ಕುಮಾರವ್ಯಾಸರ ಶ್ರೀಕೃಷ್ಣ ಭಕ್ತಿ

    ಮಹರ್ಷಿ ವ್ಯಾಸರ ಭಾರತವನ್ನು, ಪಂಪಭಾರತವನ್ನು ಓದಿಯೇ ಇಲ್ಲವೆನ್ನುವಷ್ಟರ ಮಟ್ಟಿಗೆ ತನ್ನ ಪ್ರತಿಭಾಧೀದಿತಿಯಿಂದ ಕನ್ನಡಿಸಿ ಕರ್ಣಾಟಕಭರತಕಥಾಮಂಜರಿಯನ್ನು ನೂತನ ಕಾವ್ಯವಾಗಿ ಸೃಜಿಸಿರುವನು ಮಹಾಕವಿ ಕುಮಾರವ್ಯಾಸ. ಕಾವ್ಯಕಥೆಯ ಸರ್ವಸ್ವವನ್ನು ಬಾನ್ಗಣ್ಣಿನಿಂದ ಕಂಡರಸಿ ಯೋಗೇಂದ್ರನಾಗರಿರುವ ಕವಿ ಕಾವ್ಯ ಯೋಗವನ್ನು ಅಭಿನ್ನವಾಗಿ ಭಾವಿಸಿ ಸಮನ್ವಯಗೊಳಿಸಿ ಸಫಲನಾಗಿದ್ದಾನೆ. ಮಹಾಭಾರತದಲ್ಲಿರುವ ಮಾನವಜೀವನ ಜಟಿಲ ಕಥೆಯನ್ನೂ ಕಲಾಮಯವಾಗಿ ಚಿತ್ರಿಸುತ್ತಲೇ ಅದಕ್ಕೇ ಪ್ರೇರಕತಾರಕವಾಗಿರುವ ಭಗವತ್ ಶಕ್ತಿಯ ಲೀಲೆಯನ್ನು ಮಹಿಮೆಯನ್ನು ಬಾಯ್ತುಂಬ ಬಣ್ಣಿಸ ಬೇಕೆಂಬುದರಲ್ಲಿ ಆ ಸಮನ್ವಯವಿದೆ. ಕುಮಾರವ್ಯಾಸರ ವಿಶಿಷ್ಟವಾದ ಸಮ್ಯಕ್ ದರ್ಶನವಿದೆ. ವ್ಯಾಸ ಭಾರತದಲ್ಲಿ ಶ್ರೀಕೃಷ್ಣನ ಪಾತ್ರ ಉನ್ನತವಾಗಿದ್ದು ಪಂಪನಲ್ಲಿ ಪೇಲವವಾಗಿದ್ದರೂ ಕುಮಾರವ್ಯಾಸರ ಭಕ್ತಮನೋಧರ್ಮಕ್ಕನುಗುಣವಾಗಿ ನೂತನ ದೃಷ್ಟಿಯಿಂದ ಅಪೂರ್ವ ಸೃಷ್ಟಿಯಾಗಿ ಭಾರತ ಕಥೆಯ ನಾಯಕನಾದ ಧರ್ಮರಾಯನ ಪಾತ್ರ ನೇಪಥ್ಯಕ್ಕೆ ಸರಿಯುವಷ್ಟು ಪ್ರಾಜ್ವಲ್ಯವಾಗಿ ಹಿಂದಿಗಿಂತಲೂ ಅತಿಶಯವಾಗಿ ಮೂರ್ತೀಭವಿಸಿದೆ. ವೇದ ವ್ಯಾಸರ ಪ್ರೇಮಕುಮಾರ 'ವೀರನಾರಯಣನ ಪ್ರೇಮ ಕಿಂಕರನಾಗಿ ವೀರನಾರಯಣನೆ ಕವಿ ಲಿಪಿಕಾರ ಕುಮಾರವ್ಯಾಸ' ಎಂದು ವಿನಮ್ರ ಭಾವದಿಂದ ನುಡಿದು ತನ್ನ ಕಾವ್ಯದ ಉಸಿರು ಹೆಸರು ಸರ್ವಸ್ವವೂ ಶ್ರೀಕೃಷ್ಣನೇ ಎಂದಿದ್ದಾರೆ. ಕಾವ್ಯದ ಉದ್ದಕ್ಕೂ ಅವಕಾಶ ಸಿಕ್ಕದೆಡೆಗಳಲ್ಲೆಲ್ಲಾ ತನ್ನ ಆರಾಧ್ಯದೈವವನ್ನು ತುಂಬುಭಕ್ತಿಯಿಂದ ಹಾಡಿಹಾಡಿ ನಲಿನಲಿದು ಕಣಿದು ಜನ್ಮ ಸಾಕ್ಷಾತ್ಕಾರ ಮಾಡಿಕೊಳ್ಳಲು ತನ್ನನ್ನೇ ಮುಡಿಪಿಟ್ಟುಕೊಂಡಿದ್ದಾರೆ ಕವಿ. ವೀರ ನಾರಾಯಣ ಬೇರೆಯಲ್ಲ ಸಾಕ್ಷಾತ್ ಅವತಾರ ಪುರುಷ ಶ್ರೀಕೃಷ್ಣ ಬೇರೆಯಲ್ಲವೆಂದು ಕವಿ ಅರಿತಿರುವುದರಿಂದಲೇ ತಾನು ಬರೆಯುತ್ತಿರುವುದು ಶ್ರೀಕೃಷ್ಣನ ಕಥೆಯೆಂದು ಸ್ಪಷ್ಟವಾಗಿ ತಿಳಿಸಿದ್ದಾನೆ.
    ತಿಳಿಯ ಹೇಳುವೆ ಕೃಷ್ಣ ಕಥೆಯನು
    ಇಳೆಯ ಜಾಣರು ಮೆಚ್ಚುವಂತಿರೆ
    ನೆಲೆಗೆ ಪಂಚಮ ಶ್ರುತಿಯನೊರೆವನು ಕೃಷ್ಣ
                ಮೆಚ್ಚಲಿಕೆ
    ಹಲವು ಜನ್ಮದ ಪಾಪರಾಶಿಯ
    ತೊಳೆವ ಜಲವಿದು ಶ್ರೀಮದಾಗಮ
    ಕುಲಕೆ ನಾಯಕ ಭಾರತಾಕೃತಿ ಪಂಚಮ
                     ಶ್ರುತಿಯ
ಭಕ್ತ ಮನೋಧರ್ಮವನ್ನೇ ಬೆನ್ನೆಲುಬಾಗುಳ್ಳ ತನ್ನ ಕಾವ್ಯವನ್ನು ಪಂಚಮಶ್ರುತಿಯೆಂದು ಉದಾತ್ತ ಭವನೆ ತಾಳಿರುವ ಪವಿತ್ರ ಕಾವ್ಯವನ್ನು ಇಳೆಯ ಜಾಣರಷ್ಟೇ ಅಲ್ಲ ಶ್ರೀಕೃಷ್ಣನೂ ಮೆಚ್ಚುವುದಕ್ಕಾಗಿ ಬರೆಯುತ್ತಿದ್ದೇನೆ ಎಂದು ಯೋಗೀಂದ್ರನಿಗೆ ಸಹಜವಾಗಿ ಹೇಳಿಕೊಂಡಿರುವ ಕವಿ, ಶ್ರೀಕೃಷ್ಣನೇ ನಾಯಕನಾಗಿರುವ ಕಾವ್ಯ ಹಲವು ಜನ್ಮದ ಪಾಪರಾಶಿಯನ್ನು ತೊಳೆಯುವ ಪಾವನ ಜಲಕ್ಕೆ ಸಮನಾದುದು ಎಂದಿದ್ದಾನೆ. 'ಇದ ವಿಚಾರಿಸೆ ಬರಿಯ ತೊಳಸಿವುದಕದಂತಿರಿಯಿಲ್ಲಿ ನೋಳ್ಪುದು ಪದುಮ ನಾಭನ ಮಹಿಮೆ ಧರ್ಮವಿಚಾರ ಮಾತ್ರವನು' - ಎಂದು ತನ್ನ ಮನೋಧರ್ಮದ ಗುಟ್ಟನ್ನು ಅರುಹಿದ್ದಾನೆ.
    ಜಲಧಿ ಮಧ್ಯದೊಳಿರವೊ ಗಗನ
    ಸ್ಥಳವೊ ಮೇಣುಮಹಾಂಧಕಾರದ
    ಕಲಿವುಗಳ ವೈಕುಂಠವೋ ಮುನಿಜನದ
                ಹೃದ್ಗುಹೆಯೊ
    ತಿಳಿಯೆ ಸಚರಾಚರದ ಚೇತನ
    ದೊಳಗೆಯೋ ನೆಲೆಯಾವುದೆಂಬ
    ಗ್ಗಳೆಯ ದೈವದ ನಿಲವ ಕಂಡನು ವಾರ್ಥ
                ಭವನದಲಿ
ತನ್ನ ಬಾಳಿನ ಭಾಗ್ಯ ದೈವವಾದ ಅತಿಮಾನುಷ ವ್ಯಕ್ತಿ ಶ್ರೀಕೃಷ್ಣನ ನೆಲೆಯನ್ನು ಕುರಿತು ಭಕ್ತಿಪರವಶನಾದ ಕವಿ ಹೇಗೆ ಹಾಡಿದ್ದಾನೆ. ಪರಮಾತ್ಮ ಶ್ರೀಕೃಷ್ಣನ ವಾಸಸ್ಥಾನ ದ್ವಾರಕೆ, ಆಕಾಶ, ವೈಕುಂಠ, ಮುನಿಗಳ ಹೃದಯ ಚರಾಚರ ಚೇತನಗಳಲ್ಲೆಡೆಯಲ್ಲೂ ಗೋಚರಿಸುತ್ತದೆ. ಭಕ್ತ ಎಲ್ಲಿ ಹೇಗೆ ಸಂಭಾವಿಸುತ್ತಾನೋ ಅಲ್ಲಿ ಹಾಗೆ ಸಂದರ್ಶನವೀಯುವ ಶ್ರೀಕೃಷ್ಣನ ನೆಲೆ ಅತೀತವಾದದು.
    ಶ್ರೀಕೃಷ್ಣನಂತೆಯೇ ಅವನು ವಾಸಿಸುವ ದ್ವಾರಕೆಯೂ ಪರಮ ಪೂಜ್ಯವಾದದು ಕವಿಗೆ. ಶ್ರೀಕೃಷ್ಣ ಮೆಚ್ಚಿ ನೆಲೆಸಿರುವ ದ್ವಾರಕೆ ಶ್ರುತಿಗೆ ದರ್ಶನವಿತ್ತ ತಾಪಸರನ್ನು ರಕ್ಷಿಸಿದ ಹುಟ್ಟು ಸಾವು ಕಾಲ ಕರ್ಮಗಳ ಶೃಂಖಲಾತೀತವಾದುದು
    ಹರಿನಮೋ ಜಯಭಕ್ತರಘ ಸಂ
    ಹರ ನಮೋ ಜಯ ಸಕಲ ಭುವನೇ
    ಶ್ವರ ನಮೋ ಜಯಕೃಷ್ಣ ಕೇಶವ ವಿಷ್ಣು
                ವಾಮನನೆ
    ಪರಮ ಪುಣ್ಯ ಶ್ಲೋಕ ಜಯಜಗ
    ಭರತ ನಿರ್ಮಳರೂಪ ಜಯಜಯ
    ಕರುಣಿ ರಕ್ಷಿಸು ರಾಯ ಗದುಗಿನ ವೀರ
                ನಾರಾಯಣ
ಕಾವ್ಯಧಾರೆ ಭಕ್ತಿಧಾರೆ ಸಂಮಿಶ್ರಗೊಂಡಿರುವ ಭಕ್ತಿಸುಧಾಗೀತೆಯಿದು. ಕಾವ್ಯ ಕಥೆಯ ಎಲ್ಲ ಸಜೀವ ಪಾತ್ರಗಳ ಹಾಗೂ ಜಗತ್ತಿನ ಸಕಲ ಜೀವಿಗಳ ಅನಿಷ್ಟ ಘಾತಗಳನ್ನು ಭಕ್ತಿಪ್ರಿಯ ಕರುಣಾಮಯ ಶ್ರೀಕೃಷ್ಣ ರಕ್ಷಿಸಲೆಂದು ಪೂರ್ಣದೃಷ್ಟಿಯಿಂದ ಪ್ರಾರ್ಥಿಸಿರುವ ಕುಮಾರವ್ಯಾಸನಂಥ ಭಕ್ತ ಕವಿಗೆ ಮಾತ್ರ ಇಂತಹ ದೃಷ್ಟಿ ಸೃಷ್ಟಿ ಸಾಧ್ಯ. ಶ್ರೀಕೃಷ್ಣನ ಸ್ತುತಿಯೇ ತಾರಕ ಮಂತ್ರವೆಂದು ತಾದಾತ್ಮ್ಯ ತಳುವ ಕವಿಗೆ ಕಾವ್ಯೌಚಿತ್ಯದಿಂದ ಅವಕಾಶ ಕಡಿಮೆಯಾದುದರಿಂದ ವಿನೋಧ ಪಾತ್ರಗಳ ಮೂಲಕ ಸಮಯವರಿತು ಭಕ್ತಮನೋ ಧರ್ಮವನ್ನು ಪ್ರತಿಮಿಸಿ ತನ್ನ ಬಯಕೆ ಈಡೇರಿಸಿಕೊಂಡಿರುವನು.
    ದಣಿಯದಾತನಬೆರಳು ನಾರಾ
    ಯಣರವದ ವೀಣಿಯಿಂ ಹೃದಯಾಂ
    ಗಣದ ಸೀಮೆಗೆ ಬಿಡಯವಾಗದು ಕೃಷ್ಣ
                ಪದಕೇಳಿ
    ಪ್ರಣವ ರೂಪದ ಭಾವ ಶುದ್ಧಿಯ
    ಕಣಿ ಮುರಾರಿಯ ತನ್ಮಯದ ನಿ
    ರ್ಗುಣ ಮುನೀಶ್ವರನಿಳಿದ ನಿಂದ್ರಪ್ರಸ್ಥ
                ಪುರದರಕೆ
   
ನಾರದ ಮಹರ್ಷಿಗೂ ಕುಮಾರವ್ಯಾಸ ಯೋಗೀಂದ್ರನಿಗೂ ಸಾಕ್ಷಾತ್ ವಿಷ್ಣವೇ ಆದ ಶ್ರೀಕೃಷ್ಣನನ್ನು ಹೃದಯದಲ್ಲಿ ತುಂಬಿಕೊಂಡು ಅವ್ಯಕ್ತಾನಿಂದದಿಂದ ದಣಿಯುವವರೆಗೂ ಕುಣಿದು ಹಾಡುವುದರಲ್ಲಿ ವ್ಯತ್ಯಾಸವೇನೂ ಇಲ್ಲ. 'ಪ್ರಣವ ರೂಪದ ಭಾವಶುದ್ಧಿಯಕಣಿ' ಇವರ ಮನೋ ಮಂದಿರದ ಧಣಿ. ಶ್ರೀಕೃಷ್ಣನನ್ನು ಕುರಿತು
    ವಿಶ್ವ ಶಿಲ್ಪದ ಕುಶಲಹಸ್ತನು
    ವಿಶ್ವರಕ್ಷೆಯ ಮಂತ್ರವಾದಿಯ
    ವಿಶ್ವ ಸಮಿಧೆಗಳಗ್ನಿ ಕಾರ್ಯದ ಬೊಮ್ಮಚಾರಿ
                     ವಟು
    ವಿಶ್ವನಾಟಕ ಸೂತ್ರಧಾರನು
    ವಿಶ್ವವಿಸ್ಮಯದೈಂದ್ರಜಾಲಕ
    ವಿಶ್ವದಂತಸ್ಸ್ಯೂತ ಚೇತನನೀತ ನೋಡೆಂದ
ಶ್ರೀಕೃಷ್ಣಸ್ತುತಿಯನ್ನು ಬಹಳವಾಗಿ ಮಾಡಿಸಿರುವ ಕವಿ ಅವತಾರಿ ಶ್ರೀಕೃಷ್ಣ ಜಗನ್ನಾಟಕ ಸೂತ್ರಧಾರಿಯೊಂದು ಪಾರದರ್ಶಕದಂತೆ ಸ್ಪಷ್ಟಪಡಿಸಿ ತನ್ನ ಜೀವನ ದರ್ಶನದ ಜೀವನಾಡಿಯನ್ನೇ ಮಿಡಿದಿದ್ದಾನೆ.
    ಧರಣಿಯ ಬಿಡದಳೆದು ಹೆಚ್ಚಿದ
    ಚರಣವಿದು ಸುರನದಿಯ ಸೃಜಿಸಿದ
    ಚರಣವಿದು ಕಲ್ಲಾದಹಲ್ಯಾಶಾಪ ನಿರುಹಣ
    ಚರಣವಿದು ಕಾಳಿಂಗಮರ್ದನ
    ಚರಣವಿದು ಶಕಟಪ್ರಭಂಜನ
    ಚರಣವಿದೆಲಾಯೆನುತ.....
    ಅನೇಕ ಅವತಾರಗಳಿಂದ ದುಷ್ಟಶಿಕ್ಷಣ ಶಿಕ್ಷ ರಕ್ಷಣ ಮಾಡಿದ ಶ್ರೀಕೃಷ್ಣ ಪಾದಗಳಲ್ಲಿ ನಂಬಿಕೆಯಿಟ್ಟು ಭಕ್ತಿ ಗೀತಾರ್ಪಣ ಮಾಡುವುದು ಕವಿಗೆ ಆನಂದವಾಗಿದೆ. ಶ್ರೀಕೃಷ್ಣನ ಅಪ್ರತಿಹತ ತೇಜಸ್ಸಿಗೆ ತಡಬಡಿಸಿ ನರನಂತೆಯೇ ನಾರಾಯಣನ ಪಾದಗಳ ಬಳಿಬಿದ್ದು ನಿವೇದನಾ ಪುಷ್ಟನಾಗಲು ಕವಿ ಹಾತೊರೆಯುತ್ತಾನೆ. ದೈವಶಕ್ತಿಗೆ ಬಲಿಯಲು ಕುಮಾರವ್ಯಾಸನ ಹೃದಯ ಸದಾ ತೆರೆದಿರುತ್ತದೆ. ಶ್ರೀಕೃಷ್ಣನ ಆಗಮನಕ್ಕಾಗಿ ಮೈಯ್ಯಲ್ಲಾ ಕಣ್ಣಾಗಿರುತ್ತಾನೆ.
    ದೇವಬಂದನು ತನ್ನ ನೆನೆವರ
    ಕಾವಬಂದನು ದೈತ್ಯಕುಲವನ
    ದಾನಬಂದನು ಭಾಗವತ ಜನಲೋಲುಪನು   
                    ಬಂದ
    ಭಾವಿಸುವದಘ ಹಾರಿಬಂದನು
    ಓವಿಬಂದರೆ ತನ್ನ ಬೀರುವ
    ದೇವಬಂದನು ವೀರ ನಾರಾಯಣ ಬಂದನರ
                 ಮನೆಗೆ
'ಧಾರಣಿಯ ಪೊರೆಯಿಳಿಸಲೋಸುಗ ಮನುಜವೇಷದಲಿ' ಭೂಲೋಕದಲ್ಲಿ ಅವತರಿಸಿರುವ ಶ್ರೀಕೃಷ್ಣನ ಚಲನ ವಲನ ಹಿರಿಮೆ ಗರಿಮೆಗಳನ್ನು ಕೊಂಡಾಡುವಾಗ ಭಕ್ತಿ ಉತ್ಕರ್ಷವಾಗಿ ಕವಿ ಭಕ್ತಿ ಭಾವ ಪರವಶನಾಗುತ್ತಾನೆ.
    ಕುಮಾರವ್ಯಾಸರ ಭಕ್ತಿಭಾನ್ಗಣ್ಣಿನಲ್ಲಿ ಶ್ರೀಕೃಷ್ಣ ಭಕ್ತ ಭಾವದ ಮಹಾಪ್ರತಿಮೆಯಾಗಿದ್ದಾನೆ. ಶ್ರೀಕೃಷ್ಣನಲ್ಲಿ ಪ್ರತಿಮಾದೃಷ್ಟಿಯಿಂದ ಸಮರ್ಪಿಸಿರುವ ಅನನ್ಯ ಶರಣಾಗತಿಯ ಭಕ್ತಿಮನೋ ಧರ್ಮವೇ ಭಕ್ತ ಕವಿ ಕುಮಾರವ್ಯಾಸ ಯೋಗೀಂದ್ರನ ಜೀವನ ದರ್ಶನವೂ ಆಗಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ