ಗೀತಜಯಂತಿ

ಶ್ರೀಕೃಷ್ಣ ಅರ್ಜುನನಿಗೆ ೫೦೦೦ ವರ್ಷಗಳ ಹಿಂದೆ ಗೀತೋಪದೇಶ ಮಾಡಿದ. ಈ ಮಾತೇನೋ ನಿಜ. ಆದರೆ ಗೀತೆ ಸಾವಿರಾರು ವರ್ಷಗಳ ಹಿಂದಿನ ಐತಿಹಾಸಿಕ ಘಟನೆಯಾಗಿ ಮಾತ್ರವೆ ನಮಗೆ ಗ್ರಾಹ್ಯವಲ್ಲ. ಅದು ೫೦೦೦ ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಕೌರವ-ಪಾಂಡವರ ಯುದ್ಧದಲ್ಲಿ ನಡೆದ ಘಟನೆಯಷ್ಟೆ ಅಲ್ಲ. ಅದು ನಮ್ಮದೇ ಇತಿಹಾಸ.
ಕುರುಕ್ಷೇತ್ರ ಎಲ್ಲೋ ಉತ್ತರ ಭಾರತದಲ್ಲಿರುವ ಒಂದು ಭೂಭಾಗವಲ್ಲ. ನಮ್ಮೆಲ್ಲರ ಹದಯ-ಕ್ಷೇತ್ರವೆ ಕುರುಕ್ಷೇತ್ರ. ನಮ್ಮ ಕರ್ಮಕ್ಷೇತ್ರವಾದ ನಮ್ಮ ಬದುಕೇ ಕುರುಕ್ಷೇತ್ರ.
ನಮ್ಮಳಗೆಯೆ ಮಹಾಭಾರತದ ಯುದ್ಧ ನಡೆಯುತ್ತಿದೆ. ನಮ್ಮಳಗೆಯೆ ಕೌರವ ರಿದ್ದಾರೆ; ಪಾಂಡವರಿದ್ದಾರೆ! ಹದಿನೆಂಟು ಅಕ್ಷೋಹಿಣಿ ಸೇನೆಗಳಿವೆ.
ನಮ್ಮೊಳಗಿನ ದುರ್ಯೋಧನ ಇನ್ನೊಬ್ಬರ ಆಸ್ತಿಯನ್ನು ಲಪಟಾಯಿಸು ಎನ್ನುತ್ತಿರು ತ್ತಾನೆ. ನಮ್ಮೊಳಗಿನ ದುಃಶಾಸನ ಪರಸ್ತ್ರೀಯರ ಮೇಲೆ ಕೈಮಾಡಲು ಹಾತೊರೆಯು ತ್ತಿರುತ್ತಾನೆ. ನಮ್ಮೊಗಿನ ವಿಕರ್ಣ ಸಜ್ಜನಿಕೆಯ ಮುಖವಾಡದ ಮಾತುಗಳನ್ನಾಡುತ್ತ ನಮ್ಮೊಳಗಿನ ಹುಳುಕನ್ನು ಮುಚ್ಚಿಡಲು ಪ್ರಯತ್ನಿಸುತ್ತಾನೆ. ಸಾವಿರಸಾವಿರ ದುಷ್ಟವೃತ್ತಿಗಳು ಇದನ್ನು ಆಗಗೊಡಲು ನಮ್ಮಳಗೆ ಶಸ್ತ್ರ ಹಿಡಿದು ಸಜ್ಜಾಗಿ ನಿಂತಿವೆ.
ಇಂಥವರ ನಡುವೆಯೂ ನಮ್ಮೊಳಗಿನ ಧರ್ಮರಾಜ ‘ಛೇ, ಹೀಗೆಲ್ಲ ಮಾಡಬೇಡ’ ಎನ್ನುತ್ತಿರುತ್ತಾನೆ. ಭೀಮಾರ್ಜುನರು ‘ಇದರ ವಿರುದ್ಧ ಹೋರಾಡು’ ಎನ್ನುತ್ತಿರು ತ್ತಾರೆ. ನಕುಲ ‘ಶೀಲ ಕಳೆದುಕೊಂಡು ಕೆಟ್ಟ ಬಾಳು ಬದುಕಬೇಡ’ ಎಂದು ಎಚ್ಚರಿಸು ತ್ತಿರುತ್ತಾನೆ. ಸಹದೇವ ‘ದುರಹಂಕಾರಿಯಾಗಿ ದಾರಿ ತಪ್ಪಬೇಡ’ ಎಂದು ಬೆನ್ನು ತಟ್ಟುತ್ತಾನೆ. ಸಜ್ಜನಿಕೆಯ ಪುಟ್ಟ ಸೇನೆ ಇವರ ಪರವಾಗಿ ನಮ್ಮೊಳಗೆ ಕಾದಾಟಕ್ಕೆ ಸಿದ್ಧವಾಗಿದೆ.
ನಮ್ಮ ಬದುಕಿನಲ್ಲೇ ನಡೆಯುವ ಈ ಧರ್ಮಾಧರ್ಮಗಳ, ಸಜ್ಜನಿಕೆ-ದೌರ್ಜನ್ಯಗಳ, ಒಳಿತು-ಕೆಡುಕುಗಳ, ನೀತಿ-ಅನೀತಿಗಳ, ಮಾನವೀಯತೆ-ದಾನವೀಯತೆಗಳ ನಡುವಣ ಈ ನಿರಂತರ ಯುದ್ಧದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕೌರವರು ಗೆಲ್ಲುತ್ತಾರೆ. ನಾವು ಕೌರವರು ಹೇಳಿದಂತೆಯೇ ನಡೆದುಕೊಂಡುಬಿಡುತ್ತೇವೆ. ಪಾಂಡವರು ತೆಪ್ಪಗೆ ಸೋತು ಕಾಡುಪಾಲಾಗುತ್ತಾರೆ.
ಇಂಥ ಸಂದರ್ಭದಲ್ಲಿ ಗೀತೆ ನಮ್ಮನ್ನು ಎಚ್ಚರಿಸುತ್ತದೆ: ‘ನಿನ್ನೊಳಗೆ ನಡೆಯುವ ಯುದ್ಧದಲ್ಲಿ ಕೌರವರು ಗೆಲ್ಲುವಂತೆ ಮಾಡಿಕೊಂಡು ನಿನ್ನ ಬಾಳನ್ನು ಹಾಳು ಮಾಡಿ ಕೊಳ್ಳಬೇಡ. ಕೌರವರು ಗೆಲ್ಲುವುದು ಎಂದರೆ ನೀನು ಸೋಲುವುದು ಎಂದೇ ಅರ್ಥ. ಪಾಂಡವರು ಗೆಲ್ಲುವುದು ಎಂದರೆ ನೀನು ಗೆಲ್ಲುವುದು ಎಂದರ್ಥ. ಅದರಿಂದ ಎಲ್ಲ ಸಂದರ್ಭದಲ್ಲೂ ಪಾಂಡವರು ಗೆಲ್ಲುವಂತೆ ನೋಡಿಕೋ. ನೀನು ಕೌರವನಾಗಬೇಡ, ಅರ್ಜುನನಾಗು. ನಿನಗೆ ಭೀಮನ ಬೆಂಬಲವಿರಲಿ; ಧರ್ಮದ ನೆರವಿರಲಿ, ನಿನ್ನ ಬದುಕಿನ ಸಾರಥ್ಯವನ್ನು ಶ್ರೀಕೃಷ್ಣನಿಗೆ ಒಪ್ಪಿಸು’.
ಮನುಷ್ಯನ ಮಾನಸಿಕ ಸಮಸ್ಯೆಗಳಿಗೆಲ್ಲ ಸಾರ್ವಕಾಲಿಕವಾಗಿ ಉತ್ತರ ನೀಡುವ ಗ್ರಂಥ ಭಗವದ್‌ಗೀತೆ. ಅದರಿಂದಲೆ ಅದು ಯಾವುದೋ ಕಾಲಕ್ಕೆ, ಯಾವುದೋ ಒಂದು ವರ್ಗದ ಜನಕ್ಕೆ ಮಾತ್ರ ಸೀಮಿತವಾದ ಗ್ರಂಥವಲ್ಲ. ಒಂದು ಧರ್ಮದ ಜನಕ್ಕೆ ಮಾತ್ರವೇ ಗ್ರಾಹ್ಯವಾದ ಧಾರ್ಮಿಕ ಗ್ರಂಥವಲ್ಲ. ಕಾಲ-ದೇಶಗಳ ಸೀಮೆಯನ್ನು ದಾಟಿ ನಿಲ್ಲಬಲ್ಲ ಮಹಾನ್ ಗ್ರಂಥ.
ಗೀತೆ ಬರಿಯ ಅಧ್ಯಾತ್ಮ ಗ್ರಂಥವಲ್ಲ. ಜಗತ್ತಿನ ಮೊತ್ತಮೊದಲ ಮನಃಶಾಸ್ತ್ರೀಯ ಗ್ರಂಥವೂ ಹೌದು. ಯಾವ ಮನಃಶಾಸ್ತ್ರದ ಸಮಸ್ಯೆಗೂ ಗೀತೆ ಉತ್ತರಿಸದೆ ಬಿಡುವುದಿಲ್ಲ. ಆದರೆ ದಡ್ಡರಿಗೆ ಯಾವ ಮದ್ದೂ ಉಪಯೋಗವಿಲ್ಲ. ಸಾಯಹೊರಟವನಿಗೆ ಮದ್ದು ಅಸಹ್ಯವಾಗುತ್ತದೆ. ಅವನು ಮದ್ದನ್ನೆ ದ್ವೇಷಿಸುತ್ತಾನೆ; ಅಂತತಃ ತನ್ನ ಬದುಕನ್ನೆ ದ್ವೇಷಿಸುತ್ತಾನೆ.
ಇಂಥ ಒಂದು ಅದ್ಭುತವಾದ ಗ್ರಂಥ ನಮ್ಮ ದೇಶದಲ್ಲಿ ನಿರ್ಮಾಣವಾಗಿದೆ ಅನ್ನೋದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿರಬೇಕು. ‘ಗೀತೆಯ ದೇಶದಿಂದ ಬಂದವರು’ ಎಂದು ವಿದೇಶಿಯರು ನಮ್ಮನ್ನು ಗೌರವದಿಂದ ಕಾಣುವುದನ್ನು ನಾನು ಕಂಡು ದಂಗಾಗಿದ್ದೇನೆ. ಆದರೆ ನಮ್ಮ ಜನ ಇಷ್ಟು ದೊಡ್ಡ ಸಂಪತ್ತು ನಮ್ಮ ಬಳಿಯೇ ಇದ್ದೂ ಜ್ಞಾನದಾರಿದ್ರರಾಗಿ ಬದುಕುತ್ತಿದ್ದಾರೆ. ದಡ್ಡತನಕ್ಕೆ ಮದ್ದೇ ಇಲ್ಲ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ