ಲಲಿತಾ ತ್ರಿಶತೀ - 1. ಓಂ ಕಕಾರರೂಪಾಯೈ ನಮಃ
ಸೂತಮುನಿಯು ಹೀಗೆ ಹೇಳಿದನು :- ಅನೇಕ ಕಾಲ ಪರಭಕ್ತಿಯಿಂದ ಗುರುಪಾದಕಮಲಗಳನ್ನು ಅವಲಂಬಿಸಿದ್ದ ಅಗಸ್ತ್ಯಮುನಿಗೆ ಶಿವದಂಪತಿ ರಚಿತವಾದ ಲಲಿತಾನಾಮತ್ರಿಶತೀ ಸ್ತೋತ್ರವನ್ನು ಉಪದೇಶಿಸಲು ದೇವಿಯಿಂದ ಪ್ರೇರೇಪಿಸಲ್ಪಟ್ಟ ಮುನಿಯು ಅದನ್ನು ಉಪದೇಶಮಾಡಲು ಉಪಕ್ರಮಿಸಿದನು. ದೇವಿಯು "ಕ" ಎಂಬ ವರ್ಣವು ಬೋಧಕ ವಿಶೇಷಣವುಳ್ಳವಳಾಗಿ ಇರುವಳು. ಎಂದರೆ ಕಕಾರವು ಆದಿಯಲ್ಲಿರುವ ಬೀಜಾಕ್ಷರ ಮಯವಾದ ಮಂತ್ರಶರೀರವುಳ್ಳವಳು ಎಂದು ತಾತ್ಪರ್ಯವು ಅಥವಾ ಕ ವರ್ಣ ರೂಪವಾದ ಶಬ್ಧವು ಬ್ರಹ್ಮ, ನೀರು, ಶಿರ ಮತ್ತು ಸುಖವೆಂಬ ಅರ್ಥಗಳಿಗೆ ವಾಚಕವಾಗಿದೆ, ಆದ್ದರಿಂದ ಕಕಾರವು ವಾಚಕವಾಗಿ ಇರುವ ಅರ್ಥಗಳು ಬ್ರಹ್ಮ ಮುಂತಾದುವುಗಳಾಗಿವೆ. ಬ್ರಹ್ಮ ಮುಂತಾದ ಅರ್ಥಗಳಲ್ಲಿರುವ ಅಸಾಧಾರಣ ಗುಣಗಳು ದೇವಿಯಲ್ಲಿರುವುದರಿಂದ ದೇವಿಯು ಬ್ರಹ್ಮಾದಿರೂಪಳಾಗುವಳು. ಹಿರಣ್ಯಗರ್ಭನಲ್ಲಿ ಜಗದ್ಧಾರಕತ್ವ, ಜಗತ್ಕರ್ತೃತ್ವಗಳು ಇರುವಂತೆ ವರ್ಣಮಾಲೆಯಲ್ಲಿ ವ್ಯಂಜನವರ್ಣಗಳಿಗೆ ಆದಿಯಾದ ಕಕಾರದಲ್ಲಿಯೂ ಇರುವುವು. ಜಲದಲ್ಲಿ ಸಸತ್ಯವನ್ನು ಪೋಷಣಮಾಡುವುದರ ಮೂಲಕ ಜಗತ್ಸಂಜೀವನ ಕಾರಿತ್ವವು ಇರುವಂತೆ ಮಂತ್ರದ ಆದ್ಯಕ್ಷರವಾದ ಕಕಾರದಲ್ಲಿಯೂ ಇದೆ. ಸರ್ವಪ್ರಾಣಿಗಳ ಶಿರಸ್ಸಿನಲ್ಲಿ ಅಮೃತವು ಇರುವುದರಿಂದ ಯೋಗಾಭ್ಯಾಸ ಬಲದಿಂದ ಕುಂಡಲಿನೀ ಉತ್ಥಾಪನ ಮೂಲಕ ಶಿರಸ್ಸನ್ನು ಹೊಂದಿ ಅಲ್ಲಿರುವ ಅಮೃತ ಪ್ರವಾಹದಿಂದ ನೆನೆದಿರುವ ಯೋಗಿಗಳ ಜೀವಾತ್ಮಕ್ಕೆ ಈಶ್ವರಸಾಮ್ಯವು ಉಂಟಾಗುವುದೆಂದು ಯೋಗಶಾಸ್ತ್ರದಲ್ಲಿ ಹೇಳಿರುವುದು, ಅದರಂತೆ ಲಲಿತಾ ಮಂತ್ರದ ಆದಿಯಲ್ಲಿರುವ ಕ ಕಾರವು ಪುರಶ್ಚರಣದಲ್ಲಿ ಆಸಕ್ತಿಯುಳ್ಳವರಿಗೆ ಶಿವಭಾವವನ್ನು ಕೊಡುವುದಾಗಿದೆ. "ಕಂ ಬ್ರಹ್ಮ ಖಂ ಬ್ರಹ್ಮ" ಎಂಬ ಶ್ರುತಿ ಪ್ರಮಾಣವನ್ನು ಅನುಸರಿಸಿ ದಹರಾಕಾಶ ಬ್ರಹ್ಮರೂಪವಾದ ಸುಖವು ಪರಮಪ್ರೇಮಾಸ್ಪದವಾಗಿ ಮುಮುಕ್ಷುಗಳಿಗೆ ಅಭಿಲಾಷ ಗೋಚರವಾಗಿರುವುದು. ಕಕಾರವು ಅತ್ಯಂತ ಪ್ರೇಮಾಸ್ಪದವಾದ ಮೂಲ ಮಂತ್ರದ ಆದಿ ಅಕ್ಷರವಾದ್ದರಿಂದ ಪೂಜ್ಯವಾದುದರಿಂದ ಅಭಿಲಾಷಗೋಚರವಾಗುವುದು ಈ ರೀತಿಯಾಗಿ ಬ್ರಹ್ಮಾದಿಗಳನ್ನು ಬೋಧಿಸುವ ಕಕಾರ ದೊಡನೆ ಐಕ್ಯವನ್ನು ಮಂತ್ರ ಶರೀರಳಾದ ದೇವಿಯು ಹೊಂದಿರುವಳು.
(ಮುಂದುವರೆಯುವುದು...)
(ಮುಂದುವರೆಯುವುದು...)
Comments
Post a Comment