ಮನವೆಂಬ ರಣರಂಗ


ಸತ್ಯಯುಗದಲ್ಲಿ ದೇವತೆಗಳ ಲೋಕಕ್ಕೂ ರಾಕ್ಷಸರ ಲೋಕಕ್ಕೂ ಜಗಳ ನಡೆಯುತ್ತಲೇ ಇತ್ತಂತೆ. ಮುಂದೆ ಕೃತಯುಗದಲ್ಲಿ ಒಂದೇ ಲೋಕದಲ್ಲಿ ಎರಡು ದೇಶಗಳ ನಡುವೆ ಜಗಳವಿದ್ದು ಯುದ್ದಗಳು ನಡೆಯುತ್ತಿದ್ದವಂತೆ. ದ್ವಾಪರಯುಗದಲ್ಲಿ ಒಂದೇ ವಂಶದಲ್ಲಿಯ ವಿವಿಧ ವ್ಯಕ್ತಿಗಳ ನಡುವೆ ಜಗಳ ನಡೆಯುತ್ತಿದ್ದುದನ್ನು ಪುರಾಣಗಳು ನಮಗೆ ತಿಳಿಸುತ್ತವೆ. ಈಗ ಕಲಿಯುಗದಲ್ಲಿ ಆಗಿರುವುದಾದರೂ ಏನು? ಒಂದೇ ಮನೆಯಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಪರಸ್ಪರ ಜಗಳ. ಇಂದು ಎಲ್ಲಾ ಟಿ.ವಿ ಚಾನೆಲ್ ಗಳಲ್ಲಿ ಮೂಡಿ ಬರುತ್ತಿರುವ ಧಾರವಾಹಿಗಳು ಬಿಂಬಿಸುತ್ತಿರುವುದೂ - ವೈಭವೀಕರಿಸುತ್ತಿರುವುದೂ ಇದನ್ನೇ - ಅಲ್ಲವೇ?
ಸ್ವಲ್ಪ ಅವಲೋಕಿಸಿದರೆ ವ್ಯಕ್ತಿ - ವ್ಯಕ್ತಿಗಳ ನಡುವೆ ಮಾತ್ರ ಹೋರಾಟ ನಡೆಯುತ್ತಿರದೆ ವ್ಯಕ್ತಿ ತನ್ನೊಂದಿಗೆ ತಾನೇ ಹೋರಾಟ ಮಾಡುತ್ತಿರುವುದನ್ನೂ ಇಂದಿನ ವೈಜ್ಞಾನಿಕಯುಗದಲ್ಲಿ ಕಾಣಬಹುದಾಗಿದೆ. ಬೇರೊಬ್ಬ ವ್ಯಕ್ತಿಯೊಂದಿಗೆ ಕಾದಾಟ ಮಾಡುವುದನ್ನೇನೋ ಸಹಜ ಎಂದುಕೊಳ್ಳಬಹುದಾದರೂ ವ್ಯಕ್ತಿ ತನ್ನೊಂದಿಗೆ ತಾನೇ ಕಾದಾಡುತ್ತಾನೆ ಎಂಬುದು ನಂಬಲು ಕಷ್ಟವೇನಿಸಿದರೂ ಸತ್ಯವೇ ಆಗಿದೆ. ಈ ಕಾದಾಟ ನಡೆದಿರುವುದಾದರೂ ಎಲ್ಲಿ? ಆತನ ಮನಸ್ಸಿನಲ್ಲಿಯೇ. ಈ ಕಾದಾಟಕ್ಕೆ ಕಾರಣವಾದರೂ ಏನು? ಅದಕ್ಕೆ ಕಾರಣ ಒಂದಲ್ಲ, ಎರಡಲ್ಲ - ಹಲವಾರು! ಅದು ಕೀಳರಿಮೆಯಿಂದಾಗಿರಬಹುದು, ಪಾಪಪ್ರಜ್ಞೆಯಿಂದಾಗಿರಬಹುದು, ಅಹಂಕಾರದಿಂದಾಗಿರಬಹುದು, ಮನದಲ್ಲಿ ಮನೆ ಮಾಡಿಕೊಂಡು ಕುಳಿತಿರುವ ಆರುಜನ ವೈರಿಗಳಿಂದಾಗಿರಬಹುದು!
ಕಾಮ, ಕ್ರೋಧ, ಲೋಭ, ಮೋಸ, ಮದ ಹಾಗೂ ಮಾತ್ಸರ್ಯ ಇವುಗಳೇ ಆ ಆರುವೈರಿಗಳಾಗಿವೆ. ಈ ಆರು ವೈರಿಗಳನ್ನು ನಾವು ಪೋಷಿಸಿಕೊಂಡಷ್ಟೂ ನಮ್ಮೊಂದಿಗಿನ ನಮ್ಮ ಹೋರಾಟ ಅಧಿಕವಾಗುತ್ತದೆ. ಹೋರಾಟ ನಡೆಯುವಾಗ ಮನಸ್ಸು ಶಾಂತತೆಯನ್ನು ಹೊಂದಲು ಸಾಧ್ಯವಾದೀತೇ? ಇಲ್ಲವೇ ಇಲ್ಲ. ಪ್ರಶಾಂತವಾಗಿರುವ ಕೊಳಕ್ಕೆ ಒಂದು ದೊಡ್ಡ ದೊಣ್ಣೆ ಹಾಕಿ ಅಲ್ಲಾಡಿಸದರೆ ಅದರ ತಳದಲ್ಲಿರುವ ಬಗ್ಗಡವೆಲ್ಲಾ ಮೇಲಕ್ಕೆ ಬಂದು ತಿಳಿಯಾಗಿದ್ದ ನೀರೆಲ್ಲಾ ಬಗ್ಗಡವಾಗುವುದಿಲ್ಲವೇ? ದೊಣ್ಣೆಯ ಕುಲುಕಾಟ ಹೆಚ್ಚಾದಷ್ಟೂ ತಳದಲ್ಲಿರುವ ಕೊಳೆ ಹೆಚ್ಚು ಹೆಚ್ಚಾಗಿ ಮೇಲೆ ಮೇಲೆದದು ಬರುತ್ತದೆ. ನಮ್ಮ ಮನದಲ್ಲಿ ಮನೆಮಾಡಿಕೊಂಡು ಕುಳಿತಿರುವ ಆರುವೈರಿಗಳು ಮಾಡುತ್ತಿರುವ ಕೆಲಸವಾದರೂ ಇದೇ ಆಗಿದೆ. ಆ ವೈರಿಗಳು ಎದ್ದಿರುವವರೆಗೂ ಅವರ ಆಟಾಟೋಪ ನಿಲ್ಲುವುದಿಲ್ಲ - ಮನ ಬಗ್ಗಡವಾಗಿಯೇ ಇರುತ್ತದೆ!
ಒಂದು ಗಾಜಿನ ಶೀಷೆಯಲ್ಲಿ ಶುದ್ದವಾದ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಮಣ್ಣನ್ನು ಹಾಕಿ ಒಂದು ಕಡ್ಡಿಯಿಂದ ಕಲಕಿ. ಶೀಷೆಯನ್ನು ಬೆಳಕಿಗೆ ಹಿಡಿದು ನೋಡಿ. ಮಣ್ಣಿನ ಸಣ್ಣ ಸಣ್ಣ ಕಣಗಳೆಲ್ಲಾ ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವುದನ್ನೂ, ಒಂದಕ್ಕೊಂದು ಡಿಕ್ಕಿ ಹೊಡೆದುಕೊಳ್ಳುತ್ತಿರುವುದನ್ನೂ ಗಮನಿಸಿ.
ಇನ್ನೂ ಒಂದು ಚಿಕ್ಕ ಪ್ರಯೋಗವನ್ನು ಯಾವುದೇ ಸಲಕರಣೆಗಳಿಲ್ಲದೆಯೇ ಮಾಡಬಹುದು. ಮನೆಯೊಳಗೆ ಕಿಟಕಿಯಿಂದ ಅಥವಾ ಸೂರಿನ ಸಂದಿನಿಂದ ಬರುತ್ತಿರುವ ಬೆಳಕಿನ ಕೋಲನ್ನು ಸೂಕ್ಷ್ಮವಾಗಿ ಗಮನಿಸಿ. ಆ ಬೆಳಕಿನ ಕೋಲಿನಲ್ಲಿ ಅನೇಕ ಸಣ್ಣ ಕಣಗಳು ಅಡ್ಡಾದಿಡ್ಡಿಯಾಗಿ ಹೇಗೆ ಬೇಕೆಂದ್ರೆ ಹಾಗೆ ಚಲಿಸುತ್ತಿರುವುದನ್ನು ಗಮನಿಸಿ. ನಿಮ್ಮ ಬಾಯಿನಿಂದ ಬೆಳಕಿನ ಕೋಲಿನ ಮೇಲೆ ಸ್ವಲ್ಪ ಗಾಳಿ ಊದಿನೋಡಿ. ಆಗ ಅಲ್ಲಿರುವ ಕಣಗಳೂ ಹೆಚ್ಚಿನ ವೇಗದಿಂದ ಓಡಾಡತೊಡಗುತ್ತವೆ. ಗಾಳಿಯನ್ನು ಚೋರಾಗಿ ಊದಿ ಆ ಕಣಗಳನ್ನು ಬೆಳಕಿನ ಕೋಲಿನಿಂದ ಹೊರದಬ್ಬಿದರೆ, ಇನ್ನೊಂದು ಕಡೆಯಿಂದ ಬೇರೆ ಕಣಗಳು ಅಲ್ಲಿಗೆ ಬಂದು ಪರಸ್ಪರ ಡಿಕ್ಕಿ ಹೊಡೆಯಲು ಪ್ರಾರಂಭಿಸುತ್ತವೆ.
ನಮ್ಮ ಮನಸ್ಸಿನ ಕಥೆಯಾದರೂ ಹೀಗೆಯೇ ಇರುತ್ತದೆ. ಅಲ್ಲಿಯೂ ಸಹ ಸದಾ ವಿವಿಧ ಆಲೋಚನೆಗಳು ಆ ಸಣ್ಣ ಕಣಗಳಂತೆಯೇ ಅಡ್ಡಾದಿಡ್ಡಿಯಾಗಿ ಓಡಾಡುತ್ತಲೇ ಇರುತ್ತವೆ. ಪರಸ್ಪರ ಡಿಕ್ಕಿಯನ್ನೂ ಹೊಡೆದುಕೊಳ್ಳುತ್ತಿರುತ್ತವೆ. ಹೀಗಾಗಿಯೇ ಅದು ಕಳವಳವನ್ನೂ, ದುಗುಡವನ್ನೂ, ತಾಕಲಾಡವನ್ನೂ ಹೊಂದಿರುತ್ತದೆ. ಮನದಲ್ಲಿರುವ ವೈರಿಗಳ ಆಟ ಜೋರಾದಷ್ಟು ಮನದ ತಾಕಲಾಟ ಹೆಚ್ಚಾಗುತ್ತದೆ ಅಷ್ಟೆ.
ಮನದಲ್ಲಿ ಕುಳಿತಿದ್ದ ಆರು ವೈರಿಗಳು ನರ್ತನದ ಗೈದಿಹರು ನೋಡಾ |
ಅವರೆದ್ದು ಕುಣಿದಂತೆ ಮನವೆಂಬ ಗಂಗೆ ಬಗ್ಗಡವಾಗುತಿಹಳು ನೋಡಾ - ಸತ್ಸಂಗಿ ||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ