ವೃಕ್ಷರಾಜಃ ಅಶ್ವತ್ಥಃ


ಶ್ರೀಕೃಷ್ಣ ಪರಮಾತ್ಮ ಶ್ರೀಮದ್ಭಗವದ್ಗೀತೆಯ 10ನೇ ಅಧ್ಯಾಯವಾದ ವಿಭೂತಿ ಯೋಗದ ಇಪ್ಪತ್ತಾರನೇ ಶ್ಲೋಕದಲ್ಲಿ ಹೀಗೆ ಹೇಳಿದ್ದಾನೆ.
ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ |
ಗಂಧರ್ವಾಣಾಂ ಚಿತ್ರರಥಃ ಸಿದ್ದಾನಾಂ ಕಪಿಲೋ ಮುನಿಃ ||
ಅಂದರೆ ಎಲ್ಲಾ ವೃಕ್ಷಗಳಲ್ಲಿ ಅಶ್ವತ್ಥವೃಕ್ಷವೂ, ದೇವರ್ಷಿಗಳಲ್ಲಿ ನಾರದಮುನಿಯೂ, ಗಂಧರ್ವರಲ್ಲಿ ಚಿತ್ರರಥನು ಮತ್ತು ಸಿದ್ದರಲ್ಲಿ ಕಪಿಲಮುನಿಯೂ ಆಗಿದ್ದೇನೆ ಎಂದಿದ್ದಾನೆ ಕೃಷ್ಣಪರಮಾತ್ಮ. ಕಾರಣ - ಅಶ್ವತ್ಥವೃಕ್ಷವು ಸಮಸ್ತ ವನಸ್ಪತಿಗಳಲ್ಲಿ ರಾಜನಾಗಿದೆ ಮತ್ತು ಪೂಜನೀಯವೆಂದು ತಿಳಿಯಲಾಗಿದೆ. ಅದಕ್ಕಾಗಿ ಭಗವಂತನು ಅಶ್ವತ್ಥವೃಕ್ಷವನ್ನು ತನ್ನ ಸ್ವರೂಪವೆಂದ ಹೇಳಿದ್ದಾನೆ.
ಪುರಾಣಗಳಲ್ಲಿ ಅಶ್ವತ್ಥದ ಮಹಾತ್ಮೆಯು ಹೇರಳವಾಗಿ ಸಿಗುತ್ತದೆ. ಸ್ಕಂದ ಪುರಾಣದಲ್ಲಿ ಹೀಗ ಹೇಳಿದೆ -
ಮೂಲೇ ವಿಷ್ಣುಃ ಸ್ಥಿತೋ ನಿತ್ಯಂ ಸ್ಕಂಧೇ ಕೇಶವ ಏವ ಚ |
ನಾರಾಯಣಸ್ತು ಶಾಖಾಸು ಪತ್ರೇಷು ಭಗವಾನ್ ಹರಿಃ ||
ಫಲೇಚ್ಯುತೋ ನ ಸಂದೇಹಃ ಸರ್ವದೇವೈಃ ಸಮನ್ವಿತಃ |
ಸ ಏವ ವಿಷ್ಣುರ್ದ್ರುಮ ಏವ ಮೂರ್ತೌ ಮಹಾತ್ಮಭಿಃ ಸೇವಿತಪುಣ್ಯಮೂಲಃ |
ಯಸ್ಯಾಶ್ರಮ ಪಾಪಸಹಸ್ರಹಂತಾ ಭವೇನ್ನೃಣಾಂ ಕಾಮದುಘೋ ಗುಣಾಢ್ಯಃ ||
ಅಶ್ವತ್ಥದ ಮೂಲದಲ್ಲಿ ವಿಷ್ಣುವು, ಕಾಂಡದಲ್ಲಿ ಕೇಶವನೂ, ರೆಂಬೆಗಳಲ್ಲಿ ನಾರಾಯಣನೂ, ಎಲೆಗಳಲ್ಲಿ ಭಗವಾನ್ ಶ್ರೀಹರಿಯು ಮತ್ತು ಫಲದಲ್ಲಿ ಎಲ್ಲ ದೇವತೆಗಳೊಂದಿಗೆ ಅಚ್ಚುತನು ಸದಾ ವಾಸಮಾಡುತ್ತಾರೆ. ಇದರಲ್ಲಿ ಯಾವ ಸಂದೇಹವು ಇಲ್ಲ. ಈ ವೃಕ್ಷವು ಮೂರ್ತಿಮಂತ ಶ್ರೀ ವಿಷ್ಣು ರೂಪವಾಗಿದೆ. ಮಹಾತ್ಮರು ಈ ವೃಕ್ಷದ ಪುಣ್ಯಮಯ ಮೂಲದ ಸೇವೆ ಮಾಡುತ್ತಾರೆ. ಇದರ ಗುಣಗಳಿಂದ ಕೂಡಿದ ಮತ್ತು ಕಾಮನಾದಾಯಕ ಆಶ್ರಯವು ಮನುಷ್ಯರ ಸಾವಿರಾರು ಪಾಪಗಳನ್ನು ನಾಶಮಾಡುವಂತಹುದಾಗದೆ.
ಇದಲ್ಲದೇ ವೈದ್ಯಕೀಯ ಗ್ರಂಥಗಳಲ್ಲಿಯೂ ಅಶ್ವತ್ಥದ ಮಹಿಮೆ ತುಂಬಾ ಇದೆ. ಇದರ ಎಲೆ-ಫಲ-ತೊಗಟೆ ಎಲ್ಲಾ ರೋಗನಾಶಕವಾಗಿದೆ. ರಕ್ತವಿಕಾರ, ಕಫ, ವಾತ, ಪಿತ್ತ, ದಾಹ, ವಮನ, ಅರುಚಿ, ವಿಷದೋಷ, ಕೆಮ್ಮು, ವಿಷಮಜ್ವರ, ಬಿಕ್ಕಳಿಕೆ, ಉರಃಕ್ಷತ, ನಾಸಾರೋಗ, ವಿಸರ್ಪ, ಕೃಮಿ, ಕುಷ್ಟ, ತ್ವಚಾವ್ರಣ, ಅಗ್ನಿದಗ್ದವ್ರಣ ಮೊದಲಾದ ಅನೇಕ ರೋಗಗಳಲ್ಲಿ ಇದರ ಉಪಯೋಗವಾಗುತ್ತದೆ ಎಂದು ತಿಳಿದುಬರುತ್ತದೆ.
ಅಲ್ಲದೆ ಈ ಮರದ ಬುಡದಲ್ಲಿ ಬ್ರಹ್ಮನಿದ್ದಾನೆಂದೂ, ಮಧ್ಯದಲ್ಲಿ ವಿಷ್ಣು ಇದ್ದಾನೆಮದೂ, ತುದಿಯಲ್ಲಿ ಶಿವನಿದ್ದಾನೆಂದು ಆದ್ದರಿಂದಲೇ ಈ ಮರ ವೃಕ್ಷಗಳ ರಾಜನೆಂದೂ ಜನ ನಂಬಿದ್ದಾರೆ ಅದಕ್ಕೇ
ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯ ತೇ ನಮಃ ||
ಎಂದು ಹೇಳಿಕೋಂಡು ಅರಳೀಮರ ಅಂದರೆ ಅಶ್ವತ್ಥಕಟ್ಟೆಯನ್ನು ಸುತ್ತುವುದು ಅರ್ಥಾತ್ ಪ್ರದಕ್ಷಿಣೆ ಮಾಡುವುದು ರೂಢಿಯಲ್ಲಿದೆ.
ಸಸ್ಯಶಾಸ್ತ್ರಜ್ಞರ ಪ್ರಕಾರ, ಬೇವಿನಮರದಲ್ಲಿ ಗೋಂದು ಬರುವುದರಿಂದ ಇದು ಸ್ತೀ ಜಾತಿಗೆ ಸೇರಿದದು, ಅಶ್ವತ್ಥವೃಕ್ಷದಲ್ಲಿ ಈ ಗೋಂದು ದೊರಕುವುದಿಲ್ಲ. ಆದ್ದರಿಂದ ಇದು ಪುರುಷ ಜಾತಿಗೆ ಸೇರಿದ್ದು. ಆದ್ದರಿಂದ ಅರಳೀಮರಕ್ಕೂ, ಬೇವಿನ ಮರಕ್ಕೂ ಮದುವೆ ಮಾಡುವ ಪದ್ಧತಿಯಿದೆ. ಅಲ್ಲದೆ ಅಶ್ವತ್ಥವೃಕ್ಷವು ದೀರ್ಘಕಾಲ ಜೀವಿಸುವುದರಿಂದ ಇದರ ಬುಡದಲ್ಲಿ ನಾಗರ ಪ್ರತಿಷ್ಠೆ ಮಾಡಿ ಪೂಜಿಸುವ ಪದ್ಧತಿಯಿದೆ. ವಧು-ವರರು ಮದುವೆಯಾದ ನಂತರ ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಹಾಕುವುದು ಇಂದಿಗೂ ಅನೇಕ ಕಡೆ ರೂಢಿಯಲ್ಲಿದೆ. ತಮ್ಮ ಇಷ್ಟಾರ್ಥಸಿದ್ದಿಗಾಗಿ ಮುಂಜಾನೆ ಅಶ್ವತ್ಥಪ್ರದಕ್ಷಿಣೆ ಮಾಡುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ.
ಅಲ್ಲದೇ ವಿಜ್ಞಾನಿಗಳು ಈ ಅರಳೀಮರದಿಂದ ಹೇರಳವಾಗಿ ಆಮ್ಲಜನಕ ಬಿಡುಗಡೆಯಾಗುವುದರಿಂದ ಈ ಮರದ ಪ್ರದಕ್ಷಿಣೆ ಮಾಡುವವರ ಆರೋಗ್ಯ ಸುಧಾರಿಸುತ್ತದೆ ಎನ್ನುತ್ತಾರೆ. ಭೀಕರ ಕ್ಷಾಮ ಬಂದಾಗಲೂ ಸಹ ಈ ಮರ ಚಿಗುರುವುದರಿಂದ ಈ ಮರದ ಎಲೆ, ಗೋವುಗಳಿಗೆ ಆಹಾರವಾಗಿ ಗೋರಕ್ಷಣೆ ಮಾಡುತ್ತದೆ ಎಂಬುದು ಹಳ್ಳಿಗಳ ವಯೋವೃದ್ಧರಿಂದ ತಿಳಿದುಬರುತ್ತದೆ.
ಅಲ್ಲದೇ ಯಜ್ಞ, ಯಾಗ, ಹೋಮಗಳಲ್ಲಿ ಈ ಮರದ ಸಮಿತ್ತು ಅಂದರೆ ಒಣಗಿದ ಅರಳೀಕಡ್ಡಿಯನ್ನು ಉಪಯೋಗಿಸುತ್ತಾರೆ. ಗಾದೆಯಲ್ಲಿಯೂ ಸಹ ಅರಳೀಮರ ಉದಾಹರಿಸುತ್ತಾರೆ - ಅಲಲಾ ಎಂಬ ಅರಳೀಮರ ನಂಬಹುದು, ಆದರೆ ಕಳ್ಳೀಮರ ನಂಬಲಾಗದು ಎಂದು.
ಶ್ರೀರಾಮಚಂದ್ರನು ಹರಸಿದುದರಿಂದ, ಅಶ್ವತ್ಥವೃಕ್ಷ - ವೃಕ್ಷಗಳ ರಾಜ ಹಾಗೂ ಪವಿತ್ರ ವೃಕ್ಷವಾಯಿತೆಂದು ಪ್ರತೀತಿ, ಕಥೆ ಇಂತಿದೆ -
ಶ್ರೀರಾಮಚಂದ್ರನ ಆಸ್ಥಾನದಲ್ಲಿ ನರ್ತನ ನಡೆಯುತ್ತಿರುವಾಗ ಒಬ್ಬ ಸಭಿಕ ನಕ್ಕನೆಂದು, ಆಗ ಶ್ರೀರಾಮ ಕೋಪಗೊಂಡು ತನ್ನ ರಾಜ್ಯದಲ್ಲಿ ಯಾರೂ ಹಾಸ್ಯ ಮಾಡಬಾರದೆಂದು ಆಜ್ಞೆ ಮಾಡಿದನು. ಸಭೆ ಸಮಾರಂಭ, ನಿಲ್ಲಿಸಲ್ಪಟ್ಟವು. ಇದರಿಂದ ಚಿಂತಾಕ್ರಾಂತರಾದ ದೇವತೆಗಳು ಬ್ರಹ್ಮದೇವನನ್ನು ಮೊರೆಹೊಕ್ಕರು. ದೇವತೆಗಳ ಮೊರೆಗೆ ಸ್ಪಂದಿಸಿದ ಬ್ರಹ್ಮದೇವನು ಅಯೋಧ್ಯಾನಗರದ ಬಳಿಯಲ್ಲಿದ್ದ ಒಂದು ಅಶ್ವತ್ಥವೃಕ್ಷದ ಬಳಿಗೆ ಬಂದು ನಿಂತು, ದಾರಿಯಲ್ಲಿ ಹೋಗುವವರನ್ನೆಲ್ಲಾ ನಗಿಸುತ್ತಿದ್ದನು. ಹಾಗೆ ನಗಿಸಲ್ಪಟ್ಟವರಲ್ಲಿ ಒಬ್ಬನು ರಾಜಸಭೆಯಲ್ಲಿ ಶ್ರೀರಾಮನ ಆಜ್ಞೆಯನ್ನು ಮರೆತು ನಕ್ಕುಬಿಟ್ಟನು. ಆಗ ಶ್ರೀರಾಮ ಕೋಪಗೊಳ್ಳಲು, ವೃಕ್ಷದ ಬಳಿಯಲ್ಲಿ ನಡೆದ ಘಟನೆಯನ್ನು ವಿವರಿಸಲಾಗಿ ತಕ್ಷಣವೇ ಅಶ್ವತ್ಥವೃಕ್ಷವನ್ನು ಕಡಿದು ಹಾಕಲು ಆಜ್ಞೆ ಮಾಡಿದನು. ಸೇವಕರು ವೃಕ್ಷ ಸಮೀಪಿಸುತ್ತಿದ್ದಂತೆ, ಬ್ರಹ್ಮನ ಆಜ್ಞೆಯಂತೆ ಮರದಿಂದ ಕಲ್ಲಿನ ಮಳೆ ಸುರಿಯಲಾರಂಬಿಸಿತು. ಈ ವಿಷಯ ತಿಳಿದ ಶ್ರೀರಾಮಚಂದ್ರನು ತಾನೇ ಆ ವೃಕ್ಷವನ್ನು ಧ್ವಂಸಮಾಡುವುದಾಗಿ ಹೇಳಿ ಅಲ್ಲಿಗೆ ಬಂದನು.
ಬ್ರಹ್ಮನು ವೃಕ್ಷದ ಮೂಲದಲ್ಲಿಯೂ, ಹರಿಯು ವೃಕ್ಷದ ಮಧ್ಯದಲ್ಲಿಯೂ ಹರನು ಅಗ್ರದಲ್ಲಿಯೂ, ಸಮಸ್ತ ದೇವತೆಗಳು ಎಲೆಗಳಲ್ಲಿಯೂ, ಸೇರಿಕೊಂಡಿರುವುದನ್ನು ಗ್ರಹಸಿದವನಾದ ಶ್ರೀರಾಮಚಂದ್ರನು ಇಡೀ ದೇವಸ್ತೋಮವೇ ಈ ವೃಕ್ಷವನ್ನು ಆಶ್ರಯಿಸಿರುವುದರಿಂದ ಈ ವೃಕ್ಷವು ವೃಕ್ಷಗಳಿಗೆಲ್ಲಾ ರಾಜವೃಕ್ಷವಾಗಲಿ, ಯಾರು ಈ ಅಶ್ವತ್ಥವೃಕ್ಷವನ್ನು ಅನನ್ಯ ಭಕ್ತಿಯಿಂದ ಪೂಜಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರಲಿ ಎಂದು ಹರಸಿ ಅರಮನೆಗೆ ಹಿಂತಿರುಗಿದನು.
ಹೀಗೆ ಅಶ್ವತ್ಥವೃಕ್ಷದಲ್ಲಿ ಸಮಸ್ತ ದೇವಕೋಟಿಯು ನೆಲೆಸಿರುವುದರಿಮದ ಇದು ಒಂದು ಪವಿತ್ರ ವೃಕ್ಷವಾಗಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ