ರುದ್ರಭಾಷ್ಯಪ್ರಕಾಶ - 7ನೇ ಅನುವಾಕ (ಸಂಪೂರ್ಣ)

ನಮಃ ಸ್ರುತ್ಯಾಯ ಚ ಪಥ್ಯಾಯ ಚ
    ರುದ್ರಾಧ್ಯಾಯದ ಏಳನೆಯ ಅನುವಾಕದ ಉತ್ತರಭಾಗವನ್ನು ಈಗ ವಿಚಾರಮಾಡೋಣ :

ನಮಃ ಸ್ರುತ್ಯಾಯ ಚ ಪಥ್ಯಾಯ ಚ ನಮಃ
ಕಾಟ್ಯಾಯ ಚ ನೀಪ್ಯಾಯ ಚ ನಮಃ
ಸೂದ್ಯಾಯ ಚ ಸರಸ್ಯಾಯ ಚ ನೋ ನಾದ್ಯಾಯ ಚ ವೈಶಂತಾಯ ಚ ||

    'ಸ್ರುತ್ಯನೂ ಪಥ್ಯನೂ ಕಾಟ್ಯನೂ ನೀಪ್ಯನೂ ಸೂದ್ಯನೂ ಸರಸ್ಯನೂ ನಾದ್ಯನೂ ವೈಶಂತನೂ ಆಗಿರುವವನಿಗೆ ನಮಸ್ಕಾರ!'

    ಭಗವಂತನನ್ನು ಎಲ್ಲೆಲ್ಲಿಯೂ ಕಾಣುವ ದಿವ್ಯದೃಷ್ಟಿಯುಳ್ಳವರಿಗೆ ಇಡಿಯ ಬ್ರಹ್ಮಾಂಡದಲ್ಲಿ ಎಲ್ಲಾ ವಸ್ತುಗಳೂ ಆತನ ವಿಭೂತಿಗಳಾಗಿಯೇ ತೋರುವವು. ಈ ದೃಷ್ಟಿಯಿಂದ ಇಲ್ಲಿ ಈಶ್ವರನನ್ನು ಸ್ತುತಿಸಲಾಗಿದೆ. ಸ್ರುತ್ಯನೆಂದು ಹೊಗಳಿರುವದೂ ಒಂದು ವಿಭೂತಿಯೇ. ಹೀಗೆಯೇ ಮುಂದಿನ ಎಲ್ಲವನ್ನೂ ತಿಳಿಯಬೇಕು. ಸ್ರುತಿ - ಎಂದರೆ ದಾರಿ ಎಂದರ್ಥ. ಹೆಜ್ಜೆಯಿಂದ ಮಾತ್ರ ನಡೆಯಲು ಸಾಧ್ಯವಾದ ಕಾಲುದಾರಿಯನ್ನು ಸ್ರುತಿಯೆನ್ನುವರು. ಅದರಲ್ಲಿರುವವನೂ ಪರಮೇಶ್ವರನೇ - ಎಂದರ್ಥ. ಈಗಿನ ಕಾಲಕ್ಕೆ ದೊಡ್ಡ ದೊಡ್ಡ ನಗರಗಳಲ್ಲಿ ವಾಸಕ್ಕೆ ಸ್ಥಳವೇ ಸಿಗದೆ ಎಷ್ಟೋ ಜನ ದರಿದ್ರರು ಫುಟ್ ಪಾತ್ ಗಳಲ್ಲಿಯೇ ವಾಸಮಾಡುತ್ತಾರೆ. ಹಾಗೆಂದಮಾತ್ರಕ್ಕೆ ಅವರೇನು ಭಗವಂತನಿಗಿಂತ ಬೇರೆಯಲ್ಲ ಅಂಥ ಜನರಲ್ಲಿಯೂ ಭಗವಂತನೇ ಸ್ರುತ್ಯನಾಗಿ ಇದಾನೆ - ಎಂದು ಭಾವಿಸಬೇಕು. ಇನ್ನು ಎಷ್ಟೋ ಹಳ್ಳಿಗಳಿಗೆ ದೊಡ್ಡ ರಸ್ತೆಯೇ ಇರುವದಿಲ್ಲ. ಕಾಲುದಾರಿಯಲ್ಲೇ ನಡೆದೇ ಹೋಗಬೇಕು. ಇಂಥ ದುರ್ಗಮವಾದ ಕಡಿದಾದ ಚಿಕ್ಕಹಾದಿಗಳಲ್ಲಿಯೂ ಪರಮೇಶ್ವರನೇ ಇದಾನೆ. ಕಾಡಿನಲ್ಲಿ ದಾರಿತಪ್ಪಿದವನಿಗೆ ಒಂದು ಸಣ್ಣದಾರಿ ಕಣ್ಣಿಗೆ ಬಿದ್ದರೂ ಎಷ್ಟೋ ಸಂತೋಷವಾಗುತ್ತದೆ, ನೋಡಿರಿ! ಅದು ಪರಮೇಶ್ವರನ ವಿಭೂತಿಯಾದ್ದರಿಂದಲೇ ಆನಂದಕ್ಕೆ ಕಾರಣವಾಗಿದೆ. ಹಾಗೆಯೇ ಪಥವೆಂದರೆ ರಾಜಮಾರ್ಗಗಳು ಅವುಗಳಲ್ಲಿಯೂ ಭಗವಂತನೇ ಇದ್ದಾನೆ. ಅವನೇ ಪಥ್ಯನು ರಾಜಮಾರ್ಗಗಳಲ್ಲಿ ಸಂಚರಿಸುವವರನ್ನೆಲ್ಲ ಭಗವಂತನೆಂದೇ ಭಾವಿಸಲು ಇದರಿಂದ ಅನುಕೂಲವಾಗುವದು.

    ಕಾಟ್ಯವೆಂದರೆ ಸ್ವಲ್ಪವೇ ನೀರು ಇರುವ ಕಾಲುವೆ. ನೀಪ್ಯವೆಂದರೆ ನೀರು ಧುಮುಕುವ ಪ್ರದೇಶ. ಸೂದ್ಯವೆಂದರೆ ಕೆಸರಿನ ಪ್ರದೇಶವು, ಕೆರೆಯ ಅಂಗಳ ಇತ್ಯಾದಿ. ಸರಸ್ಸೆಂದರೆ ಸರೋವರವು. ಇವುಗಳಲ್ಲೆಲ್ಲ ಇರುವವನು ಪರಮೇಶ್ವರನು ಎಂದು ಸ್ತುತಿಸಿದೆ. ನೀರಿನ ಪ್ರದೇಶಗಳನ್ನು ನೋಡಿದಾಗಲೆಲ್ಲ ಅವು ಚಿಕ್ಕವೇ ಇರಲಿ, ದೊಡ್ಡವಾಗಿರಲಿ - ಭಗವಂತನ ಭಾವನೆಯು ಬರುವಂತೆ ತಿಳಿಸುವದಕ್ಕಾಗಿ ಹೀಗೆ ಸ್ತುತಿಸಿದೆ. ಸ್ವಲ್ಪ ನೀರು ಇರುವ ಜಾಗದಲ್ಲಿಯೂ ಜನರು, ಪ್ರಾಣಿಗಳು - ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವರು; ಮಿನು, ಕಪ್ಪೆ - ಮುಂತಾದ ಕ್ಷುದ್ರಜಲಚರಗಳು ಅಲ್ಲಿಯೂ ಇರುವವು. ದೊಡ್ಡದೊಡ್ಡ ನದಿ, ಸರೋವರಾದಿಗಳಲ್ಲಿ ಜನರು ಸ್ನಾನ, ತರ್ಪಣಾದಿಗಳನ್ನು ಮಾಡುವರು. ಅಡ್ಡಗಟ್ಟೆಗಳನ್ನು ಹಾಕಿ ಕಾಲುವೆಗಳನ್ನು ಹರಿಯಿಸಿ ಪೈರುಬೆಳೆಯುವರು. ಇವೆಲ್ಲ ಭಗವಂತನ ಅನುಗ್ರಹದಿಂದಲೇ ಸಾಧ್ಯವಾಗಿದೆ. ಆದ್ದರಿಂದ ಜಲಾನಯನ ಪ್ರದೇಶಗಳನ್ನು ಕಂಡಾಗ ಪರಮೇಶ್ವರನನ್ನು ನೆನೆಯಿಸಿಕೊಳ್ಳಲು ಈ ವರ್ಣನೆಯು ಸಹಕಾರಿಯಾಗಿದೆ. ನದಿಯಲ್ಲಿ ಅಭಿಮಾನಿ ದೇವತೆಯಾಗಿರುವವನು ನಾದ್ಯನು. ಚಿಕ್ಕಕೆರೆಯನ್ನು ವೇಶಂತವೆನ್ನುವರು ಆದರಲ್ಲಿರುವವನು ವೈಶಂತನು ನದಿಗಳಲ್ಲಿ ನೇರಾಗಿ ಸಮುದ್ರಕ್ಕೇ ಸೇರುವವುಗಳನ್ನು ಮಹಾನದಿಗಳೆನ್ನುವರು. ಗಂಗಾ, ಯಮುನಾ, ಗೋದಾವರಿ, ಕಾವೇರಿ, ಮುಂತಾದ ಪ್ರಸಿದ್ಧನದಿಗಳು ಸ್ಥಾವರರೂಪದಿಂದ ನಮ್ಮ ಕಣ್ಣಿಗೆ ಗೋಚರವಾಗಿಯೇ ಇವೆ. ಭಾವನೆಯಿಂದ ನೋಡಿದರೆ ಗಂಗೆಯೇ ಮುಂತಾದ ದೇವಿಯರು ಸ್ನಾನ, ಪಾನ, ಸ್ಮರಣಾದಿಗಳಿಂದ ನಮ್ಮ ಅಂತಃಕರಣವನ್ನು ಶುದ್ಧಿಗೊಳಿಸಿ ಭಕ್ತಿಮುಕ್ತಿಗಳನ್ನು ನೀಡುವವರಾಗಿದ್ದಾರೆ ಇಂಥ ಗಂಗೆಯನ್ನು ತಲೆಯಲ್ಲೇ ಧರಿಸಿರುವ ಪರಮೇಶ್ವರನ ವಿಭೂತಿಗಳೇ ಸಕಲನದೀದೇವತೆಗಳು ಎಂದರ್ಥ ಹೀಗೆ ನಾದ್ಯನಾಗಿರುವ ಭಗವಂತನ ಅನುಗ್ರಹವನ್ನು ಎಷ್ಟು ಸ್ತುತಿಸಿದರೂ ಕಡಿಮೆಯೇ ಎನ್ನಬಹುದು.

ನಮಃ ಕೂಪ್ಯಾಯ ಚಾವಟ್ಯಾಯ ಚ ನಮೋ ವರ್ಷ್ಯಾಯ ಚಾವರ್ಷ್ಯಾಯ ಚ ನಮೋ ಮೇಘ್ಯಾಯ ಚ ವಿದ್ಯುತ್ಯಾಯ ಚ ನಮ ಈಧ್ರಿಯಾಯ ಚಾತಪ್ಯಾಯ ಚ ||

    'ಕೂಪ್ಯನೂ ಅವಟ್ಯನೂ ವರ್ಷ್ಯನೂ ಅವರ್ಷ್ಯನೂ ಮೇಘ್ಯನೂ ವಿದ್ಯುತ್ಯನೂ ಈಧ್ರಿಯನೂ ಆತಪ್ಯನೂ ಆದವನಿಗೆ ನಮಸ್ಕಾರ!'

    ಈ ಭಾಗದಲ್ಲಿಯೂ ಜಲಸಂಬಂಧವಾದ ಪರಮೇಶ್ವರನ ವಿಭೂತಿಗಳನ್ನೇ ಹೊಗಳಿದೆ. ಇದರಿಂದ ತಿಳಿಯಬರುವದೇನೆಂದರೆ: ಜಗತ್ತಿನ ಪ್ರಾಣಿಗಳ ಪ್ರಾಣಧಾರಣೆಗೆ ನೆರವಾಗಿರುವ ನೀರೆಂಬುದನ್ನು ನಾವು ಎಷ್ಟು ಗೌರವದಿಂದಲೂ ಶ್ರದ್ಧೆಯಿಂದಲೂ ಕಾಣಬೇಕೆಂದು ಗೊತ್ತಾಗುತ್ತದೆ. ನೀರಿಲ್ಲದೆ ಸಸ್ಯಗಳಾಗಲಿ, ಪ್ರಾಣಿಗಳಾಗಲಿ ಬದುಕುವದು ಸಾಧ್ಯವೇ ಇಲ್ಲ ಆದ್ದರಿಂದ ಜಲರೂಪಿಯಾದ ರುದ್ರನ ನಾನಾ ಅವತಾರಗಳನ್ನು ಇಲ್ಲಿ ಸ್ತುತಿಸಲಾಗಿದೆ. ಕೂಪವೆಂದರೆ ಭಾವಿ, ಅದರಲ್ಲಿರುವವನು ಕೂಪ್ಯನು ಭಾವಿ ತೆಗೆಯುವದು ನಮ್ಮ ಕೆಲಸವಾದರೂ ನೀರು ಇರುವದು ಈಶ್ವರನ ದಯೆ ಅಲ್ಲವೆ? ಆದ್ದರಿಂದ ಕೂಪ್ಯನೆಂದು ಸ್ತುತಿಸಿದೆ ಅವಟವೆಂದರೆ ಗುಂಡಿ, ಅದರಲ್ಲಿಯೂ ನೀರಿನ ರೂಪದಿಂದಿರುವವನು ಅವಟ್ಯನು ಹಾಗೆಯೇ ವರ್ಷವೆಂದರೆ ಮಳೆ. ಆವರ್ಷವೆಂದರೆ ಮಳೆಯ ಅಭಾವ ಇವುಗಳನ್ನು ಪ್ರೇರಿಸುವವನು ಪರಮೇಶ್ವರನು ಎಂದರ್ಥ ಮಳೆಯು ಬಾರದಿರುವಾಗ ನಾವೇನೂ ಮಾಡಲಾರೆವು. ಆದರೆ "ಅದು ಪರಮೇಶ್ವರನ ಅಧೀನ; ಆದ್ದರಿಂದ ಅವನನ್ನು ಸಂತೋಗೊಳಿಸಿ ಮಳೆಯನ್ನು ಬರಮಾಡಿಕೊಳ್ಳಬೇಕು" - ಎಂದು ನಂಬಿರುವವರು ಮಾತ್ರ ವಿರಳ. ಭಗವಂತನ ಕೃಪೆಯಿಲ್ಲದೆ ಮಳೆಯು ಬರಲಾರದು - ಎಂದು ತಿಳಿಯಬೇಕು. ಮೇಘದಲ್ಲಿ, ಮೋಡಗಳಲ್ಲಿ ಇರುವವನು ಮೇಘ್ಯನು ವಿದ್ಯುತ್ತಿನಲ್ಲಿರುವವನು ವಿದ್ಯುತ್ಯನು ಮಳೆಯು ಮೋಡಗಳಿಂದಾಗುವದು. ಮೋಡಗಳ ಘರ್ಷಣೆಯಿಂದಲೇ ಮಿಂಚುಗುಡುಗುಗಳಾಗುವವು ಇವೆಲ್ಲ ಪ್ರಕೃತಿಯ ಧರ್ಮಗಳೇ ಆದರೂ ಒಂದೊಂದರಲ್ಲಿಯೂ ಪರಮೇಶ್ವರನ ವ್ಯಾಪಿಯಿದೆ. ಆತನೇ ಈ ಎಲ್ಲಾ ರೂಪಗಳಿಂದಲೂ ಜಗತ್ತನ್ನು ಕಾಪಾಡುತ್ತಿರುವನು ಈಗಿನ ಕಾಲದಲ್ಲಿ ವಿದ್ಯುತ್ತಿನ ಉಪಯೋಗವು ಸಾರ್ವತ್ರಿಕವಾಗಿದೆ. ಅದರ ಉತ್ಪತ್ತಿಯನ್ನೇ ಅವಲಂಬಿಸಿ ದೇಶವು ಮುಂದೆ ಸಾಗುತ್ತಿದೆ. ಆದರೆ ಅದೇಕೋ, ಜನರಿಗೆ ಈ ಮೋಡ, ಮಳೆ, ವಿದ್ಯುತ್ತ್ ಗಳು ಪರಮೇಶ್ವರನ ಮಹಿಮೆಯೆಂಬ ಭಾವನೆ ಬರುತ್ತಿಲ್ಲ ಕೊರತೆಯನ್ನು ಅನುಭವಿಸುತ್ತೇವಾದರೂ ಭಗವಂತನ ಚಿಂತನೆಯಿಂದ ಅದನ್ನು ಸರಿಪಡಿಸಿಕೊಳ್ಳಬೇಕೆಂಬುದು ನಮಗೆ ಇನ್ನೂ ಒಗ್ಗಿರುವದಿಲ್ಲ ಇದಕ್ಕೆ ಅಹಂಕಾರವೇ ಕಾರಣ. ಆದರೂ ಭಗವಂತನು ದಯೆಯಿಂದ ಈವರೆಗೂ ಇವುಗಳನ್ನು ನೀಡುತ್ತಲೇ ಬಂದಿದ್ದಾನೆ ಎಂಬುದು ಆಶ್ಚರ್ಯಕರವಾದ ಸಂಗತಿಯಾಗಿದೆ ಈಧ್ರವೆಂದರೆ ಶರತ್ಕಾಲದ ಬಿಳಿಯ ಮೋಡವು ಆತಪವೆಂದರೆ ಬಿಸಿಲು ಇವುಗಳಲ್ಲಿಯೂ ಇರುವ ಈಧ್ರಿಯನೂ ಆತಪ್ಯನೂ ಆದ ಭಗವಂತನಿಗೆ ನಮಸ್ಕಾರವು.

ನಮೋ ವಾತ್ಯಾಯ ಚ ರೇಷ್ಮಿಯಾಯ ಚ ನಮೋ ವಾಸ್ತವ್ಯಾಯ ಚ ವಾಸ್ತುಪಾಯ ಚ ||

    'ವಾತ್ಯನೂ ರೇಷ್ಮಿಯನೂ ವಾಸ್ತವ್ಯನೂ ವಾಸ್ತುಪನೂ ಆದವನಿಗೆ ನಮಸ್ಕಾರ!'

    ವಾತ್ಯವೆಂದರೆ ಗಾಳಿಯಲ್ಲಿರುವವನು. ಗಾಳಿಯೆಂಬುದು ಪಂಚಮಹಾಭೂತಗಳಲ್ಲಿ ಒಂದು. ವಾಯುವೆಂಬ ದೇವತೆಯೂ ಆಗಿದೆ. ಈ ವಾಯುವು ತುಂಬಾ ಬಲಶಾಲಿಯೂ ಹೌದು. ರೇಷ್ಮವೆಂದರೆ ಪ್ರಲಯಕಾಲವು ಎಲ್ಲಾ ಪ್ರಾಣಿಗಳೂ ನಾಶವಾಗುವ ಕಾಲವು ಪ್ರಲಯವೇ ಆಗಿದೆಯಷ್ಟೆ ಅದರಲ್ಲಿ ಅಭಿಮಾನಿಯಾಗಿದ್ದುಕೊಂಡಿರುವವನು ರೇಷ್ಮಿಯನು ಎಲ್ಲಾ ಭೂತಗಳನ್ನೂ ಸಂಹಾರಕಾಲದಲ್ಲಿ ನುಂಗಿಬಿಡುವ ಹರನೆಂಬ ದೇವನು ಪರಮೇಶ್ವರನು ಪ್ರಲಯವು ಭಯಂಕರವಾದರೂ ಅವಶ್ಯವಾಗಿದೆ. ಸಂಹಾರಮೂರ್ತಿಯಾಗಿ ಪ್ರಲಯವನ್ನು ನಿರ್ವಹಿಸುತ್ತಿರುವ ರೇಷ್ಮಿಯನು ಭಗವಂತನೇ - ಎಂದರ್ಥ. ವಾಸ್ತವವೆಂದರೆ ಗೋವು ಮುಂತಾದ ಪ್ರಾಣಿಗಳು ಇಂತಹ ಪ್ರಾಣಿಗಳ ಉಪಯೋಗವೂ ಮನುಷ್ಯನಿಗೆ ಬಹಳವಾಗಿದೆ. ಉದಾಹರಣೆಗೆ ಗೋವುಗಳಿಲ್ಲದೆ ಬೇಸಾಯವಿಲ್ಲ; ಹಾಲುಮೊಸರುಗಳಿಲ್ಲ, ಆದ್ದರಿಂದ ಅವುಗಳ ರೂಪದಿಂದ ಇರುವ ಭಗವಂತನನ್ನು ನಾವು ಸ್ಮರಿಸಬೇಕು. ಉಳಿದ ಕುರಿ, ಆಡು - ಮುಂತಾದ ಪ್ರಾಣಿಗಳೂ ಮನುಷ್ಯನ ಜೀವನಕ್ಕೆ ಅವಶ್ಯವೇ ಆಗಿವೆ. ಅವೆಲ್ಲ ವಾಸ್ತವ್ಯನಾದ ಭಗವಂತನ ಸ್ವರೂಪವಾಗಿವೆ. ವಾಸ್ತುವೆಂದರೆ ಮನೆಯನ್ನು ನಿರ್ಮಿಸುವ ಜಾಗ ಅದನ್ನು ಪಾಲನೆಮಾಡುವವನು ವಾಸ್ತುಪನು ಮನೆಯು ಮನುಷ್ಯನ ಅಗತ್ಯಗಳಲ್ಲೊಂದಾಗಿದೆ ಅದರಲ್ಲಿ ವಾಸಮಾಡುವವನು ರೋಗವಿಲ್ಲದೆ, ದುಃಖವಿಲ್ಲದೆ, ನಷ್ಟವಿಲ್ಲದೆ, ಅಭಿವೃದ್ಧಿಯನ್ನು ಹೊಂದುತ್ತಾ ಬಾಳಬೇಕು ಇದಕ್ಕೆ ವಾಸ್ತುಪುರುಷನಾದ ಮಹಾದೇವನ ಅನುಗ್ರಹವು ಬೇಕು ವಾಸ್ತುವಿದ್ಯೆಯೆಂಬುದು ದೊಡ್ಡಶಾಸ್ತ್ರವು ಅದೂ ಭಗವಂತನ ವಿಭೂತಿಯೇ ಎಂದು ಇಲ್ಲಿ ತಿಳಿಸಿದೆ.



Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ