ದೇವಿಮಹಾತ್ಮ್ಯೆ ತತ್ವ

    ತಮೋಗುಣಾತ್ಮಕ ವಿಷ್ಣುವಿನ(ಸಮಾಧಿ)ಯ ರೂಪವಾದ ತಾರ್ಕಿಕ ಗುರುಗಳ ಉಪದೇಶ ಶ್ರವಣದಿಂದ ಪ್ರಮಾಣಗತ, ಪ್ರಮೇಯಗತ ಸಂಶಯಗಳೆಂಬ ಮಧುಕೈಟಭರು ಕಿವಿಯಿಂದ ಹುಟ್ಟಿದರು. ಅವರು ಹುಟ್ಟಿದೊಡನೆಯೇ ಚತುರ್ಮುಖಬ್ರಹ್ಮನೆಂಬ ಸಾಧನ ಚತುಷ್ಟಯ ಸಂಪನ್ನನಾದ (ವೋಕ್ಷಸಾಧಕನಾದ) ಅಧಿಕಾರಿಯನ್ನು ಪೀಡಿಸಿದರು. ಆತ ಬ್ರಹ್ಮನೆಂಬ ಅಧಿಕಾರಿಯು ಗುರುರ್ವಿಷ್ಣುಃ ಎಂಬಂತೆ ತಮೋಗುಣದಿಂದೆಚ್ಚೆತ್ತ ಶುದ್ಧಸತ್ವಗುಣವೆಂಬ ಸದ್ಗುರುನಾಥನಿಗೆ ಶರಣುಹೋಗಿ ಉಪಕ್ರಮೋಪಸಂಹಾರ, ಅಭ್ಯಾಸ, ಅಪೂರ್ವತ, ಫಲ, ಅರ್ಥವಾದ, ಉಪಪತ್ತಿಗಳೆಂಬ ಷಡ್ಲಿಂಗಗಳ ಸಹಾಯದಿಂದ ಶ್ರುತಿ (ಉಪನಿಷತ್ತು)ಗಳನ್ನು ಶ್ರವಣಮಾಡಲು, ಸದ್ಗುರುರೂಪ ವಿಷ್ಣುವಿನ ಉಪದೇಶದಂತೆ ಭೇದಬಾಧಕ ಅಭೇದಕಸಾಧಕ ಮುಕ್ತ, ಮನನವೆಂಬ ಸುದರ್ಶನಚಕ್ರದಿಂದ ಆ ಪ್ರಮಾಣ, ಪ್ರಮೇಯ, ಸಂಶಯಗಳೆಂಬ ಮಧುಕೈಟಭರು ಹತರಾದರು ಆಗ ಬ್ರಹ್ಮನೆಂಬ ಅಧಿಕಾರಿಯೂ ಸಂತುಷ್ಟನಾದನು.
    ಮಹಿಷಾಸುರನು ರಾಜ್ಯಲೋಭದಿಂದ ಮೃತನಾದನು. ಅಹಂಸ್ಪೂರ್ತಿಯೇ ಮಹಿಷಾಸುರನು. ಈ ವೃತ್ತಿಯ ನೇತ್ರಕ್ಕೆ ಸಂಬಂಧಪಡುವದೇ ಚಿಕ್ಷುರಾಖ್ಯನು. ಜಿಹ್ವೇಂದ್ರಿಯದ್ವಾರ ರಸವನಾಸ್ವಾದಿಸುವದೇ ರಸಿಲೋಮ. ಸಂಕಲ್ಪವಿಕಲ್ಪಾತ್ಮಕ ಮನಸ್ಸೇ ಬಿಡಾಲನು. ಕ್ರೋಧವೇ ರುದಾಗ್ರನು. ಈ ವೃತ್ತಿಗಳು ದೈವೀಸಂಪತ್ತುಳ್ಳ ಮುಮುಕ್ಷುಗಳೆಂಬ ದೇವತೆಗಳನ್ನು ಪೀಡಿಸಲು, ಆಗ ಜ್ಞಾನಶಕ್ತಿಸ್ವರೂಪನಾದ ಗುರುವೆಂಬ ದೇವಿಗೆ ಶರಣು ಹೋಗಲು, ಆ ದೇವಿಯು ಆ ವೃತ್ತಿಗಳೆಂಬ ರಾಕ್ಷಸರನ್ನುಲಯಪಡಿಸಲು, ಮುಮುಕ್ಷುಗಳೆಂಬ ದೇವತೆಗಳು ಸ್ವಸ್ವರೂಪವೃತ್ತಿ ಸ್ಥಿತಿ ರೂಪ ಸ್ವಸ್ಥಾನಗಳಿಗೆ ತೆರಳಿ ಸಂತಸಪಟ್ಟರು.
    ಸ್ತೀಮೋಹದಿಂದ ಶಂಭನಿಶುಂಭರು ಲಯವಾದರೂ - ಅಹಂಕಾರ ಮಮಕಾರಗಳೇ ಶುಂಭ ನಿಶುಂಭರು. ವಿಷಯಾಸಕ್ತಿಯೇ ಸುಗ್ರೀವನು. ಕಾಮಕ್ರೋಧಗಳೇ ಚಂಡ ಮುಂಡರು. ವಾಸನಾತ್ರಯಗಳೇ ರಕ್ತಬೀಜನು ಇವರು ಮುಮುಕ್ಷುಗಳೆಂಬ ದೇವತೆಗಳ ಆತ್ಮ ಸ್ವರೂಪ ರಾಜ್ಯವನ್ನು ಕಸಿದುಕೊಂಡಿರುವರು. ಗುರುರೂಪ ದೇವಿಯು ಜ್ಞಾನವೈರಾಗ್ಯಗಳನ್ನು ಉಪದೇಶಿಸಿ, ಅಹಂಕಾರ ಮಮಕಾರಾದಿ ರೂಪದ ರಾಕ್ಷಸರನ್ನು ಸಂಹರಿಸಿ ಆತ್ಮರೂಪ ರಾಜ್ಯವನ್ನು ಅವರಿಗೆ ಕೊಡಿಸಿದಳು. ಅಂಥ ದೇವಿಯನ್ನು ಸ್ತುತಿಸಿ ಕೃತಾರ್ಥರಾಗೋಣ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ