ಲಲಿತಾ ತ್ರಿಶತೀ ಭಾಷ್ಯಂ

ವಂದೇ ವಿಘ್ನೇಶ್ವರಂ ದೇವಂ ಸರ್ವಸಿದ್ಧಿಪ್ರದಾಯಿನಮ್ |
ವಾಮಾಂಕಾರೂಢವಾಮಾಕ್ಷೀಕರಪಲ್ಲವಪೂಜಿತಮ್ ||1||
ಶ್ರೀಮಚ್ಛಂಕರ ಭಗವತ್ಪೂಜ್ಯಪಾದರು ಸ್ವೋಪಾಸ್ಯಪರದೇವತೆಯಾದ ಶ್ರೀ ಲಲಿತಾಂಬಿಕೆಯ ನಾಮತ್ರಿಶತೀ ಭಾಷ್ಯದ ಆದಿಯಲ್ಲಿ ಉಪಕ್ರಮಿಸಿದ ಗ್ರಂಥರಚನೆಯು ನಿರ್ವಿಘ್ನವಾಗಿ ಕೊನೆಗಾಣುವುದಕ್ಕೋಸ್ಕ್ರ ಶಿಷ್ಟಸಂಪ್ರದಾಯವನ್ನು ಅನುಸರಿಸಿ ಮಂಗಲ ಪದ್ಯವನ್ನು ಪಠಿಸುತ್ತಾರೆ. ಭಕ್ತರಿಗೆ ಸಕಲ ಇಷ್ಟಸಿದ್ಧಿಯನ್ನು ಉಂಟುಮಾಡುವವನೂ, ವಾಮಭಾಗದ ಅಂಕದಲ್ಲಿ ಕುಳಿತಿರುವ ಸುಂದರಿಯಾದ ಸತಿಯ ಹಸ್ತವೆಂಬ ಕಮಲದಿಂದ ಸತ್ಕರಿಸಲ್ಪಟ್ಟವನೂ ಮತ್ತು ಸರ್ವ ಕಾರ್ಯಗಳಲ್ಲಿ ಉಂಟಾಗುವ ವಿಘ್ನಗಳನ್ನು ದೂರಮಾಡುವ ವಿಶಿಷ್ಟ ಫಲದಾನಶಕ್ತಿಯುಳ್ಳವನೂ ಆದ ಗಣೇಶದೇವನನ್ನು ನಮಸ್ಕರಿಸುತ್ತೇನೆ.
ಪಾಶಾಂಕುಶೇಕ್ಷುಸುಮರಾಜಿತಪಂಚಶಾಖಾಂ
ಪಾಟಲ್ಯಶಾಲಿಸುಷಮಾಂಚಿತಗಾತ್ರವಲ್ಲೀಮ್ |
ಪ್ರಾಚೀನವಾಕ್ಸ್ತುತಪದಾಂ ಪರದೇವತಾಂ ತ್ವಾಂ
ಪಂಚಾಯುಧಾರ್ಚಿತಪದಾಂ ಪ್ರಣಮಾಮಿ ದೇವೀಮ್ ||2||
ವಿಘ್ನೇಶ್ವರನನ್ನು ನಮಸ್ಕರಿಸಿದ ತರುವಾಯ ತಮ್ಮ ಉಪಾಸ್ಯಳಾದ ದೇವಿಯ ವಂದನಪರವಾಗಿ ದ್ವಿತೀಯ ಮಂಗಳಪದ್ಯವನ್ನು ಪಠಿಸಿರುವರು. ಪಾಶ, ಅಂಕುಶ, ಇಕ್ಷುದಂಡ, ಕಮಲಪುಷ್ಪಗಳಿಂದ ಅಲಂಕರಿಸಲ್ಪಟ್ಟ ಹಸ್ತಗಳುಳ್ಳ, ರಕ್ತವರ್ಣಮಯವಾದ ಕಾಂತಿಯಿಂದ ಶ್ಲಾಘ್ಯವಾಗಿರುವ ಲತೆಯಂತೆ ಕೋಮಲ ಮತ್ತು ಕೃಶವಾದ ದೇಹವುಳ್ಳ, ಅನಾದಿಯಾಗಿರುವ ವೇದವಾಕ್ಯಗಳಿಂದ ಸ್ತುತಿಸಲ್ಪಟ್ಟ ಚರಣಗಳುಳ್ಳ, ಕಾಮದೇವನಿಂದ ಪೂಜಿಸಲ್ಟ್ಟ ಪಾದಗಳುಳ್ಳ ಮತ್ತು ಪರದೇವತೆಯಾದ ಲಲಿತಾದೇವಿಯನ್ನು ನಮಸ್ಕರಿಸುತ್ತೇನೆ.
ಲೋಪಾಮುದ್ರಾಪತಿಂ ನತ್ವಾ ಹಯಗ್ರೀವಮಪೀಶ್ವರಮ್ |
ಶ್ರೀವಿದ್ಯಾರಾಜಸಂಸಿದ್ಧಿ ಕಾರಿಪಂಕಜವೀಕ್ಷಣಾಮ್ ||3||
ಮುಂದೆ ಗುರು ನಮಸ್ಕಾರಪರವಾದ ಮಂಗಲಶ್ಲೋಕವನ್ನು ಪಠಿಸಿರುವರು. ಲೋಪಾಮುದ್ರಾ ಎಂಬ ಸತಿಯ ಪತಿಯಾದ ಅಗಸ್ತ್ಯ ಮುನಿ ಮತ್ತು ಹಯಗ್ರೀವ ಮುನಿಗಳನ್ನು ನಮಸ್ಕರಿಸಿ ಹಾಗು ಶ್ರೀವಿದ್ಯಾಮಂತ್ರರಾಜದ ಸಿದ್ಧಿಯನ್ನುಂಟುಮಾಡುವ ಕಮಲ ಸಮಾನವಾದ ದರ್ಶನದಿಂದ ಕೂಡಿದ ಕಾಮೇಶ್ವರನನ್ನು ವಂದಿಸಿ ಭಾಷ್ಯ ಗ್ರಂಥವನ್ನು ರಚಿಸುವೆನು.
ವಿಸ್ತಾರಿತಾಂ ಬಹುವಿಧಾಂ ಬಹುಭಿಃ ಕೃತಾಂ ಚ
ಟೀಕಾಂ ವಿಲೋಕಯಿತುಮಕ್ಷಮತಾಂ ಜನಾನಾಮ್ |
ತತ್ರತ್ಯಸರ್ವಪದಯೋಗವಿವೇಕಭಾನುಂ
ತುಷ್ಟ್ಯೈ ಕರೋಮಿ ಲಲಿತಾ ಪದಭಕ್ತಿಯೋಗಾತ್ ||4||
ಹಿಂದೆ ಅನೇಕ ಪೂರ್ವಾಚಾರ್ಯರು ಅನೇಕ ವಿಧವಾಗಿ ರಚಿಸಿರುವ ವಿಸ್ತಾರವಾದ ಟೀಕಾ ಗ್ರಂಥಗಳನ್ನು ನೋಡಲು ಅಶಕ್ತರಾದ ಜನಗಳಿಗೆ ಲಲಿತಾ ತ್ರಿಶತೀ ನಾಮಸ್ತೋತ್ರದಲ್ಲಿ ಸೇರಿದ ಸಮಸ್ತ ಪದಗಳ ಅವಯವಾರ್ಥಗಳನ್ನು ತಿಳಿಸುವ ವಿವೇಕದಲ್ಲಿ ಸೂರ್ಯನಂತಿರುವ ಭಾಷ್ಯ ಗ್ರಂಥವನ್ನು ಶ್ರೀ ಲಲಿತಾಂಬಾ ದೇವಿಯ ಚರಣಾರವಿಂದಗಳಲ್ಲಿಟ್ಟಿರುವ ಭಕ್ತಿ ಯೋಗದಿಂದ ಪರವಶನಾಗಿ ಅಂಬಾತೃಪ್ತಿಗೋಸ್ಕರ ರಚಿಸುತ್ತೇನೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ