ಪರಿಷೇಚನ - ಉತ್ತರಾಪೋಶನ

    ಪರಿಷೇಚನ- ಎಂದರೆ ನೀರಿನಿಂದ ಸುತ್ತುಗಟ್ಟುವದು-ಎಂದರ್ಥ. ನಾವು ತೆಗೆದುಕೊಳ್ಳುವ ಆಹಾರವನ್ನೆಲ್ಲ ಒಳಗಿರುವ ಜಠರಾಗ್ನಿಗೆ ಆಹುತಿಯೆಂತ ಭಾವಿಸಬೇಕು. ಈ ಅಭಿಪ್ರಾಯದಲ್ಲಿ ಊಟವೂ ಒಂದು ಯಜ್ಞವಾಗಿದೆ. ವೈದಿಕಕರ್ಮಗಳಲ್ಲಿ ಅಗ್ನಿಗೆ ಅಹುತಿಯನ್ನರ್ಪಿಸುವ ಮುಂಚೆ ಹೇಗೆ ಪರಿಷೇಚನ ಮಾಡುವರೋ ಹಾಗೆಯೇ ಇಲ್ಲಿಯೂ ಜಠರಾಗ್ನಿಯಲ್ಲಿ ಹೋಮಮಾಡುವ ಮುಂಚೆ ಕರ್ಮಾಂಗವಾದ ಪರಿಷೇಚನವನ್ನು ಮಾಡಬೇಕಾಗಿದೆ. ಈ ಪರಿಷೇಚನಕ್ಕೆ ಹಗಲು ಹಾಗೂ ರಾತ್ರಿಗಳಲ್ಲಿ ಬೇರೆಬೇರೆಯಾಗಿ ಉಪಯೋಗಿಸುವ ಮಂತ್ರಗಳ ಅರ್ಥವು ಹೀಗೆದೆ : "ಅಗ್ನಿಯನ್ನು ಋತ ಎಂದರೆ ಮಾನಸಿಕವಾದ ನಿಜವೆನ್ನುವರು. ಆದಿತ್ಯನು ಸತ್ಯ (ಬಾಯಲ್ಲಿ ಆಡುವ ನಿಜ)ನೆನಿಸುವನು. ನಿಜವನ್ನು ವಾಚಿಕವಾಗಿಯೂ ಮಾನಸಿಕವಾಗಿಯೂ ಒಂದರೊಡನೊಂದನ್ನು ಜೋಡಿಸಬೇಕು ಅದರ ಸಂಕೇತವಾಗಿ ಪರಿಷೇಚನೆಯನ್ನು ವಿಧಿಸಲಾಗಿದೆ. ಅಗ್ನಿ-ಆದಿತ್ಯರೆಂಬವರೇ ಈ ಪ್ರಪಂಚದ ಸಾರಭೂತರಾದ ದೇವತೆಗಳು. ಅನ್ನವು ಬೆಳೆಯುವದಕ್ಕೂ ಹೊಟ್ಟೆಯಲ್ಲಿ ಕರಗುವದಕ್ಕೂ ಇವರಿಬ್ಬರೂ ಕಾರಣರು. ಆದ್ದರಿಂದ ಇವರಿಬ್ಬರನ್ನೂ ಸೇಚನಮಾಡಿದರೆ ಎಂದರೆ ಹಗಲೂ ರಾತ್ರೆಯೂ ಜಲದಿಂದ ಸುತ್ತುಗಟ್ಟಿದರೆ ಅಷ್ಟುಕಾಲವೂ ಸಾಧಕನು(ರೈತನು) ದುಃಖವಿಲ್ಲದೆ, ಕಷ್ಟವಿಲ್ಲದೆ, ವಿಷಾದವಿಲ್ಲದೆ, ದೈನ್ಯವಿಲ್ಲದೆ ಬದುಕುವನು. ಹಾಗೂ ಕಡಿವಡೆಯದ ವಿಭವ (ಐಶ್ವರ್ಯ)ವುಳ್ಳವನಾಗಿ ಚಿರಕಾಲ ಬಾಳುವನು; ಈ ಜಠರಾಗ್ನಿ ಹೋತ್ರವನ್ನು ಈ ರೀತಿ ಅರಿತು ಮಾಡುವವನಿಗೆ ಇಂಥ ಫಲಗಳಾಗುವವು" ಎಂದು ತೈತ್ತಿರೀಯಬ್ರಾಹ್ಮಣದಲ್ಲಿ ಹೊಗಳಿದೆ ಆದ್ದರಿಂದ ಪರಿಷೇಚನವು ಅರ್ಥವತ್ತಾಗಿದೆ.

    ಈಗ ಅಪೋಶನವದ ವಿವರವನ್ನು ತಿಳಿಯೋಣ ನೀರನ್ನು ಕುಡಿಯುವದನ್ನು ಆಪೋಶನವೆನ್ನುವರು. ನಾವು ತಿನ್ನುವ ಅನ್ನವು ಅಮೃತವೆನಿಸಿರುವದು ಅದನ್ನು ಇಡುವಾಗ ಕೆಳಗೆ ಪೀಠವು ಬೇಕಾಗುವದು ಮೊದಲು ಕುಡಿಯುವ ನೀರು, ಅಮೃತ ರೂಪವಾದ ಅನ್ನಕ್ಕೆ ಉಪಸ್ತರಣ ಎಂದರೆ ಹಾಸಿರುವ ಆಸನವು (ರತ್ನಗಂಬಳಿಯಂತೆ) ಊಟವಾದ ಅನಂತರ ತೆಗೆದುಕೊಳ್ಳವ ಉತ್ತರಾಪೋಶನವು ಅನ್ನಕ್ಕೆ ಹೊದಿಕೆಯು ಎಂದರೆ ಅಪಿಧಾನ-ಮುಚ್ಚಳವೆಂದು ಕರೆಯಲ್ಪಡುವದು ಹೀಗೆ ತಿನ್ನುವ ಅನ್ನವು ಅಮೃತರೂಪವಾದ ಫಲವನ್ನುಂಟುಮಾಡಲು ಈ ಆಪೋಶನವು ವಿಧಿಸಲ್ಪಟ್ಟಿದೆ. ಲೌಕಿಕವಾಗಿಯೂ ನಾವು ಆಹಾರನಾಳವನ್ನಪಯೋಗಿಸುವಾಗ ಮೊದಲು ದ್ರವ ರೂಪವಾದ ಪದಾರ್ಥವನ್ನು ನುಂಗಿ ಅನಂತರ ಗಟ್ಟಿಯಾದದ್ದನ್ನು ತಿಂದರೆ ತೊಂದರೆಯಾಗುವದಿಲ್ಲ. ಈಗೀಗ ಮಂತ್ರ ಹೇಳದಿದ್ದರೂ ನೀರು ಕುಡಿಯುತ್ತಲೇ ಊಟಮಾಡುತ್ತಾರಲ್ಲವೆ? ನೀರಿನ ಪ್ರಾಶನವಿಲ್ಲದೆ ಆಹಾರವನ್ನು ಸ್ವಿಕರಿಸುವದಿಲ್ಲವಷ್ಟೆ? ಅದನ್ನೇ ಪೂರ್ವಿಕರು ಒಂದು ಕರ್ಮವಾಗಿ ಮಾರ್ಪಡಿಸಿದ್ದರು - ಎಂದು ತಿಳಿಯಬಹುದು.

    ಶಾಸ್ತ್ರನಿಯಮಗಳನ್ನು ಕಂದಾಚಾರದ ಪದ್ಧತಿಗಳೆಂತ ತೆಗೆದು ಹಾಕುವ ಮೊದಲು ಅವುಗಳ ಅರ್ಥವೇನೆಂಬುದನ್ನು ತಿಳಿಯುವದು ಅವಶ್ಯ.

Comments

  1. ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ