ಶ್ರೀರಾಮಹೃದಯ
ಯಃ ಪೃಥ್ವೀಭರವಾರಣಾಯ ದಿವಿಜೈಃ ಸಂಪ್ರಾರ್ಥಿತಶ್ಚಿನ್ಮಯಃ
ಸಂಜಾತಃ ಪೃಥವೀತಲೇ ರವಿಕುಲೇ ಮಾಯಾಮನುಷ್ಯೋವ್ಯಯಃ
ನಿಶ್ಚಕ್ರಂ ಹತರಾಕ್ಷಸಃ ಪುನರಗಾದ್ ಬ್ರಹ್ಮತ್ವಮಾದ್ಯಂ ಸ್ಥಿರಾಂ
ಕೀರ್ತಿಂ ಪಾಪಹರಾಂ ವಿಧಾಯ ಜಗತಾಂ ತಂ ಜಾನಕೀತಂ ಭಜೇ ||1||
ಭೂಮಿಯ ಭಾರವನ್ನು ಇಳಿಸಿಕೊಡಬೇಕೆಂದು ದೇವತೆಗಳು ಪ್ರಾರ್ಥಿಸಲಾಗಿ ಯಾವ ಚಿತ್ಸ್ವರೂಪನಾದ ಪರಮಾತ್ಮನು ತಾನು ಅವ್ಯಯನಾಗಿದ್ದರೂ ಮಾಯೆಯಿಂದ ಮನುಷ್ಯನಾಗಿ ಈ ಭೂಮಂಡಲದಲ್ಲಿ ಸೂರ್ಯವಂಶದಲ್ಲಿ ಅವತರಿಸಿ ಚಕ್ರಾಯುಧವಿಲ್ಲದೆಯೇ ರಾಕ್ಷಸರನ್ನು ಕೊಂದು, ಲೋಕದ ಜನಗಳ ಪಾಪವನ್ನೆಲ್ಲ ಪರಿಹರಿಸುವಂಥ ಶಾಶ್ವತವಾದ ಕೀರ್ತಿಯನ್ನು ಇಲ್ಲಿಟ್ಟು ಮತ್ತೆ ಮೊದಲಿನ ತನ್ನ ಸ್ವರೂಪವನ್ನು ಹೊಂದಿದನೋ ಆ ಜಾನಕೀಶನನ್ನು ಭಜಿಸುತ್ತೇನೆ.
ವಿಶ್ವೋದ್ಭವಸ್ಥಿತಿಲಯಾದಿಷು ಹೇತುಮೇಕಂ
ಮಾಯಾಶ್ರಯಂ ವಿಗತಮಾಯಮಚಿನ್ತ್ಯಮೂರ್ತಿಮ್ |
ಆನನ್ದಸಾನ್ದ್ರಮಮಲಂ ನಿಜಬೋಧರೂಪಂ
ಸೀತಾಪತಿಂ ವಿದಿತತತ್ತ್ವಮಹಂ ನಮಾಮಿ ||2||
ಪ್ರಪಂಚದ ಹುಟ್ಟು, ಇರುವಿಕೆ, ಪ್ರಲಯ - ಮುಂತಾದ ಎಲ್ಲಾ ಆಗುಹೋಗುಗಳಿಗೂ ತಾನೊಬ್ಬನೇ ಕಾರಣವಾಗಿಯೂ ಮಾಯೆಗೆ ಆಸರೆಯನ್ನಿತ್ತಿದ್ದರೂ ಯಾವ ಮಾಯೆಯ ಸಂಬಂಧವೂ ತನ್ನಲ್ಲಿಲ್ಲದವನಾಗಿಯೂ ಇಂತೆಂದು ಮನಸ್ಸಿನಿಂದ ಆಲೋಚಿಸುವದಕ್ಕೆ ಕೂಡ ಆಗದಂಥ ಸ್ವರೂಪವುಳ್ಳವನಾಗಿಯೂ ಪರಮಾನಂದಸ್ವರೂಪವಾಗಿ, ನಿರ್ಮಲವಾಗಿ, ಸ್ವಾಭಾವಿಕವಾದ ಜ್ಞಾನಸ್ವರೂಪವಾಗಿರುವ ಸುಪ್ರಸಿದ್ಧ ತತ್ತ್ವವಾದ ಸೀತಾಪತಿಯನ್ನು ನಮಸ್ಕರಿಸುತ್ತೇನೆ.
ಪಠನ್ತಿ ಯೇ ನಿತ್ಯಮನನ್ಯಚೇತಸಃ
ಶೃಣ್ವನ್ತಿ ಚಾಧ್ಯಾತ್ಮಿಕಸಂಜ್ಞಿತಂ ಶುಭಮ್ |
ರಾಮಾಯಣಂ ಸರ್ವಪುರಾಣಸಮ್ಮತಂ
ನಿರ್ಧೂತಪಾಪಾ ಹರಿಮೇವ ಯಾನ್ತಿ ತೇ ||3||
ಎಲ್ಲಾ ಪುರಾಣಗಳಿಗೂ ಒಪ್ಪಾಗಿರುವ ಆಧ್ಯಾತ್ಮಿಕವೆಂಬ ಈ ಮಂಗಲಕರವಾದ ರಾಮಾಯಣವನ್ನು ಇದರಲ್ಲಿಯೇ ಚಿತ್ತವನ್ನಿಟ್ಟು ಯಾರು ನಿತ್ಯವೂ ಪಾರಾಯಣಮಾಡುತ್ತಾರೋ ಮತ್ತು ಶ್ರವಣಮಾಡುತ್ತಾರೋ ಅವರು ಪಾಪವನ್ನೆಲ್ಲ ತೊಳೆದುಕೊಂಡು ಶ್ರೀಹರಿಯನ್ನೇ ಸೇರುವರು.
ಆಧ್ಯಾತ್ಮರಾಮಾಯಣಮೇವ ನಿತ್ಯಂ
ಪಠೇದ್ಯದೀಚ್ಛೇದ್ ಭವಬನ್ಧಮುಕ್ತಿಮ್ |
ಗವಾಂ ಸಹಸ್ರಾಯುತಕೋಟಿದಾನಾತ್
ಫಲಂ ಲಭೇದ್ಯಃ ಶೃಣುಯಾತ್ ಸ ನಿತ್ಯಮ್ ||4||
ಸಂಸಾರಬಂಧದಿಂದ ಬಿಡುಗಡೆಯಾಗಬೇಕೆಂಬ ಇಚ್ಛೆಯಿದ್ದರೆ ಆಧ್ಯಾತ್ಮರಾಮಾಯಣವನ್ನೇ ನಿತ್ಯವು ಓದಬೇಕು. ನಿತ್ಯವೂ ಇದನ್ನು ಯಾವನು ಶ್ರವಣಮಾಡುವನೋ ಅವನಿಗೆ ಒಂದು ಲಕ್ಷಕೋಟಿ ಸಂಖ್ಯೆಯ ಗೋವುಗಳನ್ನು ದಾನಮಾಡಿದ್ದಕ್ಕಿಂತಲೂ ಹೆಚ್ಚಿನ ಫಲವು ದೊರಕುವದು.
ಪುರಾರಿಗಿರಿಸಂಭೂತಾ ಶ್ರೀರಾಮಾರ್ಣವಸಂಗತಾ |
ಆಧ್ಯಾತ್ಮರಾಮಗಙ್ಗೇಯಂ ಪುನಾತಿ ಭುವನತ್ರಯಮ್ ||5||
ತ್ರಿಪುರಸಂಹಾರಿಯಾದ ಮಹಾದೇವನೆಂಬ ಬೆಟ್ಟದಲ್ಲಿ ಹುಟ್ಟಿ ಶ್ರೀರಾಮನೆಂಬ ಸಮುದ್ರವನ್ನು ಸೇರಿರುವ ಈ ಆಧ್ಯಾತ್ಮ ರಾಮಾಯಣವೆಂಬ ಗಂಗೆಯು ಮೂರು ಲೋಕಗಳನ್ನೂ ಪವಿತ್ರಗೊಳಿಸುವದು.
ಕೈಲಾಸಾಗ್ರೇ ಕದಾಚಿದ್ರವಿಶತವಿಮಲೇ ಮನ್ದಿರೇ ರತ್ನಪೀಠೇ
ಸಂವಿಷ್ಟಂ ಧ್ಯಾನನಿಷ್ಠಂ ತ್ರಿಣಯನಮಭಯಂ ಸೇವಿತಂ ಸಿದ್ಧಸಙ್ಘೈಃ |
ದೇವೀ ವಾಮಾಙ್ಕಸಂಸ್ಥಾ ಗಿರಿವರತನಯಾ ಪಾರ್ವತೀ ಭಕ್ತಿನಮ್ರಾ
ಪ್ರಾಹೇದಂ ದೇವಮಿಶಂ ಸಕಲಮಲಹರಂ ವಾಕ್ಯಮಾನನ್ದಕನ್ದಮ್ ||6||
ಒಂದಾನೊಂದು ಕಾಲದಲ್ಲಿ ಕೈಲಾಸಪರ್ವತದ ಕೋಡುಗಲ್ಲಿನ ಮೇಲಿದ್ದ ನೂರುಸೂರ್ಯರ ಪ್ರಕಾಶವುಳ್ಳ ಒಂದು ಮಂದಿರದಲ್ಲಿ ರತ್ನಮಯಪೀಠದಲ್ಲಿ ಕುಳಿತು, ತಪಸ್ಸಿದ್ಧರಾದ ದೇವರ್ಷಿಬ್ರಹ್ಮರ್ಷಿಗಳ ತಂಡಗಳಿಂದ ಸೇವಿತನಾಗಿ ನಿರ್ಭಿತನಾಗಿ ಧ್ಯಾನಾಸಕ್ತನಾಗಿದ್ದ ಮುಕ್ಕಣ್ಣನನ್ನು ಕಂಡು ಎಡದ ತೊಡೆಯಮೇಲೆ ಕುಳಿತಿದ್ದ ಹಿಮವಂತನ ಮಗಳಾದ ಪಾರ್ವತೀದೇವಿಯು ಭಕ್ತಿಯಿಂದ ಬಾಗಿ ಸಮಸ್ತಪಾಪಗಳನ್ನು ಹೋಗಲಾಡಿಸುವವನಾಗಿಯೂ ಆನಂದಕ್ಕೆ ಮೂಲನಾದವನಾಗಿಯೂ ಇರುವ ಆ ದೇವನಾದ ಆ ಪರಮೇಶ್ವರನನ್ನು ಕುರಿತು ಈ ಮಾತನ್ನು ಕೇಳಿದಳು.
ನಮೋsಸ್ತು ತೇ ದೇವ ಜಗನ್ನಿವಾಸ
ಸರ್ವಾತ್ಮದೃಕ್ ತ್ವಂ ಪರಮೇಶ್ವರೋsಸಿ |
ಪೃಚ್ಛಾಮಿ ತತ್ತ್ವಂ ಪುರುಷೋತ್ತಮಸ್ಯ
ಸನಾತನಂ ತ್ವಂ ಚ ಸನಾತನೋsಸಿ ||7||
ಪಾರ್ವತಿಯು ಕೇಳಿದಳೇನೆಂದರೆ, ಎಲೈ ಜಗದಾಧಾರ ಭೂತನಾದ ದೇವನೆ, ನಿನಗೆ ನಮಸ್ಕಾರವಿರಲಿ! ನೀನು ಸರ್ವರ ಅಂತಃಕರಣವನ್ನೂ ನೋಡುತ್ತಿರುವ ಪರಮೇಶ್ವರನಾಗಿದ್ದೀಯಲ್ಲವೆ? ಪುರುಷೋತ್ತಮನಾದ ಮಹಾವಿಷ್ಣುವಿನ ಸನಾತನವಾದ ತತ್ತ್ವವನ್ನು ಕುರಿತು ನಿನ್ನನ್ನು ಒಂದು ಮಾತು ಕೇಳುತ್ತೇನೆ; ಏಕೆಂದರೆ ನೀನೂ ಸನಾತನಸ್ವರೂಪನಾಗಿರುತ್ತೀಯೆ.
ಗೋಪ್ಯಂ ಯದತ್ಯನ್ತಮನನ್ಯವಾಚ್ಯಂ
ವದನ್ತಿ ಭಕ್ತೇಷು ಮಹಾನುಭಾವಾಃ |
ತದಪ್ಯಹೋಹಂ ತವ ದೇವ ಭಕ್ತಾ
ಪ್ರಿಯೋಸಿ ಮೇ ತ್ವಂ ವದ ಯತ್ತು ಪೃಷ್ಟಮ್ ||8||
ಯಾವದು ಮತ್ತೊಬ್ಬರಿಗೆ ಹೇಳತಕ್ಕದ್ದಲ್ಲವೋ ಅಂಥ ರಹಸ್ಯವನ್ನು ಕೂಡ ಮಹಾನುಭಾವರಾದವರು ತಮ್ಮಲ್ಲಿ ಭಕ್ತಿಯುಳ್ಳವರಿಗೆ ಹೇಳಿಬಿಡುತ್ತಾರಲ್ಲವೆ ಎಲೈ ದೇವನೆ, ನಾನು ನಿನ್ನ ಭಕ್ತಳು ನೀನು ನನ್ನ ಪ್ರಿಯನು ಆದ್ದರಿಂದ ನಾನು ಕೇಳಿದ್ದನ್ನು ಹೇಳಬೇಕು.
ಜ್ಞಾನಂ ಸವಿಜ್ಞಾನಮಥಾನುಭಕ್ತಿ
ವೈರಾಗ್ಯಯುಕ್ತಂ ಚ ಮಿತಂ ವಿಭಾಸ್ವತ್ |
ಜಾನಾಮ್ಯಹಂ ಯೋಷಿದಪಿ ತ್ವದುಕ್ತಂ
ಯಥಾ ತಥಾ ಬ್ರೂಹಿ ತರನ್ತಿ ಯೇನ ||9||
ಯಾವ ಜ್ಞಾನದಿಂದ ಜನರು ಸಂಸಾರವನ್ನು ದಾಟುವರೋ, ಅನುಭವದಿಂದಲೂ ಭಕ್ತಿವೈರಾಗ್ಯಗಳಿಂದಲೂ ಕೂಡಿರುವ ಅಂಥ ಜ್ಞಾನವನ್ನು ನೀನು ಹೇಳಿದ್ದು ಹೆಂಗಸಾದರೂ ನನಗೆ ತಿಳಿಯುವ ಹಾಗೆ ಸಂಕ್ಷೇಪವಾಗಿ ಸ್ಪಷ್ಟವಾಗಿರುವಂತೆ ಹೇಳು.
ಪೃಚ್ಛಾಮಿ ಚಾನ್ಯಚ್ಚ ಪರಂ ರಹಸ್ಯಂ
ತದೇವ ಚಾಗ್ರೇ ವದ ವಾರಿಜಾಕ್ಷ |
ಶ್ರೀರಾಮಚನ್ದ್ರೇಖಿಲಲೋಕಸಾರೇ
ಭಕ್ತಿರ್ದೃಡಾ ನೌರ್ಭಮತಿ ಪ್ರಸಿದ್ಧಾ ||10||
ಎಲೈ ಕಮಲಲೊಚನೆ, ಇನ್ನು ಒಂದು ಪರಮ ರಹಸ್ಯವನ್ನು ಕೇಳುತ್ತೇನೆ, ಅದನ್ನೇ ಮೊದಲು ಹೇಳು ಸಮಸ್ತ ಲೋಕಗಳಿಗೂ ಸಂಸಾರವನ್ನೂ ದಾಟುವುದಕ್ಕೆ ಪ್ರಸಿದ್ಧವಾದ ನಾವೆಯಾಗಿರುತ್ತದೆ.
ಭಕ್ತಿಃ ಪ್ರಸಿದ್ಧಾ ಭವಮೋಕ್ಷಣಾಯ
ನಾನ್ಯತ್ತತಃ ಸಾಧನಮಸ್ತಿ ಕಿಂಚಿತ್ |
ತಥಾಪಿ ಹೃತ್ಸಂಶಯಬನ್ಧನಂ ಮೇ
ಬಿಭೇತ್ತುಮರ್ಹಸ್ಯಮಲೋಕ್ತಿಭಿಸ್ತ್ವಮ್ ||11||
ಸಂಸಾರದಿಂದ ಬಿಡುಗಡೆ ಹೊಂದುವದಕ್ಕೆ ಭಕ್ತಿಯು ಪ್ರಸಿದ್ಧವಾದ ಸಾಧನವಾಗಿರುತ್ತದೆ. ಅದಕ್ಕಿಂತ ಹೆಚ್ಚಿನ ಸಾಧನವು ಯಾವದೂ ಇರುವದಿಲ್ಲ. ಹೀಗಿದ್ದರೂ ನನ್ನ ಮನಸ್ಸಿನಲ್ಲಿ ಉಂಟಾಗಿರುವ ಸಂಶಯದ ಗಂಟನ್ನು ನಿರ್ಮಲವಾದ ವಚನಗಳಿಂದ ನೀನು ಬಿಚ್ಚಬೇಕಾಗಿದೆ.
ವದನ್ತಿ ರಾಮಂ ಪರಮೇಕಮಾದ್ಯಂ
ನಿರಸ್ತಮಾಯಾಗುಣಸಂಪ್ರವಾಹಮ್
ಭಜನ್ತಿ ಚಾಹರ್ನಿಶಮಪ್ರಮತ್ತಾಃ
ಪರಂ ಪದಂ ಯಾನ್ತಿ ತಥೈವ ಸಿದ್ಧಾಃ ||12||
ರಾಮನು ಅದ್ವಿತೀಯನು, ಜಗತ್ತಿಗೆಲ್ಲ ಕಾರಣನು, ಮಾಯಾಗುಣಗಳ ಪ್ರವಾಹವೇ ತನ್ನಲ್ಲಿಲ್ಲದವನು ಎಂದು ಹೇಳುತ್ತಾರೆ ಮತ್ತು ಜ್ಞಾನಸಿದ್ಧರು ಹಗಲೂ ಇರುಳೂ ಸಾವಧಾನವಾಗಿ ಆತನನ್ನು ಭಜನೆಮಾಡಿ ಪರಮಪದವಿಯನ್ನು ಹೊಂದುತ್ತಲೂ ಇರುತ್ತಾರೆ.
ವದನ್ತಿ ಕೇಚಿತ್ ಪರಮೋಪಿ ರಾಮಃ
ಸ್ವಾವಿದ್ಯಯಾ ಸಂವೃತಮಾತ್ಮಸಂಜ್ಞಮ್ |
ಜಾನಾತಿ ನಾತ್ಮಾನಮತಃ ಪರೇಣ
ಸಂಬೋಧಿತೋ ವೇದ ಪರಾತ್ಮತತ್ತ್ವಮ್ ||13||
ಶ್ರೀರಾಮನ ಪರಮಾತ್ಮನೇ ಆದರೂ ತನ್ನ ಅವಿದ್ಯೆಯಿಂದ ಪರಮಾತ್ಮನೆಂಬ ತನ್ನ ಸ್ವರುಪವು ಮುಚ್ಚಿರುವದರಿಂದ ಅದನ್ನು ಅರಿಯದೆ ಇರುವನೆಂದೂ ಆದ್ದರಿಂದಲೇ ಮತ್ತೊಬ್ಬರು ಬೋಧಿಸಿದ ಮೇಲೆ ಪರಮಾತ್ಮತತ್ತ್ವವನ್ನು ಅರಿತುಕೊಳ್ಳುವನೆಂದೂ ಕೆಲವರು ಹೇಳುತ್ತಾರೆ.
ಯದಿ ಸ್ಮ ಜಾನಾತಿ ಕುತೋ ವಿಲಾಪಃ
ಸೀತಾಕೃತೇ ತೇನ ಕೃತಃ ಪರೇಣ |
ಜಾನಾತಿ ನೈವಂ ಯದಿ ಕೇನ ಸೇವ್ಯಃ
ಸಮೋ ಹಿ ಸರ್ವೈರಪಿ ಜೀವಜಾತೈಃ ||14||
ಅವನು ತತ್ತ್ವವನ್ನು ತಿಳಿದಿದ್ದರೆ ಪರಮಾತ್ಮನಾದ ಅವನು ಸೀತೆಗಾಗಿ ಅತ್ತದ್ದು ಏಕೆ? ಈ ರೀತಿಯಲ್ಲಿ ತಾನು ಪರಮಾತ್ಮನೆಂದು ಅರಿಯದಿದ್ದರೆ ಆತನನ್ನು ಏತಕ್ಕೆ ಸೇವಿಸಬೇಕು? ಆಗ ಸಮಸ್ತಜೀವರಾಶಿಗಳಿಗೆ ಅವನೂ ಸಮನಾಗುವನಲ್ಲ.!
ಅತ್ರೋತ್ತರಂ ಕಿಂ ವಿದಿತಂ ಭವದ್ಭಿ
ಸ್ತದ್ಬ್ರೂತ ಮೇ ಸಂಶಯಭೇದಿ ವಾಕ್ಯಮ್ ||14.1||
ಈ ವಿಷಯದಲ್ಲಿ ನಿಮಗೆ ತಿಳಿದಿರುವ ಉತ್ತರವೇನು? ಅಂಥ ವಾಕ್ಯವನ್ನು ನನ್ನ ಸಂಶಯವು ಹೋಗುವಂತೆ ತಿಳಿಸಿರಿ.
ಧನ್ಯಾಸಿ ಭಕ್ತಾಸಿ ಪರಾತ್ಮನಸ್ತ್ವಂ
ಯಜ್ಞಾತುಮಿಚ್ಛಾ ತವ ರಾಮತತ್ತ್ವಮ್ |
ಪುರಾ ನ ಕೇನಾಪ್ಯಭಿಚೋದಿತೋಹಂ
ವಕ್ತುಂ ರಹಸ್ಯಂ ಪರಮಂ ನಿಗೂಢಮ್ ||15||
ಶ್ರೀ ಮಹಾದೇವನು ಹೇಳಿದನೇನೆಂದರೆ - ಪಾರ್ವತಿಯೆ, ನಿನಗೆ ರಾಮತತ್ತ್ವವನ್ನು ತಿಳಿದುಕೊಳ್ಳಬೇಕೆಂಬ ತವಕವುಂಟಾಗಿರುವದರಿಂದ ನೀನು ಧನ್ಯಳಾಗಿರುವೆ, ಪರಮಾತ್ಮನ ಭಕ್ತಳಾಗಿರುವೆ, ಬಹಳ ಗೋಪ್ಯವಾಗಿರುವ ಈ ರಹಸ್ಯವನ್ನು ಹೇಳಬೇಕೆಂದು ಇದಕ್ಕೆ ಮೊದಲು ಯಾರೂ ನನ್ನನ್ನು ಕೇಳಿದ್ದಿಲ್ಲ.
ತ್ವಯಾದ್ಯ ಭಕ್ತ್ಯಾ ಪರಿನೋದಿತೋಹಂ
ವಕ್ಷ್ಯೇ ನಮಸ್ಕೃತ್ಯ ರಘೋತ್ತಮಂ ತೇ |
ರಾಮಃ ಪರಾತ್ಮಾ ಪ್ರಕೃತೇರನಾದಿ
ರಾನನ್ದ ಏಕಃ ಪುರುಷೋತ್ತವೋ ಹಿ ||16||
ನೀನು ಈ ದಿನ ನನ್ನನ್ನು ಭಕ್ತಿಯಿಂದ ಪ್ರೇರಿಸಿರುತ್ತೀಯೆ, ಆದ್ದರಿಂದ ರಘುಶ್ರೇಷ್ಠನಾದ ಶ್ರೀರಾನನ್ನು ನಮಸ್ಕರಿಸಿ ನಿನಗೆ ಆ ತತ್ತ್ವವನ್ನು ಹೇಳುವೆನು. ನಿಜವಾಗಿಯೂ ರಾಮನು ಪರಮಾತ್ಮನೇ, ಅವನು ಪ್ರಕೃತಿಗಿಂತಲೂ ಅನಾದಿಯಾಗಿರುವ ಆನಂದ ಸ್ವರೂಪನು, ಪುರುಷೋತ್ತಮನು.
ಸ್ವಮಾಯಯಾ ಕೃತ್ಸ್ನಮಿದಂ ಹಿ ಸೃಷ್ಟ್ವಾ
ನಬೋವದನ್ತರ್ಬಹಿರಾಸ್ಥಿತೋ ಯಃ
ಸರ್ವಾನ್ತರಸ್ಥೋಪಿ ನಿಗೂಢ ಆತ್ಮಾ
ಸ್ವಮಾಯಯಾ ಸೃಷ್ಟಮಿದಂ ವಿಚಷ್ಟೇ ||17||
ಈತನು ತನ್ನ ಮಾಯೆಯಿಂದ ಇದೆಲ್ಲವನ್ನೂ ಸೃಷ್ಟಿ ಮಾಡಿ ಆಕಾಶದಂತೆ ಒಳಗೂ ಹೊರಗೂ ಇರುವವನಾಗಿದ್ದಾನೆ ಮತ್ತು ಎಲ್ಲಕ್ಕೂ ಒಳಗಡೆ ಇದ್ದುಕೊಂಡು ಗೂಢವಾಗಿರುವ ಆತ್ಮನಾದರೂ ತನ್ನ ಮಾಯೆಯಿಂದ ಸೃಷ್ಟವಾಗಿರುವ ಜಗತ್ತನ್ನು ನೋಡುತ್ತಲೇ ಇರುತ್ತಾನೆ.
ಜಗನ್ತಿ ನಿತ್ಯಂ ಪರಿತೋ ಭ್ರಮನ್ತಿ
ಯತ್ಸಂನಿಧೌ ಚುಮ್ಬಕಲೋಹವದ್ಧಿ |
ಏತನ್ನ ಜಾನನ್ತಿ ವಿಮೂಢಚಿತ್ತಾಃ
ಸ್ವಾವಿದ್ಯಯಾ ಸಂವೃತಮಾನಸಾ ಯೇ ||18||
ಈತನ ಸನ್ನಿಧಿಯಲ್ಲಿದ್ದುಕೊಂಡು ಸೂಜಿಗಲ್ಲಿನ ಬಳಿಯಲ್ಲಿರುವ ಕಬ್ಬಿಣದ ಹಾಗೆ ಜಗತ್ತುಗಳು ಯಾವಾಗಲೂ ಸುತ್ತಲೂ ಓಡಾಡುತ್ತಿರುವವು. ಯಾರ ಮನಸ್ಸನ್ನು ಅವರ ಅಜ್ಞಾನವು ಕವಿದುಕೊಂಡಿರುವದೋ ಅಂಥ ವಿವಿಧವಾಗಿ ಮೋಹಗೊಂಡ ಮನಸ್ಸಿನ ಜನರು ಈ ತತ್ತ್ವವನ್ನು ಅರಿಯದೆ ಇರುವರು.
ಸ್ವಾಜ್ಞಾನಮಪ್ಯಾತ್ಮನಿ ಶುದ್ಧಬೋಧೇ
ಹ್ಯಾರೋಪಯನ್ತೀಹ ನಿರಸ್ತಮಾಯೇ |
ಸಂಸಾರಮೇವಾನುಸರನ್ತಿ ತೇ ವೈ
ಪುತ್ರಾದಿಸಕ್ತಾ ಪುರುಕರ್ಮಯುಕ್ತಾಃ ||19||
ಅವರು ತಮ್ಮ ಅಜ್ಞಾನವನ್ನು ಶುದ್ಧನಾಗಿಯೂ ಜ್ಞಾನ ಸ್ವರೂಪನಾಗಿಯೂ ಮಾಯಾರಹಿನಾಗಿಯೂ ಇರುವ ಆ ಪರಮಾತ್ಮನಲ್ಲಿ ಅರೋಪಿಸುತ್ತಿರುವರು. ಅವರು ಮಕ್ಕಳು ಮರಿ ಮುಂತಾದದ್ದರಲ್ಲಿರುವ ಆಸಕ್ತಿಯಿಂದ ಅನೇಕ ವಿಧವಾದ ಕರ್ಮಗಳನ್ನು ಮಾಡುತ್ತಾ ಸಂಸಾರವನ್ನೇ ಹೊಂದುತ್ತಿರುವರು ಇದು ಪ್ರಸಿದ್ಧವಾಗಿದೆ.
ಜಾನನ್ತಿ ನೈನಂ ಹೃದಯೇ ಸ್ಥಿತಂ ವೈ
ಚಾಮಿಕರಂ ಕಣ್ಠಗತಂ ಯಥಾಜ್ಞಾ ||20||
ಮೂಢರು ತಮ್ಮ ಕೊರಳಲ್ಲಿಯೇ ಇರುವ ಚಿನ್ನದ ಮಾಲಿಕೆಯನ್ನು ಅರಿಯದೆ ಇರುವಂತೆ ತಮ್ಮ ಹೃದಯದಲ್ಲಿಯೇ ಇರುವ ಈ ಶ್ರೀರಾಮನನ್ನು ಅರಿತುಕೊಳ್ಳಲಾರದೆ ಇರುವರು.
ಯಥಾಪ್ರಕಾಶೋ ನ ತು ವಿದ್ಯತೇ ರವೌ
ಜ್ಯೋತಿಃಸ್ವಭಾವೇ ಪರಮೇಶ್ವರೇ ತಥಾ |
ವಿಶುದ್ಧವಿಜ್ಞಾನಘನೇ ರಘೋತ್ತಮೇ
(ಅ)ವಿದ್ಯಾ ಕಥಂ ಸ್ಯಾತ್ ಪರತಃ ಪರಾತ್ಮನಿ ||21||
ಸೂರ್ಯನಲ್ಲಿ ಹೇಗೆ ಕತ್ತಲೆಯಿರುವದಿಲ್ಲವೋ ಜ್ಯೋತಿಃ ಸ್ವರೂಪನಾದ ಪರಮೇಶ್ವರನಲ್ಲಿಯೂ ಹಾಗೆಯೇ ಅಜ್ಙಾನವಿರಲಾರದು. ಅತ್ಯಂತ ಪರಿಶುದ್ಧವಾದ ಚೈತನ್ಯದ ಗಟ್ಟಿಯಾಗಿರುವ ಪರಾತ್ಪರನಾದ ಈ ರಘುಶ್ರೇಷ್ಠನಲ್ಲಿ ಹೇಗೆ ತಾನೆ ಅಜ್ಞಾನವಿದ್ದೀತು.?
ಯಥಾ ಹಿ ಚಾಕ್ಷ್ಣಾ ಭ್ರಮತಾ ಗೃಹಾದಿಕಂ
ವಿನಷ್ಟದೃಷ್ಟೇರ್ಭ್ರಮತೀವ ದೃಶ್ಯತೇ |
ತಥೈವ ದೇಹೇನ್ದ್ರಿಯಕರ್ತುರಾತ್ಮನಃ
ಕೃತಂ ಪರೇಧ್ಯಸ್ಯ ಜಸೋ ವಿಮುಹ್ಯತಿ ||22||
ದೋಷದಿಂದ ದೃಷ್ಟಿಪಾಟವವನ್ನು ಕಳೆದುಕೊಂಡವನಿಗೆ ಕಣ್ಣು ತೊಳಸಲಾಗಿ ಮನೆಮಾರು ಮುಂತಾದದ್ದೆಲ್ಲ ತಿರುಗುತ್ತಿರುವಂತೆ ಹೇಗೆ ತೋರುತ್ತಿರುವದೋ ಅದರಂತೆಯೇ ಶರೀರೇಂದ್ರಿಯಗಳ ಒಡೆಯನಾದ ಜೀವನು ಮಾಡಿದ್ದನ್ನು ಪರಮಾತ್ಮನಲ್ಲಿ ಆರೋಪಿಸಿ ಜನರು ಭ್ರಾಂತಿಗೊಳ್ಳುತ್ತಿರುವರು.
ನಾಹೋ ನ ರಾತ್ರಿಃ ಸವಿತುರ್ಯಥಾ ಭವೇತ್
ಪ್ರಕಾಶರೂಪಾವ್ಯಭಿಚಾರತಃ ಕ್ವಚಿತ್ |
ಜ್ಞಾನಂ ತಥಾಜ್ಞಾನಮಿದಂ ದ್ವಯಂ ಹರೌ
ರಾಮೇ ಕಥಂ ಸ್ವಾಸ್ಯತಿ ಶುದ್ಧಚಿದ್ಘನೇ ||23||
ಸೂರ್ಯನಿಗೆ ಪ್ರಕಾಶಸ್ವರೂಪವು ಎಂದಿಗೂ ಬೇರ್ಪಡದೆ ಇರುವ ಕಾರಣದಿಂದ ಅವನಿಗೆ ಹಗಲಾಗಲಿ ರಾತ್ರಿಯಾಗಲಿ ಹೇಗೆ ಇರುವದಿಲ್ಲವೋ ಅದರಂತೆ ಶುದ್ಧಚೈತನ್ಯದ ಗಟ್ಟಿಯೇ ಆಗಿರುವ ಶ್ರೀಹರಿ ಸ್ವರೂಪನಾದ ರಾಮನಲ್ಲಿ ಜ್ಞಾನ, ಅಜ್ಞಾನ - ಈ ಎರಡೂ ಹೇಗೆ ಇದ್ದೀತು?
ತಸ್ಮಾತ್ ಪರಾನನ್ದಮಯೇ ರಘೂತ್ತಮೇ
ವಿಜ್ಞಾನರೂಪೇ ಹಿ ನ ವಿದ್ಯತೇ ತಮಃ |
ಅಜ್ಞಾನಸಾಕ್ಷಿಣ್ಯರವಿನ್ದಲೋಚನೇ
ಮಾಯಾಶ್ರಯತ್ವಾನ್ನ ಹಿ ಮೋಹಕಾರಣಮ್ ||24||
ಆದಕಾರಣ ಪರಮಾನಂದಸ್ವರೂಪನಾಗಿಯೂ ಚೈತನ್ಯ ರೂಪನಾಗಿಯೂ ಅಜ್ಞಾನಕ್ಕೆ ಸಾಕ್ಷಿಯಾಗಿಯೂ ಇರುವ ಕಮಲನೇತ್ರನಾದ ಆ ರಘುಶ್ರೇಷ್ಠನಲ್ಲಿ ಮೋಹಕ್ಕೆ ಕಾರಣವಾದ ಅಜ್ಞಾನವು ಇರುವದೇ ಇಲ್ಲ, ಏಕೆಂದರೆ ಅವನು ಮಾಯೆಗೆ ಆಶ್ರಯನಾಗಿರುತ್ತಾನೆ.
ಅತ್ರ ತೇ ಕಥಯಿಷ್ಯಾಯಿ ರಹಸ್ಯಮಪಿ ದುರ್ಲಭಮ್ |
ಸೀತಾರಾಮಮರುತ್ಸೂನುಸಂವಾದಂ ಮೋಕ್ಷಸಾಧನಮ್ ||25||
ಈ ವಿಷಯದಲ್ಲಿ ರಹಸ್ಯವಾಗಿಯೂ ದುರ್ಲಭವಾಗಿಯೂ ಇರುವ ಸೀತೆ, ರಾಮ, ಮಾರುತಿ - ಈ ಮೂವರ ಸಂವಾದವನ್ನು ನಿನಗೆ ಹೇಳುವೆನು ಇದು ಮೋಕ್ಷಕ್ಕೆ ಸಾಧನವಾಗಿರುವದು.
ಪುರಾ ರಾಮಾಯಣೇ ರಾಮೋ ರಾವಣಂ ದೇವಕಣ್ವಕಮ್ |
ಹತ್ವಾ ರಣೇ ರಣಶ್ಲಾಘೀ ಸಪುತ್ರಬಲವಾಹನಮ್ ||26||
ಸೀತಯಾ ಸಹ ಸುಗ್ರೀವಲಕ್ಷ್ಮಣಾಭ್ಯಾಂ ಸಮನ್ವಿತಃ |
ಅಯೋಧ್ಯಾಮಗಮದ್ರಾಮೋ ಹನೂಮತ್ಪ್ರಮುಖೈರ್ವೃತಃ ||27||
ಪೂರ್ವದಲ್ಲಿ ರಾಮಾವತಾರದ ಕಾಲಕ್ಕೆ ಕಾಳಗದಲ್ಲಿ ಹೊಗಳುವದಕ್ಕೆ ತಕ್ಕವನೆನಿಸಿದ್ದ ಶ್ರೀರಾಮನು ದೇವತೆಗಳಿಗೆ ಶತ್ರುವಾಗಿದ್ದ ರಾವಣನನ್ನು ಅವನ ಮಕ್ಕಳು, ಬಲ, ವಾಹನ ಇವುಗಳೊಡನೆ ನಾಶಮಾಡಿ ಸೀತೆಯಿಂದಲೂ ಸುಗ್ರೀವಲಕ್ಷ್ಮಣರಿಂದಲೂ ಕೂಡಿಕೊಂಡು ಹನುಮಂತನೇ ಮುಂತಾದ ಪ್ರಿವಾರದೊಡನೆ ಅಯೋಧ್ಯೆಗೆ ಬಂದನು.
ಅಭಿಷಿಕ್ತಃ ಪರಿವೃತೋ ವಸಿಷ್ಠಾದ್ಯೈರ್ಮಹಾತ್ಮಭಿಃ |
ಸಿಂಹಾಸನೇ ಸಮಾಸೀನಃ ಕೋಟಿಸೂರ್ಯಸಮಪ್ರಭಃ ||28||
ಅಭಿಷಿಕ್ತನಾಗಿ ಮಹಾತ್ಮರಾದ ವಸಿಷ್ಠರೇ ಮೊದಲಾದವರು ತನ್ನನ್ನು ಬಳಸಿರಲು ಕೋಟಿಸೂರ್ಯರಂತೆ ಹೊಳೆಯುತ್ತಾ ಸಿಂಹಸನದಲ್ಲಿ ಕುಳಿತಿದ್ದನು.
ದೃಷ್ಟ್ವಾ ತದಾ ಹನೂಮನ್ತಂ ಪ್ರಞ್ಜಲಿಂ ಪುರತಃ ಸ್ಥಿತಮ್ |
ಕೃತಕಾರ್ಯಂ ನಿರಾಕಾಙ್ಕ್ಷಂ ಜ್ಞಾನಾಪೇಕ್ಷಂ ಮಹಾಮತಿಮ್ ||29||
ರಾಮಃ ಸೀತಾಮುವಾಚೇದಂ ಬ್ರೂಹಿ ತತ್ತ್ವಂ ಹನೂಮತೇ |
ನಿಷ್ಕಲ್ಮಷೋಯಂ ಜ್ಞಾನಸ್ಯ ಪಾತ್ರಂ ನೌ ನಿತ್ಯಭಕ್ತಿಮಾನ್ ||30||
ಆಗ ಕೃತಕೃತ್ಯನಾಗಿ ಮತ್ತೊಂದರ ಬಯಕೆಯಿಲ್ಲದೆ ಜ್ಞಾನವೊಂದೇ ಬೇಕೆಂದು ಕೈಮುಗಿದುಕೊಂಡು ಮುಂದೆ ನಿಂತಿದ್ದ ಮಹಾಬುದ್ಧಿಶಾಲಿಯಾದ ಹನುಮಂತನನ್ನು ಕಂಡು ರಾಮನು ಸೀತೆಗೆ ಈ ಮಾತನ್ನು ಹೇಳಿದನು, ಹನುಮಂತನಿಗೆ ತತ್ತ್ವವನ್ನು ತಿಳಿಸು. ಇವನು ಪರಿಶುದ್ಧನು, ನಮ್ಮಿಬ್ಬರಲ್ಲಿ ಯಾವಾಗಲೂ ಭಕ್ತಿಯುಳ್ಳವನು, ಆದ್ದರಿಂದ ಜ್ಞಾನಕ್ಕೆ ತಕ್ಕವನು.
ತಥೇತಿ ಜಾನಕೀ ಪ್ರಾಹ ತತ್ತ್ವಂ ರಾಮಸ್ಯ ನಿಶ್ಚಿತಮ್ |
ಹನೂಮತೇ ಪ್ರಪನ್ನಾಯ ಸೀತಾ ಲೋಕವಿಮೋಹಿನೀ ||31||
ಲೋಕವನ್ನೇ ಮೋಹಗೊಳಿಸುವ ಮಾಯಾಸ್ವರೂಪಳಾದ ಆ ಜಾನಕಿಯು ಹಾಗೆಯೇ ಆಗಲಿ! ಎಂದು ಶರಣಾಗತನಾದ ಹನುಮಂತನಿಗೆ ರಾಮನ ನಿಜವಾದ ತತ್ತ್ವವನ್ನು ಹೀಗೆಂದು ಹೇಳಿದಳು...
ರಾಮಂ ವಿದ್ಧಿ ಪರಂ ಬ್ರಹ್ಮ ಸಚ್ಚಿದಾನನ್ದಮದ್ವಯಮ್ |
ಸರ್ವೋಪಾಧಿವಿನಿರ್ಮುಕ್ತಂ ಸತ್ತಾಮಾತ್ರಮಗೋಚರಮ್ ||32||
ಆನನ್ದಂ ನಿರ್ಮಲಂ ಶಾನ್ತಂ ನಿರ್ವಿಕಾರಂ ನಿರಞ್ಜನಮ್ |
ಸರ್ವವ್ಯಾಪಿನಮಾತ್ಮಾನಂ ಸ್ವಪ್ರಕಾಶಮಕಲ್ಮಷಮ್ ||33||
ಶ್ರೀರಾಮನು ಸಚ್ಚಿದಾನಂದರೂಪವಾಗಿಯೂ ಅದ್ವೀತಿಯವಾಗಿಯೂ ಯಾವ ಉಪಾಧಿಯೂ ಇಲ್ಲದ್ದಾಗಿಯೂ ಕೇವಲ ಸದ್ರೂಪವಾಗಿಯೂ ಮತ್ತೆ ಯಾವದಕ್ಕೂ ವಿಷಯವಲ್ಲದ್ದಾಗಿಯೂ ಶುದ್ಧಾಂನಂದರೂಪವಾಗಿಯೂ ಶಾಂತವಾಗಿಯೂ ಯಾವ ವಿಕಾರವೂ ಇಲ್ಲದೆಯೂ ಯಾವದೊಂದರ ಅಂಟೂ ಇಲ್ಲದ್ದಾಗಿಯೂ ಎಲ್ಲೆಲ್ಲಿಯೂ ವ್ಯಾಪಿಸಿರುವದಾಗಿಯೂ ಸ್ವಯಂಪ್ರಕಾಶಸ್ವರೂಪವಾಗಿಯೂ ಯಾವ ದೋಷವೂ ಇಲ್ಲದ್ದಾಗಿಯೂ ಇರುವ ಪರಬ್ರಹ್ಮವೆಂದು ತಿಳಿ.
ಮಾಂ ವಿದ್ಧಿ ಮೂಲಪ್ರಕೃತಿಂ ಸರ್ಗಸ್ಥಿತ್ಯನ್ತಕಾರಿಣೀಮ್ |
ತಸ್ಯ ಸಂನಿಧಿಮಾತ್ರೇಣ ಸೃಜಾಮಿದಮತನ್ದ್ರಿತಾ ||34||
ನಾನು ಸೃಷ್ಟಿಸ್ಥಿತಿಪ್ರಲಯಗಳನ್ನು ಮಾಡುವ ಮೂಲ ಪ್ರಕೃತಿಯೆಂದು ತಿಳಿ. ಆತನು ಸಮಿಪದಲ್ಲಿದ್ದ ಮಾತ್ರದಿಂದ ಆಲಸ್ಯವಿಲ್ಲದೆ ಈ ಜಗತ್ತನ್ನು ಸೃಷ್ಟಿಮಾಡುತ್ತಿರುವೆನು.
ತತ್ಸಾಂನಿಧ್ಯಾನ್ಮಯಾ ಸೃಷ್ಟಂ ತಸ್ಮಿನ್ನಾರೋಪ್ಯತೇಬುಧೈಃ |
ಅಯೋಧ್ಯಾನಗರೇ ಜನ್ಮ ರಘವಂಶೇತಿನಿರ್ಮಲೇ ||35||
ಆತನ ಸಂನಿಧಿಯಲ್ಲಿ ನಾನು ಸೃಷ್ಟಿಮಾಡಿದ್ದನ್ನು ಮೂಢರು ಆತನಲ್ಲಿ ಅರೋಪಿಸಿರುತ್ತಾರೆ. ಹೇಗೆಂದರೆ ಅಯೋಧ್ಯಾ ನಗರದಲ್ಲಿ ಬಹುಶುದ್ಧವಾದ ರಘುವಂಶದಲ್ಲಿ ಹುಟ್ಟಿದ್ದು,
ವಿಶ್ವಾಮಿತ್ರಸಹಾಯತ್ವಂ ಮಖಸಂರಕ್ಷಣಂ ತತಃ |
ಅಹಲ್ಯಾಶಾಪಶಮನಂ ಚಾಪಭಙ್ಗೋ ಮಹೇಶಿತುಃ ||36||
ಆಮೇಲೆ ವಿಶ್ವಾಮಿತ್ರನಿಗೆ ಸಹಾಯವಾಗಿ ಅವರ ಯಜ್ಞವನ್ನು ಕಾಪಾಡಿದ್ದು, ಅಹಲ್ಯೆಯ ಶಾಪವನ್ನು ಪರಿಹರಿಸಿದ್ದು, ಮಹೇಶ್ವರನ ಧನುಸ್ಸನ್ನು ಮುರಿದದ್ದು,
ಮತ್ಪಾಣಿಗ್ರಹಣಂ ಪಶ್ಚಾದ್ಭಾರ್ಗವಸ್ಯ ಮದಕ್ಷಯಃ |
ಅಯೋಧ್ಯಾನಗರೇ ವಾಸೋ ಮಯಾ ದ್ವಾದಶವಾರ್ಷಿಕಃ ||37||
ದಣ್ದಕಾರಣ್ಯಗಮನಂ ವಿರಾಧವಧ ಏವ ಚ |
ಮಾಯಾಮಾರೀಚಮರಣಂ ಮಾಯಾಸೀತಾಹೃತಿಸ್ತಥಾ ||38||
ನನ್ನನ್ನು ಮದುವೆಯಾದದ್ದು, ಆಮೇಲೆ ಭೃಗುಪುತ್ರನಾದ ಪರಶುರಾಮನ ಗರ್ವವನ್ನು ಹೋಗಲಾಡಿಸಿದ್ದು, ಅಯೋಧ್ಯಾ ನಗರದಲ್ಲಿ ನನ್ನೊಡನೆ ಹನ್ನೆರಡು ವರ್ಷಗಳು ಇದ್ದದ್ದು, ದಂಡಕಾರಣ್ಯಕ್ಕೆ ತೆರಳಿದ್ದು, ವಿರಾಧನನ್ನು ಸಂಹರಿಸಿದ್ದು, ಮಾಯಾರೂಪದಿಂದ ಬಂದ ಮಾರೀಚನು ಸತ್ತದ್ದು, ಮಾಯಾಕಲ್ಪಿತಸೀತೆಯನ್ನು ರಾವಣನು ಅಪಹರಿಸಿದ್ದು,
ಜಟಾಯುಷೋ ಮೋಕ್ಷಲಾಭಃ ಕಬನ್ಥಸ್ಯ ತಥೈವ ಚ |
ಶಬರ್ಯಾಃ ಪೂಜನಂ ಪಶ್ಚಾತ್ ಸುಗ್ರೀವೇಣ ಸಮಾಗಮಃ ||39||
ಜಟಾಯುವಿಗೆ ಮೋಕ್ಷವು ದೊರಕಿದ್ದು ಮತ್ತು ಕಬಂಧನಿಗೆ ಮೋಕ್ಷವು ದೊರಕಿದ್ದು, ಶಬರಿಯು ರಾಮದೇವರನ್ನು ಪೂಜಿಸಿದ್ದು, ಆಮೇಲೆ ರಾಮನು ಸುಗ್ರೀವನನ್ನು ಕಂಡದ್ದು,
ವಾಲಿನಶ್ಚ ವಧಃ ಪಶ್ಚಾತ್ ಸೀತಾನ್ವೇಷಣಮೇವ ಚ |
ಸೇತುಬನ್ಧಶ್ಚ ಜಲಧೌ ಲಙ್ಕಾಯಾಶ್ಚ ನಿರೋಧನಮ್ ||40||
ವಾಲಿಯನ್ನು ಕೊಂದದ್ದು, ಆಮೇಲೆ ಸೀತೆಯನ್ನು ಹುಡುಕಿದ್ದು, ಸೇತುವೆಯನ್ನು ಕಟ್ಟಿದ್ದು, ಲಂಕಾನಗರಿಯನ್ನು ಮುತ್ತಿದ್ದು,
ರಾವಣಸ್ಯ ವಧೋ ಯುದ್ಧೇ ಸಪುತ್ರಸ್ಯ ದುರಾತ್ಮನಃ |
ವಿಭೀಷಣೇ ರಾಜ್ಯದಾನಂ ಪುಷ್ಪಕೇಣ ಮಯಾ ಸಹ ||41||
ಯುದ್ಧದಲ್ಲಿ ದುಷ್ಟನಾದ ರಾವಣನನ್ನು ಅವನ ಮಕ್ಕಳ ಸಮೇತವಾಗಿ ಸಂಹರಿಸಿದ್ದು, ವಿಭೀಷಣನಿಗೆ ರಾಜ್ಯವನ್ನು ಕೊಟ್ಟಿದ್ದು, ಪುಷ್ಪಕವಿಮಾನದಲ್ಲಿ ನನ್ನೊಡನೆ
ಅಯೋಧ್ಯಾಗಮನಂ ಪಶ್ಚಾದ್ರಾಜ್ಯೇ ರಾಮಾಭಿಷೇಚನಮ್ ||42||
ಏವಮಾದೀನಿ ಕರ್ಮಾಣಿ ಮಯೈವಾಚರಿತಾನ್ಯಪಿ ||
ಆರೋಪಯನ್ತಿ ರಾಮೇಸ್ಮಿನ್ನಿರ್ವಿಕಾರೇಖಿಲಾತ್ಮನಿ||42-1||
ಅಯೋಧ್ಯೆಗೆ ಹೋದದ್ದು, ಆಮೇಲೆ ರಾಜ್ಯದಲ್ಲಿ ಅಭಿಷೇಕವಾದದ್ದು ಇವೇ ಮುಂತಾದ ಕರ್ಮಗಳನ್ನು ನಾನೇ ಮಾಡಿದೆನಾದರೂ ಯಾವ ವಿಕಾರಗಳೂ ಇಲ್ಲದೆ ಎಲ್ಲಕ್ಕೂ ಆತ್ಮನಾಗಿರುವ ಈ ರಾಮನಲ್ಲಿ ಆರೋಪಿಸುತ್ತಿರುವರು.
ರಾಮೋ ನ ಗಚ್ಛತಿ ನ ತಿಷ್ಠತಿ ನಾನುಶೋಚ-
ತ್ಯಾಕಾಙ್ಕ್ಷತೇ ತ್ಯಜತಿ ನೋ ನ ಕರೋತಿ ಕಿಂಚಿತ್ |
ಆನನ್ದಮೂರ್ತಿರಚಲಃ ಪರಿಣಾಮಹೀನೋ
ಮಾಯಾಗುಣಾನನುಗತೋ ಹಿ ತಥಾ ವಿಭಾತಿ ||43||
ರಾಮನು ಓಡಾಡುವದಿಲ್ಲ, ನಿಂತಿರುವದಿಲ್ಲ, ಶೋಕಿಸುವದಿಲ್ಲ, ಇಂಥದ್ದು ತನಗೆ ಬೇಕೆನ್ನುವದಿಲ್ಲ, ಯಾವದನ್ನೂ ಮಾಡುವದೂ ಇಲ್ಲ, ಬಿಡುವದೂ ಇಲ್ಲ. ಆತನು ಆನಂದಸ್ವರೂಪನು, ಕ್ರಿಯಾ ಶೂನ್ಯನು, ಸ್ವರೂಪದಲ್ಲಿ ಯಾವ ಮಾರ್ಪಾಡುಗಳೂ ಇಲ್ಲದವನು, ಆದರೂ ಮಾಯೆಯ ಗುಣಗಳನ್ನು ಅನುಸರಿಸಿ ಆಯಾ ಕಾರ್ಯಗಳನ್ನು ಮಾಡುತ್ತಿರುವಂತೆ ತೋರುತ್ತಿರುವನು.
ಶ್ರೀ ಮಹಾದೇವ ಉವಾಚ
ತತೋ ರಾಮಃ ಸ್ವಯಂ ಪ್ರಾಹ ಹನೂಮನ್ತಮುಪಸ್ಥಿತಮ್ |
ಶೃಣು ತತ್ತ್ವಂ ಪ್ರವಕ್ಷ್ಯಾಮಿ ಹ್ಯಾತ್ಮಾನಾತ್ಮಪರಾತ್ಮನಾಮ್ ||44||
ಶ್ರೀಮಹಾದೇವನು ಮತ್ತೆ ಹೇಳಿದನೇನೆಂದರೆ, ಎಲೌ ಪಾರ್ವತಿಯೆ, ಆಮೇಲೆ ರಾಮನು ತನ್ನ ಹತ್ತಿರವಿದ್ದ ಹನುಮಂತನನ್ನು ಕುರಿತು ತಾನೇ ಹೀಗೆಂದು ನುಡಿದನು, ಎಲೈ ಹನುಮಂತನೆ, ಆತ್ಮ, ಅನಾತ್ಮ, ಪರಮಾತ್ಮ ಇವುಗಳ ತತ್ತ್ವವನ್ನು ಹೇಳುವೆನು ಕೇಳು.
ಅಕಾಶಸ್ಯ ಯಥಾ ಭೇದಸ್ತ್ರಿವಿಧೋ ದೃಶ್ಯತೇ ಮಹಾನ್ |
ಜಲಾಶಯೇ ಮಹಾಕಾಶಸ್ತದವಚ್ಛಿನ್ನ ಏವ ಹಿ ||45||
ಪ್ರತಿಬಿಮ್ಭಾಖ್ಯಮಪರಂ ದೃಶ್ಯತೇ ತ್ರಿವಿಧಂ ನಭಂ |
ಬುದ್ಧ್ಯವಚ್ಛಿನ್ನ ಚೈತನ್ಯಮೇಕಂ ಪೂರ್ಣಮಥಾಪರಮ್ ||46||
ಅಭಾಸಸ್ತ್ವಪರಂ ಬಿಮ್ಬಭೂತಮೇವಂ ತ್ರಿಧಾ ಚಿತಿಃ ||47||
ಒಂದು ಜಲಾಶಯದಲ್ಲಿ ಆಕಾಶಕ್ಕೆ ಹೇಗೆ ಮೂರು ದೊಡ್ಡ ಭೇದವಿರುವದೋ-ಎಲ್ಲೆಲ್ಲಿಯೂ ಇರುವ ಮಹಾಕಾಶವೊಂದು, ಜಲಾಶಯವೆಂಬ ಉಪಾಧಿಯ ಅಳತೆಗೆ ಸಿಕ್ಕಂತಿರುವ ಆಕಾಶವೊಂದು, ಜಲದಲ್ಲಿರುವ ಪ್ರತಿಬಿಂಬವೆಂಬ ಆಕಾಶವೊಂದು - ಈ ಮೂರು ಬಗೆಯಾಗಿ ಆಕಾಶವೊಂದೇ ಹೇಗೆ ತೋರುತ್ತಿರುವದೋ - ಇದರಂತ ಅಂತಃ ಕರಣದ ಅಳತೆಗೆ ಸಿಕ್ಕಂತಿರುವ ಚೈತನ್ಯವೊಂದು, ಪೂರ್ಣವಾಗಿರುವ ಉಪಾಧಿಯಿಲ್ಲದ ಚೈತನ್ಯವೊಂದು, ಅಂತಃಕರಣದಲ್ಲಿ ಪ್ರತಿಬಿಂಬಿಸಿರುವ ಚಿದಾಭಾಸವೊಂದು, ಎಂದೀ ಪರಿಯಲ್ಲಿ ಚೈತನ್ಯವೊಂದೇ ಮೂರು ಬಗೆಯಾಗಿರುವದು.
ಸಾಭಾಸಬುದ್ಧೇಃ ಕರ್ತೃತ್ವಮವಿಚ್ಛಿನ್ನೇವಿಕಾರಿಣಿ |
ಸಾಕ್ಷಿಣ್ಯಾರೋಪ್ಯತೇ ಭ್ರಾನ್ತ್ಯಾ ಜೀವತ್ವಂ ಚ ತಥಾ ಬುಧೈಃ ||48||
ಚಿದಾಭಾಸದೊಡನೆ ಕೂಡಿರುವ ಅಂತಃಕರಣದಲ್ಲಿರುವ ಕರ್ತೃತ್ವವನ್ನು ಅಜ್ಞರಾದವರು ಕಡಿವಡೆಯದೆ ನಿರ್ವಿಕಾರವಾಗಿರುವ ಸಾಕ್ಷಿಚೈತನ್ಯದಲ್ಲಿ ಆರೋಪಿಸುತ್ತಿರುವರು, ಆ ಸಾಕ್ಷಿಯಲ್ಲಿ ಜೀವತ್ವವನ್ನು ಆರೋಪಿಸುತ್ತಿರುವರು.
ಅಭಾಸಸ್ತು ಮೃಷಾ ಬುದ್ಧಿರವಿದ್ಯಾಕಾರ್ಯಮುಚ್ಯತೇ |
ಅವಿಚ್ಛಿನ್ನಂ ತು ತದ್ಬ್ರಹ್ಮ ವಿಚ್ಛೇದಸ್ತು ವಿಕಲ್ಪತಃ ||49||
ಚಿದಾಭಾಸವೆಂಬುದು ಮಿಥ್ಯಾವಸ್ತುವು, ಬುದ್ಧಿಯು ಅವಿದ್ಯೆಯಿಂದುಂಟಾಗಿರುವ ಉಪಾಧಿಯೆನಿಸಿರುವದು. ಬ್ರಹ್ಮವಾದರೋ ಕಡಿವಡೆಯದೆ ಇರುತ್ತದೆ, ಅದರಲ್ಲಿ ಭೇದವೋ ಎಂದರೆ ಭ್ರಾಂತಿಯಿಂದ ತೋರುತ್ತಿರುವದು.
ಅವಚ್ಛಿನ್ನಸ್ಯ ಪೂರ್ಣೇನ ಹ್ಯೇಕತ್ವಂ ಪ್ರತಿಪಾದ್ಯತೇ |
ತತ್ತ್ವಮಸ್ಯಾದಿವಾಕ್ಯೈಶ್ಚ ಸಾಭಾಸಸ್ಯಾಹಮಸ್ತಥಾ ||50||
ತತ್ತ್ವಮಸಿ ಮುಂತಾದ ವೇದಾಂತವಾಕ್ಯಗಳಲ್ಲಿ ಅಂತಃಕರಣೋಪಹಿತವಾದ ಚೈತನ್ಯಕ್ಕೂ ಪೂರ್ಣಚೈತನ್ಯಕ್ಕೂ ಅಭೇದವನ್ನೂ ಹೇಳಿರುತ್ತದೆ. ಮತ್ತು ಚಿದಾಭಾಸದೊಡಗೂಡಿದ ಅಹಂಪದಾರ್ಥಕ್ಕೂ ಪೂರ್ಣಚೈತನ್ಯಕ್ಕೂ (ಅಭೇದವನ್ನು ಹೇಳಿರುತ್ತದೆ. ಅಂತಃಕರಣವೂ ಚಿದಾಭಾಸವೂ ಮಿಥ್ಯಾವಸ್ತುಗಳಾದ್ದರಿಂದ ಅವು ಪೂರ್ಣಚೈತನ್ಯಕ್ಕಿಂತ ಭಿನ್ನವಲ್ಲ.)
ಐಕ್ಯಜ್ಞಾನಂಃಯದೋತ್ಪನ್ನಂ ಮಹಾವಾಕ್ಯೇನ ಚಾತ್ಮನೋಃ |
ತದಾವಿದ್ಯಾ ಸ್ವಕಾರ್ಯೈಶ್ಚ ನಶ್ಯತ್ಯೇವ ನ ಸಂಶಯಃ ||51||
ಈ ರೀತಿಯಲ್ಲಿ ಜೀವಾತ್ಮಪರಮಾತ್ಮರುಗಳು ನಿಜವಾಗಿ ಒಂದೇ ಚೈತನ್ಯವೆಂಬ ತಿಳಿವು ಮಹಾವಾಕ್ಯದಿಂದ ಯಾವಾಗ ಉಂಟಾಗುವದೋ ಆಗ ಅಜ್ಞಾನವು ತನ್ನ ಕಾರ್ಯಗಳಾದ ಅನರ್ಥಗಳೊಡನೆ ನಾಶವಾಗಿಯೇಬಿಡುವದು. ಇದಕ್ಕೆ ಸಂಶಯವಿಲ್ಲ.
ಏತದ್ವಿಜ್ಞಾಯ ಮದ್ಭಕ್ತೋ ಮದ್ಭಾವಾಯೋಪಪದ್ಯತೇ ||51-1||
ಮದ್ಭಕ್ತಿವಿಮುಖಾನಾಂ ಹಿ ಶಾಸ್ತ್ರಗರ್ತೇಷು ಮುಹ್ಯತಾಮ್ |
ನ ಜ್ಞಾನಂ ನ ಚ ಮೋಕ್ಷಃ ಸ್ಯಾತ್ತೇಷಾಂ ಜನ್ಮಶತೈರಪಿ ||52||
ನನ್ನ ಭಕ್ತನಾದವನು ಇದನ್ನು ಅರಿತುಕೊಂಡು ನನ್ನ ಸ್ವರೂಪವನ್ನು ಹೊಂದಲು ಅರ್ಹನಾಗುತ್ತಾನೆ. ನನ್ನಲ್ಲಿ ಭಕ್ತಿಯಿಲ್ಲದೆ ಶಾಸ್ತ್ರದ ಗುಂಡಿಗಳಲ್ಲಿ ಬಿದ್ದು ಮುಂದುಗಾಣದೆ ಇರುವವರಿಗೆ ನೂರು ಜನ್ಮಗಳಾದರೂ ಜ್ಞಾನವಾಗಲಾರದು, ಮೋಕ್ಷವೂ ಆಗಲಾರದು.
ಇದಂ ರಹಸ್ಯಂ ಹೃದಯಂ ಮಮಾತ್ಮನೋ
ಮಯೈವ-ಸಾಕ್ಷಾತ್ ಕಥಿತಂ ತವಾನಘ |
ಮದ್ಭಕ್ತಿಹೀನಾಯ ಶಠಾಯ ನ ತ್ವಯಾ
ದಾತವ್ಯಮೈನ್ದ್ರಾದಪಿ ರಾಜ್ಯತೋಧಿಕಮ್ ||53||
ಎಲೈ ನಿರ್ದೋಷನಾದ ಹನುಮಂತನೆ, ಪರಮಾತ್ಮನಾದ ನನ್ನ ಹೃದಯವಾದ ಈ ರಹಸ್ಯವನ್ನು ನಾನೇ ನಿನಗೆ ನೇರಾಗಿ ಹೇಳಿರುತ್ತೇನಷ್ಟೆ. ಇಂದ್ರನ ರಾಜ್ಯವಾದ ಸ್ವರ್ಗಕ್ಕಿಂತಲೂ ಹೆಚ್ಚಿನದಾದ ಈ ಹೃದಯವನ್ನು ನನ್ನಲ್ಲಿ ಭಕ್ತಿಯಿಲ್ಲದ ವಂಚಕನಿಗೆ ನೀನು ತಿಳಿಸಿಕೊಡಬಾರದು.
ಏತತ್ತೇ ಕಥಿತಂ ದೇವಿ ಶ್ರೀರಾಮಹೃದಯಂ ಮಯಾ |
ಅತಿಗುಹ್ಯತಮಂ ಹೃದ್ಯಂ ಪವಿತ್ರಂ ಪಾಪಶೋಧನಮ್ ||54||
ಶ್ರೀಮಹಾದೇವನು ಕೊನೆಯಲ್ಲಿ ಇಂತೆಂದನು, ದೇವಿಯೆ, ನಿನಗೆ ನಾನು ಹೇಳಿರುವ ಈ ಶ್ರೀರಾಮಹೃದಯವು ಅತಿ ರಹಸ್ಯವಾದದ್ದು, ಮನೋಹರವಾದದ್ದು, ಪಾವನಕರವಾದದ್ದು, ಪಾಪಗಳನ್ನೆಲ್ಲ ಕಳೆಯುವಂಥದ್ದು.
ಸಾಕ್ಷಾದ್ರಾಮೇಣ ಕಥಿತಂ ಸರ್ವವೇದಾನ್ತಸಙ್ಗ್ರಹಮ್ |
ಯಃ ಪಠೇತ್ಸತತಂ ಭಕ್ತ್ಯಾ ಸ ಮುಕ್ತೋ ನಾತ್ರ ಸಂಶಯಃ ||55||
ಇದನ್ನು ರಾಮನು ತಾನೇ ಹೇಳಿರುತ್ತಾನೆ, ಸಮಸ್ತ ಉಪನಿಷತ್ತುಗಳ ಸಾರವೇ ಇದು. ಇದನ್ನು ಯಾವನು ಭಕ್ತಿಯಿಂದ ಸತತವೂ ವರಿಸುತ್ತಿರುವನೋ ಅವನು ಮುಕ್ತನೇ ಆಗುವನು. ಈ ವಿಷಯದಲ್ಲಿ ಸಂಶಯವಿಲ್ಲ.
ಬ್ರಹ್ಮಹತ್ಯಾದಿಪಾಪಾನಿ ಬಹುಜನ್ಮಾರ್ಜಿತಾನ್ಯಪಿ |
ನಶ್ಯನ್ತೈವ ನ ಸಂದೇಹೋ ರಾಮಸ್ಯ ವಚನಂ ಯಥಾ ||56||
ಅನೇಕ ಜನ್ಮಗಳಿಂದ ಕೂಡಿಹಾಕಿರುವ ಬ್ರಹ್ಮಹತ್ಯೆಯೇ ಮುಂತಾದ ಪಾಮಾಣವು.
ಯೋತಿಭ್ರಷ್ಟೋತಿಪಾಪೀ ಪರಧನಪರದಾರೇಷು ನಿತ್ಯೋಧ್ಯತೋ ವಾ |
ಸ್ತೇಯಿ ಬ್ರಹ್ಮಘ್ನಮಾತಾಪಿತೃವಧನಿರತೋ ಯೋಗಿಭೃನ್ದಾಪಕಾರೀ ||57||
ಯಃ ಸಂಪೂಜ್ಯಾಭಿರಾಮಂ ಪರತಿ ಚ ಹೃದಯಂ ರಾಮಚನ್ದ್ರಸ್ಯ ಭಕ್ತ್ಯಾ |
ಯೋಗೀನ್ದ್ರೈರಪ್ಯಲಭ್ಯಂ ಪದಮಿಹ ಲಭತೇ ಸರ್ವದೇವೈಃ ಸ ಪೂಜ್ಯಮ್ ||58||
ಯಾವನು ಅತ್ಯಂತವಾಗಿ ಕರ್ಮಭ್ರಷ್ಟನಾದವನೋ, ಯಾವನು ವರರ ಹಣ, ಪರರ ಹೆಂಡಿರು - ಇವುಗಳಲ್ಲಿಯೇ ಯಾವಾಗಲೂ ಆಸೆಯುಳ್ಳವನಾಗಿರುವನೋ, ಯಾವನು ಕಳ್ಳನೂ ಬ್ರಹ್ಮಹತ್ಯೆಯನ್ನು ಮಾಡಿ ತಾಯಿತಂದೆಗಳನ್ನು ಕೊಲ್ಲುವದರಲ್ಲಿಯೇ ನಿರತನಾಗಿರುವನೋ, ಯಾವನು ಯೋಗಿಗಳ ಬ್ರಹ್ಮಸಮೂಹಕ್ಕೇ ಅಪಕಾರವನ್ನೆಸಗುವ ಸ್ವಭಾವವುಳ್ಳವನೋ ಅಂಥವನೂ ರಾಮಚಂದ್ರನನ್ನು ಭಕ್ತಿಯಿಂದ ಪೂಜಿಸಿ ಮನೋಹರವಾದ ಹೃದಯವನ್ನು ಪಠನಮಾಡಿದರೆ ಅವನು ಯೋಗೀಶ್ವರರುಗಳಿಗೂ ಸಿಕ್ಕುವದಕ್ಕೆ ಕಷ್ಟವಾಗಿಯೂ ಸಮಸ್ತ ದೇವತೆಗಳೂ ಬಹಳವಾಗಿ ಪೂಜಿಸತಕ್ಕದ್ದಾಗಿಯೂ ಇರುವ ಪದವಿಯನ್ನು ಇಲ್ಲಿ ಪಡೆಯುತ್ತಾನೆ.
ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರಸಂವಾದೇ ಬಾಲಕಾಣ್ಡೇ ಶ್ರೀರಾಮಹೃದಯಂ ನಾಮ ಪ್ರಥಮಃ ಸರ್ಗಃ
Comments
Post a Comment