ರುದ್ರಭಾಷ್ಯಪ್ರಕಾಶ - 5ನೇ ಅನುವಾಕ (ಸಂಪೂರ್ಣ)

ನಮೋ ಭವಾಯ ಚ
    ರುದ್ರಾಧ್ಯಾಯದ ಐದನೆಯ ಅನುವಾಕವನ್ನು ಈಗ ವಿಚಾರಮಾಡ ಬೇಕಾಗಿದೆ. ಈ ಅನುವಾಕದ ಮೊದಲನೆಯ ಮಂತ್ರಭಾಗವು ಹೀಗೆದೆ :

ನಮೋ ಭವಾಯ ಚ ರುದ್ರಾಯ ಚ ನಮಃ ಶರ್ವಾಯ ಚ ಪಶು
ಪತಯೇ ಚ ನಮೋ ನೀಲಗ್ರೀವಾಯ ಚ ಶಿತಿಕಂಠಾಯ ಚ ನಮಃ ಕಪ
ರ್ದಿನೇ ಚ ವ್ಯುಪ್ತಕೇಶಾಯ ಚ ನಮಃ ಸಹಸ್ರಾಕ್ಷಾಯ ಚ ಶತಧನ್ವನೇ ಚ ||

    "ಭವನಿಗೂ ರುದ್ರನಿಗೂ ಶರ್ವನಿಗೂ ಪಶುಪತಿಗೂ ನೀಲಗ್ರೀವನಿಗೂ ಶಿತಿಕಂಠನಿಗೂ ಕಪರ್ದಿಗೂ ವ್ಯುಪ್ತಕೇಶನಿಗೂ ಸಹಸ್ರಾಕ್ಷನಿಗೂ ಶತಧನ್ವನಿಗೂ ನಮಸ್ಕಾರವು"


    ಈ ಅನುವಾಕಗಳಲ್ಲಿ ನಮಃ ಶಬ್ದವು ಒಮ್ಮೆ ಮಾತ್ರ ಪ್ರಯುಕ್ತವಾಗುತ್ತದೆ. ಎಂದರೆ ಉಭಯತೋನಮಸ್ಕಾರಮಂತ್ರಗಳಂತೆ ಇಲ್ಲಿ ಹಿಂದೆಯೂ ಮುಂದೆಯೂ ಎರಡುಸಲ ನಮಃ ಶಬ್ದವು ಬರುವದಿಲ್ಲ ಮತ್ತು ಎರಡೆರಡು ನಾಮಗಳಿಗೆ ಒಂದೊಂದು ನಮಃ ಶಬ್ದವಿರುತ್ತದೆ ಆದ್ದರಿಂದ 'ನಮೋ ಭವಾಯ ಚ ರುದ್ರಾಯ ಚ' ಎಂದು ನಮಸ್ಕಾರಾದಿಯಾಗಿರುವದು ಒಂದು ಮಂತ್ರವು ಇದರಂತೆಯೇ 'ನಮಃ ಶರ್ವಾಯ ಚ ಪಶುಪತಯೇ ಚ' ಎಂದು ಮುಂತಾಗಿ ಮುಂದಿನ ಮಂತ್ರಗಳನ್ನೂ ತಿಳಿಯಬೇಕು.

    ಈಗ ಈ ಸ್ತುತಿಯ ಅರ್ಥವನ್ನು ವಿಚಾರಮಾಡೋಣ ಹಿಂದಿನ ಅನುವಾಕದಲ್ಲಿ ಸರ್ವಾತ್ಮನಾದ ಪರಮೇಶ್ವರನನ್ನು ಎಲ್ಲಾ ರೂಪಗಳಿಂದಲೂ ಕಂಡು ನಮಸ್ಕರಿಸಿದ್ದಾಯಿತು ಈಗಲಾದರೊ ಭಗವಂತನಿಗೆ ಮಾತ್ರವೇ ಮಿಸಲಾಗಿರುವ ಗುಣಕರ್ಮರೂಪಗಳಿಂದ ಸ್ತುತಿಸಲಾಗುತ್ತದೆ ಇದು 'ದ್ರಾಪೇ' ಎಂಬವರೆಗಿನ ಮಂತ್ರದವರೆಗೂ ಮುಂದುವರೆಯುತ್ತದೆ ಇಲ್ಲಿ ಈಗ ಮೊದಲನೆ ಎರಡು ಮಂತ್ರಗಳಿಂದ ಪರಮೇಶ್ವರನು ಜಗತ್ತಿನ ಉತ್ಪತ್ತಿ, ಸ್ಥಿತಿ, ಸಂಹಾರ, ಬಂಧ, ಮೋಕ್ಷ - ಎಂಬ ಐದು ಕರ್ಮಗಳನ್ನು ಬೇರೆಬೇರೆಯ ಹೆಸರಿನಿಂದ ಒಬ್ಬನೇ ಮಾಡುತ್ತಾನೆ - ಎಂದು ತಿಳಿಸಿದೆ.
   
    ಭವನೆಂದರೆ ಉತ್ಪತ್ತಿಕಾರಕನು ಈತನಿಂದ ಜಗತ್ತು 'ಭವತಿ' - ಉಂಟಾಗುತ್ತದೆಯಾದ್ದರಿಂದ ಭವನು ಬ್ರಹ್ಮವಿಷ್ಣುಇಂದ್ರಾದಿಸಮಸ್ತದೇವತೆಗಳಿಂದ ಕೂಡಿದ ಎಲ್ಲಾ ಪ್ರಪಂಚವೂ ಇವನಿಂದಲೇ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯ ಹಾಗೆಯೇ ರುದ್ರನೆಂದರೆ ಮೋಕ್ಷಕಾರಕನು ರುದಂ ಅಳುವನ್ನು ದ್ರಾವಯತಿ ಓಡಿಸುತ್ತಾನೆ ಶೋಕವನ್ನು ನಾಶಮಾಡುತ್ತಾನೆ ಎಂಬರ್ಥದಲ್ಲಿ ಪರಮೇಶ್ವರನಿಗೆ ರುದ್ರನೆಂದು ಹೆಸರು ಭಗವಂತನನ್ನು ಅರಿತುಕೊಳ್ಳದೆ ದುಃಖನಾಶವು ಎಂದಿಗೂ ಆಗಲಾರದು 'ಮನುಷ್ಯರು ಆಕಾಶವನ್ನು ಚರ್ಮದಂತೆ ಸುರುಳಿಸುತ್ತುವದು ಸಾಧ್ಯವಾದಲ್ಲಿ ಆಗ ರುದ್ರನನ್ನು ಅರಿತುಕೊಳ್ಳದೆಯೂ ದುಃಖವನ್ನು ಕೊನೆಗಾಣಿಸಲಾದೀತು' ಎಂಬ ಉಪನಿಷದ್ವಾಕ್ಯವು ಆಕಾಶವನ್ನು ಸುರುಳಿಸುತ್ತುವದು ಹೇಗೆ ಅಸಾಧ್ಯವೋ ಹಾಗೆಯೇ ರುದ್ರನನ್ನು ಅರಿಯದೆ ದುಃಖವನ್ನು ದಾಟುವದೂ ಅಸಾಧ್ಯವೇ ಎಂದು ತಿಳಿಸುತ್ತಿದೆ ಹೀಗೆ ರುದ್ರನೇ ಮೋಕ್ಷಕಾರಕನಾಗಿರುತ್ತಾನೆ 'ರುದ್ರನೇ ತಾರಕಬ್ರಹ್ಮವು' ಎಂದೂ ವೇದವು ತಿಳಿಸುತ್ತಿದೆ.

    ಇನ್ನು ಶರ್ವನೆಂದರೆ ಹಿಂಸಾಕಾರಕನು ಶೃಣಾತಿ ಹಿಂಸಿಸುತ್ತಾನೆ ಎಂಬರ್ಥದಲ್ಲಿ ಶರ್ವನೆಂದಿದೆ ಪ್ರಲಯಕಾಲದಲ್ಲಿ ಜಗತ್ತೆಲ್ಲವನ್ನೂ ನುಂಗಿ ಬಿಡುವನಾದ್ದರಿಂದ ಈತನು ಶರ್ವನೆನಿಸುವನು ಆದರೆ ಪರಮೇಶ್ವರನ ದೃಷ್ಟಿಯಿಂದ ನೋಡಿದರೆ ಜಗತ್ತಿನ ಈ ಉತ್ಪತ್ತಿಸ್ಥಿತಿಸಂಹಾರಗಳೆಂಬಿವು ಆ ಮಹಾ ಮಹಿಮನಿಗೆ ಒಂದು ಲೀಲಾಮತ್ರವೇ ಇದರಿಂದ ಅವನಿಗೆ ಏನೂ ಆಯಾಸವಿಲ್ಲ ಇಂಥ ಮಹಾಸತ್ತ್ವಶಾಲಿಯು ಅವನು ಎಂದು ಅಭಿಪ್ರಾಯ ಆದರೂ ದೇವರನ್ನು ಉತ್ಪತ್ತಿಸ್ಥಿತಿಕಾರಕನೆಂದು ಹೇಳಿದರೆ ಜನರಿಗೆ ಸಂತೋಷವಾಗುತ್ತದೆ ಸಂಹಾರಕಾರಕನೆಂದರೆ ಭಯವೂ ಹಾಗೂ ಅವನು ಅಷ್ಟೊಂದು ಕ್ರೂರಿಯೆ? ಎನಿಸುತ್ತದೆ ಆದರೆ ಹಾಗಲ್ಲ ಜಗತ್ತಿನಲ್ಲಿ ಉತ್ಪತ್ತಿಯು ಎಷ್ಟು ಮುಖ್ಯವೋ ಪ್ರಲಯವೂ ಅಷ್ಟೇ ಮುಖ್ಯ ನಾವು ಆಹಾರವನ್ನು ತಿನ್ನುವದು ಎಷ್ಟು ಮುಖ್ಯವೋ ಅರಗುವದೋ ಅಷ್ಟೇ ಮುಖ್ಯವಲ್ಲವೆ? ಹಾಗೆಯೇ ಪ್ರಪಂಚದ ಆರೋಗ್ಯಕ್ಕೆ ಪ್ರಲಯವು ಅಗತ್ಯ ಆದ್ದರಿಂದಲೂ ಭಗವಂತನು ಪ್ರಪಂಚವನ್ನು ಉತ್ಪತ್ತಿವಿನಾಶಗಳೆಂಬ ಕ್ರಿಯೆಗಳಿಂದ ಸಮನಾಗಿಟ್ಟಿರುವನು ಆತನ ದೃಷ್ಟಿಯಲ್ಲಿ ಎಲ್ಲವೂ ಸರಿಯಾಗಿಯೇ ಇದೆ ನಾವು ಮಾತ್ರ ಆತನ ತತ್ತ್ವವನ್ನು ಅರಿತುಕೊಳ್ಳದೆ 'ದೇವರು ಹೀಗೆ ಮಾಡಿದ್ದು ಸರಿಯಲ್ಲ' ಎಂದು ದೂಷಿಸುತ್ತಿರುವೆವು ಇದು ನಮ್ಮ ಅಜ್ಞಾನವನ್ನು ತೋರಿಸುತ್ತದೆಯೇ ಹೊರತು ಪರಮೇಶ್ವರನಲ್ಲಿ ಯಾವ ದೋಷವನ್ನೂ ಉಂಟುಮಾಡಲಾರದು.

    ಪಶುಪತಿಯೆಂಬ ನಾಮವು ಭಗವಂತನು ಬಂಧ ಮತ್ತು ಸ್ಥಿತಿ ಎಂಬ ಕಾರ್ಯಗಳನ್ನು ಮಾಡುವವನು ಎಂಬುದನ್ನು ತಿಳಿಸುತ್ತದೆ ನಾವೆಲ್ಲರೂ ಪಶುಗಳು ಎಂದರೆ ಪರಾಧೀನರು ಹಾಗೂ ಅಜ್ಞಾನಿಗಳು ನಮ್ಮನ್ನೆಲ್ಲ ಆಳುತ್ತಿರುವ ಪರಮೇಶ್ವರನು ಸ್ವತಂತ್ರನು ಮತ್ತು ಸರ್ವಜ್ಞನು ಆತನೇ ನಮ್ಮಗಳ ಉತ್ಪತ್ತಿ, ಸ್ಥಿತಿ, ಗತಿ, ಆಗತಿ, ಬಂಧ, ಮೋಕ್ಷ ಎಲ್ಲಕ್ಕೂ ಕಾರಣನಾಗಿರುವನು ಆದ್ದರಿಂದಲೇ ಅವನು ಭಗವಂತನು ಹೀಗೆ ಪಶುಗಳನ್ನು ನಿಯಮಮಾಡುವವನಾದ್ದರಿಂದ ಪಶುಪತಿಯು ಆದರೆ ಈ ಕಾರ್ಯವೇನೂ ಸುಲಭಸಾಧ್ಯವಾದುದಲ್ಲ ಯಾವನೊಬ್ಬ ಜೀವನಿಂದಲೂ ಇದು ಆಗಲಾರದು ಭಗವಂತನಿಗೆ ಮಾತ್ರವೇ ಇದು ಶಕ್ಯವಾದದ್ದು ಇಂಥ ಪಶುಪತಿಯಾದವನಿಗೆ ನಮಸ್ಕಾರವು.
   
    ನೀಲಗ್ರೀವನೆಂಬ ನಾಮವನ್ನು ಹಿಂದೆಯೇ ಒಮ್ಮೆ ವ್ಯಾಖ್ಯಾನಮಾಡಿದೆ ಕಾಲಕೂಟವೆಂಬ ಮಹಾವಿಷವು ಸಮುದ್ರಮಥನಕಾಲದಲ್ಲಿ ಉತ್ಪನ್ನವಾದಾಗ ಅದು ಜಗತ್ತನ್ನೇ ಸುಡುತ್ತಿರುವಲ್ಲಿ ಬೇರೆಯ ದೇವತೆಗಳು ಯಾರು ಮುಂದೆ ಬರಲಿಲ್ಲ ಆಗ ಪರಮೇಶ್ವರನು ಲೋಕಕಲ್ಯಾಣಕ್ಕಾಗಿ ಆ ವಿಷವನ್ನು ಕುಡಿದನು ಅದು ಕಂಠದಲ್ಲಿಯೇ ನಿಂತದ್ದರಿಂದ ಕುತ್ತಿಗೆಯು ಕಪ್ಪಾಯಿತು ಅದರಿಂದ ನೀಲಗ್ರೀವನೆಂದು ಹೆಸರಾಯಿತು ಶಿತಿಕಂಠನೆಂದರೆ ವಿಷವನ್ನು ಕುಡಿಯುವ ಮುಂಚೆ ಬಿಳುಪಾದ ಕಂಠವೇ ಆತನಿಗೆ ಇತ್ತು ಆದ್ದರಿಂದ ಶಿತಿಕಂಠನಾದನು ಹೀಗೆ ತನ್ನ ಕಂಠವು ಕಪ್ಪಾಗುವದನ್ನು ಲಕ್ಷಿಸದೆ ವಿಷವನ್ನು ಪಾನಮಾಡಿದ್ದು ಆತನಿಗೆ ಲೋಕದ ಪ್ರಾಣಿಗಳ ಮೇಲೆ ಇರುವ ದಯೆಯನ್ನು ಸೂಚಿಸುತ್ತದೆ.
   
    ಇನ್ನು ಕಪರ್ದಿ ಎಂಬ ನಾಮವನ್ನು ವಿಚಾರಮಾಡೋಣ ಪರಮೇಶ್ವರನ ಜಟಾಜೂಟಕ್ಕೆ ಕಪರ್ದವೆಂದು ಹೆಸರು ಅದನ್ನು ಉಳ್ಳವನು ಕಪರ್ದಿಯು ಇಂಥ ಜಟಾಜೂಟದಲ್ಲಿಯೇ ಭಗವಂತನು ಗಂಗೆಯನ್ನು ಧರಿಸಿರುವನು ಮತ್ತು ಈ ಜಟೆಯೆಂಬುದು ಅಸಾಧಾರಣವಾದ ಶಕ್ತಿಯುಳ್ಳದ್ದು ಹೇಗೆಂದರೆ ದಕ್ಷಯಜ್ಞಕಾಲದಲ್ಲಿ ಭಗವಂತನನ್ನು ಅಪಮಾನಗೊಳಿಸಿದ ದಕ್ಷನನ್ನು ಶಿಕ್ಷಿಸಲು ಕೋಪದಿಂದ ಈಶ್ವರನು ತನ್ನ ಜಟೆಯಿಂದ ಒಂದು ಕೂದಲನ್ನು ಕಿತ್ತುಹಾಕಿದ ಕೂಡಲೇ ಅದರಿಂದ ವೀರಭದ್ರನು ಹುಟ್ಟಿ ದಕ್ಷಯಜ್ಞವನ್ನೆಲ್ಲ ನಾಶಮಾಡಿಬಿಟ್ಟನು ಇಂಥ ಮಹಾಮಹಿಮೆಯುಳ್ಳದ್ದು ಈಶ್ವರನ ಜಟೆಯು ಹೀಗೆ ಜಟಾಜೂಟಧರನಾದ ಪರಮೇಶ್ವರನೇ ಕಪರ್ದಿಯು.

    ಕಪರ್ದಿಯಾಗಿರುವಂತೆಯೇ ವ್ಯುಪ್ತಕೇಶನೂ ಆಗಿರುವವನು ಪರಮೇಶ್ವರನೇ ವ್ಯುಪ್ತವೆಂದರೆ ಬೋಳಿಸಲ್ಪಟ್ಟ ಕೇಶಗಳೆಂದರೆ ಕೂದಲುಳ್ಳವನ್ಉ ಪರಮಹಂಸಸಂನ್ಯಾಸಿಗಳಿಗೆ ಕಂಠದವರೆಗೂ ಮುಂಡನವು ವಿಹಿತವಾಗಿದೆ ಆದ್ದರಿಂದ ಬೋಳುತಲೆಯೆಂಬುದು ವೇದಾಂತವಿಜ್ಞಾನಸುನಿಶ್ಚಿತಾರ್ಥರಾದ ಸಂನ್ಯಾಸಿಗಳನ್ನು ಸೂಚಿಸುತ್ತದೆ ಬದುಕಿರುವಾಗಲೇ ಜ್ಞಾನದಿಂದ ಮುಕ್ತರಾಗಿ ಲೋಕಕಲ್ಯಾಣಾರ್ಥವಾಗಿ ಅಲ್ಲಲ್ಲಿ ಸಂಚರಿಸುತ್ತಾ ಜನರಿಗೆ ಆಧ್ಯಾತ್ಮಿಕ ಬೋಧೆಯನ್ನು ನೀಡಿ ಅನುಗ್ರಹಿಸುತ್ತಿರುವ ಮಹಾತಪಸ್ವಿಗಳಾದ ಸಂನ್ಯಾಸಿಗಳು ಸಾಕ್ಷಾತ್ ಪರಮೇಶ್ವರನ ಸ್ವರೂಪರೇ ಆಗಿರುವರು ಅಂಥ ಸಂನ್ಯಾಸಿಗಳ ರೂಪದಲ್ಲಿರುವವನಿಗೆ ನಮಸ್ಕಾರವು ಎಂದು ಈ ನಾಮವು ತಿಳಿಸುತ್ತದೆ.

    ಸಹಸ್ರಾಕ್ಷನೆಂದರೆ ಅನಂತವಾದ ಕಣ್ಣುಗಳ್ಳವನು ಪರಮೇಶ್ವರನಿಗೆ ಎಲ್ಲಾ ಶರೀರಗಳೂ ಉಪಾಧಿಗಳೇ ಆದ್ದರಿಂದ ಸಾವಿರಾರು ಶರೀರಗಳಲ್ಲಿ ಸಾವಿರಾರು ಕಣ್ಣುಗಳಿಂದ ಕೂಡಿರುವವನು ಸಹಸ್ರಾಕ್ಷನು ಎಂದರ್ಥ ಮತ್ತು ಸರ್ವಜ್ಞನಾದುದರಿಂದ ಎಲ್ಲವನ್ನೂ ಬಲ್ಲವನು ಎಂಬರ್ಥದಲ್ಲಿಯೂ ಸಹಸ್ರಾಕ್ಷನಾಗಬಹುದು ಅಥವಾ ದೇವೇಂದ್ರನ ರೂಪದಲ್ಲಿರುವವನೂ ಪರಮೇಶ್ವರನೇ ಆದ್ದರಿಂದ ಸಹಸ್ರಾಕ್ಷನೆಂಬ ದೇವೇಂದ್ರನೂ ಆತನೇ ಎಂದೂ ಹೇಳಬಹುದಾಗಿದೆ.

    ಶತಧನ್ವನು ಎಂದರೆ ನೂರು ಬಿಲ್ಲುಗಳುಳ್ಳವನು ಸಾಮಾನ್ಯವಾದ ಬಿಲ್ಲುಗಳ ಜೊತೆಗೆ ವೇದಗಳನ್ನೂ ಓಂಕಾರವನ್ನೂ ಮೇರುಪರ್ವತವನ್ನೂ ಸಮಯಾನುಸಾರ ಬಿಲ್ಲಾಗಿ ಮಾಡಿಕೊಂಡು ಮಹಾಮಹಿಮನು ಇವನು ಆದ್ದರಿಂದ ಶತಧನ್ವನೆಂದು ಸ್ತುತಿಸಿದೆ.

ನಮೋ ಹ್ರಸ್ವಾಯ ಚ ವಾಮನಾಯ ಚ
    ರುದ್ರಾಧ್ಯಾಯದ ಐದನೆಯ ಅನುವಾಕದ ಉತ್ತರಾರ್ಧವನ್ನು ಈಗ ವಿಚಾರಮಾಡಬೇಕಾಗಿದೆ :

ನಮೋ ಗಿರಿಶಾಯ ಚ ಶಿಪಿವಿಷ್ಟಾಯ ಚ ನಮೋ ಮಿಢುಷ್ಟಮಾಯ ಚೇಷುಮತೇ ಚ ನಮೋ ಹ್ರಸ್ವಾಯ ಚ ವಾಮನಾಯ ಚ ನಮೋ ಬೃಹತೇ ಚ ವರ್ಷಿಯಸೇ ಚ ನಮೋ ವೃದ್ದಾಯ ಚ ಸಂವೃಧ್ವನೇ ಚ ||
ನಮೋ ಅಗ್ರಿಯಾಯ ಚ ಪ್ರಥಮಾಯ ಚ ನಮ ಆಶವೇ ಚಾಜಿರಾಯ ಚ ನಮಃ ಶೀಘ್ರಿಯಾಯ ಚ ಶೀಭ್ಯಾಯ ಚ ನಮ ಊರ್ಮ್ಯಾಯ ಚಾವಸ್ವನ್ಯಾಯ ಚ ನಮಃ ಸ್ರೋತಸ್ಯಾಯ ಚ ದ್ವೀಪ್ಯಾಯ ಚ ||

    'ಗಿರಿಶನಿಗೂ ಶಿಪಿವಿಷ್ಟನಿಗೂ ಮಿಢುಷ್ಟಮನಿಗೂ ಇಷುಮಂತನಿಗೂ ಹ್ರಸ್ವನಿಗೂ ವಾಮನನಿಗೂ ಬೃಹಂತನಿಗೂ ವರ್ಷೀಯನಿಗೂ ವೃದ್ಧನಿಗೂ ಸಂವೃಧ್ವನಿಗೂ ನಮಸ್ಕಾರವು'.

    'ಅಗ್ರಿಯನಿಗೂ ಪ್ರಥಮನಿಗೂ ಅಶುವಿಗೂ ಅಜಿರನಿಗೂ ಶೀಘ್ರಿಯನಿಗೂ ಶೀಭ್ಯನಿಗೂ ಊರ್ಮ್ಯನಿಗೂ ಅವಸ್ವನ್ಯನಿಗೂ ಸ್ತೋತ್ರಸ್ಯನಿಗೂ ದ್ವೀಪ್ಯನಿಗೂ ನಮಸ್ಕಾರವು.'

    ಗಿರಿಶನೆಂದರೆ ಕೈಲಾಸವೆಂಬ ನಿಲಯವುಳ್ಳವನೆಂದರ್ಥ ಗಿರಿ ಎಂಬುದು ಎಲ್ಲಾ ಬೆಟ್ಟಗಳಿಗೂ ವಾಚಕವಾಗಿದೆ ಆದ್ದರಿಂದ ಬೆಟ್ಟಗಳೆಲ್ಲವೂ ಪರಮೇಶ್ವರನ ವಾಸಸ್ಥಾನಗಳು ಎಂದೂಹೇಳಬಹುದು ಆದರೂ ರಜತಗಿರಿ, ಧವಳಗಿರಿ ಎಂಬ ಹೆಸರುಗಳಿಂದ ಪ್ರಸಿದ್ಧವಾದ ಹಿಮಾಚಲವು ಈಶ್ವರನ ವಿಶೇಷವಾಸಸ್ಥಾನವಾಗಿದೆ ಗೌರೀಶಂಕರಶಿಖರವು ಪ್ರಪಂಚದಲ್ಲೇ ಅತ್ಯಂತ ಎತ್ತರವಾದುದಷ್ಟೆ! ಅಲ್ಲಿ ಪರಮೇಶ್ವರನು ವಾಸಿಸುತ್ತಾನೆಂದು ಪುರಾಣ ಪ್ರಸಿದ್ಧಿಯಿದೆ ಭಕ್ತರುಗಳಿಗೆ ತನ್ನ ವಿಶೇಷಮಹಿಮಾಯುಕ್ತವಾದ ಕೈಲಾಸದಲ್ಲಿ ಶಿವನು ದರ್ಶನವನ್ನು ಕೊಡುತ್ತಾನೆ ಹೀಗೆ ಗಿರಿಶನೆಂದು ಇಲ್ಲಿ ಸ್ತುತಿಸಲ್ಪಟ್ಟಿರುವನು ಶಿಪಿವಿಷ್ಟನೆಂದರೆ ವಿಷ್ಣುವು ವಿಷ್ಣುಸಹಸ್ರನಾಮದ 273ನೆಯ ನಾಮವನ್ನು ನೋಡಿರಿ ಶಿಪಿಗಳೆಂದರೆ ಪಶುಗಳು ಅವುಗಳಲ್ಲಿ ಯಜ್ಞರೂಪದಿಂದ ಇದ್ದುಕೊಂಡಿರುವನಾದ್ದರಿಂದ ಶಿಪಿವಿಷ್ಟನೆಂದರೆ ವಿಷ್ಣವೆಂದರ್ಥ ಇದಕ್ಕೆ ತೈತ್ತಿರೀಯಸಂಹಿತೆಯ 'ಯಜ್ಞೋ ವೈ ವಿಷ್ಣುಃ ಪಶವಃ ಶಿಪಿಃ ಯಜ್ಞ ಏವ ಪಶುಷು ಪ್ರತಿಷ್ಠತಿ' ಎಂಬ ವಾಕ್ಯವು ಪ್ರಮಾಣವಾಗಿದೆ ಹೀಗೆ ವಿಷ್ಣುರೂಪನಾಗಿರುವವನೂ ಶಿವನೇ ಎಂದರ್ಥ ಮೀಢುಷ್ಟಮ ಅತಿಶಯದಿಂದ ವೀರ್ಯವನ್ನು ಚೆಲ್ಲುವವನು ಎಂದರ್ಥ ಸೃಷ್ಟಿಕಾಲದಲ್ಲಿ ಹಿರಣ್ಯಗರ್ಭ ಬ್ರಹ್ಮನ ರೂಪದಿಂದ ಎಲ್ಲಾ ಪ್ರಾಣಿಗಳನ್ನೂ ಉಂಟುಮಾಡುವವನು ಎಂದು ಅಭಿಪ್ರಾಯ ಹಿರಣ್ಯಗರ್ಭನೂ ಶಿವನೇ ಎಂದು ವೇದದಲ್ಲಿ ಸ್ತುತಿಸಿದೆ 'ಸ ಬ್ರಹ್ಮಸ ಶಿವಃ ಸ ಹರಿಃ' ಎಂಬ ಉಪನಿಷತ್ತಿನ ಭಾಗವನ್ನು ನೋಡಿರಿ ಪ್ರಶಸ್ತವಾದ ಬಾಣಗಳು ಉಳ್ಳವನು ಇಷುಮಂತನು ತ್ರಿಪುರಸಂಹಾರಕಾಲದಲ್ಲಿ ವಿಷ್ಣುವನ್ನೇ ಬಾಣವಾಗಿ ಮಾಡಿಕೊಂಡು ಪರಮೇಶ್ವರನು ಅಸುರಸಂಹಾರವನ್ನು ಮಾಡಿದನು ಇದರಿಂದ ಉಳಿದ ಎಲ್ಲಾ ದೇವತೆಗಳೂ ಪರಮೇಶ್ವರನ ಅಧೀನರೆಂದೇ ತಿಳಿಸಿದಂತೆ ಆಗಿದೆ 'ಇಡಿಯ ಜಗತ್ತೇ ಪರಮೇಶ್ವರನಿಗೆ ಸರಿಸಮಾನವಾಗಲಾರದು ಅದಕ್ಕೂ ಅಧಿಕನಾದ ಮಹರ್ಷಿಯು ಅವನು' ಎಂದು ಶ್ರುತಿಯಲ್ಲಿಸ್ತುತಿಸಿದೆ.

    ಹ್ರಸ್ವನೆಂದರೆ ಅಲ್ಪಪ್ರಮಾಣದವನೆಂದರ್ಥ ಪರಮೇಶ್ವರನು ದಹರಾಕಾಶದಲ್ಲಿ ಉಪಾಸ್ಯನಾಗಿರುವದರಿಂದ ಅಲ್ಪಪ್ರಮಾಣನಾಗಿರುವಂತೆ ಕಂಡುಬರುತ್ತಾನೆ ಆದರೆ ಅದು ಉಪಾಧಿಯ ನಿಮಿತ್ತವಾದದ್ದು ಸರ್ವವ್ಯಾಪಿಯಾದ ಆತನು ಚಿಕ್ಕದಾಗಿ ತೋರಿಕೊಂಡಮಾತ್ರದಿಂದ ಚಿಕ್ಕವನೆಂದೇ ಆಗುವದಿಲ್ಲ ಇನ್ನು ಚಿಕ್ಕಚಿಕ್ಕ ಪದಾರ್ಥಗಳ ರೂಪದಲ್ಲಿಯೂ ಕಂಡುಬರುವವನು ಪರಮೇಶ್ವರನೇ ಎಂದೂ ಭಾವಿಸಬಹುದಾಗಿದೆ ವಿಸ್ತಾರವಾದ ಆಕಾಶದಲ್ಲಿ ಸೂರ್ಯನು ಒಂದು ಹಪ್ಪಳದಂತೆ ಕಂಡುಬಂದರೂ ಅವನ ತೇಜಸ್ಸಿನ ವ್ಯಾಪ್ತಿಯು ಮಾತ್ರ ಎಲ್ಲೆಲ್ಲಿಯೂ ಹರಡಿರುವಂತೆಯೇ ಪರಮೇಶ್ವರನೂ ಉಪಾಧಿಗಳಿಂದ ಹ್ರಸ್ವನಾಗಿ ತೋರಿದರೂ ಅವನ ಮಹತ್ತ್ವಕ್ಕೇನೂ ಕೊರತೆಯಾಗಲಾರದು ಎಂದರ್ಥ ವಾಮನನೆಂದರೆ ಸಂಕುಚಿತವಾದ ಅವಯವಗಳುಳ್ಳವನು ಭಗವಂತನು ಸಮಯಾನುಸಾರ ಯಾವ ರೀತಿಯಿಂದಲಾದರೂ ತೋರಿಕೊಳ್ಳಬಹುದಾಗಿದೆ ವಾಮನರೂಪದಿಂದ ಬಲಿರಾಜನನ್ನು ಅನುಗ್ರಹಿಸಿದ್ದು ಪುರಾಣಪ್ರಸಿದ್ದವಾಗಿದೆ 'ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬ ಗಾದೆಯೂ ಇದರಿಂದಲೇ ಹುಟ್ಟಿರುತ್ತದೆಯಲ್ಲವೆ? ಇನ್ನು ಗಣಪತಿಯ ಆಕಾರವನ್ನು ನೋಡಿದರೂ ಅವಯವಗಳು ಎಂದರೆ ಕೈಕಾಲುಗಳು ಸಂಕುಚಿತವೇ ಆಗಿವೆ ಹೊಟ್ಟೆಯು ಮಾತ್ರವೇ ದೊಡ್ಡದು ಆದ್ದರಿಂದ ವಾಮನರೂಪನಾದ ಗಣಪತಿಯನ್ನು ಪರಮೇಶ್ವರನ ಅವತಾರವೆಂದು ಹೇಳಬಹುದಾಗಿದೆ ಆದರೆ ಉಪನಿಷತ್ತುಗಳಲ್ಲಿ ವಾಮನನೆಂದರೆ ವನನೀಯನು ಎಲ್ಲರಿಂದಲೂ ಭಜಿಸಲ್ಪಡುವವನು ವಾಮಾನಿ ನಯತಿ ಎಲ್ಲರ ಕಾಮಗಳನ್ನೂ ಪೂರೈಸುವವನು ಎಂಬರ್ಥದಲ್ಲಿಯೂ ವಾಮನನೆಂದು ಪರಮೇಶ್ವರನನ್ನು ಹೆಸರಿಸಲಾಗಿದೆ ಇದೂ ಸಮಂಜಸವಾಗಿಯೇ ಇದೆ ಸುಂದರಮೂರ್ತಿ (ವಾಮದೇವ) ಎಂಬರ್ಥದಲ್ಲಿಯೂ ವಾಮನನೆಂದು ಕರೆಯಬಹುದು ಅಂತೂ ವಾಮನರೂಪಿಯಾದ ಪರಮೇಶ್ವರನಿಗೆ ನಮಸ್ಕಾರವು - ಎಂದರ್ಥ.

    ಬೃಹತ್ ಎಂದರೆ ದೊಡ್ಡದು ದೇಶಕಾಲವಸ್ತುಗಳ ಪರಿಚ್ಛೇದವಿಲ್ಲದ ಅಖಂಡವಾದ ಪರಬ್ರಹ್ಮವು ಎಂದರ್ಥ ಬೃಹತ್ವಾತ್ ಬೃಂಹಣತ್ವಾಚ್ಚ ಎಂಬ ವ್ಯುತ್ಪತ್ತಿಯಂತೆ ಎಲ್ಲಕಿಂತಲೂ ಮಿಗಿಲಾದುದೂ ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿರುವದೂ ಆಗಿರುವದೇ ಬ್ರಹ್ಮವು ಬ್ರಹ್ಮವೆಂದರೆ ಬೃಹತ್ತು ಪರಮೇಶ್ವರನೇ ಬೃಹತ್ತೆಂಬ ಬ್ರಹ್ಮವು ಎಂದು ಇಲ್ಲಿ ಹೊಗಳಿದೆ ವರ್ಷಿಯಾನ್ ಎಂದರೆ ಗುಣಗಳಿಂದ ಪರಿಪೂರ್ಣನಾದವನು ಸತ್ಯಕಾಮನು, ಸತ್ಯಸಂಕಲ್ಪನು, ಪರಮೇಶ್ವರನು ಎಂದು ಶ್ರುತಿಯಲ್ಲಿ ಹೊಗಳಿವೆ ಇಂಥ ಮಹಿಮಾಯುಕ್ತನು ಎಂದರ್ಥ ವೃದ್ಧನೆಂದರೆ ವಯಸ್ಸಿನಲ್ಲಿ ಎಲ್ಲರಿಗಿಂತಲೂ ದೊಡ್ಡವನೆಂದು ಸಾಮಾನ್ಯಾರ್ಥ ಪರಮೇಶ್ವರನು ಅಜನಾಗಿರುವದರಿಂದ ಅವನಿಗೆ ಆಯುಷ್ಯಪ್ರಮಾಣದ ಪರಿಮಿತಿಯೇನೂ ಇರುವದಿಲ್ಲ ಆದುದರಿಂದ ಆತನು ಎಲ್ಲರಿಗೂ ಹಿರಿಯನೇ ಎಂಬುದು ಸ್ವತಃಸಿದ್ಧವಾಯಿತು ಇನ್ನು ಜ್ಞಾನದಲ್ಲಿಯೂ ಧರ್ಮದಲ್ಲಿಯೂ ಐಶ್ವರ್ಯದಲ್ಲಿಯೂ ವೈರಾಗ್ಯಾದಿಗಳಲ್ಲಿಯೂ ಕೂಡ ಅತನಿಗಿಂತ ಮಿಗಿಲಾದವರು ಯಾರು ಇರುವದಿಲ್ಲ ಆದ್ದರಿಂದ ಎಲ್ಲರೂ ಆತನಿಗೆ ನಮಸ್ಕಾರಮಾಡಬೆಕೆಂದಾಯಿತು ಶ್ರುತಿಯೂ 'ಯಸ್ಮೈನಮಃತಚ್ಛಿರಃ' ಎಂದು ಭಗವಂತನನ್ನು ಸ್ತೋತ್ರಮಾಡಿದೆ ಹೀಗೆ ಎಲ್ಲಾ ರೀತಿಯಿಂದಲೂ ವೃದ್ಧನು ಆತನು ಸಂವೃಧ್ವನೆಂದರೆ ಸಮ್ಯಕ್ ಅಸಾಧಾರಣವಾಗಿ ವರ್ಧಿತಃ ಬೆಳೆಯಿಸಲ್ಪಟ್ಟವನು ಎಂದರೆ ಸ್ತುತಿಗಳಿಂದ ಮೇಲಕ್ಕೆ ಏರಿಸಲ್ಪಟ್ಟವನು ಎಂದರ್ಥ ಎಲ್ಲಾ ಶ್ರುತಿಗಳಿಂದಲೂ ಸ್ಮೃತಿಗಳಿಂದಲೂ ಹೊಗಳಲ್ಪಡುವವನು ಹೆಚ್ಚಾಗಿ ಪರಮೇಶ್ವರನೇ ಆಗಿರುತ್ತಾನೆ ಹದಿನೆಂಟು ಪುರಾಣಗಳಲ್ಲಿ ಹತ್ತು ಪುರಾಣಗಳು ಈಶ್ವರನನ್ನೇ ಸ್ತೋತ್ರಮಾಡುತ್ತಿವೆ ಇಂಥ ಸ್ತೋತ್ರಾರ್ಹನಾದ ಸಂವೃಧ್ವನು ಪರಮೇಶ್ವರನು ಎಂದರ್ಥ.

    ಅಗ್ರಿಯನೆಂದರೆ ಅಗ್ರೇ - ಜಗತ್ತು ಹುಟ್ಟುವದಕ್ಕಿಂತ ಮುಂಚೆಯೇ - ಇದ್ದುಕೊಂಡಿರುವವನು ಅಗ್ರಿಯನು ಪರಮೇಶ್ವರನು ಜಗತ್ತಿಗೇ ಕಾರಣನಾಗಿರುವದರಿಂದ ಆತನು ಅದು ಹುಟ್ಟುವ ಪೂರ್ವದಲ್ಲಿಯೇ ಇದ್ದುಕೊಂಡಿರುವನು ಆದ್ದರಿಂದಲೇ ಪ್ರಥಮನೂ ಆಗಿದ್ದಾನೆ ಹಿರಣ್ಯಗರ್ಭನನ್ನೂ ಪ್ರಥಮನೆನ್ನುವರು ಆಗ್ಗೆ ಪರಮೇಶ್ವರನನ್ನು ಪ್ರಪ್ರಥಮನೆನ್ನಬೇಕಾಗುವದು ಏಕೆಂದರೆ ಹಿರಣ್ಯಗರ್ಭನ್ನು ಉಂಟುಮಾಡಿರುವವನೇ ಈತನು ಆಶುವೆಂದರೆ ವ್ಯಾಪಕನು ಜಗತ್ತನ್ನೆಲ್ಲ ವ್ಯಾಪಿಸಿರುವವನಾದ್ದರಿಂದ ಈ ಹೆಸರು ಬಂದಿದೆ ಅಜಿರನೆಂದರೆ ಗಮನಕುಶಲನೆಂದರ್ಥ ಈತನು ಎಲ್ಲಾ ವಸ್ತುಗಳಲ್ಲಿಯೂ ತಾನು ಇದ್ದುಕೊಂಡಿರುವವನಾಗಿ ಮೊದಲು ವ್ಯಾಪಿಸಿಬಿಟ್ಟಿರುವವನಾಗಿದ್ದಾನೆ ಶ್ರುತಿಯೂ ಕೂಡ 'ಯಾವ ರುದ್ರನು ಅಗ್ನಿಯಲ್ಲಿಯೂ ನೀರಿನಲ್ಲಿಯೂ ಸಸ್ಯಗಳಲ್ಲಿಯೂ ಇಡಿಯ ಬ್ರಹ್ಮಾಂಡದಲ್ಲಿಯೂ ಪ್ರವೇಶಿಸಿಬಿಟ್ಟಿರುವನೋ ಅವನಿಗೆ ನಮಸ್ಕಾರ' ಎಂದು ಹೇಳುತ್ತಿದೆ.
   
    ಇನ್ನು ಶೀಘ್ರಿಯನೆಂದರೆ ವೇಗವಾಗಿ ಹರಿಯುವ ನೀರಿನಲ್ಲಿರುವವನು ಎಂದರ್ಥ ನದಿಗಳನ್ನು ನೋಡಿದಾಗ ಈ ಮಹಿಮೆಯನ್ನು ನೆನಪುಮಾಡಿಕೊಳ್ಳ ಬಹುದು ಕೆಲವು ಕಡೆಗಳಲ್ಲಿಯಂತೂ ನದಿಗಳು ತುಂಬ ಸೆಳವಿನಿಂದ ಶೀಘ್ರವಾಗಿ ಹರಿಯುತ್ತಿರುತ್ತವೆ ತಗ್ಗಾದ ಪ್ರದೇಶಗಳಲ್ಲಿ ಕೆಳಕ್ಕೆ ಬೀಳುವಾಗ ಜಲಪಾತಗಳ ರೂಪದಿಂದ ಮನಸ್ಸಿಗೆ ಆಹ್ಲಾದವನ್ನುಂಟುಮಾಡುವವು ಅವೆಲ್ಲ ಮಹಾದೇವನ ವಿಭೂತಿಗಳೇ ಎಂದಭಿಪ್ರಾಯ ಎಷ್ಟೋ ಜನರು ಜಲಪಾತಗಳ ಸೊಬಗನ್ನು ನೋಡಿ ಸವಿಯಲು ಹೋಗುವದುಂಟು ಅಂಥವರು ಒಮ್ಮೆ ಇದು ಪರಮೇಶ್ವರನ ವಿಭೂತಿಯೆಂದು ಜ್ಞಾಪಿಸಿಕೊಳ್ಳಬೇಕು ಶೀಭ್ಯನೆಂದರೂ ಉದಕಪ್ರವಾಹದಲ್ಲಿರುವವನು ಎಂದೇ ಅರ್ಥ ಶೀಭವೆಂದರೆ ನೀರು ನೀರೆಂಬುದು ಪ್ರವಾಹರೂಪವಾಗಿ ಹರಿದಾಗ ಭಯಂಕರವಾಗಿರುವದು ಅದು ಎಷ್ಟೋ ವೇಳೆ ಊರುಗಳನ್ನೂ ಮನೆಮಠಗಳನ್ನೂ ನೆಲಸಮಮಾಡುತ್ತದೆ ಇಂಥ ರೌದ್ರಪ್ರಕೃತಿಯು ಪರಮೇಶ್ವರನಲ್ಲದೆ ಮತ್ತೇನಾಗಲು ಸಾಧ್ಯ?
   
    ಊರ್ಮ್ಯನೆಂದರೆ ಅಲೆಗಳಲ್ಲಿರುವವನು ಎಂದರ್ಥ ಸಮುದ್ರದಲ್ಲಿ ಏಳುತ್ತಿರುವ ಅಲೆಗಳನ್ನು ದೂರದಿಂದ ನೋಡಿದಾಗ ರಮ್ಯವಾಗಿರುವವು; ಆದರೆ ಸಮುದ್ರವು ಕುಪಿತವಾದಾಗ ಅದರ ಎಷ್ಟೋ ಅಲೆಗಳು ವಿನಾಶವನ್ನೇ ಮಾಡಿಬಿಡುವವು ಹೀಗೆ ಅಲೆಗಳ ರೂಪದಿಂದ ಭಯವನ್ನೂ ಸಂತೋಷವನ್ನೂ ಉಂಟುಮಾಡುವವನು ಪರಮೇಶ್ವರನೇ ಎಂದಭಿಪ್ರಾಯ ಅವಸ್ವನ್ಯನೂ ಪರಮೇಶ್ವರನೇ ಶಬ್ದವಿಲ್ಲದ ನೀರಿನಲ್ಲಿರುವವನು ಎಂದರ್ಥ ದಡದಲ್ಲಿ ಸಮುದ್ರವು ಚಂಚಲವಾಗಿದ್ದರೂ ನಡುಭಾಗಕ್ಕೆ ಹೋದಾಗ ಶಾಂತವಾಗಿರುವದು ಆಳವಾಗಿದ್ದಷ್‌ಟೂ ಗಾಂಭೀರ್ಯವು ಹೆಚ್ಚು ನಿಶ್ಯಬ್ದವಾಗಿಯೂ ಇರುತ್ತದೆ ಶ್ರೀರಾಮನನ್ನು ಗಾಂಭೀರ್ಯದಲ್ಲಿ ಸಮುದ್ರಕ್ಕೆ ಸಮಾನನೆಂದು ರಾಮಾಯಣದಲ್ಲಿ ಹೋಲಿಸಿದೆ ಹೀಗೆ ಶಾಂತವಾದ ಜಲರೂಪದಿಂದ ಪರಮೇಶ್ವರನು ಅವಸ್ವನ್ಯನಾಗಿ ತೋರುತ್ತಿರುವನು ಎಂದಭಿಪ್ರಾಯ.

    ಸ್ರೋತಸ್ಯನೆಂದರೆ ಪ್ರವಾಹದಲ್ಲಿರುವವನು ಎಂದೇ ಅರ್ಥ ನೀರಿನ ಸ್ವಭಾವವೇ ಹರಿಯುವಿಕೆ ಹಾಗೆ ಹರಿಯದೆ ನಿಂತರೆ ಅದು ಕಲ್ಮಷಯುಕ್ತವೂ ಆಗುತ್ತದೆ ಆದ್ದರಿಂದಲೇ ಕೆರೆಯ ನೀರಿಗಿಂತಲೂ ನದಿಯ ನೀರು ಅರೋಗ್ಯಕರವು ಈ ನೀರನ್ನು ಬೇಕಾದಕಡೆಗೆ ಹರಿಯಿಸುವಂಥ ಯೋಜನಗಳೂ ದೇಶದಲ್ಲಿ ಬೇಕಾದಷ್ಟಿವೆ ಹರಿಯುವ ಸ್ವಭಾವವು ನೀರಿಗೆ ಇಲ್ಲದೆ ಹೋಗಿದ್ದರೆ ಮನುಷ್ಯರಾಗಲಿ ಸಸ್ಯಗಳಾಗಲಿ ಬದುಕುತ್ತಲೇ ಇರಲಿಲ್ಲ ಆದ್ದರಿಂದ ಹರಿಯುವ ನೀರನ್ನು ನಾವು ಎಷ್ಟೇ ಸಣ್ಣ ಪ್ರಮಾಣದಲ್ಲಿ ಕಂಡಾಗಲೂ ಕಾಲುವೆ ಉಪಕಾಲುವೆಗಳಲ್ಲಿ ನೋಡಿದಾಗಲೂ ಸ್ರೋತಸ್ಯರೂಪನಾದ ಪರಮೇಶ್ವರನ ವಿಭೂತಿಯೇ ಇದು ಎಂದು ಚಿಂತಿಸಬಹುದಾಗಿದೆ ದ್ವೀಪ್ಯನೆಂದರೆ ದ್ವೀಪದಲ್ಲಿರುವವನು ಸುತ್ತಲೂ ನೀರಿನಿಂದ ಅವೃತವಾಗಿರುವ ಭೂಮಿಯನ್ನು ದ್ವೀಪವೆನ್ನುವರು ಈ ಭರತಖಂಡವನ್ನು ಪುರಾಣಗಳಲ್ಲಿ ಜಂಜೂದ್ವೀಪವೆಂದೇ ಕರೆಯಲಾಗಿದೆ ಇಡಿಯ ಭೂಮಿಯಲ್ಲಿ ಸಪ್ತದ್ವೀಪಗಳಿವೆಯೆಂದೂ ಪೌರಾಣಿಕ ಪ್ರಸಿದ್ಧಿಯಿದೆ ಪ್ರತಿಯೊಂದು ದ್ವೀಪದಲ್ಲಿಯೂ ಬೇರೆಬೇರೆಯ ಹೆಸರಿನಿಂದ ಭಗವಂತನು ಆಯಾ ದ್ವೀಪವಾಸಿಗಳಿಂದ ಆರಾಧಿಸಲ್ಪಡುತ್ತಾನೆಂದು ಭಾಗವತದಲ್ಲಿ ಶುಕರು ತಿಳಿಸಿರುತ್ತಾರೆ ಹೀಗೆ ಪರಮೇಶ್ವರನು ಎಲ್ಲೆಲ್ಲಿ ನೋಡಿದರೂ ಎಲ್ಲಾ ಸ್ಥಾವರಜಂಗಮಗಳ ರೂಪದಿಂದಲೂ ಪ್ರತಿಕ್ಷಣವೂ ನಮಗೆ ಕಣ್ಣಿಗೆ ಬೀಳುತ್ತಲೇ ಇದಾನೆ ಆದ್ದರಿಂದ ನಾವು ಕೃತಕಜೀವನದಿಂದ ಸ್ವಲ್ಪವಾದರೂ ಹಿಂದಿರುಗಿ ಪ್ರಕೃತಿಯೊಡನೆ ಬೆರೆತಕೂಡಲೆ ನಾನಾರೂಪಗಳಲ್ಲಿರುವ ಪರಮೇಶ್ವರನ ದರ್ಶನವು ಆಗಿಯೇತೀರುವದು. ಈ ಅರ್ಥದಲ್ಲಿ ನಮಗಿಂತಲೂ ಋಷಿಗಳೇ ನಿಜವಾದ ನಾಗರಿಕರೆಂದರೆ ತಪ್ಪಾಗಲಾರದು.

Comments

  1. ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು.

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ