ಶ್ರೀ ಮಧ್ವರ ದಿವ್ಯ ಸಂದೇಶ

ಕರ್ನಾಟಕದ ಆಚಾರ್ಯರು
ವಿಶ್ವದಲ್ಲಿ ಎಣಿಕೆಗೆ ಸಿಗದಷ್ಟು ಆಚಾರ್ಯ ಪುರುಷರು ಅವತರಿಸಿದ್ದಾರೆ. ಆದರೆ ಇತಿಹಾಸದ ಪುಟಗಳು ಗುರುತಿಸಿದ, ಸನ್ಮಾನಿಸಿದ, ವಿಮರ್ಶಕರನ್ನು ಬೆರಗುಗೊಳಿಸಿದ ಮಂದಿ ಬಹಳೇ ವಿರಳ. ಈ ಬಗೆಯ ಆಚಾರ್ಯಪುರುಷರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದವರು ಶಂಕರ, ರಾಮಾನುಜ ಹಾಗೂ ಮಧ್ವರು. ವಿಶ್ವಮಾನ್ಯವಾದ ಸಂದೇಶವನ್ನು ಹೊತ್ತು ಬಂದ ಈ ಮೂವರಲ್ಲಿ ಶ್ರೀ ಮಧ್ವರು ಕನ್ನಡದ ಕೊಡುಗೆಯೆಂಬುದು, ಕನ್ನಡಿಗರೆಲ್ಲ ಹೆಮ್ಮೆ ಪಡಬೇಕಾದ ಸಂಗತಿ. ಆದರೆ, ವಿಮರ್ಶಕರೆಂದು ಕರೆಯಿಸಿಕೊಂಡ ಬಹಳ ಮಂದಿ, ಆಚಾರ್ಯರ ಸಂದೇಶವನ್ನು ಅರ್ಥೈಸಿಕೊಳ್ಳುವ ಪ್ರಾಮಾಣಿಕ ಯತ್ನ ನಡೆಸದಿರುವುದು, ಐತಿಹಾಸಿಕ ದುರಂತಗಳಲ್ಲೊಂದು. ವಿಮರ್ಶಗೆ ನಮ್ಮಲ್ಲಿರುವ ಅಜ್ಞಾನವೇ ಸಾಕೆನ್ನುವ , ವಿಚಾರವಂತರ ಒಂದು ವರ್ಗ ಆಚಾರ್ಯರನ್ನು ಇಂದಿಗೂ ಜನತೆಗೆ ತಪ್ಪಾಗಿಯೇ ಪರಿಚಯಿಸುತ್ತಿದೆ. 'ಸತ್ಯ' 'ಸುಳ್ಳು'ಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಸಂತಸಪಡುವ ಮಂದಿಗೆ ಆಚಾರ್ಯರ ಈ 'ತತ್ವವಾದ' ಎಂದಿಗೂ ಒಂದು ಸಮಸ್ಯೆಯಾಗೇ ಉಳಿದಿದೆ.
ಮಾನವನ -ಜೀವನ-ತತ್ವಶಾಸ್ತ್ರ
ಯಾವ ಹಿನ್ನಲೆಯಲ್ಲಿ ಮಾನವ ಪಶು, ಇತರ ಪಶುಗಳಿಗಿಂತ ಹೆಚ್ಚಳವನ್ನು ಪಡೆದಿದೆ? ಎಂಬ ಪ್ರಶ್ನೆಗೆ ಭಾಗವತ ಈ ರೀತಿ ಉತ್ತರಿಸುತ್ತದೆ - 'ಮಾನವ ಬುದ್ದಿಜೀವಿ, ತನಗೆ ಅಪೂರ್ವವಾದ ಬುದ್ಧಿಶಕ್ತಿಯನ್ನು ನೀಡಿದ, ದೇಹೇಂದ್ರಿಯಾದಿ ಸಕಲ ಸಾಧನ ಸಂಪತ್ತಿಯನ್ನು ನೀಡಿದ, ಕಣ್ಣಿನ ಎವೆಯಂದದಿ ತನ್ನನ್ನು ರಕ್ಷಿಸುವ, ಮತ್ತು ಹಸನಾದ ಬದುಕಿಗೆ ಜ್ಞಾನ ವಿಜ್ಞಾನಗಳನ್ನು ನೀಡಿದ ಪರಶಕ್ತಿಯನ್ನು ಕೃತಜ್ಞತೆಯಿಂದ ಸ್ಮರಿಸುವನು, ಮತ್ತು ಪರೋಪಕಾರಿಯಾಗಿ ಜೀವಿಸಿ, ತನ್ನೊಂದಿಗೆ ಇತರರ ಬದುಕಿಗೆ ಆಸರೆಯಾಗುವನು, ಎಂಬ ಹಿನ್ನಲೆಯಲ್ಲಿ ಮಾನವ ಜನ್ಮದ ಸಾರ್ಥಕ್ಯವನ್ನು ಪ್ರತಿಪಾದಿಸಲಾಗಿದೆ (ಸೃಷ್ಟ್ವಾ ಪುರಾಣಿ ವಿವಿಧಾನ್ಯಜಯಾತ್ಮಶಕ್ತ್ಯಾ ವೃಕ್ಷಾನ್‌ ಸರೀಸೃಪಪಶೂನ್‌ ಖಗದಂಶಮತ್ಸ್ಯಾನ್‌ : ತೈಸ್ತೈರತಿಷ್ಟಹೃದಯ: ಪುರುಷಂ ವಿಧಾಯ ಬ್ರಹ್ಮಾವಬೋಧಧಿಷಣಂ ಮುದಮಾಪ ದೇವ: ಭಾಗವತ)
ಹುಟ್ಟು ಸಾವುಗಳಾಚೆ ಎನಿದೆ? ಮಾನವ ಎಲ್ಲಿಂದ ಬಂದ? ವಿಶ್ವದಲ್ಲಿ ಕಾಣುವ ವೈಚಿತ್ರದ, ಮಾನವೀಯ ವಿಭಿನ್ನ ಸ್ವಭಾವಗಳ ಮೂಲವೇನು? ಸುಖದ ಸುಪ್ಪತ್ತಿಗೆಯಲ್ಲಿ ಜೀವಸ ಬಯಸುವ ಮಾನವ ಎಂದೂ ದು:ಖಪಡುವುದೇಕೆ? ತನ್ನ ವ್ಯಕ್ತಿತ್ವನ್ನು ಪ್ರಯತ್ನವನ್ನೂ ಮೀರಿನಿಂದು, ವಿಶ್ವವನ್ನು ನಿಯಂತ್ರಿಸುವ ಸೂತ್ರಶಕ್ತಿ ಇದೆಯೇ? ಇವೇ ಮೊದಲಾದ ಸಮಸ್ಯೆಗಳನ್ನು ಬುದ್ಛಿಜೀವಿಗಳೆನಿಸದ ಮಂದಿ ಅಂದಿನಿಂದ ಇಂದಿನವರೆಗೂ ಎದರಿಸುತ್ತಲೇ ಇರುವರು. ಭೌತ ವಿಜ್ಞಾನದ ವ್ಯಾಪ್ತಿಗೆ ಒಳಪಡದ ಈ ಮೂಲ ಸಮಸ್ಯೆಗಳ ಆಥವಾ ಜೈವಿಕ ಸಮಸ್ಯೆಗಳ ಅಥವಾ ಜೈವಿಕ ಸಮಸ್ಯೆಗಳ ಪರಿಹಾರ ಚಿಂತನೆಗಾಗಿ, ಅವತಾರ ಪುರುಷರನ್ನಿಸಿಕೊಂಡ ಆನೇಕ ಮಂದಿ ಯತ್ನಿಸಿದರು. ಅವರು ನೀಡಿದ ವಿಚಾರಧಾರೆಗಳು ಅವರ ಆನುಯಾಯಿಗಳಿಂದ ಉಳಿಸಿ ಬೆಳೆಸಲ್ಪಟ್ಟವು. ಹೀಗೆ ಹೆಮ್ಮರವಾಗಿ ಬೆಳೆದ, ವಿಭಿನ್ನ ವಿಚಾರಧಾರೆಗಳನ್ನು 'ದಾರ್ಶನಿಕ ವಿಚಾರ'ಗಳೆಂದು ಹೆಸರಿಸಲಾಯಿತು.
ಹೀಗೆ ವಿಶ್ವದ ಎಲ್ಲಡೆ ಬೆಳೆದ ಎಲ್ಲ ವಿಭಿನ್ನ ದರ್ಶನಗಳೂ, ಮಾನವನ ಅಭೌತಿಕ ಜೀವನದ ಗೊತ್ತು ಗುರಿಗಳನ್ನು ತೀರ್ಮಾನಿಸಲು ರೂಪುತಳೆದವು. ಬದುಕಿನಾಚೆಗೆ ಏನಿದೆ? ಎಂಬ ಪ್ರಶ್ನೆಗೆ ಉತ್ತರ ನೀಡಲು ಶ್ರಮಿಸಿದವು. ಇನ್ನಿತರ ಮಾಧ್ಯಮಗಳಿಂದ ದೊರಕದ, ಶಾಶ್ವತ ಶಾಂತಿಯನ್ನು ದೊರಕಿಸಲು ಕಟಿಬದ್ಧವಾಗಿ ಪ್ರಯತ್ನಿಸದವು. ಹೀಗೆ ಮಾನವ ಮತ್ತು ಅವನ ಮೌಲಿಕ ಬಾಳ್ವೆಯ ರೂಪಿಗಾಗಿ ಜನಿಸಿದ ದರ್ಶನಗಳ ಸಂಬಂಧವನ್ನು ಅರಿಯಬಹುದಾಗಿದೆ.
ಎಂಟು ಜನ ತಮ್ಮ ಪ್ರಿಯ ಶಿಷ್ಯರನ್ನು, ತತ್ವ ಪ್ರಚಾರದಲ್ಲಿ ಕಟಿಬದ್ಧರಾಗಿಸಿದರು. ತಮ್ಮ ಇನ್ನೊಂದು ಪ್ರತಿಕೃತಿಯಂತಿರುವ ದಿವ್ಯಜ್ಞಾನಸಂಪತ್ತನ್ನು ಸಜ್ಜನರ ವಿನಿಯೋಗಕ್ಕೆ ನೀಡಿ, ಭಗವತ್ಕೈಂರ್ಯಕ್ಕಾಗಿ, ಮಾಘಶುದ್ಧನವಮಿಯಂದು ಬದರಿಗೆ ತೆರಳಿದರು. ಇಂತಹ 'ತತ್ವವಾದ' ವನ್ನು ಉಳಿಸಿ ಬೆಳೆಯಿಸಿಕೊಂಡು ಹೋಗುವುದೇ, ವಿಚಾರ ಪ್ರಿಯರು ಶ್ರೀ ಮಧ್ವರಿಗೆ ಸಲ್ಲಿಸಬಹುದಾದ `ಗೌರವ'.
ಆಚಾರ್ಯ ಮಧ್ವರ ಸಂದೇಶ
೧. ವಿಶ್ವದ ಯಾವುದೋ ಒಂದೊಂದು ಚೇತನದಲ್ಲಿ, ದಯೆ, ಶಾಂತಿ, ಔದಾರ್ಯ, ವಿದ್ವತ್ತು, ಮೊದಲಾದ, ಗುಣಗಳನ್ನು ಕಾಣುತ್ತೇವೆ. ಇಂತಹ ಆಮೂಲ್ಯವಾದ ಜ್ಞಾನ, ವಿಜ್ಞಾನ, ದಯೆ, ಸೌಂದರ್ಯ, ಔದಾರ್ಯ, ಗಾಂಭೀರ್ಯವೇ ಮೊದಲಾದ, ಅಪ್ರಾಕೃತವಾದ ಅನಂತ ಶುಭಗುಣಗಳ ಅಂತಿಮಧಾಮವೂ, ನಿರ್ದೋಷವೂ ಆದ ವಿಶ್ವದ ಚಾಲಕ ಶಕ್ತಿಯೇ ಪರಮಾತ್ಮನೆನಿಸಿದೆ. ( ಅತೋಶೇಷಗುಣೋನ್ನದ್ದಂ ನಿರ್ದೋಷಂ ಯಾವದೇವ ಹಿ ತಾವದೇವೇಶ್ವರೋ ನಾಮಃ)
೨. ಇಂತಹ ಪರಶಕ್ತಿಯ ಆದ್ಭುತ ಕರ್ತೃತ್ವದ ಸಂಕೇತವೇ ಸತ್ಯವಾದ, (ಮಿಥ್ಯೆಯಲ್ಲದ) ಕಾಣುವ ವಿಶ್ವವಾಗಿದೆ. ಜನಿಸಿದ, ವೈವಿಧ್ಯಮಯವಾದ ಈ ಪ್ರಪಂಚದಲ್ಲಿರುವ ಕೌಶಲದಿಂದ ಇದರ ನಿರ್ಮಾರ್ತೃವಾದ ಪರಮಾತ್ಮನ ಮಹಾತ್ಮ್ಯವನ್ನು ನಾವು ಅರಿಯಬಹುದಾಗಿದೆ.
ವಿಶ್ವದ ಒಂದೊಂದು ಪದಾರ್ಥವೂ ಹಲವು ಅದ್ಭುತಗಳನ್ನೊಳಗೊಂಡಿದೆ. ಕಾಣ್ಕೆ, ಅಭಿರುಚಿಗಳ ವಿಭಿನ್ನತೆಯು, ವಸ್ತುವಿನ ಬಹುಮುಖತೆಯ ಪರಿಚಾಯಕವಾಗಿದೆ. ಪರಿಶುದ್ಧವಾದ ಜ್ಞಾನಯುತವಾದ ಅನುಭವದ ಪರಾಕಾಷ್ಥೆಯನ್ನು ತಲುಪುವವರೆಗೂ ಯಾವುದೇ ಒಂದು ವಸ್ತುವನ್ನು ಮಾನವನು ಪೂರ್ತಿಯಾಗಿ ಅರಿಯಲಾರನು. ಸಂಶೋಧನೆ ನಡೆಸಿದಂತೆಲ್ಲ ಪ್ರಕೃತಿಯ ವಿಚಿತ್ರ ಸೊಬಗನ್ನು ಕಾಣುವ ನಾವು, ಇದರಿಂದ ಅದರ ಸೂತ್ರಶಕ್ತಿಯ ಮಹತ್ವವನ್ನು ಮನಗಾಣಬಹುದಾಗಿದೆ. ಆದ್ದರಿಂದಲೇ ಆಚಾರ್ಯರು, `'ಅತ್ಯಂತ ವಿಚಿತ್ರವಾದ, ನಮ್ಮ ಸಂಶೋಧನೆಗೆ ನಿಲುಕದ, ಚೇತನಾಚೇತನಾತ್ಮಕವಾದ ಈ ವಿಶ್ವದ, ನಿರ್ಮಾತೃವು, ಸರ್ವೋತ್ಕೃಷ್ಟಶಕ್ತಿಯುತನೂ, ಗುಣಪೂರ್ಣನೂ ಆಗಿರುವನು`` ಎಂದಿದ್ದಾರೆ. (ಬಹುಚಿತ್ರ ಜಗದ್ಬಹುಧಾ ಕರಣಾತ್‌ ಪರಶಕ್ತಿರನಂತಗುಣಃ !! ದ್ವಾದಶಸ್ತೋತ್ರ)
೩. ಪ್ರತಿಯೊಂದು ವಸ್ತುವು, ತನ್ನದೇ ಆದ ವೈಶಿಷ್ಟ್ಯ, ವೈಚಿತ್ರವನ್ನೊಳಗೊಂಡಿದೆ. ಆದ್ದರಿಂದಲೇ ಪ್ರತಿಯೊಂದು ವಸ್ತುವು ತನಗಿಂತ ಬೇರೆಯಾದ ಎಲ್ಲ ವಸ್ತುಗಳಿಂದ ವಿಭಿನ್ನವಾಗಿದೆ. ವಸ್ತುವಿನ ಜ್ಞಾನ ಬರುವಾಗಲೇ, `` ಇದು ಉಳಿದೆಲ್ಲ ವಸ್ತುಗಳಿಂದ ಭಿನ್ನವಾಗಿದೆ `` ಎಂದೇ ಜ್ಞಾನ ಬರುವುದು. ಎಲ್ಲಡೆ ಆನುಭವಕ್ಕೆ ಬರುವ ಈ ಭೇದವು ಯಥಾರ್ಥವಾಗಿದೆ.`` `` ನಾವೆಲ್ಲಾ ಒಂದು ನಮ್ಮಲ್ಲಿ ಭೇದವಿಲ್ಲ `` ವೆಂದು ಸುಲಭವಾಗಿ ಘೋಷಿಸಬಹುದಾದರೂ, ಎಲ್ಲರೂ ಒಂದಾಗುವುದು ಪ್ರಕೃತಿ ನಿಯಮಕ್ಕೆ ನಿಲುಕದೆಂಬುದು ಎಲ್ಲರ ಅನುಭವಕ್ಕೆ ಬಂದಿರುವ ವಿಷಯ. ಈ ಹಿನ್ನಲೆಯಲ್ಲಿ ಪ್ರತಿಯೋರ್ವ ಜೀವಾತ್ಮನೂ ಇನ್ನೊರ್ವ ಜೀವಾತ್ಮನಿಂದ ಭಿನ್ನನಾತಿರುವನು. ಇದರಂತೆ ಜೀವಾತ್ಮರೆಲ್ಲರೂ ವಿಶ್ವದ ಚಾಲಕ ಶಕ್ತಿಯಾದ ಪರಮಾತ್ಮನಿಂದ ಭಿನ್ನರಾಗಿದ್ದಾರೆ. ಜೀವ ಜಡ, ಪರಮಾತ್ಮರಲ್ಲಿರುವ ಈ ಭೇದ, ಸ್ವಾಭಾವಿಕವಾಗಿರುತ್ತದೆ. ಜನತೆಯಲ್ಲ ಒಂದೇ ನಿಲುವು ತಳೆದಾಗ ಒಂದೆನಿಸಬಹುದು. ಆದರೆ ಔಪಚಾರಿಕವಾಗಿ ಈ ಏಕತೆ, ಪ್ರಕೃತಿ ಸಹಜವಾದ ``ಭೇದ '' ವನ್ನು ನಿರಾಕರಿಸುವುದಿಲ್ಲವಷ್ಟೆ ! ಈ ಹಿನ್ನಲೆಯಲ್ಲಿ ಭೇದ, ಸತ್ಯ ಹಾಗೂ ಶಾಶ್ವತ.
೪. ಅನಂತಗುಣಗಳ ಅಮತಿಮಧಾಮವಾದ ಪರಮಾತ್ಮನ ಅನುಗ್ರಯಕ್ಕೆ ಪ್ರಮುಖವಾದುದು, ನಿರ್ವ್ಯಾಜವಾದ ಹಾಗೂ ಸರ್ವೋತೃಷ್ಟವಾದ ಪ್ರೇಮ. ಕೇವಲ ಭಕ್ತಿಯಿಂದ, ಸಾಧಕನ ಹೃದಯದಲ್ಲಿ ನರ್ತಿಸುವ ಪರಮಾತ್ಮನ ಜ್ಞಾನಕ್ಕೆ ಸಾಧನವಾದುದು, ವೇದ ಹಾಗೂ ಬ್ರಹ್ಮಸೂತ್ರಗಳು. ಶುಷ್ಕ ತರ್ಕದಿಂದ ಪರಮಾತ್ಮನನ್ನು ಅರಿಯಲಾಗದು. ಎಕೆಂದರೆ ತರ್ಕದಿಂದ ಒಂದನ್ನು ಸಾಧಿಸಬಹುದಾದಂತೆ, ನಿರಾಕರಿಸಲೂಬಹುದು. ಈ ಹಿನ್ನಲೆಯಲ್ಲಿ ತರ್ಕಾತೀತವಾದ ಆ ಪರಶಕ್ತಿಯ ಸಾಕ್ಷಾತ್ಕಾರಕ್ಕಾಗಿ ಅಧ್ಯಯನ ರೂಪವಾದ ತಪಸ್ಸು ಅಗತ್ಯವಾಗಿದೆ.
೫. ಅಧ್ಯಯನ ಶೀಲನಾದವನು `` ಸತ್ಯ ``ದ ಸಾಕ್ಷಾತ್ಕಾರ ಪಡೆಯುವನು. ಆದರೆ, ಅಧ್ಯಯನ ನಡೆಯಿಸಿದವರಲ್ಲ ಸಿದ್ಧಿ ಪಡೆಯಲಾರರು. ಕೆಲವರೇ ಸಿದ್ಧಿ ಪಡೆದಂತೆ ಹಲವರು ಕೈ ಸುಟ್ಟುಕೊಳ್ಳುವುದು ಅನಿವಾರ್ಯ. ನಿಂಬೆಯಲ್ಲಿ ಕಾಣುವ ಹುಳಿಯಂತೆ, ಹಾಲಿನಲ್ಲಿ ಕಾಣುವ ಮಾಧುರ್ಯದಂತೆ, ಪ್ರತಿಯೋರ್ವ ಆತ್ಮರೂ ತಮ್ಮದೇ ಆದ ವಿಶಿಷ್ಟವಾದ, ಸ್ವಭಾವ-ವ್ಯಕ್ತಿತ್ವವನ್ನು ಪಡೆದಿದ್ದಾರೆ. ಅವರವರ ಸಾಧನೆ, ವಿಭಿನ್ನ ಸ್ವಭಾವ, ಮೊದಲಾದವನ್ನು ಅವಲಂಬಿಸಿ ಅವರವರು ಫಲ (ಸಿದ್ಧಿ) ಪಡೆಯುತ್ತಾರೆ. ಇದು ಅಪ್ರಿಯ ಹಾಗೂ ಅನಿವಾರ್ಯವಾದ ಸತ್ಯ. ನಮಗೆ ಪ್ರಿಯವಾದುದೇ ಸತ್ಯವಾಗಬೇಕೆಂದಾಗಲೀ ಸತ್ಯ ನಮ್ಮ ಮೂಗಿನ ನೇರಕ್ಕೆ ಇರಲಿ ಎಂದೂ ಯಾರೂ ಹಕ್ಕು ಚಲಾವಣೆ ಮಾಡಲಾಗದು. ಯೋಗ್ಯತೆಯನ್ನು ಮೀರಿ ದೊರಕದಿರುವಾಗ್ಯೂ, ಯೋಗ್ಯತೆಯ ಪರಿಚಯವಿಲ್ಲದಿರುವುದರಿಂದ ಶ್ರದ್ಧಾಯಿತವಾದ ಪ್ರಯತ್ನ ನಿರಂತರ ನಡೆಯಬೇಕು.
೬ ಭಗವಂತನನ್ನು ಉಪಾಸನೆ ಮಾಡುವುದೆಂದರೆ, ಅನಂತ ಶುಭ ಗುಣನಾದ ಅವನನ್ನು ಹೃದಯದಲ್ಲಿ ಆಹ್ವಾನಿಸುವುದು ಮತ್ತು ದಯೆ, ಧರ್ಮ, ಔದಾರ್ಯಗಳಿಂದ ವರ್ತಿಸುವ ದೀಕ್ಷೆ ತೊಡುವುದೇ ಆಗಿದೆ. ಹೀಗೆ ಪರಮಾತ್ಮನನ್ನು ಪೂಜಿಸುವುದರ ಜೊತೆಗೆ, ಅವನ ಕಿಂಕರರಾದ ಭಕ್ತರನ್ನು ಮಾತಾಪಿತೃ ಗುರುಗಳನ್ನೂ ಪೂಜಿಸಬೇಕು, ಇದರಂತೆಯೇ ವಿಶ್ವದಲ್ಲಿ ಅಜ್ಞಾನದಿಂದ, ದಾಸ್ಯದಿಂದ, ಹತ್ತಾರು ಸಮಸ್ಯೆಗಳಿಂದ ತೊಳಲಾಡುವ, ದೀನ ಜನತೆಗೆ ಸಲ್ಲಿಸುವ ಸೇವೆಯೂ ಒಂದು ವಿಧವಾದ ಭಗವತ್ಪೂಜೆ, ಭಗವಂತನ ರಾಜ್ಯದ ಪ್ರಜೆಗಳಾದ ಎಲ್ಲಾ ಜ್ಞಾನಿಗಳಿಗೂ ಈ ಕಂದಾಯದ ನೀಡಿಕೆ ಅನಿವಾರ್ಯ (ನಾನಾಜನಸ್ಯ ಶುಶ್ರೂಷಾ ಕರ್ತವ್ಯಾ ಕರವನ್ಮಿತೆಃ - ಗೀ.ತಾ. ೬.೩) ಈ ಹಿನ್ನಲೆಯಲ್ಲಿ ನಾನಾ ವಿಧವಾದ ಜನತೆಯ ಸೇವೆ, ಸಾಧಕನ ಉತ್ತಮ ಕರ್ತವ್ಯವಾಗಿದೆ.
೭. ಒಂದನ್ನು ಅಂಗೀಕರಿಸಲು ಅನುಭವಕ್ಕಿಂತ ಮಿಗಿಲಾದ ಸಾಧನವಿಲ್ಲ, ಶಾಸ್ತ್ರಗಳು ಎನು ಪ್ರತಿಪಾದಿಸುತ್ತವೆ ಎಂದು ಗಿಳಿಪಾಠ ಮಾಡುವುದಕ್ಕಿಂತ, ಪ್ರತಿಪಾದಿಸಿದ ವಿಷಯಗಳು ಎಷ್ಟು ಅನುಭವಿಕವಾಗಿದೆ ಮತ್ತು ನಮ್ಮ ಜೀವನದಲ್ಲಿ ಎಷ್ಟು ಅಳವಡಿಸಿಕೊಂಡಿದ್ದೇವೆ, ಎಂಬ ಚಿಂತನೆ ಮುಖ್ಯ. ಅನುಭವ ಉತ್ತಮ ಪಾಠವಾದರೂ ಅನುಭವ ಬಂದ ಮೇಲೆಯೇ ಅದು ಸತ್ಯವೆಂಬ ಹಠಬೇಡ. ಜ್ಞಾನಿಗಳ ಅನುಭವ -ಹೇಳಿಕೆಗಳಲ್ಲಿ ನಂಬಿಕೆ ಶ್ರದ್ಧೆ ಇರಲಿ. ಶ್ರದ್ಧೆಯೇ ಮುಕುತಿಗೆ ದಾರಿ.
೮. ಸತ್ಯ, ದಾನ, ಅಧ್ಯಯನಶೀಲತೆ, ಭಗವತ್ಕೈಂಕರ್ಯ ಮೊದಲಾದ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಹಿತಕಾರಿಯಾದವನೇ ಬ್ರಾಹ್ಮಣ. ಉತ್ತಮ ಕುಲದಲ್ಲಿ ಜನಿಸಿದವರೆಲ್ಲ ಉತ್ತಮರೆಂದು ಪರಿಗಣಿಸಲಾಗದು. ಹುಟ್ಟಿಗಿಂತ, ಆತ್ಮನಲ್ಲಿರುವ ಸಹಜ ಮತ್ತು ಉತ್ತಮವಾದ ಸಂಸ್ಕೃತಿ, ಭಗವದ್ಬಕ್ತಿ, ಸತ್ಕರ್ಮಾನುಷ್ಠಾನ ರತಿಯೇ ಅವನ ಬ್ರಾಹ್ಮಣ್ಯದ ಅಳತೆಗೋಲು. ಸದ್ಗುಣಗಳಿಲ್ಲದ ಬ್ರಾಹ್ಮಣ ಹರಿಭಕ್ತಿಯುಳ್ಳ ವರ್ಣಾವರನಿಗಿಂತ ಕಡೆ. ಗುಣಾಧಿಕನಾದ ಶೂದ್ರ ಬ್ರಾಹ್ಮಣನೆನಿಸುವನು. ಈ ಹಿನ್ನಲೆಯಲ್ಲಿ ಹುಟ್ಟಿನ ಬ್ರಾಹ್ಮಣ್ಯಕ್ಕಿಂತ, ಗುಣದ ಮೂಲಕ ಬ್ರಾಹ್ಮಣ್ಯವನ್ನು ಪಡಯುವ ಯತ್ನ ನಡೆಸಬೇಕು.
ಆಚಾರ್ಯರು ನೀಡಿದ ಈ ವಿಶ್ವಮಾನ್ಯವಾದ ಸಂದೇಶ ಮಾಧ್ವರ ಗುತ್ತಿಗೆಯೇನು ಅಲ್ಲ. ವಿಚಾರಶೀಲರೆಲ್ಲರೂ ಅಧ್ಯಯನ ನಡೆಸಿ ಅನುಷ್ಠಾನಕ್ಕೆ ತರಬಹುದಾದ ಉತ್ತಮ ಮಾರ್ಗ. ಇಂತಹ ತತ್ವವಾದವನ್ನು ವಿಶ್ವದ ಎಲ್ಲಡೆಗೆ ಪ್ರಚಾರಗೊಳಿಸಲು, ಆಚಾರ್ಯರು ನೀಡಿದ ದಿವ್ಯ ಸಂದೇಶವನ್ನು ಅವರ ಶಿಷ್ಯರೆಲ್ಲ ಲಿಪಿಬದ್ದಗೊಳಿಸಿದರು. ಇತ್ತೀಚಿಗೆ ಉಪಲಬ್ದವಾದ ತಿಥಿನಿರ್ಣಯ ನ್ಯಾಸಪದ್ಧತಿಗಳನ್ನು ಸೇರಿ, ಇಂದು ನಲವತ್ತು ಗ್ರಂಥಗಳು ಉಪಲಬ್ದವಾಗಿದೆ. ಇದನ್ನು ಸುಜನರೆಲ್ಲ ಅರಿತು ಬೆಳೆಕಿನ ದಾರಿಯಲ್ಲಿ ಸಾಗಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ