ಜೀವನ್ಮುಕ್ತಾನಂದ ಲಹರಿ
ಪುರೇ ಪೌರಾನ್ ಪಶ್ಯನ್ನರಯುವತಿನಾಮಾಕೃತಿಮಯಾನ್ ಸುವೇಷಾನ್ ಸ್ವರ್ಣಾಲಂಕರಣಕಲಿತಾಂಶ್ಚಿತ್ರಸದೃಶಾನ್ | ಸ್ವಯಂ ಸಾಕ್ಷೀ ದ್ರಷ್ಟೇತ್ಯಪಿ ಚ ಕಲಯಂಸ್ತೈಃ ಸಹ ರಮನ್ ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||1|| ಪುರದಲ್ಲಿ ಸ್ತ್ರೀಪುರುಷರೆಂಬ ನಾಮರೂಪಗಳಿಂದೊಡಗೂಡಿ ಉತ್ತಮ ವೇಷಗಳಿಂದಲೂ ಚಿನ್ನದ ಭೂಷಣಗಳಿಂದಲೂ ಕೂಡಿರುವ ಚಿತ್ರದಂತೆ ಕಾಣುತ್ತಿರುವ ಪುರಜನರನ್ನು ಕಾಣುತ್ತಾ, ತಾನು ಸಾಕ್ಷಿಯಾದ ದ್ರಷ್ಟೃವೆಂದು ತಿಳಿದುಕೊಂಡು ಅವರೊಡನೆ ಆಡುತ್ತಿರುವ, ಗುರುರೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ. ವನೇ ವೃಕ್ಷಾನ್ ಪಶ್ಯನ್ ದಲಫಲಭರಾನ್ನಮ್ರಸುಶಿಖಾನ್ ಘನಚ್ಛಾಯಾಚ್ಛನ್ನಾನ್ ಬಹುಲಕಲಕೂಜದ್ದ್ವಿಜಗಣಾನ್ | ಭಜನ್ ಘಸ್ರೇ ರಾತ್ರಾವವನಿತಲತಲ್ಪೈಕಶಯನೋ ಮುನಿರ್ವ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||2|| ಅರಣ್ಯದಲ್ಲಿ ಎಲೆ, ಹಣ್ಣು - ಇವುಗಳಿಂದ ತುಂಬಿ, ಬಾಗಿರುವ ಕೊಂಬೆಗಳುಳ್ಳವಾಗಿ, ದಟ್ಟವಾದ ನೆರಳಿನಿಂದ ಮರೆಯಾಗಿರುವ, ಮರಗಳನ್ನು ಕಾಣುತ್ತಾ ಬಹಳ ಇಂಪಾಗಿ ದನಿಗೈಯುತ್ತಿರುವ ಪಕ್ಷಿಗಳ ಗುಂಪುಗಳನ್ನು ಸೇವಿಸುತ್ತಾ, ಹಗಲಲ್ಲೂ ರಾತ್ರೆಯಲ್ಲಿಯೂ ಭೂತಲವೆಂಬ ಒಂದೇ ಹಾಸಿಗೆಯಲ್ಲಿ ಮಲಗುತ್ತಿರುವನಾಗಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ. ಕದಾಚಿತ್ ಪ್ರಾಸಾದೇ ಕ್ವಚಿದಪಿ ಚ ಸೌಧೇಷು ಧನಿನಾಂ ಕದಾ ಕಾಲೇ ಶೈಲೇ ಕ್ವಚಿದಪಿ ಚ ಕೂಲೇಷು ಸರಿತಾಮ್...