ಅಂತಃಕರಣವೆಂಬ ಅದ್ಭುತ ಯಂತ್ರ
5-1-2017 #ವಿಶ್ವವಾಣಿ ಯಲ್ಲಿ ನನ್ನ ಲೇಖನ.
ಹೊರಗಿನ ಸಂಗತಿಗಳು ಅನಿಷ್ಟವಾಗಿದ್ದರೆ ಬದಲಾಯಿಸಬೇಕೆಂದು ಪ್ರಯತ್ನಿಸುತ್ತೇವೆ, ಆದರೆ ನಮ್ಮ ಅಂತಃಕರಣವನ್ನು ಮಾರ್ಪಡಿಸುವುದು ಉತ್ತಮ ಸನ್ನಿವೇಶ
ಸೃಷ್ಟಿಗೆ ಕಾರಣವಾಗಬಲ್ಲುದೆಂದು ನಮಗೆ ಹೊಳೆಯುವುದೇ ಇಲ್ಲ....
http://epaper.vishwavani.news/bng/e/bng/05-01-2017/18#
ಹೊರಗಿನ ಸಂಗತಿಗಳು ಅನಿಷ್ಟವಾಗಿದ್ದರೆ ಬದಲಾಯಿಸಬೇಕೆಂದು ಪ್ರಯತ್ನಿಸುತ್ತೇವೆ, ಆದರೆ ನಮ್ಮ ಅಂತಃಕರಣವನ್ನು ಮಾರ್ಪಡಿಸುವುದು ಉತ್ತಮ ಸನ್ನಿವೇಶ
ಸೃಷ್ಟಿಗೆ ಕಾರಣವಾಗಬಲ್ಲುದೆಂದು ನಮಗೆ ಹೊಳೆಯುವುದೇ ಇಲ್ಲ....
http://epaper.vishwavani.news/bng/e/bng/05-01-2017/18#
ಅಂತಃಕರಣವೆಂಬುದೊಂದು ಜಟಿಲವಾದ ಯಂತ್ರವು. ಮನುಷ್ಯ ತನ್ನ ಉಪಯೋಗಕ್ಕೆ ಮಾಡಿಕೊಂಡಿರುವ ಯಂತ್ರಗಳಲ್ಲಿ ಚಕ್ರಗಳು, ಕೀಲುಗಳು ಮುಂತಾದ ಹಲವು ಅವಯವಗಳಿರುತ್ತವೆ. ಸಾಮಾನ್ಯವಾದ ಜನರಿಗೆ ಆ ಯಂತ್ರಗಳ ರಚನಾಕ್ರಮವು ಮನಸ್ಸಿಗೆ ಹತ್ತುವ ಹಾಗೆಯೇ ಇರುವದಿಲ್ಲ, ಅವುಗಳ ಅವಯವಗಳು ಒಟ್ಟುಗೂಡಿ ಪರಸ್ಪರವಾಗಿ ಉಪಕಾರ್ಯೋಪಕಾರಕವಾಗಿದ್ದಕೊಂಡು ಸಾದಿಸುವ ಅದ್ಭುತಕಾರ್ಯಗಳು ಅತ್ಯಮತ ಆಶ್ಚರ್ಯಕರವಾಗಿರುತ್ತವೆ. ಆದರೆ ಅಂತಃಕರಣಯಂತ್ರಕ್ಕೆ ಹೋಲಿಸಿದರೆ ಅವುಗಳು ಬಹಳ ಸಾಧಾರಣವಾಗಿ ಕಾಣುತ್ತವೆ. ಈ ಹೊರಗಿನ ಯಂತ್ರಗಳ ಜೊಡುಗಿರಿಯನ್ನು ಕುಶಲಮತಿಯಾದವನು ಒಬ್ಬ ಯಾಂತ್ರಿಕನ ಸಹಾಯದಿಂದ ತಿಳಿದುಕೊಂಡು ಅವುಗಳನ್ನು ಬಿಚ್ಚಬಹುದು ಮತ್ತೆ ಸಂಹತವಾದ ಯಂತ್ರವಾಗುವಂತೆ ಜೋಡಿಸಲೂ ಬಹುದು ಆದರೆ ಅಂತಃಕರಣದ ವಿಮರ್ಶವು ಹಾಗಲ್ಲ, ಅದರಲ್ಲಿ ಅನಂತವಾದ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿವಿಶೇಷಗಳಿರುತ್ತವೆ; ಆದರೂ ಆ ಶಕ್ತಿಗಳು ಯಾವದಾದರೊಂದು ಅವಯವದಿಂದ ಆಗಿರುವದಿಲ್ಲ, ಅಂತಃಕರಣವು ಸಾವಯವಯಂತ್ರವಲ್ಲ ಅಪರಿಮಿತವಾದ ವ್ಯಾಪಾರಗಳನ್ನು ಮಾಡುವ ಶಕ್ತಿಗಳಿಂದ ಕೂಡಿ ಮನುಷ್ಯನಿಗೆ ಉಪಯೋಗವಾಗುವಂತೆ ಪರಮೇಶ್ವರನು ಅನುಗ್ರಹಿಸಿರುವ ಪರಮಸೂಕ್ಷ್ಮವಾದ ಯಂತ್ರವದು!
ಅಂತಃಕರಣದ ಕೆಲವು ವ್ಯಾಪಾರಗಳನ್ನು ಈಗ ಮನಸ್ಸಿಗೆ ತಂದುಕೊಳ್ಳಬಹುದು, ಹೊರಗಿನ ವಿಷಯಗಳನ್ನು ಇಂದ್ರಿಯಗಳು ಗ್ರಹಿಸುವಾಗ ಅದಕ್ಕೆ ಸಹಾಯಮಾಡುವದು ಅಂತಃಕರಣವು. ನಾವು ಯಾವದಾದರೊಂದು ವಸ್ತುವನ್ನು ನೋಡುವಾಗ ನಮ್ಮ ನೋಡುವ ಇಂದ್ರಿಯಕ್ಕೆ ಅದರ ಬೆಂಬಲವು ಬೇಕೇ ಬೇಕುಇಲ್ಲದಿದ್ದರೆ ಬರಿಯ ಇಂದ್ರಿಯವು ನೋಡಲಾರದು ಹೀಗೆಯೇ ವಿಷಯವನ್ನು ಕೇಳುವ, ಮುಟ್ಟುವ, ಮೂಸುವ, ಸವಿಯುವ, ಇಂದ್ರಿಯಗಳಿಗೂ ಈ ಅಂತಃಕರಣದ ಹಿಮ್ಮೇಳವು ಬೇಕು. ಅಂತಃಕರಣದ ನೆರವಿಲ್ಲದ ಕಣ್ಣು ಕಣ್ಣಲ್ಲ, ಕಿವಿ ಕಿವಿಯಲ್ಲ, ನಾಲಗೆಯು ನಾಲಿಗೆಯಲ್ಲ ಹೀಗೆ ನೋಡಿದರೆ ಅಂತಃಕರಣವೇ ಕೇಳುವ, ಮುಟ್ಟುವ, ನೋಡುವ, ಸವಿಯುವ ಮತ್ತು ಮುಸುವ ವ್ಯಾಪಾರಗಳನ್ನು ಮಾಡುತ್ತಿರುವದೆಂದು ಹೇಳಬಹುದು.
ಅಂತಃಕರಣವು ಹೊರಗಿನ ವಿಷಯಗಳನ್ನು ಗ್ರಹಿಸುವದು ಮಾತ್ರವೇ ಅಲ್ಲ ನಮ್ಮೊಳಗೇ ಇದ್ದುಕೊಂಡು ಹಲವು ರೂಪುಗಳನ್ನು ತಳೆಯುತ್ತಿರುವದು, ಆ ರೂಪಗಳನ್ನು ತಳೆದೆನೆಂಬ ಅರಿವನ್ನೂ ಮಾಡಿಕೊಳ್ಳುತ್ತಿರುವದು ಹೀಗೆಂದರೆ ವಸ್ತುಗಳನ್ನು ಬಯಸುವದು, ಹೀಗೆ ಮಾಡುವೆನೆಂದು ಸಂಕಲ್ಪಿಸುವದು, ಹೆದರುವದು, ನಾಚುವದು, ಹೆಮ್ಮೆಪಡುವದು, ಸಿಟ್ಟಾಗುವದು, ಉದಾರಭಾವವನ್ನು ತಳೆಯುವದು, ಜಿಪುಣತನವನ್ನು ಪಡೆಯುವದು, ಉಬ್ಬುವದು, ಕುಸಿಯುವದು, ಸುಖವನ್ನು ಅನುಭವಿಸುವದು, ದುಃಖಿಸುವದು-ಇವೇ ಮುಂತಾದ ವ್ಯಾಪಾರಗಳೆಲ್ಲವೂ ಈ ಅಂತಃಕರಣಕ್ಕೇ ಸೇರಿರುತ್ತವೆ. ಈಗ ನನಗೆ ಹೆದರಿಕೆಯಾಗಿದೆ, ನಾಚಿಕೆಯಾಗಿದೆ, ಸಿಟ್ಟು ಬಂದಿದೆ, ಇಚ್ಛೆಯುಂಟಾಗಿದೆ, ಬೇಸರವಾಗಿದೆ ಎಂದು ಮುಂತಾಗಿ ಅರಿತುಕೊಳ್ಳುವದೂ ಈ ಅಂತಃಕರಣವೇ ಈ ಒಂದೊಂದು ವ್ಯಾಪಾರವನ್ನೂ ಅಂತಃಕರಣದ ವೃತ್ತಿ ಎಂದು ಕರೆಯುತ್ತಾರೆ.
ಅಂತಃಕರಣದ ವೃತ್ತಿಗಳನ್ನು ದೊಡ್ಡ ದೊಡ್ಡ ವರ್ಗಗಳಾಗಿ ವಿಂಗಡಿಸಿಕೊಂಡು ವಿಚಾರಮಾಡಬೇಕಾಗುವದು. ಅರಿಯುವ ವೃತ್ತಿಗಳು ಎಂಬುದು ಒಂದು ವರ್ಗ ಸಂಕಲ್ಪಿಸುವ ವೃತ್ತಿಗಳು ಎಂಬುದು ಮತ್ತೊಂದು ವರ್ಗ ಈ ಒಂದೊಂದು ವರ್ಗದಲ್ಲಿಯೂ ಹಲವು ವಿಭಾಗಗಳಿರುತ್ತವೆ. ಉದಾಹರಣೆಗೆ ಗ್ರಹಿಸುವದು, ಸಂಶಯ ಪಡುವದು, ಊಹಿಸುವದು, ಮನನಮಾಡುವದು, ನಿಶ್ಚಯಮಾಡುವದು, ನೆನಪಿಸಿಕೊಳ್ಳುವದು, ಮರೆಯುವದು ಮುಂತಾದವುಗಳು ಅರಿಯುವ ವರ್ಗಕ್ಕೆ ಸೇರಿರುತ್ತವೆ. ದುಃಖಿಸುವದು, ಸುಖಿಸುವದು, ಅಂಜುವದು, ಧೀರನಾಗಿರುವದು, ಇಚ್ಚಿಸುವದು, ವಿರಕ್ತನಾಗುವದು ಇವೇ ಮುಂತಾದವು ವೇದನೆಯ ವೃತ್ತಿಗಳ ವರ್ಗಕ್ಕೆ ಸೇರಿರುತ್ತವೆ.
ಮನುಷ್ಯನ ಅಂತಃಕರಣದಲ್ಲಿ ಯಾವದಾದರೊಂದು ಬಗೆಯ ಚಿಂತೆಯು ಇದ್ದು ಕೊಂಡೇ ಇರುವದು ಹೊರಗಿನ ವಿಷಯಗಳಿಂದಾಗುವ ಪ್ರೀತಿ, ಅಸಮಾಧಾನ, ತೃಪ್ತಿ, ಸಂತೋಷ, ದುಃಖ ಮುಂತಾದವುಗಳಲ್ಲಿ ಕೆಲಕೆಲವು ಭಾವಗಳು ಅಂತಃಕರಣವನ್ನು ಆವರಿಸಿಕೊಂಡುಬಿಟ್ಟಿರುತ್ತವೆ. ಯಾವ ಮನುಷ್ಯನ ಅಂತಃಕರಣದಲ್ಲಿ ಎಂಥ ಭಾವನೆಗಳಿರುವವೋ, ಆ ಮನುಷ್ಯನ ಸ್ವಭಾವವು ಅದಕ್ಕೆ ಅನುಗುಣವಾಗಿರುತ್ತವೆ. ಕೆಲವು ಜನರು ಸಿಡುಕರು, ಕೆಲವರು ನಿತ್ಯಸಂತುಷ್ಟರು, ಕೆಲವರು ಯಾವಾಗಲೂ ಸಂಶಯಗ್ರಸ್ತರು, ಕೆಲವರು ಅಂಜುಪುರುಕರು, ಕೆಲವರು ಧೀರರು, ಕೆಲವರು ಸ್ವಾರ್ಥ ಪರರು, ಕೆಲವರು ಪರೋಪಕಾರಿಗಳು ಇತ್ಯಾದಿ... ಇತ್ಯಾದಿ. ಮನುಷ್ಯರ ಒಳಗಿನ ಅಂತಃಕರಣವು ಅವರ ಹೊರಗಿನ ನಡತೆಯ ಮೇಲೂ ಪರಿಣಾಮವನ್ನು ಮಾಡಿ ಬಿಟ್ಟಿರುತ್ತದೆ. ನಾವು ಕೆಲವರನ್ನು ನಮಗೆ ಬೇಕಾದವರೆಂದೂ ಮತ್ತೆ ಕೆಲವರನ್ನು ನಮ್ಮ ಹಗೆಗಳೆಂದೂ ಇನ್ನೂ ಕೆಲವರನ್ನು ಅಲ್ಪರೆಂದೂ ಔದಾಸೀನ್ಯತೆಗೆ ಅರ್ಹರೆಂದೂ ಎಣಿಸುವೆವಷ್ಟೆ. ಇದಕ್ಕೆ ನಮ್ಮ ಮತ್ತು ಅವರ ಅಂತಃಕರಣಭಾವಗಳೇ ಕಾರಣವಾಗಿರುತ್ತವೆ.
ನಮ್ಮ ಅಂತಃಕರಣದಲ್ಲಿರುವ ಭಾವನೆಗಳು ನಮ್ಮ ನಡತೆಯಮೇಲೆ ಮಾತ್ರವೇ ಅಲ್ಲ, ನಮ್ಮ ಸುತ್ತವಳೆಯದ ಮೇಲೂ ಪರಿಣಾಮವನ್ನು ಉಂಟುಮಾಡುತ್ತಿರುವವು. ಇದು ನಮ್ಮಲ್ಲಿ ಅನೇಕರಿಗೆ ತಿಳಿಯದು. ನಮ್ಮ ಹೊರಗಿನ ಸನ್ನಿವೇಶವು ದುಃಖಮಯವಾಗಿ, ದಾರಿದ್ರ್ಯಮಯವಾಗಿ, ಅನಾರೋಗ್ಯಮಯವಾಗಿ, ಕಂಡುಬಂದರೆ ನಮ್ಮ ಒಳಗಿನ ಭಾವನೆಗಳೇ ಬಲುಮಟ್ಟಿಗೆ ಈ ಸನ್ನಿವೇಶಕ್ಕೆ ಕಾರಣವೆಂದು ತಿಳಿಯಬೇಕು, ಹೊರಗಿನ ತೋರಿಕೆಗಳು ಅನಿಷ್ಟವಾಗಿದ್ದರೆ ಅವುಗಳನ್ನು ಬದಲಾಯಿಸಬೇಕೆಂದೇ ನಾವುಗಳು ಸಾಮಾನ್ಯವಾಗಿ ಪ್ರಯತ್ನಿಸುತ್ತಿರುವೆವು, ಆದರೆ ನಮ್ಮ ಅಂತಃಕರಣದ ಭಾವನೆಗಳನ್ನು ಮಾರ್ಪಡಿಸುವದು ಉತ್ತಮ ಸನ್ನಿವೇಶದ ಸೃಷ್ಟಿಗೆ ಕಾರಣವಾಗುವದೆಂಬುದು ನಮಗೆ ಹೊಳೆಯುವದೇ ಇಲ್ಲ ನಮ್ಮ ಸನ್ನಿವೇಶವು ಉತ್ತಮವಾಗಿ ನಮಗೆ ಸಂಬಂಧಪಟ್ಟ ವಸ್ತುಗಳೂ ಪ್ರಾಣಿಗಳೂ ಮನುಷ್ಯರೂ ಸುಖದಾಯಕವೇ ಆಗಿರಬೇಕಾದರೆ ಮೊದಲು ನಮ್ಮ ಅಂತಃಕರಣದ ಭಾವನೆಗಳು ಉತ್ತಮ ಭಾವನೆಗಳಾಗಬೇಕು. ನಿಜವಾದ ಕಾರ್ಯಕಾರಣಭಾವವು ಹೊರಗಿನ ತೋರಿಕೆಗಳಲ್ಲಿಲ್ಲ; ನಮ್ಮ ಭಾವನೆಗಳೇ ಕಾರಣ, ಹೊರಗಿನ ಸನ್ನಿವೇಶವು ಕಾರ್ಯ ನಮ್ಮ ಇಹಪರಗಳು ಎಲ್ಲಾ ಬಗೆಯಿಂದಲೂ ಸುಖಮಯವಾಗಬೇಕಾದರೆ ಮೊಟ್ಟಮೊದಲು ನಮ್ಮ ಅಂತಃಕರಣದಲ್ಲಿ ಶುಭವೃತ್ತಿಗಳು ಏರ್ಪಡಬೇಕು.
ಮನಸ್ಸಿನಲ್ಲಿ ಆಗುವ ವೃತ್ತಿಗಳನ್ನು ಪರಸ್ಪರವಿರುದ್ಧವಾದ ಜೋಡಿಗಳಾಗಿ ವಿಂಗಡಿಸಬಹುದಾಗಿದೆ. ಹೊರಗಿನ ಸನ್ನಿವೇಶದಲ್ಲಿ ಕೆಲಕೆಲವಸ್ತುಗಳು, ಪ್ರಾಣಿಗಳು ಅಥವಾ ಮನುಷ್ಯರು ನಮಗೆ ಇಷ್ಟವೆಂದು ತೋರುವದು; ಮತ್ತೆ ಕೆವು ಅನಿಷ್ಟವೆಂದು ತೋರುವದು ಇಷ್ಟವಾದದ್ದರಲ್ಲಿ ನಮಗೆ ರಾಗವೂ ಅನಿಷ್ಟವಾದದ್ದರಲ್ಲಿ ನಮಗೆ ದ್ವೇಷವೂ ಎದ್ದುಕೊಳ್ಳುವವು. ಇಷ್ಟವಾದದ್ದರಿಂದ ನಮಗೆ ಸುಖವೂ ಅನಿಷ್ಟವಾದದ್ದರಿಂದ ನಮಗೆ ದುಃಖವೂ ಆಗುವದು ಸುಖವಾಗುವ ವೇದನೆಗಳನ್ನು ಬರಮಾಡಿಕೊಳ್ಳುವದಕ್ಕೂ ದುಃಖಪ್ರದವಾದ ವೇದನೆಗಳನ್ನು ತೊಲಗಿಸುವದಕ್ಕೂ ನಾವು ಹವಣಿಸುತ್ತಲಿರುವೆವು, ಆದ್ದರಿಮದ ನಮ್ಮ ಜೀವನವೆಲ್ಲ ಈ ಪರಸ್ಪರವಿರುದ್ಧವಾದ ಜೋಡಿಗಳ ಹೋರಾಟವೇ ಆಗಿರುವದೆಂದೂ ಹೇಳಬಹುದಾಗಿದೆ. ಶೀತ, ಉಷ್ಣ, ಸೋಲು, ಗೆಲವು, ಬಡತನ, ಸಿರಿತನ, ಬೇನೆ, ಸ್ವಾಸ್ಥ್ಯಾ, ಮುಪ್ಪು ಸಾವುಗಳು ಯೌವನ, ಅಂಜಿಕೆ, ದಿಟ್ಟತನ, ನಂಬದಿರುವದು, ನಂಬುವದು, ಜ್ಞಾನ, ಅಜ್ಞಾನ ಹೀಗೆ ಹಲವು ಪರಸ್ಪರವಿರುದ್ದವಾದ ಜೋಡಿಗಳು ನಮ್ಮ ಅಂತಃಕರಣದಲ್ಲಿ ತಮ್ಮ ತಮ್ಮ ವೃತ್ತಿಗಳನ್ನು ಏರ್ಪಡಿಸುತ್ತಿರುವವು, ಈ ಜೋಡಿಗಳಿಗೆ ದ್ವಂದ್ವಗಳು ಎಂದು ಹೆಸರು ದ್ವಂದ್ವಗಳು ಹೊರಗಿನ ವಸ್ತುಗಳಾಗಿರಲಿ ಒಳಗಿನ ವೇದನೆಗಳಾಗಿರಲಿ, ದ್ವಂದ್ವಗಳೇ, ಆಧಿಭೌತಿಕವಾದ ಎಂದರೆ ಹೊರಗಿನ ದ್ವಂದ್ವಗಳಾಗಲಿ ಆದ್ಯಾತ್ಮಿಕವಾದ ವೇದನಾರೂಪವಾದ ಒಳಗಿನ ದ್ವಂದ್ವಗಳಾಗಲಿ ನಮ್ಮ ಅಂತಃಕರಣದಲ್ಲಿ ತಮಗೆ ಅನುಗುಣವಾದ ವೃತ್ತಿಗಳನ್ನು ಎಬ್ಬಿಸದೆ ಇರುವದೇ ಇಲ್ಲ ಆದ್ದರಿಮದ ನಮ್ಮ ಅಂತಃಕರಣದಲ್ಲಿ ದ್ವಂದ್ವವೃತ್ತಿಗಳ ಹೋರಾಟವೇ ನಡೆದಿರುವದೆಂದು ಹೇಳಿದರೆ ತಪ್ಪಾಗದು.
ಈಗಿನ ಅಂತಃಕರಣಶಾಸ್ತ್ರಜ್ಞರು ಈ ತತ್ತ್ವವನ್ನು ಲಕ್ಷ್ಯಕ್ಕೆ ತಂದುಕೊಂಡು ಬೆಳೆಯಿಸಿಕೊಳ್ಳಬೇಕಾದ ಯುಕ್ತವೃತ್ತಿಗಳೆಂದೂ ಪರಿಹರಿಸಿಕೊಳ್ಳಬೇಕಾದ ಆಯುಕ್ತವೃತ್ತಿಗಳೆಂದೂ ಎರಡು ಪಂಗಡಗಳಾಗಿ ವಿಂಗಡಿಸಿರುತ್ತಾರೆ. ಆಯುಸ್ಸು, ಆರೋಗ್ಯ, ಐಶ್ವರ್ಯ, ಜಯ, ನಂಬಿಕೆ, ಧೈರ್ಯ - ಮುಂತಾದವು ಯುಕ್ತವೃತ್ತಿಗಳು; ಅಪಮೃತ್ಯು, ಬೇನೆ, ಬಡತನ, ಸೋಲು, ವಿಶ್ವಾಸವಿಲ್ಲದಿರುವದು, ಅಂಜಿಕೆ - ಮುಂತಾದವು ಆಯುಕ್ತವೃತ್ತಿಗಳು. ಜೀವನವನ್ನು ಸುಖಮಯವಾಗಿ ಮಾಡಿಕೊಳ್ಳಬೇಕೆಂಬ ಮಾನವನು ಯಕ್ತವೃತ್ತಿಗಳನ್ನೇ ಭಾವಿಸುತ್ತಿರಬೇಕು; ಆಯುಕ್ತವೃತ್ತಿಗಳನ್ನು ಮನಸ್ಸಿಗೆ ಹತ್ತಿಸಿಕೊಳ್ಳಬಾರದು- ಎಂಬುದು ಅಂತಃಕರಣವಿಜ್ಞಾನಶಾಸ್ತ್ರದ ಉಪದೇಶವು. ಈ ವಾದವು "ಭರತಖಂಡದವರಿಗೇನೂ ಹೊಸದಲ್ಲ. ಏಕೆಂದರೆ ಯೋಗಶಾಸ್ತ್ರದಲ್ಲಿ 'ಚಿತ್ತವೆಂಬ' ಹೆಸರಿನಿಂದ ಕರೆದಿರುವ ಅಂತಃಕರಣದ ವೃತ್ತಿಗಳನ್ನು ಕುರಿತ ವಿಸ್ತಾರವಾದ ಪ್ರತಿಪಾದನೆಯಿದೆ. ಯೋಗಶಾಸ್ತ್ರದಲ್ಲಿ ಚಿತ್ತವೃತ್ತಿಗಳನ್ನೆಲ್ಲ ನಿರೋಧಮಾಡಿ ಸಮಾಧಿಯನ್ನು ಪಡೆಯುವದರಿಮದ ಪರಮಪುರಷಾರ್ಥವು ದೊರೆಯಬೇಕೆಂದು ಪ್ರತಿಪಾದಿಸಿರುತ್ತದೆಯಾದರೂ ಆ ಪ್ರಸಂಗದಿಂದ 'ಪ್ರತಿಪಕ್ಷ ಭಾವನೆ' ಎಂಬ ಹೆಸರಿನಿಂದ ಯುಕ್ತವೃತ್ತಿಗಳ ಭಾವನೆಯನ್ನೂ ಉಪದೇಶಿಸಿರುತ್ತದೆ. ಭಗವದ್ಗೀತೆಯಲ್ಲಿ ಅಜ್ಞಾನದಿಂದ ಬಂಧವೂ ಜ್ಞಾನದಿಂದ ಮೋಕ್ಷವೂ ಆಗುವದೆಂದು ತಿಳಿಸುವ ಸಂದರ್ಭದಲ್ಲಿ ಮಾನಿತ್ವ, ದಂಭಿತ್ವ, ಹಿಂಸಾ, ವಕ್ರತೆ ಮುಂತಾದ ಆಯುಕ್ತ ವೃತ್ತಿಗಳನ್ನು ಬಿಟ್ಟು ಅಮಾನಿತ್ವ, ಅದಂಭಿತ್ವ, ಅಹಿಂಸಾ, ಅರ್ಜವ ಮುಂತಾದ ಯುಕ್ತವೃತ್ತಿಗಳ ಭಾವನೆಯನ್ನು ಮಾಡುವದು ತತ್ತ್ವಜ್ಞಾನಕ್ಕೆ ಕಾರಣವಾಗುವದೆಂದು ಹೇಳಿರುತ್ತದೆ. ಹೀಗೆಯೇ ಪುರಾಣಾದಿಗಳಲ್ಲಿ ಆಯುಕ್ತಭಾವನೆಯಿಂದ ಆಗುವ ದುಷ್ಫಲವನ್ನೂ ಯುಕ್ತಭಾವನೆಯಿಂದಾಗುವ ಸತ್ಫಲವನ್ನೂ ಹೇರಳವಾಗಿ ವರ್ಣಿಸಿರುತ್ತದೆ.
"ಅಂತಃಕರಣದಲ್ಲಿ ಯುಕ್ತವೃತ್ತಿಗಳೂ ಆಯುಕ್ತವೃತ್ತಿಗಳೂ ಎದ್ದುಕೊಂಡು ಕಾಣುವದಲ್ಲದೆ ಈ ವೃತ್ತಿಗಳೂ ಹೊರಬೀಳದೆ ಇರುವಾಗಲೂ ವಾಸನಾರೂಪದಿಂದ ಅವ್ಯಕ್ತವಾಗಿ ಅದರಲ್ಲಿ ಬೀಡುಬಿಟ್ಟುಕೊಂಡೇ ಇರುತ್ತವೆ. ಅಂತಃಕರಣದಲ್ಲಿ ಅರಿವಿನ ಭಾಗವಲ್ಲದೆ, ಅರೆಯರಿವಿನ, ವಾಸನೆಗಳ ಬೀಡೊಂದು ಇರುತ್ತದೆ. ಇದನ್ನು ಈಗಿನ ವಿಜ್ಞಾನವಾದಿಗಳು "ಅಸಂವಿಜ್ಞಾನ" "ಅಧಃಸಂವಿಜ್ಞಾನ"ದ ಅಂತಃಕರಣ (Unconscious, Sub-conscious Mind) ಎಂದು ಕರೆಯುತ್ತಾರೆ. ಅದನ್ನು ನಾವು ವಾಸನೆಗಳ ಆಶಯವೆಂದು ಕರೆಯಬಹುದು. ಆಶಯವೆಂದರೆ ವೃತ್ತಿಗಳು ವಾಸನೆಗಳ ರೂಪದಿಂದ ಮಲಗಿರುವ ಅಂತಃಕರಣಭಾಗವು ನೆಲದ ಮೇಲೆ ಬೆಳೆಯುತ್ತಿರುವ ಗಿಡದ ಬೇರು ನೆಲದ ಕೆಳಗೆ ನಾನಾಮುಖವಾಗಿ ಹರಡಿಕೊಂಡಿರುವಂತೆ, ಅಂತಃಕರಣವೃತ್ತಿಗಳು ವಾಸನಾರೂಪದಿಂದ ಈ ಆಶಯದಲ್ಲಿದ್ದುಕೊಂಡಿರುತ್ತವೆ. ಬೇರುಗಳು ನೆಲದಿಂದ ಹೀರಿಕೊಂಡ ಆಹಾರವೇ ಮೇಲೆ ಗಿಡವು ಬೆಳೆದುಕೊಳ್ಳುವದಕ್ಕೆ ಕಾರಣವಾಗಿರುವಂತೆ, ಆಶಯದಲ್ಲಿ ಆಗುವ ವಾಸನೆಗಳ ವ್ಯಾಪಾರವೇ ನಮ್ಮ ವೃತ್ತಿಗಳು ಹಲವು ರುಪಗಳಿಂದ ಹೊರಬೀಳುವದಕ್ಕೆ ಕಾರಣವಾಗಿರುವದು. ನಾವು ಯಾವ ಯೋಚನೆಯನ್ನೂ ಮಾಡುತ್ತಿಲ್ಲವೆಂದು ನಾವು ತಿಳಿದುಕೊಂಡಿರುವಾಗಲೂ ಈ ಆಶಯವೆಂಬ ಅಂತಃಕರಣದ ಭಾಗದಲ್ಲಿ ವಾಸನೆಗಳ ವ್ಯಾಪಾರವು ನಡೆಯುತ್ತಲೇ ಇರುವದು. ಯಾವದಾದರೊಮದು ವಿಚಾರವನ್ನು ಒಮ್ಮೆ ಮನಸ್ಸಿಗೆ ತಂದುಕೊಂಡು ನಾವು ಬೇರೊಂದು ಕೆಲಸಕ್ಕೆ ಕೈಹಾಕಿರುವಾಗಲೂ ಆ ವಿಚಾರದ ಅಡಿಗೆಯು ಆಶಯದಲ್ಲಿ ನಡೆಯುತ್ತಲೇ ಇರುತ್ತದೆ. ನಾವು ತಿಂದ ಆಹಾರವು ಅರಗಿ ಶರೀರಕ್ಕೆ ಹೊಂದುಗೆಯಾಗಿ ಸೇರಿಕೊಳ್ಳುವ ಮುಂಚೆ, ಹೊರಗಿನ ಕೈ ಬಾಯಿ ಹಲ್ಲು ನಾಲಗೆ ಗಂಟಲುಗಳ ವ್ಯಾಪಾರವೇ ಅಲ್ಲದೆ ಶರೀರದೊಳಗೆ ನಮಗೆ ಅರಿವಾಗದಂತೆ ಹೃದಯ, ಪಿತ್ತಕೋಶ, ನಾಡಿಗಳು ಮುಂತಾದ ಸ್ಥಾನಗಳಲ್ಲಿ ಬಗೆಬಗೆಯ ಪರಿಣಾಮವನ್ನು ಹೊಂದುವದೆಂಬುದು ಶರೀರಶಾಸ್ತ್ರವನ್ನು ಓದಿರುವವರ ತಿಳಿವಳಿಕೆಗೆ ಬಂದಿರುತ್ತದೆ ಅದರಂತೆ ನಾವು ಮಾಡುವ ಅಲೋಚನೆಗಳು ನಮ್ಮ ಅಂತಃಕರಣದಲ್ಲಿ ನಮಗೆ ತಿಳಿದುಬರುವಂತೆ ಒಂದಕ್ಕೊಂದು ಸೇರಿಕೊಂಡು ವಿವಿಧವಾದ ಆಕಾರಗಳನ್ನು ಹೊಂದುತ್ತಿರುವದಲ್ಲದೆ ಆ ವೃತ್ತಿಗಳ ವಾಸನೆಗಳು ಅಂತಃಕರಣದ ಆಶಯದಲ್ಲಿಐಉ ನಮಗೆ ಅರಿಯದಂತೆಯೇ ಹಲವು ಮಾರ್ಪಾಡುಗಳನ್ನು ಹೊಂದುತ್ತಿರುವವು.
ಆಶಯದಲ್ಲಿ ಯಾವ ವಾಸನೆಯು ಪ್ರಬಲವಾಗಿರುವದೋ ಅದೇ ಅಂತಃಕರಣದಲ್ಲಿ ಹೊರತೋರಿಕೊಂಡು ನಮ್ಮ ಅಂತಃಕರಣದ ಪ್ರಧಾನವೃತ್ತಿಯಾಗುವದು. ಆ ವೃತ್ತಿಗನುಗುಣವಾದ ಸಂಕಲ್ಪವೂ ನಡೆನುಡಿಗಳೂ ನಮ್ಮಲ್ಲಿ ಒಡೆದುಮೂಡುವವು; ಆ ನಡೆನುಡಿಗಳಿಗೆ ತಕ್ಕಂತೆ ನಮ್ಮ ಜೀವನವೂ ಸನ್ನಿವೇಶವೂ ಏರ್ಪಡುವವು. "ಪುರುಷನು ಶ್ರದ್ಧಾಮಯನು; ಯಾವನು ಯಾವದರಲ್ಲಿ ಶ್ರದ್ಧೆಯುಳ್ಳವನೋ ಅನು ಅದೇ ಆಗಿಬಿಡುತ್ತಾನೆ" ಎಂಬ ಗೀತೋಕ್ತಿಗೆ ಈ ಅಭಿಪ್ರಾಯವನ್ನು ಕಲ್ಪಿಸಬಹುದು. ನಾವು ಯಶಸ್ವಿಯಾದ ಜೀವನವನ್ನು ನಡೆಯಿಸಬೇಕಾದರೆ, ನಮ್ಮ ಸುತ್ತುಮುತ್ತಲಿನ ದೃಶ್ಯಗಳು ಯಾವಾಗಲೂ ಪ್ರೋತ್ಸಾಹಕವಾಗಿ ಉಲ್ಲಾಸದಾಯಕವಾಗಿರಬೇಕಾದರೆ, ನಾವು ಯಶಸ್ವಿಯಾದ ಜೀವನದ ಭಾವನೆಯನ್ನು ಮನಸ್ಸಿನಲ್ಲಿ ತುಂಬಿಕೊಳ್ಳಬೇಕು; ಆ ಭಾವನೆಯು ನಮ್ಮ ಮನಸ್ಸಿಗೆ ಹತ್ತಿಕೊಂಡು ವಾಸನಾಶಯಕ್ಕೆ ಇಳಿಯುವಂತೆ ಮಾಡಿಕೊಳ್ಳಬೇಕು. ಇಷ್ಟೇ ಅಲ್ಲ, ಯಶಸ್ವಿಯಾದ ಜೀವನದ ಭಾವನೆಯನ್ನೇ ಮಾಡುತ್ತಾ ಅದೇ ನಮ್ಮ ಆಶಯದಲ್ಲಿ ಪ್ರಬಲವಾಗಿರುವಂತೆ ಮಾಡಿಕೊಳ್ಳಬೇಕು. "ನಮ್ಮ ಜೀವನವು ಆನಂದಮಯವಾಗಬೇಕು" ಎಂಬ ಸಂಕಲ್ಪವನ್ನು ಬಲವಾಗಿ ಮಾಡಿಕೊಳ್ಳಿರಿ. ನಿಮ್ಮ ಸಂಕಲ್ಪವು ಹೇಗಿರುವದೋ ಅಂಥ ಮನೋನಿಶ್ಚಯವು ಏರ್ಪಡುತ್ತದೆ; ಮನಸ್ಸಿನಲ್ಲಿ ಎಂಥ ನಿಶ್ಚಯವಿರುತ್ತದೆಯೋ ನಿಮ್ಮ ನಡೆನುಡಿಗಳು ಹಾಗೇ ಆಗುತ್ತವೆ. ನಿಮ್ಮ ನಡೆನುಡಿಗಳಿಗೆ ಅನುಗುಣವಾಗಿಯೇ ನಿಮ್ಮ ವ್ಯವಹಾರದ ಪ್ರಪಂಚವು ರೂಪಿಸಿಕೊಳ್ಳುತ್ತದೆ.
ಅಂತಃಕರಣದಲ್ಲಿರುವ ವಾಸನೆಗಳು ಕೆಲವು ಸುಮ್ಮನೆ ಗುಡ್ಡೆಗುಡ್ಡೆಯಾಗಿ ಬಿದ್ದಿರುವವು ಅವುಗಳು ವೃತ್ತಿರೂಪದಿಂದ ಎದ್ದುಕೊಂಡು ನಮ್ಮ ಅಲೋಚನೆಯಲ್ಲಿ ಭಾಗವನ್ನು ತೆಗೆದುಕೊಳ್ಳುವದಕ್ಕೆ ಇನ್ನೂ ಅವಕಾಶವು ದೊರೆತಿರುವದಿಲ್ಲ, ಇನ್ನೂ ಕೆಲವು ನಮ್ಮ ಜೀವನದಲ್ಲಿ ವ್ಯಕ್ತರೂಪದಿಂದ ತೋರಿಕೊಳ್ಳುತ್ತಲೂ ಆಶಯದಲ್ಲಿ ಅವ್ಯಕ್ತವಾಗಿ ವ್ಯಾಪಾರಮಾಡುತ್ತಲೂ ಇರುವವು. ಈ ಎರಡನೆಯ ವರ್ಗದ ವಾಸನೆಗಳೇ ನಮ್ಮ ಈಗಿನ ಜೀವನವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವವು, ಅಂತಃಕರಣಕ್ಕೆ ಯಾವ ಭಾವನೆಗಳನ್ನು ಸೂಚಿಸುತ್ತಾ ಅದರ ಭಾವನಾಕ್ರಮವನ್ನು ಮಾರ್ಪಡಿಸಿಕೊಂಡರೆ ನಮ್ಮ ವ್ಯವಹಾರವು ಮಂಗಲಮಯವಾಗುವದು ಎಂಬುದನ್ನು ತಿಳಿಸುವದೇ ಈಗಿನ ಅಂತಃಕರಣಶಾಸ್ತ್ರಜ್ಞರ ಕೆಲಸವಾಗಿದೆ. ನಮ್ಮ ಅಂತಃಕರಣದಲ್ಲಿರುವ ಭಾವನೆಗಳು ಆಶಯಕ್ಕೆ ಇಳಿದು, ಅಂತಃಕರಣದ ವ್ಯಾಪಾರವನ್ನು ತೋರಿಸುತ್ತವೆ. ಅಂತಃಕರಣದ ವ್ಯಾಪಾರಕ್ಕೆ ಅನುಗುಣವಾಗಿಯೇ ನಮ್ಮ ಶರೀರದ ಸ್ಥಿತಿಯೂ ಹೊರಗಿನ ಸನ್ನಿವೇಶಗಳೂ ಮಾರ್ಪಡುತ್ತವೆ ಎಂದು ಅಂತಃಕರಣಶಾಸ್ತ್ರಜ್ಞರು ಭೋಧಿಸುತ್ತಾರೆ. ಅಂತಃಕರಣದ ಶಕ್ತಿಗಳು ಇಷ್ಟೇ ಎಂಬ ಪರಿಮಿತಯಿಲ್ಲ ಅದು ಹೇಗೆ ಸಂಕಲ್ಪಸಿದರೆ ಹಾಗೆ ಹೊರಗಿನ ಪರಿಸ್ಥಿತಿ ಏರ್ಪಡುತ್ತದೆ ಎಂದೂ ಅವರಲ್ಲಿ ಕೆಲವರು ಹೇಳುತ್ತಿದ್ದಾರೆ.
ಅಂತಃಕರಣದ ಶಕ್ತಿಗಳ ವಿಚಾರವಾಗಿ ಆಧುನಿಕರು ಬಹಳವಾಗಿ ಗ್ರಂಥಗಳನ್ನು ಬರೆದಿರುತ್ತಾರೆ. ನಮ್ಮ ಅಂತಃಕರಣದ ಭಾವನೆಗಳು ನಮ್ಮ ಮೇಲೆಯೇ ಅಲ್ಲದೆ, ನಮ್ಮ ಸುತ್ತಮುತ್ತಲಿನವರ ಮನಸ್ಸಿನ ಮೇಲೆಯೂ ಪರಿಣಾಮವನ್ನು ಮಾಡುವವೆಂದು ಅವರು ಹೇಳುತ್ತಿದ್ದಾರೆ, ಮೋಹನವಿದ್ಯೆ, ವಶೀಕರಣವಿದ್ಯೆ ಮುಂತಾದವುಗಳೆಲ್ಲೂ ಅಂತಃಕರಣದ ಶಕ್ತಿವಿಶೇಷಗಳನ್ನುಪಯೋಗಿಸುವ ಬೇರೆಬೇರೆಯ ಪ್ರಕಾರಗಳಾಗಿರುತ್ತವೆ, ಆದರೆ ಆ ವಿದ್ಯೆಗಳನ್ನು ತಮ್ಮ ಸ್ವಾರ್ಥಕ್ಕೇ ಉಪಯೋಗಿಸುವ ಜನರು ಹೆಚ್ಚಿರುವದರಿಂದ ಮನಃಶಕ್ತಿಗಳ ದುರುಪಯೋಗವೇ ಬಹಳವಾಗಿ ಆಗುತ್ತಿರುತ್ತದೆ. ಮನಃಶಕ್ತಿಗಳನ್ನುಪಯೋಗಿಸಿ ಜನರನ್ನು ಸರಿಯಾದ ಮಾರ್ಗಕ್ಕೆ ಹಚ್ಚುವೆನೆಂಬುದೂ ಒಂದು ಬಗೆಯ ಹುಚ್ಚು, ಆದರೆ ಆ ಶಕ್ತಿಗಳನ್ನುಪಯೋಗಿಸಿ ಜನರನ್ನು ವಶಗೊಳಿಸಿಕೊಂಡು ತನ್ನ ಪ್ರಯೋಜನಕ್ಕೆ ಉಪಕರಣವಾಗಿ ಮಾಡಿಕೊಳ್ಳುವದೆಂಬುದು ಒಂದು ಬಗೆಯ ಮಾಡವಾಗಿರುತ್ತದೆ. ಮನಃಶಕ್ತಿಯಿಂದ ಮತ್ತೊಬ್ಬರನ್ನು ತನ್ನ ಕಡೆಗೆ ಎಳೆದುಕೊಳ್ಳುವದಕ್ಕೆ ಪ್ರಯತ್ನಿಸುವದು ಬಹಳ ಅಪಾಯಕರವಾಗಿರುತ್ತದೆ, ಮತ್ತೊಬ್ಬರ ಪ್ರಯೋಜನಕ್ಕಾಗಿ ಮನಃಶಕ್ತಿಗಳನ್ನು ಉಪಯೋಗಿಸಿದರೆ ತಾತ್ಕಾಲಿಕವಾದ ಪ್ರಯೋಜನವಾಗಬಹುದಾದರೂ ಕೊನೆಯಲ್ಲಿ ಅದೆಲ್ಲ ನಿರರ್ಥಕವಾಗುತ್ತದೆ ಇಷ್ಟೇ ಅಲ್ಲ ಹೀಗೆ ಮನಃಶಕ್ತಿಗಳನ್ನು ಉಪಯೋಗಿಸಿದರೆ ತಾತ್ಕಾಲಿಕವಾದ ಪ್ರಯೋಜನವಾಗಬಹುದಾದರೂ ಕೊನೆಯಲ್ಲಿ ಅದೆಲ್ಲ ನಿರರ್ಥಕವಾಗುತ್ತದೆ ಇಷ್ಟೇ ಅಲ್ಲ ಹೀಗೆ ಮನಃಶಕ್ತಿಗಳನ್ನು ಪ್ರಯೋಗಿಸಿದವರಿಗೂ ಕೊನೆಗೆ ಅಪಾಯವಿರುತ್ತದೆ ಇನ್ನು ಕೆಲವರು ಈ ಶಕ್ತಿಗಳನ್ನು ಇಷ್ಟಾರ್ಥ ಸಿದ್ಧಿಗೆಂದು ಉಪಯೋಗಿಸುತ್ತಾರೆ. ನಿಧಿಯನ್ನು ಮಂತ್ರಶಕ್ತಿಯಿಂದ ಕಂಡು ಹಿಡಿಯುವ ವಿದ್ಯೆ, ರೋಗವನ್ನು ನಿವಾರಣೆಮಾಡುವದಕ್ಕೆ ಉಪಯೋಗಿಸುವ ಸಂಕಲ್ಪ ಶಕ್ತಿಯ ವಿದ್ಯೆ - ಇಂಥವುಗಳೆಲ್ಲ ಮನಃಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುವ ಕ್ರಮಗಳೇ ಎಂಬುದನ್ನು ಮರೆಯದೆ ಇರಬೇಕು.
ಅಂತಃಕರಣದಲ್ಲಿ ಹಲವು ಗುಪ್ತಶಕ್ತಿಗಳಿರುವವೆಂಬುದು ನಿಜ ಅವುಗಳನ್ನು ಸರಿಯಾಗಿ ಉಪಯೋಗಿಸಿದರೆ ಜೀವನಕ್ಕೆ ಹೆಚ್ಚಿನ ಸಹಾಯವಾಗುವದೆಂಬುದೂ ನಿಜ, ಆದರೆ ಸ್ಥೂಲಶರೀರವು ಹೇಗೆ ಪರಿಮಿತವಾದ ಶಕ್ತಿಯುಳ್ಳದ್ದೋ ಹಾಗೆಯೇ ಅಂತಃಕರಣವೂ ಪರಿಮಿತವಾದ ಶಕ್ತಿಯುಳ್ಳದ್ದೆಂಬುದನ್ನು ನಾವು ಮರೆಯುವ ಹಾಗಿಲ್ಲ ಮನುಷ್ಯನು ತನ್ನ ಶರೀರದ ಬಲದ ಪರಿಮಿತಿಯನ್ನು ಅರಿಯದೆ ತನ್ನ ಕೈಯಲ್ಲಾಗದ್ದನ್ನೂ ಮಾಡುವೆನೆಂದು ಪ್ರಯತ್ನಪಟ್ಟರೆ, ಶರೀರದ ಅವಯವಗಳು ಎಂದೆಂದಿಗೂ ಊನವಾಗಿ ಬಿಡಬಹುದು; ಅದರಂತೆ ಮನಃಶಕ್ತಿಗಳನ್ನೂ ಅಳಗೆಗೆಟ್ಟು ದುರುಪಯೋಗಪಡಿಸಿದರೆ ಆ ಮಹಾಪರಾಧಕ್ಕೆ ಆಗುವ ದುಷ್ಫಲದ ಪರಿಮಾಣವನ್ನು ಅಳತೆ ಮಾಡಿ ಇಷ್ಟೆಂದು ನಿಶ್ಚಯಿಸುವದು ಕಷ್ಟ. ಈ ಜನ್ಮದಲ್ಲಿಯೇ ಅಲ್ಲದೆ ಹಲವು ಜನ್ಮಾಂತರಗಳಲ್ಲಿಯೂ ಈ ಕುಕೃತ್ಯದ ಫಲವನ್ನು ಅನುಭವಿಸುತ್ತಾ ನಮ್ಮ ಅಭ್ಯುದಯದ ಮಾರ್ಗಕ್ಕೆ ಅಡ್ಡಲಾಗಿ ನಾವೇ ಕಲ್ಲುಮುಳ್ಳುಗಳನ್ನು ಎಳೆದುಕೊಂಡಂತೆ ಆಗುವದರಲ್ಲಿ ಸಂಶಯವಿಲ್ಲ. ಪ್ರತಿಯೊಬ್ಬನೂ ತನ್ನ ಅಂತಃಕರಣವನ್ನು ಒಳ್ಳೆಯ ಸಂಸ್ಕಾರದಿಂದ ಉತ್ತಮ ಭಾವನಾಯುತವಾಗಿ ಮಾಡಿಕೊಳ್ಳುವದಕ್ಕೆ ಆವಕಾಶವಿದೆ. ಅಂತಃಕರಣದ ಶಕ್ತಿಗಳು ಪರಿಮಿತವಾದರೂ ಅನಂತವಾದ ಅಮಿತಾನಂದವನ್ನು ಕೊಡುವ ಪರಮಪುರುಷಾರ್ಥವನ್ನೇ ಅವು ಸಾಧಿಸಿಕೊಡುವಂತೆ ಮಾಡಿಕೊಳ್ಳುವದಕ್ಕೆ ಅವಕಾಶವಿರುತ್ತದೆ. ಅಂತಃಕರಣವನ್ನು ಅಲಕ್ಷಿಸುವದರಿಂದಲಾಗಲಿ ಅದರ ಶಕ್ತಿಗಳನ್ನು ದುರುಪಯೋಗಪಡಿಸಿಕೊಳ್ಳುವದರಿಂದಲಾಗಲಿ ಆಗುವ ಅಪಾಯವನ್ನು ತೊಲಗಿಸಿಕೊಂಡು ಇಹಪರಗಳನ್ನು ಆನಂದಮಯವಾಗಿ ಮಾಡಿಕೊಳ್ಳುವದು ಹೇಗೆಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು.
Comments
Post a Comment