ಅದ್ವೈತ ವೇದಾಂತ

ವೇದಾಂತವೆಂದರೆ ವೇದದ ಕೊನೆಯಭಾಗ. ವೇದದ ಸಿದ್ಧಾಂತ. ಇದು ಉಪನಿಷತ್ತುಗಳ ಸಾರಾರ್ಥ. ವೈದಿಕ ಸಾಹಿತ್ಯದ ಮಥಿತಾರ್ಥ. ವೇದವಯದ ಜ್ಞಾನ ಕಾಂಡವೆನಿಸಿಕೊಂಡಿರುವ ಭಾಗ, ಭಾರತೀಯ ಋಷಿ ಮುನಿಗಳು ಮಾನವತೆಗೆ ನೀಡಿದ ಅಪೂರ್ವ ಕೊಡುಗೆ ವೈದಿಕ ಚಿಂತಕರು ತಪಸ್ಸಿನಿಂದ ಕಂಡುಕೊಂಡ ಸತ್ಯ. ಮಾನವ ಬುದ್ದಿಯ ಪರಾಕಾಷ್ಠೆಯ ಸತ್ಪಲ. ಇದರಲ್ಲಿ ಜೀವ, ಜಗತ್ತು, ಬ್ರಹ್ಮ ಇತ್ಯಾದಿಗಳನ್ನು ಕುರಿತ ವಿಸ್ತಾರವಾದ ಚರ್ಚೆ - ವಿಫುಲ ಪರಾಮರ್ಶೆಗಳು ಸಮ್ಮಿಳಿತವಾಗಿವೆ. ದಶ ಉಪನಿಷತ್ತುಗಳೆಂದು ಪ್ರಸಿದ್ದಿವಾಗಿರುವ ವೇದ ಸಾಹಿತ್ಯದ ಸಾರಭೂತ ಜ್ಞಾನಕ್ಕೆ ಆಚಾರ್ಯತ್ರಯರು ತಂತಮ್ಮ ನಿಲುವಿಗೆ ಆನುಗುಣವಾಗಿ ವಿಸ್ತಾರವಾಗಿ ವ್ಯಾಖ್ಯಾನ ಮಾಡಿದ್ದಾರೆ.
ಆಚಾರ್ಯ ಶಂಕರರು ಮೂವರು ಭಾಷ್ಯಕರ್ತರಾದ ಆಚಾರ್ಯರಲ್ಲಿ ಮೊದಲನೆಯವರು. ಇವರ ಕಾಲದಲ್ಲಿ ಶ್ರುತಿ ಪ್ರಸ್ಥಾನವಾದ ಉಪನಿಷತ್ತುಗಳು ವೇದಾಂತವೆಂಬ ಅಭಿಧಾನಕ್ಕೆ ಪಾತ್ರವಾಗಿದ್ದವು. ಶ್ರೀ ಶಂಕರರ ಕಾಲದಲ್ಲಿ ವೇದಾಂತವೆಂಬ ಶಬ್ದವು ಈಗ ಅದ್ವೈತವೆಂದು ಕರೆಯಲಾಗುವ ತತ್ತ್ವವನ್ನು ಮಾತ್ರ ಪ್ರತಿನಿಧಿಸುತ್ತಿತ್ತು. ಹಾಗಾಗಿ ಶಂಕರರ ಕಾಲದವರೆಗೆ ವೇದಾಂತವೆಂದರೆ ಅದ್ವೈತ ವೇದಾಂತವೆಂದೇ ಆರ್ಥೃಸಿಕೊಳ್ಳುವುದು ಸಹಜ ಹಾಗೂ ಸೂಕ್ತವಾದದ್ದು. ಶ್ರೀ ರಾಮಾನುಜಾಚಾರ್ಯರು ಹಾಗೂ ಶ್ರೀ ಮಧ್ವಾಚಾರ್ಯರು ತಂತಮ್ಮ ಮತಗಳನ್ನು ಪ್ರತಿಪಾದಿಸದ ಮೇಲೆ ವೇದಾಂತದಲ್ಲಿ ಮುಖ್ಯವಾಗಿ ಮೂರು ಬಗೆಗಳಾದವು. ಅದರ ಆನ್ವಯ ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿದ ವೇದಾಂತವು ಅದ್ವೈತ ವೇದಾಂತವಾಯಿತು. ಈ ಪರಂಪರೆಯ ಮುಂದುವರೆದು ವಿಶುದ್ದಾದ್ವೈತ, ಶಕ್ತಿವಿಶಿಷ್ಟಾದ್ವೈತ ಮುಂತಾದ ಇನ್ನೂ ಅನೇಕ ಮತಭೇದಗಳು ಉಂಟಾದವು.
ದ್ವೈತಾದ್ವೈತ ವಿಶಿಷ್ಟಾದ್ವೈತಗಳೆಂದು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧವಿರುವ ಮೂರು ಪಂಥಗಳಲ್ಲಿ ಅದ್ವೈತುವು ಪ್ರಾಚೀನವಾದದ್ದು. ದ್ವೈತ ಎಂದರೆ ಭೇದ. ಅದ್ವೈತ ಎಂದರೆ ಭೇದವಿಲ್ಲದ್ದು ಅಂದರೆ ಒಂದೇ ಒಂದಾಗಿರುವಂಥಾದ್ದು. ಈ ಸಿದ್ಧಾಂತದ ಪ್ರಕಾರ ನಾಮರೂಪಾತ್ಮಕವಾದ ಜಗತ್ತು ಆನೇಕ ವೈವಿಧ್ಯಗಳಿಂದ ಕೂಡಿದ್ದರೂ ಪಾರಮಾರ್ಥಿಕ ದೃಷ್ಥಿಯಿಂದ ಇರುವುದು ಒಂದೇ. ನಾವು ಎನೇನನ್ನು ಕಾಣಬಹುದೋ, ಹೇಳಬಹುದೋ, ಕೇಳಬಹುದೋ, ಊಹಿಸಿಕೊಳ್ಳಬಹುದೋ, ಅದೆಲ್ಲವೂ ಅತ್ಯಂತಿಕವಾಗಿ ಒಂದು ವಸ್ತುವೇ. ಆದಕ್ಕೆ ಹೆಸರು ಕೊಡಲಾಗುವುದಿಲ್ಲ. ಮಾತುಗಳಿಂದ ಅದನ್ನು ಬಣ್ಣಿಸಲಾಗುವುದಿಲ್ಲ. ಅದು ಅನುಭವೈಕವೇದ್ಯವಾದದ್ದು. ಅದನ್ನು ನಮ್ಮ ಆರಿವಿಗೆ ನಿಲುಕವಂತೆ ಮಾಡಿಕೊಳ್ಳಲು ' ಬ್ರಹ್ಮ ' ಎಂದು ಕರೆಯಬಹುದೇನೋ! ಆದರೆ ಅದೂ ಅದಕ್ಕೆ ಸಮರ್ಪಕವಾದ ಶಬ್ದವಲ್ಲ, 'ಸತ್‌-ಚಿತ್‌-ಆನಂದ' ಎಂದು ಕರೆದರೂ ಅದು ಅದರ ಎಕದೇಶದ ವರ್ಣನೆಯಾಗವಹುದು. ಎಕೆಂದರೆ ಆ ಪರವಸ್ತುವು 'ವಾಚಾಂ ಅಗೋಚರ', ಅಲ್ಲಿಗೆ ' ನ ಚಕ್ಷುಃ ಗಚ್ಛತಿ, ನ ವಾಗ್‌ ಗಚ್ಛತಿ, ನ ಮನೋ, ನ ವಿದ್ಮೋ, ನವಿಜಾನೀಮೋ, ಯಥೃತದನುಶಿಷ್ಟಾತ್‌' - ಕಣ್ಣು ಹೋಗದು, ಮಾತು ಹೋಗದು, ಮನಸ್ಸು ಹೋಗದು, ನಮಗೆ ಗೊತ್ತಿಲ್ಲ, ನಾವು ತಿಳಿದಿಲ್ಲ - ಇದನ್ನು ಹೇಗೆ ಹೇಳಿಕೊಡಬೇಕೆಂದು ಇರುವುದೇ ಒಂದು, ಅದನ್ನೂ ನಾವು ತಿಳಿವುದು ಕಷ್ಟ. ತಿಳಿದರೂ ತಿಳಿಸುವುದು ಕಷ್ಟ. ಇದು 'ಅದ್ವೈತ' ವೇದಾಂತ.
ಈ ವೇದಾಂತವು ಎಲ್ಲರಿಗೂ ಕೂಡಲೇ ನಿಲುಕುವಂಥದಲ್ಲ . ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ತಕ್ಕಷ್ಟು ಪೂರ್ವ ಸಿದ್ಧತೆ ಇರಬೇಕು. ಅದಿಲ್ಲದೇ ಇದ್ದರೆ ಅದ್ವೈತವು ಅರ್ಥವಾಗುವುದಕ್ಕಿಂತ ಅನರ್ಥವಾಗುವುದೇ ಹೆಚ್ಚು. ಅದಕ್ಕೇ ಹೀಗೆ ಹೇಳಿದ್ದಾರೆ - 'ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಚ್ಛಿನ್ನ ಸಂಶಯಾಃ' - ಗುರುಗಳು ಮೌನವಾಗಿದ್ದಾರೆ - ಶಿಷ್ಯರಿಗೆ ಸಂದೇಹವುಳಿದಿಲ್ಲ. ಈ ಮೌನ ವ್ಯಾಖ್ಯೆಯನ್ನು ಅದ್ವೈತದ ವಿಶೇಷವೆನ್ನಬಹುದು.
ಶ್ರೀ ಶಂಕರರು ಪ್ರತಿಪಾದಿಸಿದ, ಪುನಃ ಪ್ರತಿಷ್ಠಾಪನೆಗೊಳಿಸಿದ ಅದ್ವೈತದ ಬಗ್ಗೆ ಅನೇಕ ಅನ್ಯಥಾಭಿಪ್ರಾಯಗಳಿರುವ ಕಾರಣ ಅಂತಹ ಒಂದೆರಡು ಸಂಗತಿಗಳ ಬಗ್ಗೆ ತಕ್ಕಮಟ್ಟಿಗೆ ಬೆಳಕನ್ನು ಯಥಾಮತಿ ಹರಿಸುವ ಲಘು ಪ್ರಯತ್ನವೊಂದನ್ನು ಈ ಲೇಖನದಲ್ಲಿ ಕಾಣಬಹುದು.
ಅದ್ವೈತದ ಪ್ರಕಾರ `ಬ್ರಹಂ ಸತ್ಯಂ, ಜಗನ್ಮಿಥ್ಯಾ` - ಬ್ರಹ್ಮವು ಸತ್ಯ, ಜಗತ್ತು ಮಿಥ್ಯಾ. ಇಲ್ಲಿ 'ಸತ್ಯ-ಮಿಥ್ಯಾ'ಗಳೆರಡೂ ಅಪಾರ್ಥಕ್ಕೆ ಗುರಿಯಾಗಿದೆ. ಯಾವುದೇ ಮಾತನ್ನು ಯಾರು, ಯಾರಿಗೆ, ಯಾವಾಗ, ಎಕೆ ಹೇಳಿದರೆಂಬ ಸಂದರ್ಭವನ್ನು ಸರಿಯಾಗಿ ಗಮನಿಸದೇ ಹೋದರೆ ಲೌಕಿಕ ವಿಷಯಗಳಲ್ಲಿಯೇ ಅದೆಷ್ಟೋ ಅನರ್ಥಗಳು ಉಂಟಾಗುವುದುಂಟು. ಹೀಗಿರುವಾಗ ವೇದಾಂತ ತತ್ತ್ವದ ಬಗ್ಗೆ ಹೇಳುವುದಿನ್ನೇನು ? ಬ್ರಹ್ಮ ಸತ್ಯವೆಂದರೆ ಜಗತ್ತು ಅಸತ್ಯವೆಂದು ಸರಳ ಅರ್ಥವಲ್ಲ, ಮಾತ್ರವಲ್ಲದೇ ಶ್ರೀ ಶಂಕರರು ಜಗತ್ತನ್ನು ನಾವು ಅರ್ಥಮಾಡಿಕೊಂಡಿರುವ ತರದಲ್ಲಿ ಅಸತ್ಯವೆಂದು ಹೇಳಿಲ್ಲ. ಸತ್ಯವು 'ಪ್ರಾತಿಭಾಸಿಕ' 'ಪಾರಮಾರ್ಥಿಕ' ಎಂದು ಎರಡು ಬಗೆಯಾಗಿದೆ. ಪ್ರಾತಿಭಾಸಿಕವೆಂದರೆ ತೋರುಗಾಣಿಕೆಯದು. ಪಾರಮಾರ್ಥಿಕವೆಂದರೆ ಶಾಶ್ವತವಾದುದು. ಕನಸಿನಲ್ಲದ್ದಾಗ ನನಸಿನ ಲೋಕವಿಲ್ಲ ಅಥವಾ ಸುಳ್ಳು / ಮಿಥ್ಯೆ, ನೆನೆಪಿನಲ್ಲಿದ್ದಾಗ ಕನಸು ಸತ್ಯವಲ್ಲ ಅಥವಾ ಮಿಥ್ಯೆ. ಹೀಗೆಯೇ ಪರಬ್ರಹ್ಮದ ಅನುಭವದ ಹಿನ್ನಲೆಯಲ್ಲಿ ನೋಡಿದಾಗ ಪ್ರಪಂಚವೆಲ್ಲ ಬರಿಯ ಕಾಣ್ಕೆ, ತೋರುಗಾಣಿಕೆ, ವಾಸ್ತವ ಸತ್ಯವಲ್ಲ, ಅತ್ಯಂತಿಕ ತಥ್ಯವಲ್ಲ, ಅದೇ ಕನಸು ಕಾಣುತ್ತಿದ್ದಾಗ ಕನಸು ಸತ್ಯ, ನೆನಪಿನಲ್ಲಿದ್ದಾಗ ನನಸು ಸತ್ಯ. ವ್ಯಾವಹಾರಿಕ ಜಗತ್ತಿನಲ್ಲಿರುವವರೆಗೆ ಜಗತ್ತು ಸತ್ಯ. ಆದರೆ ಪ್ರಾತಿಭಾಷಿಕ ಸತ್ಯ. ಇದೂ ಒಂದು ತರಹೆಯ, ಒಂದು ಮಟ್ಟದ, ಒಂದು ಅರ್ಥದ ಸತ್ಯವೇ. ಜಗತ್ತು ಮಿಥ್ಯೆಯೆಂದರೆ ಪಾರಮಾರ್ಥಿಕ ದೃಷ್ಟಿಯಿಂದ, ಹಂತದಿಂದ, ಮಟ್ಟದಿಂದ ಶಾಶ್ವತ ಸತ್ಯವಲ್ಲ ಎಂದರ್ಥ. ಆದರೆ ಜಗತ್ತಿನಲ್ಲಿರುವವರೆಗೆ ಜಗತ್ತು ಸತ್ಯ. ಸತ್ಯವಾದರೂ ಇದು ಮಾಯೆ. ಇದು ಕ್ಷಣಿಕ, ಖಂಡಸತ್ಯ - ' ಮಾಯಾಮಾತ್ರಮಿದಂ ದ್ವೈತಂ ಅದ್ವೈತಂ ಪರಮಾರ್ಥತಃ ' - ಇದರ ಪೂರ್ಣ ಅರ್ಥವು ಅರಿವಾಗುವುದು ಬ್ರಹ್ಮದ ಅನುಭವವಾದಾಗ ಮಾತ್ರ. ಅದು ಅಷ್ಟು ಸುಲಭವಾಗಿ ಸಿದ್ಧಿಸುವ ಸಂಗತಿಯಲ್ಲ.
ಇನ್ನು ಭೇದಾಭೇದದ ವಿಚಾರ. ನಾನು - ನೀನು ಬೇರೆ. ನಾವಿಬ್ಬರೂ ಬೇರೆ ಜಗತ್ತೇ ಬೇರೆ. ಜಗತ್ತೇ ಬೇರೆ - ದೇವರೇ ಬೇರೆ. ಹೀಗೆ ಹೊಸದಾಗಿ ಹೇಳಬೇಕಾದ್ದೇ ಇಲ್ಲ. ಇದೊಂದು ವೇದಾಂತದ ಗಹನ ಚಿಂತನೆಯೆಂದು ಭಾವಿಸುವುದು ಕಷ್ಟ. ಅದೇ ಬೇರೆ ಬೇರೆ ತೋರುವುದೆಲ್ಲವೂ ಒಂದೇ ಎಂದು ಹೇಳಲು, ಪ್ರಮಾಣ ಪಡಿಸಲು ತರ್ಕಬೇಕು. ಈ ತತ್ತ್ವದ ಬಗ್ಗೆ ಪೂರ್ಣ ವಿಶ್ವಾಸಬೇಕು. ಶ್ರೀ ಶಂಕರರು ಮಾಡಿರುವುದು ಇದನ್ನೇ. ಆದ್ದರಿಂದಲೇ ವಿಶ್ವಚಿಂತಕರ ಬುದ್ಧಿಮಟ್ಟವು ಹೆಚ್ಚಿದಂತೆಲ್ಲಾ ಅದ್ವ್ಯತ ವೇದಾಂತವು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವುದು. ಇದು ಈ ತತ್ವದ ಹಿರಿಮೆ. ಇದನ್ನು ತರ್ಕಬದ್ಧವಾಗಿ ನೆಲೆಗೊಳಿಸಿದ ಶ್ರೀ ಶಂಕರರ ಹಿರಿಮೆ.
ದ್ವೈತಾದ್ವೈತ ವಿಶಿಷ್ಟಾದ್ವೈತಗಳ ಬಗ್ಗೆ ನಮ್ಮಂಥ ಪಾಮರರು ಜಗಳವಾಡುವುದು ಒಂದು ವ್ಯರ್ಥ ಕಾಲಯಾಪನೆ ಆಷ್ಟೆ. ಈ ಮೂರೂ ಸಿದ್ಧಾಂತಗಳು ಮೂರು ಅರ್ಹತೆಯ ನಾನಾ ಜನರಿಗೆಂದು ಪ್ರತಿಪಾದಿತವಾಗಿರುವ, ಪರಬ್ರಹ್ಮನನ್ನು ಅರಿಯಲು ಸಹಕರಿಸುವ, ಮೆಟ್ಟಲುಗಳು. ಪ್ರತಿ ಸಿದ್ಧಾಂತದ ಉನ್ನತಸ್ಥಾನಕ್ಕೆ ಅದೆಷ್ಟೋ ಮೆಟ್ಟಲುಗಳನ್ನು ದಾಟಿ ಹೋಗಬೇಕು. ಅಷ್ಟನ್ನು ಮೊದಲು ಸಾಧಿಸಲು ಪ್ರಯತ್ನಿಸೋಣ. ಅಲ್ಲದೆ ಹೋದಮೇಲೆಯೂ ಇನ್ನೂ ಸಂಶಯಗಳು ಉಳಿದಿದ್ದರೆ ಈ ಆಚಾರ್ಯರನ್ನು ಕೇಳೋಣ. ಇವರೆಲ್ಲರ ಮಾರ್ಗದರ್ಶನ ಪಡೆಯೋಣ. 'ವಸುದೈವ ಕುಟುಂಬಕಂ', 'ಸರ್ವೇ ಅಮೃತಸ್ಯ ಪುತ್ರಾಃ', 'ವಿಶ್ವಂ ಎಕನೀಡಂ' - ಪ್ರಪಂಚವೆಲ್ಲವೂ ಒಂದು ಪುಟ್ಟ ಮನೆ, ಎಲ್ಲರೂ ಅಮೃತದ ಮಕ್ಕಳು, ವಿಶ್ವವೊಂದು ಗೂಡಿದ್ದಂತೆ ಎಂದೆಲ್ಲಾ ಘೋಷಣೆ ಮಾಡುವ ನಾವು ನಮ್ಮ ನಮ್ಮಲ್ಲಿಯೇ ಇಷ್ಟು ಸಂಕುಚಿತ ಭಾವನೆಯಿಂದ ವರ್ತಿಸುವುದೇಕೆ? ಅವರವರ ಮತ ಅವರಿಗೆ ಸರಿ. ಅವರಿಗೆ ದೊಡ್ಡದು. ನಮ್ಮದು ಮಾತ್ರವೇ ಸರಿಯೆಂಬ ದುರಾಗ್ರಹವೇಕೆ? ನಮ್ಮ ನಂಬಿಕೆಯಂತೆ ನಾವು ಬದುಕೋಣ. 'ಪಂಡಿತಾಃ ಸಮದರ್ಶಿನಃ' ನಾವು ಅಪಂಡಿತರಾಗಿ ಎಕೆ ಉಳಿಯೋಣ? ನಮ್ಮ ಒಳಜಗಳದಿಂದ 'ಸನಾತನಧರ್ಮ' ವನ್ನೇಕೆ ಹಾಳುಗೆಡವೋಣ?

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ