ಪಂಚಾಂಗ


ಪಂಚಾಂಗವೆಂದರೇನು ?
ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ವ್ಯವಹಾರ. ಇವು ದಿನದಿನವೂ ಬದಲಾಗುತ್ತದೆ. ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.
ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು ಕರೆಯುತ್ತೇವೆ.
ಆದರೆ ಪಂಚಾಂಗ ಪುಸ್ತಕವನ್ನು ತೆರೆದು ನೋಡಿದಾಗ ತಲೆ ಸುತ್ತುತ್ತದೆ. ಅಲ್ಲಿ ಮುದ್ದೆ ಮುದ್ದೆಯಾಗಿ ಬರೆದಿರುವ ಹತ್ತಾರು ವಿಷಯಗಳ ಮಧ್ಯೆ ಸಂಕ್ಷಿಪ್ತ ಸಂಕೇತಗಳಿಂದ ಸೂಚಿಸಿರುವ ಈ ಐದು ಅಂಗಗಳು ಕಾಣಿಸುವುದೇ ಇಲ್ಲ. ಈ ಪಂಚಾಂಗ ಪುಸ್ತಕದಲ್ಲಿ ತಿಥಿ, ವಾರಾದಿಗಳ ಜೊತೆಗೆ ಸಂವತ್ಸರ, ಆಯನ, ಮಾಸಾದಿಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ, ಮೌಢ್ಯಾದಿಗಳು, ಇವುಗಳಲ್ಲದೆ ಜಾತಕ ಮುಹೂರ್ತಗಳಿಗೆ ಉಪಯುಕ್ತಗಳಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಇವುಗಳ ಜೊತೆಗೆ ಈ ಪಂಚ ಅಂಗಗಳನ್ನು ಅವುಗಳ ಆದ್ಯಕ್ಷರವನ್ನು ಬರೆಯುವುದರ ಮೂಲಕ ಸಂಕ್ಷಿಪ್ತವಾಗಿ ಬರೆಯಲಾಗುತ್ತದೆ.
ಪಂಚಾಂಗ ಪುಸ್ತಕವನ್ನು ಬಿಡಿಸುವುದಕ್ಕೆ ಮುಂಚೆ ಈ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಬಗ್ಗೆ ಸ್ವಲ್ಪ ತಿಳಿದಿರಬೇಕಾದುದು ಅವಶ್ಯವಿದೆ.
ತಿಥಿ
ಹುಣ್ಣಿಮೆಯ ದಿನ ಹದಿನಾರು ಕಲೆಗಳಿಂದ ಪೂರ್ಣನಾಗಿದ್ದ ಚಂದ್ರ ಕ್ರಮೇಣ ಕ್ಷೀಣಿಸುತ್ತಾನೆ. ಕ್ರಮೇಣ ಒಂದೊಂದೇ ಕಲೆಗಳನ್ನು ಕಳೆದುಕೊಂಡು ಹದಿನೈದನೆಯ ದಿನ ಅದೃಶ್ಯನಾಗುತ್ತಾನೆ. ಅದೇ ಅಮಾವಾಸ್ಯೆ. ಹೀಗೆ ಹುಣ್ಣಮೆಯ ಮರುದಿನ ಪಾಡ್ಯದಿಂದ ಆರಂಭಿಸಿ ಅಮಾವಾಸ್ಯೆಯ ತನಕದ ಹದಿನೈದು ದಿನಗಳು ಚಂದ್ರನ ಶುಕ್ಲಭಾಗವು ಕೃಷ್ಣವಾಗುತ್ತಾ ಬರುವುದರಿಂದ ಕೃಷ್ಣಪಕ್ಷವೆಂದೂ, ಅಮಾವಾಸ್ಯೆಯ ನಂತರದ ಪಾಡ್ಯದಿಂದ ಪ್ರಾರಂಭಿಸಿ ಹುಣ್ಣಿಮೆಯ ತನಕದ ಹದಿನೈದು ದಿನಗಳು ಚಂದ್ರನ ಕೃಷ್ಣಭಾಗವು ಶುಕ್ಲವಾಗುತ್ತಾ ಬರುವುದರಿಂದ ಶುಕ್ಲಪಕ್ಷವೆಂದೂ ಕರೆಸಿಕೊಳ್ಳುತ್ತದೆ. ಹೀಗೆ ತಿಥಿಗಳು ಒಟ್ಟು ಹದಿನಾರು. ಶುಕ್ಲಪಕ್ಷದಲ್ಲಿ ಹದಿನೈದನೆಯ ತಿಥಿ ಹುಣ್ಣಮೆಯಾದರೆ ಕೃಷ್ಣಪಕ್ಷದಲ್ಲಿ ಅದು ಅಮಾವಾಸ್ಯೆಯಾಗಿರುತ್ತದೆ. ಒಂದು ಪಕ್ಷದಲ್ಲಿ ತಿಥಿ ಹದಿನೈದು. ಒಂದು ಮಾಸದಲ್ಲಿ ತಿಥಿ ಮೂವತ್ತು. ಆದರೆ ಒಟ್ಟು ತಿಥಿಗಳು ಹದಿನಾರು. ಮಾಸದಲ್ಲಿ ಹದಿನಾಲ್ಕು ತಿಥಿಗಳು ಪುನರಾವರ್ತಿತವಾಗುತ್ತದೆ.
ಪ್ರತಿಪತ್, ದ್ವಿತೀಯಾ, ತೃತೀಯಾ ಮತ್ತು ಚತುರ್ಥೀ ತಿಥಿಗಳಿಗೆ ಕ್ರಮವಾಗಿ ಪಾಡ್ಯ, ಬಿದಿಗೆ, ತದಿಗೆ, ಚೌತಿಗಳೆಂಬ ಹೆಸರು ಚಾಲ್ತಿಯಲ್ಲಿದೆ. ಆದರೆ ಇವು ಸಂಸ್ಕೃತದ ಹೆಸರುಗಳಲ್ಲವೆಂಬುದನ್ನು ಗಮನಿಸಬೇಕು. ಕೆಲವರು ಸಂಕಲ್ಪದಲ್ಲಿ ತಿಥಿ ಹೇಳುವಾಗ “ಪಾಡ್ಯಾಯಾಂ ಶುಭತಿಥೌ” ಎನ್ನುವುದನ್ನು ಕೇಳಿದ್ದೇನೆ. ಇದು ಶುದ್ಧ ತಪ್ಪು. “ರವಿವಾಸರೇ” ಎನ್ನುವುದಕ್ಕೆ “ಸಂಡೇವಾಸರೇ” ಎನ್ನುವುದಕ್ಕೆ ಸಮೀಪದ ಅಪಚಾರವಾಗುತ್ತದೆ. ಇನ್ನು ಕೆಲವರು ಪಾಡ್ಯಮ್ಯಾಂ ತಿಥೌ ಎನ್ನುವುದಿದೆ. ಇದು ಸಪ್ತಮೀ, ಅಷ್ಟಮೀಗಳ ಜೊತೆಗಿರುವ ಪಾಡ್ಯವೆಂಬ ತಿಥಿಗೆ ಸಾದೃಶ್ಯಮೂಲವಾಗಿ “ಮೀ” ಎಂಬ ಅಕ್ಷರ ಸೇರಿರಬಹುದು. ಆದರೆ ಸಂಸ್ಕೃತವಲ್ಲದ ಈ ಶಬ್ದಕ್ಕೆ ಸಂಸ್ಕೃತದ ವಿಭಕ್ತಿಯನ್ನು ಜೋಡಿಸುವಂತಹ ಅಂತರ್ಜಾತೀಯ ಸಾಂಕರ್ಯವನ್ನು ನಾವು ಮಾಡಬಾರದು. “ಪ್ರತಿಪದ್” ಎಂಬ ಸಂಸ್ಕೃತದ ಶಬ್ದದೊಂದಿಗೆ ಸಪ್ತಮೀ ವಿಭಕ್ತಿ ಸೇರಿಸಿ “ಪ್ರತಿಪದಿ ಶುಭತಿಥೌ” ಅಥವಾ “ಪ್ರಥಮಾಯಾಂ ಶುಭತಿಥೌ” ಎಂದೇ ಹೇಳಬೇಕು.
ದಿನವೊಂದಕ್ಕೆ ಅರುವತ್ತು ಘಳಿಗೆಗಳು (ಒಂದು ಘಳಿಗೆ – ೨೪ ನಿಮಿಷ) ಆದರೆ ಎಲ್ಲಾ ತಿಥಿಗಳು ಅರುವತ್ತು ಘಳಿಗೆಗಳಿರುವುದಿಲ್ಲ. ಕೆಲವು ಕಡಿಮೆಯಿರುತ್ತದೆ. ಕೆಲವು ಜಾಸ್ತಿಯಿರುತ್ತದೆ. ಅರುವತ್ತು ಘಳಿಗೆಗಳಿಗಿಂತ ಕಡಿಮೆಯಿರುವ ತಿಥಿಗಳು ಜೊತೆಯಾಗಿ ಬಂದಾಗ ಒಂದು ತಿಥಿಯ ಮೇಲೆ (ಉಪರಿ) ಒಂದು ತಿಥಿ ಬರುತ್ತದೆ. ಅಂದರೆ ಐದು ದಿನಗಳಲ್ಲೇ ಆರು ತಿಥಿಗಳು ಮುಗಿಯುತ್ತವೆ. ಆಗ ಸೂರ್ಯೋದಯ ಕಾಲಕ್ಕೆ ಯಾವ ತಿಥಿ ಇರುವುದೇ ಇಲ್ಲವೋ ಆ ತಿಥಿಯು ಲೋಪವಾಗಿದೆ ಎನ್ನುತ್ತೇವೆ. ಮತ್ತೆ ಕೆಲವೊಮ್ಮೆ ಅರುವತ್ತು ಘಳಿಗೆಗಿಂತ ಜಾಸ್ತಿಯಿರುವ ತಿಥಿಗಳು ಅವಿಚ್ಛಿನ್ನವಾಗಿ ಬಂದಾಗ ಒಂದೇ ತಿಥಿಯು ಎರಡು ದಿನ ಬರುತ್ತದೆ. ಹೀಗಾಗಿ ಕೆಲವೊಮ್ಮೆ ಎರಡು ಪಾಡ್ಯವೋ ಎರಡು ಏಕಾದಶಿಯೋ ಬರುವುದನ್ನು ಕಾಣಬಹುದಾಗಿದೆ.
ಸೂರ್ಯೋದಯಕಾಲದಲ್ಲಿ ಯಾವ ತಿಥಿಯಿರುವುದೋ ಅದನ್ನು ಅಂದಿನ ತಿಥಿಯೆಂದು ವ್ಯವಹರಿಸಬೇಕು. (ಶ್ರಾದ್ಧಾದಿ ಪಿತೃಕಾರ್ಯಗಳಲ್ಲಿ ಮಾತ್ರ ತಾತ್ಕಾಲಿಕ ತಿಥಿಯನ್ನು ನೋಡಲಾಗುತ್ತದೆ.) ಸೂರ್ಯೋದಯದ ನಂತರ ತಿಥಿ ಎಷ್ಟು ಘಳಿಗೆಯಿರುತ್ತದೆಯೆಂದು ಪಂಚಾಂಗದಲ್ಲಿ ಬರೆದಿರುತ್ತದೆ. ಉದಾಹರಣೆಗೆ ದಶಮೀ ೩-೧೫ ಎಂದು ಬರೆದಿದ್ದರೆ ಸೂರ್ಯೋದಯದ ನಂತರ ಮೂರು ಘಳಿಗೆ ಹದಿನೈದು ವಿಘಳಿಗೆಗಳಷ್ಟು ಕಾಲ ದಶಮಿಯಿದೆ ಎಂದರ್ಥ. (ಒಂದು ಘಳಿಗೆಗೆ ೬೦ ವಿಘಳಿಗೆಗಳು) ಅಂದರೆ ಬೆಳಿಗ್ಗೆ ೬ ಘಂಟೆಗೆ ಸೂರ್ಯೋದಯವಾದರೆ ಆಮೇಲೆ ಸುಮಾರು ಏಳೂವರೆಯವರೆಗೆ ದಶಮಿಯಿದ್ದು ಆಮೇಲೆ ಪೂರ್ತಿ ಏಕಾದಶಿಯಿರುತ್ತದೆ. ಆದರೆ ಸೂರ್ಯೋದಯ ಕಾಲದಲ್ಲಿರುವ ದಶಮಿಯೇ ಅಂದಿನ ದಿನಪೂರ್ತಿ ತಿಥಿಯೆಂದು ವ್ಯವಹರಿಸಬೇಕು. ಅದಕ್ಕಾಗಿಯೇ ಸಂಕಲ್ಪದಲ್ಲಿ “ವ್ಯಾವಹಾರಿಕೇ” ಎಂದು ಹೇಳುವುದುಂಟು.
ಪ್ರತಿಯೊಂದು ತಿಥಿಗೂ ಅಭಿಮಾನಿ ದೇವತೆಗಳಿದ್ದಾರೆ. ಆಯಾಯ ತಿಥಿಗಳಿಗೆ ಸಂಬಂಧಪಟ್ಟ ದೋಷಗಳ ನಿವಾರಣೆಗಾಗಿ ತಿಥ್ಯಭಿಮಾನಿ ದೇವತೆಗಳ ಆರಾಧನೆಯನ್ನು ಜೊತಿಃಶಾಸ್ತ್ರಜ್ಞರು ಹೇಳುತ್ತಾರೆ. ತಿಥಿಗಳ ಸಾಮಾನ್ಯ ಜ್ಞಾನಕ್ಕಾಗಿ ಈ ಕೋಷ್ಟಕವನ್ನು ಬಳಸಬಹುದಾಗಿದೆ.
ಸಂಕೇತಾಕ್ಷರ ಪೂರ್ಣತಿಥಿ ನಾಮಾಂತರ ಅಧಿಪತಿ ಸಂಕಲ್ಪದಲ್ಲಿ ಹೇಳಬೇಕಾದ ರೀತಿ
ವಾರ
ವಾರಗಳು ಏಳು. ಸಾಮಾನ್ಯವಾಗಿ ಏಳು ದಿನಗಳ ಸಮೂಹಕ್ಕೆ ವಾರವೆಂಬ ವ್ಯವಹಾರವು ರೂಡಿಯಲ್ಲಿರುತ್ತದೆ. ವಾರಕ್ಕೆ ಏಳು ದಿನಗಳು ಎನ್ನುತ್ತೇವೆ. ಆದರೆ ಪಂಚಾಂಗದಲ್ಲಿ ಸೇರಿದ ವಾರವೆಂದರೆ ಈ ಇಂಗ್ಲಿಷ್‌ನ week ಅಲ್ಲ. ಪ್ರತ್ಯೇಕವಾಗಿ ದಿನಗಳು, ರಾಹು, ಕೇತುಗಳನ್ನು ಹೊರತುಪಡಿಸಿ ಉಳಿದ ಏಳು ಗ್ರಹಗಳ ಹೆಸರಿನಲ್ಲಿ ಈ ಏಳು ವಾರಗಳಿವೆ. ಸೂರ್ಯೋದಯದಿಂದ ಸೂರ್ಯೋದಯಕ್ಕೆ ಈ ವಾರಗಳು ಬದಲಾಗುತ್ತದೆ. ಪಂಚಾಂಗದಲ್ಲಿ ವಾರಗಳ ಆದ್ಯಕ್ಷರವನ್ನು ಕೊಡುವುದರ ಮೂಲಕ ವಾರಗಳನ್ನು ಸೂಚಿಸಲಾಗುತ್ತದೆ.
ನಕ್ಷತ್ರ
ದಕ್ಷಪ್ರಜಾಪತಿಗೆ ಅರವತ್ತು ಹೆಣ್ಣುಮಕ್ಕಳು. ಅವರಲ್ಲಿ ಇಪ್ಪತ್ತೇಳು ಮಕ್ಕಳನ್ನು ಕೊಟ್ಟು ಮದುವೆ ಮಾಡಿದೆ. ಚಂದ್ರನ ಹೆಂಡಂದಿರೇ ಇಪ್ಪತ್ತೇಳು ನಕ್ಷತ್ರಗಳು. ಆಶ್ಚರ್ಯವೆಂದರೆ ಈ ನಕ್ಷತ್ರಗಳನ್ನು ಹೆಳುವ ಎಲ್ಲ ಶಬ್ದಗಳು ಸ್ತ್ರೀಲಿಂಗಗಳಲ್ಲ. ಶ್ರವಣ ಮೂಲ ಶಬ್ದಗಳು ನಪುಂಸಕಲಿಂಗವಾದರೆ ಪುಷ್ಯ, ಹಸ್ತ ಶಬ್ದಗಳು ಪುಲ್ಲಿಂಗದವು. ಆದ್ದರಿಂದ “ಮೂಲಾನಕ್ಷತ್ರೇ” “ಹಸ್ತಾ ನಕ್ಷತ್ರೇ” ಎಂಬುದಾಗಿ ದೀರ್ಘ ಪ್ರಯೋಗವು ಸಾಧುವೆನಿಸುವುದಿಲ್ಲ. ಮೂಲ ನಕ್ಷತ್ರೇ, ಹಸ್ತನಕ್ಷತ್ರೇ ಎಂದೇ ಪ್ರಯೋಗಿಸಬೇಕಾಗುತ್ತದೆ.
ಚಂದ್ರ ಪ್ರತಿದಿನವೂ ನಕ್ಷತ್ರದಿಂದ ನಕ್ಷತ್ರಕ್ಕೆ ಸಂಚರಿಸುತ್ತಾನೆ. ಹೆಚ್ಚುಕಡಿಮೆ ಒಂದು ದಿನಕಾಲ ನಕ್ಷತ್ರವೊಂದರಲ್ಲಿ ಇರುತ್ತಾನೆ. ಚಂದ್ರನಿರುವ ನಕ್ಷತ್ರವನ್ನು ನಿತ್ಯನಕ್ಷತ್ರವೆನ್ನುತ್ತೇವೆ. ಸೂರ್ಯನು ಒಂದು ನಕ್ಷತ್ರದಲ್ಲಿ ಸುಮಾರು ಹದಿಮೂರು ದಿನಗಳಿರುತ್ತಾನೆ. ಸೂರ್ಯನಿರುವ ನಕ್ಷತ್ರವನ್ನು “ಮಹಾನಕ್ಷತ್ರ” ಎನ್ನುತ್ತೇವೆ. ಸೌರಮಾಸಗಳನ್ನು ಅನುಸರಿಸುವ ಉಡುಪಿ ಪಂಚಾಂಗಗಳಲ್ಲಿ “ಮಹಾನಕ್ಷತ್ರ”ದ ಉಲ್ಲೇಖವೂ ಇರುತ್ತದೆ.
ಪಂಚಾಂಗಗಳಲ್ಲಿ ತಿಥಿ ವಾರಗಳನ್ನು ಬರೆದ ಮೇಲೆ ದಿನದ ನಕ್ಷತ್ರವನ್ನು ಸಂಕ್ಷಿಪ್ತಾಕ್ಷರಗಳಲ್ಲಿ ಬರೆದಿರುತ್ತಾರೆ. ಅದರ ನಂತರ ಘಳಿಗೆಯನ್ನು ಸೂಚಿಸಿರುತ್ತಾರೆ. ಇದು ಸೂರ್ಯೋದಯಾನಂತರ ನಕ್ಷತ್ರ ಇರುವ ಕಾಲವನ್ನು ತಿಳಿಸುತ್ತದೆ. ಉದಾಹರಣೆಗೆ “ಅಶ್ವಿ-೧೫” ಎಂದು ಬರೆದಿದ್ದರೆ ಸೂರ್ಯೋದಯದಿಂದ ಹದಿನೈದು ಘಳಿಗೆಗಳ ಕಾಲ (೬ ಘಂಟೆ) ಅಶ್ವಿನೀ ನಕ್ಷತ್ರ ಇದೆ ಎಂದರ್ಥ. ಈ ಕೋಷ್ಟಕದಲ್ಲಿ ನಕ್ಷತ್ರಗಳಿಗೆ ಸಂಂಬಂಧಿಸಿದ ರಾಶಿ ಮತ್ತು ಅಧಿಪತಿಗಳ ಬಗ್ಗೆ ಮಾಹಿತಿ ಇದೆ.
ಯೋಗ
ಯೋಗವೆಂಬ ಶಬ್ದಕ್ಕೆ ಕೋಶದಲ್ಲಿ ಇಪ್ಪತ್ತೈದಕ್ಕಿಂತಲೂ ಹೆಚ್ಚು ಅರ್ಥವಿದೆ. ಪಂಚಾಂಗದಲ್ಲಿ ಯೋಗವೆಂಬ ಶಬ್ದವು ರೂಢನಾಮವಾಗಿ ವಿಷ್ಕಂಭಾದಿ ಇಪ್ಪತ್ತೇಳು ಯೋಗಗಳನ್ನು ಹೇಳುತ್ತದೆ. ನಕ್ಷತ್ರದಂತೆ ಯೋಗವೂ ಸಮಾನ್ಯವಗಿ ೬೦ ಘಳಿಗೆ ಇರುವುದರಿಂದ ಪ್ರತಿದಿನವೂ ಬದಲಾಗುತ್ತದೆ. ಪಂಚಾಂಗದಲ್ಲಿ ಯೋಗವನ್ನು ಸಂಕ್ಷಿಪ್ತಾಕ್ಷರದಲ್ಲಿ ಸೂಚಿಸಿ ಅದರ ಮುಂದೆ ಉದಯಾನಂತರ ಉದಯಾನಂತರ ಯೋಗದ ಅವಧಿಯನ್ನು ಘಳಿಗೆಗಳಲ್ಲಿ ಸೂಚಿಸಿರುತ್ತಾರೆ. ಉದಾಹರಣೆಗೆ ವರಿ ೧೦ ಬರೆದಿದ್ದರೆ ಉದಯಾನಂತರ ೧೦ ಘಳಿಗೆ (೪ ಘಂಟೆ) ವರೀಯಾನ್ ಎಂಬ ಯೋಗವಿದೆಯೆಂದರ್ಥ. ತಿಥಿ ನಕ್ಷತ್ರಗಳಂತೆ ಯೋಗಗಳಿಗೂ ಅಧಿಪತಿಗಳನ್ನೂ ಸ್ಮೃತಿಗ್ರಂಥಗಳು ಹೇಳುತ್ತದೆ. ಒಟ್ಟು 27 ಯೋಗಗಳು. ಈ 27 ಯೋಗಗಳಲ್ಲಿ ವ್ಯತೀಪಾತ ಮತ್ತು ವೈದೃತಿ ಎಂಬ ಯೋಗಗಳು ವಿಶೇಷ ಮಹತ್ವವನ್ನು ಪಡೆದಿವೆ. ಈ ಯೋಗವುಳ್ಳ ದಿನದಂದು ಏಕಭುಕ್ತಿ (ಉಪವಾಸ) ಸ್ನಾನ ದಾನ ಶ್ರಾದ್ಧ ಬ್ರ್ರಾಹ್ಮಣ ಭೋಜನಗಳೆಂಬ ಆಚಾರಗಳನ್ನು ಕೃಷ್ಣಾಚಾರ್ಯಸ್ಮೃತಿಮುಕ್ತಾವಳಿಯಲ್ಲಿ ಹೇಳಿದ್ದಾರೆ.
ವ್ಯತೀಪಾತೋ ಮಹಾಯೋಗಃ ಸರ್ವಕಾರ್ಯೇಷು ಸಿದ್ಧಿದಃ |
ದೃತಿಸ್ತು ಧೈರ್ಯದಾನಿತ್ಯಂ ||
ಎಂಬುದಾಗಿ ಈ ವ್ಯತೀಪಾತ ವೈದೃತಿ ಯೋಗವುಳ್ಳ ಕಾಲವು ಪರ್ವಕಾಲವಾಗಿ ಪರಿಗಣಿಸಲ್ಪಟ್ಟಿದೆ. ಆದ್ದರಿಂದಲೇ ಕೆಲವು ಪಂಚಾಂಗಗಳಲ್ಲಿ ಈ ಎರಡು ಯೋಗಗಳನ್ನು ದಪ್ಪ ಅಕ್ಷರಗಳಲ್ಲಿ ಬರೆದಿರುತ್ತಾರೆ.
ಕರಣ
ಬವ, ಬಾಲವ ಮೊದಲಾದ ಕರಣಗಳು ಹದಿನೆಂಟು. ಇದರಲ್ಲಿ ಮೊದಲ ಏಳು ಕರಣಗಳನ್ನುಸ್ಥಿರಕರಣಗಳೆಂದೂ ಕೊನೆಯ ನಾಲ್ಕು ಕರಣಗಳನ್ನು ಚರಕರಣಗಳೆಂದೂ ಜ್ಯೋತಿಶ್ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು. ಒಂದು ತಿಥಿಯ ಪೂರ್ಣಕಾಲ ಅರುವತ್ತು ಘಳಿಗೆಗಳಿದ್ದರೆ ೩೦ ಘಳಿಗೆಯನ್ನು ಹಂಚಿಕೊಂಡು ೨ ಕರಣಗಳಿರುತ್ತವೆ. ಇದರಲ್ಲಿ ಚರ ಕರಣಗಳು ಕ್ರಮವಾಗಿ ಪ್ರತಿ ಮಾಸದ ಶುಕ್ಲ ಪಾಡ್ಯದ ಉತ್ತರಾರ್ದದಿಂದ ಪ್ರಾರಂಬಿಸಿ, ಕೃಷ್ಣಚತುರ್ದಶಿಯ ಪೂರ್ವಾರ್ಧದವರೆಗೆ ಒಂದು ತಿಂಗಳಿಗೆ 8 ಆವರ್ತಿ ಪುನಃಪುನಃ ಬರುತ್ತದೆ. ಉಳಿದ ೪ ಸ್ಥಿರ ಕರಣಗಳು ಮಾತ್ರ ಕೃಷ್ಣಚತುರ್ದಶಿಯ ಉತ್ತರಾರ್ಧದಿಂದ ಪ್ರಾರಂಭಿಸಿ ಶುಕ್ಲ ಪಾಡ್ಯದ ಪೂರ್ವಾರ್ಧದವರೆಗೆ ತಿಂಗಳಿಗೆ ಒಂದು ಸಲ ಮಾತ್ರ ಬರುತ್ತದೆ.
ವಿಷ, ಅಮೃತಗಳು
ಪಂಚಾಂಗದಲ್ಲಿ ಈ ಪಂಚ ಅಂಗಗಳ ಜೊತೆಗೆ ವಿಷಕಾಲ ಅಮೃತಕಾಲಗಳ ಉಲ್ಲೇಖವಿರುತ್ತದೆ. ನಾವು ಕೈಹಾಕಿದ ಕೆಲಸದಲ್ಲಿ ಏನಾದರೂ ವಿಘ್ನ ಬಂದು ಕೆಲಸಕೆಟ್ಟರೆ ಯಾವ ವಿಘಳಿಗೆಯಲ್ಲಿ ಪ್ರಾರಂಭಿಸಿದೆನೋ ಏನೋ ಎಂದು ಗೊಣಗುತ್ತೇವೆ. ಒಳ್ಳೆಯಕೆಲಸಗಳನ್ನು ಪ್ರಾರಂಭಿಸುವುದಕ್ಕೆ ವಿಷಘಳಿಗೆಯು ನಿಷಿದ್ಧ. ಅಮೃತಘಳಿಗೆ ಇದ್ದರೆ ಉತ್ತಮ.
ಪಂಚಾಂಗದಲ್ಲಿ “ವಿ” ಅಂದರೆ ವಿಷ. “ಅ” ಅಂದರೆ ಅಮೃತ “ವಿ” ಅಥವಾ “ಅ” ಎಂಬ ಅಕ್ಷರದ ಮುಂದೆ ಬರೆದ ಘಳಿಗೆಯ ನಂತರ ಸುಮಾರು ನಾಲ್ಕು ಘಳಿಗೆಗಳಷ್ಟು ಆಯಾದಿನ ವಿಷಕಾಲ ಮತ್ತು ಅಮೃತಕಾಲವಿರುವುದೆಂದು ತಿಳಿಯಬೇಕು. (ತಿಥಿ ನಕ್ಷತ್ರಗಳಂತೆ ಅಲ್ಲಿ ಬರೆದ ಘಳಿಗೆಯ ತನಕ ವಿಷಾಮೃತಕಾಲಗಳೆಂದು ಅರ್ಥವಲ್ಲ)
ನಕ್ಷತ್ರದ ಪೂರ್ಣಘಟಿ ೬೦ ಘಟಿ ಇದ್ದಾಗ ವಿಷಾಮೃತಗಳು ಸರಿಯಾಗಿ ೪ ಘಳಿಗೆಯಿರುತ್ತದೆ. ನಕ್ಷತ್ರದ ಪೂರ್ಣಘಟಿ ೬೦ ಘಳಿಗೆಗಿಂತ ಹೆಚ್ಚುಕಡಿಮೆಯಾದಾಗ ವಿಷಾಮೃತ ಕಾಲವೂ ೪ ಘಳಿಗೆಗಳಿಗೆಗಿಂತ ಹೆಚ್ಚುಕಡಿಮೆಯಾಗುತ್ತದೆ. ಅಂದರೆ ಸಾಮಾನ್ಯವಾಗಿ ಪಂಚಾಂಗದಲ್ಲಿ ಬರೆದ ಘಳಿಗೆಯು ಮುಗಿದ ಮೇಲೆ ೪ ಘಳಿಗೆಗಳು (ಸುಮಾರು ಒಂದುವರೆ ಘಂಟೆ ಕಾಲ) ವಿಷಕಾಲ. ಅಮೃತಕಾಲಗಳಿರುವುದೆಂದು ತಿಳಿಯಬಹುದಾಗಿದೆ. ಉದಾಹರಣೆಗೆ ವಿ. ೩೨.೩೧ ಅ. ೪೦.೧೫ ಎಂದಿದ್ದರೆ ಸೂರ್ಯೋದಯದನಂತರ ಮೂವತ್ತೆರಡು ಘಳಿಗೆಯ ನಂತರ ೪ ಘಳಿಗೆಗಳು (ಸುಮಾರು ಸಾಯಂ ೬ ರಿಂದ ೭.೩೦ರ ತನಕ) ವಿಷಕಾಲವೆಂದೂ ಸೂರ್ಯೋದಯದಿಂದ ನಲ್ವತ್ತೂಕಾಲು ಘಳಿಗೆಯ ನಂತರ ಅಂದರೆ ರಾತ್ರಿ ಹತ್ತು ಘಂಟೆಯ ನಂತರ ೪ ಘಳಿಗೆಗಳು ಅಮೃತಕಾಲವೆಂದೂ ತಿಳಿಯಬೇಕು.
ವಿಷ ಅಥವಾ ಅಮೃತದ ಆರಂಭವು ರಾತ್ರಿಯ ಕೊನೆಗಾದರೆ ವಿಷಾಮೃತಕಾಲವು ಆದಿನ ಪೂರ್ಣಗೊಳ್ಳದೆ ಮರುದಿನಕ್ಕೆ ಶೇಷವಿರುವುದು. ಅದನ್ನೇ ವಿ.ಶೇ. ಎಂದು ಬರೆಯುವುದಿದೆ. ಅ.ಶೇ. ೩.೧೫ ಎಂದಿದ್ದರೆ ಉದಯಾನಂತರದ ಮೂರುಕಾಲು ಘಳಿಗೆಗಳು ಅಮೃತಘಳಿಗೆಯೆಂದರ್ಥ.
ವಿಷ ಅಮೃತಗಳನ್ನು ಬರೆದ ಮೇಲೆ ದಿನದ ವಿಶೇಷವು ಬರೆದಿರುತ್ತದೆ. ಉದಾ – ಮಧ್ವನವಮೀ, ಮಹಾವೀರ ಜಯಂತೀ ಇತ್ಯಾದಿ. ಇದರ ನಂತರ ಗ್ರಹಗಳ ಬದಲಾವಣೆಯಾದ ಸ್ಥಿತಿಗತಿಗಳು ಬರೆದಿರುತ್ತದೆ. ಉದಾ – ಅನು ೩ ಕು ೧೮ ಉದಯಾನಂತರ ೧೮ ಘಳಿಗೆಗೆ ಕುಜನು ಅನುರಾಧ ನಕ್ಷತ್ರದ ಮೂರನೇ ಚರಣಕ್ಕೆ ಪ್ರವೇಶಿಸುತ್ತಾನೆ. ಎಂದರ್ಥ. ಹೀಗೆಯೇ ವೃಷಭೇ ಬುಧಃ, ಹಸ್ತೇಽರ್ಕಃ, ಎಂಬಲ್ಲೂ ಅರ್ಥೈಸಿಕೊಳ್ಳಬೇಕು.
ಕೆಲವು ಸಂದರ್ಭದಲ್ಲಿ ಉತ್ತಮಮನ್ವಾದಿ, ಕೂರ್ಮಕಲ್ಪಾದಿ, ತ್ರೇತಾಯುಗಾದಿ ಎಂಬಿತ್ಯಾದಿಯಾಗಿ ಬರೆದಿರುತ್ತದೆ. ಇದರ ಅಭಿಪ್ರಾಯ ಇಷ್ಟೇ. ಒಂದು ಕಲ್ಪದಲ್ಲಿ ೧೪ ಮನ್ವಂತರಗಳು ಇರುತ್ತವೆ. ಶ್ವೇತ ವರಾಹಕಲ್ಪವೆಂಬ ಈಗಿನ ಕಲ್ಪದಲ್ಲಿ ಈಗಾಗಲೇ ಸ್ವಾಯಂಬುವ ಮನ್ವಂತರವೇ ಮೊದಲಾದ ೬ ಮನ್ವಂತರಗಳು ಕಳೆದಿವೆ. ಏಳನೆಯದಾದ ವೈವಸ್ವತ ಮನ್ವಂತರ ನಡೆಯುತ್ತಿದೆ. ಈ ಏಳು ಮನ್ವಂತರಗಳು ಪ್ರಾರಂಭವಾದ ದಿನವನ್ನು ಮನುಗಳ ಹೆಸರಿನೊಂದಿಗೆ ಮನ್ವಾದಿಯೆಂದು ಬರೆಯಲಾಗುತ್ತದೆ. ಉದಾಹರಣೆಗೆ ಉತ್ತಮ ಮನ್ವಂತರದ ಆರಂಭದ ದಿನವನ್ನು ಉತ್ತಮಮನ್ವಾದಿ ಎನ್ನಲಾಗಿದೆ. ಹೀಗೆಯೇ ರೈವತ ಮನ್ವಾದಿ, ಸ್ವಾಯಂಭುವ ಮನ್ವಾದಿ ಇತ್ಯಾದಿ.
ಚತುರ್ಮುಖ ಬ್ರಹ್ಮದೇವರ ಒಂದು ಹಗಲನ್ನು ಕಲ್ಪವೆಂದು ಕರೆಯಲಾಗಿದೆ. ಇಂತಹ ಸಾವಿರಾರು ಕಲ್ಪಗಳು ಕಳೆದುಹೋಗಿವೆ. ಏಕೆಂದರೆ ಈಗ ಬ್ರಹ್ಮನಿಗೆ ೫೦ ವರ್ಷಗಳು ಕಳೆದು ೫೧ ನೆಯ ವರ್ಷದಲ್ಲಿ ಮೊದಲನೇ ತಿಂಗಳಿನ ೨೬ ನೇ ದಿನ ನಡೆಯುತ್ತಿದೆ. ಈ ದಿನವೇ ಶ್ವೇತವರಾಹಕಲ್ಪ. ಈ ಕಲ್ಪವು ಚಾಂದ್ರಯುಗಾದಿಯಂದೇ ಪ್ರಾರಂಭವಾಗುತ್ತದೆ. ಆದ್ದರಿಂದ ಚಾಂದ್ರಯುಗಾದಿಯಂದು ಶ್ವೇತವರಾಹ ಕಲ್ಪಾದಿಯೆಂದೂ ಬರೆದಿರುತ್ತದೆ. ಹಿಂದಿನ ಕೆಲವು ಪ್ರಸಿದ್ಧ ಕಲ್ಪಗಳು ಪ್ರಾರಂಭವಾದ ದಿನವನ್ನು ಪಂಚಾಂಗಗಳು ಉಲ್ಲೇಖಿಸುತ್ತವೆ. ಅದೇ ಕೂರ್ಮಕಲ್ಪಾದಿ ಮೊದಲಾದುದು.
ಒಂದೇ ಮನ್ವಂತರದಲ್ಲಿ ಎಪ್ಪತ್ತೊಂದು ಚತುರ್ಯುಗಗಳು ಇರುತ್ತವೆ. ಈಗಿನ ವೈವಸ್ವತ ಮನ್ವಂತರದಲ್ಲಿ ೨೭ ಚತುರ್ಯುಗಗಳು ಕಳೆದು ೨೮ ನೆಯ ಚತುರ್ಯುಗದಲ್ಲಿ ಕೊನೆಯದಾದ ಕಲಿಯುಗ ನಡೆಯುತ್ತಿದೆ. ಈ ೨೮ ನೆಯ ಚತುರ್ಯುಗದಲ್ಲಿ ತ್ರೇತಾ ದ್ವಾಪರ ಕಲಿಯುಗಗಳು ಪ್ರಾರಂಭವಾದ ದಿನಗಳನ್ನು ಪಂಚಾಂಗಗಳು ಉಲ್ಲೇಖಿಸಿ ಅದೇ ತ್ರೇತಾಯುಗಾದಿ, ದ್ವಾಪರಯುಗಾದಿ ಎಂದು ಬರೆಯಲ್ಪಟ್ಟಿರುತ್ತದೆ.
ಇಂತಹಾ ಇನ್ನೂ ಹತ್ತಾರು ವಿಷಯಗಳು ಪಂಚಾಂಗದಲ್ಲಿ ಇರುತ್ತವೆ. ಮೂಲಭೂತವಾಗಿ ಇಷ್ಟು ತಿಳಿದುಕೊಂಡು ಪಂಚಾಂಗ ಪುಸ್ತಕ ಬಿಡಿಸಿದರೆ ಅರ್ಥವಾಗುತ್ತದೆ. ಇದೀಗ ಮೈಸೂರು ಪಂಚಾಂಗದ ಒಂದು ದಿನದ ಒಕ್ಕಣೆಯನ್ನು ಪರಾಮರ್ಶಿಸೋಣ.
ತಾ – ೯ ತೇ – ೨೭ ಬು. ದ್ವಿತೀ ೧೭.೧ (ಹ ೧.೬) ಭರ-೪೬.೨೫ (ರಾ.೧೨.೫೨) ವಾ: ದ್ವಿತೀ
ಎಪ್ರಿಲ್ ೧೯೭೭ ೧೮.೫೩ ವಿಷ್ಕ -೮.೫೫ ಕೌಲ ೧೭.೧ ವಿ ೧೩.೩ ಅಮೃತ ೩೬.೩೨ ಮತ್ಸ್ಯಜಯಂತೀ.
ಮೀನಮಾಸ ಸಿ.ವಾ. ತೃತೀಯ. ಭರ ೧ ಬುಧ ೧೦.೪೯
ಈಗ ಇದನ್ನು ಈಗ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಈದಿನ ಇಂಗ್ಲಿಷ್ ತಿಂಗಳು ಎಪ್ರಿಲನ ೯ನೆಯ ತಾರೀಕು. ಸೌರಮಾಸದಂತೆ ಮೀನಮಾಸದಲ್ಲಿ ೨೭ನೆಯ ತೇದಿ (ದಿನ) ಬುಧವಾರ, ಬಿದಿಗೆ ತಿಥಿ, ಉದಯದಿಂದ ೧೭ ಘಳಿಗೆ ೧ ಫಳ ಅಂದರೆ ಹಗಲು ೧ ಘಂಟೆ ೬ ನಿಮಿಷಗಳ ತನಕ ಬಿದಿಗೆ ತಿಥಿಯಿದೆ.
ನಿತ್ಯನಕ್ಷತ್ರವಾದ ಭರಣಿಯು ೪೬ ಘಳಿಗೆ ೨೫ ಫಳ ಅಂದರೆ ರಾತ್ರಿ ೧೨ ಘಂಟೆ ೫೨ ನಿಮಿಷದ ತನಕವಿದೆ. (ವಾಕ್ಯವೆಂಬ ಗಣಿತಸಿದ್ಧಾಂತದ ಪ್ರಕಾರ ದ್ವಿತೀಯಾ ತಿಥಿಯು ೧೮.೫೩ ಘಳಿಗೆಯಿದೆ.) ವಿಷ್ಕಂಭವೆಂಬ ಯೋಗ ೮.೫೫ ಘಳಿಗೆಯವರೆಗೆ ಕೌಲವವೆಂಬ ಕರಣ ೧೭.೧ ಘಳಿಗೆಯ ತನಕ. ವಿಷಗಳಿಗೆಯು ಉದಯದಿಂದ ೧೩.೩ ಘಳಿಗೆಗೆ ಪ್ರಾರಂಭವಾಗಿ ೪ ಘಳಿಗೆಗಳಿರುತ್ತದೆ. ಹಾಗೆಯೆ ಉದಯಾನಂತರ ೩೯.೩೨ ಘಳಿಗೆಗೆ ಅಮೃತಕಾಲ ಪ್ರಾಪ್ತವಾಗಿ ೪ ಘಳಿಗೆಗಳಿರುತ್ತದೆ. ಇಂದು ಮತ್ಸ್ಯಜಯಂತೀ. (ಸಿದ್ಧಾಂತ ವಾಕ್ಯವೆಂಬ ಗಣಿತದಂತೆ ಇಂದು ತೃತೀಯಾ ತಿಥಿಯಾಗುತ್ತದೆ.) ಸೂರ್ಯೋದಯಾನಂತರ ೧೦.೪೯ ಘಳಿಗೆಗೆ ಬುಧನು ಅಶ್ವಿನೀ ನಕ್ಶತ್ರದ ಕೊನೆಯ ವಾರದಿಂದ ಭರಣಿನಕ್ಷತ್ರದ ಮೊದಲ ಪಾದಕ್ಕೆ ಪ್ರವೇಶಿಸುತ್ತಾನೆ.
ಸಂವತ್ಸರ
12 ಮಾಸಗಳಿಗೆ ಒಂದು ಸಂವತ್ಸರ. ಸಂವತ್ಸರಗಳು ಒಟ್ಟು 60. ದೀರ್ಘಾಯುಷಿಯಾದ ಮನುಷ್ಯನೋರ್ವ ಹೆಚ್ಚೆಂದರೆ 2 ಸಂವತ್ಸರ ಚಕ್ರ (120 ವರ್ಷ) ಜೀವಿಸಿಯಾನು. ಆದ್ದರಿಂದಲೇ ಆಯುಷ್ಯದ ಅರ್ಧವೆನಿಸುವ 60 ನೆಯ ವಯಸ್ಸಿನಲ್ಲಿ ಷಷ್ಠ್ಯಬ್ದ್ಯಶಾಂತಿಯನ್ನು ಶಾಸ್ತ್ರವು ವಿಧಿಸುತ್ತದೆ. ಸಂವತ್ಸರವು ಚಾಂದ್ರಮಾನದ ಪ್ರಕಾರ ಚಾಂದ್ರಯುಗಾದಿಯಂದು ಬದಲಾದರೆ ಸೌರಮಾನದ ಆಚರಣೆಯುಳ್ಳವರಿಗೆ ಸೌರಯುಗಾದಿಯಂದು ನೂತನ ಸಂವತ್ಸರವು ಪ್ರಾರಂಭವಾಗುತ್ತದೆ. ಸಂವತ್ಸರ ಮತ್ತು ಅದರ ಅಭಿಮಾನಿ ದೇವತೆಗಳನ್ನು ಇಲ್ಲಿ ಕೊಟ್ಟಿದೆ.
ಇಲ್ಲಿ ನಾಲ್ಕನೆಯ ಸಂವತ್ಸರದ ಪ್ರಮೋದವನ್ನು ಪ್ರಮೋದೂತ ಎಂದೂ ನಲ್ವತ್ತೇಳನೆಯ ಪ್ರಮಾಧಿ ಸಂವತ್ಸರವನ್ನು ಪ್ರಮಾಧೀಚ ಎಂಬುದಾಗಿಯೂ ಅಬದ್ಧವಾಗಿ ಬರೆಯುವುದನ್ನು ಕೆಲವೆಡೆ ಕಾಣುತ್ತೇವೆ. ’ಪ್ರಮೋದೋಥ ಪ್ರಜಾಪತಿಃ’ “ಪರಿಧಾವಿ ಪ್ರಮಾಧೀ ಚ” ಎಂಬ ಶ್ಲೋಕದಲ್ಲಿ ತಪ್ಪಾದ ಪದಚ್ಛೇದವು ಈ ಬ್ರಾಂತಿಗೆ ಎಡೆಮಾಡಿದೆ. ಪ್ರಮೋದ ಪ್ರಮಾಧಿ ಎಂಬುದೇ ಸಂವತ್ಸರದ ಹೆಸರು. ಹತ್ತನೆಯ ಮತ್ತು ಐವತ್ತೆರಡನೇ ಸಂವತ್ಸರಗಳನ್ನು ಧಾತು ಮತ್ತು ಕಾಲಯುಕ್ತಾಕ್ಷಿ ಎಂದೂ ಕೃಷ್ಣಾಚಾರ್ಯಸ್ಮೃತಿಮುಕ್ತಾವಲಿಯಲ್ಲಿ ಹೇಳಿದ್ದರೂ ಧಾತೃ ಮತ್ತು ಕಾಲಯುಕ್ತಿ ಎಂಬುದು ನಾಮಾಂತರವೆಂದು ಪರಿಗಣಿಸಬಹುದು.
ಮಾಸಗಳು
ಚಾಂದ್ರ ಸೌರ ಎಂಬ ಎರಡು ಮಾಸಗಳು ವ್ಯವಹಾರದಲ್ಲಿ ಇದೆ. ಬಹುತೇಕ ಚಾಂದ್ರಮಾಸದ ಅನುಸರಣೆಯಿದ್ದರೂ ಪರಶುರಾಮ ಕ್ಷೇತ್ರದಲ್ಲಿ (ದ.ಕ.) ಸೌರಮಾಸದ ಆಚರಣೆ ಇದೆ. ಶುಕ್ಲಪಕ್ಷದ ಪಾಡ್ಯದಿಂದಾರಂಭಿಸಿ ಅಮಾವಾಸ್ಯೆಯ ತನಕದ ಸುಮಾರು ೩೦ ದಿನಗಲು ಒಂದು ಚಾಂದ್ರ ಮಾಸವೆನಿಸುತ್ತದೆ. ಕೆಲವೊಮ್ಮೆ ತಿಥಿಗಳು ಲೋಪವಾದಾಗ ಇಲ್ಲವೇ ಅತಿರಿಕ್ತ ತಿಥಿ ಬಂದಾಗ ಮಾಸದಲ್ಲಿ ಒಂದು ಹೆಚ್ಚುಕಡಿಮೆಯಾಗಬಹುದು. ಮೈಸೂರು ಪಂಚಾಂಗದಲ್ಲಿ ಮೇಲ್ಭಾಗದಲ್ಲಿ ದಿನಾನಿ ೧೪ ಎಂಬಿತ್ಯಾದಿ ಬರೆದಿರುದರ ಅಭಿಪ್ರಾಯವೂ ಇದೇ. ಒಂದು ತಿಥಿ ಲೋಪವಾಗಿ ಈ ಪಕ್ಷದಲ್ಲಿ ಹದಿನಾಲ್ಕೇ ದಿನಗಳು ಇವೆ ಎಂದು ಅದರ ಅರ್ಥ. (ದಿನಾನಿ = ದಿನಗಳು) ಹೀಗೆಯೇ ದಿನಾನಿ ೧೫ ಎಂದೂ ೧೬ ಎಂದೂ ಬರೆದಿರುತ್ತದೆ. ಸೌರಮಾಸಗಳು ಸೂರ್ಯನ ಗತಿಯನ್ನು ಅನುಸರಿಸಿವೆ. ಸಂಕ್ರಾಂತಿಯಿಂದ ಸಂಕ್ರಾಂತಿಗೆ ಬದಲಾಗುತ್ತದೆ. ಕೆಲವೊಮ್ಮೆ ಒಂದು ಮಾಸದಲ್ಲಿ ೩೨ ದಿನಗಳು ಬರುವುದೂ ಇದೆ. ವರ್ಷದಲ್ಲಿ ಸರಿಯಾಗಿ ೩೬೫ ದಿನಗಳು ಇರುತ್ತವೆ. ಇನ್ನೂ ಸ್ಪಷ್ಟವಾಗಿ ಗಮನಿಸಿದರೆ ಮೇಷ ಸಂಕ್ರಾಂತಿಯಿಂದ ಮತ್ತೊಂದು ಮೇಷ ಸಂಕ್ರಾಂತಿಯ ಮಧ್ಯದ ಅವಧಿ ಸರಿಯಗಿ ೩೬೫ ದಿನಗಳಾಗಿರುತ್ತವೆ. ಆದರೆ ಚಾಂದ್ರಮಸದಲ್ಲಿ ಸುಮಾರು ೩೫೫ ದಿವಸಗಳು ಇರುತ್ತವೆ. ಸೂರ್ಯಗತಿಗೆ ಅನುಸಾರಿಯಾಗುವುದಕ್ಕಾಗಿ ಸುಮಾರು ೩೩ ತಿಂಗಳಿಗೊಮ್ಮೆ ಅಧಿಕಮಾಸವನ್ನು ಅಂಗೀಕರಿಸಲಾಗಿದೆ. ಈ ಅಧಿಕಮಾಸದಲ್ಲಿ ೧೩ ತಿಂಗಳುಗಳಿದ್ದು ಕಡಿಮೆಬಿದ್ದ ದಿನಗಳು ಅದರಿಂದಾಗಿ ತುಂಬಲ್ಪಟ್ಟು ಚಾಂದ್ರ ಸಂವತ್ಸರವು ಸೌರ ಸಂವತ್ಸರಕ್ಕೆ ಅನುಗುಣವಾಗುತ್ತದೆ. ಸಂಕ್ರಾಂತಿಯೇ ಇಲ್ಲದ ಮಸವನ್ನು ಅಧಿಕಮಾಸವೆಂದೂ ೨ ಸಂಕ್ರಾಂತಿ ಇರುವ ಮಾಸವನ್ನು ಕ್ಷಯಮಾಸವೆಂದೂ ಕರೆಯಲಾಗಿದೆ. ಚಾಂದ್ರ ಹಾಗೂ ಸೌರಮಾನದ ಮಾಸಗಳು ಹಾಗೂ ಮಾಸಾಭಿಮಾನೀ ದೇವತೆಗಳನ್ನು ಇಲ್ಲಿ ಕೊಟ್ಟಿದೆ.
ಚಾಂದ್ರಮಾಸಗಳು:
ಸೌರ ಮಾಸಗಳು:
ಶುಕ್ಲಪಕ್ಷದ ಪಾಡ್ಯದಿಂದ ಚಾಂದ್ರಮಾಸವನ್ನೂ ಪರಿಗಣಿಸುವುದೆಂದು ತಿಳಿದಿದ್ದೇವೆ. ಆದರೆ ಕೃಷ್ಣಪಕ್ಷದ ಪಾಡ್ಯದಿಂದ ಮಾಸಗಣನೆಯ ಕ್ರಮವೂ ಇದೆ. ಇದನ್ನು ಸ್ನಾನಾದಿ ಕೆಲವು ವಿಧಿಗಳಲ್ಲಿ ಮಾತ್ರ ಬಳಸುವ ಸಂಪ್ರದಾಯವಿದೆ. ಆದ್ದರಿಂದಲೇ ಮಾಘಮಾಸ ಪ್ರಾರಂಭವಾಗುವ ೧೫ ದಿನ ಮುಂಚೆಯೇ ಅಂದರೆ ಪೌಷಮಾಸದ ಕೃಷ್ಣಪಾಡ್ಯದಿಂದಲೇ “ಮಾಘಸ್ನಾನಾರಂಭ” ವೆಂದು ಪಂಚಾಂಗದಲ್ಲಿ ಬರೆದಿರುತ್ತದೆ. ಹೀಗೆಯೇ ಕಾರ್ತಿಕ ಸ್ನಾನವೂ ಕೂಡಾ.
ಆಯನ
ಸೂರ್ಯನು ಉತ್ತರಕ್ಕೆ ಸಂಚರಿಸುವ ೬ ತಿಂಗಳನ್ನು ಉತ್ತರಾಯಣವೆಂದೂ ದಕ್ಷಿಣದ ಕಡೆಗೆ ಚಲಿಸುವ ೬ ತಿಂಗಳನ್ನು ದಕ್ಷಿಣಾಯನವೆಂದೂ ವ್ಯವಹರಿಸಲಾಗಿದೆ. ಇದು ಸೌರ ಮಾಸವನ್ನು ಅನುಸರಿಸುತ್ತಿದ್ದು ಕರ್ಕಾಟಕ ಮಾಸದಿಂದ ಧನುರ್ಮಾಸದ ವರೆಗೆ ದಕ್ಷಿಣಾಯನವೂ, ಮಕರಮಾಸದಿಂದ ಮಿಥುನ ಮಾಸದ ತನಕದ ೬ ತಿಂಗಳು ಉತ್ತರಾಯಣವೂ ಆಗಿರುತ್ತದೆ. ಆದ್ದರಿಂದಲೇ ಕರ್ಕಾಟಕ ಸಂಕ್ರಮಣ (ಸಾಮಾನ್ಯವಾಗಿ ಜುಲೈ ೧೫ ದಂದು) ದಕ್ಷಿಣಾಯನ ಪುಣ್ಯಕಾಲವು ಮಕರ ಸಂಕ್ರಮಣ (ಸಾಮಾನ್ಯ ಜನವರಿ ೧೪) ದಂದು ಉತ್ತರಾಯಣ ಪುಣ್ಯಕಾಲವು ಇರುತ್ತದೆ. ನವೀನ ದೃಗ್ಗಣಿತದ ಪ್ರಕಾರ ದಶಂಬರ ೨೨ ನೆಯ ದಿನಾಂಕದಂದು ಉತ್ತರಾಯಣವು ಪ್ರಾರಂಭವಾದರೆ ಜೂನ್ ೨೧ ರಂದು ದಕ್ಷಿಣಾಯನವು ಆರಂಭವಾಗುತ್ತದೆ.
ಇವು ದೇವತೆಗಳ ಹಗಲುರಾತ್ರಿಗಳು. ಆದ್ದರಿಂದಲೇ ಗೃಹಪ್ರವೇಶ, ದೇವತಾಪ್ರತಿಷ್ಠೆ, ಚೌಲ,ಉಪನಯನ, ಮಹಾನಾಮ್ನಾದಿವ್ರತ, ವಿವಾಹ, ಸಮಾವರ್ತನೆಗಳನ್ನು ದಕ್ಷಿಣಾಯನದಲ್ಲಿ ಮಾಡಬಾರದೆಂದು ಸ್ಮೃತಿಗ್ರಂಥಗಳು ಹೇಳುತ್ತವೆ.
ಋತುಗಳು
ಚಾಂದ್ರಮಾನದ 2 ಮಾಸಗಳಿಗೆ ಒಂದರಂತೆ 6 ಋತುಗಳು. ಅಧಿಪತಿಗಳೊಂದಿಗೆ ಋತುಗಳನ್ನು ಇಲ್ಲಿ ಕೊಟ್ಟಿದೆ
ಏಕಾದಶೀ
ಏಕಾದಶೀ ವಿಷಯ ಬಂದಾಗ ನಾವು ತಿಳಿಯಲೇ ಬೇಕಾದ ಕೆಲವು ಮಹತ್ವದ ವಿಚಾರಗಳಿವೆ. ಪಂಚಾಂಗದಲ್ಲಿ ಕೆಲವೊಮ್ಮೆ ವಿದ್ವೈಕಾದಶೀ, ಉಪೋಷ್ಠದ್ವಾದಶೀ, ಪಾರಣತ್ರಯೋದಶೀ ಎಂಬುದಾಗಿಯೂ ಹರಿವಾಸರ, ಅತಿರಿಕ್ತೋಪವಾಸ ಎಂದೂ ಬರೆದಿರುತ್ತದೆ. ಏನಿದು? ಒಂದೊಂದೇ ವಿಷಯವನ್ನು ಎಷ್ಟು ತಿಳಿಯುವುದು ಅನಿವಾರ್ಯವೋ ಅಷ್ಟುಮಾತ್ರ ತಿಳಿದುಕೊಳ್ಳೋಣ.
ವಿದ್ವೈಕಾದಶೀ :
“ವಿದ್ಧ” ಎಂದರೆ ವೇಧವುಳ್ಳದ್ದು.ವೇಧವೆಂದರೆ ಸಂಬಂಧ. ವಿದ್ವೈಕಾದಶೀ ಎಂದರೆ ಸಂಬಂಧವುಳ್ಳ ಏಕಾದಶೀ ಎಂದರ್ಥವಾಯಿತು. ಏಕಾದಶಿಗೆ ಯಾವುದರ ಸಂಬಂಧ ? ಯಾವಾಗ ? ಅರುಣೋದಯಕಾಲದಲ್ಲಿ ದಶಮಿಯ ಸಂಬಂಧವಿರುವ ಏಕಾದಶಿಯೇ ವಿದ್ವೈಕಾದಶೀ.
ಸೂರ್ಯೋದಯಕ್ಕಿಂತ ಮುಂಚೆ ೪ ಘಳಿಗೆ (ಒಂದು ಘಂಟೆ ೩೬ ನಿಮಿಷ) ಕಾಲಕ್ಕೆ ಅರುಣೋದಯಕಾಲವೆಂದು ಹೆಸರು. ಈ ಕಾಲದಲ್ಲಿ ಸ್ವಲ್ಪವಾದರೂ ದಶಮಿಯಿದ್ದು ಸೂರ್ಯೋದಯಕ್ಕೆ ಏಕಾದಶಿಯೇ ಇದ್ದರೂ ಅಂದು ವಿದ್ವೈಕಾದಶೀಯಾಗಿರುತ್ತದೆ. ಉದಾಹರಣೆಗೆ ಇಂದು ೬ ಗಂಟೆಗೆ ಸೂರ್ಯೋದಯವೆಂದು ಭಾವಿಸೋಣ. ಸುಮಾರು ನಾಲ್ಕೂವರೆಯಿಂದ ಅರುಣೋದಯಕಾಲವೆಂದು ತಿಳಿಯಬಹುದು. ನಿನ್ನೆ ದಶಮಿಯು ೫೮ ಘಳಿಗೆಯಿದ್ದುದಾದರೆ ಬೆಳಗ್ಗೆ ಸುಮಾರು ೫ ಘಂಟೆಯವರೆಗೆ ದಶಮಿಯೇ ಇರುವುದರಿಮ್ದ ಇಂದಿನ ಏಕಾದಶಿಗೆ ದಶಮೀ ವೇಧ ಬರುತ್ತದೆ.
ಈ ವಿದ್ವೈಕಾದಶೀಯಂದು ಉಪವಾಸ ಮಾಡಬಾರದು. ಅಂದು ಉಪವಾಸಮಾಡುವುದು ಅಪರಾಧ. ಈ ಅಪರಾಧದ ಫಲವಾಗಿಯೇ ಗಾಂಧಾರಿಗೆ ಪುತ್ರವಿಯೋಗದ ದುಃಖವೊದಗಿದೆ. ಆದ್ದರಿಂದ ವಿದ್ವೈಕಾದಶೀಯನ್ನು ದಶಮಿಯಂತೆ ಆಚರಿಸಿ ದ್ವಾದಶಿಯಂದು ಉಪವಾಸ ಮಾಡಬೇಕು. ಉಪವಾಸ ಮಾಡಬೇಕಾದ ಈ ದ್ವಾದಶಿಯು “ಉಪೋಷ್ಠದ್ವಾದಶೀ” ಅಥವಾ ಉಪೋಷಿತ ದ್ವಾದಶೀ ಎಂದು ಕರೆಯಲ್ಪಡುತ್ತದೆ. ದ್ವಾದಶಿಯಂದು ಉಪವಾಸಮಾಡಿದಾಗ ತ್ರಯೋದಶಿಯಂದು ಪಾರಣೆಯಿರುವುದರಿಂದ ಅದು “ಪಾರಣತ್ರಯೋದಶೀ” ಎನಿಸುತ್ತದೆ.
ಇಂತಹಾ ಸಂದರ್ಭದಲ್ಲಿ ಸಂಕಲ್ಪಮಾಡುವಾಗ ತಿಥಿಯನ್ನು ಹೇಗೆ ಉಲ್ಲೇಖಿಸಬೇಕೆಂಬುದು ಅನೇಕರನ್ನು ಕಾಡುವ ಪ್ರಶ್ನೆ. “ಏಕಾದಶ್ಯಾಂ ತಿಥೌ” ಅನ್ನೋಣವೇ ? ಅಂದು ಉಪವಾಸ ಮಾಡುತ್ತಿಲ್ಲ. ದಶಮ್ಯಾಂ ಅನ್ನೋಣವೆಂದರೆ ಸೂರ್ಯೋದಯಕಾಲದಲ್ಲಿ ದಶಮೀ ತಿಥಿಯಿಲ್ಲ. ಉತ್ತರವಿಷ್ಟೇ. ವಿದ್ವೈಕಾದಶ್ಯಾಂ ತಿಥೌ (ಅಥವಾ ದಶಮೀ ವಿದ್ವೈಕಾದಶ್ಯಾಂ) ಎನ್ನಬೇಕು. ಮರುದಿನ “ಉಪೋಷ್ಠದ್ವಾದಶ್ಯಾಂ” ಎಂದೂ ತ್ರಯೋದಶಿಯಂದು “ಪಾರಣತ್ರಯೋದಶ್ಯಾಮ್” ಎಂದೂ ಹೇಳಬೇಕು.

ಶ್ರವಣೋಪವಾಸ :
ದ್ವಾದಶಿಯಂದು ಶ್ರವಣ ನಕ್ಷತ್ರವಿದ್ದರೂ ಅಂದು ಉಪವಾಸವನ್ನು ಮಾಡಬೇಕು. ಆದರೆ ಶ್ರವಣ ನಕ್ಷತ್ರದ ಸಂಬಂಧವುಳ್ಳ ದ್ವಾದಶಿಗೆ ಉತ್ತರಾಷಾಢ ನಕ್ಷತ್ರದ ವೇಧವಿರಬಾರದು. ಏಕಾದಶಿಯ ಕೊನೆಯಲ್ಲೂ ಶ್ರವಣ ನಕ್ಷತ್ರವಿದ್ದು ದ್ವಾದಶಿಗೂ ಆ ನಕ್ಷತ್ರದ ಸಂಬಂಧವಿದ್ದಾಗ ಬಹಳ ಮಹತ್ವದ ವಿಷ್ಣುಶೃಂಖಲಾಯೋಗವಿರುತ್ತದೆ.
ಏಕಾದಶಿಯಂದು ಉಪವಾಸ ಮಾಡಿ ಆ ದಿನ ದ್ವಾದಶಿಯಂದೂ ಉಪವಾಸ ಮಾಡಬೇಕು. ಇದನ್ನು ಪಂಚಾಂಗದಲ್ಲಿ “ಶ್ರವಣೋಪವಾಸ” ಎಂದು ಬರೆದಿರುತ್ತಾರೆ. ಒಟ್ಟಿನಲ್ಲಿ ದ್ವಾದಶಿಯಂದು ಉಪವಾಸ ಮಾಡಬೇಕಾಗಿ ಬರುವ ಸಂದರ್ಭ ಮೂರು ಬಾರಿ ಬರುತದೆ. ಏಕಾದಶಿಗೆ ದಶಮೀ ವೇಧವಿದ್ದಾಗ, ದ್ವಾದಶಿಯಂದು ಉತ್ತರಾಷಾಢಾ ನಕ್ಷತ್ರದ ಸಂಬಂಧವಿಲ್ಲದ ಶ್ರವಣ ನಕ್ಷತ್ರವೊದಗಿದಾಗ ಮತ್ತು ಅತಿರಿಕ್ತೋಪವಾಸ ಬಂದಾಗ. ಇವುಗಳಲ್ಲಿ ಮೊದಲನೇ ಪ್ರಸಂಗದಲ್ಲಿ ದ್ವಾದಶಿಯಂದು ಮಾತ್ರ ಉಪವಾಸಮಾಡಬೇಕೇ ಹೊರತು ಏಕಾದಶಿಯಂದು ಉಪವಾಸ ಮಾಡಬಾರದು. ಆದರೆ ಎರಡನೇ ಮತ್ತು ಮೂರನೇ ಪ್ರಸಂಗದಲ್ಲಿ ಎರಡೂ ದಿನ ಉಪವಾಸವು ಕರ್ತವ್ಯವಾಗಿದೆ.
ಹರಿವಾಸರ :
ಕೆಲವು ಸಲ ದ್ವಾದಶಿಯಂದು ಹರಿವಾಸರವಿರುತ್ತದೆ. ಅಂದು ಹರಿವಾಸರ ಮುಗಿಯುವಲ್ಲಿಯ ತನಕ ಪಾರಣೆ ಮಾಡುವ ಹಾಗಿಲ್ಲ. ಈ ಹರಿವಾಸರವೆಂದರೇನು ? ಎಂಬ ಪ್ರಶ್ನೆಗೆ ನಾರದೀಯ ಸ್ಮೃತಿಗ್ರಂಥವು ಹೀಗೆ ಉತ್ತರಿಸಿದೆ.
ದ್ವಾದಶ್ಯಾಮಾದ್ಯಪಾದಸ್ತು ಕೀರ್ತಿತೋ ಹರಿವಾಸರಃ |
ನ ತತ್ರ ಪಾರಣಂ ಕುರ್ಯಾತ್ ಸಾಪಿ ಏಕಾದಶೀ ಸಮಾ ||
ದ್ವಾದಶಿಯ ಒಟ್ಟು ಪೂರ್ಣಘಟಿಯ ನಾಲ್ಕನೇ ಒಂದು ಭಾಗವು ಪಾದವೆನಿಸಿದೆ. ದ್ವಾದಶಿಯ ಮೊದಲ ಪಾದವನ್ನು ಹರಿವಾಸರ ಎಂದು ಕರೆಯುತ್ತೇವೆ. ಇದು ಏಕಾದಶೆ ಸದೃಶವಾಗಿದ್ದು ಈ ಹರಿವಾಸರ ಕಾಲದಲ್ಲಿ ಏಕಾದಶಿಯಂತೆ ಉಪವಾಸವಿರಬೇಕು. ಅಂದರೆ ದ್ವಾದಶಿಯ ಮೊದಲಪಾದ ಮುಗಿದ ಮೇಲೆ ಪಾರಣೆಯನ್ನು ಮಾಡಬೇಕು. ಸಾಧಾರಣವಾಗಿ ಏಕಾದಶಿಯು ೪೬ ಘಳಿಗೆಗಿಂತಲೂ ಜಾಸ್ತಿಯಿದ್ದಾಗ ಮರುದಿನ ಹರಿವಾಸರಯಿದೆಯೆಂದು ಭಾವಿಸಬಹುದಾಗಿದೆ.
ಮತ್ತೆ ಕೆಲವೊಮ್ಮೆ ದಶಮಿಯಂದು ರಾತ್ರಿ ಹರಿವಾಸರವೆಂದು ಬರೆದಿರುತ್ತದೆ. ಇದೇನು? ದಶಮಿಯಂದು ದ್ವಾದಶಿ ಬರುವುದು ಸಾಧ್ಯವೇ ? ಕೃಷ್ಣ್ಚಾರ್ಯಸ್ಮೃತಿಮುಕ್ತಾವಲೀ ಈ ಪ್ರಶ್ನೆಗೆ ಉತ್ತರಿಸುತ್ತದೆ. ದ್ವಾದಶಿಯ ಮೊದಲ ಪಾದವು ಮಾತ್ರವಲ್ಲದೆ ಏಕಾದಶಿಯ ಪ್ರಾಂತಭಾಗವೂ ಹರಿವಾಸರವಾಗಿದೆ. ದಶಮಿಯಂದು ರಾತ್ರಿ ಏಕಾದಶಿಯ ಕೊನೆಯ ಪಾದ ಪ್ರಾರಂಭವಾಗುವುದಕ್ಕೆ ಮುಂಚೆಯೇ ಆಹಾರ ಸೇವನೆ ಮುಗಿಸಬೇಕು. “ಹರಿವಾಸರತಃ ಪೂರ್ವಂ ದಶಮ್ಯಾಂ ಭೋಜನಂ ಸ್ಮೃತಮ್” ಎಂಬ ವರಾಹವಚನವು ಈ ವಿಷಯವನ್ನು ಹೇಳುತ್ತಿದೆ. ಅದಕ್ಕಾಗಿ ದಶಮಿಯ ರಾತ್ರಿ ಹರಿವಾಸರವನ್ನು ಪಂಚಾಂಗಗಳು ಉಲ್ಲೇಖಿಸುತ್ತವೆ.
ಅತಿರಿಕ್ತೋಪವಾಸ :
ದ್ವಾದಶೀ ತಿಥಿಯ ಆದ್ಯಪಾದವು ಹರಿವಸರವೆಂದು ಹೇಳಿದ್ದೇವೆ. ಈ ಹರಿವಾಸರವು ಕೆಲವೊಮ್ಮೆ ದ್ವಾದಶಿಯ ಬೆಳಿಗ್ಗೆ ೧೦ ಘಂಟೆಯ ವರೆಗೂ ಇರುತ್ತದೆ. ಒಂದುವೇಳೆ ಮಧ್ಯಾಹ್ನದವರೆಗೂ ಈ ಹರಿವಾಸರ ಮುಂದುವರಿದರೆ ಆಗ ಅಂತಹಾ ದ್ವಾದಶಿಯನ್ನು ಪೂರ್ತಿ ಉಪವಾಸ ಮಾಡಬೇಕು.
ದ್ವಾದಶ್ಯಾಮಾದ್ಯ ಪಾದಸ್ತು ಸಂಗವಾತ್ಪರತೋ ಯದಿ |
ಉಪವಾಸದ್ವಯಂ ಕಾರ್ಯಮನ್ಯಥಾ ನರಕಂ ವ್ರಜೇತ್ ||
ದ್ವಾದಶಿಯಂದು ಆದ್ಯಪಾದವು (ಹರಿವಾಸರವು) ಸಂಗವದ ನಂತರವೂ ಇದ್ದರೆ ಆಗ ಏಕಾದಶಿ ಹಾಗೂ ದ್ವಾದಶಿಯನ್ನು ಸೇರಿಸಿ ೨ ದಿನ ಉಪವಾಸ ಮಾಡಬೇಕು. ಇಲ್ಲದಿದ್ದರೆ ನರಕವಿದೆ. ಸಂಗವವೆಂದರೆ ಹಗಲನ್ನು ೫ ಭಾಗ ಮಾಡಿದರೆ ಎರಡನೇ ಭಾಗ . ಅಂದರೆ ದ್ವಾದಶಿಯಂದು ಬೆಳಗ್ಗೆ ಸುಮಾರು ೧೧ ಗಂಟೆಗಿಂತಲೂ ಹೆಚ್ಚು ಕಾಲ ಹರಿವಾಸರವಿರುವುದಾದರೆ ದ್ವಾದಶಿಯು ಪೂರ್ತಿ ಉಪವಾಸ ವಿರಬೇಕು. ಅಂತಹಾ ಉಪವಾಸವನ್ನು ಅತಿರಿಕ್ತೋಪವಾಸ ಎನ್ನುತ್ತಾರೆ. ಪಂಚಾಂಗದಲ್ಲಿ ಈ ಬಗ್ಗೆ ಉಲ್ಲೇಖವಿರುತ್ತದೆ.
ಪ್ರದೋಷ :
ಪ್ರದೋಷವೆಂದರೆ ಮುಸ್ಸಂಜೆಯೆಂಬುದು ಪ್ರಸಿದ್ಧವಾದ ಅರ್ಥ. ಆದರೆ ಪಂಚಾಂಗದಲ್ಲಿ ಇದನ್ನು ಪಾರಿಭಾಷಿಕವಾಗಿ ಬಳಸಿದೆ. ಷಷ್ಠೀ ಚತುರ್ಥೀ ದ್ವಾದಶಿಗಳಂದು ಪ್ರದೋಷವಿರುವುದಾದರೂ ಪ್ರಸಿದ್ಧವಾದ ದ್ವಾದಶಿಯ ಪ್ರದೋಷವನ್ನು ಮಾತ್ರ ಇಲ್ಲಿ ಪರಿಚಯಿಸುತ್ತೇನೆ.
ರಾತ್ರೌ ಯಾಮದ್ವಯಾದರ್ವಾಕ್ ಸಪ್ತಮೀಸ್ಯಾತ್ ತ್ರಯೋದಶೀ |
ಪ್ರದೋಷ ಸತು ವಿಜ್ಞೇಯಃ ಸರ್ವವಿದ್ಯಾ ವಿಗರ್ಹಿತಃ ||
ಎಂಬ ವೃದ್ಧ ಗರ್ಗರ ಪ್ರಮಾಣ ವಾಕ್ಯದಂತೆ ರಾತ್ರಿ ೨ ಯಾಮಗಳು ಮುಗಿಯುವುದಕ್ಕೆ ಮೊದಲೇ ತ್ರಯೋದಶಿಯು ಪ್ರಾರಂಭವಾದರೆ ಪ್ರದೋಷವೆಂದು ತಿಳಿಯಬೇಕು. ಪ್ರದೋಷಕಾಲದಲ್ಲಿ ವೇದಾದಿಗಳ ಅಧ್ಯಯನವನ್ನು ಮಾಡಬಾರದು. ದ್ವಾದಶಿಯಂದು ರಾತ್ರಿಯೇ ತ್ರಯೋದಶಿಯು ಒದಗುವುದರಿಂದ ದ್ವಾದಶಿಯಂದೇ ಪ್ರದೋಷವಿರುತ್ತದೆ. ಈ ಪ್ರದೋಷಕಾಲವು ಸೂರ್ಯಾಸ್ತಕ್ಕಿಂತ ಪೂರ್ವಾಪರಗಳಲ್ಲಿ ಸಾಮಾನ್ಯವಾಗಿ ೩ ಗಂಟೆಗಳಿರುತ್ತದೆ. ದ್ವಾದಶಿಯಂದು ಸಾಯಂಕಾಲ ೬ ಗಂಟೆಗೆ ಸೂರ್ಯಾಸ್ತವಾಗುವುದೆಂದು ಭಾವಿಸಿದರೆ ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ಪ್ರದೋಷವಿದೆಯೆಂದು ತಿಳಿಯಬಹುದು.
ದ್ವಾದಶಿಯಂದು ಹರಿವಾಸರವಿದ್ದರೆ ಅಂದು ಪ್ರದೋಷವಿರುವುದಿಲ್ಲ. ಏಕೆಂದರೆ ಅಂದು ಪ್ರಾತಃಕಾಲದಲ್ಲಿ ತಾನೇ ಪ್ರಾರಂಭವಾಗಿರುವ ದ್ವಾದಶಿಯು ರಾತ್ರಿ ಕಾಲದಲ್ಲಿ ಮುಂದುವರಿಯುವುದರಿಂದ ಯಾಮದ್ವಯದಲ್ಲಿ ತ್ರಯೋದಶಿ ಪ್ರವೇಶದ ಸಾಧ್ಯತೆ ಇರುವುದಿಲ್ಲ. ಅಂತಹಾ ಸಂದರ್ಭದಲ್ಲಿ ತ್ರಯೋದಶಿಯಂದೇ ರಾತ್ರಿಯಲ್ಲಿ ತ್ರಯೋದಶಿಯು ಸಿಗುವುದರಿಂದ ಅಂದೇ ಪ್ರದೋಷವಿರುವುದನ್ನು ಪಂಚಾಂಗದಲ್ಲಿ ಕಾಣಬಹುದಾಗಿದೆ. ಹೀಗೆಯೇ ಷಷ್ಠೀ ಅಥವಾ ಸಪ್ತಮಿಯಂದೂ ಪ್ರದೋಷವಿರುತ್ತದೆ.
ಶಕ ವರುಷ
ಶಾಲಿವಾಹನ ಶಕ :
ಶಾಲಿವಾಹನನೆಂಬ ರಾಜನು ಶಕಪುರುಷ. ಅಂದರೆ ಇವನ ಹುಟ್ಟಿನಿಂದ ಪ್ರಾರಂಭಿಸಿ ವರ್ಷಗಣನೆಯನ್ನು ಮಾಡುವುದು ಹಿಂದೂ ಸಂಪ್ರದಾಯವಾಗಿದೆ. ಕಲಿಯುಗದ ಪ್ರಾರಂಭದಲ್ಲಿ ಯುಧಿಷ್ಠಿರ ಶಕೆ ವ್ಯವಹಾರದಲ್ಲಿತ್ತು. ಆಮೇಲೆ ವಿಕ್ರಮಶಕೆ ಚಾಲ್ತಿಗೆ ಬಂತು. ಈಗ ಶಾಲಿವಾಹನ ಶಕೇ ಎಂದು ಸಪ್ತಮ್ಯಂತವಾಗಿ ಹೇಳುತ್ತೇವೆ. ಆದರೆ ಇಂದು ಕ್ರಿಸ್ತಶಕೆಯನ್ನೇ ಹಿಂದೂ ಸಂಪ್ರದಾಯದ ಶಕೆಯೆಂದು ಭ್ರಮಿಸುವಷ್ಟರ ಮಟ್ಟಿಗೆ ನಾವು ಶಾಲಿವಾಹನ ಶಕೆಯನ್ನು ಮರೆತಿದ್ದೇವೆ. ಪ್ರತಿಗಾಮಿ ಧೋರಣೆಯ ವ್ಯಕ್ತಿಯೊಬ್ಬ ನಾಳೆಯ ದಿನ ಶಾಲಿವಾಹನ ಶಕೆ ಎಂಬುದನ್ನು ಕಿತ್ತು ಹಾಕಿ ಕ್ರಿಸ್ತಶಕೇ ಎಂದೇ ಸಂಕಲ್ಪ ಮಾಡಿದರೂ ಆಶ್ಚರ್ಯವಿಲ್ಲ. ಆದರೆ ಶಾಲಿವಾಹನನೆಂಬ ರಾಜ ಕ್ರಿಸ್ತನ ನಂತರ ಹುಟ್ಟಿದವನೆಂಬುದನ್ನು ಗಮನಿಸಬೇಕು. ಈತ ಕ್ರಿಸ್ತಶಕ 78ರಲ್ಲಿ ಹುಟ್ಟಿರುವುದರಿಂದ ಶಾಲಿವಾಹನಶಕೆಗೂ ಕ್ರಿಸ್ತಶಕೆಗೂ 77 ವರ್ಷಗಳ ವ್ಯತ್ಯಾಸವಿರುತ್ತದೆ. ಅಂದರೆ 78ನೇ ಕ್ರಿಸ್ತಶಕೆಯೆಂದು ಒಂದನೇ ಶಾಲಿವಾಹನ ಶಕೆ ಪ್ರಾರಂಭವಾಯಿತು. ಆದ್ದರಿಂದ ಇಸವಿಯಿಂದ (ಕ್ರಿಸ್ತವರ್ಷದಿಂದ) 77ನ್ನು ಕಳೆಯುವುದರ ಮೂಲಕ ವರ್ತಮಾನ ಶಾಲಿವಾಹನ ಶಕೆಯನ್ನು ತಿಳಿಯಬಹುದು. ಉದಾಹರಣೆಗೆ ಈಗ ಕ್ರಿಸ್ತಶಕ 1998 ಎಂದಾದರೆ ಶಾಲಿವಾಹನ್ ಶಕ ವರ್ಷದಂತೆ 1998-77 = 1921 ಆಗಿರುತ್ತದೆ. ಇದು ವರ್ತಮಾನ ಶಾಲಿವಾಹನ್ ಶಕೆ. ಪಂಚಾಂಗದಲ್ಲಿ ಗತಶಾಲಿವಾಹನ ಶಕ 1920 ಎಂದು ಬರೆದಿರುತ್ತದೆ. ಅಂದರೆ 1920 ವರ್ಷ ಮುಗಿದು 1921ನೇ ವರ್ಷ ಪ್ರಾರಂಭವಾಗಿದೆ ಎಂದರ್ಥವಾಗುತ್ತದೆ.
ವ್ಯತ್ಯಾಸವೆಂದರೆ ಕ್ರಿಸ್ತಶಕೆಯು ಜನವರಿಗೆ ಬದಲಾದರೆ ಶಾಲಿವಾಹನ ಶಕೆಯು ಯುಗಾದಿಗೆ ಬದಲಾಗುತ್ತದೆ.
ಇನ್ನೂ ಕೆಲವು ವಿಷಯಗಳು ಪಂಚಾಂಗದಲ್ಲಿ ಇದ್ದರೂ ಅವು ತಿಳಿದುಕೊಳ್ಳಲೇಬೇಕಾದ ಅಂಶಗಳಲ್ಲಿ ಸೇರುವುದಿಲ್ಲ. ಇಲ್ಲಿ ವಿವರಿಸಿದ ಪಂಚ ಅಂಗಗಳನ್ನು ಪ್ರತಿದಿನವೂ ತಿಳಿದು ಪಟಿಸುವುದು ನಮ್ಮ ಶ್ರೇಯಸ್ಸಿಗೆ ಕಾರಣವಾಗುತ್ತದೆ.
ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯವರ್ಧನಮ್ |
ನಕ್ಷತ್ರಾತ್ ಹರತೇ ಪಾಪಂ ಯೋಗಾದ್ರೋಗ ನಿವಾರಣಮ್ ||
ಕರಣಾತ್ ಕಾರ್ಯಸಿದ್ಧಿಃ ಸ್ಯಾತ್ ಪಂಚಾಂಗ ಫಲಮುತ್ತಮಮ್ ||
ಈ ಸ್ಮೃತಿವಾಕ್ಯವು ತಿಥಿ, ವಾರ, ನಕ್ಷತ, ಯೋಗ, ಕರಣಗಳೆಂಬ ಪಂಚಾಂಗವನ್ನು ಪಟಿಸುವುದರಿಂದ ಕ್ರಮವಾಗಿ ಸಂಪತ್ತು, ಆಯುಷ್ಯ, ಪಾಪಹಾನಿ, ರೋಗನಿವೃತ್ತಿ ಮತ್ತು ಕಾರ್ಯಸಿದ್ಧಿ ಎಂಬ ಫಲವನ್ನು ಹೇಳಿವೆ.
ಪಂಚಾಂಗಂ ಪಠತೇ ನಿತ್ಯಂ ಶ್ರೋತುಮಿಚ್ಛಂತಿ ಯೇ ನರಾಃ |
ಅಗ್ನಿಷ್ಟೋಮ ಫಲಂ ತೇಷಾಂ ಗಂಗಾಸ್ನಾನಂ ದಿನೇದಿನೇ ||
ಈ ವಾಕ್ಯವು ದಿನದಿನವೂ ಪಂಚಾಂಗವನ್ನು ಪಠಿಸುವವರಿಗೆ ಮತ್ತು ಅದನ್ನು ಕೇಳಲು ಇಚ್ಛಿಸುವ ಸಜ್ಜನರಿಗೆ ಅಗ್ನಿಷ್ಟೋಮ ಯಾಗದ ಮತ್ತು ಗಂಗಾಸ್ನಾನದ ಫಲವನ್ನು ಹೇಳಿದೆ. ತಿಥಿ ವಾರ ಮೊದಲಾದ ಪಂಚಾಂಗದ ಅರಿವಿಲ್ಲದ ಮನುಷ್ಯ ಕೋಡುಗಳಿಲ್ಲದ ಪಶುವೆಂದೂ ಜರೆದಿದ್ದಾರೆ. ಪ್ರಾಚೀನರು ನಾವು ಪಶುಗಳಾಗದಿರೋಣ. ಗಂಗಾಸ್ನಾನದಂತಹ ಪುಣ್ಯಫಲವನ್ನುಪಡೆಯೋಣ.
ನಿಮಗಿದು ತಿಳಿದಿರಲಿ
ಮಲಮಾಸ : ಅಧಿಕಮಾಸ ಅಥವಾ ಕ್ಷಯಮಾಸ
ಶುದ್ಧಮಾಸ : ಒಂದು ಮಾಸವು ೨ ಸಲ ಬಂದಾಗ ಮೊದಲ ಮಾಸವನ್ನು ಅಧಿಕಮಾಸವೆಂದೂ ಎರಡನೆಯ ಅದೇ ಮಾಸವನ್ನು ಶುದ್ಧಮಾಸವೆಂದು ಕರೆಯುತ್ತಾರೆ.
ವಿಷ್ಣು ಪಂಚಕ : ಒಂದು ವ್ರತ ೨ ಏಕಾದಶೀ ಹುಣ್ಣಿಮೆ ಅಮಾವಾಸ್ಯೆ ಮತ್ತು ಶ್ರವಣ ನಕ್ಷತ್ರವುಳ್ಳ ದಿನ ಹೀಗೆ ತಿಂಗಳಲ್ಲಿ ೫ ದಿನ ಉಪವಾಸ ಮಾಡುವುದು.
ಭೀಷ್ಮ ಪಂಚಕ : ಕಾರ್ತಿಕ ಶುದ್ಧ ಏಕಾದಶಿಯಿಂದ ಹುಣ್ಣಿಮೆ ತನಕದ ೫ ದಿನ ಅವಿಚ್ಛಿನ್ನವಾಗಿ ಉಪವಾಸ ಮಾಡುವ ವ್ರತ.
ಶುದ್ಧ : ಶುಕ್ಲಪಕ್ಷ,
ಬಹುಳ : ಕೃಷ್ಣ ಪಕ್ಷ
ಕರಿದಿನ : ಯಾವುದೇ ಹಬ್ಬದ ಮರುದಿನ.
ದರ್ಶ : ಅಮಾವಾಸ್ಯೆ ಮಧ್ಯಾಹ್ನ ತನಕ ಅಮಾವಾಸ್ಯೆ ಸಿಗುವ ದಿನ ಕೆಲವೊಮ್ಮೆ ಚತುರ್ದಶಿಯಂದೇ ಬರುತ್ತದೆ.
ಧನುರ್ವ್ಯತೀಪಾತ : ಧನುರ್ಮಾಸದಲ್ಲಿ ವ್ಯತೀಪಾತವೆಂಬ ಯೋಗವುಳ್ಳದಿನ ಪರ್ವಕಾಲವಿದು.
ಧನುರ್ಮಾಸ : ಸೌರಮಾಸಗಳಲ್ಲಿ ಎಂಟನೆಯದು. ಧನು ಸಂಕ್ರಮಣದ ತನಕ ಸುಮಾರು ೩೦ ದಿನಗಳು ಸಾಮಾನ್ಯವಾಗಿ ದಶಂಬರದ ೧೫ ನೇ ತಾರೀಖಿನಿಂದ ಜನವರಿ ೧೪ ನೇ ತಾರೀಖಿನ ತನಕ.
ಸಾಧನ ದ್ವಾದಶಿ : ದ್ವಾದಶೀ ತಿಥಿಯನ್ನು ಮೀರಿ ಪಾರಣೆ ಮಾಡಬಾರದು. ಬೆಳಗ್ಗೆ ದ್ವಾದಶೀ ತಿಥಿ ಬಹಳ ಕಡಿಮೆಯಿದ್ದಾಗ ತಿಥಿ ಮುಗಿಯುವುದರ ಒಳಗೆ ಪಾರಣೆಗೆ ಕುಳಿತುಕೊಳ್ಳಬೇಕು. ಇಂತಹಾ ದ್ವಾದಶಿಗೆ ಸಾಧನ ದ್ವಾದಶಿಯೆಂದು ವ್ಯವಹಾರ.

(ಸಂಗ್ರಹ)

Comments

  1. Thank you very much for sharing... Very informative Sri Deepakji

    ReplyDelete
  2. Thank you for sharing valuable information.

    ReplyDelete
  3. Very beautifully explained. All the basics are available in this publication. Thanks for sharing the same on Facebook

    ReplyDelete
  4. Thank you sir, nice information for beginners

    ReplyDelete
  5. Thank you sir, nice information for beginners

    ReplyDelete
  6. Very nice information... Please provide references for the adipati details. This is required for my personal use.

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ