ರುದ್ರಭಾಷ್ಯಪ್ರಕಾಶ - 4ನೇ ಅನುವಾಕ (ಸಂಪೂರ್ಣ)

ನಮೋ ಗಣೇಭ್ಯೋ ಗಣಪತಿಭ್ಯಃ

ನಾಲ್ಕನೆಯ ಅನುವಾಕವನ್ನು ಈಗ ವಿಚಾರಮಾಡೋಣ :

ನಮ ಆವ್ಯಾಧಿನೀಭ್ಯೋ ವಿವಿಧ್ಯಂತೀಭ್ಯಶ್ಚ ವೋ ನಮೋ ನಮ
ಉಗಣಾಭ್ಯಸ್ತೃಗ್ಂಹತೀಭ್ಯಶ್ಚ ವೋ ನಮೋ ನಮೋ ಗೃತ್ಸೇಭ್ಯೋ
ಗೃತ್ಸಪತಿಭ್ಯಶ್ಚ ವೋ ನಮೋ ನಮೋ ವ್ರಾತೇಭ್ಯೋ ವ್ರಾತಪತಿಭ್ಯಶ್ಚ ವೋ
ನಮೋ ನಮೋ ಗಣೇಭ್ಯೋ ಗಣಪತಿಭ್ಯಶ್ಚ ವೋ ನಮಃ ||

    'ಅವ್ಯಾಧಿನಿಯರೂ ವಿವಿಧ್ಯಂತಿಯರೂ ಆದ, ಹಿಂಸೆಮಾಡಲು ಸಮರ್ಥರಾದ ಉತ್ಕೃಷ್ಟಗಣದೇವತೆಗಳಿಗೂ ಗೃತ್ಸರಿಗೂ ಗೃತ್ಸಪತಿಗಳಿಗೂ ವ್ರಾತರಿಗೂ ವ್ರಾತಪತಿಗಳಿಗೂ ಗಣಗಳಿಗೂ ಗಣಪತಿಗಳಿಗೂ ನಮಸ್ಕಾರವು!'

    ಮೂರನೆಯ ಅನುವಾಕದಂತೆಯೇ ಇಲ್ಲಿಯೂ ಸರ್ವಾತ್ಮಕನಾದ ಭಗವಂತನನ್ನು ನಮಸ್ಕರಿಸಲಾಗಿದೆ ಮೊದಲನೆಯ ನಾಲ್ಕು ವಿಶೇಷಗಳು ಸ್ತ್ರೀವಾಚಕಗಳಾಗಿವೆ ಸ್ತ್ರೀರೂಪದಲ್ಲಿಯೂ ಇರುವವನು ಪರಮೇಶ್ವರನೇ ಎಂದಭಿಪ್ರಾಯ ಅವ್ಯಾಧಿನಿಯರು ಎಂದರೆ ಯುದ್ಧದಲ್ಲಿ ಸುತ್ತಲೂ ಎಲ್ಲಾ ದಿಕ್ಕುಗಳಿಗೂ ಬಾಣಗಳನ್ನು ಎಸೆಯಲು ಸಮರ್ಥರಾದವರು ಎಂದರ್ಥ ಮತ್ತು ವಿವಿಧ್ಯಂತಿಯರು ಎಂದರೆ ನಾನಾವಿಧವಾಗಿ ಆಯುಧಗಳನ್ನು ಉಪಯೋಗಿಸಿ ಶತ್ರುಗಳನ್ನು ಹೊಡೆಯುವಂಥವರು ಎಂದರ್ಥ ಹೀಗೆ ಜಗತ್ತಿನಲ್ಲಿ ಶಕ್ತಿರೂಪಿಣಿಯರಾಗಿ ಎಷ್ಟುಸಂಖ್ಯೆಯ ದೇವಿಯರು ರಾಕ್ಷಸರನ್ನು ನಿಗ್ರಹ ಮಾಡುತ್ತಾ ಭಕ್ತರನ್ನು ಅನುಗ್ರಹಿಸುತ್ತಾ ಪರಮೇಶ್ವರನಿಗೆ ಅಧೀನರಾಗಿ ಎಲ್ಲೆಲ್ಲಿಯೂ ಇದ್ದುಕೊಂಡಿರುವರೋ ಅವರಿಗೆಲ್ಲ ನಮಸ್ಕಾರ! ಎಂದು ತಿಳಿಸಿದೆ ಹಾಗೆಯೇ ತೃಹಂತಿಯಾದ ಉಗಣಗಳಿಗೂ ನಮಸ್ಕಾರ. ಉ- ಎಂದರೆ ಉತ್ಕೃಷ್ಟರಾದವರು ಮತ್ತು ತೃಂಹಣವೆಂದರೆ ಹಿಂಸೆ ಅಸುರರನ್ನೆಲ್ಲ ಹಿಂಸಿಸಲು ಸಮರ್ಥರಾದ ದುರ್ಗಾದಿಗಣದೇವತೆಗಳು ಹಾಗೂ ಸಪ್ತಮಾತೃಕೆಯರು ಎಂದರ್ಥ, ದುರ್ಗೆ, ಭೈರವಿ, ಚಾಮುಂಡಿ, ಕಾಳಿ, ಚಂಡಿ, ಚೌಡಿ ಎಂದು ನಾವು ಹೆಸರಿಸಿರುವ ಈ ದೇವಿಯರು ಲೋಕರಕ್ಷಣೆಯ ಭಾರವನ್ನು ಹೊತ್ತಿರುವರು ಇವರುಗಳು ಶತ್ರುಗಳನ್ನು ಹಿಂಸಿಸಿ ಜಯಿಸುವದರಲ್ಲಿ ಗಟ್ಟಿಗರು ಇವರೆಲ್ಲರೂ ರುದ್ರನ ಶಕ್ತಿರೂಪರು ಇವರಿಗೆಲ್ಲ ನಮಸ್ಕಾರವು.

    ಗೃತ್ಸರೆಂದರೆ ಗರ್ಧನಶೀಲರು ಅತಿಯಾದ ಆಶೆಯುಳ್ಳವರು. ಇಂಥವರ ಒಡೆಯರು ಗೃತ್ಸಪತಿಗಳು; ವಿಷಯಲಂಪಟರಾಗಿ ಅವುಗಳಲ್ಲಿಯೇ ಮುಳುಗಿರುವ ಪ್ರಾಕೃತರು ಎಂದರ್ಥ ಆದರೆ ಇವರುಗಳೂ ಪರಮಾರ್ಥವಾಗಿ ಪರಮೇಶ್ವರನ ಸ್ವರೂಪರೇ ಆಗಿರುತ್ತಾರೆ ಸರ್ವಾತ್ಮಕನಾದ್ದರಿಂದಲೇ ಪರಮೇಶ್ವರನು ಇವರುಗಳಲ್ಲಿಯೂ ಇದ್ದೇ ಇರುತ್ತಾನಷ್ಟೆ! ಆದ್ದರಿಂದ ಇಂಥ ವಿಷಯಲಂಪಟರಾದ ಜನರನ್ನು ನಾವು ಕಂಡಾಗಲೂ ಅವರಲ್ಲಿಯೂ ಪರಮೇಶ್ವರನನ್ನೇ ಭಾವಿಸಿಕೊಳ್ಳಬೇಕು ಈಗಿನ ಕಾಲಕ್ಕೆ ಈ ಅನುಸಂಧಾನವು ಅಗತ್ಯ ಏಕೆಂದರೆ ಭೋಗಾಸಕ್ತರಾಗಿ ದೇವರ ವಿಷಯಕ್ಕೆ ಉದಾಸೀನರಾಗಿರುವವರನ್ನು ಕಂಡಾಗ ಆಸ್ತಿಕರಿಗೆ ಕೆಲವುವೇಳೆ ಕೋಪವು ಬರಬಹುದು ಅದರ ಬದಲು ಅಂಥವರನ್ನೂ ಈಶ್ವರರೂಪದಿಂದಲೇ ಕಂಡುಕೊಳ್ಳುವದು ಹೆಚ್ಚಿನ ಸಾಧನವಾದೀತು.
    ವ್ರಾತವೆಂದರೆ ಗುಂಪು. ವ್ರಾತಗಳ ಒಡೆಯರೇ ವ್ರಾತಪತಿಗಳು. ವಿನಾಯಕನನ್ನು ವ್ರಾತಪತಿಯೆಂದು ಉಪನಿಷತ್ತಿನಲ್ಲಿ ಸ್ತುತಿಸಿದೆ. ದೇವತೆಗಳಲ್ಲಿ ಅನೇಕ ಗುಂಪುಗಳಿವೆ. ಸಪ್ತಮರುತ್ತುಗಳು, ಅಷ್ಟವಸುಗಳು, ನವಗ್ರಹಗಳು ಏಕಾದಶರುದ್ರರು, ದ್ವಾದಶಾದಿತ್ಯರು, ಅಶ್ವಿನೀದೇವತೆಗಳು, ಗೌರ್ಯಾದಿ ಷೋಡಶ ಮತ್ತು ಬ್ರಾಹ್ಮ್ಯಾದಿಸಪ್ತಮಾತೃಕೆಯರು - ಹೀಗೆ ಅನೇಕ ಗುಂಪುಗಳು ಪ್ರಸಿದ್ಧವಾಗಿರುತ್ತವೆ. ಇವರುಗಳು ಯಾವಾಗಲೂ ಒಟ್ಟಾಗಿಯೇ ಇರುತ್ತಾರೆ; ಇಂಥ ಗುಂಪುಗಳು ಪರಮೇಶ್ವರನ ಸ್ವರೂಪವೇ ಆಗಿರುತ್ತವೆ - ಎಂದು ಅಭಿಪ್ರಾಯ ಪ್ರತಿಯೊಂದು ಗುಂಪಿಗೂ ಒಬ್ಬ ಒಡೆಯನಿರುತ್ತಾನೆ. ಈ ದೇವತೆಗಳು ಪುರುಷರಾಗಿರಬಹುದು ಅಥವಾ ಸ್ತ್ರೀರೂಪರಾಗಿಯೂ ಇರಬಹದು. ಇವರುಗಳ ಶಕ್ತಿಯೂ ಬಲವೂ ಸಾಮರ್ಥ್ಯವೂ ಐಶ್ವರ್ಯವೂ ಮಿಗಿಲಾದುದು ಅಲ್ಲದೆ ಆಯಾ ದೇವತೆಗಳಿಗೇ ಅಸಾಧಾರಣವಾದ ರೂಪ, ಆಕಾರ, ವೇಷ, ಭೂಷಣಗಳು, ಆಯುಧಗಳು - ಮುಂತಾಗಿ ಎಲ್ಲ ಸೌಕರ್ಯಗಳೂ ಇರುತ್ತವೆ. ಈ ಎಲ್ಲಾ ದೇವತೆಗಳನ್ನೂ ಅರಿತು ಪರಿಚಯಾಡಿಕೊಳ್ಳುವದೂ ಉಪಾಸನೆ ಮಾಡುವದೂ ಎಷ್ಟು ಕಷ್ಟವೆಂಬುದನ್ನು ಹೇಳಬೇಕಾದದ್ದೇ ಇಲ್ಲ ಪ್ರತಿಯೊಂದು ದೇವತೆಗೂ ಶಾಸ್ತ್ರೋಕ್ತವಾದ ಮಂತ್ರ, ಧ್ಯಾನ, ಪೂಜಾದಿಗಳ ವಿವರಣೆಯಿರುತ್ತದೆ ಇದನ್ನೆಲ್ಲ ಅಲೋಚಿಸಿದರೆ ಮಾನವನ ಆಯುಷ್ಯವು ಏತಕ್ಕೂ ಸಾಲದು ಆದರೆ ಪರಮೇಶ್ವರನ ಸ್ವರೂಪದಿಂದ ಇವರೆಲ್ಲರನ್ನೂ ಅರಿತಾಗ ಈ ದೇವತೆಗಳ ಅನುಗ್ರಹವು ತಾನಾಗಿಯೇ ಆಗುತ್ತದೆ ಏಕೆಂದರೆ ದೇವತೆಗಳಿಗೂ ದೇವನಾದ ಮಹಾದೇವನಿಗಿಂತ ಇವರುಗಳು ಬೇರೆಯಲ್ಲ ಅವನ ವಿಭೂತಿರೂಪರೇ ಆಗಿದ್ದಾರೆ ಆದ್ದರಿಂದ 'ವ್ರಾತೇಭ್ಯಃ ವ್ರಾತಪತಿಭ್ಯಃ' ಎಂದು ಅವರಿಗೂ ಇಲ್ಲಿ ನಮಸ್ಕಾರವನ್ನು ಅರ್ಪಿಸಲಾಗಿದೆ.
    ಮನುಷ್ಯರಲ್ಲಿಯೂ ಗುಂಪುಗಳಿಗೆ ವಿಶೇಷಗೌರವವುಂಟು ಇವುಗಳನ್ನು ಒಂದೊಂದು ಜನಾಂಗವೆಂದು ಈಗ ರೂಢಿಯಲ್ಲಿ ಕರೆಯುತ್ತಾರೆ ಪ್ರತಿಯೊಂದು ಜನಾಂಗದವರಿಗೂ ಅವರವರಿಗೇ ಮಿಸಲಾದ ಭಾಷೆ, ವೇಷ, ಸಂಸ್ಕೃತಿಗಳನ್ನು ನಾವು ಈಗಲೂ ಕಾಣಬಹುದು. ಇಂಥವುಗಳನ್ನು ಕಾಪಾಡಲು ಸರ್ಕಾರದವರು ಈಗ ಉದ್ಯುಕ್ತರಾಗಿದ್ದಾರೆ ನಮ್ಮ ಭಾರತದೇಶದಲ್ಲಿ ದಕ್ಷಿಣದಿಂದ ಉತ್ತರದವರೆಗೆ ಪೂರ್ವದಿಂದ ಪಶ್ಚಿಮದವರೆಗೆ ಇಂಥ ಅನೇಕ ಜನಾಂಗಗಳಿವೆ ಒಬ್ಬೊಬ್ಬರ ಸಂಸ್ಕೃತಿಯೂ ಭಿನ್ನವಾಗಿದೆ ಆದರೂ 'ನಾವು ಭಾರತೀಯರು' ಎಂಬ ಭಾವನೆಯೂ ಭಗವಂತನಿಗೆ ಸಲ್ಲಿಸುವ ಗೌರವವೇ ಎಂಬುದು ವೇದದ ಅಭಿಪ್ರಾಯವಾಗಿದೆ ಆದ್ದರಿಂದ ಈ ಸ್ತುತಿಯನ್ನು ಆಧಾರವಾಗಿಟ್ಟುಕೊಂಡು ಭಿನ್ನತೆಯಲ್ಲಿ ಏಕತ್ವವನ್ನು ಕಾಣುವ ದಿವ್ಯದೃಷ್ಟಿಯನ್ನು ಸಂಪಾದಿಸಲು ಯತ್ನಿಸಬೇಕು ಎಲ್ಲ ಜನಾಂಗಗಳ ಹಾಗೂ ಅವರ ಜೀವನಾದಿಗಳ ಪರಿಚಯವನ್ನು ಸ್ವಲ್ಪವಾದರೂ ಮಾಡಿಕೊಳ್ಳಬೇಕು ಇಷ್ಟೇ ಅಲ್ಲದೆ ಭಾರತದ ಹೊರಗಿರುವ ವಿದೇಶಗಳಲ್ಲಿಯೂ ತುಂಬಿರುವ ಜನಾಂಗಗಳನ್ನು ಭಗವಂತನ ವ್ರಾತಗಳೆಂದೂ ಅವುಗಳ ಒಡೆಯರನ್ನು ವ್ರಾತಪತಿಗಳೆಂದೂ ಭಾವಿಸಿದಲ್ಲಿ ಒಂದು ದೊಡ್ಡ ಉಪಾಸನೆಯೇ ಆದೀತು.
    ಗಣೇಭ್ಯಃ ಗಣಪತಿಭ್ಯೋ ನಮಃ ಎಂಬುದನ್ನೀಗ ವಿಚಾರಮಾಡೋಣ. ವ್ರಾತಗಳಿಗೂ ಗಣಗಳಿಗೂ ವ್ಯತ್ಯಾಸವನ್ನು ತಿಳಿಸಲು ಭಾಷ್ಯಕಾರರು ಗಣಗಳೆಂದರೆ ಇಲ್ಲಿ ಪ್ರಮಥಗಣಗಳೆಂದು ತಿಳಿಸಿದ್ದಾರೆ ಇವರುಗಳು ಪರಮೇಶ್ವರನ ಪರಿವಾರಕ್ಕೇ ನೇರಾಗಿ ಸೇರಿದವರಾಗಿರುತ್ತಾರೆ ಸೃಷ್ಟಿಯ ಆರಂಭದಲ್ಲಿರುದ್ರನೂ ಸೃಷ್ಟಿಯನ್ನು ಕೈಗೊಂಡನಂತೆ ಆಗ ಅವನಿಂದ ಸೃಷ್ಟರಾದವರೆಲ್ಲ ರುದ್ರನಂತೆಯೇ ಮರಣವಿಲ್ಲದವರಾಗಿಬಿಟ್ಟರು ಹೀಗೆಯೇ ಮುಂದುವರಿದರೆ ಪ್ರಪಂಚದಲ್ಲಿ ಜಾಗವಿಲ್ಲದೆ ಹೋದಿತೆಂದು ಹೆದರಿ ಬ್ರಹ್ಮಣ ರುದ್ರನಿಗೆ ಸೃಷ್ಟಿ ಮಾಡಬೇಡವೆಂದು ಕೇಳಿಕೊಂಡನಂತೆ ಅವರೆಗೆ ಸೃಷ್ಟರಾದವರೆಲ್ಲ ಗಣಗಳಾಗಿ ಪರಮೇಶ್ವರನ ಪರಿವಾರದಲ್ಲೇ ಸೇರಿಬಿಟ್ಟರು ಇವರೇ ಪ್ರಮಥಗಣಗಳು ಎಂದು ಪುರಾಣದಲ್ಲಿದೆ ಗಣಪತಿಗಳೆಂದರೆ ನಂದಿಕೇಶ್ವರ, ವೀರಭದ್ರನೇ ಮೊದಲಾದವರು ಇವರೆಲ್ಲರೂ ಪರಮೇಶ್ವರನಂತೆಯೇ ನಿತ್ಯಪೂಜ್ಯರು ದೇವತಾರ್ಚನೆಯ ಕೊನೆಯಲ್ಲಿ ಆಸ್ತಿಕರು ಒಂದು ಶ್ಲೋಕವನ್ನು ಹೀಗೆ ಪಠಿಸುತ್ತಾರೆ: 'ಬಾಣರಾವಣಚಂಡೀ ಚ ನಂದೀ ಭೃಂಗೀ ರಿಟಾದಯಃ | ಸದಾಶಿವಪ್ರಸಾದೋಯಂ ಸರ್ವೇ ಗೃಹ್ಣಂತು ಶಾಂಭವಾಃ' ಹೀಗೆಂದು ಹೇಳಿ ನಿವೇದನಮಾಡಿದ ಪದಾರ್ಥದಲ್ಲಿ ಸ್ವಲ್ಪಭಾಗವನ್ನು ಗಣಗಳಿಗಾಗಿ ಬಲಿಹರಣವೆಂತ ಹಾಕುತ್ತಾರೆ. ಅಂತೂ ಬಾಣಾದಿರಾಕ್ಷಸರೂ ಸಹ ಪರಮೇಶ್ವರನ ಭಕ್ತರಾಗಿದ್ದುಸ್ಥಾನಮಾನಗಳನ್ನು ಪಡೆದು ಗಣದೇವತೆಗಳಾಗಿದ್ದಾರೆ; ಅವರೆಲ್ಲರೂ ನಮಗೆ ಪೂಜ್ಯರು ಎಂದು ಅಭಿಪ್ರಾಯ. ಇಂಥ ಗಣಗಳಿಗೂ ಗಣಪತಿಗಳಾದವರಿಗೂ ನಮಸ್ಕಾರವೆಂತ ಇಲ್ಲಿ ತಿಳಿಸಿದೆ.
    ನಮ್ಮ ದೇಶವನ್ನು 'ಗಣರಾಜ್ಯ'ವೆಂತ ಕರೆದಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸಾರ್ವಭೌಮರೆಂದೂ ಗೌರವಿಸಲಾಗಿದೆ. ಇಂಥ ಪ್ರಜೆಗಳಿಂದ ಚುನಾಯಿತರಾದ ಪ್ರತಿನಿಧಿಗಳ ಗುಂಪೇ ಗಣವು ಆ ಗಣವು ಆರಿಸಿದ ವ್ಯಕ್ತಿಯೇ ಗಣಪತಿ ಎಂದು ಭಾವಿಸಿದರೆ ತಪ್ಪಾಗಲಾರದು ಇದು ನಮ್ಮ ವೈದಿಕಸಾಹಿತ್ಯದಿಂದಲೇ ಸಿದ್ಧವಾಗುತ್ತದೆಯೆಂದರೆ ಒಂದು ದೊಡ್ಡ ಗೌರವವೇ ದೊರೆತಂತಾಯಿತು ಇದರಿಂದ ನಮ್ಮಲ್ಲಿ ದೇಶಭಕ್ತಿಯೂ ಈಶಭಕ್ತಿಯೂ ಒಂದಾಗಿ ಸೇರಿ ಇಹಪರಗಳೆರಡರಲ್ಲೂ ನಾವು ಶ್ರೇಯೋವಂತರಾಗಬಹುದಲ್ಲವೆ? ದೇಶವು ಎಷ್ಟಾದರೂ ಏಕದೇಶ ಈಶನೆಂಬುವನು ಸರ್ವವ್ಯಾಪಕನು ಆದ್ದರಿಂದ ನಾವು ರುದ್ರಾಧ್ಯಾಯವನ್ನು ನಿತ್ಯವೂ ಪಠಿಸುವದರಿಂದ ದೇಶಭಕ್ತಿ ಈಶಭಕ್ತಿಗಳನ್ನು ಸಮರಸವಾಗಿ ಮಾಡಿಕೊಂಡು ಪರಮಶ್ರೇಯಸ್ಸನ್ನೇ ಹೊಂದಬಹುದಾಗಿದೆ ಇಂಥ ವೇದವಾಣಿಗೆ ನಾವು ಯಾವಾಗಲೂ ವಿಧೇಯರಾಗಿ ನಡೆಯೋಣ.

ನಮೋ ಮಹದ್ಭ್ಯಃ'ಗಣಪತಿಭ್ಯಶ್ಚ ವೋ ನಮಃ' ಎಂಬುದರ ಮುಂದಿನ ಭಾಗವನ್ನು ಈಗ ವಿಚಾರಮಾಡಬೇಕಾಗಿದೆ.

ನಮೋ ವಿರೂಫೇಭ್ಯೋ ವಿಶ್ವರೂಪೇಭ್ಯಶ್ಚ ವೋ ನಮೋ ನಮೋ
ಮಹದ್ಭ್ಯಃ ಕ್ಷುಲ್ಲಕೇಭ್ಯಶ್ಚ ವೋ ನಮೋ ನಮೋ ರಥಿಭ್ಯೋರಥೇಭ್ಯಶ್ಚ
ವೋ ನಮೋ ನಮೋ ರಥೇಭ್ಯೋ ರಥಪತಿಭ್ಯಶ್ಚ ವೋ ನಮೋ ನಮಃ
ಸೇನಾಭ್ಯಃ ಸೇನಾನಿಭ್ಯಶ್ಚ ವೋ ನಮೋ ನಮಃ ಕ್ಷತ್ತೃಭ್ಯಃ ಸಂಗ್ರಹೀತೃಭ್ಯಶ್ಚ
ವೋ ನಮೋ ನಮಸ್ತಕ್ಷಭ್ಯೋ ರಥಕಾರೇಭ್ಯಶ್ಚ ವೋ ನಮಃ ||

    'ವಿರೂಪರಿಗೂ ವಿಶ್ವರೂಪರುಗಳಿಗೂ ಮಹಾಂತರಿಗೂ ಕ್ಷುಲ್ಲಕರಿಗೂ ರಥಿಗಳಿಗೂ ರಥವಿಲ್ಲದವರಿಗೂ ರಥಗಳಿಗೂ ರಥಪತಿಗಳಿಗೂ ಸೇನೆಗಳಿಗೂ ಸೇನಾನಿಗಳಿಗೂ ಕ್ಷತ್ತೃಗಳಿಗೂ ಸಂಗ್ರಹೀತೃಗಳಿಗೂ ತಕ್ಷರಿಗೂ ರಥಕಾರರಿಗೂ ನಮಸ್ಕಾರ!'

    ವಿರೂಪರೆಂದರೆ ವಿಕಾರವಾದ ರೂಪವುಳ್ಳವರು: ಲೋಕದಲ್ಲಿ ಒಬ್ಬೊಬ್ಬರು ಒಂದೊಂದು ವಿಧವಾಗಿರುತ್ತಾರೆ ಆದರೂ ಕುರೂಪಿಗಳನ್ನು ಕಂಡರೆ ಎಲ್ಲರಿಗೂ ಅಸಹ್ಯವಾಗುತ್ತದೆ ಕೆಲವರು ಹಾಸ್ಯವನ್ನೂ ಮಾಡುತ್ತಾರೆ ಆದರೆ ದೇವರು ಕೊಟ್ಟಿರುವ ರೂಪವನ್ನು ನಾವು ಎಷ್ಟೇ ತಿದ್ದಿಕೊಂಡರೂ ಅಲಂಕರಿಸಿಕೊಂಡರೂ ಬದಲಾಯಿಸಿಕೊಳ್ಳಲಾಗುವುದಿಲ್ಲ ಆದ್ದರಿಂದ ವಿರೂಪರಾದವರನ್ನು ಕಂಡರೆ ಅವರಲ್ಲಿ ನಾವು ಪರಮೇಶ್ವರನ ಬುದ್ಧಿಯನ್ನೇ ಮಾಡಬೇಕು ಅಲ್ಲದೆ ಪರಮೇಶ್ವರನ ಪ್ರಮಥಾದಿಗಣಗಳಲ್ಲಿಯಂತೂ ವಿರೂಪರಾದ ಅನೇಕವ್ಯಕ್ತಿಗಳೇ ಇದ್ದಾರೆ ಆದರೆ ಅವರೆಲ್ಲ ಶಿವನ ಪರಮ ಭಕ್ತರು ಅಂಥವರನ್ನೆಲ್ಲ ನಾವು ಗೌರವಿಸಿ ಪೂಜಿಸಲೇಬೇಕು. ಒಂದು ಬಾರಿ ರಾವಣನು ಕೈಲಾಸದಲ್ಲಿ ನಂದಿಯನ್ನು ನೋಡಿ 'ಕಪಿಯ ಹಾಗಿದೆ' ಎಂತ ಹಾಸ್ಯಮಾಡಿದನಂತೆ ಆಗ ನಂದಿಯು 'ನಿನ್ನ ಊರೆಲ್ಲ ಕಪಿಯಿಂದಲೇ ಹಾಳಾಗಲಿ!' ಎಂದು ಶಪಿಸಿದನಂತೆ. ಆದ್ದರಿಂದಲೇ ಹನುಮಂತನ ಬಂದು ಲಂಕೆಯನ್ನು ಹಾಳುಮಾಡಿದನು ಹೀಗೆ ಶಿವಭಕ್ತರನ್ನು ಅಣಕಿಸುವದು ಮಹಾಪರಾಧವಾದ್ದರಿಮದ ಅವರನ್ನು ಗೌರವಿಸುವದನ್ನೇ ಕಲಿಯಬೇಕು ವಿಶ್ವರೂಪರೆಂದರೆ ನಾನಾ ರೂಪವುಳ್ಳವರು ಭಗವಂತನ ಸೃಷ್ಟಿಯೇ ವಿಶ್ವರೂಪವಾಗಿದೆ ಚಿತ್ರವಿಚಿತ್ರವಾಗಿದೆ ದೇವರು ಮಾಡಿರುವಂಥ ಒಂದು ಸೃಷ್ಟಿಯನ್ನೂ ಮನುಷ್ಯನು ಮಾಡಲಾರನು ಹಕ್ಕಿಪಕ್ಷಿಗಳು ಕ್ರಿಮಿಕೀಟಗಳಿಂದ ಹಿಡಿದು ದೇವಮನುಷ್ಯಯಕ್ಷರಾಕ್ಷಸಕಿಂನರಕಿಂಪುರುಷಗಂಧರ್ವಾಪ್ಸರಾದಿಗಳ ಸೃಷ್ಟಿಗಳನ್ನು ನೋಡಿದರೆ ನಾನಾಪ್ರಕಾರವಾಗಿರುವದು ಕಂಡುಬರುತ್ತದೆ ಇಂಥ ವಿಶ್ವರೂಪಗಳೂ ಮಹಾದೇವನ ವಿಭೂತಿಗಳೇ ಆದ್ದರಿಂದ ಎಲ್ಲಾ ರೂಪಗಳಿಗೂ ನಮಸ್ಕಾರವೆಂದಿದೆ.
    ಮಹಾಂತರಿಗೆ ನಮಸ್ಕಾರ; ಮಹಾಂತರೆಂದರೆ ಅಣಿಮಾದಿ ಅಷ್ಟೇಶ್ವರ್ಯವುಳ್ಳವರು ಎಂದು ಭಾಷ್ಯದಲ್ಲಿದೆ. ಮಹಾತ್ಮರು ಎಂದು ಇವರನ್ನು ಕರೆಯಬಹುದು ಐಶ್ವರ್ಯವೆಂದರೆ ಸ್ವಾತಂತ್ರ್ಯವೆಂದರ್ಥ ದೇವತೆಗಳಿಗೆ ಅಡೆತಡೆಗಳಿಲ್ಲ ಆಕಾಶದಿಗಳಲ್ಲೂ ಸಂಚರಿಸಬಲ್ಲರು ಅವರ ಶರೀರಗಳೂ ಸೂಕ್ಷ್ಮ; ಅದೃಶ್ಯವಾಗಿರುವವು ದೂರದೃಷ್ಟಿ ಶ್ರವಣ ಮುಂತಾದ ಎಲ್ಲಾ ಸೌಕರ್ಯಗಳಿದ್ದುಕೊಂಡಿರುವವರಾದ್ದರಿಂದ ಅವರು ಮಹಾಂತರೆಂದು ಕರೆಯಲ್ಪಟ್ಟಿರುತ್ತಾರೆ ಅಂಥ ದೇವತೆಗಳಿಗೆ ಎಂದರೆ ಆಯಾ ರೂಪದಲ್ಲಿರುವ ಪರಮೇಶ್ವರನಿಗೆ ನಮಸ್ಕಾರ ಕ್ಷುಲ್ಲಕರೆಂದರೆ ಸಾಮಾನ್ಯರು ಸಿದ್ಧಿಗಳಿಲ್ಲದವರು ಮತ್ತು ಹುಲ್ಲುಕಡ್ಡಿಯವರೆಗೂ ಇದ್ದುಕೊಂಡಿರುವ ಜೀವರುಗಳು ಪ್ರಪಂದದಲ್ಲಿ ನಿಷ್ಪ್ರಯೋಜನವಾದ ವಸ್ತುವೇ ಇರುವದಿಲ್ಲ ಆದರೆ ಅವುಗಳನ್ನು ಉಪಯೋಗಿಸಿಕೊಳ್ಳುವಂಥ ಜಾಗಣು ಮಾತ್ರ ದುರ್ಲಭನೆಂದು ಹೇಳಬಹುದು ಆದ್ದರಿಂದ ಅಲ್ಪವಾದವುಳೆಂಬ ಭಾವನೆಯಿಂದ ತಿರಸ್ಕಾರಮಾಡದೆ ಎಲ್ಲವನ್ನೂ ಪರಮೇಶ್ವರನ ಸ್ವರೂಪವೆಂದೇ ಭಾವಿಸಿ ಗೌರವಿಸಬೇಕು ಎಂದರ್ಥ ಕೆಲವು ಸಂದರ್ಭಗಳಲ್ಲಿ ದೊಡ್ಡ ಪದಾರ್ಥಗಳಿಗಿಂತ ಚಿಕ್ಕಪದಾರ್ಥಗಳೇ ಹೆಚ್ಚು ಅವಶ್ಯವಾಗಿಬುಡುವವು ಉದಾಹರಣೆಗೆ : ಒಂದು ಮದುವೆಯಲ್ಲಿ ಬೀಗರನ್ನು ಸಂತೋಷಗೊಳಿಸಲು ಸಮಸ್ತಸಿದ್ಧತೆಗಳೂ ಆಗಿದ್ದು ಊಟೋಪಚಾರಗಳು ಪೂರೈಸಿದ ಅನಂತರ ಕೈತೊಳೆಯುವಾಗ ಜಿಡ್ಡನ್ನು ಕಳೆಯಲು ಸೀಗೆಪುಡಿಯ ಅವಶ್ಯಕತೆಯುಂಟಾಯಿತು ಯಜಮಾನನು ಅಕಸ್ಮಾತ್ ಅದನ್ನು ಮರೆತಿದ್ದನಾದ್ದರಿಂದ ಬೀಗರು ಕುಪಿತರಾದರೆಂತ ಒಂದು ಕಥೆ ಹೇಳುವದುಂಟು ಹೀಗೆ ಯಾವದೇ ಪದಾರ್ಥವಾದರೂ ತನ್ನತನ್ನ ಅಸಾಧಾರಣಗುಣವನ್ನು ಹೊಂದಿದೆಯಾದ್ದರಿಂದ ಈಶ್ವರನದೃಷ್ಟಿಯಲ್ಲಿ ಎಲ್ಲಕ್ಕೂ ಪೂರ್ಣಬೆಲೆಯುಂಟು ಆದ್ದರಿಂದ ಎಲ್ಲಾ ಮಹತ್ತಾದ ಹಾಗೂ ಕ್ಷುದ್ರವಾದ ವಸ್ತುಗಳನ್ನೂ ಗೌರವಿಸಬೇಕೆಂದು ಅಭಿಪ್ರಾಯ.
    ಇನ್ನು ರಥಿಗಳು, ಅರಥರು, ರಥಗಳು, ರಥಪತಿಗಳು - ಇವರುಗಳಿಗೆಲ್ಲ ನಮಸ್ಕಾರವೆಂದಿದೆ. ರಥಿಗಳೆಂದರೆ ರಥವುಳ್ಳವರು, ರಥದ ಮಾಲೀಕರು ಎನ್ನಬಹದುದು ಒಂದು ರಥವನ್ನು ಒಬ್ಬನು ಇಟ್ಟುಕೊಳ್ಳಬೇಕಾದರೆ ಹಾಗೂ ಅದರಲ್ಲಿ ಸಂಚರಿಸಬೇಕಾದರೆ ಆತನು ಗಣ್ಯವ್ಯಕ್ತಿಯಾಗಿರಬೇಕು ಈಗಿನ ಕಾಲಕ್ಕೆ ಕಾರಿನ ಮಾಲೀಕರುಗಳನ್ನು ರಥಿಗಳೆಂದು ಭಾವಿಸಬಹುದಾಗಿದೆ ಆದರೆ ಎಲ್ಲರಿಗೂ ಕಾರು ಇಟ್ಟುಕೊಳ್ಳುವ ಸೌಕರ್ಯವಿರುವದಿಲ್ಲ ಆದ್ದರಿಂದ ಅರಥರೂ ಇದ್ದೇ ಇರುತ್ತಾರೆ ಅಂಥವರಿಗೂ ನಮಸ್ಕಾರ ಬಡವಬಲ್ಲಿದರೆಂಬ ಭೇದವಿಲ್ಲದೆ ಪರಮೇಶ್ವರನು ಎಲ್ಲರಲ್ಲಿಯೂ ಇದ್ದೇ ಇರುತ್ತಾನೆ ರಥಗಳಿಗೂ ನಮಸ್ಕಾರ ಎಂದರೆ ಅವುಗಳಲ್ಲಿಯೂ ಭಗವಂತನೇ ಇರುತ್ತಾನೆಂದು ತಿಳಿಸಲು ಹೇಳಿರುತ್ತದೆ. "ರಥೋತ್ಸವ"ವೆಂಬುದು ಪ್ರಸಿದ್ಧವಷ್ಟೆ! ಆ ಸಮಯದಲ್ಲಿ ದೇವರಿಗೆ ವಿಶೇಷಪೂಜಾದಿಗಳು ನಡೆಯುವವು ರಥಕ್ಕೂ ಪೂಜೆ, ಬಲಿಪ್ರದಾನಾದಿಗಳನ್ನು ಮಾಡುವರು, ರಥದ ಅವಯವಗಳಲ್ಲೆಲ್ಲ ದೇವತೆಗಳು ಇರುತ್ತಾರೆ. 'ಬ್ರಹ್ಮರಥ'ವೆಂದು ಕರೆಯುವ ವಾಡಿಕೆಯೂ ಇದೆ. ಹೀಗೆ ರಥವು ದೇವತಾ ಸ್ವರೂಪವೇ ಆಗಿರುತ್ತದೆ ಕಠೋಪನಿಷತ್ತಿನಲ್ಲಿ ಶರೀರವನ್ನೇ ರಥವೆಂದೂ ಆತ್ಮನನ್ನು ರಥಿಯೆಂದೂ ಕರೆದಿದೆ ಈ ಅಭಿಪ್ರಾಯದಲ್ಲಿ ಎಲ್ಲ ಶರೀರಗಳೂ ರಥವಾಗಿಯೂ ಜೀವರುಗಳು ರಥಿಗಳಾಗಿಯೂ ಆಗಿರುತ್ತಾರಾದ್ದರಿಂದ ಸಮಸ್ತ ಚೇತನಾ ಚೇತನರೂಪಗಳಿಗೂ ನಮಸ್ಕಾರವೆಂದು ಹೇಳಿದಂತಾಯಿತು.
    ಇನ್ನು ರಥಪತಿಗಳಿಗೆ ನಮಸ್ಕಾರವೆಂದರೇನೆಂಬುದನ್ನು ವಿಚಾರಿಸೋಣ. ರಥಕ್ಕೆ ಒಡಯನೇ ರಥಪತಿ ಮತ್ತು ಅನೇಕರಥಗಳಿಗೆ ಒಡೆಯನಾದರೂ ರಥಪತಿಯೇ ಆಗಿರುವನು ಯುದ್ಧಕಾಲದಲ್ಲಿ ರಾಜರು ಹಿಂದೆ ಅನೇಕರಥಗಳನ್ನು ಬಳಸುತ್ತಿದ್ದರು ಅಂಥ ದೊಡ್ಡ ದೊಡ್ಡ ಚಕ್ರವರ್ತಿಗಳ ರೂಪದಲ್ಲಿರುವ ಪರಮೇಶ್ವರನಿಗೆ ನಮಸ್ಕಾರವೆಂದರ್ಥ.
    ಸೇನೆಗಳಿಗೂ ಸೇನಾನಿಗಳಿಗೂ ನಮಸ್ಕಾರ. ಸೇನೆಯೆಂಬುದು ಅನೇಕ ಜನರಿಂದ ಕೂಡಿದ ಗುಂಪು ಪಂಕ್ತಿ ವನ ಮುಂತಾದವುಗಳಂತೆ ಅದು ಅನೇಕ ಅವಯವಿವಸ್ತುಗಳಿಂದ ಕುಡಿರುತ್ತದೆ. ಸೈನ್ಯವು ದೇಶದ ರಕ್ಷಣೆಗೆ ಅತ್ಯಗತ್ಯ ಅದಕ್ಕಾಗಿ ಈಗ ಪ್ರತಿಯೊಂದು ದೇಶದವರೂ ತಮ್ಮ ಆದಾಯದ ಅರ್ಧಕ್ಕೂ ಹೆಚ್ಚಿನ ಭಾಗವನ್ನು ಖರ್ಚುಮಾಡುವರು ಹೀಗೆ ರಕ್ಷಣೆಯನ್ನು ಒದಗಿಸುವ ಸೇನೆಯೂ ಅದರ ನಾಯಕರಾದ ಸೇನಾನಿಗಳೂ ಪರಮೇಶ್ವರನ ಸ್ವರೂಪರೇ ಎಂದರ್ಥ ಮನುಷ್ಯರಲ್ಲಿ ಮಾತ್ರವಲ್ಲದೆ ದೇವಾಸುರರುಗಳಲ್ಲಿಯೂ ಸೈನ್ಯ ವ್ಯವಸ್ಥೆಯುಂಟು ದೇವಸೇನಾಪತಿ ಎಂದು ಷಣ್ಮುಖನಿಗೆ ಹೆಸರು "ಸೇನಾ ನೀನಾಮಹಂ ಸ್ಕಂದಃ" ಎಂದು ಭಗವಂತನು ಸ್ಕಂದನನ್ನು ತನ್ನ ವಿಭೂತಿಯಾಗಿ ತಿಳಿಸಿರುತ್ತಾನೆ. ಸೇನಾನಿಗಳ ಬೆಂಬಲವಿದ್ದರೆ ಮತ್ರ ರಾಜ್ಯವನ್ನಾಳಬಹುದು. ಅಂಥ ಸೇನಾನಿಗಳಿಗೆ ನಮಸ್ಕಾರ ಎಂದಿರುತ್ತಾರೆ.
    ಕ್ಷತ್ತೃಗಳಿಗೂ ಸಂಗ್ರಹೀತೃಗಳಿಗೂ ನಮಸ್ಕಾರ! ರಥಗಳನ್ನು ನಡೆಯಿಸುವವರು ಕ್ಷತ್ತೃಗಳು ಎಂಥ ಗಟ್ಟಿಗನಾದ ರಥಿಕನಾದರೂ ಸರಿಯಾದ ಸಾರಥಿ ಇಲ್ಲದಿದ್ದರೆ ಯುದ್ಧಮಾಡಲಾರನು ಭಗವಂತನೇ ಪಾರ್ಥಸಾರಥಿಯಾಗಿ ನಿಂತು ಅರ್ಜುನನ ರಥವನ್ನು ನಡೆಯಿಸಿದ್ದು ಪ್ರಸಿದ್ಧವೇ ಆಗಿದೆಯಷ್ಟೆ! ನಮ್ಮ ಜೀವನವೆಂಬ ರಥವನ್ನೂ ಭಗವಂತನೇ ಸಾರಥಿಯಾಗಿ ನಿಂತು ನಡೆಯಿಸಿದಲ್ಲಿ ಮಾತ್ರ ಅದು ಮಂಗಳಕರವಾದ ಗತಿಯನ್ನು ಪಡೆದೀತು ಆದ್ದರಿಂದ ಕ್ಷತ್ತೃರೂಪನಾಗಿ ಅನುಗ್ರಹಿಸೆಂದು ಅವನನ್ನು ನಾವು ಬೇಡಿಕೊಳ್ಳಬೇಕಾಗಿದೆ ಇನ್ನು ಸಂಗ್ರಹೀತೃಗಳೆಂದರೆ ರಥಗಳನ್ನು ನಿಯಮನಮಾಡುವವರು; ಎಂದರೆ ಹತ್ತಾರುರಥಗಳನ್ನು ಹೊಂದಿದ್ದು ಅವುಗಳನ್ನು ಸರಿಯಾದ ದಿಕ್ಕಿಗೆ ನಡೆಯಿಸುವಂತೆ ಸೂಚನೆಕೊಡುವವರು. ಕಂಟ್ರೋಲರ್ಸ ಎಂದು ಭಾವಿಸಬಹುದು ಅವರುಗಳೂ ಪರಮೇಶ್ವರನ ಸ್ವರೂಪರೇ ಆಗಿದ್ದಾರೆ ತಕ್ಷರೆಂದರೆ ಬಡಗಿಗಳು ಮರಗೆಲಸಮಾಡುವವರು ದೇವತೆಗಳಲ್ಲಿ ವಿಶ್ವಕರ್ಮನೆಂಬುವನು ಇಂಥ ತಕ್ಷನೆಂದು ಪ್ರಸಿದ್ಧಿಯಿದೆ ರಥಕಾರರೆಂದರೆ ರಥಗಳನ್ನು ತಯಾರು ಮಾಡುವವರು ಅವರು ತಮ್ಮ ಬುದ್ಧಿಕೌಶಲದಿಂದ ತಯಾರಿಸಿದ ರಥಗಳೇ ಜನರಿಗೆ ಪ್ರಯೋಜನಕಾರಿಗಳಾಗಿರುತ್ತವೆ. ಈಗಿನ ಕಾಲಕ್ಕೆ ಕಾರು, ಬಸ್ಸು, ಲಾರಿ ಮುಂತಾದ ವಾಗಹನಗಳನ್ನು ತಯಾರಿಸುವ ಕಂಪನಿಗಳವರೇ ರಥಕಾರರು ಅವರಿಗೆ ಇರುವ ವಾಹನರಚನೆಯ ಸಾಮರ್ಥ್ಯವು ಭಗವಂತನ ಅನುಗ್ರಹವೇ ಸರಿ ಆದ್ದರಿಂದ ರಥಕಾರರ ರೂಪದಲ್ಲಿರುವ ಆ ಪರಮೇಶ್ವರನಿಗೆ ವಂದನೆಗಳು ಎಂದರ್ಥ ಹೀಗೆ ನಾನಾರೂಪದಿಂದ ತೋರಿಕೊಳ್ಳುತ್ತಿರುವ ಎಲ್ಲಾ ರುದ್ರಮೂರ್ತಿಗಳಿಗೂ ನಮಸ್ಕಾರ! ಎಂಬುದು ತಾತ್ಪರ್ಯಾರ್ಥವಾಗಿದೆ.

ಶ್ವಭ್ಯಃ ಶ್ವಪತಿಭ್ಯಶ್ಚ ವೋ ನಮಃ ರುದ್ರಾಧ್ಯಾಯದ ನಾಲ್ಕನೆಯ ಅನುವಾಕದ ಕೊನೆಯ ಭಾಗವನ್ನು ಈಗ ವಿಚಾರಮಾಡಬೇಕಾಗಿದೆ :

ನಮಃ ಕುಲಾಲೇಭ್ಯಃ ವೋ ನಮೋ ನಮಃ
ಪುಂಜಿಷ್ವೇಭ್ಯೋ ನಿಷಾದೇಭ್ಯಶ್ಚ ವೋ ನಮೋ ನಮ ಇಷುಕೃದ್ಭ್ಯೋ
ಧನ್ವಕೃದ್ಭ್ಯಶ್ಚ ವೋ ನಮೋ ನಮೋ ಮೃಗಯುಭ್ಯಃ ಶ್ವನಿಭ್ಯಶ್ಚ ವೋ
ನಮೋ ನಮಃ ಶ್ವಭ್ಯಃ ಶ್ವಪತಿಭ್ಯಶ್ಚ ವೋ ನಮಃ ||

    'ಕುಂಬಾರರಿಗೂ ಕಮ್ಮಾರರಿಗೂ ಹಕ್ಕಿಗಳ ಗುಂಪನ್ನು ಹೊಡೆಯುವವರಿಗೂ, ನಾಯಿಯನ್ನು ಬೇಯಿಸಿ ತಿನ್ನುವವರಿಗೂ ಬಾಣಗಳನ್ನು ತಯಾರಿಸುವವರಿಗೂ ಬಿಲ್ಲುಗಳನ್ನು ತಯಾರಿಸುವವರಿಗೂ ಬೇಟೆಗಾರರಿಗೂ ನಾಯಿಗಳನ್ನು ಹಿಡಿದುಕೊಂಡು ಸಂಚರಿಸುವವರಿಗೂ ನಾಯಿಗಳಿಗೂ ನಾಯಿಗಳ ಯಜಮಾನರಿಗೂ ನಮಸ್ಕಾರ!'

    ಈ ಮಂತ್ರಭಾಗವನ್ನು ತಟ್ಟನೆ  ನೋಡಿದಾಗ ಪರಮೇಶ್ವರನ ಸ್ತುತಿಯು ಇದು ಹೇಗಾದೀತು? ಎನಿಸುತ್ತದೆ. ಏಕೆಂದರೆ ನಾಗರಿಕರು ತೀರ ನಿಕೃಷ್ಟವೆಂತ ವ್ಯವಹಾರದಲ್ಲಿ ಭಾವಿಸಿರುವ ಮನುಷ್ಯರನ್ನೂ ಪ್ರಾಣಿಗಳನ್ನೂ ಪರಮೇಶ್ವರನ ಸ್ವರೂಪರೆಂದೇ ಇಲ್ಲಿ ಹೇಳಿದೆ, ಆದ್ದರಿಂದ ಯಾರಿಗಾದರೂ ಇದು ಭಗವಂತನ ಸ್ತುತಿಯು ಹೌದೆ? ಎಂದು ಸಂಶಯವು ಬರುತ್ತದೆ, ಆದರೆ ಅನಾದಿಯಾಗಿರುವ ಈ ವೇದಭಾಗವನ್ನು ನಾವು ಬೇಡವೆಂತ ಕಿತ್ತು ಹಾಕುವದಾಗಲಿ ತಿದ್ದುವದಾಗಲಿ ಸಾಧ್ಯವಿಲ್ಲವಷ್ಟೆ! ಹಿಂದೆ ಒಮ್ಮೆ ರಾಷ್ಟ್ರಾಶೀರ್ವಾದವನ್ನು ದೇವಾಲಯಗಳಲ್ಲಿ ಪಠಿಸುವಂತೆ ಜಾರಿಗೆ ಕೊಟ್ಟ ಕಾಲದಲ್ಲಿ "ಗೋಬ್ರಾಹ್ಮಣೇಭ್ಯಃ" ಎಂಬುದನ್ನು ಯಾರೋ "ಗೋಸಜ್ಜನೇಭ್ಯಃ" ಎಂದು ಬದಲಾಯಿಸಿದರು, ಆದರೆ ಹಾಗೆ ಬದಲಾಯಿಸುವ ಅಗತ್ಯವಿರಲಿಲ್ಲ ಒಂದು ವೇಳೆ ಅದು ಶ್ಲೋಕವಾದ್ದರಿಂದ ಹಾಗೆ ಬದಲಾಯಿಸಿದರೂ ತಪ್ಪಾಗಲಾರದು ಇಲ್ಲಿ ಮಾತ್ರ ಬದಲಾವಣೆಯು ಎಂದಿಗೂ ಸಾಧ್ಯವೇ ಇಲ್ಲ, ಆದರೂ ಈ ಮಂತ್ರವನ್ನೂ ಪವಿತ್ರವೆಂದೇ ಭಾವಿಸಿ ಬ್ರಾಹ್ಮಣರು ಅಧ್ಯಯನಮಾಡುತ್ತಾರೆ; ದೇವರಿಗೆ ಅಭಿಷೇಕಮಾಡುತ್ತಾರೆ. ಹೋಮಗಳಲ್ಲಿ ವಿನಿಯೋಗಿಸುತ್ತಾರೆ ಇದೆಲ್ಲ ಹೇಗೆ ಸಮಂಜಸವಾಯಿತು? ಎಂದು ಆಕ್ಷೇಪಿಸಬಹುದಾಗಿದೆ.
    ಇದಕ್ಕೆ ಉತ್ತರವೇನೆಂದರೆ: ವೇದಮಾತೆಗೆ ಮೇಲುಕೀಳುಗಳೆಂಬ ಉಪಾಧಿಬೇದದ ಬಗ್ಗೆ ತಾತ್ಪರ್ಯವೇ ಇಲ್ಲ. ಸರ್ವೇಶ್ವರನೂ ಸರ್ವಾಮತರನೂ ಆದ ಭಗವಂತನನ್ನು ಯಾವಯಾವ ರೀತಿಯಿಂದ ಸ್ತುತಿಸಿದರೂ ಆ ಸ್ತುತಿಯೆಲ್ಲವೂ ಸರ್ವವ್ಯವಹಾರಾತೀತನಾದ ಆ ಪರಮೇಶ್ವರನನ್ನು ಮುಟ್ಟುವದೇ ಇಲ್ಲ ಏಕೆಂದರೆ ಅವಾಙ್ಮನಸಗೋಚರನಾದ ಆ ಭಗವಂತನು ಎಲ್ಲಾ ವೇದಗಳನ್ನೂ ಮಿರಿರುತ್ತಾನೆ ಆದ್ದರಿಂದ ಉಪಾದಿವಿಶಿಷ್ಟನಾಗಿ ತೋರಿಕೊಳ್ಳುವಾಗ ಆತನು ಹೇಗೇ ತೋರಿಕೊಳ್ಳಲಿ, ಅವನನ್ನು ಪರಬ್ರಹ್ಮವೆಂದೇ ಬಲ್ಲವರು ಗುರುತಿಸುತ್ತಾರೆ. ಅಜ್ಞಾನಿಗಳು ಮಾತ್ರ ಆಯಾ ಉಪಾಧಿಗಳಲ್ಲಿಯೇ ಮನಸ್ಸಿಟ್ಟವರಾಗಿ ಪರಮೇಶ್ವರನನ್ನು ಮರೆತೇಬಿಡುತ್ತಾರೆ. ಹೀಗೆ ಮೋಸಹೋಗುವವರನ್ನು ತಿದ್ದಿ ಎಲ್ಲಾ ಉಪಾಧಿಗಳಲ್ಲಿಯೂ ಒಬ್ಬ ಪರಮಾತ್ಮನೇ ಸಾಕ್ಷಿಯಾಗಿ ಇದ್ದುಕೊಂಡಿರುತ್ತಾನೆ - ಎಂಬುದನ್ನು ತಿಳಿಸುವದಕ್ಕಾಗಿಯೇ ವೇದಮಾತೆಯು ಈಗ ಹೊರಟಿರುತ್ತಾಳೆ.

    ಒಂದು ದೃಷ್ಟಾಂತದಿಂದ ಈ ವಿಷಯವನ್ನು ಚೆನ್ನಾಗಿ ಮನಗಾಣಬಹುದು ಪರಮೇಶ್ವರನು ಪ್ರತಿಯೊಬ್ಬ ಜೀವರಲ್ಲಿಯೂ ತಾನೆ ಪ್ರವೇಶಮಾಡಿ ಇದ್ದುಕೊಂಡಿರುವನಾದರೆ ಆಯಾ ಉಪಾಧಿಗಳ ಗುಣದೋಷಗಳು ಅವನಿಗೆ ಅಂಟಬೇಡವೆ? ಎಂಬ ಆಕ್ಷೇಪಕ್ಕೆ ಉತ್ತರವಾಗಿ ಉಪನಿಷತ್ತಿನಲ್ಲಿ ಒಂದು ಉದಾಹರಣೆಯನ್ನು ಕೊಟ್ಟದೆ ಸೂರ್ಯನು ಆಕಾಶದಲ್ಲಿದ್ದುಕೊಂಡು ತನ್ನ ಕಿರಣಗಳಿಂದ ಎಲ್ಲಾ ವಸ್ತುಗಳನ್ನೂ ಬೆಳಗುತ್ತಾನಷ್ಟೆ! ಹಾಗೆ ಕಿರಣಗಳಿಂದ ಅವನು ಎಲ್ಲವನ್ನೂ ಮುಟ್ಟುವಾಗ ಅಪವಿತ್ರವೆಂದು ನಾವು ಭಾವಿಸುವ ಮೃತಶರೀರ, ಅಸ್ಥಿ, ಮಾಂಸ, ಮೂಲಮೂತ್ರಾದಿಗಳು ಎಲ್ಲವನ್ನೂ ಸ್ಪರ್ಶಿಸಿಯೇ ತೀರುತ್ತಾನೆ ಅದೇ ಸೂರ್ಯನು ನದಿ, ದೇವಾಲಯ, ದೇವತಾವಿಗ್ರಹಗಳು, ಶುಚಿಯಾದ ಜನರು ಇವೆಲ್ಲವನ್ನೂ ಮುಟ್ಟುತ್ತಾನೆ, ಆದರೆ ಇದರಿಂದ ಸೂರ್ಯನಿಗೇನಾದರೂ ಗುಣದೋಷಗಳು ಅಂಟುತ್ತವೆಯೋ? ಅಥವಾ ಅದೇ ಸೂರ್ಯನೇ ತನ್ನ ಬೆಳಕಿನಿಂದ ಮಂತ್ರಿಮಹೋದಯರುಗಳ ಬಂಗಲೆಗಳನ್ನೂ ಕೊಳಚೆನಿವಾಸಿಗಳ ಗುಡಿಸಲುಗಳನ್ನೂ ಸಮಾನವಾಗಿಯೇ ಬೆಳಗುತ್ತಾನೆ. ಇದರಿಂದ ಸೂರ್ಯನ ಮೇಲೆ ಯಾರಾದರೂ ವಿಚಾರಣೆಯನ್ನು ದಾಖಲುಮಾಡಲಾದೀತೆ? ಅಥವಾ ಬೆಳಕು ಇಂಥಿಂಥವರಿಗೆ ಮಾತ್ರವೇ ಎಂದು ನಿಯಂತ್ರಿಸಲು ಸಾಧ್ಯವಾಗಿದೆಯೆ? ಯಾವದೇ ದೇಶದವರಾಗಲೀ, ಸೂರ್ಯನನ್ನು ತಮ್ಮವನನ್ನಾಗಿ ಮಾಡಿಕೊಂಡು ಉಳಿದ ದೇಶದವರಿಗೆ ಆತನ ಬೆಳಕು ಶಾಖಗಳು ದೊರೆಯದಂತೆ ಮಾಡಲು ಸಾಧ್ಯವಾಗಿದೆಯೆ? ಇವಕ್ಕೆಲ್ಲ ಒಂದೇ ಉತ್ತರ "ಇಲ್ಲ" ಎಂಬುದು ಅದರಂತೆಯೇ ಪರಮೇಶ್ವರನೂ ವಿದ್ಯಾವಿನಯ ಸಂಪನ್ನರಾದ ಬ್ರಾಹ್ಮರಲ್ಲಿಯೂ ಗೋವಿನಲ್ಲಿಯೂ ಆನೆಯಲ್ಲಿಯೂ ನಾಯಿಯಲ್ಲಿಯೂ ಚಂಡಾಲನಲ್ಲಿಯೂ ಒಂದೇ ಸಮನಾಗಿರುತ್ತಾನೆ. ನ್ಯಾಯಾಧಿ ಪತಿಯಲ್ಲಿಯೂ ಅಪರಾಧಿಯಲ್ಲಿಯೂ ಅವಿದ್ಯಾವಂತನಲ್ಲಿಯೂ ದಡ್ಡನಲ್ಲಿಯೂ ರೋಗಿಷ್ಠನಲ್ಲಿಯೂ ವೈದ್ಯನಲ್ಲಿಯೂ ಸಮನಾಗಿಯೇ ಇರುತ್ತಾನೆ. ಅವನನ್ನು ಯಾರು ಕಟ್ಟುಮಾಡುವದು ಸಾದ್ಯವಿಲ್ಲ ಅವನೇ ಎಲ್ಲರಿಗೂ ಒಡೆಯನು ಆದರೆ ಆತನನ್ನು ಎಲ್ಲೆಲ್ಲಿಯೂ ದರ್ಶನಮಾಡುವ ದಿವ್ಯದೃಷ್ಟಿಯು ಮಾತ್ರ ನಮಗೆ ಬೇಕು ಅದನ್ನೇ ಶ್ರುತಿಮಾತೆಯು ಇಲ್ಲಿ ನಮಗೆ ತೆರೆಯಿಸಿ ಭೇದಭಾವವನ್ನು ಬಿಡಿಸಿ ಎಲ್ಲಾ ವಸ್ತುಗಳಲ್ಲಿಯೂ ಪರಮೇಶ್ವರನ ದರ್ಶನವನ್ನು ಮಾಡಿಸಿರುತ್ತಾಳೆ.
    ಇಲ್ಲಿ ಕುಲಾಲರೆಂದು ಕುಂಬಾರರನ್ನು ಪರಾಮರ್ಶಿಸಿದೆ ಕರ್ಮಾರರೆಂದು ಕಮ್ಮಾರ (ಕಬ್ಬಿಣದ ಕೆಲಸಮಾಡುವವ) ರನ್ನ ತಿಳಿಸಿದೆ ಇವರಿಬ್ಬರೂ ಕಾರ್ಮಿಕರು. ಜನಸಾಮಾನ್ಯರಿಗೆಲ್ಲ ಬೇಕಾದವರು ಪ್ರತಿಯೊಂದು ಹಳ್ಳಿಯಲ್ಲಿಯೂ ಈ ಕಸುಬಿನವರು ಇದ್ದೇ ಇರುತ್ತಾರೆ ನಾವೆಲ್ಲರೂ ಇವರನ್ನು ಎಷ್ಟೋಬಾರಿ ಕಂಡಿದ್ದೇವಾದರೂ ಇವರುಗಳನ್ನು ಪರಮೇಶ್ವರಸ್ವರೂಪರೆಂದು ಮಾತ್ರ ಭಾವಿಸಿರುವದಿಲ್ಲ ಹೀಗೆ ಪರಮೇಶ್ವರನು ನಮಗೆ ಸುಲಭವಾಗಿಯೇ ಕಂಡುಬರುತ್ತಿದ್ದರೂ ನಾವು ಅವನ್ನು ಗುರುತಿಸಲಾರದೆ ಇದ್ದೇವೆ ಆದರೆ ಈ ಸ್ತುತಿಯಿಂದ ಕುಂಬಾರರೂ ಕಮ್ಮಾರರೂ ಅಹಂಕಾರಪಟ್ಟುಕೊಳ್ಳಬೇಕಾಗಿಲ್ಲ ಅವರುಗಳು ಆತ್ಮನನ್ನು ಮಾತ್ರ ಪರಮೇಶ್ವರನೆಂದು ಇಲ್ಲಿ ಹೇಳಿರುವದರಿಂದ ಆತ್ಮರೂಪದಿಂದ ಎಲ್ಲರೂ ಪರಮೇಶ್ವರರೇ ಆಗಿರುತ್ತಾರೆ ಹಾಗೆಯೇ ಪುಂಜಿಷ್ಟನಿಷಾದರನ್ನೂ ತಿಳಿಯಬೇಕು ಪುಂಜಿಷ್ಟರೆಂಬವರು ಕಾಡುಗಳಲ್ಲಿ ಸಂಚರಿಸುತ್ತಾ ಹಕ್ಕಿಗಳನ್ನು ಕೊಲ್ಲುವವರು ನಿಷಾದರೆಂಬವರು ಬೇಡರ ಜಾತಿಯವರು ಅಥವಾ ಬೆಸ್ತರು ಎಂದಾದರೂ ಕರೆಯಬಹುದು ಇವರುಗಳ ಕರ್ಮವನ್ನು ನೋಡಿದರೆ ತುಂಬ ಪಾಪಿಷ್ಠರೆನಿಸುವದು ಆದರೆ ಪಾಪ, ಪುಣ್ಯಗಳೆಂಬಿವು ಅಸಂಗನಾದ ಆತ್ಮನಿಗೆ ಎಂದಿಗೂ ಅಂಟಲಾರವು ಹೀಗೆ ಪಾಪಿಷ್ಠರಾದವರ ಶರೀರದಲ್ಲಿಯೂ ಪರಮಾತ್ಮನೇ ಇದ್ದುಕೊಂಡಿರುವನು ಹೆಚ್ಚೇಕೆ? ಪರಮೇಶ್ವರನೇ ಕಿರಾತವೇಷದಿಂದ ಅರ್ಜುನನಿಗೆ ತೋರಿಕೊಂಡಾಗ ಅರ್ಜುನನಂಥ ಭಕ್ತನೂ ಮೊದಲು ಆತನನ್ನು ಗುರುತಿಸಲಾರದೆ ಹೋದನು ಶಂಕರಭಗವತ್ಪಾದರಿಗ ಚಂಡಾಲವೇಷದಿಂದ ಪರಮೇಶ್ವರನು ಕಾಶಿಯಲ್ಲಿ ದರ್ಶನಕೊಟ್ಟನೆಂದೂ ಅವನೊಡನೆ ನಾಲ್ಕು ನಾಯಿಗಳಿದ್ದವೆಂದೂ ಅವೇ ನಾಲ್ಕು ವೇದಗಳೆಂದೂ ಶಂಕರವಿಜಯದಲ್ಲಿ ಕಥೆಯಿದೆ ಹೀಗೆ ಪರಮೇಶ್ವರನು ಕಿರಾತನಾಗಿಯೂ ಬೇಡನಾಗಿಯೂ ತೋರಿಕೊಳ್ಳುವದು, ತಾನೇ ಮತ್ಸ್ಯ(ಮಿನು), ಕೂರ್ಮ(ಆಮೆ), ವರಾಹ(ಹಂದಿ) - ಮುಂತಾದ ರೂಪಗಳಿಂದ ಅವತಾರಮಾಡುವದು ಇವೆಲ್ಲ ಇತಿಹಾಸಪುರಾಣಗಳನ್ನು ಕೇಳಿರುವವರಿಗೆ ತಿಳಿದೇ ಇದೆ.
    ಇನ್ನು ಬಾಣಗಳನ್ನೂ ಧನುಸ್ಸನ್ನೂ ತಯಾರಿಸುವವರು, ಬೇಟೆಗಾರರು, ನಾಯಿಗಳ ಪಾಲಕರು - ಎಂದು ವರ್ಣಿಸಿರುವವರಲ್ಲಿಯೂ ಪರಮೇಶ್ವರನ ವಿಭೂತಿಗಳನ್ನು ಕಾಣಬಹುದಾಗಿದೆ. ಧನುರ್ಬಾಣಗಳಂಥ ಯುದ್ಧಸಾಮಗ್ರಿಗಳ ತಯಾರಕರೂ ಬೇಟೆಗಾರರೂ ಪ್ರಸಿದ್ಧರಾಗಿಯೇ ಇದ್ದಾರೆ ಶ್ವನಿಗಳು, ಶ್ವಪತಿಗಳು - ಎಂಬುವರನ್ನೂ ನಾವು ನೋಡಿಯೇ ಇದ್ದೇವೆ. ಪಟ್ಟಣಗಳಲ್ಲಿ ಮನೆಯ ಕಾವಲಿಗಾಗಿ ನಾಯಿಗಳನ್ನು ಸಾಕುವದು ತೀರ ಸಮಾನ್ಯ ಅವುಗಳಿಂದ ಉಪಯೋಗವಿರುವಷ್ಟೇ ಕೆಲವು ವೇಳೆ ಹಾನಿಯೂ ಉಂಟು ಆದರೇನು? ನಾಯಿಗಳೊಡನೆ ಗಾಳಿಯ ಸಂಚಾರಕ್ಕಾಗಿ ಹೊರಡುವವರನ್ನೂ ನಾವು ಕಂಡಿಲ್ಲವೆ? ಅಂಥ ಸಂದರ್ಭಗಳಲ್ಲೆಲ್ಲ, ಪರಮೇಶ್ವರನ ಸ್ಮರಣೆಯನ್ನೇ ಮಾಡುತ್ತಾ ಈ ಅನುಸಂಧಾನವನ್ನು ಮಾಡಬೇಕು.
    ಅಂತೂ ಅಧ್ಯಾತ್ಮದೃಷ್ಟಿಯಿಂದ ವಿಶಾಲವಾಗಿ ಪರಿಶೀಲಿಸಿದಾಗ ಪ್ರಪಂಚದಲ್ಲಿ ಕಾಣುವ ಉಚ್ಚನೀಚಭಾವನೆಗಳನ್ನೆಲ್ಲ ಕಳೆದುಹಾಕಿ ಎಲ್ಲಾ ಉಪಾಧಿಗಳಲ್ಲಿಯೂ ಒಳಹೊಕ್ಕಿದ್ದರೂ ಯಾವ ಉಪಾಧಿಧರ್ಮಗಳ ಸೋಂಕೂ ಇಲ್ಲದೆ ಇದ್ದುಕೊಂಡಿರುವ ಪರಮೇಶ್ವರನನ್ನು ಸದಾಕಾಲವೂ ಅನುಸಂಧಾನ ಮಾಡುತ್ತಿರುವವರೇ ನಿಜವಾದ ಜ್ಞಾನಿಗಳು - ಎಂದು ಇಲ್ಲಿ ತಿಳಿಸಿದಂತಾಗಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ