ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ

ವೈಕುಂಠದಾಸರ ಭಕ್ತಿಯ ಶಕ್ತಿಯನ್ನು ಇದರಲ್ಲಿ ಕಾಣಬಹುದು. ಭಕ್ತನೊಬ್ಬ ತನ್ನ ಭಕ್ತಿಯನ್ನೇ ಶಕ್ತಿಯನ್ನಾಗಿ ರೂಪಿಸಿಕೊಳ್ಳುವ ಸ್ಥಿತಿ; ಉತ್ಕೃಷ್ಟವಾದ ಸಾಧನೆಯ ಸ್ಥಿತಿ; ಈ ಸ್ಥಿತಿಯಲ್ಲಿ ದೈವ-ಭಕ್ತರ ಅಂತರ ದೂರವಾಗಿ ಅತ್ಯಂತ ಸಮೀಪವರ್ತಿಯಾಗುತ್ತದೆ. ದೈವದಲ್ಲಿರುವ ಹುಳುಕುಗಳನ್ನು (ಗುಣವಿಶೇಷಗಳನ್ನೇ ಹುಳುಕುಗಳನ್ನಾಗಿಸಿಕೊಂಡು) ಅತ್ಯಂತ ಸಲಿಗೆಯಿಂದ ಜರಿಯುವ, ಸಂಭಾಷಣೆಯ ರೂಪದಲ್ಲಿ ಜಗ್ಗಿಸಿ ಕೇಳುವ ಸ್ಥಿತಿಯನ್ನು ಪಡೆಯುತ್ತದೆ. ಇದನ್ನೇ ನಿಂದಾಸ್ತುತಿ ಎಂದೂ ಗುರುತಿಸುತ್ತಾರೆ. ಇಂತಹ ಒಂದು ನಿಂದಾಸ್ತುತಿ ಇದಾಗಿದೆ ಶ್ರೀಹರಿಯ ಶೃಂಗಾರವನ್ನೇ ಇಲ್ಲಿ ಅವಗುಣವಾಗಿಸಿ ಜಗ್ಗಿಸುವ ಪರಿ ವಿಶೇಷವಾಗಿದೆ. 'ಬಾಲಬ್ರಹ್ಮಚಾರಿ' ನುಡಿಗಟ್ಟನ್ನು ಅಣಕಿಸುವ ಪರಿಭಾಷೆಯಲ್ಲಿ ಬಳಸಲಾಗಿದೆ.

(ಮುಖಾರಿ,   ಝಂಪೆ)
ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ
ಶೃಂಗಾರವಾರ್ಧಿ ವೇಲಾಪುರದ ಚೆನ್ನಾ

ಕರದಲ್ಲಿ ದಂಡಕೋಲು ಕಮಂಡಲವನೀವ
ಪರಿಹೇಗೆ ದಾಸಾನುದಾಸನಲ್ಲ
ಇರಲಿಯಂತದುವೆ ಶ್ರೀಧರನೆಂಬ ಪೆಸರು ಬಿ
ಟ್ಟುರದ ಲಕ್ಷ್ಮಿಯನು ಕಡೆಗಿರಿಸು ನೋಡುವೆನೊಮ್ಮೆ  ||1||

ಎನ್ನ ಬಿನ್ನಪವೊಂದುಂಟು ಕೇಳೆಲೋ ಸ್ವಾಮೀ
ನಿನ್ನ ಬಾಲಬ್ರಹ್ಮಚಾರಿಯೆಂದು
ಸನ್ನುತಿಸುತಿದೆ ವೇದಶಾಸ್ತ್ರಗಮಗಳೆಲ್ಲ
ಇನ್ನದಕುಪಾಯವೇನಯ್ಯಾ ಚೆನ್ನಿಗರಾಯ ||2||

ಶೃಂಗಾರಗಳನು ತತ್ವಂಗಳನು ಪೇಳುವಡೆ
ಗುಂಗುರುಹಿನೊಳಲ್ಪ ಮನುಜನಲ್ಲ
ಮಂಗಳಾತ್ಮಕನೆ ಆಡಿಸಿದೊಡಾಡುವೆ ಎನಗೆ
ಭಂಗವೇಕಯ್ಯ ವೈಕುಂಠಚಿನ್ನಿಗರಾಯ  ||3||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ