ದಕ್ಷಿಣಾಮೂರ್ತಿಸ್ತೋತ್ರ - 9 - ಪರಮೇಶ್ವರನ ಸರ್ವಾತ್ಮಕತ್ವ

ಭೂರಮ್ಭಾಂಸ್ಯನಲೋನಿಲೋಮ್ಬರಮಹರ್ನಾಥೋ ಹಿಮಾಂಶುಃ ಪುಮಾನ್
ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಮೈವ ಮೂರ್ತ್ಯಷ್ಟಕಮ್ |
ನಾನ್ಯತ್ಕಞ್ಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋ -
ಸ್ತಸ್ಮೈಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||

    ಈವರೆಗೆ ಪ್ರತಿಪಾದಿಸಿರುವದರ ಸಾರವಿಷ್ಟು : ಪರಮೇಶ್ವರನು ನಮ್ಮಗಳೆಲ್ಲರ ಆತ್ಮನೇ ಆಗಿರುತ್ತಾನೆ. ಪರಮಾತ್ಮನಲ್ಲಿ  ಅವಿದ್ಯಾಕಲ್ಪಿತವಾಗಿರುವ ನಾಮರೂಪ ಮಾಯೆಯ ವಿಕಾರವೇ ಈ ಜಗತ್ತು. ವ್ಯಾಕೃತ (ಬಿಡಿಬಿಡಿಯಾಗಿ ತೋರುವ) ನಾಮರೂಪಪ್ರಪಂಚ, ಅವ್ಯಾಕೃತ (ಬೀಜರೂಪವಾಗಿರುವ) ನಾಮರೂಪಪ್ರಪಂಚ ಎಂಬೀ ಎರಡು ಉಪಾಧಿಗಳಿಂದೊಡಗೂಡಿದ ಪರಮಾತ್ಮನು - ಮಾಯಾವಿಯು ಅಥವಾ ಒಬ್ಬ ಮಹಾಯೋಗಿಯು ತಾನೊಬ್ಬನೇ ಇದ್ದರೂ ಬಗೆಬಗೆಯ ಚೇತನಾ ಚೇತನಪದಾರ್ಥಗಳಾಗಿ ತೋರಿಕೊಳ್ಳುವಂತೆ ಗೊತ್ತಾದ ದೇಶಕಾಲನಿಮಿತ್ತಗಳುಳ್ಲ ಕ್ರಿಯಾಕಾರಕಫಲರೂಪವಾಗಿ ತೋರಿಸಿಕೊಳ್ಳುತ್ತಿರುತ್ತಾನೆ ಆತನ ಚೈತನ್ಯದ ಪ್ರಕಾಶದಿಂದಲೇ ಜಗತ್ತಿನಲ್ಲಿರುವ ಮಾಯಿಕಪದಾರ್ಥಗಳೆಲ್ಲ ತೋರಿಕೊಳ್ಳುತ್ತಿರುವವು ಆತನೇ ಸಾಧಕರಿಗೆ ಗುರುರೂಪದಿಂದ ಬಂದು ನೀನೇ ಈ ಜಗತ್ತಿಗೆ ಕಾರಣವಾಗಿರುವ ಸದ್ಬ್ರಹ್ಮವು ಎಂದು ಬೋಧಿಸುತ್ತಾನೆ. ಆ ಭೋಧೆಯಿಂದ ತಮ್ಮ ಪರಮಾರ್ಥಸ್ವರೂಪವನ್ನು ನೇರಾಗಿ ಅನುಭವಕ್ಕೆ ತಂದುಕೊಂಡವರು ಮತ್ತೆ ಸಂಸಾರದಲ್ಲಿ ಜೀವರಾಗಿ ಹುಟ್ಟುವದಿಲ್ಲ ಜೀವರು 'ಇಗೊ, ಇದನ್ನು ನಾನು ಇಂಥ ಕರಣದಿಂದ ಅರಿತುಕೊಂಡೆನು' ಎಂದು ಭಾವಿಸುತ್ತಿರುವದಕ್ಕೆ ಆ ಪರಮಾತ್ಮನ ಚೈತನ್ಯ ಪ್ರಕಾಶವೇ ಕಾರಣ ಆತನ ಬೆಳಕಿನ ಸಹಾಯವಿಲ್ಲದೆ ಪ್ರಮಾತೃಪ್ರಮಾಣಪ್ರಮೇಯಗಳಲ್ಲಿ ಯಾವದೊಂದೂ ಬೆಳಗಲಾರದು ಅವಿವೇಕಿಗಳಾದವರು ದೇಹವನ್ನು ಪ್ರಾಣವನ್ನು ಇಂದ್ರಿಯಗಳನ್ನು ಅಥವಾ ಬುದ್ಧಿಯನ್ನು ಅಥವಾ ಶೂನ್ಯವನ್ನೇ ತಮ್ಮ ಆತ್ಮನೆಂದು ಅರಿತು ಕೊಂಡಿರುವರು ತಮ್ಮ ಸಿದ್ದಾಂತವೇ ಸರಿಯೆಂದು ಮತ್ತೊಬ್ಬರೊಡನೆ ವಾದ ಮಾಡುತ್ತಲೂ ಇರುವರು ಇದೆಲ್ಲವೂ ಪರಮಾತ್ಮನ ಮಾಯಾಶಕ್ತಿಯ ವಿಲಾಸವೇ; ಯಾವಾಗ ಆತನ ಅನುಗ್ರಹವಾಗುವದೋ ಆಗ ಈ ಮಾಯಾವಿಲಾಸದ ಉಪಸಂಹಾರವಾಗಿ ಪರಮಾರ್ಥವು ಇದ್ದದ್ದು ಇದ್ದಂತೆ ಮನದಟ್ಟಾಗುವದು.
    ಈ ಪರಮಾತ್ಮಸ್ವರೂಪವು ಯಾವಾಗಲೂ ಸ್ವಯಂಜ್ಯೋತಿಯೇ ಆಗಿರುತ್ತಿದ್ದರೂ ಸುಷುಪ್ತಿಯಲ್ಲಿ ಕರಣಗಳ ಉಪಸಂಹಾರವಾಗಿರುವಾಗ ಸೂರ್ಯನು ರಾಹುಗ್ರಸ್ತನಾಗಿದಾನೆ ಎಂದು ಮೂಢರಿಗೆ ತೋರುವಂತೆ ತನಿ ನಿದ್ರೆಯಲ್ಲಿ ನಮಗೆ ಏತರ ಅರಿವೂ ಆಗಲಿಲ್ಲ ಎಂಬ ಭಾವವನ್ನು ಅವಿವೇಕಿಗಳಿಗೆ ಉಂಟುಮಾಡುತ್ತಿರುವದು ಆದರೆ ನಿಜವಾಗಿ ಸೂರ್ಯನನ್ನು ರಾಹುವು ಎಂದೆಂದಿಗೂ ಹೇಗೆ ಮುಟ್ಟಿಯೇ ಇರುವದಿಲ್ಲವೋ ಹಾಗೆ ನಮ್ಮ ಆತ್ಮಸ್ವರೂಪಚೈತನ್ಯಕೆ ಯಾವಾಗಲೂ ನಿದ್ರೆಯಿಲ್ಲ ಎಚ್ಚರವೂ ಇರುವದಿಲ್ಲ "ನಾನು ಆಗ ಏನನ್ನೂ ಅರಿಯಲಿಲ್ಲ" ಎಂಬುದು ಯಾವ ಅನುಭವಕ್ಕೆ ಗೋಚರವಾಗುವದೋ ಆ ಅನುಭವವೇ ನಮ್ಮ ಪರಮಾರ್ಥವಾದ ಆತ್ಮಸ್ವರೂಪವು ಬಾಲ್ಯ, ಯೌವ್ವನ, ಕೌಮಾರ, ವಾರ್ಧಕ ಎಂಬ ನಾಲ್ಕು ಅವಸ್ಥೆಗಳನ್ನು ಒಂದರಹಿಂದೊಂದನ್ನು ನಾವು ಪಡೆದೆವೆಂದು ಜನರು ಅರಿತುಕೊಳ್ಳುತ್ತಿರುವಾಗಲೂ ಅವರ ಆತ್ಮದಲ್ಲಿ ಯಾವ ಮಾರ್ಪಾಡೂ ಆಗಿರುವದೇ ಇಲ್ಲ ಶರೀರದಲ್ಲಿರುವ ಬಾಲ್ಯಾದಿಧರ್ಮಗಳನ್ನೇ ಅವರು ಎಲ್ಲವನ್ನೂ ಯಾವಾಗಲೂ ಬೆಳಗುತ್ತಿರುವ ಕುಟಸ್ಥಚೈತನ್ಯದಲ್ಲಿ ಹುಟ್ಟುಹಾಕಿಕೊಳ್ಳುತ್ತಿರುತ್ತಾರೆ ಇದರಂತೆಯೇ 'ಎಚ್ಚರವಾಗಿದೇನೆ ಕನಸು ಕಂಡಿದ್ದೆನು ಅಥವಾ ಗಾಢನಿದ್ರೆಯಲ್ಲಿದ್ದೆನು' ಎಂದು ಜನರು ವ್ಯವಹರಿಸುತ್ತಿರುವಾಗಲೂ ಆ ಅವಸ್ಥೆಗಳು ಒಂದಿರುವಾಗ ಇನ್ನೆರಡೂ ಇಲ್ಲವೇ ಇಲ್ಲವಾದ್ದರಿಂದಲೂ ಆತ್ಮಸ್ವರೂಪವು ಮಾತ್ರ ಈ ಎಲ್ಲಾ ಅವಸ್ಥೆಗಳಲ್ಲಿಯೂ ಹೊಂದಿಕೊಂಡೇ ಬಂದಿರುತ್ತದೆಯಾದ್ದರಿಂದಲೂ ಆತ್ಮನ ಕೂಟಸ್ಥಚೈತನ್ಯಸ್ವರೂಪದಲ್ಲಿ ಯಾವ ಮಾರ್ಪಾಡೂ ಆಗಿರುವದಿಲ್ಲ ಈ ವೃತ್ತಿಗಳೆಲ್ಲ ಮನಸ್ಸಿಗೇ ಸೇರಿರುತ್ತವೆಯಾದರೂ ವಿಷಯವಾದ ಮನಸ್ಸಿನ ಧರ್ಮಗಳನ್ನು ವಿಷಯಿಯಾದ ಚೈತನ್ಯದ ಮೇಲೆ ಹಾಕಿಕೊಂಡು ಜನರು ಭ್ರಾಂತರಾಗುತ್ತಿರುವರು ಯಾರು ಪರಮೇಶ್ವರನನ್ನು ಎಡೆಬಿಡದೆ ಭಜಿಸುತ್ತಿರುವರೋ ಅವರಮೇಲೆ ದಯೆಯಿಂದ ಆ ಭಗವಂತನು ಶ್ರೀಗುರುರೂಪದಿಂದ ತತ್ತ್ವೋಪ ದೇಶವನ್ನು ಮಾಡಿ ತನ್ನ ನಿಜವನ್ನು ಪ್ರಕಟಗೊಳಿಸಿಕೊಳ್ಳುವನು ಎಚ್ಚರ ಕನಸು ಈ ಎರಡೂ ಅವಸ್ಥೆಗಳೂ ಆತನಿಗಿಂತ ಬೇರೆಯಾಗಿರುವ ಆಧ್ಯಾತ್ಮಿಕ ಆದಿಭೌತಿಕ ಆಧಿದೈವಿಕ ಎಂದು ವಿಭಕ್ತವಾಗಿರುವ ಪ್ರಪಂಚವನ್ನು ತೋರಿಸುವ ಅವಸ್ಥೆಗಳು ಆ ಅವಸ್ಥೆಗಳಲ್ಲಿರುವ ದೃಶ್ಯಗಳಿಗೆ ಕಾರ್ಯಕಾರಣಭಾವ ಸ್ವಸ್ವಾಮಿಭಾವ ಮುಂತಾದ ನಿತ್ಯಸಂಬಂಧಗಳಿರುವಂತೆ ಜನರಿಗೆ ಕಾಣುತ್ತಿರುತ್ತದೆ ಅವಿದ್ಯಾ ಕಲ್ಪಿತವಾದ ಮಾಯೆಯಲ್ಲಿಯೇ ಮನಸ್ಸಿಟ್ಟು ಅದರಿಂದ ಮೋಹಿತರಾಗಿರುವದರಿಂದಲೇ ಹೀಗೆ ಜಗತ್ತು ಆತ್ಮನಿಗಿಂತ ಬೇರೆಯಾಗಿದೆ ಎಂದು ಮಾಯಾಭ್ರಾಂತಿಯಾಗುತ್ತಿರುವದು.
    ಈಗ ಈ ಒಂಬತ್ತನೆಯ ಶ್ಲೋಕದ ಅಭಿಪ್ರಾಯವೇನೆಂಬುದನ್ನು ಒಳಹೊಕ್ಕು ನೋಡಬಹುದಾಗಿದೆ ಹೀಗೆ ಎಚ್ಚರಕನಸುಗಳಲ್ಲಿರುವ ದೃಶ್ಯಗಳಿಗೆಲ್ಲ ನಿಜವಾಗಿ ಪರಮೇಶ್ವರನೇ ಸಾರವಾಗಿರುತ್ತಾನಾದರೂ ಆ ಆತ್ಮನಲ್ಲಿ ಈ ಮಾಯಾದೃಶ್ಯಗಳ ಧರ್ಮಗಳನ್ನು ಹುಟ್ಟುಗಟ್ಟಿಕೊಳ್ಳುತ್ತಾ ಜನರು ನಾನು, ನನ್ನದು ಎಂದು ವ್ಯವಹರಿಸುತ್ತಾ ಸಂಸಾರದಲ್ಲಿ ತೊಳಲುತ್ತಿರುವರು ಅವರಿಗೆ ಹೊರಗಿನ ಪದಾರ್ಥಗಳೆಲ್ಲ ಬೇಕಾದವು ಅಥವಾ ಬೇಡವಾದವು ಎಂದು ವಿಭಕ್ತವಾಗಿ ತೋರುತ್ತಿರುವವು ಇದಕ್ಕೆ ಕಾರಣವೇನೆಂದರೆ ಹೊರಕ್ಕೆ ತೋರಿಸಿಕೊಳ್ಳುತ್ತಿರುವ ಈ ಮಾಯೆಯೆಲ್ಲ ಸತ್ತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳ ವಿಲಾಸವೇ ಆಗಿರುತ್ತದೆ ಅದನ್ನು ನೋಡುತ್ತಿರುವವನ ಅಂತಃಕರಣದಲ್ಲಿಯೂ ಸತ್ತ್ವ, ರಜಸ್ಸು, ತಮಸ್ಸು- ಎಂಬ ಮೂರು ಗುಣಗಳಿಂದಾಗಿರುವ ವಿಕಾರಗಳ ವಾಸನೆಗಳೇ ತುಂಬಿತುಳುಕುತ್ತಿರುವವು ಸತ್ತ್ವದಿಂದ ಜ್ಞಾನ ರಜಸ್ಸಿನಿಂದ ಕಾಮಕರ್ಮಲೋಭಗಳು ತಮಸ್ಸಿನಿಂದ ಮೋಹ ಹೀಗೆ ಅಂತಃಕರಣದಲ್ಲಿ ವಿಕಾರಗಳು ಆಗುತ್ತಲೇ ಇರುವವು ಆ ವಿಕಾರಗಳು ತಮಗೆ ಬೇಕಾದವು ಅಥವಾ ಬೇಡದವು ಎಂದು ಅಭಿನಿವೇಶವಿದ್ದುಕೊಂಡಿರುವದರಿಂದಲೇ ಜನಗಳು ಇದು ನನಗೆ ಬೇಕಾದದ್ದು ಇದು ಬೇಡವಾದದ್ದು ಎನ್ನುತ್ತಾ ಬೇಕಾದದ್ದನ್ನು ಸಂಪಾದಿಸಿ ಕೊಳ್ಳುವದಕ್ಕೂ ಬೇಡವಾದದ್ದನ್ನು ತಪ್ಪಿಸಿಕೊಳ್ಳುವದಕ್ಕೂ ಪ್ರಯತ್ನಿಸುತ್ತಿರುವದು ಇದೇ ಸಂಸಾರವು ಆದರೆ ಪರಮಾತ್ಮನ ಸ್ವರೂಪವೇ ನಮ್ಮ ನಿಜವಾದ ಆತ್ಮನು ಆ ಆತ್ಮನಲ್ಲಿ ಈ ಮೂರು ಗುಣಗಳಿಂದ ಯಾವ ವಿಕಾರವು ಎಂದಿಗೂ ಆಗುವಂತೆಯೇ ಇಲ್ಲ ಈ ಗುಟ್ಟನ್ನು ತಿಳಿದುಕೊಂಡವರು ಈ ಮಾಯೆಗೆ ಸಿಕ್ಕಿಬಿದ್ದು ವ್ಯಥೆಪಡುವ ಕಾರಣವಿರುವದಿಲ್ಲ.
    ಈ ಜ್ಞಾನವು ಜನರಿಗೆ ಉಂಟಾಗುವದಾದರೂ ಹೇಗೆ? ಅದು ಉಂಟಾದ ಮೇಲಲ್ಲವೆ ಮಾಯೆಯನ್ನು ದಾಟುವ ಮಾತು? ಎಂದು ಯಾರಾದರೂ ಕೇಳಬಹುದು ಅದಕ್ಕೆ ಉತ್ತರವೇನೆಂದರೆ ನಿಜವಾಗಿ ಮಾಯೆ ಎಂಬುದು ಬೇರೆಯಾಗಿರುವದೇ ಇಲ್ಲ ಈ ಸಚರಾಚರಜಗತ್ತೆಲ್ಲವೂ ಆ ಪರಮಾತ್ಮನ ವಿಭೂತಿಯೇ ಯಾರಿಗೆ ತಮ್ಮತಮ್ಮಶರೀರೇಂದ್ರಿಯಸಂಘಾತದಲ್ಲಿ ನಾನೆಂಬ ಬುದ್ಧಿಯೂ ಅದಕ್ಕೆ ಸೇರಿದ ಪತ್ನೀಪುತ್ರಾದಿಗಳಲ್ಲಿ ನನ್ನದು ಎಂಬ ಬುದ್ಧಿಯೂ ಬಲವಾಗಿದ್ದುಕೊಂಡಿರುವವೋ, ಅವರಿಗೆ ಮಾತ್ರವೇ ಈ ತ್ರಿಗುಣಾತ್ಮಕವಾದ ಮಾಯೆ ತಾನೇ ಸ್ವತಂತ್ರವಾಗಿರುವಂತೆ ಕಾಣಿಸಿಕೊಳ್ಳುತ್ತಿರುತ್ತದೆ ಅವರಿಗೇ ಮಾಯಾಜಾಲಕ್ಕೆ ಸಿಕ್ಕಿಬಿದ್ದು ಸಂಕಟಪಡುವ ಸಂಸಾರದ ಬೇಗೆಯ ತಾಪವೂ ಕಾಣಿಸಿಕೊಳ್ಳುತ್ತಿರುವದು ಈ ಮಾಯೆಯನ್ನು ದಾಡುವದಕ್ಕೆ ಮತ್ತೆ ಯಾವ ಹೆಚ್ಚಿನ ಪ್ರಯತ್ನವನ್ನೂ ಮಾಡಬೇಕಾದದ್ದಿಲ್ಲ ಈವರೆಗೆ ಈ ಸ್ತೋತ್ರದಲ್ಲಿ ಹೇಳಿರುವ ವಿಷಯಗಳ ಮರ್ಮವನ್ನು ಗುರುಸೇವೆಯಿಂದ ತಿಳಿದುಕೊಂಡು ಪರಮೇಶ್ವರನ ಜ್ಞಾನವನ್ನು ಸಂಪಾದಿಸಿಕೊಂಡರೆ ಸಾಕು, ಸೂರ್ಯೋದಯವಾದ ಕೂಡಲೆ ಮಂಜಿನ ಕಾವಳವು ಕಣ್ಮರೆಯಾಗುವಂತೆ ಅದು ಮಾಯವಾಗಿಬಿಡುತ್ತದೆ ಪರಮಾತ್ಮನೊಬ್ಬನೇ ಪರಮಾರ್ಥವಾಗಿ ಎಂದೆಂದಿಗೂ ಇರುವವನು ಎಂಬ ನಿಜವಾದ ಜ್ಞಾನವು ಮನದಲ್ಲಿ ಮಿಂಚಿಬಿಡುತ್ತದೆ.
    ಈ ಜ್ಞಾನವು ಬರುವದಕ್ಕೆ ನಿತ್ಯಾನಿತ್ಯವಿವೇಕ ಇಹಪರಲೋಕಗಳಲ್ಲಿ ಸಿಕ್ಕಬಹುದಾದ ಫಲಗಳನ್ನು ಭೋಗಿಸುವ ಆಸೆಯನ್ನು ತೊರೆಯುವದು ಶಮದಮಾದಿಗಳನ್ನು ಅಳವಡಿಸಿಕೊಳ್ಳವದು ನನಗೆ ಈ ಬಂಧನವು ಹೇಗಾದರೂ ಹೋಗಲೇಬೇಕೆಂಬ ಹೆಚ್ಚಿನ ಹಂಬಲ - ಈ ನಾಲ್ಕು ಸಾಧನಸಂಪತ್ತುಗಳು ಮಾತ್ರ ಅತ್ಯವತ್ಯ ಈ ಸಾಧನೆಗಳಿಂದೊಡಗೂಡಿರುವ ಅಧಿಕಾರಿಯು ಸದ್ಗುರುವನ್ನು ಸೇರಿದರೆ ಆತನ ಉಪದೇಶದಿಂದ ಅವಶ್ಯವಾಗಿ ಜ್ಞಾನವು ಲಭಿಸುವದು ಸದ್ಗುರುವೆಂದರೆ ಪರಮೇಶ್ವರನಿಗಿಂತ ಬೇರೆ ಎಂದು ತಿಳಿಯಬಾರದು ಸಾಕ್ಷಾತ್ ದಕ್ಷಿಣಾಮೂರ್ತಿಯಾದ ಪರಶಿವನೇ ಆತನು ಎಂಬ ಹೆಚ್ಚಿನ ಭಕ್ತಿಯೂ ಅತ್ಯವಶ್ಯ ಹೀಗಾದರೆ ಆ ಪರಮೇಶ್ವರನ ದಯೆಯಿಂದಲೇ ಜ್ಞಾನವು ಲಬಿಸುತ್ತದೆ.
    ಇಂಥ ಉತ್ತಮವಾದ ಸಾಧನಸಂಪತ್ತು ಇಲ್ಲದವರು ಏನು ಮಾಡಬೇಕು? ಎಂದರೆ ಅದಕ್ಕೆ ಉತ್ತರವು ಈ ಶ್ಲೋಕದಲ್ಲಿದೆ ಈ ಇಡಿಯ ಜಗತ್ತೇ ಆ ಪರಮೇಶ್ವರನ ಬಹೀರೂಪವು ಎಂಬ ದೃಢವಾದ ಭಾವನೆಯಿಂದ ಆ ಭಗವಂತನನ್ನು ಸೇವಿಸಬೇಕು ಪೃಥಿವಿ, ಅಪ್ಪು, ತೇಜಸ್ಸು, ವಾಯು, ಆಕಾಶ - ಈ ಪಂಚಮಹಾಭೂತಗಳೂ ಸೂರ್ಯಚಂದ್ರರು ಈ ಒಟ್ಟಿಗೆ ಅಭಿಮಾನಿಯಾದ ವಿರಾಟ್ಟುರುಷ ಇವು ಎಂಟೂ ಆ ಪರಮಾತ್ಮನ ಮೂರ್ತಿಗಳೇ ಎಂದು ದೃಢವಿಶ್ವಾಸದಿಂದ ಚಿಂತನೆಮಾಡುವದಕ್ಕೆ ಮೊದಲುಮಾಡಬೇಕು ಈ ಭೂತಗಳ ಕಾರ್ಯವೂ ಸೂರ್ಯಚಂದ್ರರ ಅನುಗ್ರಹವೂ ನಮ್ಮ ನಮ್ಮ ಶರೀರದಲ್ಲಿಯೂ ಇರುತ್ತದೆ ಹೊರಗಿನ ಬ್ರಹ್ಮಾಂಡಕ್ಕೆ ಅಭಿಮಾನಿಯಾದ ವಿರಾಟ್ಟುರುಷನಂತೆಯೇ ನಮ್ಮ ಜೀವಾತ್ಮ ರೂಪವೂ ಈ ಶರೀರದಲ್ಲಿದ್ದುಕೊಂಡಿರುತ್ತದೆ ಆದ್ದರಿಂದ ಜಗತ್ತಿನಲ್ಲಿರುವದೆಲ್ಲ ಆ ಪರಮೇಶ್ವರನ ಅಷ್ಟಮೂರ್ತಿಗಳೇ ಎಂದು ಶ್ರದ್ಧಾಭಕ್ತಿಗಳಿಂದ ಉಪಾಸನೆ ಮಾಡುತ್ತಿರುವವರಿಗೆ ಮಾಯೆಯ ಕಾಟವಿರುವದಿಲ್ಲ ಈ ಜಗತ್ತಿನಲ್ಲಿರುವ ವಸ್ತುಗಳು ಕೆಲವು ನಮಗೆ ಬೇಕಾದವು ಮತ್ತೆ ಕೆಲವು ಬೇಡವಾದವುಗಳು ಎಂಬ ಭಾವನೆಯಿಂದಲೇ ನಮಗೆ ನಾನುನನ್ನದೆಂಬ ತಪ್ಪುತಿಳಿವಳಿಕೆಯುಂಟಾಗಿರುತ್ತದೆ ಈ ಜಗತ್ತೆಲ್ಲವೂ ಆ ಪರಮೇಶ್ವರನ ವಿಭೂತಿಯೇ ಇವೆಲ್ಲಕ್ಕೂ ಆತ್ಮನಾಗಿ ಆ ಪರಮಾತ್ಮನಿರುತ್ತಾನೆ ಆತನೇ ನಮ್ಮಗಳೆಲ್ಲರ ಆತ್ಮನು ಎಂಬ ಭಾವನೆಯು ಗಟ್ಟಿಗೊಳ್ಳುತ್ತಾ ಬಂದಂತೆಲ್ಲ ನಮಗೆ ಧೈರ್ಯವುಂಟಾಗುತ್ತದೆ. 'ಪರಮೇಶ್ವರನನ್ನು ಶರಣುಹೊಕ್ಕಿದ್ದೇನೆ ನನಗೆಲ್ಲಿಯ ಮಾಯೆಯ ಮೋಹ? ಮಾಯೆ ಎಂಬುದು ಆ ಪರಮೇಶ್ವರನ ಪ್ರಕೃತಿ ಆ ಪರಮೇಶ್ವರನೇ ಇದನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡಿರುವ ಮಹಾ ಮಾಯಾವಿ ಆದ್ದರಿಂದ ಆತನನ್ನೇ ಶರಣುಹೊಕ್ಕಿರುವ ನಮ್ಮಂಥವರಿಗೆ ಈ ಸಂಸಾರ ಮಾಯೆಯ ಉಪಟಳವು ಎಂದಿಗೂ ಇರಲಾರದು ಎಂದು ಧೃಢವಾಗಿ ನಂಬಬೇಕು.
    ಈ ಉಪಾಸನೆಯನ್ನು ಮಾಡುತ್ತಿರುವಾಗ ಯಾವದಾದರೊಂದು ದೃಶ್ಯದಲ್ಲಿ ಇದು ಚೇನತವಾದ ಅಥವಾ ಅಚೇತನವಾದ ಸ್ವತಂತ್ರಪದಾರ್ಥ ಎಂಬ ಭಾವವು ಯಾವಾಗಲಾದರೂ ಪಾಪಸಂಸ್ಕಾರದಿಂದ ಬರುವದಾದರೆ ಕೂಡಲೇ ಅದನ್ನು ಹಿಂತಳ್ಳಿ ಛೇ! ಪಂಚಭೂತಗಳ ವಿಕಾರವಲ್ಲದೆ ಈ ಜಗತ್ತಿನಲ್ಲಿ ಮತ್ತೇನಿದೆ? ಆ ಪಂಚಭೂತಗಳೆಲ್ಲ ಆ ಪರಮೇಶ್ವರನ ಮೂರ್ತಿಯಲ್ಲವೆ? ಆತನಿಗಿಂತ ಬೇರೆಯಾದ ಇರವು ಇವಕ್ಕೆ ಎಲ್ಲಿ ಬಂತು? ಆಕಾಶದಲ್ಲಿ ಹೊಳೆಯುತ್ತಿರುವ ಸೂರ್ಯ, ಚಂದ್ರ, ನಕ್ಷತ್ರಗಳು ಮುಂತಾದ ಜ್ಯೋತಿಗಳೂ ಸ್ವಯಂ ಜ್ಯೋತಿಯಾದ ಆ ಪರಮೇಶ್ವರನ ಮೂರ್ತಿಗಳೇ ನನ್ನ ಶರೀರವಾದರೂ ಏನು? ಅದೂ ಪಂಚಭೂತಗಳ ವಿಕಾರವಲ್ಲವೆ? ಇದರೊಳಗೆ ಕೆಲಸಮಾಡುವಂತೆ ತೋರುವ ಪ್ರಾಣವು ವಾಯುವಿಶೇಷವಲ್ಲವೆ? ಮನೋಬುದ್ಧ್ಯಹಂಕಾರಗಳಾದರೂ ಆತನ ಅನುಗ್ರಹವಲ್ಲವೆ? ಇನ್ನು ನನ್ನ ಆತ್ಮನೆಂಬುದಾದರೂ ಏನು? ಸರ್ವಪ್ರಾಣಿಗಳೊಳಗೂ ಇರುವ ಆತ್ಮನೆಂಬುದೂ ಆತನ ವಿಭೂತಿಯೇ ಅಲ್ಲದೆ ಮತ್ತೇನು? ಎಂದು ಮತ್ತೆಮತ್ತೆ ಮನಸ್ಸಿನಲ್ಲಿ ಹೊರಳಾಡಿಸಬೇಕು ಆಗ ಎಲ್ಲಿಲ್ಲಿಯೂ ವ್ಯಾಪಿಸಿಕೊಂಡಿರುವ ಆ ಅಷ್ಟಮೂರ್ತಿಗಿಂತ ಬೇರೆಯಾಗಿ ಚರಾಚರಜಗತ್ತೆಂಬುದು ಇಲ್ಲವೇ ಇಲ್ಲ ಎಂಬ ದೃಢಭಾವನೆಯು ಬೇರೆಯಾಗಿ ಚರಾಚರಜಗತ್ತೆಂಬುದು ಇಲ್ಲವೇ ಇಲ್ಲ ಎಂಬ ದೃಢಭಾವನೆಯು ಬೇರೂರಿಕೊಂಡುಬಿಡುತ್ತದೆ ಈ ಭಾವನೆಯೇ ಆ ಪರಮಶಿವನ ತತ್ತ್ವದ ಸಾಕ್ಷಾತ್ಕಾರಕ್ಕೆ ದ್ವಾರವಾಗಿ ಪರಿಣಮಿಸಿ ಬಿಡುತ್ತದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ