ಲಲಿತಾ ತ್ರಿಶತೀ - 4. ಓಂ ಕಲ್ಯಾಣಶೈಲನಿಲಯಾಯೈ ನಮಃ
ಶಿಲೆಗಳ ಘನಾವಸ್ಥಾರೂಪವಾದ ವಿಕಾರವು ಶೈಲವೆನಿಸುವುದು. ದೇವಿಯು ಘನಾಕಾರವನ್ನು ಹೊಂದಿದ ಸುಖವೆಂಬ ಸ್ವಸ್ವರೂಪವಾದ ಕಲ್ಯಾಣ ಶೈಲದಲ್ಲಿ ಇರುವವಳೂ. ಈ ಅರ್ಥವು "ಕಲ್ಯಾಣಶೈಲೇ ಆನಂದಘನೇ ನಿಲತಿ ತಿಷ್ಠತಿ" ಎಂಬ ಸಮಾಸದಿಂದ ಲಭ್ಯವಾಗುವುದು. ಸ್ವಸ್ವರೂಪದಲ್ಲಿ ಪರದೇವತೆಯು ಇರುವಳು ಎಂದು "ಸ ಭಗವಃ ಕಸ್ಮಿನ್ ಪ್ರತಿಷ್ಠಿ ಇತಿ ಸ್ವೇ ಮಹಿಮ್ನಿ" ಎಂಬ ಪ್ರಶ್ನೋತ್ತರ ರೂಪವಾದ ಶ್ರುತಿ ವಾಕ್ಯದಿಂದ ತಿಳಿದುಬರುವುದು. ದೇವ ದತ್ತನು ತನ್ನಲ್ಲಿಯೇ ತಾನು ಇರುವನೆಂಬುದಾಗಿ ಸಾಮಾನ್ಯವಾಗಿ ಲೋಕ ಪ್ರಯೋಗವು ಇರುವಂತೆ ದೇವತೆಯು ಸ್ವಸ್ವರೂಪದಲ್ಲಿ ಇರುವುದೆಂಬುದು ವಿರುದ್ಧವಲ್ಲ ಅಥವಾ ಶಿಲಾವಿಕಾರದಂತೆ ಘನಭಾವ ಹೊಂದಿರುವ ಕಲ್ಯಾಣವು ಕಲ್ಯಾಣಶೈಲವು ಅದು ಆನಂದಮಯ ಕೋಶವು ದೇವಿಯು ಅದನ್ನು ಭವನವನ್ನಾಗಿ ಕಲ್ಪಿಸಿಕೊಂಡಿರುವಳು ಎಂದು ಅರ್ಥವಾಗುವಂತೆ ಕಲ್ಯಾಣ ಶೈಲೋ ನಿಲಯೋ ಯಸ್ಯಾಃ ಎಂದು ಬಹುವ್ರೀಹಿ ಎಂಬ ಸಮಾಸವನ್ನು ಅಂಗೀಕರಿಸುವುದು ವಿರುದ್ಧವಲ್ಲ. ಆನಂದಮಯ ಕೋಶವನ್ನು ಅಧಿಕರಿಸಿ "ಬ್ರಹ್ಮ ಪುಚ್ಫಂ ಪ್ರತಿಷ್ಠಾ" ಎಂಬ ಶ್ರುತಿಯು ಹಿಂದೆ ವಿವರಿಸಿದ ಅರ್ಥವನ್ನು ಸೂಚಿಸುತ್ತಿದೆ ಅಥವಾ ಕಲ್ಯಾಣ ಶೈಲವೆಂದರೆ ಪರ್ವತವು, ಅದು ಗೃಹವಾಗಿರುವವಳು ಈ ಅರ್ಥವು "ಸುಮೇರುಮಧ್ಯಶೃಂಗಸ್ಥಾ" ಎಂಬ ದೇವೀನಾಮದಿಂದ ಪ್ರಸಿದ್ಧವಾಗಿರುವುದು.
(ಮುಂದುವರೆಯುವುದು...)
Comments
Post a Comment