ವಿಶಿಷ್ಟಾದ್ವೈತ

ವೇದಾಂತದರ್ಶನದ ಪ್ರಕಾರಗಳಲ್ಲಿ ವಿಶಿಷ್ಟಾದ್ವೈತವೂ ಒಂದು. ಈ ಸಿದ್ಧಾಂತಯವು ಶೃತಿಸ್ಮೃತಿ. ಇತಿಹಾಸ ಮತ್ತು ಪುರಾಣಗಳಲ್ಲಿ ಪ್ರತಿಪಾದಿತವಾಗಿದ್ದು, ಅತಿ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುತ್ತದೆ. `ವಿಶಷ್ಟಾದ್ವೈತದರ್ಶನ' ಎಂಬ ಹೆಸರು ಇದಕ್ಕೆ ಮೊದಲು ಇದ್ದಂತೆ ಕಂಡು ಬರುವುದಿಲ್ಲ. ಇದನ್ನು ಪ್ರಾಯಃ 'ವೈಷ್ಣವಧರ್ಮ' ಎಂದೊ 'ಭಾಗವತ ಧರ್ಮ' ಎಂದೊ ಕರೆಯುತ್ತಿದ್ದಿರಬಹುದು. ಭಗವಾನ್‌ ರಾಮಾನುಜರು ಈ ಸಿದ್ಧಾಂತದ ಪ್ರವರ್ತನವನ್ನು ಮಾಡಿದ ಕಾರಣ ಇದನ್ನು 'ರಾಮಾನುಜದರ್ಶನ' ಎಂಬುದಾಗಿ ಕರೆದರೆಂದು ಕಾಣುತ್ತದೆ. ಸರ್ವದರ್ಶನ ಸಂಗ್ರಹಕಾರರು ರಾಮಾನುಜದರ್ಶನ ಎಂದೇ ಈ ಸಿದ್ಧಾಂತವನ್ನು ನಿರೂಪಿಸದ್ದಾರೆ. ಈ ಸಿದ್ಧಾಂತದ ಅಸಾಧಾರಣವಾದ ತತ್ತ್ವಸ್ವರೂಪಕ್ಕೆನುಗುಣವಾಗಿ 'ವಿಶಿಷ್ಟಾದ್ವೈತದರ್ಶನ' ಎಂಬ ಹೆಸರು ರೂಢಿಗೆ ಬಂದಿದೆ.

ವಿಶಿಷ್ಟಾದ್ವೈತ ಎಂಬ ಹೆಸರಿನ ಮರ್ಮ
ಈ ದರ್ಶನ ಅದ್ವೈತ ಮತ್ತು ದ್ವೈತ ದರ್ಶನಗಳಿಗೆ ಸಮನ್ವಯವಾಗುವ ಮಧ್ಯಸ್ಥ ದೃಷ್ಟಿಯನ್ನು ಹೊಂದಿದೆ. ದ್ವೈತ ಭಾವವನ್ನು ವಾಸ್ತವಿಕವಾಗಿ ಪುರಸ್ಕರಿಸಿ ಚೇತನರಿಗೂ ಈಶ್ವರನಿಗೂ ಪ್ರಕೃತಿಗೂ ಸ್ವಾಭಾವಿಕವಾದ ಭೇದವನ್ನೇ ಈ ದರ್ಶನ ಸಾಧಿಸಿದರೂ, ಚೇತಾನಾಚೇತನ ಪದಾರ್ಥಗಳಿಗೆಲ್ಲ ಆತ್ಮವಾದ ಬ್ರಹ್ಮವಸ್ತು ಚೇತಾನಾಚೇತನಗಳಿಂದ ವಿಶಿಷ್ಟವಾಗಿ ಅದ್ವಿತೀಯವಾದುದೆಂದು ಶ್ರತಿ ಪ್ರಮಾಣಕ್ಕನುಗುಣವಾಗಿ ಸಾಧಿಸಿ, ವಿಶಿಷ್ಟವಸ್ತುವಿನ ಅದ್ವೈತವನ್ನು ಒಪ್ಪುತ್ತದೆ. ಪ್ರಕಾರ ಪ್ರಕಾರಿಭಾವವನ್ನೂ ಶರೀರ-ಶರೀರಿ ಂಬಂಧವನ್ನೂ ಪ್ರತಿಪಾದಿಸಿ ನಾನಾತ್ವ ಮತ್ತು ಏಕತ್ವಗಳ ಸಮನ್ವಯವನ್ನು ಈ ಸಿದ್ಧಾಂತ ಸಾಧಿಸಿ 'ಸರ್ವಶ್ರುತಿ ಮುಖ್ಯಾರ್ಥಾವಬೋಧಕತ್ವ' ವನ್ನು ಪ್ರತಿಪಾದಿಸಿದೆ. 'ಅಶೇಷ ಚಿದಚಿತ್ಪ್ರಕಾರಂ ಬ್ರಹ್ಮ ಏಕಮೇವತತ್ವಂ' ಎಂದು ವೇದಾಂತ ದೇಶಿಕರು ಈ ಅಂಶವನ್ನು ಹೇಳುತ್ತಾರೆ. ಶಂಕರಾಚಾರ್ಯರ ಸ್ವರೂಪಾದ್ವೈತಕ್ಕಿಂತ ಇದು ಬೇರೆಯಾದುದು. ಶಂಕರರು 'ನಿರ್ವಿಶೇಷ ಬ್ರಹ್ಮೈಕತ್ವವನ್ನು' ಪ್ರತಿಪಾದಿಸಿದರೆ ಈ ಸಿದ್ಧಾಂತ ಚೇತನಾಚೇತನಗಳೆಂಬ ವಿಶೇಷಣಗಳಿಂದ ಕೂಡಿದ ವಿಶೇಷ್ಯವಸ್ತು ಒಂದೇ ಎಂದು ಸವಿಶೇಷಾದ್ವೇತವನ್ನು ಉದ್ಘೋಡಿಸುತ್ತದೆ. ವಿಶೇಷ್ಯ ವಸ್ತು ಒಂದೇ ಆದರೂ ವಿಶೇಷಣ ಬಹುತ್ವವನ್ನು ಇಲ್ಲಿ ಅಂಗೀಕರಿಸಲಾಗಿದೆ. ಕಾರಣಾವಸ್ಥೆಯಲ್ಲಾಗಲೀ, ಕಾರ್ಯವಸ್ಥೆಯಲ್ಲಾಗಲೀ ಬ್ರಹ್ಮವಸ್ತುವಿಗೆ ಚೇತಾನಾಚೇತನಗಳು ವಿಶೇಷಣಗಳಾಗಿರುತ್ತದೆ. ಚೇತನಾಚೇತನ ಪದಾರ್ಥಗಳು ಬ್ರಹ್ಮವಸ್ತುವನ್ನು ಯಾವ ಅವಸ್ಥಯಲ್ಲಿಯೂ ಬಿಟ್ಟಿರಲಾರವು. ಅವು ಅತ್ಯಂತ ಪರತಂತ್ರಗಳಾಗಿ ಸ್ವತಂತ್ರವಾದ ಬ್ರಹ್ಮವಸ್ತುವಿಗೆ ವಿಶೇಷಣಗಳಾಗಿದೆ. ಇವುಗಳನ್ನು ವಿಶೇಷಣಗಳನ್ನಾಗಿ ಹೊಂದಿರುವುದೇ ಬ್ರಹ್ಮವಸ್ತುವಿನ ವೈಶಿಷ್ಟ್ಯವಾಗಿದೆ. ಭಗವಾನ್‌ ರಾಮಾನುಜರು ಈ ದರ್ಶನದ ವೈಶಿಷ್ಟ್ಯವನ್ನು ತಮ್ಮ ವೇದಾರ್ಥಸಂಗ್ರಹದಲ್ಲಿ - 'ಸರ್ವಶರೀರತಯಾ ಸರ್ವಪ್ರಕಾರಾಂ ಬ್ರಹ್ಮೈವ ಅವಸ್ಥಿತಮಿತಿ ಅಭೇದಃ ಸಮರ್ಥಿತಃ ಏಕಮೇವ ಬ್ರಹ್ಮ ನಾನಾ ಭೂತಚಿದಚಿದ್ವಸ್ತು ಪ್ರಕಾರಂ ನಾನಾತ್ವೇನ ಅವಸ್ಥಿತಮಿತಿ ಭೇದಾಭೇದೌ, ಅಚಿದ್ವಸ್ತುನಶ್ಚ ಚಿದ್ವಸ್ತುನಶ್ಚ ಈಶ್ವರಸ್ಯಚ ಸ್ವರೂಪ ಸ್ವಭಾವವೈಲಕ್ಷಣ್ಯಾತ್‌ ಅಸಂಕರಾಚ್ಚ ಭೇದಃ ಸಮರ್ಥಿತಃ' ಎಂದು ಹೇಳಿದ್ದಾರೆ. ಚೇತನಾಚೇತನಗಳಿಗೆ ವಿಶಿಷ್ಟವಾದ ಬ್ರಹ್ಮ ವಸ್ತುತಃ ಅವಿಕಾರಿಯಾದುದು. ಆಗುವ ವಿಕಾರಗಳೆಲ್ಲಾ ಅದರ ಶರೀರಸ್ಥಾನಿಗಳಾದ ಚೇತನಾಚೇತನಗಳಿಗೆ. ಅಚೇತನಕ್ಕೆ ಸ್ವರೂಪ ವಿಕಾರವೂ ಚೇತನಗಳಿಗೆ ಜ್ಞಾನಸಂಕೋಚ ರೂಪವಾದ ವಿಕಾರವೂ ಸಂಭವಿಸುವುವು. ಬ್ರಹ್ಮವಸ್ತು ಮಾತ್ರ ಯಾವ ದೋಷಕ್ಕೂ ಒಳಗಾಗದೆ 'ಅವಿಕಾರಾಯ ಶುದ್ಥಾಯ ನಿತ್ಯಾಯ ಪರಮಾತ್ಮನೇ' ಎಂದು ಹೇಳಿದಂತೆ ನಿತ್ಯಶುದ್ಥವಾಗಿಯೇ ಇರುತ್ತದೆ. ಹೀಗೆ ಈ ಸಿದ್ಧಾಂತ 'ಚಿದಚಿದ್ವಿಶಿಷ್ಟವಾದ ಬ್ರಹ್ಮ ಒಂದೇ ತತ್ವ' ಎಂದು ಸ್ಥಾಪಿಸುತ್ತದೆ.

ಅದ್ವೈತ - ವಿಶಿಷ್ಟಾದ್ವೈತ
ಅದ್ವೈತದರ್ಶನಕ್ಕೂ ವಿಶಿಷ್ಟಾದ್ವೈತಕ್ಕೂ ಇರುವ ವೈಲಕ್ಷಣ್ಯಗಳನ್ನು ಹೀಗೆ ಗುರುತಿಸಬಹುದು. ಅದ್ವೈತವು ನಿಷೇಧಾತ್ಮಕವಾದರೆ ವಿಶಿಷ್ಟಾದ್ವೈತ ವಿಧ್ಯಾತ್ಮಕವಾಗಿದೆ. ಬ್ರಹ್ಮವಸ್ತುವನ್ನು ಬಿಟ್ಟು ಎರಡನೆಯಾದಾದ ಬೇರೆ ಯಾವುದೂ ಇಲ್ಲವೆಂಬುದು ಅದ್ವೈತದ ನಿಲುವು. ಚೇತನಾ ಚೇತಾನಾತ್ಮಕವಾದ ಸಮಸ್ತವೂ ಬ್ರಹ್ಮನಲ್ಲಿ ಅಡಗಿದೆ ಎಂಬುದು ಈ ದರ್ಶನದ ನಿಶ್ಚಯ. ಬ್ರಹ್ಮಕ್ಕಿಂತ ಪೃಥಕ್ಕಾಗಿ, ಬೇರೆಯಾಗಿ, ಯಾವುದೂ ಇಲ್ಲವೆಂದು ಅದ್ವೈತ ಸಾರಿದರೆ ಬ್ರಹ್ಮದೊಡನೆ ಅಪೃಥಕ್ಕಾಗಿ, ಅವಿಭಾಗವಾಗಿ ಎಲ್ಲವೂ ಇದೆ ಎಂಬುದು ಈ ದರ್ಶನದ ಸಿದ್ಧಾಂತ. 'ಬ್ರಹ್ಮಸತ್ತೆಯೇ ಸತ್ತ್ವ ಅದನ್ನುಳಿದು ಪ್ರಪಂಚವೆಂಬುದಿಲ್ಲ' - ಎಂದು ಅದ್ವೈತ ಹೇಳುತ್ತದೆ. ಬ್ರಹ್ಮಸತ್ತೆಗೆ ಅಧೀನವಾದ ಸತ್ತಾ ಪ್ರಪಂಚಕ್ಕೆ ಇದೆ ಎಂದು ವಿಶಿಷ್ಟಾದ್ವೈತ. ಬ್ರಹ್ಮ ವಸ್ತುವಿಗೆ ಅಧೀನವಾಗಿಲ್ಲವೆಂದು ಯಾವುದೂ ಇಲ್ಲ, ಬ್ರಹ್ಮದಲ್ಲಿ ದೋಷವಾವುದೂ ಇಲ್ಲವೆಂದು ನಿಷೇಧದಲ್ಲಿ ತಾತ್ಪರ್ಯ. ಅದ್ವೈತಕ್ಕೆ ದೋಷವಿಲ್ಲವೆಂಬುದಷ್ಟೇ ಅಲ್ಲದೆ ಬ್ರಹ್ಮದಲ್ಲಿ ಸಕಲಕಲ್ಯಾಣ ಗುಣಗಳೂ ಇವೆ ಎಂದು ವಿಧಿಯಲ್ಲಿ ತಾತ್ಪರ್ಯ ಎಂದು ವಿಶಿಷ್ಟಾದ್ವೈತವು ಸರ್ವಾನಿಷ್ಟನಿವೃತ್ತಿ ಪೂರ್ವಕವಾದ ಸರ್ವೇಷ್ಟಪ್ರಾಪ್ತಿ ಎಂದು ಹೇಳುತ್ತದೆ. ಆತ್ಮರೆಲ್ಲರೂ ಒಂದೇ ಎಂದು ಐಕಾತ್ಮ್ಯವನ್ನು ಅದ್ವೈತ ಹೇಳಿದರೆ ಅತ್ಮರೆಲ್ಲರೂ ಜ್ಞಾನೈಕಾಕಾರರಾಗಿ ಪರಸ್ಪರ ಸಮರು ಎಂದು ವಿಶಿಷ್ಟಾದ್ವೈತ ಹೇಳುತ್ತದೆ. ಅಭೇದಶ್ರತಿಗೆ ಪ್ರಾಧಾನ್ಯವಿತ್ತು ಅದ್ವೈತ ದರ್ಶನ ಭೇದಶ್ರತಿಗಳಿಗೆ ಗೌಣಾರ್ಥವನ್ನು ಹೇಳುತ್ತದೆ. ಅಭೇದಶ್ರತಿಗಳಿಗೂ ಭೇದ ಶ್ರತಿಗಳಿಗೂ ಮುಖ್ಯಾರ್ಥವನ್ನೇ ಹೇಳಿ ಘಟಕಶ್ರತಿಗಳ ಮೂಲಕ ಸಮನ್ವಯವನ್ನು ವಿಶಿಷ್ಟಾದ್ವೈತವು ಸಾಧಿಸುತ್ತದೆ.

ವಿಶಿಷ್ಟಾದ್ವೈತ ದರ್ಶನದ ಪ್ರಾಚೀನತೆ
ವಿಶಿಷ್ಟಾದ್ವೈತ ದರ್ಶನವನ್ನು ಯಾರೂ ಹೊಸದಾಗಿ ಸ್ಥಾಪಿಸಲ್ಲ. ಅನಾದಿಕಾಲದಿಂದ ಶ್ರತಿಗಳಲ್ಲಿ, ಇತಿಹಾಸ ಪುರಾಣಗಳಲ್ಲಿ, ಆಗಮಗಳಲ್ಲಿ,ಆಳ್ವಾರುಗಳು ದವ್ಯಪ್ರಬಂಧಗಳಲ್ಲಿ ಖಚಿತವಾಗಿ ಪ್ರತಿಪಾದಿಸಿರುವ ತತ್ವಗಳನ್ನು ಆಚಾರ್ಯರಗಳು ಉಪದೇಶಿಸಿದ್ದಾರೆ. ಉಪನಿಷತ್ತಿನಲ್ಲಿ ಉಪದೇಶಿಸಿರುವ ಪರಮ ತತ್ತ್ವದ ಬಗೆಗೆ ಬೇರೆ ಬೇರೆ ಅಭಿಪ್ರಾಯಗಳು ಅತಿ ಪ್ರಾಚೀನ ಕಾಲದಿಂದಲೂ ಇದ್ದವೆಂಬುದಕ್ಕೆ ಬಾದರಾಯಣರ ಬ್ರಹ್ಮಸೂತ್ರಗಳೇ ಸಾಕ್ಷಿಯಾಗಿದೆ. ಆಶ್ಮರಥ್ಯರು, ಔಡುಲೋಮಿಗಳು, ಕಾಶಕೃರು, ಮಾದರಿಗಳು ಮೊದಲಾದವರ ಅಭಿಪ್ರಾಯಗಳನ್ನು ಸೂತ್ರಕಾರರು ಉಲ್ಲೇಖಿಸಿ ತಮ್ಮ ಅಭಿಪ್ರಾಯಗಳನ್ನು ಅಲ್ಲಲ್ಲಿ ನಿರೂಪಿಸಿದ್ದಾರೆ. ದ್ವೈತಾದ್ವೈತ ವಿಶಿಷ್ಟಾದ್ವೈತ ಭಾವನೆಗಳೆಲ್ಲಾ ಅತಿ ಪ್ರಾಚೀನ ಕಾಲದಿಂದಲೂ ಇದ್ದವೇ ಆಗಿ, ಶ್ರುತಿಗಳ ತಾತ್ಪರ್ಯವನ್ನು ನಿರ್ಣಯಿಸುವುದರಲ್ಲಿ ಪ್ರಾಮಣಿಕವಾಗಿ ತೊಡಗಿವೆ. 'ವೇದಾಮತವೆಂದರೆ ಶಂಕರದರ್ಶನವೇ. ಶಮಕರರಿಗೆ ಮೊದಲ ವಿಶಿಷ್ಟಾದ್ವೈತವಿರಲೇ ಇಲ್ಲ, ವಿಶಿಷ್ಟಾದ್ವೈತ ಪರವಾದ ವೃತ್ತಿ ಗ್ರಂಥವೇ ಇರಲಿಲ್ಲ, ಶಂಕರರಿಗೆ ಮೊದಲು ಮೋಕ್ಷದಲ್ಲಿ ಜೀವಬ್ರಹ್ಮರಿಗೆ ಭೇದವನ್ನು ಯಾರೂ ಹೇಳುತ್ತಿರಲಿಲ್ಲ' - ಇವೇ ಮೊದಲಾದ ಅಭಿಪ್ರಾಯಗಳಿಗೆ ಅವರವರ ಅಭಿನೀವೇಶ ಕಾರಣವೆನ್ನಬೇಕು. ಇವುಗಳಿಗೆ ಯಾವ ಆಧಾರವೂ ಇಲ್ಲ.

ಗೌಡಪಾದರು, ಶಂಕರರು ಇವರುಗಳಿಗಿಂತ ಹಿಂದಿನವರು ಅಜಾತಿವಾದವನ್ನಾಗಲೀ, ಅಧ್ಯಾರೋಪಾವಾದ ಪ್ರಕ್ರಿಯೆನ್ನಾಗಲೀ ಪ್ರತಿಪಾದಿಸಿರುವುದು ಕಂಡು ಬರುವುದಿಲ್ಲ. ವಿಶಿಷ್ಟಾದ್ವೈತ ಸಂಪ್ರದಾಯವನ್ನು ಪ್ರವರ್ತನಗೊಳಿಸಿದ ಅನೇಕ ಆಚಾರ್ಯರುಗಳನ್ನು ಯಾಮುನರೂ, ರಾಮಾನುಜರೂ ಉಲ್ಲೇಖಿಸುತ್ತಾರೆ. ಯಾಮುನರು ದ್ರಮಿಡ ಭಾಷ್ಯಕಾರರನ್ನು ಶ್ರೀವತ್ಸಾಂಕಮಿಶ್ರರು, ಆಚಾರ್ಯ ಟಂಕ, ಭರ್ತೃಮಿತ್ರ - ಭರ್ತೃಹರಿ -ಬ್ರಹ್ಮದತ್ತ = ಶಂಕರ ಶ್ರೀ ವತ್ಸಾಂಕ - ಭಾಸ್ಕರಾದಿಗಳ ಹೆಸರುಗಳನ್ನೂ ತಮ್ಮ ಗ್ರಂಥಗದಲ್ಲಿ ಹೆಸರಿಸಿದ್ದಾರೆ. ರಾಮಾನುಜರು ಬೃತ್ತಿಕಾರ ಬೋಧಾಯನ, ಟಂಕ-ದ್ರಮಿಡ-ಗುಹದೇವ-ಭಾರುಚಿ ಕಪರ್ದಿ ಮೊದಲಾದವರನ್ನು ಹೇಳುತ್ತಾರೆ. ಇವೆಲ್ಲ ಪ್ರಮಾಣಗಳನ್ನು ನಿರ್ಮತ್ಸರರಾಗಿ ಪರಿಶೀಲಿಸಿದಾಗ ವೇದಾಂತ ದರ್ಶನದ ಪ್ರಕಾರಗಳು ಹಿಂದಿನಿಂದಲೂ ಅನೇಕ ಪ್ರಕಾರವಾಗಿದ್ದವೆಂದೂ ಅವುಗಳಲ್ಲಿ ವಿಶಿಷ್ಟಾದ್ವೈತವೂ ಒಂದು ಪ್ರಕಾರವೆಂಬುದೂ ನಿಶ್ಚಯವಾಗುತ್ತದೆ.

ಶ್ರತಿ-ಸ್ಮೃತಿಗಲ್ಲಿ ವಿಶಿಷ್ಟಾದ್ವೈತ
ಶ್ರುತಿ ಸ್ಮೃತೀತಿಹಾಸ ಪುರಾಣಗಳಲ್ಲಿಯೂ ಆಗಮಗಳಲ್ಲಿಯೂ ಕಂಡು ಬರದ ಯಾವ ಹೊಸ ಅಂಶವು ವಿಶಿಷ್ಟಾದ್ವೈತದಲ್ಲಿ ಇಲ್ಲ. ಶ್ರುತಿವಾಕ್ಯಗಳಿಗೆ ಪರಸ್ಪರ ಸಾಮಂಜಸ್ಯವನ್ನು ಹೇಳುವ ದರ್ಶನ ಇದು. ಋಗ್ವೇದ ಸಂಹಿತೆಯಲ್ಲಿ, ಉಪನಿಷತ್ತುಗಳಲ್ಲಿ, ಆಗಮಗಳಲ್ಲಿ, ಭಗವದ್ಗೀತೆಯಲ್ಲಿ, ಬ್ರಹ್ಮಸೂತ್ರಗಳಲ್ಲಿ ಆಳ್ವಾರಗಳ ದಿವ್ಯ ಪ್ರಬಂಧಗಳಲ್ಲಿ ಪ್ರತಿಪಾದಿಸಿರುವ ತತ್ತ್ವಹಿತ ಪುರುಷಾರ್ಥಗಳ ಸ್ವರೂಪವನ್ನು ಹಾಗೆಯೇ ಈ ದರ್ಶನ ಪ್ರತಿಪಾದಿಸುತ್ತದೆ.

ಋಗ್ವೇದ ಸಂಹಿತೆ.
ಅತಿ ಪ್ರಾಚೀನವಾದ ಋಗ್ವೇದ ಸಂಹಿತೆ ಭಗವತ್ಸ್ವರೂಪವನ್ನೂ ಜೀವಾತ್ಮ ಸ್ವರೂಪವನ್ನೂ, ಅವರುಗಳಿಗಿರುವ ಅವರ್ಜನೀಯವಾದ ಸಂಬಂಧವನ್ನೂ, ಭಗವತ್ಪ್ರಾತಿಗೆ ಭಗವದುಪಾಸನೆಯೇ ಉಪಾಯವೆಂದೂ ಸ್ಪಷ್ಟವಾಗಿ ನಿರೂಪಿಸಿದೆ. 'ಯತ್ರ ಆನಂದಾಶ್ಚ ಮೊದಾಶ್ಚ ಮುದಃಪ್ರಮುದ ಆಸತೇ' ಎಂದು ಹೇಳಿ ಮೋಕ್ಷ ಸ್ವರೂಪವನ್ನು ಗುರುತಿಸಿದೆ. ಭಗವಂತನ ಅನುಗ್ರಹದಿಂದ ಪ್ರತಿಬಂಧಕವಾದ ಪಾಪ ನಿವೃತ್ತಿಯನ್ನೂ ಹೇಳಿ, 'ತವ ಸ್ವಾಮ ಪುರುವೀರಸ್ಯ ಶರ್ಮನ್‌' ಎಂದೂ 'ತುಭ್ಯವಿನ್ಮಘವ್ನಭೂಮ' ಎಂದೂ ಹೇಳಿ ಭಗವಂತನಿಗೆ ಶೇಷಭೂತರಾಗಬೇಕೆಂದು ಉಪದೇಶಿಸಿದೆ. ಜೀವ ಬ್ರಹ್ಮೈಕ್ಯವನ್ನಾಗಲೀ, ನಿರ್ಗುಣದಬ್ರಹ್ಮವನ್ನಾಗಲೀ ಎಲ್ಲಿಯೂ ಇಲ್ಲಿ ಹೇಳಿಲ್ಲ, ಎಲ್ಲ ಅವಸ್ಥೆಗಳಲ್ಲಿಯೂ ಜಗತ್ತಿನ ಹಾಗೂ ಜೀವರಗಳ ಸತ್ಯವೇ ಪ್ರತಿಪಾದಿತವಾಗಿದೆ.

ಉಪನಿಷತ್ತುಗಳು
ಉಪನಿಷತ್ತುಗಳಲ್ಲಿ ಜಗತ್ಕಾರಣವಾದ ಬ್ರಹ್ಮವಸ್ತುವನ್ನು ಸತ್‌, ಆತ್ಮನ್‌, ಬ್ರಹ್ಮ, ಆಕಾಶ, ಅಕ್ಷರ, ಜ್ಯೋತಿ, ಪ್ರಾಣ ಎಂಬ ಅನೇಕ ನಾಮಗಳಿಂದ ಕರೆದಿದೆ. ಜಗತ್ಸಷ್ಥ್ರಿಯ ವಿಚಾರ ಎಲ್ಲ ಉಪನಿಷತ್ತುಗಳಲ್ಲಿಯೂ ಕಂಡು ಬಂದಿದೆ. ಬ್ರಹ್ಮ, ಲಕ್ಷಣವನ್ನು 'ಯತೋವಾ ಇಮಾನಿಭೂತಾಚಯಂತೇ' ಎಂದೇ ಹೇಳುತ್ತದೆ. ಸೃಷ್ಟಿಯ ನಿರೂಪಣೆ ಸುಳ್ಳಾದುದೆಂಬ ಸುಳಿವು ಎಲ್ಲಿಯೂ ಇಲ್ಲ, ಜೀವಬ್ರಹ್ಮ ಭೇದವನ್ನೇ ಮುಖ್ಯವಾಗಿ ಹೇಳಿ ಭಗವದುಪಾಸನೆಯ ಅನೇಕ ಪ್ರಕಾರಗಳನ್ನು ಹೇಳಿದೆ. ಅಭೇಜ ವಾಕ್ಯಗಳಾದ 'ತತ್‌ತ್ವಂ ಅಸಿ', 'ಅಯಮಾತ್ಮಾ ಬ್ರಹ್ಮ', 'ಸರ್ವಂಖಲ್ಪಿದಂ ಬ್ರಹ್ಮ' ಮೊದಲಾದ ವಾಕ್ಯಗಳು, ಎಲ್ಲ ಚೇತನಾಚೇತನ ಪದಾರ್ಥಗಳಲ್ಲಿ ಬ್ರಹ್ಮವು ಅಂತರ್ಯಾಮಿಯಾಗಿರುವುದರಿಂದ ಎಲ್ಲ ಶಬ್ಚಗಳೂ ಬ್ರಹ್ಮವನ್ನೇ ಮುಖ್ಯಾರ್ಥದಲ್ಲಿ ಭೋದಿಸುತ್ತವೆ ಎಂಬುದನ್ನು ತಿಳಿಸುತ್ತದೆ. ಭೇದವಾಕ್ಯಗಳಿಗೂ ಅಭೇದ ವಾಕ್ಯಗಳಿಗೂ ಸಮನ್ವಯವನ್ನು ಮಾಡುವ ವಿಧಾನವನ್ನು ಅಂತರ್ಯಾಮಿಬ್ರಾಹ್ಮಣ ತೋರಿಸಿಕೊಡುತ್ತದೆ. ಅವಿದ್ಯಯಿಂದ ಬ್ರಹ್ಮಸ್ವರೂಪವು ರಿರೋಹಿತವಾಗಿದೆ ಎಂದಾಗಲೀ ಬ್ರಹ್ಮವೇ ಜಗತ್ತಿನಂತೆ ತೋರಿಬರುತ್ತದೆ ಎಂದಾಗಲೀ ಹೇಳುವ ಉಪನಿಷದ್ವಾಕ್ಯವೊಂದೂ ಇಲ್ಲ.

ಭಗವದ್ಗೀತೆ
ಶ್ರೀಮದ್ರಾಮಾಯಣ ಮಹಾಭಾರತಗಳಲ್ಲಿಯೂ ವಿಷ್ಣುಪುರಾಣ ಮೊದಲಾದುವುಗಳಲ್ಲಿಯೂ ಜೀವಬ್ರಹ್ಮದ ಭೇದವೇ ಕಂಡುಬರುತ್ತದೆ. ಭಕ್ತಿಮಾರ್ಗವನ್ನೂ ಪ್ರಪತ್ತಿಮಾರ್ಗವನ್ನೂ ಮೋಕ್ಷೋಪಾಯವಾಗಿ ಇವು ವಿಧಿಸಿವೆ. ಭಗವದ್ಗೀತಯು ಮಹಾಭಾರತದ ಸಾರಸರ್ವಸ್ವವಾಗಿದೆ. ಪರಾ ಪ್ರಕೃತಿ, ಅಪರಾ ಪ್ರಕೃತಿ ಮತ್ತು ಈಶ್ವರ ಎಂಬ ತತ್ತ್ಪತ್ರಯವನಿನದು ಉಪದೇಶಿಸುತ್ತದೆ. ಭಗವತ್‌ ಸ್ವರೂಪದ ಹಿರಿಮೆಯನ್ನು ಇದು ಎತ್ತಿ ತೋರಿಸುತ್ತದೆ. ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗಗಳ ಸ್ವರೂಪವನ್ನು ವಿವರಿಸಿರುವ ಗೀತೆ 'ಸರ್ವಧರ್ಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ' ಎಂದು ಪರಮ ಹಿತವನ್ನುಪದೇಶಿಸುತ್ತದೆ. ಭಗವಂತನಿಗೂ ಜೀವನಿಗೂ ಅಭೇದವನ್ನು 'ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ' ಮೊದಲಾದ ವಾಕ್ಯಗಳು ಹೇಳಿದರೂ ಇವುಗಳ ಅರ್ಥವನ್ನು ಭಗವದ್ಗೀತೆಯ 'ಮಹಾತಾತ್ಪರ್ಯಕ್ಕೆ' ಅನುಗುಣವಾಗಿ ಹೇಳಬೇಕಾದುದರಿಂದ ಐಕ್ಯಾರ್ಥವನ್ನು ಹೇಳುವುದು ಹೊಂದುವಿದಿಲ್ಲ. ಗೀತೆಯು ಉಪದೇಶಿಸುವ ಸಾಧನೆಯ ಕ್ರಮವನ್ನು ಸಮಗ್ರವಾಗಿ ವಿಶಿಷ್ಟಾದ್ವೈತ ಅಳವಿಡಿಸಿಕೊಂಡಿದೆ.

ಪಾಂಚರಾತ್ರಾಗಮ
ಪಾಂಚರಾತ್ರ ಅಗಮಗಳಲ್ಲಿ ಪ್ರತಿಪಾದಿಸಿರುವ ಭಾಗವತ - ಸಂಪ್ರದಾಕ್ಕನುಗುಣವಾಗಿದೆ ಈ ಸಿದ್ಧಾಂತದ ಈಶ್ವರಭಾವನೆ. ಈ ಅಗಮಗಳಲ್ಲಿ ಶ್ರೀಮನ್ನಾರಯಣನ ಪರಮಕಾರಣತ್ವ್ನ್ನು ಪ್ರತಿಪಾದಿಸಿದೆ. ಜಯಾಖ್ಯ ಸಂಹಿತೆಯಲ್ಲಿ ಹೇಳುವ ಬ್ರಹ್ಮಸರ್ಗ ಪ್ರಧಾನಸರ್ಗ ಮತ್ತು ಶುದ್ಧಸರ್ಗಗಳು, ಸೃಷ್ಠಿಯ ಮೂರು ಬಗೆಗಳಾಗಿದೆ. ಚತುರ್ಮುಖ ಬ್ರಹ್ಮನ ಸೃಷ್ಠಿ, ಮಧುಕೈಟಭರಿಂದ ವೇದಾಪಹಾರ ಹಾಗೂ ಅವರ ನಿರಸನ ಮೊದಲಾದವು ಬ್ರಹ್ಮಸೃಷ್ಠಿಗೂ, ಪ್ರಕೃತಿಯ ಇಪ್ಪತ್ತುನಾಲ್ಕು ತತ್ತ್ಬಗಳ ಸೃಷ್ಠಿ ಪ್ರಧಾನ ಸೃಷ್ಠಿಗೂ ವಾಸುದೇವನು ತನ್ನ ಸಂಕಲ್ಪಕ್ಕನುಸಾರವಾಗಿ ಅಚ್ಯುತ, ಸತ್ಯ, ಪುರುಷ ಎಂಬ ರೂಪಗಳನ್ನು ಹೊಂದುವುದು ಶುದ್ದಸರ್ಗಕ್ಕೂ ಅನ್ವಯಿಸುವುವು. ಭಗವಂತನು ಜ್ಞಾನಾನಂದಸ್ವರೂಪನಾಗಿ ಕಾಲದೇಶಗಳ ಪರಿಚ್ಧೇದಗಳನ್ನು ಮೀರಿದ್ದಾನೆಂದೂ ಚೇತನಾಚೇತನ ತತ್ವಗಳನ್ನು ವ್ಯಾಪಿಸದ್ಧಾನೆಂದೂ,

ಚೇತನಾಚೇತನಾಸ್ಸರ್ವೇ ಭೂತಾಃ ಸ್ಥಾವರ ಜಂಗಮಾಃ
ಪೂರಿತಾಃ ಪರಮೇಶೇನ ರಸೇನೌಷಧಯೇ ಯಥಾ (ಜಯಾಖ್ಯ ೪-೯೩)
ಹೀಗೆ ಜಯಾಖ್ಯ ಸಂಹಿತೆ ಹೇಳುತ್ತದೆ. ಮುಕ್ತೈವಸ್ಥೆಯಲ್ಲಿ ನಾಮರೂಪ ಭೇದಗಳನ್ನು ಕಳೆದುಕೊಂಡು ಚೇತನರು ಭಗವಂತನಿಗೆ ಸದೃಶರಾಗುವರೆಂದೂ, ಅವನೊಂದಿಗೆ ಸೇರಿಹೋಗುವುದಿಲ್ಲವೆಂದೂ ಪಾಂಚಾರತ್ರಾಗಮ ತಿಳಿಸುತ್ತದೆ. ಬೇರೆ ಬೇರೆ ನೀರು ಸಮುದ್ರವನ್ನು ಸೇರಿದಾಗ ಸಮುದ್ರದೊಡನೆ ಸೇರಿ ಸಮುದ್ರೋದಕಕ್ಕೆ ಸಮಾನವಾಗುತ್ತದೆ. ಆಗ ಇದು ಇಂಥಾನದಿಯ ನೀರೆಂದು ಹೇಳುವುದಕ್ಕಾವುದಿಲ್ಲ, ಹಾಗೆಯೇ ಮುಕ್ತರು ಭಗವಂತನನ್ನು ಸೇರಿದಾಗ ಅವನಿಗೆ ಸದೃಶತಾಗುತಾರೆ. ಆದರೆ ಅವನಿಂದ ಭಿನ್ನರಾಗಿರುತ್ತಾರೆ ಎಂದು

ಸರಿತ್ಸಂಘಾತ್‌ ಯಥಾತೋಯಂ ಸಂಪ್ರವಿಷ್ಟಂ ಮಹೋದಧೌ
ಅಲಕ್ಷೈಶ್ಚೋದಕೇ ಭೇದಃ ಪರಸ್ಮಿನ್‌ ಯೋಗಿನಾ ತಥಾ
(ಜಯಾಖ್ಯಾ ೪-೧೨೩)
ಎಂಬಲ್ಲಿ ಹೇಳಿದೆ. ಭಗವಂತನು ಜ್ಞಾನ, ಶಕ್ತಿ, ಬಲ, ಐಶ್ವರ್ಯ, ವೀರ್ಯ, ತೇಜಸ್ಸು ಎಂಬ ಷಡ್ಗುಣಗಳನ್ನು ಹೊಂದಿರುವನೆಂದೂ, ಅವನು ಲಕ್ಷ್ಮೀವಿಶಿಷ್ಟನಾಗಿದ್ದಾನೆಂದೂ, ಚತುರ್ವ್ಯೂಹಗಳಲ್ಲಿರುವನೆಂದೂ, ಸಂಸಾರದಿಂದ ಬಿಡುಗಡೆ ಹೊಂದಿ ಆ ಭಗವಂತನನ್ನು ಸೇರಲು ಅಂಗಪಂಚಕಗಳಿಂದ ಕೂಡಿದ ಶರಣಾಗತಿ ಉಪಾಯವೆಂದೂ ಪಾಂಚರಾತ್ರಾಗಮಗಳು ಭೋಧಿಸುತ್ತವೆ. ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ಈ ಅಂಶಗಳೆಲ್ಲಾ ಅಂಗೀಕೃತವಾಗಿವೆ. ಪಾಂಚರಾತ್ರಾಗಮಗಳ ಉಪದೇಶದ ಮತ್ತು ಉಪನಿಷತ್ತುಗಳ ಉಪದೇಶದ ಸಮನ್ವಯವನ್ನು ವಿಶಿಷ್ಟಾದ್ವೈತ ದರ್ಶನದಲ್ಲಿ ಕಾಣಬಹುದು.

ಆಳ್ವಾರುಗಳ ದಿವ್ಯಪ್ರಬಂಧಗಳು
ಆಳ್ವಾರರುಗಳ ದಿವ್ಯಪ್ರಬಂಧಗಳು ಶ್ರುತಿಸ್ಮೃತೀತಹಾಸ ಪುರಾಣಗಳ ಮುಂದಿನ ಕಾಲಕ್ಕೂ ಶ್ರೀಮನ್ನಾಥಮುನಿಗಳು ಮೊದಲಾದ ದರ್ಶನ ಸ್ಥಾಪನಾಚಾರ್ಯರುಗಳ ಹಿಂದಿನ ಕಾಲಕ್ಕೂ ಸಂಬಂಧಿಸಿವೆ. ಶ್ರುತಿ ಸ್ಮೃತಿಗಳಲ್ಲಿ ಪ್ರತಿಪಾದಿತವಾದ ತತ್ತ್ವಸ್ವರೂಪವನ್ನು ಯಥಾವತ್ತಾಗಿ ಸಾಕ್ಷಾತ್ಕರಿಸಿದ ಆಳ್ವಾರುಗಳು ತಮ್ಮ ಶ್ರೀ ಸೂಕ್ತಿಗಳಲ್ಲಿ ಅವಿಷ್ಕರಿಸಿದ್ದಾರೆ. ಶೃತಿಗಳ ಸಾರಾರ್ಥವನ್ನು ಇವು ಖಚಿತವಾಗಿ ಅಥೈಸಿವೆ. ಆಳ್ವಾರರುಗಲು ಹೇಳುವ ತತ್ತ್ವಸ್ವರೂಪ ವಿಶಿಷ್ಟಾದ್ವೈತದಲ್ಲಿ ಪ್ರತಿಬಿಂಬಿತವಾಗಿದೆ. ಶಂಕರಾಚಾರ್ಯರಿಗೂ ಹಿಂದಿನ ಕಾಲಕ್ಕೆ ಸೇರಿದ ದಿವ್ಯಪ್ರಬಂಧಗಳು ಹೇಗೆ ಅನಾದಿಕಾಲದಿಂದ ವಿಶಿಷ್ಟಾದ್ವೈತ ಸಂಪ್ರದಾಯ ಅವಿಚ್ಛಿನ್ನವಾಗಿ ಮುಂದುವರಿದುಕೊಂಡು ಬಂದಿದೆ ಎಂಬುದನ್ನು ದೃಡವಾಗಿ ಪ್ರಮಾಣಿಕರಿಸುತ್ತವೆ. ಇವುಗಳು ಶ್ರೀಮನ್ನಾರಯಣನ ಸರ್ವೋತ್ತಮತ್ವವನ್ನೂ ಅವನಿಗೂ ಜೀವಾತ್ಮರುಗಳಿಗೂ ಇರುವ ಭೇದವನ್ನೂ, ಅವನಿಗೂ ಜಗತ್ತಿಗೂ ಇರುವ ಶರೀರ-ಶರೀರಿ ಸಂಬಧವನ್ನೂ, ಅವನನ್ನು ಪ್ರಸನ್ನಗೊಳಿಸಕ್ಕೊಳ್ಳಲು ಭಕ್ತಿಪ್ರಪತ್ತಿಗಳು ಉಪಾಯವೆಂಬುದನ್ನೂ, ಮುಕ್ತನು ಭಗವಂತನ ದಿವ್ಯಧಾಮಕ್ಕೆ ಹೋಗಿ ಆ ಪರಮಾತ್ಮನಿಗೆ ನಿತ್ಯ ಕೈಂಕರ್ಯ ಮಾಡುವುದೇ ಪುರುಷಾರ್ತವೆಂಬುದನ್ನೂ ಅತ್ಯಂತ ಖಚಿತವಾಗಿ ಪ್ರತಿಪಾದಿಸಿವೆ. ದೇವಾರ್ಥವಿಶದೀಕರಣಕ್ಕೆ ಈ ಸೂಕ್ತಿಗಳು ಮಾರ್ಗದರ್ಶನ ಮಾಡಿದೆವು.

ಬ್ರಹ್ಮಸೂತ್ರಗಳು
ಪ್ರಸ್ಥಾನತ್ರಯಗಳಲ್ಲಿ ಒಂದೆಂದು ಪರಿಗಣಿತವಾದ ಬ್ರಹ್ಮಸೂತ್ರಗಳು ಉಪನಿಷತ್ತುಗಳಲ್ಲಿ ಉಪದೇಶಿಸಿದ ಅರ್ಥಗಳನ್ನು ವಿವರಿಸಿ ದೃಢೀಕರಿಸುತ್ತವೆ. ಬ್ರಹ್ಮವಸ್ತು ಜಗತ್ತಿಗೆ ಕಾರಣವೆಂದೂ, ಅದು ಉಪನಿಷತ್ತುಗಳನ್ನು ನಿರೂಪಿಸುವಂತೆ ಅನೇಕ ಗುಣವಿಶಿಷ್ಟವಾಗಿದೆಯೆಂದೂ, ಬ್ರಹ್ಮಪ್ರಾಪ್ತಿಗೆ ಬ್ರಹ್ಮೋಪಾಸನೆಯೇ ಉಪಾಯವೆಂದೂ ಸೂತ್ರಗಳು ಸಮರ್ಥಿಸುತ್ತವೆ. ಬ್ರಹ್ಮಸೂತ್ರಗಳು ಅನೇಕ ಉಪಾಸನೆಯ ಪ್ರಕಾರಗಳನ್ನು ವಿಶದಪಡಿಸುತ್ತವೆ. ಜೀವಾತ್ಮನ ಸ್ವರೂಪವನ್ನು ಸೂತ್ರಗಳು ಉಪನಿಷತ್ಪ್ರಮಾಣಗಳಿಗನುಸಾರವಾಗಿ, ನಿತ್ಯನೆಂದೂ ಉತ್ಪತ್ತಿಇಲ್ಲವೆನೆಂದೂ, ಅಣುವೆಂದೂ, ಜ್ಞಾನಗುಣವಿಶಿಷ್ಟನೆಂದೂ, ಕರ್ತೃವೆಂದೂ, ಬ್ರಹ್ಮಕ್ಕಿಂತ ಬೇರೆಯಾದವನೆಂದೂ ಸಾಧಿಸಿ ಅವನಿಗೂ ಬ್ರಹ್ಮಕ್ಕೂ ಇರುವ ಸಂಬಂಧವನ್ನು ಅಂಶಾಧಿಕರಣದಲ್ಲಿ ನಿಖರವಾಗಿ ನಿರೂಪಿಸುತ್ತವೆ. ಜೀವನು ಬ್ರಹ್ಮವಸ್ತುವಿನ ಅಂಶ. ವಿಶಿಷ್ಟವಾದ ವಸ್ತುವಿನಲ್ಲಿ ಬ್ರಹ್ಮವು ವಿಶೇಷ್ಯಾಂಶವಾದರೆ ಜೀವನು ವಿಶೇಷಣಾಂಶ. ಭೇದಶ್ರುತಿಗಳಿಗೂ ಅಭೇದಶ್ರುತಿಗಳಿಗೂ ಸಮಾನವಾದ ಪ್ರಾಮಾಣ್ಯವನ್ನು ಹೇಳಿ ಎರಡರ ಸಮನ್ವಯವನ್ನು ಸೂತ್ರಕಾರರು ಮಾಡಿದ್ದಾರೆ. ಮುಕ್ತ್ಯವಸ್ಥೆಯಲ್ಲಿ ಜೀವರು ಪರಮಾತ್ಮನನ್ನು ಅರ್ಚಿರಾದಿಯಲ್ಲಿ ಹೋಗಿ ಸೇರುವರೆಂದೂ, ಬ್ರಹ್ಮದೊಡನೆ ಅವನಿಗೆ ಆನಂದಾನುಭವದಲ್ಲಿ ಸಾಮ್ಯವಿರುವುದೆಂದೂ ಸೂತ್ರಗಳು ಸಿದ್ಧಾಂತಿಸಿವೆ. ಸೂತ್ರಗಳಲ್ಲಿ ಗುಣ, ಧರ್ಮ, ಸುಖ, ವಿಶಿಷ್ಟ, ವಿಶೇಷಣ, ಭೇದ ಮೊದಲಾದ ಶಬ್ದಗಳನ್ನು ಪ್ರಯೋಗಿಸಿ ಬ್ರಹ್ಮವಸ್ತುವಿನ ಸಗುಣತ್ವವನ್ನೇ ಸ್ಥಾಪಿಸಿದೆ. ಜಿಜ್ಞಾಸ್ಯ ಮತ್ತು ಉಪಾಸ್ಯ ಎಂಬ ಭೇದದ ಸುಳಿವೂ ಸೂತ್ರಗಳಲ್ಲಿಲ್ಲ. ಸೂತ್ರಗಳಿಗನುಸಾರ ಬ್ರಹ್ಮವು ಸಗುಣವಾಗಿದೆ. ಜೀವಾತ್ಮನಿಗಿಂತ ಬೇರೆಯಾಗಿ ಅವನಿಗೆ ಅಂತರ್ಯಾಮಿಯಾಗಿದೆ. ಜಗತ್ತು ಸೂತ್ರಗಳಿಗನುಗುಣವಾಗಿ ಸತ್ಯವಾದುದೇ ವಿನಾ ಮಿಥ್ಯೆಯಲ್ಲ. ಅವಿದ್ಯೆಯಿಂದ ಬ್ರಹ್ಮಸ್ವರೂಪ ತಿರೋಹಿತವಾಗಿದೆ ಎಂಬ ಅಂಶದ ಸೂಚನೆ ಎಲ್ಲಿಯೂ ಇಲ್ಲ. ಸೃಷ್ಟಿ ವಿಚಾರ ಹೇಳುವಾಗ ಸೂತ್ರಕಾರರು 'ಪರಿಣಾಮಾತ್‌' ಎಂದೇ ಹೇಳಿದ್ದಾರೆ. ಸೂತ್ರಗಳಲ್ಲಿ ಪ್ರತಿಪಾದಿಸುವ ಈ ಅಂಶಗಳೆಲ್ಲಾ ವಿಶಿಷ್ಟಾದ್ವೈತ ದರ್ಶನದಲ್ಲಿ ಯಥಾವತ್ತಾಗಿ ಕಂಡುಬರುತ್ತವೆ.




Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ