ಲಲಿತಾ ತ್ರಿಶತೀ - 2. ಓಂ ಕಲ್ಯಾಣ್ಯೈ ನಮಃ
ಕಲ್ಯಾಣವೆಂದರೆ ಸುಖ ಎಂದು ಅರ್ಥ, ಆ ಸುಖಗಳು ಯುವ ಸಾರ್ವಭೌಮಸುಖ ಮೊದಲುಗೊಂಡು ಬ್ರಹ್ಮಾನಂದ ಪರ್ಯಂತ ವಿವಿಧವಾಗಿ ತೈತ್ತಿರೀಯಾದ ಉಪನಿಷತ್ತುಗಳಲ್ಲಿ ಪ್ರತಿಪಾದಿಸಲ್ಪಟ್ಟಿವೆ. ಅವು "ಏತಸ್ಯೈವಾ ನಂದಸ್ಯ ಅನ್ಯಾನಿ ಭೂತಾನಿ ಮಾತ್ರಾಮುಪ ಜೀವಂತಿ" ಎಂಬ ಶ್ರುತಿ ಪ್ರಮಾಣಾನುಸಾರವಾಗಿ ಉತ್ತಮಾಧಮ ಭಾವವನ್ನು ಹೊಂದಿದ ಆಯಾಯ ಉಪಾಧಿಗಳಿಂದ ಪರಿಚ್ಛಿನ್ನ ರೂಪವನ್ನು ಹೊಂದಿದ ಪರಿಪೂರ್ಣಾನಂದದ ರೂಪಳಾಗಿವೆ. ಅವುಗಳನ್ನು ಕಲ್ಯಾಣ ಶಬ್ದವು ಬೋಧಿಸುವುದು. ಪರಿಪೂರ್ಣ ಬ್ರಹ್ಮಸ್ವರೂಪದಲ್ಲಿ ಉಪಾಧಿಯೋಗದಿಂದ ಸಮಷ್ಟಿವ್ಯಷ್ಟಿ ರೂಪಗಳನ್ನು ಹೊಂದಿದ ಸುಖಗಳ ಆಧಾರತ್ವವು ಸಂಭವಿಸುವುದರಿಂದ ಆಧಾರತ್ವ ಅರ್ಥವನ್ನು ಬೋಧಿಸುವ ಮತುಪ್ ಪ್ರತ್ಯಯಾಂತ ಸಮಾಸವು ಅಬಾಧಿತವಾಗಿರುವುದು. ಆನಂದಸ್ಯ - ಮಾತ್ರಾಂ ಎಂದು ಶ್ರುತಿಯಲ್ಲಿ ಆನಂದದ ಲೇಶವೆಂದು ಒಂದು ಸ್ವರೂಪದಲ್ಲಿ ಭೇದಭಾವನೆಯನ್ನು ಉಂಟುಮಾಡಿರುವುದು ಶಿರೋಮಾತ್ರ ಸ್ವರೂಪನಾದ ರಾಹುವನ್ನು ಕಂಡು ರಾಹುವಿನ ತಲೆ ಎಂದು ಪ್ರಯೋಗದಿಂದ ಭೇದಭಾವನೆಯನ್ನು ತೋರಿಸುವಂತೆ ಔಪಚಾರಿಕವಾದುದು. ಭೇದವನ್ನು ವಾಸ್ತವನಾಗಿ ಪ್ರತಿಪಾದಿಸುವ ತಾತ್ಪರ್ಯವಿಲ್ಲ, ಆದ್ದರಿಂದ ದೇವಿಯು "ವಿಜ್ಞಾನಮಾನಂದಂ ಬ್ರಹ್ಮ" ಎಂಬ ಶ್ರುತಿಯಲ್ಲಿ ಹೇಳಿದ ಪರಬ್ರಹ್ಮಸ್ವರೂಪ ಲಕ್ಷಣವಾದ ಆನಂದರೂಪವಾದ ಆಕಾರವುಳ್ಳವಳು - ಎಂದು ತಾತ್ಪರ್ಯವು.
(ಮುಂದುವರೆಯುವುದು...)
Comments
Post a Comment