ಳವಳೂ ನಾಲಗೆಯನ್ನು ಅಳ್ಳಾಡಿಸುವದರಿಮದ ಅತಿಭಯಂಕರಳೂ ಆಗಿ ಕಾಣುವ ಸುತ್ತಲೂ ಕೆಂಪಾದ ಕಣ್ಣುಗಳುಳ್ಳವಳೂ ತನ್ನ ಘರ್ಜನೆಯಿಂದ ದಿಗಂತಗಳನ್ನೆಲ್ಲ ತುಂಬಿದವಳೂ ಆದ ಕಾಳಿಯು ಹೊರಬಂದಳು.
    ಆಕೆಯು ವೇಗದಿಂದ ಮೇಲೆ ಬಿದ್ದವಳಾಗಿ ಮಹಾರಾಕ್ಷಸರುಗಳನ್ನು ಕೊಲ್ಲುತ್ತ ಆ ರಕ್ಕಸರ ಸೈನ್ಯದಲ್ಲಿನ ಚತುರಂಗ ಬಲವೆಲ್ಲವನ್ನೂ ತಿನ್ನಲಾರಂಭಿಸಿದಳು ಆನೆಗಳ ಅಕ್ಕಪಕ್ಕಗಳನ್ನು ಹಿಡಿದಿದ್ದ ಹಾಗೂ ಅಂಕುಶವನ್ನು ಹಿಡಿದು ಮೇಲೆ ಕುಳಿತಿದ್ದ ಭಟರು ಅವುಗಳಿಗೆ ಕಟ್ಟಿದ್ದ ಗಂಟೆಗಳು ಎಲ್ಲದರ ಸಮೇತವಾಗಿ ಒಂದೇ ಕೈಯಿಂದ ಆನೆಗಳನ್ನೆತ್ತಿ ಬಾಯಿಗೆ ತುರುಕಿಕೊಂಡಳು ಹಾಗೆಯೇ ಕುದುರೆ ಸಮೇತನಾದ ಯೋಧನನ್ನೂ ಸಾರಥಿ ಸಹಿತವಾದ ರಥವನ್ನೂ ಬಾಯೊಳಗೆ ಹಾಕಿಕೊಂಡು ಹಲ್ಲುಗಳಿಂದ ಆಗಿಯುತ್ತಾ ಅತಿಭಯಂಕರಳಾಗಿ ಕಂಡಳು, ಒಬ್ಬ ರಾಕ್ಷಸನನ್ನು ಜುಟ್ಟು ಹಿಡಿದವಳಾಗಿಯೂ ಬೇರೊಬ್ಬನನ್ನು ಕುತ್ತಿಗೆ ಹಿಡಿದವಳಾಗಿಯು ಮತ್ತೊಬ್ಬನನ್ನು ಕಾಲಿನಿಂದ ಮೆಟ್ಟಿದವಳಾಗಿಯೂ ಇನ್ನೊಬ್ಬನ್ನು ಎದೆಯಿಂದ ತಳ್ಳಿದವಳಾಗಿಯೂ ಕೆಡವಿಬಿಟ್ಟಳು ಅವರುಗಳು ಪ್ರಯೋಗಿಸಿದ ಶಸ್ತ್ರಾಸ್ತ್ರಗಳನ್ನೂ ಹಾಗೂ ಉಳಿದ ರಾಕ್ಷಸರುಗಳು ಬಳಸಿದವುಗಳನ್ನು ಕೋಪದಿಂದ ಕೂಡಿ ಬಾಯಿಂದಲೇ ನುಂಗಿದಳು ಕೆಲವರನ್ನು ಕಬ್ಬಿನಂತೆ ಅಗಿದುಗುಳಿಬಿಟ್ಟಳು ಹೀಗೆ ರಾಕ್ಷಸರೆಲ್ಲರೂ ನಾಶವಾಗಿಬಿಟ್ಟರು.
    ರಾಕ್ಷಸರ ಬಲವೆಲ್ಲವೂ ಕ್ಷಣಮಾತ್ರದಲ್ಲಿ ಕೆಳಕ್ಕೆ ಕೆಡವಲ್ಪಟ್ಟಿತು ಇದನ್ನು ನೋಡಿ ಆ ಅತಿಭಯಂಕರಳಾದ ಕಾಳಿಯ ಮೆಲೆ ಚಂಡನು ನುಗ್ಗಿದನು ಭಯಂಕರವಾದ ಕಣ್ಣುಗಳುಳ್ಳ ಆಕೆಯನ್ನು ಆ ಮಹಾರಾಕ್ಷಸನಾದ ಮುಂಡನು ಬಾಣಗಳ ಮಳೆಯಿಂದಲೂ ಸಹಸ್ರಾರು ಚಕ್ರಪ್ರಯೋಗಗಳಿಂದಲೂ ಮುಚ್ಚಿದನು ಆ ಚಕ್ರಗಳೆಲ್ಲವೂ ಆಕೆಯ ಮುಖವನ್ನು ಪ್ರವೇಶಮಾಡಿದವುಗಳಾಗಿ ಮೋಡಗಳನ್ನು ಪ್ರವೇಶಮಾಡಿರುವ ಸೂರ್ಯಬಿಂಬಗಳಂತೆ ಹೊಳೆಯುತ್ತಿದ್ದವು ಭಯಂಕರಧ್ವನಿಯುಳ್ಳ ಆ ದೇವಿಯು ಬಹು ಕೋಪದಿಂದ ಗಟ್ಟಿಯಾಗಿ ನಕ್ಕಳು ಆಗ ಆ ಕಾಳಿಯು ಭಯವುಂಟುಮಾಡುವ ಬಾಯೊಳಗೆ ಹೊಳೆಯುವ ಹಲ್ಲುಗಳುಳ್ಳವಳಾಗಿದ್ದು ನೋಡಲುಸಾಧ್ಯಳಾಗಿದ್ದಳು ಅಂಥ ದೇವಿಯು ತಾನು ಮೇಲೆದ್ದು ಸಿಂಹವನ್ನೂ ಎಬ್ಬಿಸಿ ಚಂಡನಮೇಲೆ ಎರಗಿದಳು ಅವನ ಕೂದಲುಗಳನ್ನು ಹಿಡಿದು ಕತ್ತಿಯಿಂದ ಅವನ ತಲೆಯನ್ನು ತುಂಡರಿಸಿಬಿಟ್ಟಳು.
    ಚಂಡನು ಬಿದ್ದುದನ್ನು ಕಂಡು ಮುಂಡನೂ ಆಕೆಯ ಮೇಲೆ ಮುನ್ನುಗ್ಗಿದನು ಅವಳು ಅವನ್ನು ಕೋಪದಿಮದ ಕತ್ತಿಯಿಂದ ತುಂಡುಮಾಡಿ ಕೆಳಗೆ ಕೆಡವಿಬಿಟ್ಟಳು ಇದನ್ನೆಲ್ಲಾ ನೋಡಿದ ಸೈನ್ಯವು ದಿಕ್ಕಾಪಾಲಾಗಿ ಓಡಿಹೋಯಿತು, ಕಾಳಿಯು ಚಂಡನ ತಲೆಯನ್ನೂ ಮತ್ತು ಮುಂಡನ ತಲೆಯನ್ನು ತೆಗೆದುಕೊಂಡು ಚಂಡಿಕೆಯ ಬಳಿಗೆ ಬಂದು ಅಟ್ಟಹಾಸದಿಂದ ಕುಡಿದವಳಾಗಿ ಹೀಗೆಂದಳು : "ಚಂಡ-ಮುಡರೆಂಬ ಈ ಮಹಾಪಶುಗಳನ್ನು ನಿನಗೆ ಕಾಣಿಕೆಯಾಗಿ ತಂದಿರುವೆನು. ಇನ್ನು ಮುಂದೆ ಯುದ್ಧಯಜ್ಞದಲ್ಲಿ ನೀನೇ ಸಾಕ್ಷಾತ್ತಾಗಿ ಶುಂಭ-ನಿಶುಂಭ'ರನ್ನು ಕೊಲ್ಲುವೆಯಂತೆ" ಎಂದಳು.
    ಮಂಗಳೆಯಾದ ಚಂಡಿಕೆಯು ಕಾಳಿಯನ್ನು ನೋಡಿ ಆಕೆಯು ಆ ಚಂಡಮುಂಡರೆಂಬ ಮಹಾರಾಕ್ಷಸರನ್ನು ಸಂಹರಿಸಿ ತಂದಿದ್ದ ತಲೆಗಳನ್ನು ಕಂಡು "ಎಲೆ, ನೀನು ಚಂಡನನ್ನು ಮುಂಡನನ್ನೂ ಸಂಹರಿಸಿರುವುದರಿಮದ ಇನ್ನು ಮುಂದೆ ಲೋಕದಲ್ಲಿ ಚಾಮುಂಡಿಯೆಂದೇ ಪ್ರಸಿದ್ಧಳಾಗುವೆ ಎಂದು ಹರಸಿದಳು.

ರಕ್ತಬೀಜ ವಧೆ
ಅರುಣಾಂ ಕರುಣಾತರಂಗಿತಾಕ್ಷೀಂ ಧೃತಪಾಶಾಂಕುಶಬಾಣಚಾಪಹಸ್ತಾಮ್ |
ಅಣಿಮಾದಿಭಿರಾವೃತಾಂ ಮಯೂಖೈರಹಮಿತ್ಯೇವ ವಿಭಾವಯೇ ಭವಾನೀಮ್ ||
    ತಿಳಿಗೆಂಪು ಬಣ್ಣದವಳೂ, ಕರುಣೆಯಿಂದ ಚಂಚಲವಾದ ಕಣ್ಣುಗಳುಳ್ಳವಳೂ, ಪಾಶ, ಅಂಕುಶ, ಬಾಣ, ಬಿಲ್ಲುಗಳಿಂದಲಂಕೃತವಾದ ಕೈಗಳುಳ್ಳವಳೂ ಆಣಿಮಾದಿ ಸಿದ್ಧಿಗಳೆಂಬ ಕಿರಣಗಳಿಂದ ಅವೃತಳಾದ ಭವಪತ್ನಿಯಾದ ಅಂಬಿಕೆಯನ್ನು ನಾನೇ ಎಂದುಕೊಮಡು ಧ್ಯಾನಿಸುವೆನು.
    ದೈತ್ಯನಾದ ಚಂಡನೂ ಮುಂಡನೂ ನಾಶವಾಗಲಾಗಿ ಹಾಗೂ ಬಹಳವಾದ ರಾಕ್ಷಸ ಸೈನ್ಯವೂ ಕ್ಷೀಣವಾಗಲಾಗಿ, ಪ್ರತಾಪಶಾಲಿಯಾದ ಶುಂಭನು ಕೋಪಕ್ಕೆ ವಶವಾದ ಚಿತ್ತವುಳ್ಳವನಾಗಿ ರಾಕ್ಷಸರ ಎಲ್ಲಾ ಸೈನ್ಯಕ್ಕೂ ಯುದ್ಧ ಕರ್ಮವನ್ನು ಮಾಡುವಂತೆ ಅಪ್ಪಣೆ ಮಾಡಿದನು, ಎಲೈ ದೈತ್ಯರುಗಳಿರ, ನೀವು ಎಲ್ಲಾ ಸೈನ್ಯಗಳನ್ನೂ ಹೊರಡಿಸಿಕೊಂಡು ಆಯುಧಗಳನ್ನೆತ್ತಿದವರಾಗಿ ಹಾಗೆಯೇ ಕಂಬು ಎಂಬ ಹೆಸರಿನ ಎಂಬತ್ತುನಾಲ್ಕು ಬಗೆಯ ರಕ್ಕಸರು ತಮ್ಮ ಬಲಗಳೊಡನೆ ಕೂಡಿದವರಾಗಿ ಹೊರಡಲಿ, ಐವತ್ತು ಕುಲಗಳ ಕೋಟಿವೀರ್ಯರಾದ ಅಸುರರೂ ಧೌಮ್ರರೆಂಬ ಹೆಸರಿನ ನೂರುಕುಲದವರೂ ನನ್ನ ಅಪ್ಪಣೆಯಂತೆ ಹೊರಡಲಿ ಇನ್ನು ಕಾಲಕರು, ದೌರ್ಹೃದರು, ಕಾಲಕೇಯರು, ಇವರುಗಳೂ ನನ್ನ ಆಜ್ಞೆಯಂತೆ ಬೇಗನೆ ಯುದ್ಧಕ್ಕೆ ಸನ್ನದ್ಧರಾಗಿ ಹೊರಡಲಿ". ಹೀಗೆಂದು ಆ ರಾಕ್ಷಸರೊಡೆಯನೂ ಭಯಂಕರವಾದ ಆಜ್ಞೆಯುಳ್ಳವನೂ ಆದ ಶುಂಭನು ಅಪ್ಪಣೆಮಾಡಿದವನಾಗಿ ಸಹಸ್ರಸಂಖ್ಯೆಯ ಮಹಾಸೈನ್ಯದಿಂದಲೂ ಬಹು ರಾಕ್ಷಸರಿಂದಲೂ ಕೂಡಿದವಾಗಿ ಹೊರಟನು.
    ಅತಿಭಯಂಕರವಾದ ಆ ರಾಕ್ಷಸ ಸೈನ್ಯವು ಬರುತ್ತಿರುವದನ್ನು ಕಂಡ ಆ ಚಂಡಿಕೆಯು ಭೂಮ್ಯಾಕಾಶಗಳ ನಡುವನ್ನೆಲ್ಲ ತನ್ನ ಬಿಲ್ಲಿನ ಹಗ್ಗದ ನಾದದಿಂದ ತುಂಬಿಬಿಟ್ಟಳು ಅನಂತರ ಸಿಂಹವು ಅತಿಯಾಗಿ ಬಹಳ ಗಟ್ಟಿಯಾಗಿ ಘರ್ಜಿಸುತ್ತಾ ಇತ್ತು ಅಂಬಿಕೆಯು ತನ್ನಲ್ಲಿದ್ದ ಘಂಟೆಯನ್ನು ಬಾರಿಸುವದರ ಮೂಲಕ ಆ ಧ್ವನಿಯನ್ನು ಇನ್ನೂ ಎತ್ತರಿಸಿಬಿಟ್ಟಳು ಹೀಗೆ ಬಿಲ್ಲಿನ ಹಗ್ಗದ, ಸಿಂಹದ ಹಾಗೂ ಘಂಟೆಯ ನಾದಗಳು ಒಟ್ಟುಗೂಡಿ ದಿಕ್ಕುಗಳೆಲ್ಲವೂ ಧ್ವನಿಯಿಂದ ತುಂಬಿಹೋಗಲಾಗಿ ಕಾಳಿಯು ಬಾಯಿಯನ್ನು ತೆರೆದುಕೊಂಡವಳಾಗಿ ಶಬ್ದದಿಂದ ರಾಕ್ಷಸರನ್ನೆಲ್ಲ ಗೆದ್ದಳು. ಆ ದೊಡ್ಡ ಧ್ವನಿಯನ್ನು ಕೇಳಿ ಕೋಪದಿಂದ ಕೂಡಿದ ರಾಕ್ಷಸ ಸೈನ್ಯವು ನಾಲ್ಕು ದಿಕ್ಕುಗಳಿಂದಲೂ ದೇವಿಯನ್ನೂ ಹಾಗೂ ಸಿಂಹ, ಕಾಳಿಯರನ್ನೂ ಅವರಿಸಿಬಿಟ್ಟವು. ಈ ನಡುವೆ ದೇವಶತ್ತುಗಳ ನಾಶಕ್ಕಾಗಿ ಹಾಗೂ ದೇವಶ್ರೇಷ್ಠರುಗಳ ಉದ್ಧಾರಕ್ಕಾಗಿ ಹೆಚ್ಚಿನ ಬಲ, ವೀರ್ಯಗಳಿಂದ ಕೂಡಿದ ಬ್ರಹ್ಮ, ಈಶ್ವರ, ಷಣ್ಮುಖ, ವಿಷ್ಣು, ಹಾಗೂ ಇಂದ್ರ ಶರೀರಗಳಿಂದ ಹೊರಬಿದ್ದು ಆಯಾ ಶಕ್ತಿದೇವತೆಗಳು ಆಯಾ ರೂಪದಿಂದಲೇ ಚಂಡಿಕೆಯ ಹತ್ತಿರಕ್ಕೆ ಸಾರಿದರು ಯಾವ ದೇವತೆಗೆ ಯಾವ ರೂಪವೋ ಯಾವ ಒಡವೆ-ವಾಹನಗಳೋ ಹಾಗೆಯೇ ಆ ಶಕ್ತಿದೇವತೆಯೂ ಧರಿಸಿಕೊಂಡು ರಾಕ್ಷಸರೊಡನೆ ಯುದ್ಧಮಾಡಲು ಹೊರಟಳು.
    ಹಂಸದಿಂದ ಕೂಡಿದ ಶ್ರೇಷ್ಠವಾದ ವಿಮಾನದಲ್ಲಿ ಕುಳಿತು ಜಪಸರ, ಕಮಂಡಲುಗಳನ್ನು ಹಿಡಿದಿರುವ ಬ್ರಹ್ಮನ ಶಕ್ತಿಯು ದೇವೀರೂಪದಿಂದ ಹೊರಬಂದಳು ಆಕೆಯನ್ನು ಬ್ರಹ್ಮಾಣೀ ಎನ್ನುವರು. ಹಾಗೆಯೇ ಎತ್ತಿನ ವಾಹನವನ್ನೇರಿ ಶ್ರೇಷ್ಠವಾದ ತ್ರಿಶೂಲವನ್ನು ಹಿಡಿದು ದೊಡ್ಡ ಸರ್ಪಗಳನ್ನೇ ಬಳೆಗಳಾಗಿ ಧರಿಸಿದಂಥ ಚಂದ್ರಕಲೆಯಿಂದಲಂಕೃತವಾದ ಮುಡಿಉಳ್ಳ ಮಾಹೇಶ್ವರಿಯೂ ಬಂದಳು ಇನ್ನು ಶಕ್ತ್ಯಾಯುಧವನ್ನು ಕೈಯಲ್ಲಿ ಹಿಡಿದು ಶ್ರೇಷ್ಠವಾದ ನವಿಲನ್ನು ವಾಹನವಾಗಿ ಮಾಡಿಕೊಂಡವಳಾದ ಕುಮಾರ ಸ್ವಾಮಿಯ ಶಕ್ತಿ ರೂಪಿಣಿಯಾದ ಕೌಮಾರೀದೇವಿಯು ರಾಕ್ಷಸರೊಡನೆ ಕಾದಾಡುವದಕ್ಕಾಗಿ ಹೊರಟುಬಂದಳು. ಹಾಗೆಯೇ ಗರುಡನನ್ನೇರಿ ಬಂದ ಮತ್ತು ಶಂಖ, ಚಕ್ರ, ಗದೆ, ಶಾಙ್ಗವೆಂಬ ಬಿಲ್ಲು, ಕತ್ತಿಗಳನ್ನು ಕೈಯಲ್ಲಿ ಹಿಡಿದಿರುವ ವೈಷ್ಣವೀ ಶಕ್ತಿಯು ಅಲ್ಲಿ ಕಾಣಿಸಿಕೊಂಡಳು ಶ್ರೀಹರಿಯ ಮಹತ್ತಾದ ಯಜ್ಞವರಾಹ ರೂಪವನ್ನು ಧರಿಸಿದ ವಾರಾಹೀ ಎಂಬ ಆ ಶಕ್ತಿಯೂ ವರಾಹದ ಶರೀರವನ್ನು ಧರಿಸಿ ಬಂದಳು ನಾರಸಿಂಹೀ ಶಕ್ತಿಯಾದರೂ ನರಸಿಂಹನಿಗೆ ಸಮಾನವಾದ ಶರೀರವನ್ನು ಧರಿಸಿ ಕೇಸರಗಳನ್ನು ಕೊಡುವುದರ ಮೂಲಕ ನಕ್ಷತ್ರಗಳ ಗುಂಪನ್ನೇ ಚದುರಿಸುವವಳಾಗಿ ಬಂದಳು. ಹಾಗೆಯೇ ವಜ್ರಾಯುಧಧಾರಿಣಿಯಾದ ಗಜರಾಜನನ್ನೇರಿ ಬಂದ ಮತ್ತು ಇಂದ್ರನಂತೆಯೇ ಸಾವಿರಕಣ್ಣುಗಳುಳ್ಳ ಐಂದ್ರೀಯಶಕ್ತಿಯು ಅಲ್ಲಿಗೆ ಬಂದಳು ಅನಂತರ ಆ ಎಲ್ಲಾ ದೇವಶಕ್ತಿ ಸಮೂಹದಿಂದಲೂ ಸುತ್ತುವರೆಯಲ್ಪಟ್ಟ ಈಶ್ವರನು ಚಂಡಿಕೆಯನ್ನು ಕುರಿತು ರಾಕ್ಷಸರನ್ನೆಲ್ಲ ನನ್ನ ಪ್ರೀತಿಗಾಗಿ ಕೊಲ್ಲಿರಿ ಎಂದು ಹೇಳಿದನು. ಅನಂತರ ದೇವಿಯ ಶರೀರದಿಂದ ಹೊರಬಂದ ಅತಿಭಯಂಕರವಾದ ಹಾಗೂ ನೂರು ನರಿಗಳ ಕೂಗಿನಂತೆ ಧ್ವನಿಯುಳ್ಳ ದಾರುಣವಾದ ಯಾರಿಂದಲೂ ಸೋಲಿಸಲಾಗದ ಆ ಚಂಡಿಕಾಶಕ್ತಿಯು, ಹೊಗೆಯಂತೆ ಕಂಡು ಬಣ್ಣದ ಜಡೆಯುಳ್ಳ ಈಶ್ವರನನ್ನು ಕುರಿತು 'ಎಲೈ ಪೂಜ್ಯನೆ, ನೀನು ಶುಂಭ ನಿಶುಂಭರ ಬಳಿಗೆ ಹೋಗುವವನಾಗಿ ಬಹಳವಾಗಿ ಕೊಬ್ಬಿ ಹೋಗಿರುವ ಆ ದಾನವರಾದ ಶುಂಭನಿಶುಂಭರಿಗೂ ಇನ್ನು ಯುದ್ಧಮಾಡಲೆಳಸಿ ಹೊರಟಿರುವ ಉಳಿದ ದಾನವರಿಗೂ ಹೀಗೆಂದು ಹೇಳುವವನಾಗು ಎಂದಳು.
    "ಇಂದ್ರನು ತ್ರೈಲೋಕ್ಯದ ಒಡೆತನವನ್ನು ಪಡೆಯಲಿ; ದೇವತೆಗಳು ಹವಿರ್ಭಾಗವನ್ನು ಉಣ್ಣುವಂತಾಗಲಿ! ನೀವೆಲ್ಲರೂ ಬದುಕಲು ಆಸೆಯಿದ್ದರೆ ಪಾತಾಳಕ್ಕೆ ಹೋಗಿರಿ, ಹಾಗಿಲ್ಲದೆ ತೋಳು ಬಲದ ಗರ್ವದಿಂದ ನೀವುಗಳೇನಾದರೂ ಯುದ್ಧವನ್ನು ಬಯಸುವಿರಾದರೆ ಆಗ ಬನ್ನಿರಿ ನಿಮ್ಮಗಳ ಮಾಂಸದಿಂದ ನಮ್ಮ ನರಿಗಳು ತೃಪ್ತರಾಗಲಿ!" ಯಾವ ದೇವಿಯಿಂದ ಶಿವನೇ ಸಾಕ್ಷಾತ್ತಾಗಿ ದೂತನ ಕೆಲಸದಲ್ಲಿ ನೇಮಿಸಲ್ಪಟ್ಟನೋ ಆ ಕಾರಣದಿಂದ ಲೋಕದಲ್ಲಿ ದೇವಿಯು ಶಿವದೂತಿ ಎಂದು ಪ್ರಸಿದ್ಧಳಾದಳು ಶಿವನು ತಿಳಿಸಿದ ಮಾತನ್ನು ಕೇಳಿ ಆ ಮಹಾಸುರರು ಕೋಪದಿಂದ ಕೆರಳಲ್ಪಟ್ಟವರಾಗಿ ಕಾತ್ಯಾಯನಿಯು ಇದ್ದ ಬಳಿಗೆ ಹೊರಟರು ಮೊದಲೇ ಬಾಣ, ಶಕ್ತ್ಯಾಯುಧ, ಋಷ್ಟಿ ಎಂಬ ಶಸ್ತ್ರಗಳನ್ನು ಮಳೆಗರೆದರು ಆ ದೇವಿಯನ್ನು ಹೀಗೆ ಆ ದೇವಶತ್ರುಗಳು ಮೇಲೆದ್ದು ಕೋಪದಿಂದ ಎದುರಿಸಿದರು. ಆಕೆಯಾದರೊ, ಆ ರಾಕ್ಷಸರು ಪ್ರಯೋಗಿಸಿದ ಬಾಣಗಳನ್ನೂ ಶೂಲ, ಶಕ್ತಿ, ಪರಶ್ವಧ-ಮುಂತಾದ ಆಯುಧಗಳನ್ನೂ ಲೀಲಾಮಾತ್ರದಿಂದ ಹೆದೆಯೇರಿಸಿದ ತನ್ನ ಧನುಸ್ಸಿನಿಂದ ಹೊರಬಿದ್ದ ಮಹಾಬಾಣಗಳಿಂದ ಕತ್ತರಿಸಿದಳು, ಆಕೆಯ ಮುಂಭಾಗದಲ್ಲಿ ಕಾಳಿಕಾದೇವಿಯ ಶತ್ರುಗಳನ್ನು ಶೂಲದ ಹೊಡೆತಗಳಿಂದ ಸೀಳಿದವರನ್ನಗಿಯೂ ಖಟ್ವಾಂಗವೆಂಬ ಆಯುಧದಿಂದ ಜಜ್ಜಲ್ಪಟ್ಟವರನ್ನಾಗಿಯೂ ಮಾಡುತ್ತಾ ಸಂಚರಿಸಿದಳು. ಬ್ರಹ್ಮಾಣಿಯು ತನ್ನ ಕಮಂಡಲುವಿನ ನೀರನ್ನು ಎಸೆಯುವದರಿಂದ ಹಿಮ್ಮೆಟ್ಟಿಸಲ್ಪಟ್ಟ ವೀರ್ಯ ಹಾಗೂ ಶಕ್ತಿಯುಳ್ಳವರನ್ನಾಗಿ ಶತ್ರುಗಳನ್ನು ತಾನು ಯಾರುಯಾರನ್ನು ಅಟ್ಟಿಸಿಕೊಮಡು ಹೋದಳೋ ಅಲ್ಲೆಲ್ಲ ಪರಾಭೂತರನ್ನಾಗಿ ಮಾಡಿದಳು. ಹಾಗೆಯೇ ಮಾಹೇಶ್ವರಿಯು ತ್ರಿಶೂಲದಿಂದಲೂ ವೈಷ್ಣವಿಯು ಚಕ್ರದಿಂದಲೂ ಅತಿ ಸಿಟ್ಟಾದ ಕೌಮಾರಿಯು ಶಕ್ತ್ಯಾಯುಧದಿಂದಲೂ ರಾಕ್ಷಸರನ್ನು ಸಂಹರಿಸಿದರು ನೂರಾರು ದೈತ್ಯದಾನವರು ಐಂದ್ರೀಯದೇವಿಯ ವಜ್ರಾಯುಧದ ಹೊಡೆತದಿಂದ ಸೀಳಲ್ಪಟ್ಟು ರಕ್ತದ ಪ್ರವಾಹವನ್ನು ಹರಿಸುತ್ತಾ ಭೂಮಿಯಲ್ಲಿ ಬಿದ್ದರು. ವಾರಾಹೀಮೂರ್ತಿದೇವಿಯ ಮುಸುಡಿಯ ಹೊಡೆತದಿಂದ ಪುಡಿಯಾದ ಹಾಗೂ ಹೊರಚಾಚಿದ್ದ ಹಲ್ಲುಗಳ ತುದಿಯಿಂದ ಗಾಯಗೊಳಿಸಲ್ಪಟ್ಟ ಎದೆಯುಳ್ಳ ರಾಕ್ಷಸರು ಮತ್ತು ಚಕ್ರಾಯುಧದಿಂದ ಸೀಳಲ್ಪಟ್ಟ ದೈತ್ಯರು ಸಹ ಕೆಳಗೆ ಬಿದ್ದರು ನಾರಸಿಂಹೀಶಕ್ತಿದೇವಿಯು ತನ್ನ ಧ್ವನಿಯ ವೇಗದಿಂದ ದಿಕ್ಕುಗಳನ್ನೆಲ್ಲ ತುಂಬುತ್ತಾ ಕೆಲವರು ಮಹಾರಾಕ್ಷಸರನ್ನು ಉಗುರುಗಳಿಂದ ಸೀಳುತ್ತಾ ಕೆಲವರನ್ನು ತಿಂದುಹಾಕುತ್ತಾ ಯುದ್ಧರಂಗದಲ್ಲಿ ಸಂಚರಿಸಿದಳು ಶಿವದೂತಿಯ ಭಯಂಕರವಾದ ಅಟ್ಟಹಾಸಗಳಿಂದ ವಿಮೋಹಿತರಾಗಿ ರಾಕ್ಷಸರು ಮೂರ್ಛೆಹೊಂದಿದವರಾಗಿ ನೆಲದ ಮೇಲೆ ಬಿದ್ದರು ಆಕೆಯು ಅವರನ್ನೆಲ್ಲ ತಿಂದುಬಿಟ್ಟಳು.
    ಹೀಗೆ ಕುಪಿತರಾದ ಮಾತೃಗಣದೇವಿಯರು ಮಹಾರಾಕ್ಷಸರನ್ನು ನಾನಾರೀತಿಯ ಉಪಾಯಗಳಿಂದ ಸದೆಬಡಿಯುತ್ತಿರುವದನ್ನು ಕಂಡ ರಾಕ್ಷಸ ಸೈನಿಕರು ಯುದ್ಧರಂಗದಲ್ಲಿ ನಿಲ್ಲಲು ಸಮರ್ಥರಾಗಲಿಲ್ಲ ಮಾತೃಗಣದವರಿಂದ ಹಿಮ್ಮೆಟ್ಟಿಸಲ್ಪಟ್ಟು ಓಡಿಹೋಗುತ್ತಿರುವ ರಕ್ಷಸರನ್ನು ನೊಡಿ ಕುಪಿತನಾದ ಮಹಾಸುರನಾದ ರಕ್ತಬೀಜನು ಯುದ್ಧ ಮಾಡಲೆಳಸಿದವನಾಗಿ ಹೊರಟನು ಅವನ ದೇಹದಿಂದ ಒಂದು ಹನಿ ರಕ್ತವು ಯಾವಾಗಿ ಭೂಮಿಗೆ ಬೀಳುವದೋ ಆ ಕೂಡಲೆ ಅವನಷ್ಟೆ ಪ್ರಮಾಣದ ಬಲವೀರ್ಯಾದಿಸಂಪನ್ನನಾದ ರಾಕ್ಷಸನು ಹುಟ್ಟುತ್ತಿದ್ದನು. ಗದಧಾರಿಯಾದ ಆ ಮಹಾರಾಕ್ಷಸನು ಯುದ್ಧಮಾಡಲಾರಂಬಿಸಿದನು ಅನಂತರ ಐಂದ್ರೀಶಕ್ತಿಯು ತನ್ನ ವಜ್ರಾಯುಧದಿಂದ ರಕ್ತಬೀಜನನ್ನು ಹೊಡೆದಳು ವಜ್ರಾಯುಧದಿಂದ ಹೊಡೆಯಲ್ಪಟ್ಟ ಅವನ ಶರೀರದಿಂದ ಬಹಳವಾಗಿ ರಕ್ತವು ಹರಿಯಿತು ನಂತರ ಅವನಂತೆಯೇ ಆಕಾರ ಪರಾಕ್ರಮಗಳುಳ್ಳ ಯೋಧರು ಮೇಲೆದ್ದು ಬಂದರು ಅವನಷ್ಟೇ ಬಲವೀರ್ಯ ಪರಾಕ್ರಮಸಂಪನ್ನರಾದ ರಾಕ್ಷಸರು ದೇಹದಿಂದ ರಕ್ತದ ಹನಿಗಳು ಎಷ್ಟು ಬಿದ್ದವೋ ಅಷ್ಟೇ ಸಂಖ್ಯೆಯವರು ಹುಟ್ಟಿಬಂದರು.
    ರಕ್ತದಿಂದ ಹುಟ್ಟಿಬಂದ ಆ ರಾಕ್ಷಸರೂ ಮಾತೃಗಣಗಳೊಡನೆ ಭಯಂಕರವಾದ ಶಸ್ತ್ರಗಳ ಪ್ರಯೋಗಗಳಿಂದ ದಾರುಣವಾಗಿ ಯುದ್ಧ ಮಾಡಿದರು ಮತ್ತೆ ರಕ್ತಬೀಜನ ತಲೆಯು ವಜ್ರಾಯುಧದ ಏಟಿನಿಂದ ಗಾಯವಾದೊಡನೆಯೇ ರಕ್ತವು ಹರಿಯಿತು ಅದರಿಂದ ಸಾವಿರಾರು ಪುರುಷರು ಹುಟ್ಟಿದರು. ಯದ್ದದಲ್ಲಿ ಇವನನ್ನು ವೈಷ್ಣವಿಯು ಚಕ್ರದಿಂದ ಹೊಡೆದಳು, ಐಂದ್ರಿಯು ಆ ಅಸುರಮುಖ್ಯನನ್ನು ಗದೆಯಿಂದ ಹೊಡೆದಳು ವೈಷ್ಣವಿಯು ಚಕ್ರಾಯುಧದಿಂದ ಸೀಳಿದ ಶರೀರದಿಂದ ಹರಿದುಬಂದ ರಕ್ತದ ಕೋಡಿಯಿಂದ ಲೋಕವೆಲ್ಲವೂ ಅಷ್ಟೇ ಸಹಸ್ರಾರು ಸಂಖ್ಯೆಯ ಮಹಾರಾಕ್ಷಸರ ಗುಂಪಿನಿಂದ ತುಂಬಿಹೋಯಿತು, ಕೌಮಾರೀದೇವಿಯು ತನ್ನ ಶಕ್ತ್ಯಾಯುಧದಿಂದಲೂ ವಾರಾಹಿಯು ತನ್ನ ಕತ್ತಿಯಿಂದಲೂ ಮಾಹೇಶ್ವರಿಯು ತ್ರಿಶೂಲದಿಂದಲೂ ಆ ಮಹಾಸುರನಾದ ರಕ್ತಬೀಜನನ್ನು ಹೊಡೆದರು ಆ ದೈತ್ಯನಾದ ರಕ್ತಬೀಜ ರಾಕ್ಷಸನು ಕೂಡ ಕೋಪಗೊಂಡವನಾಗಿ ಎಲ್ಲ ಮಾತೃಕೆಯರನ್ನು ಬೇರೆ ಬೇರೆಯಾಗಿ ಹೊಡೆದನು, ದೇವಿಯರಿಂದ ಬಹಳವಾಗಿ ಶಕ್ತಿಶೂಲಾಧ್ಯಾಯುಧಗಳಿಂದ ಮರ್ದಿಸಲ್ಪಟ್ಟ ಆ ರಾಕ್ಷಸನ ಶರೀರದಿಮದ ಯಾವ ರಕ್ತಪ್ರವಾಹವು ಹರಿಯಿತೋ ಅದರಿಂದ ನೂರಾರುಗಟ್ಟಳೆ ರಾಕ್ಷಸರು ಉಂಟಾದರು ರಾಕ್ಷಸನ ರಕ್ತದಿಂದ ಹುಟ್ಟಿದ ಅಸುರರಿಮದ ಇಡಿಯ ಜಗತ್ತೆಲ್ಲವೂ ತುಂಬಿಹೋಗಿಬಿಟ್ಟಿತು ಅನಂತರ ದೇವತೆಗಳು ಹೆಚ್ಚಿನ ಭಯವನ್ನು ಹೊಂದಿದರು ಹೀಗೆ ಕುಸಿದು ಹೋದ ದೇವತೆಗಳನ್ನು ಕಂಡು ಬೇಗನೆ ಚಂಡಿಕೆಯು ಕಾಲಿಯನ್ನು ಕುರಿತು 'ಚಾಮುಂಡಿಯೇ ನೀನು ಬಾಯನ್ನು ಅಗಲಿಸುವವಳಾಗು ಎಂದಳು.
    ನನ್ನ ಶಸ್ತ್ರದ ಹೊಡೆತದಿಂದ ರಕ್ತಬೀಜನ ದೇಹದಿಂದ ಹೊರಬೀಳುವ ರಕ್ತದ ಹನಿಗಳನ್ನೂ ಅವುಗಳಿಂದ ಹುಟ್ಟುವ ರಾಕ್ಷಸರನ್ನೂ ನೀನು ಭಯಂಕರವಾದ ಮುಖದಿಂದ ಸ್ವೀಕರಿಸುವವಳಾಗು ಹಾಗೂ ಆ ರಕ್ತೋತ್ಪನ್ನರಾದ ರಾಕ್ಷಸರನ್ನೂ ತಿನ್ನುವವಳಾಗಿ ಯುದ್ಧದಲ್ಲಿ ಸಂಚರಿಸುತ್ತಿರು ಹೀಗಾದರೆ ಆ ರಾಕ್ಷಸನು ರಕ್ತವನ್ನು ಕಳೆದುಕೊಂಡವನಾಗಿ ಸಾಯುವನು ರಕ್ತವನ್ನು ನೀನು ಕುಡಿದುಬಿಡುವದರಿಮದ ಹೊಸ ರಾಕ್ಷಸರು ಮತ್ತೆ ಹುಟ್ಟುವದಿಲ್ಲ ಹೀಗೆಂದೇ ಹೇಳಿ ದೇವಿಯು ಶೂಲಾಯುಧದಿಂದ ರಕ್ತಬೀಜನನ್ನು ತಿವಿದಳು. ಕಾಳಿಯಾದರೊ, ರಕ್ತಬೀಜನ ರಕ್ತವನ್ನು ಮುಖದಿಂದ ಸ್ವೀಕರಿಸಿದಳು ಅನಂತರ ಆತನು ಚಂಡಿಕೆಯನ್ನು ಗದೆಯಿಂದ ಪ್ರಹಾರ ಮಾಡಿದನು ಆ ಗದೆಯ ಏಟು ಆಕೆಗೆ ಸ್ವಲ್ಪವಾದರೂ ನೋವನ್ನುಂಟುಮಾಡಲಿಲ್ಲ ದೇವಿಯಿಂದ ಹೊಡೆಯಲ್ಪಟ್ಟ ಆ ರಾಕ್ಷಸನ ದೇಹದಿಂದ ರಕ್ತವು ಬಹಳವಾಗಿ ಸುರಿಯಿತು ಎಲ್ಲೆಲ್ಲಿಂದ ಅದು ಹೊರಬಂತೋ ಅದನ್ನೆಲ್ಲ ಚಾಮುಂಡಿಯು ತನ್ನ ಬಾಯಿಯಿಂದ ಸ್ವೀಕರಿಸುತ್ತಿದ್ದಳು. ಚಾಮುಂಡಿಯೆನಿಸಿದ ಈ ಕಾಳಿಕೆಯ ಮುಖದಲ್ಲಿ ಬಿದ್ದ ರಕ್ತದಿಂದ ಯಾವ ರಾಕ್ಷಸರು ಹೊರಬರುತ್ತಿರುವರೋ ಅವರುಗಳನ್ನು ಚಾಮುಂಡಿಯು ತಿನ್ನುತ್ತಿದ್ದಳು ರಕ್ತವನ್ನೂ ಕುಡಿಯುತ್ತಿದ್ದಳು ಹೀಗೆ ಚಾಮುಂಡಿಯಿಂದ ಕುಡಿಯಲ್ಪಟ್ಟ ರಕ್ತವುಳ್ಳವನಾದ ರಕ್ತಬೀಜನನ್ನು ದೇವಿಯು ಶೂಲದಿಂದಲೂ, ವಜ್ರ, ಬಾಣ, ಕತ್ತಿ, ಋಷ್ವಿ ಮುಂತಾದ ಆಯುಧಗಳಿಂದಲೂ ಸಂಹರಿಸಿದಳು.
    ಆ ರಕ್ತಬೀಜಾಸುರನು ರಕ್ತಹೀನನಾಗಿ ಶಸ್ತ್ರಸಂಘಗಳಿಂದ ಹೊಡೆಯಲ್ಪಟ್ಟವನಾಗಿ ನೆಲದಮೇಲೆ ಬಿದ್ದನು, ದೇವತೆಗಳೆಲ್ಲರೂ ಹೆಚ್ಚಿನ ಸಂತೋಷವನ್ನು ಹೊಂದಿದರು ಆ ದೇವತೆಗಳ ಕಡೆಯವರಾದ ಕುಣಿದಾಡಿದರು ಹೀಗೆ ಮಾತೃಗಣಗಳು ಸಂತುಷ್ಟರಾದರು.

ನಿಶುಂಭ ವಧೆ
ಬಂಧೂಕಕಾಂಚನನಿಭಂ ರುಚಿರಕ್ಷಮಾಲಾಂ
ಪಾಶಾಂಕುಶೌ ಚ ವರದಾಂ ನಿಜಬಾಹುದಂಡೈಃ |
ಬಿಭ್ರಾಣಮಿಂದುಶಕಲಾಭರಣಂ ತ್ರಿನೇತ್ರ-
ಮರ್ಧಾಂಬಿಕೇಶಮನಿಶಂ ವಪುರಾಶ್ರಯಾಮಿ ||
    ಕೆಂಪುದಾಸಿವಾಳ ಹಾಗೂ ಚಿನ್ನದ ಬಣ್ಣದಂತೆ ಕಾಂತಿಯುಳ್ಳ, ಸುಂದರವಾದ ಜಪಸರವನ್ನೂ ಪಾಶಾಂಕುಶಗಳನ್ನೂ ವರದಹಸ್ತವನ್ನೂ ತನ್ನ ತೋಳುಗಳಿಂದ ಧರಿಸಿ ಚಂದ್ರರೇಖೆಯನ್ನು ಜಡೆಯಲ್ಲಿ ಧರಿಸಿ ಮೂರು ಕಣ್ಣುಗಳಿಂದ ವಿರಾಜಮಾನವಾದ ಅರ್ಧನಾರೀಶ್ವರಮೂರ್ತಿಯನ್ನು ನಾನು ಆಶ್ರಯಿಸುತ್ತೇನೆ.
    ರಕ್ತಬೀಜನು ನಿಧನನಾಗಲಾಗಿ ಹಾಗೂ ಇನ್ನೂ ಕೆಲವು ರಾಕ್ಷಸರು ಯುದ್ಧದಲ್ಲಿ ಕೊಲ್ಲಲ್ಪಡಲಾಗಿ ಶುಂಭಾಸುರನೂ ನಿಶುಂಭನೂ ಹೆಚ್ಚಿನ ಕೋಪವನ್ನು ಮಾಡಿದರು ಅನಂತರ ತನ್ನ ಮಹಾಸೈನ್ಯವು ಕೊಲ್ಲಲ್ಪಡುತ್ತಿರುವದನ್ನು ನೋಡಿ ಕೋಪಗೊಂಡ ನಿಶುಂಭನು ಮುಖ್ಯವಾದ ರಾಕ್ಷಸಸೈನ್ಯದೊಡಗೂಡಿದವನಾಗಿ ಮುನ್ನುಗ್ಗಿ ಬಂದನು ಅವನ ಮುಂದೆ, ಹಿಂದೆ, ಅಕ್ಕಪಕ್ಕಗಳಲ್ಲಿ ಮಹಾರಾಕ್ಷಸರುಗಳು ತುಟಿಗಳನ್ನು ಕಚ್ಚಿದವರಾಗಿ ಸಿಟ್ಟಿನಿಂದ ಮುನ್ನುಗ್ಗಿ ದೇವಿಯನ್ನು ಕೊಲ್ಲಲು ಅನುವಾದರು. ಆ ವೇಳೆಗೆ ಮಹಾವೀರ್ಯಶಾಲಿಯಾದ ಶುಂಭನು ಕೂಡ ಮಾತೃಗಣಗಳೊಡನೆ ಯುದ್ಧಮಾಡಿ ತನ್ನ ಬಲದೊಡನೆ ಚಂಡಿಕೆಯನ್ನು ಕೊಲ್ಲುವದಕ್ಕಾಗಿ ಕೋಪಾವಿಷ್ಟನಾಗಿ ಅಲ್ಲಿಗೆ ಬಂದನು ಅನಂತರ ಅತಿಯಾದ ಬಿರುಸಿನ ಯುದ್ಧವನ್ನು ಶುಂಭನಿಶುಂಭರೊಡನೆ ದೇವಿಯ ಕೈಗೊಂಡಳು ಮಳೆಗರೆಯುತ್ತಿರುವ ಎರಡು ಮಹಾಮೇಘಗಳಂತೆ ಅವರಿಬ್ಬರೂ ಬಾಣಗಳ ಮಳೆಯನ್ನೇ ಸುರಿಸಿದರು ಚಂಡಿಕೆಯು ಅವುಗಳನ್ನು ತನ್ನ ಬಾಣಗಳ ಸಮೂಹಗಳಿಂದ ಕತ್ತರಿಸಿದಳು ಮತ್ತು ಅಸುರರಾಜನನ್ನು ಶಸ್ತ್ರಗಳ ಸಮೂಹದಿಂದ ಅವರ ಅವಯವಗಳನ್ನೇ ಗುರಿಯಿಟ್ಟು ಹೊಡೆದಳು.ನಿಶುಂಭನಾದರೊ, ತೀಕ್ಷ್ಣವಾದ ಅಲುಗಿನ ಕತ್ತಿಯನ್ನೂ ಹೊಳೆಯುವ ಗುರಾಣಿಯನ್ನೂ ಹಿಡಿದು ನುಗ್ಗಿದವನಾಗಿ ದೇವಿಯ ವಾಹನವಾದ ಸಿಂಹಕ್ಕೆ ತಲೆಯಮೆಲೆ ಹೊಡೆದನು ಆಗ ದೇವಿಯು ಸಿಂಹವನ್ನು ಹೊಡೆದದ್ದನ್ನು ಕಂಡು ಕೂಡಲೆ ತನ್ನ ಕೋಶ ಚೀಲದಿಂದ ಕತ್ತಿಯನ್ನೆಳೆದು ನಿಶುಂಭನ ಕತ್ತಿಯನ್ನೂ ಎಂಟು ಚಂದ್ರರ ಚಿತ್ರವುಳ್ಳ ಗುರಾಣಿಯನ್ನೂ ತುಂಡರಿಸಿಬಿಟ್ಟಳು ಹೀಗೆ ಕತ್ತಿಗುರಾಣಿಗಳು ತುಂಡಾಗಿ ಬೀಳಲಾಗಿ ಆ ರಾಕ್ಷಸನು ಶಕ್ತ್ಯಾಯುಧವನ್ನು ಬಳಸಿದನು ಎದುರಿಗೆ ಬಂದ ಆ ಶಕ್ತಿಯನ್ನು ಕೂಡ ದೇವಿಯು ಎರಡು ಭಾಗವಾಗಿ ಸೀಳಿಬಿಟ್ಟಳು, ದಾನವನಾದ ಆ ನಿಶುಂಭನು ಕೋಪದಿಂದ ಉರಿದು ಬೀಳುವವನಾಗಿ ಶೂಲವನ್ನು ಹಿಡಿದು ನುಗ್ಗಿದನು ದೇವಿಯು ಆ ಶೂಲವನ್ನೂ ತನ್ನ ಮುಷ್ಟಿಗಳ ಹೊಡೆತದಿಮದ ಪುಡಿಮಾಡಿದಳು ಆಗ ಅವನಾದರೊ ಗದೆಯನ್ನು ಮೇಲೆತ್ತಿ ಚಂಡಿಕೆಯ ಕಡೆಗೆ ಎಸೆದನು ದೇವಿಯು ತ್ರಿಶೂಲಾಯುಧದ ಏಟಿನಿಂದ ಅದು ಕೂಡ ತುಂಡಾಗಿ ಸುಟ್ಟು ಬೂದಿಯಾಗಿಬಿಟ್ಟಿತು ನಂತರ ಕೊಡಲಿಯನ್ನು ಹಿಡಿದು ನುಗ್ಗಿಬರುತ್ತಿದ್ದ ದೈತ್ಯಶ್ರೇಷ್ಠನಾದ ಆತನನ್ನು ದೇವಿಯು ಬಾಣಗಳಿಂದ ಚೆನ್ನಾಗಿ ಹೊಡೆದು ನೆಲದಮೇಲೆ ಕೆಡವಿಬಿಟ್ಟಳು.
    ಭಯಂಕರಪರಾಕ್ರಮಶಾಲಿಯಾದ ನಿಶುಂಭನು ಹೀಗೆ ನೆಲದ ಮೇಲೆ ಬೀಳಲಾಗಿ ಶುಂಭನು ತನ್ನ ಸಹೋದರನ ಪರಾಜಯವನ್ನು ಕಂಡು ಹೆಚ್ಚಿನ ಕೋಪವುಳ್ಳವನಾಗಿ ಅಂಬಿಕೆಯನ್ನು ಕೊಲ್ಲುವದಕ್ಕಾಗಿ ಹೊರಟನು ಅವನು ರಥದಲ್ಲಿ ಕುಳಿತು ಎಂಟು ಭುಜಗಳಿಂದಲೂ ಪರಮಶ್ರೇಷ್ಠವಾದ ಆಯುಧಗಳನ್ನು ಹಿಡಿದವನಾಗಿ ಸರಿಸಾಟಿಯಿಲ್ಲದ ತನ್ನ ಬಲ-ತೇಜಸ್ಸುಗಳಿಂದ ಆಕಾಶವನ್ನೆಲ್ಲ ಬೆಳಗಿದನು ಹಾಗೆ ಬರುತ್ತಿರುವ ಅವನನ್ನು ಕಂಡು ದೇವಿಯೂ ಶಂಖವನ್ನೊದಿದಳು ಸಹಿಸಲಸಾಧ್ಯವಾದ ರೀತಿ ಧನುಷ್ಟಂಕಾರವನ್ನು ಮಾಡಿದಳು ಸಮಸ್ತರಾಕ್ಷಸ ಸೈನ್ಯದ ತೇಜಸ್ಸನ್ನೂ ನಾಶಗೊಳಿಸುವಮಟ್ಟಿನ ತನ್ನ ಘಂಟಾಧ್ವನಿಯಿಂದ ದಿಕ್ಕುಗಳನ್ನೆಲ್ಲ ತುಂಬಿದಳು. ನಂತರ ದೇವಿಯ ವಾಹನವಾದ ಸಿಂಹವು ಆನೆಗಳ ಮಧವನ್ನು ಹಿಮ್ಮೆಟ್ಟಿಸುವಂಥ ಹಾಗೂ ಹತ್ತು ದಿಕ್ಕುಗಳನ್ನೂ ಆಕಾಶವನ್ನೂ ವ್ಯಾಪಿಸುವಂಥ ಧ್ವನಿಯಿಂದ ಘರ್ಜನೆಮಾಡಿತು, ಕಾಳಿಕಾದೇವಿಯು ನೆಗೆದು ಬಂದು ಆಕಾಶವನ್ನೂ ಭೂಮಿಯನ್ನೂ ಎರಡು ಕೈಗಳಿಂದ ಬಡಿದಳು ಆ ಶಬ್ದದಿಂದ ಹಿಂದಿನ ಗದ್ದಲಗಳೆಲ್ಲ ಮುಚ್ಚಿಹೋದವು ಅನಂತರ ಶಿವದೂತಿಯು ಅಮಂಗಳಕರವಾಗಿ ಅತಿ ಘೋರವಾದ ನಗುವನ್ನು ಬೀರಿದಳು ಆ ಶಬ್ದಗಳಿಂದ ರಾಕ್ಷಸರೆಲ್ಲರೂ ನಡುಗಿಹೋದರು ಶುಂಭನು ಹೆಚ್ಚಿನ ಕೋಪವನ್ನು ಹೊಂದಿದನು. ಎಲೈ ದುರಾತ್ಮನೆ, ನಿಲ್ಲು-ನಿಲ್ಲು ಎಂಬುದಾಗಿ ಅಂಬಿಕೆಯು ಹೇಳುತ್ತಿರಲು ಆಗ ಆಕಾಶದಲ್ಲಿದ್ದ ದೇವತೆಗಳು ಜಯ-ಜಯ ಎಂದು ಘೋಷ ಮಾಡಿದರು ಶುಂಭನು ಪ್ರಯೋಗಿಸಿದ ಉರಿಯುತ್ತಿರುವ ಭಯಂಕರವಾದ ಯಾವ ಶಕ್ತಿಯು ಬೆಂಕಿಯ ಕೆಂಡದಂತೆ ಬಂದಿತೋ ಅದನ್ನು ದೇವಿಯು ಮಹೋಲ್ಕವೆಂಬ ಶಕ್ತಿಯಿಂದ ನಿವಾರಿಸಿಬಿಟ್ಟಳು. ಶುಂಭನ ಸಿಂಹನಾದದಿಂದ ಮೂರು ಲೋಕಗಳೂ ಒಳಗೂ ಹೊರಗೂ ತುಂಬಿಹೋದವು ಆದರೆ ಆಕಾಶದಿಂದ ಹೊರಬಿದ್ದ ಒಂದು ದೊಡ್ಡ ಸಿಡಿಲಿನ ಧ್ವನಿಯು ಆ ಸಿಂಹನಾದವನ್ನೂ ಅಡಗಿಸಿ ಬಿಟ್ಟಿತು ತಾನೇ ಗೆದ್ದಿತು ಆ ಧ್ವನಿಯು ದೇವಿಯು ಶಕ್ತ್ಯಾಯುಧದಿಂದ ಹೊರಬಿದ್ದುದಾಗಿತ್ತು ಶುಂಭನು ಬಿಟ್ಟ ಬಾಣಗಳನ್ನು ದೇವಿಯೂ, ದೇವಿಯು ಬಿಟ್ಟ ಬಾಣಗಳನ್ನು ಶುಂಭನೂ ನೂರಾರು ಸಾವಿರಾರುಗಟ್ಟಲೆಯಾಗಿ ತಮ್ಮ ತಮ್ಮ ಉಗ್ರವಾದ ಬಾಣಗಳಿಂದ ಕತ್ತರಿಸಿದರು, ಚಂಡಿಕೆಯು ಕಕುಪಿತಳಾಗಿ ಅವನನ್ನು ಶೂಲದಿಂದ ಹೊಡೆದಳು ಆಗ ಅವನು ಮೂರ್ಛಿತನಾಗಿ ನೆಲದ ಮೇಲೆ ಬಿದ್ದನು.
    ನಿಶುಂಭನು ಆ ವೇಳೆಗೆ ಎಚ್ಚತ್ತವನಾಗಿ ಧನುಸ್ಸನ್ನು ತೆಗೆದುಕೊಂಡು ಬಾಣಗಳನ್ನು ಹೂಡಿ ಕಾಳಿಕೆಯ ವಾಹನವಾದ ಸಿಂಹವನ್ನೂ ಚೆನ್ನಾಗಿ ಥಳಿಸಿದನು ಮತ್ತೆ ಹತ್ತು ಸಾವಿರ ತೋಳುಗಳನ್ನು ಸೃಷ್ಟಿಮಾಡಿಕೊಂಡು ದಿತಿಯ ಪುತ್ರನಾದ ಆ ರಾಕ್ಷಸೇಶ್ವರನು ಎಲ್ಲಾ ತೋಳುಗಳಿಂದಲೂ ಚಕ್ರಾಯುಧವನ್ನು ಹರಡಿ ದೇವಿಯನ್ನು ಮುಚ್ಚಿಬಿಟ್ಟನು ಭಯಂಕರವಾದ ಕಷ್ಟಗಳಿಂದ ಭಕ್ತರನ್ನು ಕಾಪಾಡುವ ಭಗವತಿಯಾದ ದುರ್ಗೆಯು ತನ್ನ ಬಾಣಗಳಿಂದ ಅವನ ಬಾಣಗಳನ್ನೂ ಆ ಚಕ್ರಗಳನ್ನೂ ತುಂಡುಮಾಡಿಬಿಟ್ಟಳು, ನಿಶುಂಭನು ಗದೆಯನ್ನು ತೆಗೆದುಕೊಂಡು ದೈತ್ಯ ಸೇನಾಸಮೇತನಾಗಿ ಚಂಡಿಕೆಯನ್ನು ಸಂಹಾರಮಾಡುವದಕ್ಕಾಗಿ ವೇಗದಿಂದ ನುಗ್ಗಿದನು ಅವನು ಮುನ್ನುಗ್ಗುತ್ತಿರುವಷ್ಟರಲ್ಲಿಯೇ ಚಂಡಿಕೆಯು ಅವನ ಗದೆಯನ್ನು ತೀಕ್ಷ್ಣವಾದ ಅಲುಗಿನ ಕತ್ತಿಯಿಂದ ಕತ್ತರಿಸಿಬಿಟ್ಟಳು ಅವನಾದರೊ ಮತ್ತೆ ಶೂಲವನ್ನು ತೆಗೆದುಕೊಂಡನು, ದೇವತೆಗಳನ್ನು ಹಿಂಸಿಸುವ ಹಾಗೂ ಶೂಲವನ್ನು ಹಿಡಿದು ಬರುತ್ತಿರುವ ನಿಶುಂಭನನ್ನು ಚಂಡಿಕೆಯು ವೇಗದಿಂದ ಪ್ರಯೋಗಿಸಲ್ಪಟ್ಟ ತನ್ನ ಶೂಲದಿಂದ ಎದೆಯಲ್ಲಿ ತಿವಿದಳು, ಶೂಲದಿಂದ ಸೀಳಲ್ಪಟ್ಟ ಅವನ ಹೃದಯದಿಮದ ಮಹಾಬಲಶಾಲಿಯೂ ಮಹಾವೀರ್ಯವಂತನೂ ಆದ ಬೇರೊಬ್ಬ ಪುರುಷನು ನಿಲ್ಲು ಎನ್ನುತ್ತಾ ಹೊರಬಂದನು ಹಾಗೆ ಅವನು ಹೊರಬರುತ್ತಿರುವಾಗಲೇ ದೇವಿಯು ಧ್ವನಿ ಮಾಡಿ ನಗುತ್ತಾ ತನ್ನ ಕತ್ತಿಯಿಂದ ಅವನ ತಲೆಯನ್ನು ಕತ್ತರಿಸಿಬಿಟ್ಟಳು ಅನಂತರ ಅವನು ನೆಲೆದ ಮೇಲೆ ಬಿದ್ದನು, ಸಿಂಹವು ತನ್ನ ಕೋರೆದಾಡೆಗಳಿಂದ ಪುಡಿಮಾಡಲ್ಪಟ್ಟ ಕಿರೀಟಗಳುಳ್ಳ ರಾಕ್ಷಸರನ್ನು ತಿಂದುಹಾಕಿತು ಕಾಳಿಕಾದೇವಿಯೂ ಶಿವದೂತಿಯೂ ಬೇರೆಯ ಕೆಲವರನ್ನು ತಿಂದರು. ಕೌಮಾರೀದೇವಿಯ ಶಕ್ತ್ಯಾಯುಧದ ಪ್ರಹಾರದಿಂದ ಕೆಲ ಕೆಲವು ಮಹಾರಾಕ್ಷಸರು ನಾಶವಾದರು ಬ್ರಹ್ಮಾಣಿಯ ಮಂತ್ರಪವಿತ್ರವಾದ ನೀರಿನಿಂದ ಮತ್ತೆ ಕೆಲವರು ಹೊಡೆದೋಡಿಸಲ್ಪಟ್ಟರು ಮಾಹೇಶ್ವರೀದೇವಿಯು ತ್ರಿಶೂಲದಿಂದ ಸೀಳಲ್ಪಟ್ಟ ಕೆಲವರು ಬಿದ್ದುಹೋದರು ವಾರಾಹಿಯ ಕೋರೆದಾಡೆಗಳ ಹೊಡೆತದಿಂದ ಕೆಲವರು ಪುಡಿಮಾಡಲ್ಪಟ್ಟು ನೆಲದಲ್ಲಿ ಬಿದ್ದರು. ವೈಷ್ಣವೀದೇವಿಯು ಚಕ್ರಾಯುಧದಿಂದ ಕೆಲವು ದಾನವರು ತುಂಡುತುಂಡುಮಾಡಲ್ಪಟ್ಟರು ಹಾಗೆಯೇ ಮತ್ತೆ ಕೆಲವರು ಐಂದ್ರೀದೇವಿಯ ಕೈಯಲ್ಲಿದ್ದ ವಜ್ರಾಯುಧದ ಏಟಿನಿಂದಲೂ ತುಂಡರಿಸಲ್ಪಟ್ಟರು ಹೀಗೆ ಮಹಾ ಯುದ್ಧದ ದೆಸೆಯಿಂದ ಕೆಲವು ರಾಕ್ಷಸರು ನಷ್ಟರಾದರು ಕೆಲವರು ಸಾವನ್ನು ಹೊಂದಿದರು, ಕಾಲಿ, ಶಿವದೂತಿ, ಸಿಂಹಗಳಿಂದ ಕೆಲವರು ತಿನ್ನಲ್ಪಟ್ಟರು.

ಶುಂಭ ವಧೆ
ಉತ್ತಪ್ತಹೇಮರುಚಿರಾಂ ರವಿಚಂದ್ರವಹ್ನಿ-
ನೇತ್ರಾಂ ಧನುಃಶರಯತಾಂಕುಶಪಾಶಶೂಲಮ್ |
ರಮ್ಯೈರ್ಭುಜೈಶ್ಚ ದಧತೀಂ ಶಿವಶಕ್ತಿರೂಪಾಂ
ಕಾಮೇಶ್ವರೀಂ ಹೃದಿ ಭಜಾಮಿ ಧೃತೇಂದುಲೇಖಾಮ್ ||
    ಚೆನ್ನಾಗಿ ಪುಟವಿಟ್ಟ ಚಿನ್ನದಂತೆ ಕಾಂತಿಯುಳ್ಳ, ಸೂರ್ಯ, ಚಂದ್ರ, ಅಗ್ನಿಗಳನ್ನು ಕಣ್ಣುಗಳನ್ನಾಗಿ ಹೊಂದಿರುವ, ಬಾಣದೊಡಗೂಡಿದ ಅಂಕುಶ, ಪಾಶ, ಶೂಲಗಳನ್ನು ರಮ್ಯವಾದ ಭುಜಗಳಿಂದ ಧರಿಸಿರುವ, ಶಿವಶಕ್ತಿ ಸ್ವರೂಪಳಾದ, ಚಂದ್ರಲೇಖೆಯನ್ನು ಧರಿಸಿರುವ ಕಾಮೇಶ್ವರಿಯನ್ನು ಹೃದಯದಲ್ಲಿ ಚಿಂತಿಸುತ್ತೇನೆ.

    ಪ್ರಾಣಕ್ಕೆ ಸಮಾನನಾದ ಸೋದರನಾದ ನಿಶುಂಭನು ಕೊಲ್ಲಲ್ಪಟ್ಟದ್ದನ್ನು ನೋಡಿ ಹಾಗೂ ಸಾಯುತ್ತಿರುವ ರಾಕ್ಷಸ ಬಲವನ್ನೂ ಕಂಡು ಕುಪಿತನಾದ ಶುಂಭನು ಹೀಗೆಂದನು : ದುಷ್ಟಳಾದ ದುರ್ಗೆಯೆ, ಬಲಪರಾಕ್ರಮಗಳ ಕೊಬ್ಬಿನಿಂದ ಜಂಭವನ್ನು ಮಾಡದಿರು ಏಕೆಂದರೆ ಬಹಳ ಗರ್ವಪೂರಿತಳಾದ ನೀನು ಬೇರೆಯವರ ಬಲಸಹಾಯಗಳನ್ನು ಆಶ್ರಯಿಸಿ ಯುದ್ಧಮಾಡುತ್ತಿರುವೆಯಲ್ಲವೆ?
    'ಈ ಜಗತ್ತಿನಲ್ಲಿ ನಾನೊಬ್ಬಳೇ ದೇವಿಯು, ನನಗೆ ಎರಡನೆಯವಳು ಯಾವಳಿದ್ದಾಳು? ಎಲೌ ದುಷ್ಟನೆ, ನನ್ನ ವಿಭೂತಿ ರೂಪವೇ ಆಗಿರುವ ಈ ಬ್ರಾಹ್ಮ್ಯಾದಿದೇವಿಯರು ನನ್ನಲ್ಲಿಯೇ ಪ್ರವೇಶ ಮಾಡುತ್ತಿರುವದನ್ನು ಈಗ ನೋಡು' ಹೀಗೆಂದ ಕೂಡಲೆ ಆ ಎಲ್ಲಾ ಬ್ರಹ್ಮಾಣಿಯೇ ಮುಂತಾದ ದೇವಿಯರೂ ಆ ಚಂಡಿಕೆಯ ಶರೀರದಲ್ಲಿಯೇ ಸೇರಿ ಅದೃಶ್ಯರಾಗಿಬಿಟ್ಟರು ಆಗ ಅಂಬಿಕೆಯು ತಾನು ಒಬ್ಬಳೇ ಆಗಿಬಿಟ್ಟಳು. ನಾನು ವಿಭೂತಿಗಳಿಂದ ಬಹುರೂಪಳಾಗಿ ಯಾವಾಗ ತೋರಿಕೊಂಡಿದ್ದೇನೋ ಆ ನಾನೇ ಈಗ ಎಲ್ಲವನ್ನೂ ಅಡಗಿಸಿಕೊಂಡು ಒಬ್ಬಳೇ ಆಗಿ ನಿಂತಿದ್ದೇನೆ ಇನ್ನು ಯುದ್ಧದಲ್ಲಿ ನೀನು ದೃಢವಾಗಿ ನಿಲ್ಲು.
    ಶುಂಭನಿಗೂ ದೇವಿಗೂ ಇಬ್ಬರಿಗೂ ಪರಸ್ಪರವಾಗಿ ಸಮಸ್ತ ದೇವತೆಗೂ ರಾಕ್ಷಸರೂ ನೋಡುತ್ತಿರುವಂತೆಯೇ ಭಯಂಕರವಾದ ಯುದ್ಧವು ಪ್ರಾರಂಭವಾಯಿತು ಬಾಣಗಳ ಸುರಿಮಳೆಯಿಂದಲೂ ತೀಕ್ಷ್ಣವಾದ ಆಯುಧಗಳಿಂದಲೂ ಹಾಗೂ ಅಸ್ತ್ರಗಳಿಂದಲೂ ಕೂಡಿದ ಸರ್ವಲೋಕಕ್ಕೂ ಭಯವನ್ನು ಉಂಟುಮಾಡುವ ಯುದ್ಧವು ಅವರಿಬ್ಬರಿಗೂ ನಡೆಯಿತು, ಅಂಬಿಕೆಯು ಯಾವಯಾವ ದಿವ್ಯವಾದ ಅಸ್ತ್ರಗಳನ್ನು ಪ್ರಯೋಗಿಸಿದಳೋ ದೈತ್ಯರಾಜನು ಅವುಗಳೆಲ್ಲವನ್ನೂ ಆಯಾ ಅಸ್ತ್ರಗಳನ್ನು ಪ್ರತಿಯಾಗಿ ಹೊಡೆಯುವ ಅಸ್ತ್ರಗಳಿಂದ ಮುರಿದುಹಾಕಿಬಿಟ್ಟನು ಅವನು ಉಪಯೋಗಿಸಿದ ದಿವ್ಯವಾದ ಅಸ್ತ್ರಗಳನ್ನು ಪರಮೇಶ್ವರಿಯ ಉಗ್ರವಾದ ಹುಂಕಾರವನ್ನು ಮಾಡುವ ನೆಪದಿಮದಲೇ ಲೀಲಾಮಾತ್ರದಿಂದ ಮುರಿದುಹಾಕಿದಳು. ಅದನ್ನು ಕಂಡ ರಾಕ್ಷಸನು ನೂರುಬಾಣಗಳಿಂದ ದೇವಿಯನ್ನು ಮುಚ್ಚಿಬಿಟ್ಟನು ಆಕೆಯಾದರೊ, ಕೋಪದಿಂದ ಅವನ ಬಿಲ್ಲನ್ನು ತನ್ನ ಬಾಣಗಳಿಂದ ಕತ್ತರಿಸಿಬಿಟ್ಟಳು, ದೈತ್ಯರಾಜನು ಬಿಲ್ಲು ತುಂಡಾಗಿ ಬೀಳುವಾಗ ಶಕ್ತ್ಯಾಯುಧವನ್ನು ತೆಗೆದುಕೊಂಡನು ಅವನ ಕೈಯಲ್ಲಿದ್ದ ಆ ಆಯುಧವನ್ನೂ ದೇವಿಯು ಚಕ್ರದಿಂದ ತುಂಡರಿಸಿಬಿಟ್ಟಳು, ದೈತ್ಯರುಗಳೊಡೆಯನಾದ ಆತನು ಕತ್ತಿಯನ್ನೂ ನೂರುಚಂದ್ರರ ಚಿತ್ರವುಳ್ಳ ಪ್ರಕಾಶಮನವಾದ ಗುರಾಣಿಯನ್ನೂ ತೆಗೆದುಕೊಂಡು ದೇವಿಯ ಕಡೆಗೆ ನುಗ್ಗಿದನು ಅವನು ಮುನ್ನುಗ್ಗುತ್ತಿದ್ದಂತೆಯೇ ಚಂಡಿಕೆಯು ತನ್ನ ಬಿಲ್ಲಿನಿಂದ ಹೊರಬಿದ್ದ ತೀಕ್ಷ್ಣವಾದ ಬಾಣಗಳಿಂದ ಕತ್ತಿಯನ್ನೂ ಸೂರ್ಯಕಿರಣಗಳಂತೆ ಹೊಳೆಯುತ್ತಿದ್ದ ಗುರಾಣಿಯನ್ನೂ ಕತ್ತರಿಸಿದಳು, ದೇವಿಯು ಆ ರಾಕ್ಷಸನ ರಥವನ್ನೂ ಸಾರಥಿ-ಕುದುರೆಗಳೊಡನೆ ಕೆಡವಿದಳು, ಹೀಗೆ ಸಾರಥಿಯಿಲ್ಲದ ಬಿಲ್ಲು ಮುರಿದುಹೋದ ಕುದುರೆಗಳೂ ನಷ್ಟವಾಗಿ ಹೋದ, ಆತನು ಅಂಬಿಕೆಯನ್ನು ಕೊಲ್ಲಲುದ್ಯುಕ್ತನಾಗಿ ಮುದ್ಗರವೆಂಬ ಘೋರವಾದ ಆಯುಧವನ್ನು ಹಿಡಿದನು ಆಗ ಅವನ ಮುದ್ಗರವನ್ನು ಹರಿತವಾದ ಬಾಣಗಳಿಂದ ದೇವಿಯು ಕತ್ತರಿಸಿಬಿಟ್ಟನು ಹಾಗಾದರೂ ಅವನು ಬಲುಚುರಕಾಗಿ ಕೈಮುಷ್ಟಿಯನ್ನು ಎತ್ತಿಕೊಂಡು ಎದುರಾಗಿ ನುಗ್ಗಿ ಬಂದನು ಮತ್ತು ಆ ದೈತ್ಯಪುಂಗವನು ತನ್ನ ಮುಷ್ಟಿಯನ್ನೆತ್ತಿ ದೇವಿಯ ಎದೆಗೆ ಹೊಡೆದನು ಆಗಲೇ ದೇವಿಯೂ ತನ್ನ ಮುಷ್ಟಿಯಿಂದ ಅವನ ಎದೆಗೆ ಗುದ್ದಿದಳು, ಗುದ್ದಿನ ಏಟಿನಿಂದ ಅವನು ನೆಲದ ಮೇಲೆ ಉರುಳಿಬಿದ್ದನು ಕುಡಲೆ ಆ ದೈತ್ಯರಾಜನು ಮತ್ತೆ ಹಠಾತ್ತನೆ ಮೇಲೆದ್ದನು ಎದ್ದ ಅನಂತರ ದೇವಿಯನ್ನು ಮೇಲಕ್ಕೆ ಎತ್ತಿಕೊಂಡು ಆಕಾಶಕ್ಕೆ ಹಾರಿದನು ನಿರಾಧಾರಳಾಗಿ ಚಂಡಿಕೆಯು ಅಲ್ಲಿಯೂ ಕೂಡ ಅವನೊಡನೆ ಯುದ್ಧಮಾಡಿದಳು ಆಗ ರಾಕ್ಷಸನೂ ಚಂಡಿಕೆಯೂ ಅನ್ಯೋನ್ಯವಾಗಿ ಮೊದಲಬಾರಿಗೆ ಆಕಾಶದಲ್ಲಿ ಮಲ್ಲಯುದ್ಧವನ್ನು ಸಿದ್ಧಮುನಿಗಳಿಗೂ ಆಶ್ಚರ್ಯವಾಗುವ ರೀತಿಯಲ್ಲಿ ಮಾಡಿದರು, ಅವನೊಡನೆ ಅಂಬಿಕೆಯು ಮುಷ್ಟಿಯುದ್ಧವನ್ನು ಬಹುಕಾಲ ಮಾಡಿ ಮೇಲಕ್ಕೆತ್ತಿ ತಿರುಗಿಸಿ ನೆಲದ ಮೇಲೆ ಬಿಸುಟಳು, ಹೀಗೆ ಎಸೆಯಲ್ಪಟ್ಟ ದುಷ್ಟನಾದ ಆತನು ನೆಲದ ಮೇಲೆ ಬಿದ್ದು ಪುನಃ ಎದ್ದು ವೇಗದಿಂದ ಕೈಮುಷ್ಟಿಯನ್ನು ಮೇಲತ್ತಿ ಚಂಡಿಕೆಯನ್ನು ಸಂಹಾರಮಾಡವದಕ್ಕಾಗಿ ಓಡಿಬಂದನು ಹಾಗೆ ಬಂದ ಎಲ್ಲಾ ದೈತ್ಯರಿಗೂ ಒಡೆಯನಾದ ಅವನನ್ನು ಎದೆಯಲ್ಲಿ ಶೂಲದಿಂದ ತಿವಿದು ಭೂಮಿಯಲ್ಲಿ ಕೆಡವಿದಳು ದೇವಿಯ ಶೂಲದ ತುದಿಯಿಂದ ಗಾಯಗೊಳಿಸಲ್ಪಟ್ಟ ಆತನು ಪ್ರಾಣವನ್ನು ಕಳೆದುಕೊಂಡವನಾಗಿ ಬೀಳುವಾಗ ಸಮುದ್ರಗಳಿಂದಲೂ ದ್ವೀಪಗಳಿಂದಲೂ ಪರ್ವತಗಳಿಂದಲೂ ಕೂಡಿದ ಇಡಿಯ ಭೂಮಿಯನ್ನೆಲ್ಲಾ ಅಳ್ಳಾಡಿಸುವವನಾಗಿ ಬಿದ್ದುಹೋದನು, ಆ ದುರಾತ್ಮನು ಸತ್ತು ಬೀಳಲಾಗಿ ಎಲ್ಲವೂ ಪ್ರಸನ್ನವಾಯಿತು ಜಗತ್ತೆಲ್ಲವೂ ಬಹಳವಾಗಿ ಶಾಂತವಾಯಿತು ಆಕಾಶವೆಲ್ಲವೂ ನಿರ್ಮಲವಾಯಿತು ಹಿಂದೆ ತೋರಿಕೊಂಡಿದ್ದ ಉಲ್ಕಾಪಾತಗಳಿಂದ ಕೂಡಿದ್ದ ವಿಪತ್ತನ್ನು ಸೂಚಿಸುವ ಮೊಡಗಳೆಲ್ಲವೂ ಶಾಂತವಾದವು ನದಿಗಳೆಲ್ಲವೂ ತಮ್ಮ ಪಾತ್ರಗಳಲ್ಲಿಯೇ ಹರಿಯತೊಡಗಿದವು ಶುಂಭರಾಕ್ಷಸನು ನಾಶವಾಗಲಾಗಿ ಎಲ್ಲವೂ ನೆಟ್ಟಗಾದವು, ದೇವತೆಗಳೆಲ್ಲರೂ ಸಂತೋಷಯುಕ್ತರಾದರು ಆ ರಾಕ್ಷಸನು ನಾಶವಾಗಲಾಗಿ ಗಂಧರ್ವರು ಸುಂದರವಾಗಿ ಹಾಡಿದರು ಮತ್ತೆ ಕೆಲವರು ವಾದ್ಯಗಳನ್ನು ಬಾರಿಸಿದರು ಅಪ್ಸರಗಣಗಳ ಸ್ತ್ರೀಯರು ಕುಣಿದಾಡಿದರು ಪುಣ್ಯಕರವಾದ ವಾಯು ಮಾರುತಗಳು ಬೀಸಿದವು ಸೂರ್ಯನು ಹೆಚ್ಚಿನ ಕಾಂತಿಯುಕ್ತನಾಗಿ ಬೆಳಗಿದನು ಅಗ್ನಿಗಳೆಲ್ಲವೂ ಹೊಗೆಯಿಲ್ಲದೆ ನಿಧಾನವಾಗಿ ಉರಿದವು ದಿಕ್ಕುಗಳಲ್ಲಿ ಕೇಳಿಬರುತ್ತಿದ್ದ ಭಯಸೂಚಕವಾದ ಶಬ್ದಗಳೂ ತಣ್ಣಗಾದವು.

ಫಲಸ್ತುತಿ
ವಿದ್ಯುದ್ಧಾಮಸಮಪ್ರಭಾಂ ಮೃಗಪತಿಸ್ಕಂದಸ್ಥಿತಾಂ ಬೀಷಣಾಂ
ಕನ್ಯಾಭಿಃ ಕರವಾಲಖೇಟವಿಲಸದ್ ಹಸ್ತಾಭಿರಾಸೇವಿತಾಮ್ |
ಹಸ್ತೈಶ್ಚಕ್ರಗದಾಸಿಖೇಟವಿಶಿಖಾಂಶ್ಚಾಪಂ ಗುಣಂ ತರ್ಜನೀಂ
ಬಿಭ್ರಾಣಾಮಲಲಾತ್ಮಿಕಾಂ ಶಶಿಧರಾಂ ದುರ್ಗಾಂ ತ್ರಿನೇತ್ರಾಂ ಭಜೇ ||
    ಮಿಂಚಿನ ಬಳ್ಳಿಗೆ ಸಮಾನವಾದ ಕಾಂತಿಯುಳ್ಳ, ಸಿಂಹದ ಹೆಗಲನ್ನೇರಿ ಕುಳಿತವಳಾದ, ಭಯಂಕರಾಕಾರಳಾದ, ಕತ್ತಿ, ಗುರಾಣಿಗಳಿಂದ ಅಲಂಕೃತವಾದ ಕೈಗಳುಳ್ಳ ಕನ್ನಿಕೆಯರಿಂದ ಸೇವ್ಯಳಾದ, ಚಕ್ರ, ಗದೆ, ಕತ್ತಿ, ಗುರಾಣಿ, ಬಾಣ, ಬಿಲ್ಲುಗಳಿಂದ ಕೂಡಿದ ಕೈಗಳಿಂದ ವಿರಾಜಮಾನಳಾಗಿ ತೋರುಬೆರಳಿನಿಮದ ಹುರಿಯನ್ನು ಮೀಟುತ್ತಿರುವಳಾದ, ಅಗ್ನಿದೇವತಾಸ್ವರೂಪಳಾದ, ಚಂದ್ರಾರ್ಧಶೇಖರಳಾದ ಮುಕ್ಕಣ್ಣೆಯಾದ ದುರ್ಗಾದೇವಿಯನ್ನು ಭಜಿಸುವೆನು.
    ಯಾರು ಸಮಾಧಾನಚಿತ್ತರಾಗಿ ನನ್ನನ್ನು ಸ್ತುತಿಸುವರೋ ಅಂಥವರನ್ನು ಸಕಲವಿಪತ್ತುಗಳನ್ನೂ ನಾನು ಪರಿಹರಿಸುವೆನು ಈ ವಿಷಯದಲ್ಲಿ ಸಂಶಯವಿಲ್ಲ ಮತ್ತು ಮಧುಕೈಟಭರನಾಶವನ್ನೂ, ಮಹಿಷಾಸುರವಧೆಯನ್ನೂ ಹಾಗೂ ಶುಂಭನಿಶುಂಭರ ವಧೆಯನ್ನೂ ಯಾರು ಅಷ್ಟಮೀ, ಚತುರ್ದಶೀ, ನವಮೀ ದಿನಗಳಲ್ಲಿ ಅನನ್ಯಚಿತ್ತರಾಗಿ ಕೀರ್ತನೆಮಾಡುವರೋ ಹಾಗೂ ಭಕ್ತಿಯಿಂದ ನನ್ನ ಮಹಾತ್ಮ್ಯವನ್ನು ಕೇಳವರೋ ಅಂಥವರಿಗೆ ಪಾಪಸಂಘಟನೆಯಾಗಲಿ ಪಾಪನಿಮಿತ್ತವಾದ ಸಂಕಟಗಳಾಗಲಿ, ದಾರಿದ್ರ್ಯವಾಗಲಿ ಇಷ್ಟ ಜನರ ವಿಯೋಗವಾಗಲಿ ಉಂಟಾಗುವದಿಲ್ಲ ಮತ್ತು ಶತ್ರುಗಳಿಂದಾಗಲಿ, ಕಳ್ಳರಿಂದಾಗಲಿ, ರಾಜನಿಂದಾಗಲಿ, ಶಸ್ತ್ರಗಳು, ಬೆಂಕಿ, ನೀರುಗಳ ಸಮೂಹದಿಂದಾಗಲಿ ಭಯವು ಎಂದಿಗೂ ಸಂಭವಿಸುವದಿಲ್ಲ ಮತ್ತು ಮಹಾಮಾರಿಯಿಂದ ಸಂಭವಿಸುವ ಎಲ್ಲಾ ರೀತಿಯ ಕ್ಷಾಮ, ರೋಗ, ರಾಷ್ಟ್ರಕ್ಷೋಭೆ, ಅಶಾಂತಿ, ದಂಗೆ, ಮುಷ್ಕರ, ಯುದ್ಧ ಮುಂತಾದವುಗಳನ್ನು ಆದ್ಯಾತ್ಮಿಕಾಧಿಭೌತಿಕಾಧಿದೈವಿಕಗಳೆಂಬ ಮೂರು ವಿಧವಾದ ಸಂಕಟಗಳನ್ನು ಉಳಿದ ಎಲ್ಲಾ ವಿಪತ್ತುಗಳನ್ನೂ ಶಮನಗೊಳಿಸುವೆನು ಆದ್ದರಿಂದ ಈ ನನ್ನ ಮಾಹಾತ್ಮ್ಯವನ್ನು ಸಮಾಧಾನಚಿತ್ತವುಳ್ಳವರಾಗಿದ್ದು ಭಕ್ತರು ಭಕ್ತಿಯಿಂದ ಪಠಿಸಬೇಕು ಹಾಗೂ ಕೇಳಬೇಕು ಇದು ಹೆಚ್ಚಿನ ಶುಭಪರಂಪರೆಗೆ ಕಾರಣವಾಗುತ್ತದೆ.
    ಶರದೃತುವಿನಲ್ಲಿ ಪ್ರತಿವರ್ಷವೂ ನನಗೆ ಸಲ್ಲಿಸುವ ಮಹಾಪೂಜೆಯ ವೇಳೆಗೆ ಭಕ್ತಿವಂತನಾಗಿ ಯಾವನು ಈ ಮಹಾತ್ಮೈಯನ್ನು ಕೇಳಿದನಾದರೆ ಆ ಮನುಷ್ಯನು ನನ್ನ ಅನುಗ್ರಹದಿಂದ ಎಲ್ಲಾ ಸಂಕಟಗಳಿಂದಲೂ ನಿರ್ಮುಕ್ತನಾಗಿ ಧನ, ಧಾನ್ಯ ಪುತ್ರರುಗಳಿಂದ ಕೂಡಿದವನಾಗಿ ಬಾಳುತ್ತಾನೆ.
    ಪೂಜ್ಯಳಾದ ಆ ದೇವಿಯು ನಿತ್ಯಳಾಗಿದ್ದರೂ ಮತ್ತೆ ಮತ್ತೆ ಅವತರಿಸಿ ಜಗತ್ತನ್ನು ಕಾಪಾಡುವಳು ಆಕೆಯಿಂದಲೇ ಈ ಜಗತ್ತೆಲ್ಲವೂ ಮೋಹಗೊಳಿಸಲ್ಪಟುವದು ಹಾಗೂ ಹಡೆಯಲ್ಪಡುವದು ಮತ್ತು ಆಕೆಯನ್ನು ಬೇಡಿಕೊಂಡರೆ ತತ್ತ್ವಜ್ಞಾನವನ್ನೂ ಐಹಿಕ ಪಾರಲೌಕಿಕ ಸುಖಗಳನ್ನೂ ನೀಡುವಳು, ಆಕೆಯಿಂದಲೇ ಸಕಲಬ್ರಹ್ಮಾಂಡವೂ ವ್ಯಾಪ್ತವಾಗಿದೆ, ಮಹಾಕಾಲನೆನಿಸಿರುವ ಪರಮೇಶ್ವರನ ಶಕ್ತಿರೂಪಳಾದ ಆ ಮಹಾಕಾಳಿಯು ಮಹಾಮಾರಿಯೆನಿಸಿರುವಳು ಆಕೆಯೇ ಪ್ರಲಯಕಾಲಕ್ಕೆ ಮಹಾಮಾರಿಯಾಗಿ ಜಗತ್ತನ್ನು ಸಂಹರಿಸುವಳು ಸೃಷ್ಟಿಕಾಲಕ್ಕೆ ಅಜಾ ಪ್ರಕೃತಿಯೆನಿಸಿ ಉಂಟುಮಾಡುವಳು ಸನಾತನಿಯೆನಿಸಿರುವ ಆಕೆಯೇ ಸ್ಥಿತಿಕಾಲಕ್ಕೆ ಪ್ರಾಣಿಗಳನ್ನು ಕಾಪಾಡುತ್ತಿರುವಳು, ಸ್ಥಿತಿಕಾಲದಲ್ಲಿ ಆಕೆಯೇ ವೃದ್ಧಿಯನ್ನುಂಟುಮಾಡುವ ಗೃಹಲಕ್ಷ್ಮಿಯಾಗಿರುವಳು, ಆಕೆಯೇ ಅಭಾವಕಾಲದಲ್ಲಿ ಅಲಕ್ಷ್ಮಿಯಾಗಿ ವಿನಾಶಕ್ಕೆ ಕಾರಣಳಾಗುವಳು, ಸ್ತೋತ್ರಮಾಡಿ ಪುಷ್ಪ, ಧೂಪ, ಗಂಧಾದಿಗಳಿಂದ ಪೂಜಿಸಿದ್ದೇ ಆದರೆ ಐಶ್ವರ್ಯವನ್ನೂ ಮಕ್ಕಳನ್ನೂ ಧರ್ಮಬುದ್ಧಿಯನ್ನೂ ಶುಭವಾದ ಸದ್ಗತಿಯನ್ನೂ ನೀಡಿ ಕಾಪಾಡುವಳು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ