ಕನ್ನಡ "ಅನುಭವಾಮೃತ"ದಲ್ಲಿ ಅದ್ವೈತದರ್ಶನ

    ಭಾರತೀಯ ಆಧ್ಯಾತ್ಮಪ್ರಪಂಚದ ಮಹಾಚೇತನವಾಗಿ ಬೆಳಗಿದ ಶಂಕರಾಚಾರ್ಯರು ಅದ್ವೈತದರ್ಶನದ ಅಮರ ಸಂದೇಶವನ್ನು ನೀಡಿದ ವಿಭೂತಿಪುರುಷರು. ಆತ್ಮೋನ್ನತಿ, ದಾರ್ಶನಿಕ ಅಭೀಪ್ಸೆ, ಲೋಕಕಲ್ಯಾಣವೇ ಪರಮಾದರ್ಶವಾಗಿರುವ ಶಂಕರಾಚಾರ್ಯರು ಭಾರತೀಯ ವೇದಾಂತಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಅದ್ವೈತ ಸಂಪ್ರದಾಯವನ್ನು ಆಚರಣೆ ಮತ್ತು ಅನುಷ್ಠಾನಗಳಲ್ಲಿ ತಂದು ಭಾರತೀಯರ ಆಧ್ಯಾತ್ಮಿಕ ಜೀವನವನ್ನು ಉನ್ನಯನಗೊಳಿಸುವದು ಅವರ ಧ್ಯೇಯವಾಗಿತ್ತು ಆದ್ದರಿಂದಲೇ ಶಂಕರಾಚಾರ್ಯರು ಭಾರತದ ಬೇರೆ ಬೇರೆ ಭಾಗಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಪುರಿ, ದ್ವಾರಕಾ, ಬದರಿ, ಕಂಚಿ, ಶೃಂಗೇರಿ, ಸ್ವರ್ಣವಲ್ಲಿ ವೊದಲಾದ ಕೇಂದ್ರಗಳಲ್ಲಿ ಅದ್ವೈತಪೀಠಗಳು ನೆಲೆಗೊಂಡು ಆದಿಶಂಕರರ ವೇದಾಂತ ಸಂಪ್ರದಾಯವು ನಿರಂತರವಾಗಿ ಮುನ್ನಡೆದುಕೊಂಡು ಬಂದಿದೆ.

    ಶಂಕರಾಚಾರ್ಯರ ವೇದಾಂತದರ್ಶನವನ್ನು ಸಾಹಿತ್ಯ ಮತ್ತು ತತ್ವಗ್ರಂಥಗಳ ಮೂಲಕ ಪ್ರಚುರಪಡಿಸುವಲ್ಲಿ ಕರ್ನಾಟಕದ ಕೊಡುಗೆ ಅನುಪಮವಾದದ್ದು. ಆದಿಶಂಕರರ ಶಿಷ್ಯರೂ, ಉದ್ದಾಮ ಪಂಡಿತರೂ ಆಗಿದ್ದ ಶೃಂಗೇರಿಮಠದ ಪ್ರಥಮ ಪೀಠಾಧಿಪತಿಗಳಾದ ಸುರೇಶ್ವರರು "ಬೃಹದಾರಣ್ಯಕ ಉಪನಿಷದ್ಭಾಷ್ಯ"ವನ್ನು ಹಾಗೂ "ನೈಷ್ಕರ್ಮಸಿದ್ಧಿ"ಯಂಥ ಪ್ರಮಾಣಗ್ರಂಥವನ್ನು ಕುರಿತು ಬೃಹತ್ ಪ್ರಮಾಣದ "ವಾರ್ತ್ತಿಕ" ಗ್ರಂಥವನ್ನು ರಚಿಸಿದ್ದಾರೆ. ಸುರೇಶ್ವರರ ನಂತರ ಬಂದ ಗುರುಪರಂಪರೆಯ ಸ್ವಾಮಿಗಳು ಮತ್ತು ಶಿಷ್ಯವರ್ಗ ಅದ್ವೈತ ವಾಙ್ಮಯಕ್ಕೆ ಸಂಬಂಧಿಸಿದ ಹಲವು ಗ್ರಂಥ ರಚಿಸಿದ್ದಾರೆ, ಪದ್ಮಪಾದರು "ಪಂಚಪಾದಿಕಾ" ಗ್ರಂಥದಿಂದ "ವಿವರಣಾ" ಪಂಥವೆಂಬ ಹೊಸ ಸಂಪ್ರದಾಯದ ಪ್ರವರ್ತಕರಾದರು ವಿಜಯನಗರ ಸ್ಥಾಪನೆಯ ಬಹುದೊಡ್ಡ ಪ್ರೇರಕಶಕ್ತಿಯಾಗಿದ್ದ ವಿದ್ಯಾರಣ್ಯರು "ಪಂಚದಶಿ" ಮತ್ತು "ಜೀವನ್ಮುಕ್ತಿ ವಿವೇಕ"ವೆಂಬ ಲೋಕಪ್ರಿಯ ಗ್ರಂಥಗಳನ್ನು ರಚಿಸಿದ್ದಾರೆ. ವಿಜಯನಗರ ಅರಸರು ಭಾರತೀಯ ಸಂಸ್ಕೃತಿಯ ಸಂವರ್ಧನೆಗೆ ನೀಡಿದ ಕೊಡುಗೆ ಮಹತ್ತರವಾದುದು. ಋಗ್ವೇದವನ್ನು ಕುರಿತ "ಸಾಯಣಭಾಷ್ಯ" ಮ್ಯಾಕ್ಸಮುಲ್ಲರ ರಂಥ ಪಾಶ್ಚಾತ್ಯ ವಿದ್ವಾಂಸರ ಮೂಲಕ 19ನೆಯ ಶತಮಾನದಲ್ಲಿ ಮತ್ತೆ ಪ್ರಕಟಗೊಳ್ಳುವಂತಾಗಿ ಅಂತರಾಷ್ಟ್ರೀಯ ವಿದ್ವಾಂಸರ ಗಮನ ಸೆಳೆದಿದೆ ಸಾಯಣರ ಮೊಮ್ಮಗ ಬರೆದ "ಸರ್ವದರ್ಶನ ಸಂಗ್ರಹ" ಭಾರತೀಯ ತತ್ವವಿಚಾರದ ಅದ್ಭುತ ಸಂಗ್ರಹವಾಗಿದೆ. ವಿಜಯನಗರದ ನಂತರ ಕೆಳದಿ, ಸ್ವಾದಿ ಅರಸರು ಅದ್ವೈತ ಪರಂಪರೆಗೆ ಉತ್ತೇಜನ ನೀಡಿದರು. ಅಪ್ಪಯ್ಯ ದೀಕ್ಷಿತರು (16ಶ. ದ ಕೊನೆ) ಬರೆದ "ಸಿದ್ದಾಂತಲೇಶ ಸಂಗ್ರಹ" ಅದ್ವೈತ ಸಿದ್ಧಾಂತದ ಹಲವಾರು ವಿಚಾರ ಪಂಥದ ಕೈಪಿಡಿಯಾಗಿದೆ ಅಪ್ಪಯ್ಯ ದೀಕ್ಷೀತರು ಶ್ರೀಕಂಠಕೃತ "ಶಿವಾದ್ವೈತ ಭಾಷ್ಯ"ಕ್ಕೆ ಟೀಕಾಗ್ರಂಥವನ್ನು ರಚಿಸಿದ್ದಾರೆ.

    ಅದ್ವೈತ ವಾಙ್ಮಯ ಪರಂಪರೆ ಕರ್ನಾಟದಲ್ಲಿ ಅವ್ಯಾಹತವಾಗಿ ಹರಿದು ಬಂದಿದೆಅದ್ವೈತದರ್ಶನ ಭಾರತೀಯ ಸಾಹಿತ್ಯದಲ್ಲಿ ಸೃಜನಾತ್ಮಕ ಚಿಂತನಧಾರೆಯಾಗಿ ಹರಿದು ಬಂದಿರುವದು ಮಹತ್ವದ ವಿಚಾರವಾಗಿದೆ ಸಾವಿರ ವರ್ಷದ ಕನ್ನಡ ಸಾಹಿತ್ಯ ಜೈನ, ವೀರಶೈವ, ಬ್ರಾಹ್ಮಣ ಕವಿಗಳ ಸಾಹಿತ್ಯದಿಂದ ಶ್ರೀಮಂತವಾಗಿದೆ ಕನ್ನಡದಲ್ಲಿ ಅದ್ವೈತ ದರ್ಶನದಿಂದ ಸ್ಫೂರ್ತಿಪಡೆದ ಸ್ಮಾರ್ತಬ್ರಾಹ್ಮಣ ಕವಿಗಳ ದೊಡ್ಡ ಪರಂಪರೆಯೇ ಬೆಳೆದು ಬಂದಿದೆ ನಾಗವರ್ಮ, ದುರ್ಗಸಿಂಹ, ಮಹಾಲಿಂಗ ರಂಗ ಮೊದಲಾದ ಸ್ಮಾರ್ತಬ್ರಾಹ್ಮಣ ಕವಿಗಳು ತಮ್ಮ ಕೃತಿಗಳಿಂದ ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧರಾಗಿದ್ದಾರೆ.

    ನಾಗವರ್ಮಾಚಾರ್ಯ (ಕ್ರಿ.ಶ 1071) ತನ್ನ "ಚಂದ್ರಚೂಡಾಮಣಿ ಶತಕ"ದಲ್ಲಿ ಬರೆದ
ನೆರೆಯಿಂದಂ ತೆರೆಯಿಂದಮಾವಸೆರೆಯಿಂದಂ ಮುಪ್ಪಿನೊಳ್ ಚೆಲ್ವುಗೆ
ಟ್ಟಿರುತುಂ ವ್ಯಾಧಿಯೊಳಾಗಳುಂ ನಮೆಯುತುಂ ತಳ್ತಿರ್ದದಾರಿದ್ರ್ಯದೊಳ್
ಪೊರಳುತ್ತಿರ್ದುಮದೆಂತು ಮಿಂತು ಮಳಿಪೆಂತುಂ ಪೋಗದಾಕುತ್ತಮಂ
ಹರಿಪೊಂದೌಷಧಿಯಂ ಸಮಂತು ದಯೆಗೆಮ್ ಶ್ರೀ ಚಂದ್ರಚೂಡಾಮಣಿ.

ಪದ್ಯದ ಸಾಲುಗಳಿಗೆ ಶಂಕರಾಚಾರ್ಯರ "ಶಿವಾಪರಾಧ ಕ್ಷಮಾಪನ ಸ್ತೋತ್ರ" ಪ್ರೇರಕವಾಗಿರಬೇಕು. ಕನ್ನಡದ ಶತಕ ಸಾಹಿತ್ಯಕ್ಕೆ ಶಂಕರಾಚಾರ್ಯರ ಸ್ತೋತ್ರಗಳು ಸ್ಫೂರ್ತಿ ನೀಡಿವೆ. ಭಕ್ತಿ, ಜ್ಞಾನ, ವೈರಾಗ್ಯಗಳ ತ್ರಿವೇಣಿಸಂಗಮವಾದ ಶಂಕರಾಚಾರ್ಯದ ಸ್ತೋತ್ರಗಳ ಭಾವಗಂಗೆಯ ಪ್ರವಾಹ ಭಾರತೀಯ ಕವಿಗಳನ್ನು ನಿರಂತರವಾಗಿ ಪ್ರಭಾವಿಸಿವೆ. ಕನ್ನಡದ ಅದ್ವೈತಾನಂದರ (ಕ್ರಿ.ಶ ಸು 1700) ಕೇಶವಶತಕ. ನಿರಂಜನಾರ್ಯರ (ಕ್ರಿ.ಶ 1750) "ನಂಜುಂಡಶತಕ" ಅಥವಾ "ನೀತಿಶಾಸ್ತ್ರ"ದ ಪದ್ಯಗಳಲ್ಲಿ ಅದ್ವೈತದರ್ಶನದ ಚಿಂತನೆಯಿದೆ ನಿಜಗುಣ ಶಿವಯೋಗಿಗಳ "ವಿವೇಕ ಚಿಂತಾಮಣಿ"ಯೂ ಇಲ್ಲಿ ಉಲ್ಲೇಖನೀಯವಾದದ್ದು.

    ಹದಿನೇಳನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ಮಹಾಲಿಂಗರಂಗ ಕವಿಯ "ಅನುಭವಾಮೃತ"ವು ಕನ್ನಡದಲ್ಲಿ ಬಂದ ಅದ್ವೈತದರ್ಶನದ ಅನುಪಮ ಕಾವ್ಯವಾಗಿದೆ. ಅದ್ವೈತವೇದಾಂತ ದರ್ಶನವನ್ನು ಕಾವ್ಯದ ಮೂಲಕ ಸಾಕಾರಗೊಳಿಸುವ "ಅನುಭವಾಮೃತ"ವು ಸಾಧಕರಿಗೂ ಮುಮುಕ್ಷುಗಳಿಗೂ ಮಾರ್ಗದರ್ಶಿಯಾಗಿದೆ. ಮಹಾಲಿಂಗರಂಗ ಕವಿ ಆಧ್ಯಾತ್ಮಿಕ ಪರಂಪರೆಯನ್ನು ತನ್ನದಾಗಿಸಿಕೊಂಡ ವಿಶಿಷ್ಠ ಕವಿ ಗುರು ಸಹಜಾನಂದರ ಮಾರ್ಗದರ್ಶನದಲ್ಲಿ ಮಲ್ಲಿಕಾರ್ಜುನನನ್ನು ಆರಾಧ್ಯದೇವತೆಯಾಗಿ ಆರಾಧಿಸಿ ತತ್ವದರ್ಶನವನ್ನು ಪಡೆದ ಕವಿ ಮಹಾಲಿಂಗರಂಗ ಅದ್ವೈತವನ್ನು ಅನುಷ್ಠಾನ ಮಾಡಿಕೊಂಡಿದ್ದಾನೆ "ಅನುಭವಾಮೃತ" ವಿದ್ವಜ್ಜನರ ಮನ್ನಣೆಗೆ ಪಾತ್ರವಾಗಿರುವಂತೆ ಸಾಮಾನ್ಯರಿಗೂ ಅದ್ವೈತ ದರ್ಶನವನ್ನು ನೀಡುವ ಕಾವ್ಯಕೃತಿಯಾಗಿದೆ. ಕನ್ನಡ ನಾಡು ನುಡಿಯ ಅಭಿಮಾನದ ಪದ್ಯಗಳಲ್ಲಿ.
ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣವ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೆ ಸಂಸ್ಕೃತದಲಿನ್ನೇನು
ಮಹಾಲಿಂಗರಂಗನ ಈ ಪದ್ಯ ಜನಪ್ರಿಯವಾದುದು ಅದ್ವೈತದರ್ಶನವನ್ನು ಲಲಿತವಾದ ಕನ್ನಡದಲ್ಲಿ ನಿರೂಪಿಸುವ "ಅನುಭಾಮೃತ"ದಂತಹ ಕಾವ್ಯ ಕನ್ನಡವಷ್ಟೇ ಏಕೆ ಭಾರತೀಯ ಸಾಹಿತ್ಯದಲ್ಲೂ ವಿರಳ ಆದ್ದರಿಂದಲೇ ಇದನ್ನು ಶ್ರೀಮತ್ಪರಮಹಂಸ ಬಾಲಕೃಷ್ಣ ಬ್ರಹ್ಮಾನಂದ ರಾಜಯೋಗಿಗಳು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ ಸಂಸ್ಕೃತ ಸಹಿತ್ಯದಿಂದ ಕನ್ನಡ ಸಾಹಿತ್ಯಕ್ಕೆ ಅನೇಕ ಕೃತಿಗಳು ಬಂದಿವೆ. (ಉದಾ : ನಾಗವರ್ಮನ "ಕರ್ನಾಟಕ ಕಾದಂಬರಿ". ದುರ್ಗಸಿಂಹನ "ಪಂಚತಂತ್ರ" ಮೊದಲಾದವು) ಆದರೆ ಕನ್ನಡ ಸಾಹಿತ್ಯದಿಮದ ಸಂಸ್ಕೃತಕ್ಕೆ ಹೋದ ಮಹತ್ವದ ಕೃತಿ "ಅನುಭವಾಮೃತ" ಎಂಬುದು ಹೆಮ್ಮೆಯ ಸಂಗತಿ.

    ಅದ್ವೈತದರ್ಶನದ ಅಮೂಲ್ಯ ಕಾವ್ಯವಾದ "ಅನುಭವಾಮೃತ"ದಲ್ಲಿ ಹನ್ನೊಂದು ಅಧ್ಯಾಯಗಳಿವೆ.
1. ಅಧಿಕಾರ ನಿರ್ಣಯ (54)
2. ವೈರಾಗ್ಯ ಪ್ರಕರಣ (107)
3. ತ್ವಪದ ನಿರ್ಣಯ (150)
4. ತತ್ ಪದ ಶೋಧನೆ (72)
5. ಅಸಿ ಪದದ ಶೋಧನೆ (61)
6. ಮಾಯಾಮಿಥ್ಯಾತ್ವ (38)
7. ಪರಮಾತ್ಮಪದ ನಿರ್ಣಯ (24)
8. ಮಾಯಾಮಿಥ್ಯಾತ್ವ (38)
9. ಜೀವತ್ರಯ ವಿಚಾರ (49)
10. ಯೋಗೀಶ್ವರ ಚರಿತ್ರೆ (126)
11. ನಿರ್ಗುಣಾರಾಧನೆ (29) ಹೀಗೆ 802 ಭಾಮಿನಿ ಷಟ್ಪದಿಯ ಪದ್ಯಗಳಲ್ಲಿ ತುಂಬ ಸರಳವಾಗಿ ಎಳೆ ಎಳೆಯಾಗಿ ಅದ್ವೈತದರ್ಶನವನ್ನು ಮಹಾಲಿಂಗರಂಗ ವಿವೇಚಿಸಿದ್ದಾನೆ.

    ಭಾರತೀಯ ಸಂಪ್ರದಾಯದಂತೆ ಸಂವಾದರೂಪದಲ್ಲಿ "ಅನುಭವಾಮೃತ" ಕಾವ್ಯ ಅದ್ವೈತದರ್ಶನದ ನಿರೂಪಣೆಗೆ ತೊಡಗುತ್ತದೆ. ವೇದವ್ಯಾಸ ಮುನಿಗಳ ಪುತ್ರನಾದ ಶುಕಯೋಗೀಂದ್ರನು ಪರಬ್ರಹ್ಮ ಎಂಬುದು ಹೇಗಿರುವುದು? ಅದನ್ನು ತಿಳಿದುಕೊಳ್ಳುವ ಮಾರ್ಗ ಯಾವುದು? ಅಪ್ಪಣೆ ಕೊಡಿಸಬೇಕೆಂದು ಪ್ರಾರ್ಥಿಸಿದಾಗ ವೇದವ್ಯಾಸರು ನಸುನಕ್ಕು ಹೇಳುತ್ತಾರೆ.
ಕಂದ ಕೇಳೈ ಬ್ರಹ್ಮವೆನಲದ
ರಿಂದಧಿಕವೇನಿಲವದು ತ
ನ್ನಿಂದ ತಾನೇ ತೋರುತಿರ್ಪುದು ಸ್ವಪ್ರಕಾಶವದು.
ಒಂದದದ್ವಯವ ಪ್ರತರ್ಕ್ಯವ
ದೆಂದು ಪೇಳ್ವರು ತಿಳಿಯಲಾಪರಿ
ಯೆಂದೆನಲು ಶೃತಿಗುರುಗಳಿಂದಲಿ ಸ್ವಾನುಭವವೇದ್ಯ (1-14)

ಶುಕನೇ ಬ್ರಹ್ಮವೆನ್ನುವದು ಏಕಮೇವಾದ್ವಿತೀಯವಾದುದು. ಅದಕ್ಕಿಂತ ದೊಡ್ಡದು ಲೋಕದಲ್ಲಿ ಯಾವುದೂ ಇಲ್ಲ ಅದು ಸ್ವಯಂಪ್ರಕಾಶವುಳ್ಳದ್ದು ಅದನ್ನು ತರ್ಕದಿಂದ ಊಹಿಸಿ ತಿಳಿಯಲು ಸಾಧ್ಯವಿಲ್ಲ ಬ್ರಹ್ಮವು ಶ್ರುತಿವಾಕ್ಯ ಗುರುವಿನ ಮೂಲಕ ಉಪದೇಶ ಪಡೆದು ಮನನ ಮಾಡಿ ದೃಢಪಡಿಸಿಕೊಳ್ಳಬೇಕು. ಬ್ರಹ್ಮಜ್ಞಾನವಾಗುವದಕ್ಕೆ ಸಹಜಾನಂದವೇ ಫಲ ಬ್ರಹ್ಮಜ್ಞಾನ ತಿಳಿದುಕೊಳ್ಳುವವರು ಪಡೆಯಬೇಕಾದ ಯೋಗ್ಯತೆಯ ವಿಚಾರವೂ ಅಷ್ಟೇ ಮುಖ್ಯವಾದದ್ದು.

ಸತ್ಯ ಶೌಚಾಚಾರ ನಿರತರು
ಚಿತ್ತದಲಿ ನಿರ್ಮಲರು ನಿಸ್ಪೃಹ
ವೃತ್ತಿಯಲಿ ವರ್ತಿಸುವ ರಶಾಪಾಶವರ್ಜಿತರು
ಉತ್ತಮೋತ್ತಮರಾದ ಗುರುಪದ
ಭಕ್ತಿಯುಕ್ತರು ಭವದ ಬೇರನು
ಕಿತ್ತು ಬಿಸುಡುವ ಶಾಂತರೇ ತತ್ವಾಧಿಕಾರಿಗಳು (1-20)

    "ಅನ್ನಮದ ಅರ್ಥಮದ ಯೌವನಮದ ಕುಲಮದ ಶೀಲಮದ ವಿದ್ಯಾಮದ, ಸ್ತ್ರೀಮದ, ಅಧಿಕಾರಮದ ಎಂಬ ಅಷ್ಟಮದಗಳೆಂಬ ಪಾಶವನ್ನು ಹರಿದು ಆಧ್ಯಾತ್ಮಿಕ ಆದಿಭೌತಿಕ ಆದಿದೈವಿಕಗಳೆಂಬ ತಾಪತ್ರಯದ ಕೋಟಲೆಯನ್ನು ಪರಿಹರಿಸಿ ಮನಸ್ಸಿನ ದುಷ್ಟತನ ಬಿಡಿಸಿ ಕಾಮ, ಕ್ರೋಧ, ಮದ, ಲೋಭ, ಮೋಹ, ಮತ್ಸರಗಳೆಂಬ ಅರಿಷಡ್ ವೈರಿಗಳನ್ನು ಗೆದ್ದು ಗುರುಹಿರಿಯರಲ್ಲಿ ಭಕ್ತಿಯಿಟ್ಟು ಬ್ರಹ್ಮಜ್ಞಾನದ ಮಾರ್ಗವನ್ನು ತಿಳಿಯಲು ಯತ್ನಿಸಬೇಕು" (1-22). ಹೀಗೆ ಬ್ರಹ್ಮಜ್ಞಾನ ಹೊಂದಲು ತಕ್ಕ ಯೋಗ್ಯತೆಯನ್ನು ಹೇಳಿ ಮಹಾಲಿಂಗರಂಗ ಕವಿ ಮುಮುಕ್ಷು ಎಂದರೆ ಮೋಕ್ಷಾಪೇಕ್ಷೆಯುಳ್ಳವನ ಲಕ್ಷಣವನ್ನು ಎಂಟು ಪದ್ಯಗಳಲ್ಲಿ ವಿವರಿಸುತ್ತಾನೆ.
ತನಯ ಕೇಳಧ್ಯಾತ್ಮ ವಾಸನೆ
ಯನವರತ ಶಾಸ್ತಾರ್ಥ ಚಿಂತನೆ
ಘನವಿವೇಕ ವಿರಕ್ತಿ ಸದ್ಗುಣವೃತ್ತಿ ಸತ್ಸಂಗ
ಅನಘ ಗುರುಶುಶ್ರೂಷೆ ಮೊದಲಾ
ದಿನಿತು ಸದ್ವರ್ತನೆಯೊಳೊಂದಿಹ
ಮನುಜನೇ ತತ್ವಾಧಿಕಾರಿ ಮುಮುಕ್ಷುವೆನಿಸುವನು (1-30)

ಹೀಗೆ ಬ್ರಹ್ಮಜ್ಞಾನ ಪಡೆಯಲು ಬೇಕಾದ ಅರ್ಹತೆಯನ್ನು ತಿಳಿಸಿ ಎರಡನೆಯ ಅಧ್ಯಾಯದಲ್ಲಿ ವೈರಾಗ್ಯ ವಿವರಣೆಯನ್ನು ವೇದವ್ಯಾಸರು ಆರಂಭಿಸುತ್ತಾರೆ ಈ ಸಂಸಾರಧರ್ಮದಲ್ಲಿ ಸಿಲುಕಿದ ಮನುಷ್ಯನಿಗೆ ಬಿಡುಗಡೆ ಎಂಬುದೆ ಇಲ್ಲ ಸಂಸಾರ ಕ್ಷಣಕವಾದುದು ಎಂಬ ಅರಿವೇ ಜೀವಿಗೆ ಬರುವದಿಲ್ಲ ಬ್ರಹ್ಮಪಟ್ಟದಂತೆ ಸ್ಥಿರ, ಸೂರ್ಯಚಂದ್ರರಿರುವವರೆಗೆ ಸಂಸಾರಸುಖ ಇರುವದೆಂದು ಜನ ತಿಳಿದು ಮೋಸಹೋಗುತ್ತಾರೆ ಇಂದ್ರ, ನಹುಷ, ರಾವಣ, ಕೀಚಕ, ಮೊದಲಾದವರು ಪರಸ್ತ್ರೀವ್ಯಾಮೋಹಕ್ಕೆ ಗುರಿಯಾಗಿ ಸರ್ವನಾಶ ಹೊಂದಿದ ಉದಾಹರಣೆ ನಮ್ಮ ಮುಂದಿದೆ ಹೀಗಿರುವಾಗ ಇಂದ್ರಿಯಸುಖಕ್ಕಾಗಿ ಮನುಷ್ಯ ಆಸಿಪಟ್ಟು ಹಾಳಾಗುವದು ಸರಿಯಲ್ಲ ಅಜ್ಞಾನಿಗಳಾದವರು ಬ್ರಹ್ಮವಿದ್ಯೆಯನ್ನು ತಿಳಿಯಲಾರದೆ ಹಳಿಯುತ್ತಾರೆ ವೇದದಲ್ಲಿ "ನಾನ್ಯಃ ಪಂಥಾ ಅಯನಾಯ ವಿದ್ಯತೇ" ಅಂದರೆ ಬ್ರಹ್ಮವಿದ್ಯೆ ಬಿಟ್ಟರೆ ಅಮೃತತ್ವಕ್ಕೆ ಬೇರೆ ಮಾರ್ಗವಿಲ್ಲ ಎಂದು ಹೇಳಿರುವಾಗ ಭೋಗಮೂಲವಾದ ಸಂಸಾರದ ಸುಖವನ್ನು ಬಿಟ್ಟು ಮೋಕ್ಷಮಾರ್ಗ ಸಾದನೆಗೆ ವೈರಾಗ್ಯಭಾವವನ್ನು ತಳೆಯಬೇಕು.

    ಅದ್ವೈತದರ್ಶನದ ಮಹಾವಾಕ್ಯಗಳಾದ "ಅಹಂ ಬ್ರಹ್ಮಾಸ್ಮಿ", "ತತ್ವಮಸಿ"ಗಳನ್ನು 'ಅನುಭವಾಮೃತ'ದಲ್ಲಿ ಎಳೆಎಳೆಯಾಗಿ ಬಿಡಿಸಿ ವಿವೇಚಿಸಲಾಗಿದೆ ಮೂರನೆಯ ಅಧ್ಯಾಯದಲ್ಲಿ ತ್ವಂಪದಾರ್ಥ ಶೋಧನೆಯ ವಿಚಾರ ಮಂಡಿತವಾಗಿದೆ ಮನುಷ್ಯ ತನ್ನ ಜೀವಿತದ ಪರಮಗಂತವ್ಯವನ್ನು ಸಾಧಿಸುವದಕ್ಕೆ ನಿಜವಾದ ವಿದ್ಯೆಯಾದ ಬ್ರಹ್ಮವಿದ್ಯೆಯ ಕುರಿತು ಚಿಂತಿಸಬೇಕು ಶುಕನು ಕೇಳಿದ ಜೀವ ಪರಮಾತ್ಮರ ಸ್ವರೂಪ ವಾಚ್ಯಾರ್ಥ, ಲಕ್ಷ್ಯಾರ್ಥ, ಸಚ್ಚಿದಾನಂದ ಬ್ರಹ್ಮಕ್ಕೆ ಜೀವಾತ್ಮ ಪರಮಾತ್ಮರೆಂಬ ದ್ವೈತ ಭ್ರಾಂತಿಯಾಗಿ ಕಾಣುವದಕ್ಕೆ ಕಾರಣವನ್ನು ಕೇಳಿದ್ದಕ್ಕೆ ವ್ಯಾಸಮಹರ್ಷಿ ಕೊಟ್ಟ ಉತ್ತ ಮಾರ್ಮಿಕವಾದುದು.

    "ಅಹಂಕಾರ ಭಾವವಿರುವವನು ಜೀವನೆನಿಸಿಕೊಳ್ಳುತ್ತಾನೆ. ಈಶ್ವರನು ಮಾಯಾವಿಲಾಸಿಯಾಗಿದ್ದಾನೆ. "ತ್ವಂ" ಪದಕ್ಕೆ ಜೀವನೆಂದೂ "ತತ್" ಪದಕ್ಕೆ ಈಶ್ವರನೆಂದೂ ವಾಚ್ಯಾರ್ಥ, ಜೀವಾತ್ಮ ಪರಮಾತ್ಮರಲ್ಲಿರುವ ಅಹಂಕಾರ ಮಾಯಾಶಕ್ತಿಗಳನ್ನು ಕಳೆದರೆ ಉಳಿಯುವದು ಒಂದೇ ಚೈತನ್ಯ "ತತ್" ಮತ್ತು "ತ್ವಂ" ಎಂಬ ಎರಡು ಪದಗಳಿಗೆ ಲಕ್ಷ್ಯಾರ್ಥವು ಒಂದೇ ಎನ್ನುವದೇ ಐಕ್ಯಾರ್ಥವಾಗಿದೆ." (3-21)

    "ತತ್ವಮಸಿ" ಎಂಬ ವಾಕ್ಯದಲ್ಲಿ ವಾಚ್ಯಾರ್ಥದಲ್ಲಿ ವಿರೋಧವು ತೋರುತ್ತದೆ. (ಜೀವನು ದುಃಖಿ, ಅಲ್ಪಶಕ್ತ, ಪ್ರತ್ಯಕ್ಷ; ಈಶ್ವರನು ಸರ್ವಶಕ್ತ, ಪರೋಕ್ಷ; ಸುಖಸ್ವರೂಪ) ಅದುದರಿಂದ ಲಕ್ಷ್ಯಾರ್ಥವನ್ನು ಸರಿಯಾಗಿ ಶೋಧಿಸಿ ಮಿಥ್ಯವಾದುದನ್ನು ಬಿಟ್ಟು ಸತ್ಯವಾದುದನ್ನೆ ಉಳಿಸಿಕೊಂಡರೆ ಜೀವಾತ್ಮ ಪರಮಾತ್ಮರ ಐಕ್ಯವು ಸಿದ್ಧಿಸುತ್ತದೆ. (3-22)

    "ಅಂದು ತುಂಗಾತೀರದಲ್ಲಿ ವಟುವಾಗಿದ್ದವನೇ ಇಂದು ಗಂಗಾತೀರದಲ್ಲಿ ಯತಿಯಾಗಿದ್ದಾನೆ" ಎಂದು ಹೇಳುವಾಗ ಅವನ ದೇಹವನ್ನು ಮಾತ್ರ ಲಕ್ಷಿಸಿ ಹೇಳಿದೆ. ಅಂದು ಇಂದು ಎಂಬ ಕಾಲವಿರೋಧವೂ ವಟು ಯತಿ ಎಂಬ ಆಶ್ರಮ ವಿರೋಧವೂ ಲೆಕ್ಕಕ್ಕಿಲ್ಲ ಅಂತೆಯೇ 'ತತ್ವಮಸಿ' ಎಂಬ ವಾಕ್ಯದಲ್ಲಿ ಜೀವಾತ್ಮ ಪರಮಾತ್ಮರಲ್ಲಿ ಕಾಣುವ ವಿರೋಧಾಂಶಗಳನ್ನು ಕಳೆದಾದ ಮೇಲೆ ಎರಡಿಲ್ಲದ ಅಖಂಡ ಆತ್ಮಸುಖವು ಲಕ್ಷ್ಯಾರ್ಥವಾಗುತ್ತದೆ. (3-23)

    "ಹಂಸವು ನೀರನ್ನು ಬಿಟ್ಟು ಕ್ಷೀರವನ್ನೇ ಕುಡಿಯುವಂತೆ ತತ್ ಮತ್ತು ತ್ವಂ ಪದಗಳ ಶೋಧನೆಯನ್ನು ಮಾಡಿ ವಿರೋಧಾಂಶಗಳನ್ನು ಬಿಟ್ಟು ಎರಡೂ ಪದಗಳ ಲಕ್ಷ್ಯಾರ್ಥವನ್ನು ಅರಿತರೆ ಐಕ್ಯವು ಸಿದ್ಧಿಸಿ ನಿತ್ಯಾನಂದವುಂಟಾಗುತ್ತದೆ." (3-24)

    ತ್ವಂ ಪದಾರ್ಥ ಶೋಧನೆಯ ವಿಚಾರ ಹೇಳುವಾಗ ದೃಕ್-ದೃಶ್ಯ; ಕ್ಷೇತ್ರ-ಕ್ಷೇತ್ರಜ್ಞ; ಜಡ-ಜೀವ; ಭೋಗ-ಭೋಕ್ವ್ತ; ಕ್ಷರ-ಅಕ್ಷರ ಸ್ವರೂಪದ ವಿವೇಚನೆಯ ಮೂಲಕ ವಿದಿತಪಡಿಸಲಾಗುತ್ತದೆ. ಚೈತನ್ಯ ಸ್ವರೂಪನಾದ ಆತ್ಮನು ನಿತ್ಯಜ್ಞಾನಿರೂಪಿಯಾಗಿದ್ದಾನೆ. "ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯಗಳೆಂಬ ಪಂಚಕೋಶಗಳನ್ನು ಆತ್ಮ ಬೆಳಗುತ್ತಾನೆ. ಶ್ರುತಿವಾಕ್ಯದಂತೆ "ಹೃದಯದಲ್ಲಿ ತೋರುವ ಸನಾತನನಾದ ಪ್ರತ್ಯಗಾತ್ಮನನ್ನೇ ಸಚ್ಚಿದಾನಂದ ರೂಪನಾದ ನಿರ್ಗುಣಬ್ರಹ್ಮ ಎಂದು ಜ್ಞಾನಿಗಳು ಹೇಳುತ್ತಾರೆ. ನಾಲ್ಕನೆಯ ಅಧ್ಯಾಯದಲ್ಲಿ ತತ್ಪದಾರ್ಥ ಶೋಧನೆಯ ವಿವೇಚನೆ ಬರುತ್ತದೆ ಮಾಯೆ ಹೇಗಿದೆ? ಜೀವಜಗತ್ತುಗಳು ಆದದ್ದು ಹೇಗೆ? ಎಂಬ ಶುಕನ ಪ್ರಶ್ನೆಗೆ ವೇದವ್ಯಾಸರು ಸಮರ್ಪಕವಾದ ಉತ್ತರ ನೀಡುತ್ತಾರೆ. "ಮಾಯೆಯೆನ್ನುವದು ಇಂದ್ರಜಾಲ, ಬಿಸಿಲ್ಗುದುರೆ ಮತ್ತು ಹಗ್ಗದ ಹಾವಿನಂತೆ ಹುಸಿ ತೋರಿಕೆಯಾಗಿದೆ. ಮಾಯೆಗೆ ಅವರಣ ವಿಕ್ಷೇಪಗಳೆಂಬ ಎರಡು ಶಕ್ತಿಗಳಿವೆ. ಆವರಣ ಶಕ್ತಿಯಿಂದ ಮಾಯೆಯು ಅಖಂಡ ಬ್ರಹ್ಮವನ್ನು ಮರೆಮಾಡಿದೆ. ವಿಕ್ಷೇಪಶಕ್ತಿಯು ಈ ಜಗತ್ತನ್ನೂ ಜೀವರನ್ನೂ ಕಾಣುವಂತೆ ಮಾಡುತ್ತಿದೆ" (4-8). ಇಲ್ಲಿ ಆತ್ಮವನ್ನು ತಿಳಿಯಬೇಕೆ ಹೊರತು ಸೃಷ್ಟಿ ಹೀಗೆ ಆಯಿತು ಎಂಬುದಲ್ಲ ಆತ್ಮ ತಿಳಿಯುವದೇ ಮುಖ್ಯ ಮಾಯಾ ಭ್ರಾಂತಿಯನ್ನು ಕಳೆದುಕೊಂಡಾಗ ಮಾತ್ರ ಪರಬ್ರಹ್ಮ ಸಾಕ್ಷಾತ್ಕಾರವಾಗುತ್ತದೆ.

    "ಹಸುವಿನ ಹಾಲು ಒಂದೇ ಅದಕ್ಕೆ ದ್ರವತ್ವ, ಮಧುರತ್ವ, ಶುಭ್ರತ್ವಗಳಿವೆ ಹಾಗೆಯೇ ಒಂದೇ ಪರಬ್ರಹ್ಮವು ಇರವು, ಅರಿವು, ಆನಂದ (ಸಚ್ಚಿದಾನಂದ)ಗಳ ಸ್ವಭಾವವನ್ನು ಹೊಂದಿದೆ. ವ್ಯಾಪ್ತಿ ಇಷ್ಟೆಂದು ನಿರ್ಧರಿಸಲು ಸಾಧ್ಯವಿಲ್ಲದ ಮಹಾಕಾಶವನ್ನು ಒಳಗೊಂಡ ಅನಂತವೇ ಪರಬ್ರಹ್ಮ" (4-57) "ಅನಾದಿಯೆಂದೂ, ನಿತ್ಯವೆಂದೂ ಪ್ರಶಾಂತವೆಂದೂ, ಚಿಂತೆ ಇಲ್ಲದ್ದೆಂದೂ ಯಾವುದನ್ನು ಕುರಿತು ಉಪನಿಷತ್ತುಗಳು ಹೇಳುತ್ತಿವೆಯೋ, ಯಾವುದನ್ನು ಯೋಗಿಗಳು ಹೃದಯದಲ್ಲಿ ಧರಿಸಿಕೊಂಡು ಹೇಳಲು ಸಾದ್ಯವಾಗದೆ ಸುಮ್ಮನಿರುವರೋ ಅಂತಹ ಅತೀಂದ್ರಿಯವಾದ ಚಿದ್ಘನವೇ ಪರಬ್ರಹ್ಮ" (4-68) ಹೀಗೆ ಪರಬ್ರಹ್ಮ ಸ್ವರೂಪವನ್ನು ಬಹುವಿಧವಾಗಿ ವರ್ಣಿಸುವ ಮಹಾಲಿಂಗರಂಗ ಕವಿಯ ಪದ್ಯದ ಸಾಲುಗಳು ಹೀಗಿವೆ:

ನಿರುಪಮ ನಿರಾಲಂಬ ನಿರ್ಗುಣ
ನಿರವದಿ ನಿರಾತಂಕ ನಿರ್ಮಲ
ನಿರತಿಶಯ ನಿಶ್ಚಲ ನಿರಂಜನ ನಿರ್ವಿಕಾರ ನಿಜ |
ಪರತರ ಪರಾನಂದ ಪಾವನ
ಪರಮಪದ ಪರಿಪೂರ್ಣ ಪರ ಚಿ
ತ್ಪರ ಸದದ್ವಯವಾದ ಪರಮಾರ್ಥವೇ ಪರಬ್ರಹ್ಮ ||

"ಅನುಭವಾಮೃತ"ದ ಐದನೆಯ ಅಧ್ಯಾಯ "ಅಸಿ" ಪದದ ವಿವೇಚನೆಯನ್ನು ಮಂಡಿಸುತ್ತದೆ. ಶುಕನು "ಅಸಿ" ಪದವೆಂದರೇನು? ಜೀವ ಈಶ್ವರರ ಐಕ್ಯವು ಹೇಗಾಗುತ್ತದೆ? ಅಖಂಡವಸ್ತು ಎಂಬುದು ಹೇಗಿದೆ? ಎಂದು ಕೇಳಿದ್ದಕ್ಕೆ ವೇದವ್ಯಾಸರು ಹೀಗೆ ಹೇಳುತ್ತಾರೆ. "ತತ್ ಎಂಬ ಪದವು ಎಲ್ಲಿಯೋ ದೂರದಲ್ಲಿರುವ ವಸ್ತುವನ್ನು "ತ್ವಂ" ಎಂಬುದು ಎದುರಿನಲ್ಲಿರುವ ನೀನು ಎಂಬುದನ್ನೂ ಸೂಚಿಸುತ್ತವೆ. ಈ ವಿರೋಧಾಂಶಗಳನ್ನು ಕಳೆದರೆ ಸತ್ಯವೂ, ಅಖಂಡವೂ, ಅದ್ವಯವೂ, ಸಹಜಾನಂದಮಯವೂ ಆದ ಜ್ಞಾನವೊಂದೇ ಉಳಿಯುತ್ತದೆ. ಎಂಬುದೇ "ಅಸಿ" ಪದದ ಅರ್ಥ." (5-32) ಯಾವುದಾದರೂ ಗುರುತಿರುವ ಆಕಳುಗಳ ಹಾಲನ್ನು ತಂದಿಟ್ಟಾಗ ಆ ಹಾಲಿನಲ್ಲಿ ಹೇಗೆ ಭೇದ ಕಾಣುವದಿಲ್ಲವೋ ಅದೇ ರೀತಿಯಲ್ಲಿ ಎರಡಿಲ್ಲದ ಒಂದೇ ಆನಂದವೇ "ಅಸಿ" ಪದದ ಅರ್ಥ ಹೀಗೆ "ಅಸಿ" ಪದವು ಅಖಂಡವಾದ ಮತ್ತು ಅದ್ವೈತವಾದ ಅಮೃತರಸದಿಂದ ತುಂಬಿ ತುಳಿಕಾಡುವ ಸಮುದ್ರದಂತೆ (5-58) ಎಂದು ವಿವರಿಸುತ್ತಾರೆ.

    ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧನೆಯ ಸಪ್ತಭೂಮಿಕೆಗಳನ್ನು ಸಮಾಧಿಯ ವಿವಿಧ ರೀತಿಗಳನ್ನು ಆರನೆಯ ಅಧ್ಯಾಯದಲ್ಲಿ ನಿರೂಪಿಸಲಾಗಿದೆ. ಪರಬ್ರಹ್ಮದ ಸಾಧನೆಗೆ ಸುಖೇಶ್ಚೆ ಆತ್ಮವಿಚಾರ. ನಿಸ್ಸಂಗ, ವಾಸನಾಕ್ಷಯ, ಆನಂದಿನಿ, ತುರ್ಯ ಮತ್ತು ತುರ್ಯಾತೀತ ಎಂಬ ಏಳು ಮೆಟ್ಟಿಲುಗಳಿವೆ. ಮೊದಲನೆಯದಾಗಿ ಸುಖದ ಇಚ್ಚೆಯನ್ನು ತೊರೆಯಬೇಕು. ನಾನು ಸಚ್ಚಿದಾನಂದ ಸ್ವರೂಪನಾಗಿದ್ದೇನೆ. ಆತ್ಮನಿಗಿಂತ ದೊಡ್ಡದು ಯಾವುದೂ ಇಲ್ಲ ಇಂದ್ರಿಯಗಳಿಗೆ ಕಾಣಿಸುವ ಸಂಗವು ನನಗಿಲ್ಲ ಸೂರ್ಯನು ಹುಟ್ಟಿದಾಗ ಲೋಕದಲ್ಲಿ ಚಟುವಟಿಕೆಯುಂಟಾಗುವಂತೆ ಎಲ್ಲ ಇಂದ್ರಿಯಗಳ ಅಂತಃಕರಣಗಳ ವ್ಯಾಪಾರಗಳಿಗೂ ನಾನೇ ಕಾರಣನಾಗಿದ್ದೇನೆ ಎಂದು ಸಾಧಕ ತಿಳಿಯುತ್ತಾನೆ. ಮಾಯೆಯಿಂದ ಹುಟ್ಟಿದ ಹದಿನಾರು ವಿಕಾರಗಳನ್ನು ಪಡೆಯುವ ಕಲ್ಪನೆಗಳ ಒಡಲಾದ ಮನಸ್ಸಿಗೂ ನನಗೂ ಯಾವ ಸಂಬಂಧವಿಲ್ಲ ಎಂದು ಸಾಧಕ ಚಿಂತಿಸುತ್ತಾನೆ. ಕಣ್ಣಿಗೆ ಕಾಣಿಸಿದುದನ್ನು ನಿಜವೆಂದು ತಿಳಿಯದೆ ಭ್ರಾಂತಿಯನ್ನು ಕಳೆದುಕೊಂಡಿರುವದೇ ವಾಸನಾಕ್ಷಯವೆಂಬ ಭೂಮಿಕೆ. "ಜೀವಾತ್ಮ ಪರಮಾತ್ಮರ ಐಕ್ಯವನ್ನು ಸಾದಿಸಿದವನಿಗೆ ಯಾವ ಸಂಗವೂ ಇಲ್ಲ. ಬ್ರಹ್ಮಸ್ವರೂಪವೇ ಅವನ ದೇಹ ವಾಸನಾಕ್ಷಯವನ್ನು ಸಾಧಿಸಿದ ಮೇಲೆ ಹೊರಗೂ ಒಳಗೂ ಆನಂದಾನುಭವವೇ ತುಂಬಿ ತುಳುಕುತ್ತದೆ. ಇದೇ ಆನಂದಿನಿ ಎಂಬ ಐದನೆಯ ಭೂಮಿಕೆ" (6-34) ಆನಂದಿನಿಯಾದ ಮೇಲೆ ತುರ್ಯಾವಸ್ಥೆ ತುರ್ಯಾವಸ್ಥೆಯಲ್ಲಿ ಆನಂದ ತಾನೇ ತಾನಾಗಿರುತ್ತದೆ. ಇದನ್ನು ಉನ್ಮನೀ ಅವಸ್ಥೆ ಎಂದೂ ಕರೆಯುತ್ತಾರೆ. ತುರ್ಯಾವಸ್ಥೆಯಲ್ಲಿ ದ್ವೈತ ಅದ್ವೈತವೆನ್ನುವ ಮಾತೇ ಇಲ್ಲ ಅಲ್ಲಿ ಅರಿವೆಂಬ ಜ್ಯೋತಿಯೊಂದೇ ಇರುತ್ತದೆ ತುರ್ಯಾತೀತವೆಂಬ ಕೊನೆಯ ಭೂಮಿಕೆಯು ಕಾರ್ಯಕಾರಣಗಳನ್ನು ಮೀರಿದ ನಿರ್ವಿಕಲ್ಪಸ್ಥಿತಿ ಇದನ್ನು ವಿದೇಹ ಮುಕ್ತಿಯ ಸಾರ ಎಂದು ಹೇಳುತ್ತಾರೆ ವ್ಯಾಸಮಹರ್ಷಿ ಶುಕನಿಗೆ ವೇದಾಂತ ಸಮ್ಮತವಾದ ಶ್ರವಣ ಮನನ ನಿಧಿಧ್ಯಾಸಗಳೆಂಬ ಸಧನೆಯನ್ನು ಸಪ್ತಭೂಮಿಕೆಗಳ ನಂತರ ತಿಳಿಯಪಡಿಸುತ್ತಾನೆ ಅದರಿಂದ ಆಧ್ಯಾತ್ಮಯೋಗವನ್ನು ಅವಲಂಬಿಸಲು ಕರೆಕೊಡುತ್ತಾನೆ.

    ತತ್ವ ರಹಸ್ಯವನ್ನು ಈ ರೀತಿ ತಿಳಿಸಿದ ನಂತರ ಪರಮಾತ್ಮಪದವನ್ನು ಏಳನೆಯ ಅಧ್ಯಾಯದಲ್ಲಿ ವಿವರಿಸುತ್ತಾರೆ ವೇದಗಳಿಗೆ ಹೇಳಲು ಅಸಾಧ್ಯವಾದ ಸಗುಣ ನಿರ್ಗುಣವೆನ್ನಿಸಿಕೊಳ್ಳದ ಬರಿಯ ಅರಿವಿನ ಆಕಾಶವೇ ಪರಮಾತ್ಮ ಪದವಾಗಿದೆ ಸದ್ಗುರು ಕೃಪಾಕಟಾಕ್ಷದಿಂದ ಸ್ವಸ್ವರೂಪದ ಜ್ಞಾನವನ್ನು ಮಾಡಿಕೊಂಡು ಅದನ್ನು ದೃಢಪಡಿಸಿಕೊಂಡಾಗ ಬ್ರಹ್ಮಾನಂದವು ತಾನೇ ತಾನಾಗಿರುವ ಸ್ಥಿತಿಯನ್ನು ಪರಮಾತ್ಮಪದ ಎಂದು ತಿಳಿಯಬೇಕು ಅದು ನಿತ್ಯಜ್ಞಾನಾನಂದಮಯವಾದುದು ಸ್ಥೂಲ ಸೂಕ್ಷ್ಮ ಕಾರಣಗಳೆಂಬ ಮೂರು ದೇಹಗಳನ್ನು ಎಚ್ಚರ ಕನಸು ನಿದ್ದೆಗಳೆಂಬ ಮೂರವಸ್ಥೆಗಳನ್ನು ತ್ರಿಪುಟಿಯನ್ನು ತಂದೆ ತಾಯಿ ದೇಹಗಳೆಂಬ ಮೂರು ವರ್ಗಗಳನ್ನು ದೇಹ ಮಾತು ಮನಸ್ಸುಗಳೆಂಬ ಮೂರು ಕರಣಗಳನ್ನು ಭೂತ ವರ್ತಮಾನ ಭವಿಷ್ಯತ್ತುಗಳೆಂಬ ಮೂರು ಕಾಲಗಳನ್ನು ಸ್ವರ್ಗ ಮರ್ತ್ಯ ಪಾತಾಳಗಳೆಂಬ ಮುರು ಲೋಕಗಳನ್ನು ಇಚ್ಛಾ ಜ್ಞಾನ ಕ್ರಿಯಾಶಕ್ತಿಗಳೆಂಬ ಮೂರು ಶಕ್ತಿಗಳನ್ನು ದೇವಯಾನ ಪಿತೃಯಾನ ಜನನ ಮರಣಗಳೆಂಬ ಮೂರು ಗತಿಗಳನ್ನು ಮೀರಿರುವ ಸತ್ಯಜ್ಞಾನಾನಂದಮಯವಾದ ಆ ನಾಲ್ಕನೆಯದು ಪರಮಾತ್ಮಪದವಾಗಿದೆ" (7-22)

    "ಅನುಭವಾಮೃತ"ದ ಎಂಟನೆಯ ಅಧ್ಯಾಯ ಮಾಯಾಮಿಥ್ಯಾತ್ವ ಪ್ರಕರಣಕ್ಕೆ ಸಂಬಂಧಿಸಿದೆ ಬ್ರಹ್ಮ ಮಾಯೆಗಳೆರಡೂ ಒಂದರೊಡನೊಂದು ಜೊತೆಯಲ್ಲಿರುವದು ಹೇಗೆ? ಎಂದು ಶುಕ ಕೇಳಿದ ಪ್ರಶ್ನೆಗೆ ವೇದವ್ಯಾಸರು ಹೀಗೆ ಹೇಳುತ್ತಾರೆ; ಸತ್ಯವಾದ ಅದ್ವಯವಸ್ತುವಿನಲ್ಲಿ ಮಾಯೆಯೆನ್ನುವದು ಮಿಥ್ಯೆ ಬ್ರಹ್ಮವೆಲ್ಲ? ಮಾಯೆಯೆಲ್ಲಿ? "ಭತ್ತದ ರಾಶಿಯಲ್ಲಿರುವ ಜೊಳ್ಳುಕಾಳು ಭತ್ತದಂತೆ ಕಾಣುತ್ತದೆ ಕಣ್ಣು, ಮಬ್ಬಾಗಿದ್ದಾಗ ಹಗಲಿನ ಬೆಳಕಿಗೆ ಮಂಜುಕವಿದಂತೆ ತೋರುತ್ತದೆ ಒಳಗೆಲ್ಲಾ ಪೊಳ್ಳಾಗಿದ್ದರೂ ನೀರಗುಳ್ಳೆ ದೊಡ್ಡದಾಗಿ ಕಾಣುತ್ತದೆ ಹಾಗೆ ಮಾಯೆಯು ಹುಸಿಯಾದರೂ ಬ್ರಹ್ಮನಲ್ಲಿ ಅದು ನಿಜವಾಗಿ ಇದ್ದಂತೆ ತೋರುತ್ತದೆ." (8-10). "ಮರವನ್ನು ಕೆತ್ತಿದಾಗ ಆನೆಯ ಆಕಾರವು ಕಾಣಿಸಿಕೊಂಡೀತೇ ಹೊರತು ನಿಜವಾದ ಆನೆಯೇನೂ ಅಲ್ಲಿಲ್ಲ ಹಾಗೆಯೇ ಬ್ರಹ್ಮವೇ ಜಗತ್ತಿನಾಕಾರದಲ್ಲಿ ತೋರುತ್ತಿದೆಯೇ ಹೊರತು ಜಗತ್ತೆಂಬುದು ಬೇರೆ ಇಲ್ಲ." (8-13)
ಕಾಮಿನಿಮಯವಾಗಿಹುದು ಜಗ
ಕಾಮುಕಗೆ ಮಿಗಿಲಾಗಿ ಲುಬ್ಧಗೆ
ಪ್ರೇಮದಿಂ ಧನಮಯವು ಸರ್ವವು ತಿಳಿಯೆ ಬ್ರಹ್ಮವನು
ಸಾಮರಸ್ಯವು ಸಕಲವೆಲ್ಲವು
ನಾಮರೂಪಿನ ಭ್ರಮೆ ಅಳಿಯೆ ನಿ
ಸ್ಸೀಮ ನಿಜಸುಖಧಾಮ ನಿರುಪಾಧಿಕ ಪ್ರರಬ್ರಹ್ಮ (8-24)
ಕಾಮುಕನಿಗೆ ಜಗತ್ತೆಲ್ಲವೂ ಕಾಮಿನಿಯರಿಂದ ತುಂಬಿದಂತೆ ಕಾಣತ್ತದೆ ಕಡುಲೋಭಿಗೆ ಜಗತ್ತೆಲ್ಲವೂ ಧನಮಯವಾಗಿ ತೋರುತ್ತದೆ ಬ್ರಹ್ಮಜ್ಞಾನಿಗೆ ಜಗತ್ತೆಲ್ಲವೂ ಒಂದೇ ಆಗಿರುವದು ಅನುಭವಕ್ಕೆ ಬರುತ್ತದೆ. ಆತ್ಮಜ್ಞಾನವಾದಾಗ ಭ್ರಮೆ ಉಪಾಧಿ ನಾಶವಾಗಿ ಅನಂತಸುಖಮಯವಾದ ಬ್ರಹ್ಮವೊಂದೇ ಎಲ್ಲೆಲ್ಲಿಯೂ ಇರುವದು ಅನುಭವಸಿದ್ಧವಾಗುತ್ತದೆ.
ಮಾಯೆಯೆನಿಸೆ ಯಥಾರ್ಥವಪ್ಪುದು
ಮಾಯೆಯೆನಿಸಿಂತಾವಳೊಬ್ಬಳು
ಈ ಎರಡು ವರ್ಣದಲಿ ಮಾಯೆಯದಿಲ್ಲವೆಂಬರ್ಥ
ಮಾಯೆಯೆಂಬೀ ಶಬ್ದ ತಾನೇ
ಮಾಯೆಯದು ಪುಸಿಯೆಂದು ನುಡಿಯಲು
ಮಾಯೆಗೆಂತು ಪ್ರತಿಷ್ಠೆ ಸರ್ವಂಬ್ರಹ್ಮಮಯವೆಂದ (8-32)
"ಮಾಯೆ" ಎಂಬ ಶಬ್ಧದಲ್ಲಿ "ಯೆ" ಎಂದರೆ ಇಂಥವಳೊಬ್ಬಳೆಂದೂ "ಮಾ" ಎಂದರೆ ಇಲ್ಲವೆಂದೂ ಅರ್ಥವಾಗುತ್ತದೆ. ಆದುದರಿಂದ ಮಾಯೆ ಎನ್ನುವ ಶಬ್ದಕ್ಕೆ ತಾನಿಲ್ಲವೆಂದು ಅರ್ಥವಾಗುತ್ತದೆ ತನ್ನ ಅರ್ಥವೇ ತಾನಿಲ್ಲವೆಂದಾಗಿರುವಾಗ ಮಾಯೆ ಇರುವದಾದರೂ ಹೇಗೆ? ಎಲ್ಲವೂ ಬ್ರಹ್ಮಮಯವಾಗಿದೆ ಹೀಗೆ ಮಾಯಾಸಂಬಂಧವಾದುದೆಲ್ಲವೂ ಭ್ರಾಂತಿಕಲ್ಪಿತವೆಂದು ಅದ್ವಯ ಬ್ರಹ್ಮವು ಅಖಂಡಾನಂದಮಯವೆಂದು ವ್ಯಾಸರು ಶುಕನಿಗೆ ತಿಳಿಯಪಡಿಸುತ್ತಾರೆ.

    ಜೀವತ್ರಯ ವಿಚಾರದ ಪ್ರಸ್ತಾಪ ಒಂಬತ್ತನೆಯ ಅಧ್ಯಾಯದಲ್ಲಿ ಬರುತ್ತದೆ ತನ್ನ ನಿಜಸ್ವರೂಪವನ್ನು ಮರೆತು ದೇಹವೇ ತಾನೆಂದು ಭಾವಿಸುವ ಅಹಂಕಾರವು ನಿಜವಾಗಿ ಆತ್ಮನ ಧರ್ಮವಲ್ಲ ಹಾಗೆಯೇ ಅದು ದೇಹಧರ್ಮವೂ ಅಲ್ಲ. "ಒಂದೇ ಅಹಂಕಾರವೇ ಬೇರೆ ಬೇರೆ ಅವಸ್ಥೆಗಳಲ್ಲಿ ಆವರಣಶಕ್ತಿಯ ದೆಸೆಯಿಂದ ಮೂರು ಭೇದಗಳನ್ನು ತಾಳಿದೆ ಎಚ್ಚರದಲ್ಲಿ ವ್ಯಾವಹಾರಿಕ ಜೀವನೆಂದೂ ಸ್ವಪ್ನದಲ್ಲಿ ಪ್ರಾತಿಭಾಸಿಕ ಜೀವನೆಂದೂ ಸುಷುಪ್ತಿಯಲ್ಲಿ ಪಾರಮಾರ್ಥಿಕಜೀವನೆಂದೂ ಅದಕ್ಕೆ ಹೆಸರು" (9-24). "ಮಾಯಾವರಣದ ದೆಸೆಯಿಂದ ವ್ಯಾವಹಾರಿಕ ಜೀವನು ಸುಳ್ಳಾದ ಜಗತ್ತನ್ನು ನಿಜವೆಂದು ಭಾವಿಸುತ್ತಿದ್ದಾನೆ ಪಾರಮಾರ್ಥಿಕ ಜೀವನು ಜೀವಾತ್ಮ ಪರಮಾತ್ಮರ ಐಕ್ಯವನ್ನು ಸಾಧಿಸಿ ಪರಮಾನಂದವನ್ನು ಹೊಂದುತ್ತಾನೆ. (9-32).

"ಮಾಯೆ" ಎಂಬ ಶಬ್ದದಲ್ಲಿ "ಯೆ" ಎಂದರೆ ಇಂಥವಳೊಬ್ಬಳೆಂದೂ "ಮಾ" ಎಂದರೆ ಇಲ್ಲವೆಂದೂ ಅರ್ಥವಾಗುತ್ತದೆ ಆದುದರಿಂದ ಮಾಯೆ ಎನ್ನುವ ಶಬ್ದಕ್ಕೆ ತಾನಿಲ್ಲವೆಂದು ಅರ್ಥವಾಗುತ್ತದೆ ತನ್ನ ಅರ್ಥವೇ ತಾನಿಲ್ಲವೆಂದಾಗಿರುವಾಗ ಮಾಯೆ ಇರುವದಾದರೂ ಹೇಗೆ? ಎಲ್ಲವೂ ಬ್ರಹ್ಮಮಯವಾಗಿದೆ ಹೀಗೆ ಮಾಯಾಸಂಬಂಧವಾದುದೆಲ್ಲವೂ ಭ್ರಾಂತಿಕಲ್ಪಿತವೆಂದು ಅದ್ವಯ ಬ್ರಹ್ಮವು ಅಖಂಡಾನಂದಮಯವೆಂದು ವ್ಯಾಸರು ಶುಕನಿಗೆ ತಿಳಿಯಪಡಿಸುತ್ತಾರೆ.

    ಜೀವತ್ರಯ ವಿಚಾರದ ಪ್ರಸ್ತಾಪ ಒಂಬತ್ತನೆಯ ಅಧ್ಯಾಯದಲ್ಲಿ ಬರುತ್ತದೆ ತನ್ನ ನಿಜಸ್ವರೂಪವನ್ನು ಮರೆತು ದೇಹವೇ ತಾನೆಂದು ಭಾವಿಸುವ ಅಹಂಕಾರವು ನಿಜವಾಗಿ ಆತ್ಮನ ಧರ್ಮವಲ್ಲ ಹಾಗೆಯೇ ಅದು ದೇಹಧರ್ಮವೂ ಅಲ್ಲ. "ಒಂದೇ ಅಹಂಕಾರವೇ ಬೇರೆ ಬೇರೆ ಅವಸ್ಥೆಗಳಲ್ಲಿ ಅವರಣಶಕ್ತಿಯ ದೆಸೆಯಿಂದ ಮೂರು ಭೇದಗಳನ್ನು ತಾಳಿದೆ ಎಚ್ಚರದಲ್ಲಿ ವ್ಯಾವಹಾರಿಕ ಜೀವನೆಂದೂ ಸ್ವಪ್ನದಲ್ಲಿ ಪ್ರಾತಿಭಾಸಿಕ ಜೀವನೆಂದೂ ಸುಷುಪ್ತಿಯಲ್ಲಿ ಪಾರಾಮಾರ್ಥಿಕಜೀವನೆಂದೂ ಅದಕ್ಕೆ ಹೆಸರು" (9-24). "ಮಾಯಾವರಣದ ದೆಸೆಯಿಂದ ವ್ಯಾವಹಾರಿಕ ಜೀವನು ಸುಳ್ಳಾದ ಜಗತ್ತನ್ನು ನಿಜವೆಂದು ಭಾವಿಸುತ್ತಿದ್ದಾನೆ ಪಾರಮಾರ್ಥಿಕ ಜೀವನು ಜೀವಾತ್ಮ ಪರಮಾತ್ಮರ ಐಕ್ಯವನ್ನು ಸಾಧಿಸಿ ಪರಮಾನಂದವನ್ನು ಹೊಂದುತ್ತಾನೆ. (9-37).

    ಜೀವನ್ಮುಕ್ತರ, ಸಹಜಸ್ವರೂಪಿಗಳ ವಿಚಾರವನ್ನು ಹತ್ತನೆಯ ಅಧ್ಯಾಯದಲ್ಲಿ ತುಂಬ ಮಾರ್ಮಿಕವಾಗಿ ವರ್ಣಿಸಲಾಗಿದೆ ಪರಬ್ರಹ್ಮನಿಗೆ ಮಾಯೆಯ ಸಂಗವಿಲ್ಲ ಋಗ್ವೇದದಲ್ಲಿ "ಪ್ರಜ್ಞಾನಂ ಬ್ರಹ್ಮ" (ಪರಬ್ರಹ್ಮವು ಬುದ್ಧಿಯ ಆಚೆಗಿದೆ) ಅಥರ್ವವೇದದಲ್ಲಿ "ಅಯಮಾತ್ಮಾಬ್ರಹ್ಮ" (ಸತ್ಯಜ್ಞಾನಾನಂದ ಮಯನಾದ ಆತ್ಮನೇ ಪರಬ್ರಹ್ಮ) ಸಾಮವೇದದ ಛಾಂದೋಗ್ಯೋಪನಿಷತ್ತು ಗುರುವಿನ ಬೋಧೆಯಾದ "ತತ್ವಮಸಿ" ಎಂದೂ ಯಜುರ್ವೇದದಲ್ಲಿ "ಅಹಂ ಬ್ರಹ್ಮಾಸ್ಮಿ" (ಬುದ್ದಿಗೆ ಸಾಕ್ಷಿಯಾಗಿ ಬೆಳಗುವ ನಾನೇ ಪರಬ್ರಹ್ಮನಾಗಿದ್ದೇನೆ) ಎಂದು ಹೇಳಲ್ಪಟ್ಟಿದೆ (10-59-60) ಪರಬ್ರಹ್ಮನು ಅನಂತನೂ ಪರಂಜ್ಯೋತಿಸ್ವರೂಪನೂ ಸರ್ವಾತ್ಮನೂ ಆಗಿದ್ದಾನೆ.

    ಗಾಯತ್ರಿಮಂತ್ರದ ಅರ್ಥವನ್ನು ಗುರುಮುಖದಿಂದ ತಿಳಿದು ಮನನ ಮಾಡಿ ದಿವ್ಯಜ್ಞಾನ ಹೊಂದಿದರೆ ಮುಕ್ತಿ ದೊರಕುವದಿಲ್ಲವೆ? ಸನ್ಯಾಸವೆಂಬ ಆಶ್ರಮವನ್ನು ಸ್ವೀಕರಿಸಿದ್ದರಿಂದ ಫಲವೇನು? ಎಂಬ ಪ್ರಶ್ನೆಗೆ ವ್ಯಾಸರು ಕೊಡುವ ಉತ್ತರವಿದು "ನಿಸ್ಸಂಗವು ಅಳವಟ್ಟು ಅಹಂಕಾರ ನಿರಸನವಾಗಿ ತಾನೇ ಬ್ರಹ್ಮನಾದವನ ಸ್ಥಿತಿ ಸನ್ಯಾಸ ಯಾರು ಗೃಹಸ್ಥಧರ್ಮದಲ್ಲಿಯೆ ವ್ಯವಹರಿಸುತ್ತಿದ್ದರೂ ಶಮೆ ದಯೆ ಶಾಂತಿ ವೈರಾಗ್ಯ ಸದ್ಭಾವಗಳನ್ನು ಅಳವಡಿಸಿಕೊಂಡು ಜೀವಾತ್ಮ ಪರಮಾತ್ಮರ ಐಕ್ಯಭಾವದಲ್ಲಿರುವನೋ ಅವನೇ ಸನ್ಯಾಸಿ ಅವನೇ ಜೀವನ್ಮುಕ್ತ (10-99) ವಿಷಯಸುಖಗಳ ಬಯಕೆಯಿಲ್ಲದ ಮಹಾನುಭಾವನೇ ಯೋಗಿ ಮಾಗಿದ ಹಣ್ಣು ಮತ್ತೆ ಕಸುಗಾಯಿಯಾಗುತ್ತದೆಯೇ? ಆತ್ಮಜ್ಞಾನಿಯಾದ ಯೋಗಿಯ ನಿಶ್ಚಲ ಚಿತ್ತವು ಕಲುಷಿತಗೊಳ್ಳುವದಿಲ್ಲ ಅರಿಷಡ್ವರ್ಗಗಳನ್ನು ಗೆದ್ದು ಸಚ್ಚಿದಾನಂದದಲ್ಲಿಯೇ ಯೋಗಿಯು ನಿಂತಿರುತ್ತಾನೆ ಬೆಣ್ಣೆಯನ್ನು ಕಾಸಿ ಬಂದ ತುಪ್ಪವು ಮತ್ತೆ ಹಾಲಾಗುವದೇ? ಸುಟ್ಟ ಮೇಲೆ ಕೆಂಡವು ಮತ್ತೆ ಕಟ್ಟಿಗೆಯಾಗುವದೇ? ಹಾಗೆಯೇ ಪಾರಮಾರ್ಥಿಕವಾದ ನಿಜವು ಮಾಯೆಗೆ ಒಳಗಾಗುವದಿಲ್ಲ." (10-111) ಹುರಿದ ಬೀಜವು ಮತ್ತೆ ಮೊಳಕೆಯಾಗದಿರುವಂತೆ ಪರಬ್ರಹ್ಮ ವಸ್ತುವನ್ನು ಅರಿತ ಯೋಗಿಗೆ ಪುನರ್ಜನ್ಮವಿಲ್ಲ ಜೀವನ್ಮುಕ್ತನು ಬಾಹ್ಯವನ್ನು ಮರೆತು ವ್ಯವಹರಿಸುತ್ತಾ ಸುಟ್ಟ ಬಟ್ಟೆಯಂತಿರುತ್ತಾನೆ (10-114) ಯಾವ ಕಲ್ಪನೆಯೂ ಇಲ್ಲದ ಸ್ವಭಾವಸಿದ್ಧವಾದ ಕೇವಲಾನಂದ ಸ್ವರೂಪನಾದ ಜೀವನ್ಮುಕ್ತನು ಯಾಕೆ ದೇವನಲ್ಲ? ಎಂಬ ಪ್ರಶ್ನೆಗೆ ಅನುಭವಾಮೃತದಲ್ಲಿ ಮಾರ್ಮಿಕವಾದ ಉತ್ತರವಿದೆ.
ದೇಹವೇ ದೇವಾಲಯವು ದಿಟ
ದೇಹಿಯೆನಿಸುವ ಜೀವ ದೇವನು
ಮೋಹವೆ ನಿರ್ಮಾಲ್ಯವಂತದ ನೇತಿಗಳಿದುಳಿದು
ಊಹಿಸಲು ಬಾರದ ಸ್ವಯಂಪ್ರಭೆ
ಸೋಹವೆಂಬುದೆ ಪೂಜೆ ತನುವಿನ
ಗಾಯಿನಾಹಾರಗಳೆ ಉಪಚಾರ ಕೇಳೆಂದ (10-121)
ದೇಹವೇ ದೇವಾಲಯ ದೇಹಿಯಾದ ಜೀವನೇ ದೇವರು ಮೋಹವೆಂಬ ನಿರ್ಮಾಲ್ಯವನ್ನು ತೆಗೆದು ಸ್ವಯಂ ಜ್ಯೋತಿಸ್ವರೂಪನಾದ (ಪರಬ್ರಹ್ಮವೇ) ನಾನೆನ್ನುವದೇ ಪೂಜೆ ದೇಹವು ಪ್ರಾರಬ್ಧವಶದಿಂದ ಮಾಡುತ್ತಿರುವ ಕರ್ಮಗಳೇ ಉಪಚಾರಗಳು ಹೀಗೆ ದೇಹವೇ ದೇವಾಲಯವೆಂದು ಸ್ವಯಂಪ್ರಕಾಶನಾದ ಆತ್ಮಾರಾಧನೆಯು ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಅತ್ಯಂತ ಪ್ರಗತಿಪರವಾದ, ವೈಚಾರಿಕವಾದ ನೂತನ ಹೆಜ್ಜೆಯಾಗಿದೆ (ಅದ್ವೈತಿಗಳು ಇಂದಿಗೂ "ದೇಹೋ ದೇವಾಲಯ ಪ್ರೋಕ್ತೋ ದೇವೋ ಜೀವಃ ಸದಾಶಿವಃ ಎಂದು ನಿತ್ಯಕರ್ಮದಲ್ಲಿ ಪಠಿಸುವದನ್ನು ಕಾಣಬಹುದು)

    ಪರಬ್ರಹ್ಮವು ನಿತ್ಯವೂ ನಿರ್ಗುಣವೂ ಉಪಾಧಿರಹಿತವೂ ಆಗಿದೆ ಅದಕ್ಕೆ ಪೂಜೆ ಉಪಚಾರ ಮಾಡವದು ಹೇಗೆ? ಎಂಬ ಪ್ರಶ್ನೆಗೆ ಶ್ರವಣದಿಂದ ನಿಶ್ಚಯಿಸಿದ ವಸ್ತುವನ್ನು ಮನನ ಮಾಡಲೆಂದು ಉಪಚಾರ ಸಹಿತವಾದ ನಿರ್ಗುಣಾರಾಧನೆಯನ್ನು ಜ್ಞಾನಿಗಳು ಆಚರಿಸುತ್ತಾರೆ ಈ ನಿರ್ಗುಣಾರಾಧನೆಯ ನಿರ್ಣಯ ವಿಚಾರದೊಂದಿಗೆ "ಅನುಭವಾಮೃತ" ಕಾವ್ಯದ ಅದ್ವೈತ ತತ್ವಮೀಮಾಂಸೆ ಮುಕ್ತಾಯವಾಗುತ್ತದೆ.

    ಮಹಾಲಿಂಗರಂಗ "ಅನುಭವಾಮೃತ"ದುದ್ದಕ್ಕೂ ದೃಷ್ಟಾಂತಪ್ರಾಚರ್ಯದ ಮೂಲಕ ತಿಳಿಯಾದ ಕನ್ನಡದಲ್ಲಿ ವೇದಾಂತದ ಪರಮಸತ್ಯವನ್ನೂ ಮಹೋನ್ನತ ವಿಚಾರಗಳನ್ನೂ ವಿದಿತಪಡಿಸಿದ್ದಾನೆ. ಮಹಾಲಿಂಗರಂಗನ ಸಮಕಾಲೀನನಾದ ಚಿದಾನಂದಾವಧೂತನ "ಜ್ಞಾನಸಿಂಧು" ಅದ್ವೈತ ವೇದಾಂತವನ್ನು ಭಾಮಿನಿ ಷಟ್ಪದಿಯಲ್ಲಿ ವಿಸ್ತಾರವಾಗಿ ನಿರೂಪಿಸುವ ಇನ್ನೊಂದು ಮಹತ್ವದ ಕೃತಿಯಾಗಿದೆ ಅದ್ವೈತ ಪರಂಪರೆ ಶೃಂಗೇರಿ, ಸ್ವರ್ಣವಲ್ಲಿ, ರಾಮಚಂದ್ರಪುರಮಠ, ಕೂಡಲಿ ಮೊದಲಾದ ಪೀಠಸ್ಥ ಯತಿಗಳಿಂದಲೂ ಸದಾಶಿವಬ್ರಹ್ಮೇಂದ್ರ ಶ್ರೀಧರಸ್ವಾಮಿಗಳಂಥ ಸಂತರಿಂದಲೂ ರಮಣ ಮಹರ್ಷಿಗಳಂಥ ಜೀವನ್ಮುಕ್ತ ವಿಭೂತಿ ಪುರುಷರಿಂದಲೂ ಅದ್ವೈತ ದರ್ಶನವು ಕನ್ನಡ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಅನುಷ್ಠಾನ ಆಚರಣೆಯ ಮಹೋನ್ನತಿಯಾಗಿ ಕಂಗೊಳಿಸುತ್ತಿದೆ.
   

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ