ಆಶಾಡ ಮಾಸದ ಮಹತ್ವ:
ಆಶಾಡ ಮಾಸದಲ್ಲಿ ತಾಪಿ ನದಿಯಲ್ಲಿ ಸ್ನಾನ ಮಾಡಬೇಕು ಎಂದು ಶಾಸ್ತ್ರದಲ್ಲಿದೆ. ಆದರೆ ಈಗ ತಾಪಿ ಎನ್ನುವ ನದಿಯೇ ಇಲ್ಲಾ. ಸ್ನಾನ ಮಾಡುವ ಜಲದಲ್ಲಿಯೇ ತಾಪಿ ನದಿಯ ಚಿಂತನೆ ಮಾಡಿ ಸ್ನಾನಿಸಬೇಕು. ಮಹಾ ನದಿಯಾದ ತಾಪಿಯು ಸೂರ್ಯನ ಮಗಳಾಗಿದ್ದು ಸರ್ವ ಗುಣ ಸಂಪನ್ನಳು ಆಗಿದ್ದಾಳೆ. ಪುಣ್ಯಪ್ರದವಾದ ಜಲವುಳ್ಳ ತಾಪೀಂದು. ಸರ್ವರ ಪಾಪಗಳನ್ನೂ ಕಳೆಯುವಾಗ ಅವಳಿಗೆ ಅದೆಂತು ದೋಶವು ಬರುವುದು? ಕೃತಯುಗದ ಆದಿಯಲ್ಲಿ ಇವಳ ಜನ್ಮವು ಆಶಾಡ ಮಾಸದಲ್ಲಿ ಆದ ಪ್ರಯುಕ್ತ ಆ ಮಾಸದಲ್ಲಿ ತಾಪಿ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪ ನಾಶವಾಗುವುದು. ಹಿಂದಕ್ಕೆ ತಾಪಿ ನದಿಯೊಂದಿಗೆ ದೇವ ನದಿಯಾದ ಗಂಗೆಯ ಸ್ಪರ್ಧೆಯು ಏರ್ಪಟ್ಟಾಗ ಗುಣಗಳಿಂದ ಅಧಿಕವಾದ ಪವಿತ್ರ ತಾಪಿ ನದಿಯು ಗಂಗೆಗಿಂತಲೂ ಶ್ರೇಷ್ಠವಾಗಿರುವವಳೆಂದು ನಿರ್ಣಯವಾಗಿತ್ತು. ಅದೇ ಸಂಧರ್ಭದಲ್ಲಿ ಒಬ್ಬ ಬ್ರಾಹ್ಮಣನು ಗಂಗೆಯು ತನ್ನ ಪಾಪವನ್ನು ಕಳೆಯುವಳೆಂದು ತಿಳಿದು ಗಂಗಾ ಸ್ನಾನಕ್ಕೆ ಬಂದನು. ಅಲ್ಲಿರುವಾಗ ಗಂಗೆಗಿಂತಲೂ ತಾಪಿ ನದಿಯು ಹೆಚ್ಚಿನ ಮಹಾತ್ಮೆವುಳ್ಳದ್ದಾಗಿದೆ ಎಂದು ತಿಳಿದು ಗಂಗೆಯಲ್ಲಿ ಸ್ನಾನ ಮಾಡದೇ ಆ ಬ್ರಾಹ್ಮಣನು ತಾಪಿ ನದಿಗೆ ಹೋಗಿ, ಅದನ್ನೇ ಆಶ್ರಯಿಸಿದನು. ಅಲ್ಲಿ ಮೂರು ದಿನ ನದೀ ಸ್ನಾನ ಮಾಡುವ ಮಾತ್ರದಿಂದ ಅವನ ಚಾಂಡಾಲತ್ವವೂ ಬ್ರಹ್ಮ ಹತ್ಯೆಯೂ ಸಂಪೂರ್ಣ ನಾಶವಾಯಿತು. ಅಂದಿನಿಂದ ಮುನಿಗಳೆಲ್ಲರೂ ಜಹ್ನುವಿನ ಮಗಳಾದ ಗಂಗೆಯಲ್ಲಿ ಸ್ನಾನ ಮಾಡುವುದನ್ನು ಬಿಟ್ಟು ಸೂರ್ಯಪುತ್ರುಯಾದ ತಾಪಿಯನ್ನು ಸ್ತುತಿಸುತ್ತ, ತಾಪಿಯನ್ನು ಆಶ್ರಯಿಸತೊಡಗಿದರು. ಇದನ್ನೆಲ್ಲಾ ನೋಡಿದ ಗಂಗೆಯು ಕಾಂತಿಹೀನಳಾಗಿ ವಿಕೃತವಾದ ಆಕಾರವುಳ್ಳವಳಾಗಿ ಶೋಕಪಡುತ್ತ ದೀನವದನಳಾಗಿ ಬ್ರಹ್ಮದೇವರು ಇದ್ದಳ್ಳಿಗೆ ಧಾವಿಸಿ ಬಂದಳು. ಬ್ರಹ್ಮದೇವರು ಜಾಹ್ನವಿಯನ್ನು ಕೇಳಿದರು "ಏನು? ಇಷ್ಟು ಕಾಂತಿಹೀನಳಾಗಿದ್ದೀ? ಇದಕ್ಕೆ ಏನು ಕಾರಣ?" ಆಗ ಗಂಗೆಯು, "ಹೇ ತಾತ, ಸೂರ್ಯಪುತ್ರಿಯಾದ ತಾಪಿ ಎಂಬ ಹೆಸರಿನ ನದಿಯು ಭೂಲೋಕದಲ್ಲಿ ಬಹಳ ಪ್ರಸಿದ್ಧಳಾಗಿದ್ದಾಳೆ. ಅವಲು ಪಾವಿತ್ರದಿಂದ, ಗರ್ವಿತರಾದ ಎಲ್ಲ ನದಿಗಳನ್ನು ಗೆದ್ದುಬಿಟ್ಟಿದ್ದಾಳೆ. ಅಲ್ಲಿ ಎಲ್ಲರೂ ಸ್ನಾನ ಮಾಡಿ ಉತ್ತಮವಾದ ಲೋಕವನ್ನು ಹೊಂದುತ್ತಿದ್ದಾರೆ. ಸೂರ್ಯಪುತ್ರಿಯ ಈ ತೆರನಾದ ಮಹಿಮೆಯು ಬದಳಷ್ಟಿದೆ. ಹೇ ಪಿತಾಮಹ, ಇಷ್ಟು ದಿನ ನನ್ನಲ್ಲಿ ಸ್ನಾನ ಮಾಡುವವರೆಲ್ಲಾ ಈಗ ಅಲ್ಲಿಗೆ ಹೋಗುತ್ತಿದ್ದಾರೆ. ನನ್ನನ್ನು ಎಲ್ಲ ನದಿಗಳಲ್ಲಿ ಜೇಷ್ಠಳನ್ನಾಗಿ ಮಾಡುತ್ತೇನೆ ಎಂಬ ನಿನ್ನ ಸಂಕಲ್ಪಕ್ಕೆ ಇವತ್ತು ಚ್ಯುತಿ ಬಂದಿದೆ." ಎಂದು ಗೆಂಗೆಯು ತನ್ನ ದುಃಖವನ್ನು ತೋಡಿಕೊಂಡಾಗ ಬ್ರಹ್ಮದೇವರು ನಾರದರಿಗೆ ಅನುಜ್ಞೆಯನ್ನು ಮಾಡಿದರು.
"ಹೇ ನಾರದರೇ, ನೀವು ಈಗಲೇ ಹೋಗಿ ಸೂರ್ಯಪುತ್ರಿಯಾದ ತಾಪಿ ನದಿಯ ಮದಾತ್ಮೆಯನ್ನೆಲ್ಲಾ ಅಪಹರಿಸಿರಿ." ಎಂದು ತಂದೆಯು ಆಜ್ಞಾಪಿಸಲು, ನಾರದರು ಕೂಡಲೇ ಹೋಗಿ ಅವಳ ಮಹಾತ್ಮೆಯನ್ನು ಅಪಹರಿಸಲು ಪ್ರಯತ್ನಿಸಿದರು. ಅದರ ಪಾಪದಿಂದ ನಾರದರ ಜ್ಞಾನವೆಲ್ಲಾ ನಷ್ಟವಾಯಿತು. ಆಗ ಬ್ರಹ್ಮದೇವರು ಇದ್ದಲ್ಲಿಗೆ ಬಂದು ತಮಗೆ ಆಗಿರುವ ಅವಸ್ಥೆಯನ್ನು ನಾರದರು ಭೋಧಿಸಿದರು. "ಹೇ ಗುರೋ, ಈ ನನ್ನ ಅವಸ್ಥೆ ನಷ್ಟವಾಗಬೇಕು" ಎಂದು ಪರಿಪರಿಯಾಗಿ ಪ್ರಾರ್ಥಿಸಿದರು. ಇದಕ್ಕೆ ಬ್ರಹ್ಮದೇವರು "ಈ ಅಜ್ಞಾನ ನಷ್ಟವಾಗುವುದಕ್ಕೆ ನೀವು ಕೂಡಲೇ ಹೋಗಿ ಅದೇ ತಾಪಿ ನದಿಗೇ ಪ್ರಾರ್ಥನೆ ಮಾಡಿ" ಎನ್ನಲು ನಾರದರು ಹೋಗಿ ಹಾಗೆಯೇ ಮಾಡಿದರು. ಕೂಡಲೇ ತಾಪಿಯು ನಾರದರ ಅಜ್ಞಾನವನ್ನೆಲ್ಲಾ ಅಪಹರಿಸಿದಳು. ತದನಂತರ ಬ್ರಹ್ಮದೇವರಿಗೆ ನಾರದರು "ನೀನೆ ತಾಪಿನದಿಯ ಮಹಾತ್ಮೆಯನ್ನು ಅಪಹರಿಸು" ಎಂದು ಹೇಳಲು ಬ್ರಹ್ಮಹೇವರೇ ಸ್ವತಃ ತಾಪಿನದಿಯ ಹತ್ತಿರ ಹೋಗಿ, ಅವಳನ್ನು ಬಹುವಿಧವಾಗಿ ಕೊಂಡಾದಿದರು. ಆಗ ತಾಪಿಯು ಬಂದು ನಿಂತು, ಬ್ರಹ್ಮದೇವರನ್ನು ಸ್ತುತಿಸಿದಳು. "ತಾವು ಇಲ್ಲಿಗೆ ಬಂದ ಕಾರಣವೇನು?" ಎಂದು ಅವಳು ಕೇಳಿದಳು. ಆಗ ಬ್ರಹ್ಮದೇವರು ಅವಳನ್ನು ತಿರಗು ದೇವಲೋಕಕ್ಕೆ ಹೋಗಲು ಆಜ್ಞಾಪಿಸಿದರು. ಅದರಂತೆ ತಾಪಿ ನದಿಯು ಭೂಲೋಕವನ್ನು ಬಿಟ್ಟು, ದೇವಲೋಕಕ್ಕೆ ಹೋದಳು.
ಆಗ ಗಂಗೆಯ ಮನಸ್ಸಿಗೆ ಸಮಾಧಾನವಾಯಿತು. ಆದ್ದರಿಂದ ಸೂರ್ಯನ ಪುತ್ರಿಯಾದ ಶಕ್ತಿಶಾಲಿ ತಾಪಿಯನ್ನು ಆಶಾಡ ಮಾಸದಲ್ಲಿ ನೆನೆಯುತ್ತ ಸ್ನಾನ ಮಾಡಬೇಕು. ಇದು ಒಂದು ಶ್ರೇಷ್ಠವಾದ ಮಹತ್ಮೆ.
ಕಿವಿಮಾತು:
ಅಚೋದ್ಯಮಾನಾನಿ ಯಥಾ ಪುಷ್ಪಾಣಿ ಚ ಫಲಾನಿ ಚ|
ಸ್ವಂ ಕಾಲಂ ನಾತಿವರ್ತಂತೇ ತಥಾ ಕರ್ಮ ಪುರಾ ಕೃತಂ ||
ಹೂವು ಹಣ್ಣುಗಳು ಯಾರ ಪ್ರೇರಣೇಯು ಇಲ್ಲದೇ ತಮ್ಮ ಕಾಲವನ್ನು ಮೀರದೇ ಇರುತ್ತವೆ. ಹಾಗೆಯೇ ಪುರಾಕೃತವಾದ ಕರ್ಮವೂ ಸಹ ತನ್ನ ಕಾಲ ಬಂದಾಗ ಫಲಿಸುತ್ತದೆ.
Comments
Post a Comment