ದಕ್ಷಿಣಾಮೂರ್ತಿಸ್ತೋತ್ರ - 7. ಆತ್ಮಪ್ರತ್ಯಯ

ಬಾಲ್ಯಾದಿಷ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ
ವ್ಯಾವೃತ್ತಾಸ್ವನುವರ್ತಮಾನಮಹಮಿತ್ಯನ್ತಃಸ್ಫುರನ್ತಂ ಸದಾ |
ಸ್ಮಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ
ತಸ್ಮೈಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||

    'ಬಾಲ್ಯವೇ ಮುಂತಾದ ಮತ್ತು ಎಚ್ಚರವೇ ಮುಂತಾದ ಎಲ್ಲಾ ಅವಸ್ಥೆಗಳೂ ಬೇರೆಬೇರೆಯಾಗುತ್ತಿರುವಲ್ಲಿ ಅನುಸರಿಸಿಕೊಂಡೇ ಬರುತ್ತಿರುವ 'ನಾನು' ಎಂದು ಒಳಗೆ ಸ್ಫುರಿಸುತ್ತಿರುವ ತಮ್ಮ ಆತ್ಮನನ್ನು ಭಜಿಸುತ್ತಿರುವವರಿಗೆ ತನ್ನನ್ನು ಭದ್ರಮುದ್ರೆಯಿಂದ ಯಾವನು ಪ್ರಕಟಗೊಳಿಸುತ್ತಿರುವನೋ ಅಂಥ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಗೆ ನಮಸ್ಕಾರ!' - ಎಂದು ಶ್ಲೋಕದ ಅಕ್ಷರಾರ್ಥ.


    ಹಿಂದಿನ ಶ್ಲೋಕದಲ್ಲಿ ಆತ್ಮನು ಸವಿಶೇಷನಾಗಿಯೂ ನಿರ್ವಿಶೇಷನಾಗಿಯೂ ಇದಾನೆಂದು ತೋರುತ್ತಿದ್ದರೂ ನಿರ್ವಿಶೇಷಸನ್ಮಾತ್ರನಾಗಿರುವದೇ ಅವನ ಸ್ವರೂಪವೆಂದೂ ತಿಳಿಸಲಾಗಿತ್ತು. ಈಗ ಆ ಸ್ವರೂಪವನ್ನು ಯಾವ ಪ್ರಕಾರದಿಂದ ವಿಚಾರ ಮಾಡಿ ತಿಳಿದುಕೊಳ್ಳಬೇಕೆಂಬುದನ್ನು ತಿಳಿಸಲಾಗುತ್ತದೆ. ದೇಹಾದಿಗಳಲ್ಲಿ ಆತ್ಮನೆಂಬ ಬುದ್ಧಿಯಿರುವದು ಅಜ್ಞರ ಸ್ವಭಾವ, ಮಾಯೆಗೆ ಒಳಗಾಗಿ ಅವರು ಆತ್ಮನನ್ನು ಬಗೆಬಗೆಯಾಗಿ ವಿಕಲ್ಪಿಸುವರು ಎಂದು ಐದನೆಯ ಶ್ಲೋಕದಲ್ಲಿ ಹೇಳಿತ್ತಷ್ಟೆ? ಮಾಯೆಯ ಹುಸಿತೋರಿಕೆಯನ್ನು ಕೈಬಿಟ್ಟು ನಿಜವಾದ ಆತ್ಮಸ್ವರೂಪನನ್ನೇ ಗೊತ್ತುಮಾಡುವದು ಹೇಗೆಂಬುದನ್ನು ಇಲ್ಲಿ ತಿಳಿಸಲಾಗುವದು.

    ಆತ್ಮಸ್ವರೂಪವನ್ನು 'ನಾನು' ಎಂಬ ಪ್ರತ್ಯಯಕ್ಕೆ ನಿಜವಾದ ವಿಷಯವು ಯಾವದು? ಎಂದು ಹುಡುಕುವದರಿಂದ ನಿಶ್ಚಯಿಸಬಹುದು- ಎಂದು ಶ್ರುತಿಯಲ್ಲಿ 'ಏಕಾತ್ಮಪ್ರತ್ಯಯಸಾರಮ್' ಎಂಬ ವಿಶೇಷಣದಿಂದ ತಿಳಿಸಲಾಗಿದೆ. ಆತ್ಮನು ಆತ್ಮಪ್ರತ್ಯಯಗಮ್ಯನಾಗಿರುತ್ತಾನೆ ನಾನು ಎಂಬ ಅರಿವಿನಿಂದ ತಿಳಿದುಬರುತ್ತಾನೆ, ಎಂದರೆ ಘಟಪಟಾದಿಗಳು ಆಯಾ ಪ್ರತ್ಯಯಗಳಿಗೆ ವಿಷಯವಾಗಿರುವಂತೆ ನಾನು ಎಂಬ ಪ್ರತ್ಯಯಕ್ಕೆ ಆತ್ಮನು ವಿಷಯನಾಗಿರುತ್ತಾನೆ ಎಂದೇನೂ ಅರ್ಥವಲ್ಲ ಏಕೆಂದರೆ 'ನಾನು' ಎಂಬ ಅರಿವಿನಿಂದ ತಿಳಿಯಬಹುದಾದದ್ದು ಯಾವದೂ ವಿಷಯವಾಗಿರುವಂತೆ ಇಲ್ಲ, ನಾನು ಎಂದು ಯಾವದನ್ನು ಅರಿತುಕೊಂಡರೂ ಅದಕ್ಕೆ ಹೊರಗಿನ ವಸ್ತುವು ವಿಷಯವಾಗಿ ಇರುತ್ತದೆ. ಭ್ರಾಂತಿಯಿಂದ ದೇಹವನ್ನೇ ನಾನು ಎಂದು ಭಾವಿಸುವಾಗಲೂ 'ನಾನು ಇದನ್ನು ಮುಟ್ಟುತ್ತೇನೆ' ಅಲ್ಲಿಗೆ ಹೋಗುತ್ತೇನೆ ಎಂದು ಹೊರಗಿನ ವಸ್ತುವನ್ನು ವಿಷಯವಾಗಿಯೂ ದೇಹವನ್ನು ವಿಷಯಿಯಾಗಿಯೂ ಇಟ್ಟುಕೊಳ್ಳುತ್ತೇವೆ.
   
    ಆದರೆ ನಾನು ಎಂದು ಒಂದು ಸಲ ತೋರುವ ಈ ದೇಹವು ಇನ್ನೊಂದು ಸಲ ನಮಗೆ ವಿಷಯವಾಗಿಯೂ ತೋರಬಹುದು ಹೇಗೆಂದರೆ 'ನಾನು ಹುಡುಗನಾಗಿದ್ದಾಗ ಇಂಥದ್ದೊಂದು ತೊಟ್ಟಿಲಿನಲ್ಲಿ ನನ್ನನ್ನು ಮಲಗಿಸುತ್ತಿದ್ದರಂತೆ ಸ್ವಲ್ಪ ದೊಡ್ಡವನಾದಮೇಲೆ ಇಂಥ ಪಾಠಶಾಲೆಯಲ್ಲಿ ಓದುತ್ತಿದ್ದೆನು' ಎಂದು ಶರೀರಸಹಿತವಾಗಿರುವ ಇಂದ್ರಿಯಗಳನ್ನು ನನಗೆ ನಾನೇ ವಿಷಯವಾಗಿ ಮಾಡಿ ಕೊಳ್ಳಬಹುದು; ಆಗ ಮನಸ್ಸೇ ನನ್ನ ಆತ್ಮವೆಂಬ ಭಾವನೆ ಇದ್ದುಕೊಂಡಿರುತ್ತದೆ. 'ಹುಡುಗನಾಗಿದ್ದಾಗ ನಮ್ಮ ಅಜ್ಜನನ್ನು ಕಂಡಿದ್ದೆನು; ಈಗ ಅಪ್ಪ, ಅಜ್ಜ ಯಾರೂ ಇಲ್ಲ ಮಕ್ಕಳೂ ಮೊಮ್ಮಕ್ಕಳೂ ಇದಾರೆ' ಎನ್ನುವಾಗ ಶರೀರಸಂಬಂಧದ ಅಪ್ಪ, ಅಜ್ಜ, ಮಕ್ಕಳು ಮೊಮ್ಮಕ್ಕಳು ಇವರನ್ನೇ ಪರಾಮರ್ಶಮಾಡಿದ್ದರೂ ಶರೀರವು ಬೇರೆಬೇರೆಯ ವಿಕಾರಗಳನ್ನು ಪಡೆದಿದೆಯೆಂಬುದೂ ನಾನು ಮತ್ರ ಅವನೇ ಎಂಬುದೂ ನಮಗೆ ಸ್ಫುಟವಾಗಿರುತ್ತದೆ ಅಲ್ಲವೆ? ಆದ್ದರಿಂದ 'ನಾನು' ಎಂಬ ಅರಿವಿನಿಂದ ನಾನು ಈಗ ಅನುಭವಿಸುತ್ತಿರುವ ಆತ್ಮನು ದೇಹಕ್ಕಿಂತ ಬೇರೆ ಎಂದಾಯಿತು ಬಾಲ್ಯ, ಯೌವನ, ಕೌಮಾರ, ವಾರ್ಧಕ ಎಂಬ ಅವಸ್ಥೆಗಳು ಬೇರೆಬೇರೆಯಾಗಿದ್ದರೂ ನನ್ನಲ್ಲಿ ಯಾವ, ಮಾರ್ಪಾಡೂ ಅಗಿಲ್ಲವೆಂದಾಯಿತು ಇದರಮತೆಯೇ ಹುಡುಗನಾಗಿದ್ದಾಗ ನನ್ನ ಮನಸ್ಸಿಗೆ ಎಲ್ಲವೂ ಸರಿಯೆಂದೇ ತೋರುತ್ತಿತ್ತು; ಈಗ ಎಲ್ಲವನ್ನೂ ವಿಚಾರಿಸಿಯೇ ಅರಿಯುತ್ತಿದ್ದೇನೆ' ಎಂಬ ಅರಿವಿನಲ್ಲಿ ಮನಸ್ಸಿಗೆ ಬೆಳವಣಿಗೆಯಾಗಿರುವದು ನನ್ನ ಅನುಭವದಲ್ಲಿರುವದರಿಂದ ನಾನು ಅದಕ್ಕಿಂತ ಬೇರೆ ಎಂದಾಗುತ್ತದೆ. ಆ ಮನಸ್ಸಿನ ಮಾರ್ಪಾಡುಗಳನ್ನು ನೋಡುತ್ತಿರುವ ನಾನು ಮಾತ್ರ ಅವನೇ ಎಂದು ನಿಶ್ಚಯಿಸಿಕೊಳ್ಳುತ್ತೇವೆ. ಹೀಗೆ ಆತ್ಮಪ್ರತ್ಯಯವು ಅಥವಾ ನಾನು ಎಂಬ ಅರಿವು ದೇಹ, ಪ್ರಾಣ, ಇಂದ್ರಿಯ, ಮನಸ್ಸು, ಬುದ್ಧಿ ಎಲ್ಲವನ್ನೂ ವಿಷಯಿಕರಿಸಿಕೊಳ್ಳುತ್ಇರುವದರಿಂದ ಇವುಗಳಲ್ಲಿ ಯಾವ ಯಾವ ಮಾರ್ಪಾಡು ಆಗುತ್ತಿದ್ದರೂ ಇವುಗಳನ್ನೆಲ್ಲ ಅನುಸರಿಸಿಕೊಂಡಿರುವ ನಾನೇ ಆತ್ಮನು ಎಂದು ಈ ಪ್ರತ್ಯಯದಿಂದ ನಿರ್ಧರಿಸಬಹುದಾಗಿರುತ್ತದೆ.

    ಆತ್ಮನನ್ನು ಪ್ರತ್ಯಕ್ಷಾದಿಪ್ರಮಾಣಗಳಿಂದ ಅರಿಯುವದಕ್ಕೆ ಬರುವಂತಿಲ್ಲ; ಏಕೆಂದರೆ ಅವನನ್ನು ಅವಲಂಬಿಸಿಯೇ ಆ ಪ್ರಮಾಣಗಳು ತಮ್ಮತಮ್ಮ ವಿಷಯವನ್ನು ತಿಳಿಸುತ್ತವೆ ಆದರೂ ಪ್ರಮಾಣದ ವಿಷಯಗಳೂ ಪ್ರಮಾಣಗಳೂ ಬೇರ್ಪಡುತ್ತಿದ್ದರೂ ಅವುಗಳನ್ನು ವಿಷಯಿಕರಿಸುತ್ತಿರುವ ಆತ್ಮನೇ ನಾನು ಎಂದು ಆತ್ಮಪ್ರತ್ಯಯದಿಂದ ಅವನನ್ನು ನಿಶ್ಚಯಿಸಬಹುದಾಗಿದೆ ಹೀಗೆ ಆತ್ಮನನ್ನು ಆತ್ಮಪ್ರತ್ಯಯದಿಂದ ಅರಿಯುವದೆಂದರೆ ಅವನನ್ನು ಅದಕ್ಕೆ ವಿಷಯವಾಗಿಸಿಕೊಳ್ಳುವದಲ್ಲ ಏಕೆಂದರೆ ಯಾವದನ್ನು ವಿಷಯಿಕರಿಸಿಕೊಂಡರೂ ಆತ್ಮನು ವಿಷಯಿಯಾಗಿಯೇ ಉಳಿಯುತ್ತಾನೆ.

    ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ವಿಚಾರಮಾಡಬಹುದು ನಾನು ಇದು ಎಂಬ ವಿಭಾಗದಿಂದ ನಮ್ಮ ಒಳಗೂ ಹೊರಗೂ ತೋರುವದೆಲ್ಲವೂ ನಮ್ಮ ಆತ್ಮನಿಗೇ ವಿಷಯವಾಗಿರುತ್ತದೆ ರಸ್ತೆಯಲ್ಲಿರುವ ದೀಪದ ಕಂಬವು ತನು ನಿಂತಲ್ಲಿ ನಿಂತಿದ್ದರೂ ಆ ಕಡೆಯಿಂದ ಈ ಕಡೆಗೂ ಈ ಕಡೆಯಿಂದ ಆ ಕಡೆಗೂ ಓಡಾಡುವ ವಾಹನಗಳನ್ನು ಪ್ರಾಣಿಗಳನ್ನೂ ಮನುಷ್ಯರನ್ನೂ ತನ್ನ ಬೆಳಕಿನಿಂದ ಬೆಳಗುತ್ತಿರುವದಲ್ಲವೆ? ಹಾಗೆಯೇ ದೇಹಾದಿಗಳೂ ಬಾಲ್ಯಾದ್ಯವಸ್ಥೆಗಳೂ ಬಂದು ಹೋಗುತ್ತಿರುವದನ್ನು ಎಂದೆಂದಿಗೂ ಆ ಆತ್ಮನು ತನ್ನ ಸ್ವರೂಪವಾದ ಜ್ಞಾನದಿಂದ ಬೆಳಗುತ್ತಿರುವ ಮಹಾಪ್ರದೀಪವಾಗಿರುತ್ತಾನೆ. ಮಾರ್ಪಡುವದೆಲ್ಲವನ್ನೂ ಅರಿಯುವಾಗ ಈ ಆತ್ಮನಲ್ಲಿ ಯಾವ ವಿಕ್ರಿಯೆಯೂ ಆಗಿರುವದಿಲ್ಲ ಈ ಆತ್ಮನ ಸ್ವರೂಪವನ್ನು ನಾವು ಇದೆ ಎಂದಾಗಲಿ ಇಲ್ಲ ಎಂದಾಗಲಿ ಅರಿಯುವದಕ್ಕೆ ಬರುವಂತಿಲ್ಲ ಏಕೆಂದರೆ ಈ ಆತ್ಮಸ್ವರೂಪದ ಅವಲಂಬನೆಯಿಂದಲೇ ನಾವು ಏನನ್ನಾದರೂ ಇದೆ ಇಲ್ಲ ಎನ್ನುತ್ತಿರುವೆವು ಹಿಂದಿನ ಈಗಿನ ಮುಂದಿನ ಎಲ್ಲಾ ವಿಷಯಗಳನ್ನೂ ಅರಿಯುತ್ತಿರುವ ಈ ಆತ್ಮಸ್ವರೂಪವು ಇದೆಯೆಂಬುದು ಅನುಭವಮಾತ್ರದಿಂದಲೇ ನಮಗೆ ಗೊತ್ತಾಗುತ್ತದೆ ನಾನು ಎಂಬ ಪ್ರತ್ಯಯವು ವಿಚಾರಕ್ಕೆ ಬರಿಯ ನೆಪವಾಗಿರುತ್ತದೆ.

    ಮುಪ್ಪಿನವರೆಗಿನ ಅವಸ್ಥೆಗಳನ್ನು ಈ ಆತ್ಮನು ಅರಿಯುತ್ತಿರುವದರಿಂದ ಇವನನ್ನು ಬಾಲ್ಯಾದ್ಯವಸ್ಥೆಗಳು ಯಾವವೂ ಹೇಗೆ ಸೊಂಕದೆ ಇರುವವೋ ಹಾಗೆಯೇ ಜನ್ಮಮರಣಗಳೆಂಬ ಅವಸ್ಥೆಗಳೂ ಇವನನ್ನು ಸೋಂಕುವಹಾಗಿಲ್ಲ; ಏಕೆಂದರೆ ದೇಹವು ಹುಟ್ಟುವದರಿಂದ ಆತ್ಮಸ್ವಭಾವವು ಹುಟ್ಟುವದಿಲ್ಲ, ದೇಹವು ಸಯುವದರಿಂದ ಇದು ಸಾಯುವಹಾಗಿಲ್ಲ ಆದ್ದರಿಂದಲೇ 'ಸ ವಾ ಏಷ ಮಹಾನಜ ಆತ್ಮಾಜರೋಮರೋಮೃತೋಭಯೋ ಬ್ರಹ್ಮ' (ಬೃ.4-4-25) ಈ ನಮ್ಮ ಆತ್ಮನೇ ಜನ್ಮವಿಲ್ಲದ ಮಹಾನಾತ್ಮನು, ಇವನು ಮುಪ್ಪಿಲ್ಲದವನು, ಸಾವಿಲ್ಲದವನು, ಸಾವಾಗದ ಸ್ವಭಾವದವನು, ಅಂಜಿಕೆಯಿಲ್ಲದವನು, ಬ್ರಹ್ಮವು ಎಂದು ಶ್ರುತಿಯು ಸಾರುತ್ತಿರುವದು. ಈ ಆತ್ಮನು ನಿತ್ಯವೂ ತನ್ನಲ್ಲಿ ತಾನು ಇದ್ದಂತೆ ಇರುವ ಸ್ವಭಾವದವನಾಗಿರುತ್ತಾನೆ.

    ಈಗ ಬಾಲ್ಯಾದವಸ್ಥೆಗಳನ್ನು ಬಿಟ್ಟು ಜಾಗರಿತಾದ್ಯವಸ್ಥೆಗಳನ್ನು ವಿಚಾರಕ್ಕೆ ತೆಗೆದುಕೊಳ್ಳಬಹುದು ಈ ಎರಡು ಅವಸ್ಥಾರಾಶಿಗಳಲ್ಲಿ ಒಂದಕ್ಕಿಂತ ಒಮದು ವಿಲಕ್ಷಣವಾಗಿರುತ್ತದೆ. ಅದೇನೆಂದರೆ : ಬಾಲ್ಯಾದಿಗಳು ಒಂದರ ಹಿಂದೆ ಒಂದು ಬರುವಂತೆ ತೋರುತ್ತಿರುವತ್ತವೆ; ಜನ್ಮದಿಂದ ಹಿಡಿದು ಮರಣದವರೆಗೂ ಆಗುವ ದೇಹದ ವಿಕಾರಗಳು ಒಂದರ ಹಿಂದೊಂದು ಬರುತ್ತಿದ್ದರೂ ಈ ದೇಹಾದಿಗಳು ನನಗೇ ಸಂಬಂಧಪಟ್ಟಿರುವವು- ಎಂಬ ಭ್ರಾಂತಿಯೊಂದು ಅವಿವೇಕಿಗಳಿಗೆ ಅಂಟಿ ಕೊಂಡಿರುತ್ತದೆ. ಶರೀರವು ಬಾಲ್ಯವೆಂಬ ಮೊದಲನೆಯ ಅವಸ್ಥೆಯಿಂದ ಮುಪ್ಪು ಎಂಬ ಕೊನೆಯ ಅವಸ್ಥೆಗೆ ಬರುವವರೆಗೆ ಅದೇ ಈ ದೇಹವೆಂದು ಹೇಳುವದಕ್ಕೆ ಗುರುತೇ ಇಲ್ಲದಷ್ಟು ಮಾರ್ಪಾಡುಗಳು ಅದರಲ್ಲಿ ಆಗಿಹೋಗಿರುತ್ತವೆ; ಆದರೂ ಅದೇ ಈ ನನ್ನ ದೇಹವು ಎಂಬ ಭಾವನೆಯೊಂದು ನಮ್ಮನ್ನು ಬೆನ್ನಂಟಿರುತ್ತದೆ. ಹೀಗೆ ವಿಕಾರಗಳು ಆಗುತ್ತಿದ್ದರೂ 'ಅದೇ ಇದು' - ಎಂಬ ಬುದ್ಧಿಗೆ ವಿಷಯವಾಗಿರುವ ಮಸ್ತುಗಳನ್ನು ಪರಿಣಾಮಿನಿತ್ಯ ಎನ್ನುತ್ತಾರೆ. ಪರಿಣಾಮಿನಿತ್ಯನಾಗಿರುವ ದೇಹವೇ ಮುಂತಾದವುಗಳ ಸಂಬಂಧವು ಆತ್ಮನಿಗೆ ನಿಜವಾಗಿರುವದಿಲ್ಲವಾದರೂ ಅವಿವೇಕಿಗಳಿಗೆ ಈ ಸಂಬಂಧವು ನಿತ್ಯವಾಗಿರುವದೆಂಬ ಭ್ರಾಂತಿಯು ಉಂಟಾಗುತ್ತಲೇ ಇರುವದು ಆದ್ದರಿಂದ ಈ ಭ್ರಾಂತಿಯನ್ನು ನಿರ್ಮೂಲಮಾಡುವ ಅನುಭವವೊಂದನ್ನು ತೋರಿಸಿಕೊಡುವದು ಅವಶ್ಯವಾಗಿರುತ್ತದೆ ಅದಕ್ಕಾಗಿಯೇ ಜಾಗ್ರದಾದ್ಯವಸ್ಥೆಗಳನ್ನು ಉದಾಹರಿಸಿರುವದು.

    ಈ ಎರಡನೆಯ ರಾಶಿಯ ಅವಸ್ಥೆಗಳಲ್ಲಿ ಒಂದು ವಿಶೆಷವಿರುತ್ತದೆ. ಎಚ್ಚರ ಕನಸು- ಇವೆರಡರಲ್ಲಿ ಯಾವದಾದರೊಂದು ಎರಡನೆಯ ವಸ್ತುವನ್ನು ಕಾಣುತ್ತಿರುತ್ತೇವೆ; ಸುಷುಪ್ತಿಯಲ್ಲಿ ನಮಗೆ ಏನೂ ಕಾಣಿಸುವದೇ ಇಲ್ಲ. ಎರಡನೆಯ ವಸ್ತುವಿನ ಅರಿವು ಇರುವ ದರ್ಶನವೃತ್ತೈವಸ್ಥೆ, ಯಾವ ಅರಿವೂ ಇಲ್ಲದ ಆದರ್ಶನವೃತ್ತ್ಯವಸ್ಥೆ ಎಂಬ ಎರಡು ಪಂಗಡಗಳಲ್ಲಿ ಸೇರದೆ ಇರುವ ಯಾವ ಅವಸ್ಥೆಯೂ ಇರುವದಿಲ್ಲ ಆದ್ದರಿಂದ ಸನ್ನಿ, ಮೂರ್ಛೇ ಮುಂತಾದ ಬೇರೆಯ ಅವಸ್ಥೆಗಳನ್ನು ಇಲ್ಲಿ ವಿಚಾರಕ್ಕೆ ತೆಗೆದುಕೊಳ್ಳಬೇಕಾಗಿರುವದಿಲ್ಲ. ಜಾಗ್ರತ್ಸ್ವಪ್ನ ಸುಷುಪ್ತಿಗಳನ್ನು ವಿಚಾರಮಾಡಿಬಿಟ್ಟರೆ ಜ್ಞೇಯರಾಶಿಯನ್ನೆಲ್ಲ ವಿಚಾರಮಾಡಿದಂತೆ ಆಗಿಬಿಡುತ್ತದೆ ಏಕೆಂದರೆ ಈ ಮೂರಿ ಅವಸ್ಥೆಗಳೊಳಗೆ ಅಡಕವಾಗದೆ ಇರುವ ಅವಸ್ಥೆಯೇ ಇಲ್ಲವಾದ್ದರಿಮದ ಇವುಗಳಿಗಿಂತ ವ್ಯತಿರಿಕ್ತವಾದ ಜ್ಞೇಯವೇ ಇರುವದಿಲ್ಲ.

    ಬಾಲ್ಯಾದಿಗಳ ಪರೀಕ್ಷೆಗೂ ಜಾಗ್ರದಾದಿಗಳ ಪರೀಕ್ಷೆಗೂ ಇರುವ ಒಂದು ವೈಲಕ್ಷಣ್ಯವೇನೆಂದರೆ, ಬಾಲ್ಯಾದಿಗಳೆಲ್ಲ ಎಚ್ಚರವೆಂಬ ಒಂದೇ ಅವಸ್ಥೆಗೆ ಸೇರಿರುತ್ತವೆ; ಅವುಗಳೆಲ್ಲ ಎಚ್ಚರದ ಕಾಲದಲ್ಲಿ ಉಂಟಾಗುತ್ತಿರುತ್ತವೆ. ಹುಡುಗನಾಗಿದ್ದವನು ಹರೆಯದವನಾಗಿದ್ದಾಗ ಹುಡುಗತನವೂ ಯೌವನವೂ ಒಂದಿರುವಾಗ ಇನ್ನೊಂದಿರುವದಿಲ್ಲವಾದರೂ ಹುಡುಗನಾಗಿದ್ದವನೇ ಹರೆಯದವನಾಗುವನೆಂಬ ಭಾವನೆಯು ನಮ್ಮನ್ನು ಹಿಡಿದುಕೊಂಡಿರುವದರಿಂದ 'ಹುಡುಗತನವಿದ್ದಾಗ ಅದು ನಿಜವಾಗಿಯೂ ಇತ್ತು, ಆ ಮೇಲೆ ಅದೇ ವ್ಯಕ್ತಿಗೇ ಯೌವನವು ಬಂದಿತು ಎಂದೇಕೆ ತಿಳಿಯಬಾರದು? ಎಂಬ ಶಂಕೆ ಏಳುವ ಸಂಭವವಿದೆ ಆದರೆ ಎಚ್ಚರ ಕನಸು ಮುಂತಾದ ಅವಸ್ಥೆಗಳನ್ನು ಪರೀಕ್ಷಿಸುವಾಗ ಹೀಗಿಲ್ಲ ಎಚ್ಚರವು ಇರುವಾಗ ಸ್ವಪ್ನವಾಗಲಿ ಸುಷುಪ್ತಿಯಾಗಲಿ ಇರುವದೇ ಇಲ್ಲ; ಅವು ಈಗ ಎಲ್ಲಿಯಾದರೂ ಬೇರೊಂದೆಡೆಯಲ್ಲಿ ನಿಜವಾಗಿದ್ದುಕೊಂಡಿರುವವೆಂದು ನಾವು ಯಾರೂ ಭಾವಿಸುವದಿಲ್ಲ; ಹೀಗೆಯೇ ಕನಸನ್ನು ಕಾಣುತ್ತಿರುವಾಗ ಎಚ್ಚರವಾಗಲಿ ತನಿನಿದ್ರೆಯಾಗಲಿ ಎಲ್ಲಿಯೂ ಇರುವದೇ ಇಲ್ಲ ಇದೂ ಅಲ್ಲದೆ ಎಚ್ಚರ, ಕನಸು, ನಿದ್ರೆ- ಇವು ಮೂರೂ ಬಾಲ್ಯ, ಯೌವನ, ಕೌಮಾರ - ಈ ಅವಸ್ಥೆಗಳಂತೆ ಒಂದೇ ಕಾಲ ಪ್ರವಾಹದಲ್ಲಿ ಒಂದಾಗುತ್ತಲೊಂದು ಬರುತ್ತಿರುವದಿಲ್ಲ ಏಕೆಂದರೆ ಎಚ್ಚರದಲ್ಲಿ ನಮ್ಮ ಅನುಭವಕ್ಕೆ ಬರುವ ಕಾಲವೇ ಬೇರೆ, ಕನಸುಗಳಲ್ಲಿ ಕಾಣಬರುವ ಕಾಲಪ್ರವಾಹವೇ ಬೇರೆ ಈ ದೃಷ್ಟಿಯಿಂದ ವಿಚಾರಮಾಡುವಾಗ ಎಚ್ಚರದ ಕಾಲದಲ್ಲಿ ಸ್ವಪ್ನವು ಹಿಂದಿನ ಕಾಲಕ್ಕೆ ಅಥವಾ ಮುಂದಿನ ಕಾಲಕ್ಕೆ ಸೇರುವಂತೆಯೇ ಇಲ್ಲ ಕನಸುಗಳಲ್ಲಿ ತೋರುತ್ತಿರುವ ಪ್ರತಿಯೊಂದು ಕಾಲಪ್ರವಾಹದಲ್ಲಿಯೂ ಹಿಂದೆ ಈಗ, ಮುಂದೆ ಎಂಬ ಭಾಗಗಳು ಇರುತ್ತಿದ್ದರೂ ಎಚ್ಚರವು ಆ ಕಾಲ ಪ್ರವಾಹಗಳಲ್ಲಿ ಯಾವದೊಂದರಲ್ಲಿಯೂ ಇರುವದೇ ಇಲ್ಲ ಆದರೂ ಎಚ್ಚರದಲ್ಲಿಯೂ ಕನಸುಗಳಲ್ಲಿಯೂ ಆತ್ಮನು ಒಬ್ಬನೇ ಇರುತ್ತಾನೆ; ನಾನೇ ಎಚ್ಚರವನ್ನು ಕಾಣುತ್ತಿರುವವನು ನಾನೇ ಅನೇಕಸ್ವಪ್ನಗಳನ್ನು ಅನುಭವಿಸಿರುವವನು ಎಂಬ ಅನುಭವಕ್ಕೆ ಎಂದಿಗೂ ಬಾಧೆಯಿಲ್ಲ ಆದ್ದರಿಂದ ಅವಸ್ಥೆಗಳು ಒಂದೊಂದೂ ಮಿಕ್ಕಿನ ಎರಡೂ ಅವಸ್ಥೆಗಳನ್ನು ಪೂರ ಒರೆಸಿಹಾಕಿಯೆ ತೋರಿಕೊಳ್ಳುವವೆಂದು ಆಯಿತು ಯಾವ ಎರಡು ಅವಸ್ಥೆಗಳಿಗೂ ಯಾವ ಕಾಲಕೃತವಾದ ಸಂಬಂಧವೂ ಇಲ್ಲ ಈ ಅವಸ್ಥೆಗಳು ಬೇರ್ಪಡುತ್ತಿರುವವು ಎಂದರೆ ಒಂದರ ಹಿಂದೊಂದು ಬರುತ್ತಿರುವವು ಎಂದೇನೂ ಅರ್ಥವಲ್ಲ ಒಂದು ಮತ್ತೆರಡನ್ನೂ ಅಳಿಸಿಹಾಕಿಯೇ ಬರುತ್ತಿರುವದು ಎಂದೇ ಅರ್ಥ.
   
    ಈ ದೃಷ್ಟಿಯಿಂದ ನೋಡಿ ವಿಮರ್ಶಿಸಿದಾಗ ಏರ್ಪಡುವ ಸಿದ್ಧಾಂತವೇನೆಂದರೆ: ಆತ್ಮನು ಎಲ್ಲಾ ಅವಸ್ಥೆಗಳನ್ನೂ ಕಾಣುತ್ತಾ, ತನ್ನ ಸ್ವರೂಪದಲ್ಲಿ ಯಾವ ಮಾರ್ಪಾಢೂ ಇಲ್ಲದೆ ಇರುತ್ತಾನೆ ಆದ್ದರಿಂದ ಅವನು ಪರಮಾರ್ಥ ಸತ್ಯಸ್ವರೂಪನು ಆದರೆ ಅವಸ್ಥೆಗಳು ಹಾಗಲ್ಲ ಒಂದು ಹಗ್ಗವನ್ನು ಕೋಲು ನೀರಿನ ಕೋಡಿ, ನೆಲದ ಬಿರುಕು, ಹಾವು ಎಂದು ಬಗೆಬಗೆಯಾಗಿ ನಾವು ಕಲ್ಪಿಸಿಕೊಳ್ಳುವಾಗ ಅವು ಕಲ್ಪನಾಮಾತ್ರದಿಂದ ತೋರುತ್ತಿರುವವೇ ಹೊರತು ನಿಜವಾಗಿ ಹಗ್ಗದಲ್ಲಿ ಇದ್ದುಕೊಂಡೇ ಇರುವದಿಲ್ಲ ಅವು ನಮ್ಮ ಮನಸ್ಸಿಗೆ ತೋರುವ ವಿಕಲ್ಪ ಮಾತ್ರವಾಗಿರುತ್ತವೆ ಆದ್ದರಿಂದ ಅವು ಬರಿಯ ಹುಸಿತೋರಿಕೆಗಳು ಇದರಂತೆ ಆತ್ಮನು ಜಾಗ್ರತ್ಸ್ವಪ್ನಸುಷುಪ್ತಿಗಳೆಂಬ ಅವಸ್ಘೆಗಳನ್ನು ಅನುಭವಿಸುವಂತೆ ತೋರಿದರೂ ಹಗ್ಗದಲ್ಲಿ ತೋರುವ ಕೋಲು, ನೀರಿನ ಕೋಡಿ ಮುಂತಾದವು ಹಗ್ಗವನ್ನು ಸ್ವಲ್ಪವೂ ಸೋಂಕದೆ ಇರುವಂತೆ ಈ ಅವಸ್ಥೆಗಳು ಆತ್ಮನ ಸ್ವರೂಪವನ್ನು ಸ್ವಲ್ಪವೂ ಸೋಂಕದೆ ಇರುವಂತೆ ಈ ಅವಸ್ಥೆಗಳು ಆತ್ಮನ ಸ್ವರೂಪವನ್ನು ಸ್ವಲ್ಪವೂ ಸೋಂಕದೆ ಇರುತ್ತವೆ ಹಗ್ಗದಲ್ಲಿ ತೋರುವ ಹಾವಿನಿಂದ ಹಗ್ಗದಲ್ಲಿ ಯಾವ ಮಾರ್ಪಾಡೂ ಆಗಿರುವದಿಲ್ಲ ಅದು ನಿಜವಾಗಿಲ್ಲವೆಂದು ತಿಳಿಯಬಂದಾಗ ಆ ಹಾವಿನ ಕಲೆಯಾವದೂ ಹಗ್ಗಕ್ಕೆ ಅಂಟಿಕೊಂಡಿರುವದಿಲ್ಲ ಇದರಂತೆ ನಾವು ನೋಡಿರುವ ಎಚ್ಚರದಿಂದಾಗಲಿ ಕನಸುಗಳಿಂದಾಗಲಿ ನಮ್ಮ ನಿಜವಾದ ಸ್ವರೂಪದಲ್ಲಿ ಯಾವ ಮಾರ್ಪಾಡೂ ಆಗಿರುವದಿಲ್ಲ ಎಚ್ಚರವನ್ನು ಬಿಟ್ಟು ಕನಸಿಗಾಗಲಿ ಕನಸನ್ನು ಬಿಟ್ಟು ಎಚ್ಚರಕ್ಕಾಗಲಿ ನಾವು ಹೋದಾಗ ಮೊದಲಿನ ಅವಸ್ಥೆಯ ಕಲೆಯು ನಮ್ಮ ಸ್ವರೂಪಕ್ಕೆ ಒಂದಿಷ್ಟೂ ಅಂಟಿಕೊಂಡಿರುವದಿಲ್ಲ ಪರಮಾರ್ಥವಸ್ತುವಿಗೆ ಅದರಲ್ಲಿ ಹುಟ್ಟುಗಟ್ಟಿಕೊಂಡಿರುವ ಹುಸಿತೋರಿಕೆಯಿಂದ ಎಂದಿಗಾದರೂ ಯಾವದಾದರೂ ಗುಣದ ಅಥವಾ ದೋಷದ ಅಂಟು ಹೇಗೆತಾನೆ ಬಂದೀತು ?

    ' ಈ ಅವಸ್ಥೆಗಳನ್ನು ನಾನೇ ಅನುಭವಿಸುತ್ತಿರುವೆನು' ಎಂದು ನಮಗೆ ಅನುಭವವಾಗುತ್ತಿದ್ದರೂ ಇಲ್ಲಿರುವ 'ನಾನು' ಎಂಬ ಪ್ರತ್ಯಯಕ್ಕೂ ಶಬ್ದಕ್ಕೂ ಗುರಿಯಾಗಿರುವ ಆತ್ಮವಸ್ತು ಯಾವದೊಂದು ಅವಸ್ಥೆಗೂ ಕಟ್ಟುಬಿದ್ದಿರುವದಿಲ್ಲವಾದ್ದರಿಂದ ಅಹಂಪ್ರತ್ಯಯಕ್ಕೆ ವಿಷಯವಾಗಿರುವ ವಸ್ತುವನ್ನೇನೂ ಇಲ್ಲಿ ನಾನು ಎಂಬ ಮಾತಿನಿಂದ ಹೇಳಿಲ್ಲ ಎಂಬುದನ್ನು 'ಅಹಮಿತ್ಯನ್ತಃಸ್ಫುರನ್ತಮ್' ( ನಾನು ಎಂದು ಒಳಗೆ ತೋರಿಕೊಳ್ಳುತ್ತಿರುವ) ಎಂಬ ವಿಶೇಷಣವು ತಿಳಿಸುತ್ತದೆ. ಆದ್ದರಿಂದ ಸದಾ ('ಯಾವಾಗಲೂ' ತೋರುತ್ತಿರುವ) ಎಂಬಲ್ಲಿರುವ ಶಬ್ದವೂ ಕಾಲವಾಚಕವಲ್ಲ; ಏಕೆಂದರೆ ಬೇರೆಬೇರೆಯ ಕಾಲದ ಭಾವವು ಆಗುತ್ತಿರುವ ಎಚ್ಚರಕನಸುಗಳಲ್ಲಿಯೂ ಕಾಲದ ತೋರಿಕೆಯಾಗಲಿ ಅರಿವಾಗಲಿ ಇಲ್ಲದಿರುವ ಸುಷುಪ್ತಿಯಲ್ಲಿಯೂ ಆತ್ಮನು ತನ್ನ ಸ್ವರೂಪವನ್ನು ಮರೆಮಾಡದೆ ಸ್ವಪ್ರಕಾಶನಾಗಿಯೇ ತೋರುತ್ತಿರುತ್ತಾನೆ; ಅವನೇ ನಾವುಗಳು 'ನಾನು' ಎಂದು ವ್ಯವಹರಿಸುತ್ತಿರುವ ಆತ್ಮನ ಪರಮಾರ್ಥಸ್ವರೂಪವು ಎಂದೇ ಆ ಮಾತಿನಿಂದ ವಿವಕ್ಷಿತವಾಗಿರುವ ಅರ್ಥ ಎಂದಾಯಿತು.

    ಹೀಗೆ ಯಾವ ಮಾರ್ಪಾಡುಗಳೂ ತನ್ನ ಸ್ವರೂಪದಲ್ಲಿಲ್ಲದೆ, ಜಾಗ್ರತ್ಸ್ವಪ್ನಗಳಲ್ಲಿ ಕಾಣಬರುವ ಎಲ್ಲಾ ಮಾರ್ಪಾಡುಗಳಿಗೂ ಸಾಕ್ಷಿಯಾಗಿ ಅವಸ್ಥೆಗಳೆಂಬ ಎಲ್ಲಾ ವಿಕಲ್ಪಗಳಿಗೂ ಸಾಕ್ಷಿಯಾಗಿ ತನ್ನ ಚೈತನ್ಯದಿಂದ ಎಲ್ಲಾ ವಿಕಲ್ಪಗಳನ್ನೂ ವ್ಯಾಪಿಸಿಕೊಂಡಿರುವ ಈ ಅದ್ವೈತಸ್ವರೂಪವು ಶ್ರೀ ದಕ್ಷಿಣಾಮೂರ್ತಿಯಾದ ಪರಮೇಶ್ವರನ ಭಕ್ತರಿಗೆ ಮಾತ್ರವೇ ದೊರಕುವದು ಆತ್ಮನೇ ಅವರ ಬುದ್ಧಿವೃತ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಹರಿಯಿಸಿ ತನ್ನ ಸ್ವರೂಪದ ಜ್ಞಾನವನ್ನು ಅನುಗ್ರಹಿಸುತ್ತಾನೆ. ಆದರೆ ಯಾರು ಆ ಪರಮೇಶ್ವರನ ವಿಷಯಕ್ಕೆ ವಿಮುಖರಾಗಿರುವರೋ ಯಾರು ಲೌಕಿಕವಿಷಯಭೋಗಗಳಲ್ಲಿಯೇ ಆಸಕ್ತಿಯುಳ್ಳವರಾಗಿರುವರೋ ಅವರಿಗೆ ಈ ಪರಮಾರ್ಥವು ಆತ್ಮನೇ ಆಗಿರುತ್ತಿದ್ದರೂ ಯಾವ ಪ್ರಯೋಜನವನ್ನೂ ಉಂಟುಮಾಡಲಾರದೆ ಇರುತ್ತದೆ.

    ಆತ್ಮನು 'ಏಕಾತ್ಮಪ್ರತ್ಯಯಸಾರನು' ಎಂದು ಉಪನಿಷತ್ತಿನಲ್ಲಿ ಸಾರಿರುತ್ತದೆಯಷ್ಟೆ? ಆತ್ಮಪ್ರತ್ಯಯವು ಎಂದರೆ ನಾನು ಎಂಬ ಅರಿವು ಯಾವದನ್ನು ಹೇಳುತ್ತದೆ? ಎಂದು ತಮ್ಮೊಳಗೆ ತಾವೇ ವಿಚಾರಮಾಡಿಕೊಳ್ಳುವದರಿಂದ ಈ ಆತ್ಮನನ್ನು ಅನುಸರಿಸಿಕೊಂಡು ಹೋಗಿ ಕಂಡುಕೊಳ್ಳಬಹುದು ಎಂಬುದು ಆ ವಿಶೇಷಣಕ್ಕೆ ಒಂದು ಅರ್ಥ ಜಾಗ್ರತ್ಸ್ವಪ್ನಸುಷುಪ್ತಿಗಳಲ್ಲಿ ಒಬ್ಬನೇ ಆತ್ಮನಿರುವನು ಅವನೇ ನನ್ನ ಪರಮಾರ್ಥಸ್ವರೂಪವು ಎಂಬ ಭಾವನೆಯಿಂದ ಹುಡುಕಿದಾಗ ನಮಗೆ ದೊರಕುವ ತತ್ತ್ವವೇ ಆ ಆತ್ಮನು ಎಂಬುದು ಅದೇ ವಿಶೇಷಣಕ್ಕೆ ಎರಡನೆಯ ಅರ್ಥ ಹೀಗೆ ಎರಡೂ ಬಗೆಯಿಂದ ಆತ್ಮಾನ್ವೇಷಣೆಯನ್ನು ಮಾಡಬೇಕೆಂಬುದು ನಮಗೆ ಹೇಗೆ ಹೊಳೆಯಬೇಕು? ಎಂದು ಯಾರಾದರೂ ಕೇಳಬಹುದು ಅದಕ್ಕೆ ಉತ್ತರವೇನೆಂದರೆ ಈವರೆಗೆ ಹೇಳುತ್ತಾ ಬಂದಿರುವಂತೆ ನಿರಾಕಾರನೂ ನಿರ್ವಿಶೇಷನೂ ಆಗಿರುವ ಆ ಪರನೇಶ್ವರನನ್ನೇ ಭಕ್ತಿಯಿಂದ ಸೇವಿಸುವವರಿಗೆ ಉಪಾಸ್ಯನಾದ ಆತನು ದಯೆಯಿಂದ ಶ್ರೀದಕ್ಷಿಣಾಮೂರ್ತಿಯ ರೂಪದಿಂದಲೂ ಅದಕ್ಕಿಂತ ಮೊದಲು ಶ್ರೀಗುರುಮೂರ್ತಿಯ ರೂಪದಿಂದಲೂ ಪ್ರಕಟನಾಗುವನು ಸದ್ಗುರುರೂಪದಿಂದ ಉಪದೇಶಿಸುವಾಗ ಆತನ ಚಿನ್ಮುದ್ರೆಯಿಂದ ಈ ತತ್ತ್ವವವನ್ನು ತಿಳಿಸಿಕೊಡುತ್ತಾನೆ. ಚಿನ್ಮುದ್ರೆಯಲ್ಲಿ ಎರಡು ಬೆರಳುಗಳೂ ಒಂದಾಗಿರುವಂತೆ ದ್ವೈತವೆಲ್ಲವೂ ನನ್ನ ಪರಮಾರ್ಥಸ್ವರೂಪದಲ್ಲಿ ಒಂದಾಗಿರುತ್ತದೆ ಎಂಬುದನ್ನೂ ಆತನು ಉಪದೇಶದಿಂದ ತಿಳಿಸಿಕೊಡುತ್ತಾನೆ. ಎರಡು ಬೆರಳುಗಳನ್ನು ಕೂಡಿಸಿದಾಗಲೂ ಅವು ಬೇರೆಬೇರೆಯಾಗಿಯೇ ತೋರುತ್ತಿರುವದೆಂಬುದನ್ನೇನೂ ಇಲ್ಲಿ ಲಕ್ಷ್ಯಕ್ಕೆ ತರಬಾರದು ಏಕೆಂದರೆ ಜಾಗ್ರತ್ಸ್ವಪ್ನಗಳಲ್ಲಿ ತೋರುತ್ತಿರುವ ದ್ವೈತವೆಲ್ಲವೂ ಹೇಳಹೆಸರಿಲ್ಲದಂತೆ ಸುಷುಪ್ತಿಯಲ್ಲಿ ಅಡಗುವಂತೆ ಶ್ರೀಸದ್ಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಯ ಅನುಗ್ರಹದಿಂದಾದ ಮನಸ್ಸಮಾಧಿಯಲ್ಲಿ ಈ ಆವಿದ್ಯಾಕಲ್ಪಿತವಾಗಿರುವ ದ್ವೈತವೆಲ್ಲವೂ ಸೇರಿಹೋಗಿ ಅಖಂಡಸಚ್ಚಿದಾನಂದಸ್ವರೂಪವೇ ಪರಮಾರ್ಥವು ಅದೇ ನನ್ನ ಪರಮಾರ್ಥಾತ್ಮವು ಎಂಬುದು ಅನುಭವಕದಕೆ ಬರುವದು. 'ಯತ್ರ ತ್ವಸ್ಯ ಸರ್ವಮಾತ್ಮೈವಾಭೂತ್ ತತ್ಕೇನ ಕಂ ಪಶ್ಯೇತ್' ಎಲ್ಲಿ ಈ ಜ್ಞಾನಿಗೆ ಎಲ್ಲವೂ ಆತ್ಮನೇ ಆಗಿಬಿಟ್ಟಿರುವದೋ ಅಲ್ಲಿ ಏತರಿಂದ ಯಾವದನ್ನು ಕಾಣಲಾದೀತು? ಎಂಬ ಶ್ರುತ್ಯರ್ಥವು ಆತನ ಅನುಗ್ರಹದಿಂದ ಅನುಭವದಲ್ಲಿ ತೋರಿಕೊಳ್ಳುವದು.



   

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ