ಗೋದಾಸ್ತುತಿಃ (ಸಂಗ್ರಹ) - 15

ಆಮೋದವತ್ಯಪಿ ಸದಾ ಹೃದಯಂಗಮಾಪಿ
ರಾಗಾನ್ವಿತಾಃಪಿ ಲಲಿತಾಃಪಿ ಗುಣೋತ್ತರಾಃಪಿ |
ಮೌಳಿಸ್ರಜಾ ತವ ಮುಕುಂದಕಿರೀಟಭಾಜಾ
ಗೋದೇ ಭವತ್ಯಧರಿತಾ ಖಲು ವೈಜಯಂತೀ ||15||

ಗೋದೇ = ಎಲೈ! ಗೋದಾದೇವಿಯೇ!,
ಸದಾ = ಎಲ್ಲ ಕಾಲದಲ್ಲಿಯೂ
ಆವೋದವತ್ಯಪಿ = ಪರಿಪೂರ್ಣವಾದ ಪರಿಮಳದಿಂದ ಕೂಡಿದ್ದರೂ,
ಹೃದಯಂಗಮಾಃಪಿ = ಮನಸ್ಸನ್ನು ತಣಿಸುವಂತಿದ್ದರೂ,
ರಾಗಾಃನ್ವಿತಾಃಪಿ = ಭಗವಂತನಲ್ಲಿ ಅನುರಾಗದಿಂದ ಕೂಡಿದ್ದರೂ (ಕೆಂಪುವರ್ಣದಿಂದ ಶೋಭಿತವಾಗಿದ್ದರೂ )
ಲಲಿತಾಃಪಿ = ಕೋಮಲವಾಗಿದ್ದರೂ,
ಗುಣೋತ್ತರಾಃಪಿ = ಮಾಲಿಕೆಯಲ್ಲಿರಬೇಕಾದ ಎಲ್ಲ ವಿಧವಾದ ಗುಣಗಳಿಂದ ಕೂಡಿದ ಮೇಲ್ಮೈ ಯುಳ್ಳದುದಾಗಿದ್ದರೂ,
ವೈಜಯಂತಿ = ಭಗವಂತನ ವಕ್ಷಸ್ಥಳದಲ್ಲಿರುವ 'ವೈಜಯಂತಿ' ಮಾತೆಯಾದರೋ,
ಮುಕುಂದ ಕಿರೀಟಭಾಜಾ = ಶ್ರೀಕೃಷ್ಣನ ಕಿರೀಟದಲ್ಲಿ ಪ್ರಕಾಶಿಸುತ್ತಿರುವ,
ತವ = ನಿನ್ನ,
ಮೌಳಿಸ್ರಜಾ = ಮುಡಿದಲ್ಲಿ ಮುಡಿದುಕೊಟ್ಟ ಮಾಲಿಕೆಯಿಂದ,
ಆಧಾರಿತಾ = ತಿರಸ್ಕೃತವಾದುದಾಗಿ,
ಭವತಿಖಲು = ಇರುವುದಲ್ಲವೇ

    ಎಲೈ! ಗೋದಾದೇವಿಯೇ, ಎಲ್ಲ ಕಾಲದಲ್ಲಿಯೂ ಪರಿಪೂರ್ಣವಾದ ಪರಿಮಳದಿಂದ ಕೂಡಿ, ಮನಸ್ಸನ್ನು ತಣಿಸುವಂತಿದ್ದರೂ, ಭಗವಂತನಲ್ಲಿ ಅನುರಾಗದಿಂದ ಕೂಡಿ (ಕೆಂಪುವರ್ಣದಿಂದ ಶೋಭಿತವಾಗಿ) ಕೋಮಲವಾಗಿದ್ದು, ಮಾಲಿಕೆಯಲ್ಲಿರಬೇಕಾದ ಎಲ್ಲ ವಿಧವಾದ ಗುಣಗಳಿಂದಲೂ ಕೂಡಿದ ಮೇಲ್ಮೈಯುಳ್ಳದುದಾಗಿದ್ದರೂ, ಬಹಳ ಕಾಲದಿಂದ ಭಗವಂತನಿಂದ ವಕ್ಷಸ್ಥಲದಲ್ಲಿ ಧರಿಸಲ್ಪಟ್ಟ 'ವೈಜಯಂತಿ' ಮಾಲಿಕೆಯಾದರೋ, ಶ್ರೀಕೃಷ್ಣನ ಕಿರೀಟದಲ್ಲಿ ಪ್ರಕಾಶಿಸುತ್ತಿರುವ, ನಿನ್ನ ಮುಡಿಯಲ್ಲಿ ನೀನು ಮುಡಿದುಕೊಟ್ಟ ಮಾಲಿಕೆಗಳಿಂದ ತಿರಸ್ಕೃತವಾದುದಾಗಿ ಇರುವುದಲ್ಲವೇ !

    ಸ್ವತಃ ಸರ್ವರಸನೂ, ಸರ್ವಗಂಧನೂ ಆದ ಪರಮಾತ್ಮನು, ಎಲ್ಲ ವಿಧವಾದ ಪರಿಮಳವೇ ಮೊದಲಾದ ಗುಣಗಳಿಂದ ಕೂಡಿದ 'ವೈಜಯಂತೀ' ಮಾಲೆಯನ್ನು ಧರಿಸಿದ್ದರೂ, 'ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ' - ಎಂದು ಭಗವದ್ಗೀತೆಯಲ್ಲಿ ತಾನೇ ಹೇಳಿರುವಂತೆ, ಗೋದೆಯ ಅವತಾರ ಕಾಲದಲ್ಲಿ ಮುಗ್ದವಾದ ಭಕ್ತಿಯಿಂದ ಆಕೆ ಮುಡಿದು ಕೊಟ್ಟ ಪುಷ್ಪವೇ ತನಗೆ ಭೋಗ್ಯವಾದುದೆಂದು ಪೆರಿಯಾಳ್ವಾರವರಿಗೆ ಹೇಳಿ, ಆ ಪುಷ್ಪಮಾಲಿಕೆಗಳನ್ನು ತರಿಸಿಕೊಂಡು ತನ್ನ ಮುಡಿಯಲ್ಲಿ ಧರಿಸಿ ತನ್ನ ಸಂತೋಕ್ಕೆ ಪಾರವೇ ಇಲ್ಲದೆ, ಮೊದಲಿಗಿಂತಲೂ ವಿಶೇಷವಾದ ಕಾಂತಿಯಿಂದ ಕೂಡಿದವನಾಗಿ, ಆಳ್ವಾರರಿಗೆ ದರ್ಶನವಿತ್ತು, ಗೋದೆಗೆ 'ಶೂಡಿಕ್ಕೂಡುತ್ತ ನಾಚ್ಚಿಯಾರ್' ತಾನು ಮುಡಿದುಕೊಟ್ಟ ತಾಯಿ' ಎಂಬ ಹೆಸರು ಬರುವಂತೆ ಮಾಡಿದನು - ಎಂಬ ವೃತ್ತಾಂತವನ್ನು ಸ್ಮರಿಸಿಕೊಂಡು ಆಚಾರ್ಯರು ಈ ಶ್ಲೋಕವನ್ನು ಹಾಡಿದ್ದಾರೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ