ಲಕ್ಷ್ಮೀವಾಕ್ಯ (ಲಕ್ಷ್ಮೀ ಹಾಡು)


ಗೃಹಿಣಿಯ ದಿನಚರಿಗೆ ದಾರಿದೀಪವಾಗುವಂತಹ ಅನೇಕ ಸಂಪ್ರದಾಯದ ಹಾಡುಗಳನ್ನು ಹೆಂಗಳೆಯರು ಹಾಡುವುದನ್ನು ಕಾಣುತ್ತೇವೆ. "ಲಕ್ಷ್ಮೀವಾಕ್ಯ" ಎಂಬ ಹಾಡಿನಲ್ಲಿ ಲಕ್ಷ್ಮೀದೇವಿ ತನ್ನ ಭಕ್ತನಿಗೆ ಅಷ್ಟೈಶ್ವರ್ಯವನ್ನಿತ್ತು, ತಾನು ಎಂತಹ ಮನೆಯಲ್ಲಿ ನೆಲೆಸುತ್ತೇನೆ ಎನ್ನುವುದನ್ನು ಅರುಹುತ್ತಾಳೆ.
ಬಡಬ್ರಾಹ್ಮಣನೊಬ್ಬ ತನ್ನ ಪತ್ನಿಯೊಡನೆ ಆಚಾರವಂತನಾಗಿ ಬಾಳುತ್ತಿದ್ದ. ಒಂದು ದಿನ ಹಣ್ಣು ಹಂಪಲನ್ನು ತರಲು ಆತ ತೋಟಕ್ಕೆ ಹೋದ. ಲಕ್ಷ್ಮೀದೇವಿ ಆತನನ್ನು ಪರೀಕ್ಷಿಸುವ ಸಲುವಾಗಿ ಮುಪ್ಪಿನ ಮುತ್ತೈದೆಯಾಗಿ ಅವನೆದುರಿಗೆ ಕಾಣಿಸಿಕೊಳ್ಳುತ್ತಾಳೆ. ಬ್ರಾಹ್ಮಣ ಆಕೆಯ ಪಾದಗಳಿಗೆ ವಂದಿಸಿ, ನಿಮ್ಮ ಇರವೆಲ್ಲಿ ಎಂದು ಕೇಳಲು ಆಕೆ ತಾನು ದಿಕ್ಕಿಲ್ಲದವಳು ಎನ್ನುತ್ತಾಳೆ.
"ಉತ್ತುಮರಾಗಿಹ ಮುತ್ತವ್ವರ್ ಕೇಳಿರಿ
ವಿಪ್ರರು ನೀವು ಇರುವೆಲ್ಲಿ ಎಂದರೆ
ವಿಪ್ರ ಕೇಳೆನಗೆ ಪಿತರಿಲ್ಲ |
ಮತಿವಂತ ಕೇಳಯ್ಯ ಪತಿಸುತಾದಿಗಳಿಲ್ಲ
ದ್ವಿಜಬೃಂದದಿಂದೊಪ್ಪಿಹ ತನಯರಿಲ್ಲ
ಮತಿಯ ನೀ ನೋಡು ಮನದಲ್ಲಿ ||"
ಮುದುಕಿಯ ಈ ಮಾತನ್ನು ಕೇಳಿ ಬ್ರಾಹ್ಮಣನ ಮನಸ್ಸು ಕರಗಿ ನೀರಾಗುತ್ತದೆ. ತಾನು ಕಿತ್ತಿದ್ದ ನೆಲ್ಲಿಕಾಯಿಯನ್ನು ಹೆಗಲಿಗೇರಿಸಿಕೊಂಡು ಮುದುಕಿಯನ್ನೂ ಕರೆದುಕೊಂಡು ಮನೆಕಡೆ ನಡೆಯುತ್ತಾನೆ.
ತನಗೇ ತಿನ್ನಲು ಗತಿಯಲ್ಲದಿದ್ದರೂ ಹಿಂದು ಮುಂದು ಯೋಚಿಸದೆ ಗತಿವಿಹೀನಳಾದ ಮುದುಕಿಯನ್ನು ಮನೆಗೆ ಕರೆದೊಯ್ಯುವ ಬ್ರಾಹ್ಮಣನ ಹೃದಯ ವೈಶಾಲ್ಯಕ್ಕೆ ಲಕ್ಷ್ಮೀ ಮಾರುಹೋಗುತ್ತಾಳೆ.
ಮನೆಯ ಹತ್ತಿರ ಬಂದಾಗ, ಪತಿ ಬರುತ್ತಿರುವುದನ್ನು ಕಂಡು ಆತನ ಹೆಂಡತಿ ಅವನನ್ನು ಎದುರುಗೊಂಡು, ನೆಲ್ಲಿಕಾಯಿಯನ್ನು ಕೆಳಗಿಳಿಸಿಕೊಂಡು, ಮುದುಕಿಯನ್ನು ಆದರದಿಂದ ಮನೆಗೆ ಕರೆತರುತ್ತಾಳೆ.
ಪತಿಯ ಬರವನ್ನು ಕಂಡು ಮತಿವಂತೆ ತಾನೆದ್ದು
ಅತಿ ಭಕ್ತಿಯಿಂದ ಮಡಿಲಹಣ್ಣನೆ ಅಂತು
ಮಹಲಕ್ಷ್ಮಿಯನೆ ಪಿಡಿದೆತ್ತಿ
ಪೃಥುವೀಶಗೆ ಕರವ ಮುಗಿದಾಳು ||
ಅವರ ಕಾಲ್ತೊಳೆದು, ಕುಳಿತುಕೊಳ್ಳಲು ಮಣೆಯನ್ನಿತ್ತು ಅಡಿಗೆ ಮಾಡತೊಡಗಿದಳು,
ಆದರದಿ ಮಣೆಕೊಟ್ಟು ಪ್ರೀತಿಯಲಿ ಕಾಲ್ತೊಳೆದು
ಅಚ್ಚ ಪನ್ನೀರ ತಳಿಯ ತಿಂತಿರಲಾಕೆ
ಚಚ್ಚರನೆ ಅಡಿಗೆಗೆ ತೊಡಗಿದಳು ||
ಆಗ ಬ್ರಾಹ್ಮಣೆ ಅಡಿಗೆಮಾಡುತ್ತಿದ್ದಾಗ ಬ್ರಾಹ್ಮಣ ಮುದುಕಿಯ ಜೊತೆ ಸುಖ ದುಃಖಗಳನ್ನು ಮಾತಾಡುತ್ತ ಕುಳಿತು ಕೊಳ್ಳುತ್ತಾನೆ. ಹಿಂದಿನ ಜನ್ಮದಲ್ಲಿ ನಾನು ಯಾರಿಗೂ ಅನ್ನವನ್ನು ನೀಡದೆ ಉಂಡೆನೇನೋ! ಈ ಜನ್ಮದಲ್ಲಿ ಹೊಟ್ಟೆ ತುಂಬ ಊಟಮಾಡಲು ಗತಿಯಿಲ್ಲದೆ ಅಡವಿಯಲ್ಲಿರುವ ಹಣ್ಣುಹಂಪಲನ್ನು ತಿನ್ನುತ್ತ ಕಾಲ ಕಳೆಯುತ್ತಿದ್ದೇನೆ ಎಂದು ಪೇಚಾಡಿ ಕೊಳ್ಳುತ್ತಾನೆ.
ವಸ್ತ್ರವನ್ನು ಯಾರಿಗೂ ಕೊಡದೆ ನಾನೇ ಉಟ್ಟುಕೊಂಡೆನೋ ಏನೋ, ನಾನು ಅಡವಿಯ ಸೊಪ್ಪುಸೊದೆಗಳಿಂದ ಮೈಮುಚ್ಚಿ ಕೊಳ್ಳುವ ಸ್ಥಿತಿ ಉಂಟಾಗಿದೆ. ನನ್ನ ಮಡದಿ ನಾರು ಸೀರೆ ಉಡುವಂತಾಗಿದೆ ಎಂದು ಗೋಳಾಡುತ್ತಾನೆ.
ಆತನ ದುಃಖವನ್ನು ನೋಡಿ ಮುದುಕಿಯ ರೂಪದ ಮಹಾಲಕ್ಷ್ಮಿ ಅವನಿಗೆ ತನ್ನ ನಿಜರೂಪವನ್ನು ತೋರುತ್ತಾಳೆ. ಅವನ ಮನೆಯಲ್ಲಿ ಶಾಶ್ವತವಾಗಿ ನೆಲೆಸುವುದಾಗಿ ವಚನ ನೀಡುತ್ತಾಳೆ.
ಕೇಳಿದೆ ವಿಪ್ರಯ್ಯ ಮನೆಯ ದುಃಖವ
ಈವೆನು ನಿನಗೆ ಸಿರಿಪಾಲು ಸಂಪತ್ತಾ
ಮೇಲೆ ಅಂಬಾರಿ ನೆಲೆಸಿರ್ಪೆ |
ಮನೆ ಬಾಗಿಲಿನಲಿರ್ಪೆ ಮನೆಯ ಹೊಸ್ತಿಲಲಿರ್ಪೆ
ಈಶಾನ್ಯಮೂಲೆ ನಡುಮನೆ ದೇವರ ಜಗುಲಿ
ಒಲೆಯ ಹಿಂದಿರ್ವೆ ಬಡವಿಪ್ರ ||
ಗರುಡವಾಹನನಾದ ಶ್ರೀಕೃಷ್ಣನ ಮಡದಿಯಾದ ಮಹಾಲಕ್ಷ್ಮಿಯೇ ನಾನು. ನಿನ್ನ ಭಕ್ತಿಗೆ ಒಲಿದು ನಿನ್ನ ಮನೆಯನ್ನು ಬೆಳಗ ಬಂದಿದ್ದೇನೆ ಎನ್ನುತ್ತಾಳೆ ಶ್ರೀಲಕ್ಷ್ಮೀ.
ಶೇಷನಾ ಹಾಸಾಗಿ ಶ್ರೀದೇವಿ ತೋಳಾಗಿ
ಕ್ಷೀರಸಾಗರದಲ್ಲಿ ಶಯನವಾಗಿರುತಿರುವ
ಶ್ರೀರಾಮರಾಯರಿಗೆ ಸತಿ ತಾನು |
ಗರುಡನಾ ಹೆಗಲೇರಿ ಮಡದೀರನೊಡಗೊಂಡು
ಸಡಗರದಿಂದ ಗಗನದಲಿ ಸಂಚರಿವ
ಶ್ರೀಕೃಷ್ಣರಾಯರಿಗೆ ಸತಿ ತಾನು ||
ಬಡ ಬ್ರಾಹ್ಮಣನ ಮನೆ ಲಕ್ಷ್ಮಿಯ ಕೃಪಾ ಕಟಾಕ್ಷದಿಂದ ಅರಮನೆಯಾಗಿ ಪರಿವರ್ತನೆ ಹೊಂದಿತು. ಅರಮನೆಯ ತುಂಬ ಹೊನ್ನ ರಾಶಿಯನ್ನು ತುಂಬಿ, ಸುಖಿಯಾಗಿ ಬಾಳೆಂದು ಬ್ರಾಹ್ಮಣನನ್ನು ಹರಸಿದಳು.
ಅರಮನೆಯೊಳಗೆಲ್ಲ ಹೊಯ್ದಳು ಹೊನ್ನಿನರಾಶಿ
ಬಡವಿಪ್ರ ನೀನುಂಡು ಸುಖಿಯಾಗಿ ಬದುಕೆಂದು
ತಡೆಯದೇ ವರವ ಕೊಡುತಿದ್ದು ||
ಶುಕ್ರವಾರ, ಮಂಗಳವಾರದಂದು ಮನೆಯನ್ನು ಸಾರಿಸಿ, ರಂಗವಲ್ಲಿಯನ್ನಿಟ್ಟು, ಶ್ರೀಕೃಷ್ಣನನ್ನು ಭಜಿಸುವ ಭಕ್ತರ ಮನೆಯಲ್ಲಿ ತಾನು ಶಾಶ್ವತವಾಗಿ ನೆಲೆಸುವುದಾಗಿ ಅಭಯವಿತ್ತಳು.
ಶುಕ್ರವಾರದ್ದಿವ್ಸ ಹೊಸ್ತಿಲನೆ ಸಾರಿಸಿ
ಅಚ್ಚಮುತ್ತೀನ ರಂಗವಾಲಿಯನೆ ಇಕ್ಕಿ
ಮತ್ತೆ ಶ್ರೀರಾಮರಿಗೆ ಪುಷ್ಪತುಳಸೀಯರ್ಪಿಸುವ
ಭಕ್ತಾರ ಮನೆಯಲ್ಲಿ ನೆಲೆಸಿರ್ಪೆ |
ಮಂಗಳವಾರದ್ದವ್ಸ ಅಂಗಳವ ಸಾರಿಸಿ
ಅಚ್ಚಮುತ್ತೀನ ರಂಗವಾಲಿಯನೆ ಇಕ್ಕಿ
ಮತ್ತೆ ನೃಸಿಂಹರಿಗೆ ಪುಷ್ಪತುಳಸೀ ನೇರಿಸುವ
ಭಕ್ತಾರ ಮನೆಯಲ್ಲಿ ನೆಲಸಿರ್ಪೆ ||
ಉಯ್ಯಾಲೆಯನ್ನು ಒಂದು ಕಡೆಯಿಂದ ನೂಕಿದರೆ ಮತ್ತೊಂದು ಕಡೆಗೆ ಹೋಗಿ, ಅಲ್ಲಿ ಕ್ಷಣವೂ ನಿಲ್ಲದೆ ಸರ್ರನೆ ಮತ್ತೆ ಈ ಬದಿಗೆ ಬಂದು, ಅದೇ ಕ್ರಮವನ್ನು ವೇಗವಾಗಿ ಮುಂದುವರಿಸುತ್ತದೆ. ಅಂತೆಯೇ ಸೋಮಾರಿಯಾಗಿ ನಿಲ್ಲದೆ, ಗೃಹಕೃತ್ಯಗಳನ್ನು ಸರಸರನೆಮಾಡುತ್ತ ಕರ್ತವ್ಯ ಶೀಲಳಾಗಿರುವ ಗೃಹಿಣಿಯ ಮನೆ ಮನಗಳಲ್ಲಿ ತಾನು ನೆಲೆಸುವುದಾಗಿ ದೇವಿ ಭರವಸೆ ನೀಡುತ್ತಾಳೆ.
ಕೈಯೆಂದು ನೋಡದೆ ಮೈಯೆಂದು ನೋಡದೆ
ಉಯ್ಯಾಲೆಯಂತೆ ಕೆಲಸವ ಮಾಡುವ
ಮೈಯ್ಯ ಮೇಲಿರ್ಪೆ ಬಡವಿಪ್ರ ||
ಅಣ್ಣನ ಮಗಳನ್ನೇ ಸೊಸೆಯಾಗಿ ತಂದು ಕೊಂಡು, ಅಣ್ಣನ ಮಗಳೆಂದು ಪ್ರೀತಿ ವಿಶ್ವಾಸಗಳಿಂದ ಅವಳನ್ನು ನೋಡಿಕೊಳ್ಳುವ ಸಹೃದಯಿ ಹೆಂಗಸಿನ ಮನೆಯಲ್ಲಿ ತಾನು ನೆಲೆಸುವುದಾಗಿ ವಚನ ನೀಡುತ್ತಾಳೆ ಲಕ್ಷ್ಮಿ. ಸದ್ಗೃಹಿಣಿಯಾಗಿದರೆ, ಅಕ್ಕಪಕ್ಕದವರೊಡನೆ ಕದನವಾಡುತ್ತ, ಪರರ ಸುಖವನ್ನು ಕಂಡು ಕರುಬುವ ಹೀನರಮನೆಯಲ್ಲಿ ನಾನು ಕ್ಷಣಕಾಲವೂ ನಿಲ್ಲುವುದಿಲ್ಲ. ಅಂತಹವರು ಕಡು ಬಡವರಾಗಿ ತೊಂದರೆ ಪಡುತ್ತಾರೆ ಎನ್ನುತ್ತಾಳೆ ಲಕ್ಷ್ಮಿ.
ನೆರೆಮನೆಯವರ ಕಂಡು ಕರುಬುತಿರ್ಪರ
ನೆರೆಮನೆಯವರ ಕೂಡೆ ಕದನವ ಮಾಡುವ
ಹರದಿಯನೆ ಮುಟ್ಟೆನೆಲೆವಿಪ್ರ ||
ಮನೆಯ ಕಸವನ್ನು ಗುಡಿಸದೆ, ಮನೆಯನ್ನು ಶುಚಿಯಾಗಿಡದೆ, ಧೂಳುತುಂಬಿರುವ ಮನೆಯಲ್ಲಿ ನಾನು ಕ್ಷಣಕಾಲವೂ ನೆಲೆಸುವುದಿಲ್ಲ. ಕಸಮುಸುರೆ ಎಂಜಲುಮಯವಾದ ಮನೆಯಲ್ಲಿ ನನ್ನ ಸಾನ್ನಿಧ್ಯವಿರುವುದಿಲ್ಲ ಎನ್ನುತ್ತಾಳೆ ಲಕ್ಷ್ಮಿ.
ಆಕಡೇಲ್ ಕಡಿಕಸ ಈ ಕಡೇಲ್ ಕಡಿ ಮುಸುರೆ
ಆ ಕೈಯ ತಂದು ಹೆಗಲಲಿಂಬಾಗಿ ತೊಡೆವ
ಕಡಿಪಾಪಿಯನೆ ಮುಟ್ಟೆನೆಲೆವಿಪ್ರ |
ಅಲ್ಯಲ್ಲಿಗೆ ಧೂಳು ಅಲ್ಯಲ್ಲಿಗೆ ಢಾಳ
ಅಲ್ಯಿಲ್ಲಿಗೆಂಜಲು ಅಶುದ್ಧವಿದ್ದಲ್ಲಿ
ನಿಲ್ಲೆ ಕಾಣಯ್ಯ ಬಡವಿಪ್ರ ||
ಮನೆಮಂದಿಯೆಲ್ಲ ಒಗ್ಗಟ್ಟಿನಿಂದಿರದೆ, ಪ್ರತಿಯೊಬ್ಬರೂ ಜಗಳಮಾಡುವವರ ಮನೆಯಲ್ಲಿ ತಾನು ಇರುವದಿಲ್ಲ ಎಂದು ಲಕ್ಷ್ಮಿ ಸ್ಪಷ್ಟಪಡಿಸುತ್ತಾಳೆ.
ನಿತ್ಯಾಮನೆಯಲ್ಲಿ ಕುಸ್ತೀ ಕಲಹವು
ನುಚ್ಚುನೂರಾಗಿ ಒಡೆದಿದ್ದ ಮನೆಯ ನಾ
ಮುಟ್ಟೆ ಕಾಣಯ್ಯ ಬಡವಿಪ್ರ |
ಅಣ್ಣನಮಗಳನ್ನು ಸೊಸೆಯಾಗಿ ತಂದುಕೊಂಡು ಅವಳಿಗೆ ಕಿರುಕುಳವನ್ನು ಮಾಡಿ ಬಳಲಿಸುವ, ಮನೆಯ ಹಸುವನ್ನು ಅಕಾರಣವಾಗಿ ಹೊಡೆದು ಹಿಂಸಿಸುವ ಹೆಂಗಳೆಯ ಮನೆಯಲ್ಲಿ ನಾನು ನೆಲೆಸುವುದಿಲ್ಲ ಎನ್ನುತ್ತಾಳೆ ಲಕ್ಷ್ಮಿ.
ಅಣ್ಣನಾ ಮಗಳೆಂದು ಅಳಲಿಸಿ ಅಳುವಳ
ಬೆಣ್ಣೇಯಭುಗರಿಸದೆ ನೈವೇದ್ಯಕಿಡುವಂಥ
ಕನ್ಯೇನ ಮುಟ್ಟೆನೆಲೊ ವಿಪ್ರ |
ಅತ್ತಿಗೇ ಮಗಳೆಂದು ಅಳಲಿಸಿ ಅಳುವಳ
ಹಟ್ಟೀಯ ದನವ ಬಯ್ಯುತಿರ್ಪಳ
ಮನೆಯ ನಾ ಮುಟ್ಟೆ ಕಾಣಯ್ಯ ಬಡವಿಪ್ರ ||
ಹೀಗೆ ಗೃಹಿಣಿಯ ಧರ್ಮವಾವುದು ಎನ್ನುವುದನ್ನು ಲಕ್ಷ್ಮೀ ಸರಳಸುಲಭವಾಗಿ ಹೇಳಿಕೊಡುತ್ತಾಳೆ. ಮನೆಯನ್ನು ಒಪ್ಪವಾಗಿಟ್ಟುಕೊಂಡು, ಗೃಹಕೃತ್ಯವನ್ನು ಗಮನಿಸಿ, ಮನೆಯವರು, ನೆರೆಯವರೊಂದಿಗೆ ಸ್ನೇಹದಿಂದಿರುತ್ತ ದೇವರಸೇವೆ, ಕುಟುಂಬಸೇವೆ ಮಾಡುವ ಗೃಹಿಣಿಯ ಮನೆ ಮನದಲ್ಲಿ ನಾನು ಸದಾ ನೆಲೆಯಾಗಿರುತ್ತೇನೆ ಎಂದು ಹೇಳಿ ಗೃಹಿಣಿಯ ಕರ್ತವ್ಯವನ್ನರುಹುತ್ತಾಳೆ. ಗೃಹಿಣಿಯ ಬಾಳು ಬೆಳಗಲು ಕೈದೀವಿಗೆಯನ್ನು ತೋರಿಸುತ್ತಾಳೆ, "ಲಕ್ಷ್ಮೀವಾಕ್ಯ" ಎಂಬ ಸಂಪ್ರದಾಯದ ಹಾಡಿನಲ್ಲಿ.
ಇಲ್ಲಿ ಗಮನಿಸ ಬೇಕಾಗಿರುವ ಶುಚಿತ್ವ ಕರ್ತವ್ಯಶೀಲತೆ, ಭಗವತ್ ಧ್ಯಾನ, ಮಾನವೀಯ ಸಂಬಂಧಗಳ ಬಗ್ಗೆ ಲಕ್ಷ್ಮಿ ಹೇಳುವ ಮಾತುಗಳು. ಮನುಷ್ಯನನ್ನು ಪಕ್ವಗೊಳಿಸುವ, ಐಹಿಕವಾಗಿ ತೃಪ್ತಿಯತ್ತಲೂ, ಅಧ್ಯಾತ್ಮಿಕವಾಗಿ ಔನ್ನತ್ಯದತ್ತಲೂ ನಡೆಸುವ - ಈ ಸೂಚನೆಗಳಿಗೆ ವಿಪ್ರನ ಕತೆ ಒಂದು ಹಂದರ ಮಾತ್ರ. ಮುಖ್ಯ ಲಕ್ಷ್ಮಿ ನೆಲೆಸುವಲ್ಲಿ ಸುಖ ಶಾಂತಿಗಳಿರಬೇಕು - ಅದಕ್ಕೆ ಬೇಕಾದ ಪರಿಕರಗಳು ಇಲ್ಲಿ ವಿವರಿತವಾಗಿರುವುವು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ