ಗುರುಪೂರ್ಣಿಮೆಯ ತತ್ತ್ವ

ಯಸ್ಮಾತ್ ಪರತರಂ ನಾಸ್ತಿ ನೇತಿ ನೇತೀತಿ ವೈ ಶ್ರುತಿಃ |
ಮನಸಾ ವಚಸಾ ಚೈವ ಸರ್ವದಾರಾಧಯೇದ್ ಗುರುಮ್ ||

    ಗುರುಗೀತೆಯ ಈ ಉಪದೇಶವು ಸರ್ವರಿಗೂ ಮನನೀಯವಾಗಿದೆ. ಮಾನವನಿಗೆ ಹುಟ್ಟಿನಿಂದ ಜೀವಿತಕಾಲವು ಪೂರ ಗುರುವಿನ ಅವಶ್ಯಕತೆ ಇದೆ. ತಾನು ಎಲ್ಲವನ್ನೂ ತಿಳಿದು, ಬೇರೊಬ್ಬರು ತನ್ನನ್ನು ಗುರುವೆಂದು ಗೌರವಿಸಿದರೂ ಸಂಬೋಧಿಸಿದರೂ ಪ್ರಾಜ್ಞನಾದವನು ನಾಚಿಕೆ ಪಟ್ಟುಕೊಳ್ಳುತ್ತಾನೆ. ಏಕೆಂದರೆ ಕಲಿಯಬೇಕಾದದ್ದು ಆಪಾರವಾಗಿದ್ದರೂ ಜನರು ನನ್ನನ್ನೇಕೆ ಗುರುವೆಂದು ಸಂಬೋಧಿಸುತ್ತಾರೆ? ನನಗೇಕೆ ನಮಸ್ಕರಿಸುತ್ತಾರೆ? ಎಂಬಿದೇ ಅವನ ಅಭಿಪ್ರಾಯವಾಗಿರುತ್ತದೆ. ಇದು ಸರಿ ನಮ್ರನಾಗುವದರಿಂದಲೇ ಉನ್ನತಿಯನ್ನು ಹೇಗೆ ಫಲಭರಿತವಾದ ಗಿಡಗಳು ಬಗ್ಗುವವೋ, ಹಾಗೆ ಬಗ್ಗುವದರಿಂದಲೇ ಅವು ಜನರಿಗೆ ಪ್ರಿಯವಾಗುವವೋ ಹಾಗೆ - ಮಾನವನೂ ಗೌರವವನ್ನು ಪಡೆಯುತ್ತಾನೆ. ಗೌಡಪಾದರೂ ತಮ್ಮ ಕಾರಿಕೆಗಳಲ್ಲಿ 'ವಿಪ್ರಾಣಾಂ ವಿನಯೋ ಹ್ಯೇಷಃ' (ವಿನಯವೆಂಬಿದೇ ವಿಪ್ರತ್ವದ ಗುರುತು) ಎಂದಿದ್ದಾರೆ. ಕನ್ನಡದಲ್ಲಿಯೂ ಇದೇ ಅರ್ಥದಲ್ಲಿ 'ತುಂಬಿದ ಕೊಡ ತುಳುಕುವದಿಲ್ಲ' ಎಂಬ ಗಾದೆಯನ್ನು ಬಳಸುತ್ತಾರೆ. ಇಂಥ ವ್ಯಕ್ತಿಗಳು ಕೇವಲ ವ್ಯಕ್ತಿಗಳಲ್ಲ ಭಗವಂತನ ವಿಭೂತಿಗಳೆನಿಸಿದ ಶಕ್ತಿಗಳು - ಎಂದು ತಿಳಿಯಬೇಕು. ಇಂಥವರನ್ನು ಗುರುತಿಸುವವರೂ ಸಹ ಅಷ್ಟೇ ದೊಡ್ಡವರಾಗಿತ್ತಾರೆ. ಈ ವರ್ಗದ ಮಹಾತ್ಮರನ್ನೆಲ್ಲ 'ಗುರು' ಎಂಬ ಪವಿತ್ರ ನಾಮದಿಂದ ನಮ್ಮ ಹಿಂದೂಸಂಸ್ಕೃತಿಯಲ್ಲಿ ಕರೆಯಲಾಗಿದೆ. ವರ್ಷಕ್ಕೊಮ್ಮೆ ಈ 'ಗುರುದೇವ'ರನ್ನು ಸ್ಮರಿಸಿಕೊಳ್ಳುವ ದಿನವೇ 'ಗುರುಪೂರ್ಣಿಮೆ'ಯೆನಿಸುವದು. "ಗುರುವಿಗಿಂತ ಹೆಚ್ಚಿನವರಾರೂ ಇಲ್ಲ. ಇದನ್ನೇ 'ಇನ್ನೂ ಮಿಗಿಲಾದುದಿಲ್ಲ' ಎಂದು ಶ್ರುತಿಯೂ ಘೋಷಿಸುತ್ತಿದೆ. ಆದ್ದರಿಂದ ತ್ರಿಕರಣಗಳಿಂದಲೂ ಗುರುವನ್ನೇ ಆರಾಧಿಸಬೇಕು" ಎಂಬಿದು ಮೇಲಿನ ಶ್ಲೋಕದ ಅಭಿಪ್ರಾಯವು.

    'ಧ್ಯಾನಮೂಲಂ ಗುರೋಮೂರ್ತಿಃ' ಎಂಬಲ್ಲಿ ಸಾಧಕನಿಗೆ ಬೇರೆ ದೇವರೇ ಬೇಡ; ಗುರುವಿನ ಸ್ವರೂಪವನ್ನೇ ಧ್ಯಾನಮಾಡಿದರೆ ಸಾಕು - ಎಂದು ತಿಳಿಸಲಾಗಿದೆ. ಇದು ಸಮಂಜಸವಾಗಿದೆ. ಏಕೆಂದರೆ ದೇವರು ನಮಗೆ ಪರೋಕ್ಷನಾಗಿದ್ದಾನೆ. ಗುರುವಾದರೋ ಪ್ರತ್ಯಕ್ಷನಾಗಿದ್ದಾನೆ ನಮ್ಮ ಭಾವನೆಗಳು ದೃಢವಾದಂತೆಲ್ಲ ಭಗವಂತನನ್ನೇ ಗುರುವಿನಲ್ಲಿ ಕಾಣುವವು. ಸಾರಥಿಯೂ ಸ್ನೇಹಿತನೂ ಆಗಿದ್ದ ಕೃಷ್ಣಭಗವಂತನೇ ಅರ್ಜುನನಿಗೆ ಗುರುವಾದನು ಅನಂತರ ದೇವರಾದನು ಇಂಥ ಗುರುವಿನ ಪಾದದ್ವಯಗಳೇ ಪೂಜಾಮೂಲವು ಆದ್ದರಿಂದಲೇ ಎಲ್ಲಾ ಗುರುಗಳನ್ನೂ 'ಶ್ರೀಪಾದಂಗಳವರು' ಎಂದೇ ಭಕ್ತರು ಸಂಬೋಧಿಸುತ್ತಾರೆ. ಗುರುವಿನ ಪಾದದ್ವಯಗಳಲ್ಲಿ ಭೋಗ-ವೋಕ್ಷ ಎಂಬ ಎರಡು ಸಂಪತ್ತುಗಳೂ ಅಡಗಿವೆ. ಆ ಪಾದದ್ವಯಗಳನ್ನು ಆಶ್ರಯಿಸಿದವನಿಗೆ ಇನ್ನು ದೊರಕಬೇಕಾದದ್ದಾದರೂ ಏನಿದ್ದೀತು? ಒಮ್ಮೆ ನಾರದರು ದ್ವಾರಕೆಗೆ ಶ್ರೀಕೃಷ್ಣನ ದರ್ಶನಕ್ಕೆ ಬಂದ ಕಾಲಕ್ಕೆ ಕೃಷ್ಣನು 'ದೇವರಪೂಜೆ' ಮಾಡುತ್ತಿದ್ದನಂತೆ ನಾರದರಿಗೆ ಆಶ್ಚರ್ಯವಾಗಿ 'ಭಗವಂತನೆ, ನಿನ್ನ ದೇವರು ಯಾವದು? ತೋರಿಸು" ಎಂದಾಗ ಕೃಷ್ಣನು ಸಂಪುಟಗಳನ್ನು ಬಿಚ್ಚುತ್ತಾ ಕಡೆಗೆ ಚಿಕ್ಕ ಸಂಪುಟವನ್ನು ತೆರೆದು ತೋರಿಸಿದನಂತೆ ಅದರಲ್ಲಿ ಒಂದಿಷ್ಟು ಮಣ್ಣು ಇತ್ತು. ಇದೇನು? ಎಂದು ನಾರದರು ಹೇಳಿದ್ದಕ್ಕೆ 'ಪೂಜ್ಯರೆ, ಇದು ತಮ್ಮಂಥ ಮಹಾತ್ಮರ ಪಾದ ಧೂಳಿ; ಇದೇ ನನ್ನ ದೇವರು' ಎಂದನಂತೆ ಹೀಗೆದೆ, ಗುರುಪಾದದ ಮಹಿಮೆ, ಸಾಧಕನು ಇದನ್ನಲ್ಲದೆ ಬೇರೇನನ್ನು ಪೂಜಿಸಲಾದೀತು?
    ಇನ್ನು 'ಮಂತ್ರಮೂಲಂ ಗುರೋರ್ವಾಕ್ಯಮ್ : ಮೋಕ್ಷಮೂಲಂ ಗುರೋಃ ಕೃಪಾ' - ಎಂಬ ಭಾಗವನ್ನು ವಿಚಾರ ಮಾಡೋಣ. ಗುರುವಿನ ಉಪದೇಶವಾಕ್ಯವನ್ನೇ ಮಂತ್ರವೆಂದು ತಿಳಿಯಬೇಕು ಏಕೆಂದರೆ ಗುರುವು ಶಿಷ್ಯನಿಗೆ ತನ್ನ ಮಾತಿನಲ್ಲಿ ಮಂತ್ರಾರ್ಥವನ್ನೇ ಅಡಗಿಸಿರುತ್ತಾನೆ ಅಥವಾ ಆತನ ಮುಖದಿಂದ ಹೊರಬೀಳುವ ವಾಕ್ಯಗಳೆಲ್ಲವೂ ಮಂತ್ರರೂಪವೇ ಆಗಿರುವವು. ಶಿಷ್ಯನು ಇದನ್ನು ಸ್ವೀಕರಿಸಿದ ಶಿಷ್ಯನು ಅದನ್ನು ಮನನಮಾಡಬೇಕು. ಮನನಮಾಡುವನನ್ನು ಕಾಪಾಡುತ್ತದೆ (ಮಂತಾರಂ ತ್ರಾಯತೇ) ಎಂಬ ಕಾರಣದಿಂದಲೇ ಗುರೊಪದೇಶವನ್ನು ಮಂತ್ರವೆಂದು ಕರೆಯಲಾಗಿದೆ. ಹೇಗೆ ಮ್ಯಾಜಿಸ್ಟ್ರೇಟರು 'ನಿನಗೆ ಒಂದು ಸಾವಿರ ರೂ. ಜುಲ್ಮಾನೆ ಹಾಕಿದ್ದೇನೆ' ಎಂದು ಸೀಟಿನಲ್ಲಿ ಕುಳಿತು ಹೇಳಿದಾಗ ಹೇಗೆ ಜಾರಿಗೆ ಬರುತ್ತದೆಯೋ ಹಾಗೆಯೇ ಗುರುವಾಗಿ ಕುಳಿತು ಹೇಳುವವನ ಮಾತು ಮಂತ್ರವಾಗಿ ಪರಿಣಮಿಸುತ್ತದೆ ಇಂಥ ಗುರುವು ಮಂತ್ರೋಪದೇಶವನ್ನು ನೀಡಿ ಕೃಪೆಮಾಡಿದರೆ ಅದು ಮುಕ್ತಿಗೆ ಸಾಧನವಾಗುತ್ತದೆ ಆದ್ದರಿಂದಲೇ 'ನ ಗುರೋರಧಿಕಮ್' ಜಗತ್ತಿನಲ್ಲಿ ಗುರುವಿಗಿಂತ ಹೆಚ್ಚಿನವರು ಯಾರು ಇಲ್ಲ ಎಂದು ಸ್ತುತಿಸಲಾಗಿದೆ ದಾಸರು ಸಹ 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂದು ಹಾಡಿರುತ್ತಾರೆ ಇಂಥ ಗುರುತತ್ತ್ವವನ್ನರಿತು ಪ್ರತಿಯೊಬ್ಬರೂ ಗುರುಪೂರ್ಣಿಮೆಯ ದಿನ ತಮ್ಮ ತಮ್ಮ ಗುರುಗಳನ್ನು ಆರಾಧಿಸಿ ಗುರು ಕೃಪಾಪಾತ್ರರಾಗಬೇಕು.

    ಭಾರತದೇಶದಲ್ಲಿ ಋಷಿಗಳು, ಸಾಧುಗಳು, ಸಂನ್ಯಾಸಿಗಳು - ವರ್ಷಾಕಾಲದಲ್ಲಿ ಪರೋಪಕಾರಾರ್ಥವಾದ ತಮ್ಮ ಸಂಚಾರಕ್ರಮವನ್ನು ನಿಲ್ಲಿಸಿ ಎಲ್ಲಿಯಾದರೂ ಒಂದು ಸ್ಥಳದಲ್ಲಿ  ಚಾತುರ್ಮಾಸ್ಯವನ್ನು ಕಳೆಯುವ ಪದ್ಧತಿಯು ವೈದಿಕರುಗಳಲ್ಲಿಯೂ ಅವೈದಿಕರುಗಳಲ್ಲಿಯೂ ಸಂಪ್ರದಾಯಸಿದ್ಧವಾಗಿ ನಡೆದುಕೊಂಡುಬರುತ್ತಿದೆ. ಆಯಾ ಮತದ ಸಾಧುಸಂತರುಗಳಿಗೆ ಬೇಕಾದ ಉಪಚಾರಗಳನ್ನು ಏರ್ಪಡಿಸುವದು ಮಹಾಪುಣ್ಯಪ್ರದವೆಂದು ಶ್ರದ್ಧಾವಂತರಾದ ಶ್ರೋತೃ ಜನಗಳು ನಂಬಿಕೊಂಡುಬಂದಿರುತ್ತಾರೆಂಬುದು ಪುರಾಣಾದಿಗಳಿಂದ ಪ್ರಸಿದ್ಧವಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಆ ಮಹಾತ್ಮರುಗಳು ತಮ್ಮತಮ್ಮ ಗುರುಸಂಪ್ರದಾಯಗಳ ಸ್ಮಾರಕವಾದ ಆಯಾ ಆಚಾರಗಳನ್ನು ನಡೆಸುವಾಗ ಶಿಷ್ಯರುಗಳ ಅನುಗ್ರಹಾರ್ಥವಾಗಿ ಉಪದೇಶಗಳನ್ನು ಕ್ಲೃಪ್ತಕಾಲಗಳಲ್ಲಿ ಏರ್ಪಡಿಸುವದು, ಶಿಷ್ಯರುಗಳು ಶ್ರದ್ಧಾಭಕ್ತಿಗಳಿಂದ ಅವರ ಉಪದೇಶಗಳನ್ನು ಶ್ರವಣಮಾಡಿ ಕೃತಾರ್ಥರಾಗುವದು ರೂಢಿಯಲ್ಲಿದೆ. ವ್ಯಾಸಪೂರ್ಣಿಮೆ ಅಥವಾ ಗುರುಪೂರ್ಣಿಮೆ ಎಂಬ ಹೆಸರಿನಿಂದ ಪ್ರಖ್ಯಾತವಾಗಿರುವ ಪುಣ್ಯತಿಥಿಯು ಸನಾತನಸಂಪ್ರದಾಯದ ವೈದಿಕರು ಎಂದೆಂದಿಗೂ ಸ್ಮರಣೆಯಲ್ಲಿಡತಕ್ಕದ್ದಾಗಿದೆ.

    ವ್ಯಾಸಪೂರ್ಣಿಮೆಯು ವೇದಗಳನ್ನು ವಿಂಗಡಿಸಿ ವೈಶಂಪಾಯನಾದಿಗಳಿಗೆ ಉಪದೇಶಿಸಿದ, ಜಗತ್ತಿನಲ್ಲೆಲ್ಲ ಗ್ರಂಥಪ್ರಮಾಣದಿಂದಲೂ ಅಭಿಪ್ರಾಯವಿಶೇಷದಿಂದಲೂ ಅನ್ವರ್ಥವಾಗಿ ಮಹಾಭಾರತವೆನಿಸಿರುವ ಗ್ರಂಥವನ್ನು ನಿರ್ಮಾಣ ಮಾಡಿರುವ, ಪ್ರಾತಃಸ್ಮರಣೀಯರಾಗಿರುವ ಕೃಷ್ಣದ್ವೈಪಾಯನಾಚಾರ್ಯರನ್ನು ಗೌರವಿಸುವ ತಿಥಿವಿಶೇಷವು. ನಮ್ಮ ದೇಶದ ವೈದಿಕಸಂನ್ಯಾಸಿಗಳು ಅಂದು ವ್ಯಾಸ ಮಹರ್ಷಿಗಳನ್ನೂ ತಮ್ಮ ತಮ್ಮ ಗುರುಗಳನ್ನೂ ಪೂಜಿಸಿ ಸ್ಮರಿಸುವರು ಯಾವ ಯಾವ ಶಾಸ್ತ್ರದಲ್ಲಿ ಯಾರು ಯಾರು ಯಾವ ಯಾವ ವಿಷಯವಿಶೇಷಗಳನ್ನು ಉಪದೇಶಿಸಿದ್ದರೂ ಅದೆಲ್ಲವೂ ವ್ಯಾಸರ ಅನುಗ್ರಹವೇ ಎಂಬ ಭಾವನೆಯಿಂದ ಆ ದಿವಸ ಪ್ರತಿಯೊಂದು ವಿದ್ಯಾಸ್ಥಾನದ ಉಪಭಾಗವನ್ನು ತಮ್ಮತಮ್ಮ ಗುರುಗಳಿಂದ ಪಡೆದುಕೊಮಡಿರುವವರ ಕೃತಜ್ಞತೆಯ ಚಿಹ್ನೆಯಾಗಿ ಭಕ್ತರು ತಮ್ಮತಮ್ಮ ಗುರುಗಳನ್ನು ವ್ಯಾಸಬುದ್ಧಿಯಿಂದ ಪೂಜಿಸುವರು ವೇದಸ್ಮೃತಿಪುರಾಣಗಳ ಸಾರವೆಲ್ಲವೂ ಮುಖ್ಯವಾದ ವೇದವೇದಾಂತಗಳ ತಿರುಳೆಲ್ಲವೂ ಮಹಾಭಾರತದಲ್ಲಿ ಒಂದಲ್ಲ ಒಂದು ರೂಪದಲ್ಲಿ ಇದ್ದು ಕೊಂಡಿರುವದರಿಂದ ವ್ಯಾಸಪೂಜೆಯನ್ನು ಅಥವಾ ವ್ಯಾಸರ ಪ್ರತೀಕವಾಗಿ ತಮ್ಮ ತಮ್ಮ ಗುರುಗಳ ಆರಾಧನೆಯನ್ನು ನಮ್ಮ ದೇಶದವರು ಇಟ್ಟುಕೊಂಡಿರುವದು ಇಹಪರಶ್ರೇಯಸ್ಸಾಧನೆಗೂ ಈ ದೇಶದ ಸಂಸ್ಕೃತಿಯನ್ನು ಕಾಪಾಡಿ ಕೊಂಡುಬರುವದಕ್ಕೂ ಒಂದು ದೊಡ್ಡ ಸಾಧನವಾಗಿರುತ್ತದೆ - ಎಂಬುದರಲ್ಲಿ ಸಂಶಯವಿಲ್ಲ.
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುದೇವ ಮಹೇಶ್ವರಃ |
ಗುರುಸ್ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರುವೇ ನಮಃ ||
    ಎಂಬುದಾಗಿ ನಮ್ಮ ದೇಶದವರು ಗುರುಭಕ್ತಿಯ ಮಹತ್ತ್ವದ ಸರ್ವ ಸಾರವನ್ನೂ ಹಿಂಡಿಟ್ಟಿರುವ ಈ ಶ್ಲೋಕವನ್ನು ದಿನದಿನವೂ ಸ್ಮರಿಸುವದು ಗುರುಪೂರ್ಣಿಮೆಯ ಅನುಷ್ಠಾನಪರಿಪಾಲನೆಗೆ ಸರಿಸಮಾನವಾದ ಒಂದು ಪವಿತ್ರಕಾರ್ಯವಾಗಿದೆ.

Comments

  1. Present day concept of Guru is totally different. In fact there is nosuch concept GURU today. He is a teacher Lecturer professor or an Instructor. They impart a fixed knowledge of your choice. All of it is mundane. Non of them profess to lead you to GOD an unknown entity.

    ReplyDelete
  2. Present day concept of Guru is totally different. In fact there is nosuch concept GURU today. He is a teacher Lecturer professor or an Instructor. They impart a fixed knowledge of your choice. All of it is mundane. Non of them profess to lead you to GOD an unknown entity.

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ